ವಿಷಯಕ್ಕೆ ಹೋಗು

ಪ್ರಸನ್ನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪ್ರಸನ್ನ
Bornಮಾರ್ಚ್ ೨೩, ೧೯೫೧
ಆನವಟ್ಟಿ, ಶಿವಮೊಗ್ಗ ಜಿಲ್ಲೆ
Nationalityಭಾರತೀಯ
Alma materನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ
Occupationರಂಗ ನಿರ್ದೇಶಕರು

ಪ್ರಸನ್ನ ( ಮಾರ್ಚ್ ೨೩, ೧೯೫೧) ಕನ್ನಡ ರಂಗಭೂಮಿ ನಿರ್ದೇಶಕರು ಮತ್ತು ಕ್ರಿಯಾಶೀಲ ರಂಗ ಕಾರ್ಯಕರ್ತರು.[]

ಎಪ್ಪತ್ತರ ದಶಕದಲ್ಲಿ ಹವ್ಯಾಸಿ ರಂಗಭೂಮಿಗೆ ಹಬ್ಬದ ಸಡಗರ. ಹಲವಾರು ಹವ್ಯಾಸಿ ರಂಗಸಂಸ್ಥೆಗಳು ಹುಟ್ಟಿಕೊಂಡದ್ದು ಆಗಲೇ. ಈ ಸಂದರ್ಭದಲ್ಲಿ ರಂಗಭೂಮಿಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಪ್ರಮುಖರ ಸಾಲಿಗೆ ಸೇರುವ ಪ್ರಸನ್ನ ಅವರು ಹುಟ್ಟಿದ್ದು ಮಾರ್ಚ್ 23, 1951ರಂದು ಶಿವಮೊಗ್ಗ ಜಿಲ್ಲೆಯ ಆನವಟ್ಟಿಯಲ್ಲಿ. ತಂದೆ ಪ್ರಹ್ಲಾದಾಚಾರ್ಯ, ತಾಯಿ ಹೇಮಾವತಿ ಬಾಯಿ. ಸೆಂಟ್ರಲ್ ಕಾಲೇಜಿನಿಂದ ಎಂ.ಎಸ್ಸಿ. ಪದವಿ ಪಡೆದರೂ ಅವರಿಗೆ ರಂಗಭೂಮಿಯಲ್ಲಿ ಅಪಾರವಾದ ಆಸಕ್ತಿ ತುಂಬಿಕೊಂಡಿತ್ತು.[]

ರಂಗ ಅಧ್ಯಯನ

[ಬದಲಾಯಿಸಿ]

ದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮ ಶಾಲೆಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿ ಎಂಬ ಹೆಗ್ಗಳಿಕೆ ಸಂಪಾದಿಸಿದ ಕೀರ್ತಿ ಅವರದು. ಪ್ರಸನ್ನರು ದೆಹಲಿಯ ನಾಟಕ ಶಾಲೆಯಲ್ಲಿದ್ದ ದಿನಗಳಲ್ಲಿ ನಿರ್ದೇಶಿಸಿದ ನಾಟಕಗಳಲ್ಲಿ ಗಾಂಧಿ, ಉತ್ತರ ರಾಮಚರಿತಂ, ಅಗ್ನಿ ಔರ್ ಬರ್ ಕಾ, ಫ್ಯೂಜಿಯಾಮ ಪ್ರಮುಖವಾದವು. ಇಂಗ್ಲಿಷ್, ಹಿಂದಿ, ಕನ್ನಡ ಭಾಷೆಗಳ ಮೇಲೆ ಅವರು ಪ್ರಭುತ್ವ ಸಾಧಿಸಿದ್ದರು. ರಾಷ್ಟ್ರೀಯ ನಾಟಕಶಾಲೆಯಲ್ಲಿ ಕೆಲಕಾಲ ಬೋಧನೆ ಮಾಡಿ, ರಂಗಭೂಮಿ ಅಧ್ಯಯನಕ್ಕಾಗಿ ರಷ್ಯ, ಜರ್ಮನಿ ಮುಂತಾದ ಕಡೆಗಳಲ್ಲಿ ಪ್ರವಾಸ ಕೈಗೊಂಡಿದ್ದರು.[]

ರಂಗಭೂಮಿಯಿಂದ ಜನಾಂದೋಲನ

[ಬದಲಾಯಿಸಿ]

ದೇಶಕ್ಕೆ ತುರ್ತು ಪರಿಸ್ಥಿತಿ ಹೇರಿದ ಸಂದರ್ಭದಲ್ಲಿ ಎಡಪಂಥೀಯ ವಿಚಾರ ಧಾರೆಗೆ ಪ್ರಾಶಸ್ತ್ಯ ನೀಡಿದ ಪ್ರಸನ್ನರಿಂದ ಮೂಡಿಬಂದದ್ದು ‘ಸಮುದಾಯ’ ತಂಡ. ರಾಜ್ಯಾದ್ಯಂತ ಅದರ ಶಾಖೆಗಳು ಮೂಡಿದವು. ನಾಟಕ, ಜಾಥಾ, ಕಲಾ ಮೇಳಗಳ ಮೂಲಕ ಅವರು ಜನಾಂದೋಲನವನ್ನು ಕೈಗೊಂಡರು. ಕಾರ್ಮಿಕರು, ಪ್ರಗತಿಪರ ಚಿಂತಕರು, ಸಾಹಿತಿ-ಕಲಾವಿದರನ್ನು ಒಗ್ಗೂಡಿಸಲು ವೇದಿಕೆ ಸ್ಥಾಪಿಸಿದ್ದೇ ಅಲ್ಲದೆ, ಜಡ್ಡುಗಟ್ಟಿದ ಸಾಮಾಜಿಕ ವ್ಯವಸ್ಥೆಯ ಪರಿವರ್ತನೆಗೆ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದರು.[]

ಪ್ರಸಿದ್ಧ ನಾಟಕಗಳು

[ಬದಲಾಯಿಸಿ]

ಪ್ರಸನ್ನರು ನಿರ್ದೇಶಿಸಿದ ನಾಟಕಗಳಲ್ಲಿ ತುಘಲಕ್, ಗೆಲಿಲಿಯೋ, ಹುತ್ತವ ಬಡಿದರೆ, ತದ್ರೂಪಿ, ಕದಡಿದ ನೀರು, ತಾಯಿ, ದಂಗೆಯ ಮುಂಚಿನ ದಿನಗಳು, ಹ್ಯಾಮ್ಲೆಟ್,ಮಹಿಮಾಪುರ ಮುಂತಾದವು ಪ್ರಮುಖವೆನಿಸಿವೆ. ತಮಿಳುನಾಡು, ಕೇರಳ, ಮಧ್ಯಪ್ರದೇಶ, ಬಿಹಾರಗಳಲ್ಲಿ ರಂಗಭೂಮಿ ಅಧ್ಯಯನಕ್ಕಾಗಿ ಅವರು ವ್ಯಾಪಕವಾಗಿ ಪ್ರವಾಸ ಕೈಗೊಂಡಿದ್ದರು.[]

ವಾರ್ತಾಪತ್ರ

[ಬದಲಾಯಿಸಿ]

ಪ್ರಸನ್ನರು ಸೈದ್ಧಾಂತಿಕ ತಿಳುವಳಿಕೆಗಾಗಿ 'ಸಮುದಾಯ ವಾರ್ತಾಪತ್ರ'ವನ್ನು ಸ್ಥಾಪಿಸಿದರು.

ಬರಹಗಳು

[ಬದಲಾಯಿಸಿ]
  • ನೌಟಂಕಿ,
  • ಸ್ವಯಂವರ,
  • ನಾಶವಾಯ್ತೆ ಲಂಕಾದ್ರಿಪುರ ಮುಂತಾದ ಕಾದಂಬರಿಗಳನ್ನು ಕೂಡಾ ರಚಿಸಿದ್ದಾರೆ.
  • ಇಂಡಿಯನ್ ಮೆಥಡ್ ಇನ್ ಆಕ್ಟಿಂಗ್

ದೂರದರ್ಶನದಲ್ಲಿ

[ಬದಲಾಯಿಸಿ]

ಪ್ರಸನ್ನರು ಭೀಷ್ಮ ಸಾಹ್ನಿಯವರ ‘ತಮಸ್’ ಕಾದಂಬರಿಯನ್ನು ದೂರದರ್ಶನಕ್ಕೆ ಅಳವಡಿಸಿದರಲ್ಲದೆ,

ರಂಗಾಯಣ

[ಬದಲಾಯಿಸಿ]

ಮೈಸೂರಿನ ರಂಗಾಯಣದ ನಿರ್ದೇಶಕರ ಜವಾಬ್ದಾರಿಯನ್ನೂ ಹೊತ್ತಿದ್ದ ಪ್ರಸನ್ನರು ಅಲ್ಲಿ ಹಲವಾರು ನಾಟಕಗಳ ನಿರ್ದೇಶನ ಮಾಡಿದರು. ರಂಗಾಯಣದಲ್ಲಿ ಅವರು ನಿರ್ವಹಿಸಿದ ಕಾರ್ಯಗಳು ರಂಗಭೂಮಿಗೆ ಹೊಸ ಆಯಾಮವನ್ನು ಸೃಷ್ಟಿಸಿಕೊಟ್ಟವು. ಪ್ರಸನ್ನರು ಸ್ವಯಂ ರಚಿಸಿದ ನಾಟಕಗಳು ಉಳಿ, ದಂಗೆಯ ಮುಂಚಿನ ದಿನಗಳು, ಒಂದು ಲೋಕದ ಕಥೆ, ಹದ್ದು ಮೀರಿದ ಹಾದಿ, ಜಂಗಮದ ಬದುಕು.

ಕ್ರಿಯಾಶೀಲ ವ್ಯಕ್ತಿತ್ವ

[ಬದಲಾಯಿಸಿ]

ಸಂಘಟನಾ ಚತುರತೆ, ಹೊಸ ಚಿಂತನೆ ಮತ್ತು ಸೃಜನಶೀಲತೆಗಳಿಗಾಗಿ ಪ್ರಸನ್ನರು ಹೆಸರಾಗಿದ್ದಾರೆ. ಪ್ರಸನ್ನರ ಚತುರತೆಯಲ್ಲಿ ‘ಭೂಮಿಗೀತ’ವು ರಂಗ ಪರೀಕ್ಷೆಗಳ ನೂತನ ಅಪೇಕ್ಷೆಗಳಿಗನುಗುಣವಾಗಿ ಹೊಸವಿನ್ಯಾಸವನ್ನು ಗಳಿಸಿತು; ‘ವನರಂಗ’ ಹೊಸ ರೂಪ ಪಡೆಯಿತು; ಶ್ರೀರಂಗ ಸ್ಟುಡಿಯೋ ನಿರ್ಮಾಣಗೊಂಡಿತು; ಲಂಕೇಶ್ ಆರ್ಟ್ ಗ್ಯಾಲರಿ ಕಲಾ ಪ್ರದರ್ಶನಗಳಿಗಾಗಿ ತೆರೆದುಕೊಂಡಿತು; ರಾಷ್ಟ್ರೀಯ ನಾಟಕೋತ್ಸವ ‘ಬಹುರೂಪಿ’ ಚಾಲನೆಗೊಂಡಿತು; ವಾರಾಂತ್ಯದ ರಂಗಪ್ರದರ್ಶನಗಳು ಪ್ರಾರಂಭಗೊಂಡವು; ಹವ್ಯಾಸಿ ರಂಗತಂಡಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಗ್ರೀಷ್ಮ ರಂಗೋತ್ಸವ ಹುಟ್ಟಿಕೊಂಡಿತು; ರಂಗಶಿಕ್ಷಣಕ್ಕಾಗಿ ಭಾರತೀಯ ರಂಗ ಶಿಕ್ಷಣ ಕೇಂದ್ರದ ಚಿಂತನೆಗೊಂದು ರೂಪ ಸಿಕ್ಕಿತು. ರಂಗಭೂಮಿಯ ಕುರಿತಾದ ಮಾಹಿತಿ ಸಂಶೋಧನಾ ಚಟುವಟಿಕೆಗಳ ಸಲುವಾಗಿ ಶ್ರೀರಂಗ ಮಾಹಿತಿ ಕೇಂದ್ರದ ನಕಾಶೆ ರೂಪುಗೊಂಡಿತು.

ಪ್ರಸನ್ನ ಅವರು ಹೆಗ್ಗೋಡಿನಲ್ಲಿ ನೆಲೆಸಿ ಕವಿ-ಕಾವ್ಯ ಟ್ರಸ್ಟ್ ಆಶ್ರಯದಲ್ಲಿ ಹಲವಾರು ಕಾರ್ಯಕ್ರಮಗಳನ್ನು ನಡೆಸಿದರಲ್ಲದೆ. ಋಜುವಾತು ಪತ್ರಿಕೆಗೆ ಹೊಸರೂಪ ನೀಡಿದರು. ಗುಡಿ ಕೈಗಾರಿಕೆಗೆ ಪ್ರೋತ್ಸಾಹ, ಗ್ರಾಮೀಣ ಕುಶಲ ಕರ್ಮಿಗಳ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಲು ಜಯನಗರ ಸೌತ್ ಎಂಡ್ ಸರ್ಕಲ್, ಗಿರಿನಗರದ ಪ್ರವೇಶ ದ್ವಾರದ ಬಳಿ ‘ದೇಸಿ’ ಅಂಗಡಿ ಪ್ರಾರಂಭಿಸಿದರಲ್ಲದೆ, ಗ್ರಾಮೀಣ ಕುಶಲ ಕರ್ಮಿಗಳಿಗೆ ಕಲ್ಯಾಣನಿಧಿಯನ್ನು ಸ್ಥಾಪಿಸಿದರು.

ಪ್ರಶಸ್ತಿ ಗೌರವಗಳು

[ಬದಲಾಯಿಸಿ]

ಈ ಬಹುರೂಪಿ ಪ್ರಸನ್ನರಿಗೆ ಸಂದ ಪ್ರಶಸ್ತಿ ಗೌರವಗಳು ಹಲವಾರು. ಸಂಗೀತ ನಾಟಕ ಅಕಾಡಮಿ ಫೆಲೋಷಿಪ್, ರಂಗಭೂಮಿ ಅಧ್ಯಯನಕ್ಕಾಗಿ ಭಾರತ ಭವನ್ ಫೆಲೋಷಿಪ್, ರಾಜ್ಯ ನಾಟಕ ಅಕಾಡಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ರಾಜ್ಯ ನಾಟಕ ಅಕಾಡಮಿ ಬಹುಮಾನ, ಪು.ತಿ.ನ. ಟ್ರಸ್ಟ್ ಪುರಸ್ಕಾರ, ಚದುರಂಗ ಪ್ರಶಸ್ತಿ, ಕೇಂದ್ರ ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ ಇವುಗಳಲ್ಲಿ ಪ್ರಮುಖವಾದವು.

ಮಾಹಿತಿ ಆಧಾರ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. Parul Sharma (2007-12-31). "An acting activist all the way". ದಿ ಹಿಂದೂ. Chennai, India. Archived from the original on 2008-01-04. Retrieved 2008-12-21.
  2. DH News Service. "Introduce theatre edn in govt schools: Prasanna". Deccanherald.com. Archived from the original on 2008-07-24. Retrieved 2008-12-21.
  3. Rangayana Mysore. "the pioneers of Modern Kannada Theatre". Rangayana.org. Archived from the original on 2009-05-01. Retrieved 2008-12-21.
  4. Pradeep, K. (2013-04-13). "Artistic labour is power". The Hindu (in Indian English). ISSN 0971-751X. Retrieved 2017-12-02.
  5. Ankur Kalitaa. "The Ultimate Frontier-Prasanna's Seema Paar explores the many faces of death". Cities.expressindia.com. Archived from the original on 2009-05-01. Retrieved 2008-12-21.


"https://kn.wikipedia.org/w/index.php?title=ಪ್ರಸನ್ನ&oldid=1145815" ಇಂದ ಪಡೆಯಲ್ಪಟ್ಟಿದೆ