ವಿಷಯಕ್ಕೆ ಹೋಗು

ಮೊದಲ ಆಂಗ್ಲೋ-ಸಿಖ್‌ ಯುದ್ಧ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
First Anglo-Sikh War

Topographical map of The Punjab The Land of 5 Waters
ದಿನಾಂಕ1845-1846
ಸ್ಥಳPunjab
ಫಲಿತಾಂಶ British victory
ಯುದ್ಧಾಕಾಂಕ್ಷಿಗಳು
British East India Company Sikh Empire
ಸಾವುನೋವುಗಳು ಮತ್ತು ನಷ್ಟಗಳು
2,200 killed
4,441 wounded[ಸೂಕ್ತ ಉಲ್ಲೇಖನ ಬೇಕು]
5000 killed and wounded[ಸೂಕ್ತ ಉಲ್ಲೇಖನ ಬೇಕು]

ಮೊದಲ ಆಂಗ್ಲೋ-ಸಿಖ್‌ ಯುದ್ಧ ವು 1845 ಮತ್ತು 1846ರ ನಡುವಿನ ಅವಧಿಯಲ್ಲಿ ಸಿಖ್‌ ಸಾಮ್ರಾಜ್ಯ ಮತ್ತು ಬ್ರಿಟಿಷ್‌ ಈಸ್ಟ್‌ ಇಂಡಿಯಾ ಕಂಪನಿಯ ನಡುವೆ ನಡೆದ ಹೋರಾಟವಾಗಿದೆ. ಸಿಖ್‌ ಸಾಮ್ರಾಜ್ಯವು ಭಾಗಶಃವಾಗಿ ಸ್ವಾಧೀನಕ್ಕೆ ತೆಗೆದುಕೊಳ್ಳಲ್ಪಡಲು ಇದು ಕಾರಣವಾಯಿತು.

ಯುದ್ಧದ ಹಿನ್ನೆಲೆ ಮತ್ತು ಕಾರಣಗಳು

[ಬದಲಾಯಿಸಿ]

ಹತ್ತೊಂಬತ್ತನೇ ಶತಮಾನದ ಆರಂಭಿಕ ವರ್ಷಗಳ ಅವಧಿಯಲ್ಲಿ ಮಹಾರಾಜ ರಣಜಿತ್‌ ಸಿಂಗ್‌‌‌ನಿಂದ ಪಂಜಾಬ್‌ನ ಸಿಖ್‌ ಸಾಮ್ರಾಜ್ಯವು ವಿಸ್ತರಿಸಲ್ಪಟ್ಟಿತು ಮತ್ತು ಬಲಪಡಿಸಲ್ಪಟ್ಟಿತು; ಹೆಚ್ಚೂಕಮ್ಮಿ ಇದೇ ಅವಧಿಯಲ್ಲಿ, ಬ್ರಿಟಿಷ್‌-ನಿಯಂತ್ರಿತ ಪ್ರದೇಶಗಳು ವಶಪಡಿಸಿಕೊಳ್ಳುವಿಕೆಯ ಅಥವಾ ಸೇರಿಸಿಕೊಳ್ಳುವಿಕೆಯ ಮೂಲಕ ಪಂಜಾಬ್‌ನ ಗಡಿಗಳವರೆಗೆ ಮುಂದುವರಿದಿದ್ದವು ಎಂಬುದು ಗಮನಾರ್ಹ ಸಂಗತಿ. ಸಟ್ಲೆಜ್‌ ನದಿಯ[] ದಕ್ಷಿಣ ಭಾಗದಲ್ಲಿದ್ದ ಒಂದಷ್ಟು ಪ್ರದೇಶಗಳನ್ನು ಬಿಟ್ಟುಕೊಡುವ ಮೂಲಕ ಬ್ರಿಟಿಷರೊಂದಿಗಿನ ಜಾಗರೂಕ ಸ್ನೇಹದ ಕಾರ್ಯನೀತಿಯೊಂದನ್ನು ರಣಜಿತ್‌ ಸಿಂಗ್‌ ಕಾಯ್ದುಕೊಂಡ, ಮತ್ತು ಅದೇ ವೇಳೆಗೆ, ಬ್ರಿಟಿಷರಿಂದ ನಡೆಯುವ ಅಪ್ರಚೋದಿತ ಆಕ್ರಮಣವನ್ನು ತಡೆಯುವ ಹಾಗೂ ಆಫ್ಘನ್ನರ ವಿರುದ್ಧ ಯುದ್ಧ ನಡೆಸುವ ಎರಡೂ ಉದ್ದೇಶಗಳೊಂದಿಗೆ ತನ್ನ ಸೇನಾ ಪಡೆಗಳನ್ನು ಕಟ್ಟತೊಡಗಿದ. ತನ್ನ ಫಿರಂಗಿದಳಕ್ಕೆ ತರಬೇತಿ ನೀಡುವುದಕ್ಕೆಂದು, ಸಂಬಳಕ್ಕಾಗಿ ಕೆಲಸಮಾಡುವ ಅಮೆರಿಕಾದ ಮತ್ತು ಯುರೋಪಿನ ಸೈನಿಕರನ್ನು ಅವನು ನೇಮಿಸಿಕೊಂಡ, ಮತ್ತು ತನ್ನ ಸೇನೆಯೊಳಗೆ ಹಿಂದೂಗಳು ಮತ್ತು ಮುಸ್ಲಿಮರ ದತ್ತದಳಗಳನ್ನು ಏಕೀಕರಿಸಿ ಸಂಘಟಿಸಿದ.

ಆಫ್ಘನ್ನರು ನಡುವೆ ಕಂಡುಬಂದ ಅನೈಕ್ಯತೆಯ ಪ್ರಯೋಜನವನ್ನು ಪಡೆದ ಸಿಖ್ಖರು ಅವರಿಂದ ಪೆಶಾವರ್‌ ಮತ್ತು ಮುಲ್ತಾನ್‌‌ನ ನಗರಗಳು ಮತ್ತು ಪ್ರಾಂತ್ಯಗಳನ್ನು ಗೆದ್ದರು, ಹಾಗೂ ತಮ್ಮ ಸಾಮ್ರಾಜ್ಯದೊಳಗೆ ಜಮ್ಮು ಮತ್ತು ಕಾಶ್ಮೀರ ರಾಜ್ಯಗಳನ್ನೂ ಸೇರಿಸಿಕೊಂಡರು.

ಪಂಜಾಬ್‌ನಲ್ಲಿನ ಘಟನೆಗಳು

[ಬದಲಾಯಿಸಿ]

1839ರಲ್ಲಿ ರಣಜಿತ್‌ ಸಿಂಗ್‌ ಮರಣಿಸಿದ. ಬಹುತೇಕ ತತ್‌ಕ್ಷಣವೇ, ಅವನ ರಾಜ್ಯವು ಅರಾಜಕತೆಯ ಸುಳಿಯಲ್ಲಿ ಸಿಲುಕಿಕೊಂಡಿತು. ರಣಜಿತ್‌ನ ವಂಶಪಾರಂಪರ್ಯದ ಹಕ್ಕನ್ನು ಹೊಂದಿದ್ದ ಮತ್ತು ಅಷ್ಟೇನೂ ಜನಪ್ರಿಯನಲ್ಲದ ಅವನ ಮಗನಾದ ಖರಕ್‌ ಸಿಂಗ್‌‌, ಕೆಲವೇ ತಿಂಗಳುಗಳಲ್ಲಿ ಅಧಿಕಾರದಿಂದ ಪದಚ್ಯುತಿಗೊಳಿಸಲ್ಪಟ್ಟ, ಮತ್ತು ನಂತರದಲ್ಲಿ ನಿಗೂಢ ಪರಿಸ್ಥಿತಿಗಳ ಅಡಿಯಲ್ಲಿ ಆತ ಸೆರೆಮನೆಯಲ್ಲೇ ಮರಣಿಸಿದ. ಅವನಿಗೆ ವಿಷವುಣಿಸಲಾಗಿತ್ತು ಎಂಬ ಅಭಿಪ್ರಾಯವು ಆಗ ವ್ಯಾಪಕವಾಗಿ ಚಾಲ್ತಿಯಲ್ಲಿತ್ತು.[] ಸಮರ್ಥನಾದ ಆದರೆ ದೂರವಿರಿಸಲ್ಪಟ್ಟಿದ್ದ ಅವನ ಮಗನಾದ ಕನ್ವರ್‌‌ ನೌ ನಿಹಾಲ್‌ ಸಿಂಗ್‌ ಎಂಬಾತನನ್ನು ಅವನ ಜಾಗದಲ್ಲಿ ಪ್ರತಿಷ್ಠಾಪಿಸಲಾಯಿತಾದರೂ, ಅವನೂ ಸಹ ಸಂಶಯಾಸ್ಪದವೆನ್ನಬಹುದಾದ ಸನ್ನಿವೇಶದಲ್ಲಿ ಕೆಲವೇ ತಿಂಗಳುಗಳಲ್ಲಿ ಮರಣಿಸಿದ; ತನ್ನ ತಂದೆಯ ಶವದಹನದ ಕ್ರಿಯೆಗಳನ್ನು ಮುಗಿಸಿಕೊಂಡು ಹಿಂದಿರುಗುತ್ತಿರುವಾಗ, ಲಾಹೋರ್‌ ಕೋಟೆಯಲ್ಲಿನ ಒಂದು ಬೀಳುವಂತಿದ್ದ ಕಮಾನು ಬಾಗಿಲು ಅವನ ಮೇಲೆ ಅಪ್ಪಳಿಸಿ ಅವನು ನುಜ್ಜುಗುಜ್ಜಾದ.[]

ಆ ಸಮಯದಲ್ಲಿ, ಸಿಖ್‌ ಸಿಂಧನ್‌ವಾಲಿಯಾಗಳು ಮತ್ತು ಹಿಂದೂ ಡೋಗ್ರಾಗಳು ಎಂಬ ಎರಡು ಪ್ರಮುಖ ಬಣಗಳು ಪಂಜಾಬ್‌ನೊಳಗೆ ಅಸ್ತಿತ್ವದಲ್ಲಿದ್ದು, ಅಧಿಕಾರ ಮತ್ತು ಪ್ರಭಾವಕ್ಕಾಗಿ ಅವು ಪೈಪೋಟಿ ನಡೆಸುತ್ತಿದ್ದವು. ರಣಜಿತ್‌ ಸಿಂಗ್‌ನ ಅತಿ ಹಿರಿಯ ಜಾರಜಪುತ್ರನಾದ ಶೇರ್‌‌ ಸಿಂಗ್‌ ಎಂಬಾತನನ್ನು 1841ರ ಜನವರಿಯಲ್ಲಿ ಸಿಂಹಾಸನಕ್ಕೆ ಆರೋಹಣ ಮಾಡಿಸುವಲ್ಲಿ ಡೋಗ್ರಾಗಳು ಯಶಸ್ವಿಯಾದರು. ಅತ್ಯಂತ ಗಣ್ಯರಾದ ಸಿಂಧನ್‌ವಾಲಿಯಾಗಳು ಬ್ರಿಟಿಷ್‌ ಪ್ರದೇಶದಲ್ಲಿ ಆಶ್ರಯವನ್ನು ಪಡೆದರಾದರೂ, ಪಂಜಾಬ್‌ನ ಸೇನೆಯಲ್ಲಿ ಅವರದ್ದೇ ಆದ ಅನೇಕ ನಿಷ್ಠ ಬೆಂಬಲಿಗರನ್ನು ಹೊಂದಿದ್ದರು.

ರಣಜಿತ್‌ ಸಿಂಗ್‌ನ ಸಾವಿನ ನಂತರದ ಪರಿಣಾಮಗಳೆಂಬಂತೆ ಸೇನೆಯು ಕ್ಷಿಪ್ರವಾಗಿ ವಿಸ್ತರಿಸಲು ಪ್ರಾರಂಭಿಸಿತು. ಇದರ ಪರಿಣಾಮವಾಗಿ 1839ರಲ್ಲಿ 29,000ದಷ್ಟಿದ್ದ (192 ಬಂದೂಕುಗಳೊಂದಿಗೆ) ಸಂಖ್ಯಾಬಲವು 1845ರ[] ವೇಳೆಗೆ 80,000ವನ್ನೂ ಮೀರಿಸಿತು; ಭೂಮಾಲೀಕರು ಮತ್ತು ಅವರ ಅನುಚರರು ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಂಡಿದ್ದೇ ಇದಕ್ಕೆ ಕಾರಣವಾಗಿತ್ತು. ಇದು ಸ್ವತಃ ತನ್ನನ್ನು ಖಾಲ್ಸಾ, ಅಥವಾ ಸಿಖ್‌ ರಾಷ್ಟ್ರದ ಸಾಕಾರರೂಪ ಎಂಬುದಾಗಿ ಘೋಷಿಸಿಕೊಂಡಿತು. ಇದರ ರೆಜಿಮೆಂಟಿನ ಪಂಚಾಯತ್‌‌ಗಳು (ಸಮಿತಿಗಳು) ಸಾಮ್ರಾಜ್ಯದೊಳಗೆ ಒಂದು ಪರ್ಯಾಯ ಅಧಿಕಾರ ಮೂಲವನ್ನು ರೂಪಿಸಿದವು, ಮತ್ತು ಗುರು ಗೋವಿಂದ್‌ ಸಿಂಗ್‌‌‌ರವರ ಸ್ವತಂತ್ರ ಸಿಖ್‌ ಸಮುದಾಯದ ಆದರ್ಶವು ಪುನರ್ಜನ್ಮ ಪಡೆದಿದೆ ಎಂಬುದಾಗಿ ಘೋಷಿಸಿದವು; ಸರ್‌ಬತ್‌ ಖಾಲ್ಸಾ ಅಥವಾ ಒಟ್ಟಾರೆಯಾಗಿ ಸಿಖ್ಖರು ರಾಜ್ಯದಲ್ಲಿನ[] ಎಲ್ಲಾ ಕಾರ್ಯಕಾರಿ, ಸೇನಾ ಮತ್ತು ನಾಗರಿಕ ಅಧಿಕಾರವನ್ನು ವಹಿಸಿಕೊಂಡರು. ಈ ಕ್ರಮವನ್ನು ಬ್ರಿಟಿಷ್‌ ವೀಕ್ಷಕರು ಒಂದು "ಅಪಾಯಕಾರಿ ಸೇನಾ ಪ್ರಜಾಪ್ರಭುತ್ವ" ಎಂಬುದಾಗಿ ಹೀಯಾಳಿಸಿದರು. ರೆಜಿಮೆಂಟುಗಳು ಆಂತರಿಕವಾಗಿ "ಅತಿರೇಕದ ನಿಷ್ಠುರತೆಯ" ಆದೇಶವನ್ನು ಕಾಯ್ದುಕೊಂಡು ಬರುತ್ತಿವೆ ಎಂಬುದಾಗಿ ಪಂಜಾಬ್‌ನಲ್ಲಿನ ಬ್ರಿಟಿಷ್‌ ಪ್ರತಿನಿಧಿಗಳು ಮತ್ತು ಸಂದರ್ಶಕರು ವಿವರಿಸಿದರಾದರೂ, ಪ್ರಧಾನ ದರ್ಬಾರ್‌ (ಆಸ್ಥಾನ) ವಿರುದ್ಧದ ಪ್ರತ್ಯಕ್ಷ ಬಂಡಾಯ ಅಥವಾ ದಂಗೆಯ ಒಂದು ಚಿರಂತನವಾದ ಸ್ಥಿತಿಯಲ್ಲಿ ಅವು ಉಳಿದುಕೊಂಡಿವೆ ಎಂಬುದಾಗಿಯೂ ತಿಳಿಸಿದರು. ಕ್ಷೋಭೆಯ ಒಂದು ಕುಪ್ರಸಿದ್ಧ ನಿದರ್ಶನದಲ್ಲಿ ಸಿಖ್‌ ಸೈನಿಕರು ನಿರಂಕುಶವಾಗಿ ವರ್ತಿಸಿದರು; ಯಾರಾದರೂ ಪರ್ಷಿಯನ್‌ ಭಾಷೆಯನ್ನು (ಖಾಲ್ಸಾದ ಹಣಕಾಸು ವಿಭಾಗಗಳಲ್ಲಿ ಆಡಳಿತ ನಿರ್ವಹಿಸುತ್ತಿದ್ದ ಗುಮಾಸ್ತರು ಬಳಸುತ್ತಿದ್ದ ಭಾಷೆ) ಮಾತನಾಡಬಲ್ಲವರಂತೆ ಕಾಣುತ್ತಾರೆಯೇ ಎಂಬುದಾಗಿ ಅರಸುತ್ತಿದ್ದ ಅವರು, ಅಂಥವರನ್ನು ತಮ್ಮ ಕತ್ತಿಗೆ ಆಹಾರವಾಗಿಸುತ್ತಿದ್ದರು.

ಖಾಲ್ಸಾದವರ ವೇತನಕ್ಕೆ ಸಂಬಂಧಿಸಿದ ಬೇಡಿಕೆಗಳನ್ನು ಈಡೇರಿಸಲು ಮಹಾರಾಜ ಶೇರ್‌‌ ಸಿಂಗ್‌ ಅಸಮರ್ಥನಾಗಿದ್ದ; ಆದರೂ ಸಹ ಕುಲಗೆಟ್ಟ ಆಸ್ಥಾನಿಗರ ಮೇಲೆ ಅವನು ಹಣವನ್ನು ಯಥೇಚ್ಛವಾಗಿ ಸುರಿದ ಎಂದು ತಿಳಿದುಬಂದಿತು. 1843ರ ಸೆಪ್ಟೆಂಬರ್‌ನಲ್ಲಿ, ತನ್ನ ಸೋದರ ಸಂಬಂಧಿ ಮತ್ತು ಖಾಲ್ಸಾದ ಓರ್ವ ಅಧಿಕಾರಿಯಾದ ಅಜಿತ್‌ ಸಿಂಗ್‌ ಸಿಂಧನ್‌ವಾಲಿಯಾ ಎಂಬಾತನಿಂದ ಅವನು ಕೊಲೆಯಾದ. ಇದಕ್ಕೆ ಹೊಣೆಗಾರರಾದವರ ಮೇಲೆ ಡೋಗ್ರಾಗಳು ತಮ್ಮ ಪ್ರತೀಕಾರವನ್ನು ತೀರಿಸಿಕೊಂಡರು, ಮತ್ತು ರಣಜಿತ್‌ ಸಿಂಗ್‌ನ ಅತಿಕಿರಿಯ ವಿಧವೆಯಾದ ಜಿಂದ್‌ ಕೌರ್‌ ತನ್ನ ಅಪ್ರಾಪ್ತ ವಯಸ್ಕ ಮಗನಾದ ದುಲೀಪ್‌ ಸಿಂಗ್‌‌ಗಾಗಿ ರಾಜಪ್ರತಿನಿಧಿಯ ಸ್ಥಾನವನ್ನು ಅಲಂಕರಿಸಿದಳು. ರಾಜನ ಖಜಾನೆಯಿಂದ (ತೋಷ್ಕಾನಾ) ಮಾಡಿದ ಲೂಟಿಯೊಂದಿಗೆ ರಾಜಧಾನಿಯನ್ನು ಬಿಟ್ಟು ಓಡಿಹೋಗಲು ವಜೀರ ಹೀರಾ ಸಿಂಗ್‌ ಪ್ರಯತ್ನಿಸುವಾಗ ಶಾಮ್‌ ಸಿಂಗ್‌ ಅಟ್ಟಾರಿವಾಲಾನ[] ಅಧೀನದ ಪಡೆಗಳಿಂದ ಕೊಲ್ಲಲ್ಪಟ್ಟ. ಈ ಘಟನೆಯ ನಂತರ ಜಿಂದ್‌ ಕೌರ್‌ಳ ಸೋದರ ಜವಾಹಿರ್‌ ಸಿಂಗ್‌ 1844ರ ಡಿಸೆಂಬರ್‌ನಲ್ಲಿ ವಜೀರನ ಸ್ಥಾನವನ್ನು ಅಲಂಕರಿಸಿದ. ಅವನು ತನ್ನ ಅಧಿಕಾರಾವಧಿಯನ್ನು ಕಣ್ಣಿಗೆ ಸ್ಪಷ್ಟವಾಗಿ ಗೋಚರಿಸುವಂತೆ ಒಂದು ಭಯದ ಸ್ಥಿತಿಯಲ್ಲೇ ಕಳೆದ, ಸಂಪತ್ತಿನ ಭರವಸೆಗಳನ್ನು ನೀಡುವುದರೊಂದಿಗೆ ಖಾಲ್ಸಾಗೆ ಲಂಚ ಕೊಡುವ ಪ್ರಯತ್ನವನ್ನು ಮಾಡಿದ; ಆದರೆ ಈ ಭರವಸೆಗಳು ಈಡೇರಲಿಲ್ಲ ಎಂಬುದು ಗಮನಾರ್ಹ ಸಂಗತಿ. 1845ರ ಸೆಪ್ಟೆಂಬರ್‌ನಲ್ಲಿ ನಡೆದ ಸೇನಾ ಪ್ರದರ್ಶನವೊಂದರಲ್ಲಿ, ಜಿಂದ್‌ ಕೌರ್‌ ಮತ್ತು ದುಲೀಪ್‌ ಸಿಂಗ್‌ರವರುಗಳ ಸಮ್ಮುಖದಲ್ಲಿಯೇ ಅವನು ನಿಷ್ಕರುಣೆಯಿಂದ ಕಡಿದುಹಾಕಲ್ಪಟ್ಟು ಸಾವಿಗೀಡಾದ.[]

ಅದೇನೇ ಇದ್ದರೂ, ಖಾಲ್ಸಾಗಳು ಸಾಮ್ರಾಜ್ಯವನ್ನು ಈ ಹಂತದಲ್ಲಿ ಸ್ವಾಧೀನಪಡಿಸಿಕೊಳ್ಳಲಿಲ್ಲ. ತನ್ನ ಸೋದರನ ಕೊಲೆಗಾರರ ವಿರುದ್ಧವಾಗಿ ಪ್ರತೀಕಾರ ತೀರಿಸಿಕೊಳ್ಳಲು ಜಿಂದ್‌ ಕೌರ್‌ ಬಹಿರಂಗವಾಗಿ ಶಪಥ ಮಾಡಿದಳಾದರೂ, ಅವಳು ರಾಜಪ್ರತಿನಿಧಿಯಾಗಿ ಉಳಿದುಕೊಂಡಳು. ಅವಳ ಪ್ರಿಯತಮ ಎಂದು ಹೇಳಲ್ಪಡುತ್ತಿದ್ದ ಲಾಲ್‌ ಸಿಂಗ್‌ ಎಂಬಾತ ವಜೀರನ ಸ್ಥಾನವನ್ನು ಅಲಂಕರಿಸಿದರೆ, ಸೇನೆಯ ದಳಪತಿಯ ಸ್ಥಾನವನ್ನು ತೇಜ್‌ ಸಿಂಗ್‌ ವಹಿಸಿಕೊಂಡ. ಈ ಇಬ್ಬರೂ ಸಹ ಡೋಗ್ರಾ ಬಣದಲ್ಲಿ ಗಣ್ಯರಾಗಿದ್ದರು ಎಂಬುದಾಗಿ ಸಿಖ್‌ ಇತಿಹಾಸಕಾರರು ಒತ್ತಿಹೇಳಿದ್ದಾರೆ. ಮೂಲತಃ ಪಂಜಾಬ್‌ನ ಆಚೆಯ ಪ್ರದೇಶಕ್ಕೆ ಸೇರಿದ ಉನ್ನತ-ಜಾತಿಯ ಹಿಂದೂಗಳಾದ ಇವರಿಬ್ಬರೂ 1818ರಲ್ಲಿ ಸಿಖ್‌ ಧರ್ಮಕ್ಕೆ (ಆ ಸಮಯದಲ್ಲಿ ಪಂಜಾಬ್‌ನಲ್ಲಿದ್ದ ಬಹುಪಾಲು ಸಿಖ್ಖರು ಮತಾಂತರಗೊಂಡಂತೆಯೇ) ಮತಾಂತರಗೊಂಡಿದ್ದರು.

ಬ್ರಿಟಿಷರ ಕ್ರಮಗಳು

[ಬದಲಾಯಿಸಿ]

ರಣಜಿತ್‌ ಸಿಂಗ್‌ನ ಸಾವು ಸಂಭವಿಸಿದ ತತ್‌ಕ್ಷಣವೇ ಬ್ರಿಟಿಷ್‌ ಈಸ್ಟ್‌ ಇಂಡಿಯಾ ಕಂಪನಿಯು ತನ್ನ ಸೇನಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನದಲ್ಲಿ ತೊಡಗಿತ್ತು; ಅದರಲ್ಲೂ ನಿರ್ದಿಷ್ಟವಾಗಿ ಪಂಜಾಬ್‌ಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಈ ಪ್ರವೃತ್ತಿ ಕಂಡುಬಂದಿತ್ತು. 1844ರಲ್ಲಿ, ಸಿಂಧ್‌ ಪ್ರದೇಶವನ್ನು ಪಂಜಾಬ್‌ನ ದಕ್ಷಿಣಭಾಗಕ್ಕೆ ಅವರು ಜೋಡಣೆ ಮಾಡಿದರು. ಸಟ್ಲೆಜ್‌ ನದಿಯಿಂದ ಕೇವಲ ಕೆಲವೇ ಮೈಲುಗಳಷ್ಟು ದೂರವಿದ್ದ ಫಿರೋಜ್‌ಪುರ್‌‌‌ನಲ್ಲಿ ಒಂದು ಸೇನಾ ದಂಡನ್ನೂ ಅವರು ಸ್ಥಾಪಿಸಿದ್ದರು; ಇದು ಬ್ರಿಟಿಷ್‌-ಆಳ್ವಿಕೆಯ ಭಾರತ ಮತ್ತು ಪಂಜಾಬ್ ನಡುವಿನ ಗಡಿನಾಡನ್ನು ಗುರುತುಮಾಡಿತು.

ಲಾರ್ಡ್‌ ಎಲೆನ್‌ಬರೋ ಮತ್ತು ಅವನ ಉತ್ತರಾಧಿಕಾರಿಯಾದ ಸರ್‌ ಹೆನ್ರಿ ಹಾರ್ಡಿಂಜ್‌‌ರಂಥ ಗವರ್ನರ್‌ ಜನರಲ್‌ಗಳ ಅಡಿಯಲ್ಲಿ ಬ್ರಿಟಿಷರು ತೋರಿದ ಕ್ರಮಗಳು ಮತ್ತು ವರ್ತನೆಗಳು ವಿವಾದಾತ್ಮಕವಾಗಿವೆ. ಬಹುಪಾಲು ಬ್ರಿಟಿಷರ ಸಮಜಾಯಿಷಿಗಳನ್ನು ಪರಿಗಣಿಸುವುದಾದರೆ, ಖಾಲ್ಸಾಗಳನ್ನು ನಿಗ್ರಹಿಸಲು ಬ್ರಿಟಿಷರ ಬಳಿಯಲ್ಲಿ ಬಲವಾದ ನಾಯಕತ್ವ ಇರದಿದ್ದ ಕಾರಣದಿಂದಾಗಿ, ಗಡಿ ಪ್ರದೇಶದ ಉದ್ದಕ್ಕೂ ಇರುವ ಬ್ರಿಟಿಷ್‌ ಪ್ರದೇಶಗಳಿಗೆ ಖಾಲ್ಸಾಗಳು ಒಂದು ಗಂಭೀರ ಸ್ವರೂಪದ ಬೆದರಿಕೆಯನ್ನೊಡ್ಡಿದ್ದು ಈ ಗವರ್ನರ್‌ ಜನರಲ್‌ಗಳ ಕಳವಳಕ್ಕೆ ಮುಖ್ಯ ಕಾರಣವಾಗಿತ್ತು. ಸಿಖ್‌ ಮತ್ತು ಭಾರತೀಯ ಇತಿಹಾಸಕಾರರು ಇದಕ್ಕೆ ಪ್ರತಿಕ್ರಿಯಿಸುತ್ತಾ, ಈ ಗವರ್ನರ್‌ ಜನರಲ್‌ಗಳು ಮಾಡಿದ್ದ ಸೇನಾ ಸಿದ್ಧತೆಗಳು ಆಕ್ರಮಣಕಾರಿ ಸ್ವರೂಪವನ್ನು ಹೊಂದಿದ್ದವು; ಉದಾಹರಣೆಗೆ ಹೇಳುವುದಾದರೆ, ಸೇತುವೆ ಕಟ್ಟುವ ತಂಡ ಮತ್ತು ಭಾರೀ ಮುತ್ತಿಗೆಯ ಫಿರಂಗಿಯ ಫಿರಂಗಿದಳಗಳನ್ನು ಅವರು ಸಿದ್ಧಪಡಿಸಿದರು; ಒಂದು ಅಪ್ಪಟವಾದ ರಕ್ಷಣಾತ್ಮಕ ಕಾರ್ಯಾಚರಣೆಯಲ್ಲಿ ಇಂಥದೊಂದು ವ್ಯವಸ್ಥೆ ಬೇಕಾಗುತ್ತದೆ ಎಂಬುದೇ ಅಸಂಭವವಾಗಿತ್ತು ಎಂದು ನುಡಿದರು.[]

ಗಡಿನಾಡು ಜಿಲ್ಲೆಗಳಲ್ಲಿ ಬ್ರಿಟಿಷರ ಹೊಸ ರಾಜತಾಂತ್ರಿಕ ಪ್ರತಿನಿಧಿಯಾಗಿದ್ದ ಮೇಜರ್‌ ಜಾರ್ಜ್‌ ಬ್ರಾಡ್‌ಫೂಟ್‌ ಎಂಬಾತನಿಂದ ಬಂದ ವರದಿಗಳಿಂದ ಬ್ರಿಟಿಷರ ವರ್ತನೆಗಳು ಪ್ರಭಾವಕ್ಕೊಳಗಾಗಿದ್ದವು; ಪಂಜಾಬ್‌ನಲ್ಲಿನ ಅರಾಜಕತೆಯ ಕುರಿತಾಗಿ ಈ ರಾಜತಾಂತ್ರಿಕ ಪ್ರತಿನಿಧಿಯು ತನ್ನ ವರದಿಯಲ್ಲಿ ಒತ್ತಿಹೇಳಿದ್ದ ಮತ್ತು ರಾಜನ ಆಸ್ಥಾನದಲ್ಲಿನ ಭ್ರಷ್ಟ ನಡವಳಿಕೆಯ ಪ್ರತಿಯೊಂದು ಕಥೆಯನ್ನೂ ಅವನು ವಿವರವಾಗಿ ನಿರೂಪಿಸಿದ್ದ. ಕೆಲವೊಂದು ಬ್ರಿಟಿಷ್‌ ಅಧಿಕಾರಿಗಳಿಗೆ, ಪಂಜಾಬ್‌ನೊಳಗೆ ಬ್ರಿಟಿಷ್‌ ಪ್ರಭಾವ ಮತ್ತು ನಿಯಂತ್ರಣವನ್ನು ವಿಸ್ತರಿಸುವ ಒಂದು ಬಲವಾದ ಬಯಕೆಯಿತ್ತು; ಏಕೆಂದರೆ, ಅದು ಭಾರತದಲ್ಲಿ ಬ್ರಿಟಿಷರ ಹಿಡಿತಕ್ಕೆ ಬೆದರಿಕೆಯೊಡ್ಡುವ ಸಾಮರ್ಥ್ಯವನ್ನು ಹೊಂದಿದ್ದ ಮತ್ತು ಬ್ರಿಟಿಷರಿಂದ ಎದುರಿಸಲಾಗದೆ ಉಳಿದುಕೊಂಡಿದ್ದ ಏಕಮಾತ್ರ ಪಡೆಯಾಗಿತ್ತು ಮತ್ತು ಬ್ರಿಟಿಷ್‌ ಪ್ರಭಾವದ ಅಡಿಯಲ್ಲಿ ಸಿಲುಕದೇ ಉಳಿದುಕೊಂಡಿದ್ದ ಸ್ವತಂತ್ರ ರಾಜ್ಯವಾಗಿತ್ತು. ಅತ್ಯಂತ ಶ್ರೀಮಂತವಾಗಿರುವ ಸಾಮ್ರಾಜ್ಯ ಎಂಬ ಕೀರ್ತಿಗೂ ಅದು ಪಾತ್ರವಾಗಿತ್ತು ಮತ್ತು ಅದರ ಅನೇಕ ಸಂಪತ್ತುಗಳಲ್ಲಿ ಕೊಹಿನೂರು ವಜ್ರವು ಒಂದೆನಿಸಿಕೊಂಡಿತ್ತು. ಇದನ್ನು ಹೊರತುಪಡಿಸಿದರೆ, ಯುದ್ಧವು ಸಂಭವಿಸದೇ ಇದ್ದಿದ್ದ ಪಕ್ಷದಲ್ಲಿ ಪಂಜಾಬ್‌ಗೆ ಜೋಡಿಸುವುದಕ್ಕೆ ಬ್ರಿಟಿಷ್‌ ಈಸ್ಟ್‌ ಇಂಡಿಯಾ ಕಂಪನಿಯು ಉದ್ದೇಶಪೂರ್ವಕವಾಗಿ ಪ್ರಯತ್ನಮಾಡುತ್ತಿತ್ತು ಎಂಬುದು ಅಸಂಭವ ಎನಿಸಿಕೊಳ್ಳುತ್ತದೆ; ಏಕೆಂದರೆ, ಅವರಲ್ಲಿ ಜನಬಲವಾಗಲೀ ಅಥವಾ ಸದರಿ ಪ್ರದೇಶಗಳ ಮೇಲೆ ಒಂದು ಹಿಡಿತವನ್ನು ಹೊಂದಲು ಅಗತ್ಯವಿದ್ದ ಸಂಪನ್ಮೂಲಗಳಾಗಲೀ ಇರಲಿಲ್ಲ (ಎರಡನೇ ಆಂಗ್ಲೋ-ಸಿಖ್‌ ಯುದ್ಧದ ಆಸ್ಫೋಟನದಿಂದ ಇದು ರುಜುವಾತುಪಡಿಸಲ್ಪಟ್ಟಿದೆ).[ಸೂಕ್ತ ಉಲ್ಲೇಖನ ಬೇಕು]

ಅದೇನೇ ಇದ್ದರೂ, ಗಡಿಪ್ರದೇಶಗಳಲ್ಲಿ ಕಂಡುಬಂದ ಮುಚ್ಚುಮರೆಯಿಲ್ಲದ ಮತ್ತು ತೋರಿಕೆಯಲ್ಲಿ ಆಕ್ರಮಣಶೀಲವಾಗಿದ್ದ ಬ್ರಿಟಿಷ್‌ ಸೇನಾ ಜಮಾವಣೆಯು, ಪಂಜಾಬ್‌ ಮತ್ತು ಖಾಲ್ಸಾದ ಒಳಗೆ ಕಂಡುಬಂದಿದ್ದ ಹೆಚ್ಚುತ್ತಲೇ ಇದ್ದ ಬಿಕ್ಕಟ್ಟಿನ ಪರಿಣಾಮವನ್ನು ಎದುರಿಸಿತ್ತು.

ಯುದ್ಧದ ಆಸ್ಫೋಟನ ಮತ್ತು ಮುನ್ನಡೆ

[ಬದಲಾಯಿಸಿ]
1846ರ ಮೊದಲ ಆಂಗ್ಲೋ-ಸಿಖ್‌ ಯುದ್ಧದ ಸಂದರ್ಭದಲ್ಲಿ ಬ್ರಿಟಿಷರ ವಿರುದ್ಧ ಸಾಗಿದ ಸಿಖ್‌ ಪಡೆಗಳ ನಾಯಕತ್ವವನ್ನು ವಹಿಸಿದ್ದ ರಾಜ ಲಾಲ್‌ ಸಿಂಗ್‌.

ಸಿಖ್‌ ದರ್ಬಾರ್‌ ಮತ್ತು ಈಸ್ಟ್‌ ಇಂಡಿಯಾ ಕಂಪನಿಯ ನಡುವಿನ ಪರಸ್ಪರ ಬೇಡಿಕೆಗಳು ಮತ್ತು ಆಪಾದನೆಗಳ ನಂತರ, ರಾಜತಾಂತ್ರಿಕ ಬಾಂಧವ್ಯಗಳು ಮುರಿದುಬಿದ್ದವು. ಈಸ್ಟ್‌ ಇಂಡಿಯಾ ಕಂಪನಿಯ ಸೇನೆಯೊಂದು ಫಿರೋಜ್‌ಪುರ್ ಕಡೆಗೆ ಶಿಸ್ತಿನಿಂದ ಹೆಜ್ಜೆಹಾಕಲು ಶುರುಮಾಡಿತು. ಅಷ್ಟು ಹೊತ್ತಿಗಾಗಲೇ ತುಕಡಿಯೊಂದು ಅಲ್ಲಿ ಬೀಡುಬಿಟ್ಟಿತ್ತು. ಈ ಸೇನೆಯ ಅಧಿಪತ್ಯವನ್ನು ಬಂಗಾಳ ಸೇನೆಯ ಪ್ರಧಾನ ದಂಡನಾಯಕನಾದ ಸರ್‌ ಹ್ಯೂ ಗಫ್‌ ಎಂಬಾತ ವಹಿಸಿದ್ದ, ಮತ್ತು ಬಂಗಾಳದ ಬ್ರಿಟಿಷ್‌ ಗವರ್ನರ್‌ ಜನರಲ್‌ ಆಗಿದ್ದ ಸರ್‌ ಹೆನ್ರಿ ಹಾರ್ಡಿಂಜ್ ಎಂಬಾತ ಇವನ ಜತೆಗೂಡಿದ; ಸೇನಾ ಅಧಿಕಾರ ಶ್ರೇಣಿಯಲ್ಲಿ ಸರ್‌ ಹೆನ್ರಿ ಹಾರ್ಡಿಂಜ್‌ ಸ್ವತಃ ಗಫ್‌ ಅಡಿಯಲ್ಲಿ ಸ್ಥಾನಗಳಿಸಿದವನಾಗಿದ್ದ. ಬಂಗಾಳ ಸೇನೆಯ ಸೇನಾ ವ್ಯೂಹಗಳನ್ನು "ಬ್ರಿಟಿಷ್‌" ಪಡೆಗಳು ಒಳಗೊಂಡಿದ್ದವು ಹಾಗೂ ಸಾಮಾನ್ಯವಾಗಿ ಬಂಗಾಳದ ಪ್ರತಿ ಮೂರು ಅಥವಾ ನಾಲ್ಕು ಕಾಲಾಳು ಪಡೆ ಅಥವಾ ಅಶ್ವಸೈನ್ಯ ಘಟಕಗಳಿಗೆ ಒಂದು ಬ್ರಿಟಿಷ್‌ ಘಟಕದ ಸ್ವರೂಪದಲ್ಲಿ ಸೇನೆಯನ್ನು ಸಜ್ಜುಗೊಳಿಸಲಾಗಿತ್ತು. ಬ್ರಿಟಿಷರ ಪಕ್ಷದ ಫಿರಂಗಿದಳದ ಬಹುಭಾಗವು ಉತ್ಕೃಷ್ಟವಾದ ಬಂಗಾಳ ಅಶ್ವ ಫಿರಂಗಿದಳಕ್ಕೆ ಸೇರಿದ ಹಗುರವಾದ ಬಂದೂಕುಗಳನ್ನು ಒಳಗೊಂಡಿತ್ತು.

ಬ್ರಿಟಿಷರ ನಡೆಗೆ ಪ್ರತಿಕ್ರಿಯೆಯಾಗಿ, 1845ರ ಡಿಸೆಂಬರ್‌ 11ರಂದು ಸಿಖ್‌ ಸೇನೆಯು ಸಟ್ಲೆಜ್‌ ನದಿಯನ್ನು ದಾಟಲು ಪ್ರಾರಂಭಿಸಿತು. ಸೇನೆಯ ನಾಯಕಸ್ಥಾನಗಳು ಮತ್ತು ಪ್ರಧಾನ ಘಟಕಗಳು ಸಿಖ್ಖರಿಗೆ ಸೇರಿದ್ದವಾದರೂ, ಪಂಜಾಬಿ, ಪಾಖ್ತನ್‌ ಮತ್ತು ಕಾಶ್ಮೀರದ ಕಾಲಾಳು ಪಡೆಯ ಘಟಕಗಳೂ ಸಹ ಅದರಲ್ಲಿದ್ದವು. ಫಿರಂಗಿದಳವು ಭಾರೀ ಬಂದೂಕುಗಳ ಘಟಕಗಳನ್ನು ಮುಖ್ಯವಾಗಿ ಒಳಗೊಂಡಿತ್ತು ಮತ್ತು ಅದು ಯುರೋಪಿನ ಸಂಬಳದ ಸಿಪಾಯಿಗಳಿಂದ ಸಂಘಟಿಸಲ್ಪಟ್ಟಿತ್ತು ಮತ್ತು ತರಬೇತಿ ನೀಡಲ್ಪಟ್ಟಿತ್ತು.

ನದಿಯ ಪೂರ್ವಭಾಗದಲ್ಲಿದ್ದ ಸಿಖ್‌ ಅಧೀನ ಪ್ರದೇಶಗಳಿಗೆ (ನಿರ್ದಿಷ್ಟವಾಗಿ ಹೇಳುವುದಾದರೆ ಅದು ಮೊರಾನ್‌ ಹಳ್ಳಿ‌ಯಾಗಿದ್ದು, ಅದರ ಮಾಲೀಕತ್ವ ವಿವಾದಾತ್ಮಕವಾಗಿತ್ತು) ಮಾತ್ರವೇ ತಾವು ಸಾಗುತ್ತಿದ್ದುದು ಎಂಬುದಾಗಿ ಸಿಖ್ಖರು ಸಮರ್ಥಿಸಿದರಾದರೂ, ಅವರ ನಡೆಯಲ್ಲಿ ಹಗೆತನವು ಸ್ಪಷ್ಟವಾಗಿ ಕಂಡುಬರುತ್ತಿದೆ ಎಂದು ಪರಿಗಣಿಸಿದ ಬ್ರಿಟಿಷರು ಯುದ್ಧವನ್ನು ಘೋಷಿಸಿದರು. ತೇಜ್‌ ಸಿಂಗ್‌ನ ಅಧೀನದ ಸಿಖ್‌ ಸೇನೆಯೊಂದು ಫಿರೋಜ್‌ಪುರ್‌ ಕಡೆಗೆ ಮುಂದುವರಿಯಿತಾದರೂ, ಅಲ್ಲಿ ಕಾಣಿಸುತ್ತಿದ್ದ ಬ್ರಿಟಿಷ್‌ ವಿಭಾಗವನ್ನು ಸುತ್ತುವರಿಯುವ ಅಥವಾ ಅದರ ಮೇಲೆ ದಾಳಿಮಾಡುವ ಯಾವ ಪ್ರಯತ್ನವನ್ನೂ ಅದು ಮಾಡಲಿಲ್ಲ. ಲಾಲ್‌ ಸಿಂಗ್‌ ಅಧೀನದಲ್ಲಿದ್ದ ಮತ್ತೊಂದು ಪಡೆಯು, ಗಫ್‌ನ ಮತ್ತು ಹಾರ್ಡಿಂಜ್‌ನ ಮುಂದುವರೆಯುತ್ತಿದ್ದ ಪಡೆಗಳೊಂದಿಗೆ ಡಿಸೆಂಬರ್ 18ರಂದು ಮುಡ್ಕಿಯ ಕದನದಲ್ಲಿ ಹೋರಾಡಿತು. ಅವ್ಯವಸ್ಥಿತವಾಗಿದ್ದ ಮುಖಾಬಿಲೆಯ ಕದನವೊಂದನ್ನು ಬ್ರಿಟಿಷರು ಗೆದ್ದರು.

ಮರುದಿನದಂದು, ಫಿರೋಜ್‌ಷಾದಲ್ಲಿ ಸಿಖ್ಖರು ವ್ಯವಸ್ಥೆಗೊಳಿಸಿದ್ದ ದೊಡ್ಡ ಕಂದಕವು ಕಾಣುವಷ್ಟು ಹತ್ತಿರಕ್ಕೆ ಬ್ರಿಟಿಷರು ಬಂದರು. ಒಮ್ಮೆಗೇ ಎರಗಬೇಕೆಂದು ಗಫ್‌ ಬಯಸಿದ. ಆದರೆ ಅವನ ಬಯಕೆಯನ್ನು ತಳ್ಳಿಹಾಕುವುದಕ್ಕೆ ತನ್ನ ಗವರ್ನರ್‌ ಜನರಲ್‌ ಸ್ಥಾನವನ್ನು ಬಳಸಿಕೊಂಡ ಹಾರ್ಡಿಂಜ್‌, ಫಿರೋಜ್‌ಪುರ್‌ನಿಂದ ಬರಬೇಕಿರುವ ತುಕಡಿಯು ಆಗಮಿಸುವವರೆಗೂ ಕಾಯುವಂತೆ ಅವನಿಗೆ ಆದೇಶಿಸಿದ. ಡಿಸೆಂಬರ್ 21ರಂದು ತಡವಾಗಿ ಅವರು ಕಾಣಿಸಿಕೊಂಡಾಗ, ದಿನದ ಬೆಳಕು ಇನ್ನು ಸ್ವಲ್ಪವೇ ಉಳದಿರುವಂತೆಯೇ ಗಫ್‌ ದಾಳಿಮಾಡಿದ. ಸಿಖ್ಖರ ಬಳಿಯಿದ್ದ ಉತ್ತಮವಾಗಿ ಹಾರಿಸುತ್ತಲೇ ಇದ್ದ ಫಿರಂಗಿದಳವು ಬ್ರಿಟಿಷರ ಪಡೆಯಲ್ಲಿ ಭಾರೀ ಸಾವುನೋವುಗಳನ್ನು ಉಂಟುಮಾಡಿತು, ಮತ್ತು ಅವರ ಕಾಲಾಳು ಪಡೆಯು ಹುಚ್ಚು ಸಾಹಸದಿಂದ ಹೋರಾಡಿತು. ಮತ್ತೊಂದೆಡೆ, ಸಿಖ್‌ ಸೇನೆಯ ಉತ್ಕೃಷ್ಟಭಾಗ ಎನಿಸಿಕೊಂಡಿದ್ದ ಅನಿಯತ ಅಶ್ವಸೈನ್ಯದವರು ಅಥವಾ ಘೋಡಾಚಡಾಗಳು (ಪರ್ಯಾಯ: ಗೊರ್ರಾಚರ್ರಾ, ಕುದುರೆ-ಏರಿದವರು) ಗಫ್‌ನ ಕಾಲಾಳು ಪಡೆ ಮತ್ತು ಅಶ್ವಸೈನ್ಯದ ವಿರುದ್ಧ ತುಲನಾತ್ಮಕವಾಗಿ ನಿಷ್ಪರಿಣಾಮಕಾರಿಯಾಗಿದ್ದರು; ಯುದ್ಧಭೂಮಿಯಲ್ಲಿ ಕೈಹಾಕದಿರುವಂತೆ ಲಾಲ್‌ ಸಿಂಗ್ ಅವರಿಗೆ ನಿರ್ದೇಶನ ನೀಡಿದ್ದು ಇದಕ್ಕೆ ಕಾರಣವಾಗಿತ್ತು.

ಮುಸ್ಸಂಜೆಯ ವೇಳೆಗೆ, ಗಫ್‌ನ ಸೇನೆಯ ಒಂದಷ್ಟು ಭಾಗವು ಹೋರಾಡಿಕೊಂಡು ಸಿಖ್ಖರ ಸೇನಾಠಾಣ್ಯಕ್ಕೆ ದಾರಿಮಾಡಿಕೊಂಡಿತ್ತು, ಆದರೆ ಇತರ ಘಟಕಗಳು ಅಸ್ತವ್ಯಸ್ತತೆ ಅಥವಾ ಕೋಲಾಹಲದಿಂದಾಗಿ ಹಿಂದಕ್ಕೆ ಓಡಿಸಲ್ಪಟ್ಟಿದ್ದವು. ಮಾರನೆಯ ದಿನದಂದು ಸಿಖ್ಖರ ಯೋಜನೆಯನ್ನು ವ್ಯರ್ಥಗೊಳಿಸಬೇಕೆಂದು ಹಾರ್ಡಿಂಜ್‌ ಬಯಸಿದ ಮತ್ತು ಈ ಘಟನೆಯಲ್ಲಿ ಮುಡ್ಕಿಯಲ್ಲಿನ ಸರ್ಕಾರಿ ದಾಖಲೆಗಳನ್ನು ಸುಟ್ಟುಹಾಕುವಂತೆ ಆದೇಶಿಸಿದ. ಆದಾಗ್ಯೂ, ಮಾರನೆಯ ಬೆಳಗ್ಗೆ, ಬ್ರಿಟಿಷರ ಮತ್ತು ಬಂಗಾಳ ಸೇನಾ ಘಟಕಗಳು ಪುನರ್ವ್ಯೂಹಗೊಂಡವು ಮತ್ತು ಸಿಖ್ಖರನ್ನು ಅವರ ರಕ್ಷಣಾ ಸಾಧನಗಳ ಉಳಿದ ಭಾಗದಿಂದ ಓಡಿಸಿದವು. ತನ್ನ ಸೇನೆಯನ್ನು ಪುನರ್ವ್ಯೂಹಗೊಳಿಸುವುದಕ್ಕೆ ಅಥವಾ ಮರುಸಂಘಟಿಸುವುದಕ್ಕೆ ಲಾಲ್‌ ಸಿಂಗ್‌ ಯಾವ ಪ್ರಯತ್ನವನ್ನೂ ಮಾಡಿರಲಿಲ್ಲ. ಈ ಘಟ್ಟದಲ್ಲಿ ತೇಜ್‌ ಸಿಂಗ್‌ನ ಸೇನೆಯು ಕಾಣಿಸಿಕೊಂಡಿತು. ಗಫ್‌ನ ದಣಿದಿದ್ದ ಸೇನೆಯು ಮತ್ತೊಮ್ಮೆ ಸೋಲನ್ನೆದುರಿಸಿತು ಮತ್ತು ಈ ಬಾರಿ ಅದು ಸಂಪೂರ್ಣ ಸೋಲಾಗಿತ್ತು, ಆದರೆ ವಿವರಿಸಲಾಗದಂಥ ಸನ್ನಿವೇಶದ ಹಿನ್ನೆಲೆಯಲ್ಲಿ ತೇಜ್‌ ಸಿಂಗ್‌ ಅಲ್ಲಿಂದ ಹಿಂತೆಗೆದುಕೊಂಡ; ಯುದ್ಧಸಾಮಗ್ರಿಯನ್ನು ಮತ್ತೆ ಭರ್ತಿಮಾಡಲೆಂದು ಹಿಂದೆ ಸರಿಯುತ್ತಿದ್ದ ಬ್ರಿಟಿಷ್‌ ಅಶ್ವಸೈನ್ಯ ಮತ್ತು ಫಿರಂಗಿದಳವು ವಾಸ್ತವವಾಗಿ ತನ್ನ ಸೈನ್ಯವನ್ನು ಶತ್ರುಸೈನ್ಯದಾಚೆಗೆ ವಿಸ್ತರಿಸಿ, ಅದನ್ನು ಸುತ್ತುವರೆಯುವ ನಡೆಯೊಂದನ್ನು ಮಾಡುತ್ತಿದೆ ಎಂಬುದು ಆತ ತನ್ನ ಕ್ರಮಕ್ಕೆ ನೀಡಿದ ಸಮರ್ಥನೆಯಾಗಿತ್ತು.

ಕಾರ್ಯಾಚರಣೆಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡವು. ಇದಕ್ಕಿದ್ದ ಮುಖ್ಯವಾದ ಕಾರಣವೆಂದರೆ ಗಫ್‌ನ ಸೇನೆಯು ದಣಿದಿತ್ತು ಮತ್ತು ಅದಕ್ಕೆ ವಿಶ್ರಾಂತಿ ಹಾಗೂ ಬಲವರ್ಧನೆಗಳು ಅಗತ್ಯವಾಗಿದ್ದವು. ಸಿಖ್ಖರು ತಮ್ಮ ಸೋಲುಗಳು ಮತ್ತು ತಮ್ಮ ದಳಪತಿಗಳ ಕ್ರಮಗಳಿಂದಾಗಿ ತಾತ್ಕಾಲಿಕವಾಗಿ ಎದೆಗುಂದಿದ್ದರಾದರೂ, ತಾಜಾ ಘಟಕಗಳು ಮತ್ತು ನಾಯಕರು ಅವರನ್ನು ಸೇರಿಕೊಂಡಾಗ ಅವರು ಪುನರ್ವ್ಯೂಹಗೊಂಡರು; ಇಷ್ಟೇ ಅಲ್ಲ, ನವೀಕರಿಸಲ್ಪಟ್ಟ ಪ್ರಯತ್ನಗಳನ್ನು ಕೈಗೊಳ್ಳಲೆಂದು ಮಹಾರಾಣಿ ಜಿಂದ್‌ ಕೌರ್‌ 500 ಆಯ್ದ ಅಧಿಕಾರಿಗಳನ್ನು ಪ್ರಚೋದಿಸಿದಳು.

ಯುದ್ಧದ ಕಾರ್ಯಾಚರಣೆಗಳು ಪುನರಾರಂಭಗೊಂಡಾಗ, ಸಿಖ್ಖರ ವಿಶೇಷ ದಳವೊಂದು ಅಲಿವಾಲ್‌ ಸಮೀಪದಲ್ಲಿ ಸಟ್ಲೆಜ್‌ ನದಿಯನ್ನು ದಾಟಿತು, ಮತ್ತು ಗಫ್‌ನ ಪೂರೈಕೆ ಹಾಗೂ ಸಂಪರ್ಕಗಳ ಸೇನಾಶ್ರೇಣಿಗೆ ಬೆದರಿಕೆಯೊಡ್ಡಿತು. ಅವರನ್ನು ನಿಭಾಯಿಸಲು ಸರ್‌ ಹ್ಯಾರಿ ಸ್ಮಿತ್‌ ನೇತೃತ್ವದ ತುಕಡಿಯೊಂದನ್ನು ಕಳಿಸಲಾಯಿತು. ಸ್ಮಿತ್‌ನ ಸೇನಾ ದಂಡಿನ ಪ್ರಯಾಣದ ಮೇಲೆ ನಿರಂತರವಾಗಿ ದಾಳಿಮಾಡಿದ ಸಿಖ್‌ ಅಶ್ವಸೈನ್ಯವು ಅವನ ಸಾಮಾನು ಸರಂಜಾಮುಗಳನ್ನು ವಶಪಡಿಸಿಕೊಂಡಿತು, ಆದರೆ ಸ್ಮಿತ್‌ ಬಲವರ್ಧನೆಗಳನ್ನು ಪಡೆದ. ಅಷ್ಟೇ ಅಲ್ಲ, 1846ರ ಜನವರಿ 28ರಂದು ನಡೆದ ಅಲಿವಾಲ್‌ ಕದನದಲ್ಲಿ ಸಿಖ್ಖರ ಸೇತುಶಿರವನ್ನು ತೆಗೆದುಹಾಕುವ ಮೂಲಕ ಒಂದು ಮಾದರಿ ವಿಜಯವನ್ನು ಅವನು ದಾಖಲಿಸಿದ.

ಇಷ್ಟು ಹೊತ್ತಿಗೆ ಗಫ್‌ನ ಮುಖ್ಯ ಸೇನೆಯು ಬಲವರ್ಧನೆಯನ್ನು ಪಡೆದಿತ್ತು, ಮತ್ತು ಅದಕ್ಕೆ ಸ್ಮಿತ್‌ನ ತುಕಡಿಯು ಮರುಸೇರ್ಪಡೆಗೊಂಡಿತ್ತು; ಫೆಬ್ರುವರಿ 10ರಂದು ಈ ಸೇನೆಯು ಸೊಬ್ರಾವೊನ್‌‌ನಲ್ಲಿನ ಸಿಖ್ಖರ ಮುಖ್ಯ ಸೇತುಶಿರದ ಮೇಲೆ ದಾಳಿಮಾಡಿತು. ಕದನದಲ್ಲಿ ಸಾಕಷ್ಟು ಮುಂಚಿತವಾಗಿಯೇ ತೇಜ್‌ಸಿಂಗ್‌ ಸಿಖ್‌ ಸೇನೆಯನ್ನು ಬಿಟ್ಟುಹೋದ ಎಂದು ಹೇಳಲಾಗುತ್ತದೆ. ಫಿರೋಜ್‌ಷಾದಲ್ಲಿ ಹೋರಾಡಿದಂತೆಯೇ ಸಿಖ್‌ ಸೇನೆಯು ಪಟ್ಟುಬಿಡದೆ ಪ್ರತಿರೋಧಿಸಿತಾದರೂ, ಗಫ್‌ನ ಪಡೆಗಳು ಅಂತಿಮವಾಗಿ ಅವರ ಸೇನಾಠಾಣ್ಯಕ್ಕೆ ಲಗ್ಗೆಯಿಟ್ಟಿತು. ಸಿಖ್ಖರ ಹಿಂದಿದ್ದ ಸೇತುವೆಗಳು ಬ್ರಿಟಿಷ್‌ ಫಿರಂಗಿದಳದ ದಾಳಿಯಿಂದಾಗಿ ಮುರಿದುಬಿದ್ದವು, ಅಥವಾ ತಾನು ನಿರ್ಗಮಿಸಿದ ನಂತರ ಅವನ್ನು ನಾಶಪಡಿಸುವಂತೆ ತೇಜ್‌ ಸಿಂಗ್‌ ಆದೇಶ ನೀಡಿದ್ದ (ತೋರಿಕೆಗಾಗಿ ಬ್ರಿಟಿಷ್‌ ಬೆನ್ನಟ್ಟುವಿಕೆಯನ್ನು ತಡೆಗಟ್ಟಲು). ಸಿಖ್ಖರ ಸೇನೆಯು ಸಿಕ್ಕಿಬಿದ್ದಿತು. ಅವರ ಪೈಕಿ ಯಾರೊಬ್ಬರೂ ಶರಣಾಗಲಿಲ್ಲ, ಮತ್ತು ಬ್ರಿಟಿಷ್‌ ಪಡೆಗಳು ಕೊಂಚವೇ ಕರುಣೆಯನ್ನು ತೋರಿಸಿದವು. ಈ ಸೋಲು ಸಿಖ್‌ ಸೇನೆಯನ್ನು ಪರಿಣಾಮಕಾರಿಯಾಗಿ ವಿಘಟಿಸಿತು.

ಪರಿಣಾಮಗಳು

[ಬದಲಾಯಿಸಿ]
ಮೊದಲ ಆಂಗ್ಲೋ-ಸಿಖ್‌ ಯುದ್ಧದ (1845-46) ನಂತರ ಬ್ರಿಟಿಷ್‌ ಪಡೆಗಳ ಬೆಂಗಾವಲಿನೊಂದಿಗೆ ಲಾಹೋರ್‌ನಲ್ಲಿರುವ ತನ್ನ ಅರಮನೆಯನ್ನು ಪ್ರವೇಶಿಸುತ್ತಿರುವ ಮಹಾರಾಜ ದಲೀಪ್‌ ಸಿಂಗ್‌.

1846ರ ಮಾರ್ಚ್‌ 9ರಂದು ನಡೆದ ಲಾಹೋರ್‌ ಒಡಂಬಡಿಕೆಯಲ್ಲಿ, ಬಿಯಾಸ್‌ ನದಿ ಮತ್ತು ಸಟ್ಲೆಜ್‌ ನದಿಗಳ ನಡುವಿನ ಬೆಲೆಬಾಳುವ ಪ್ರದೇಶವನ್ನು (ಜಲಂದರ್‌ ದೊವಾಬ್‌) ಒಪ್ಪಿಸುವಂತೆ ಸಿಖ್ಖರನ್ನು ಆಗ್ರಹಿಸಲಾಯಿತು. ಲಾಹೋರ್‌ ದರ್ಬಾರ್‌ ಕೂಡಾ 15 ದಶಲಕ್ಷ ರೂಪಾಯಿಗಳಷ್ಟು (1.5 ಕೋಟಿ) ಮೊತ್ತದ ಒಂದು ನಷ್ಟ ಪರಿಹಾರಧನವನ್ನು ಪಾವತಿಸಬೇಕಾಗಿ ಬಂತು. ಈ ಮೊತ್ತವನ್ನು ಅದು ಸರಾಗವಾಗಿ ಸಂಗ್ರಹಿಸಲು ಸಾಧ್ಯವಾಗಲಿಲ್ಲವಾದ್ದರಿಂದ, ಬಿಯಾಸ್‌ ಮತ್ತು ಇಂಡಸ್‌ ನದಿಗಳ ನಡುವೆ ನೆಲೆಗೊಂಡಿದ್ದ ಬೆಟ್ಟ ದೇಶಗಳಲ್ಲಿನ ಎಲ್ಲಾ ಕೋಟೆಗಳು, ಪ್ರದೇಶಗಳು, ಹಕ್ಕುಗಳು ಮತ್ತು ಹಿತಾಸಕ್ತಿಗಳನ್ನು ಹಾಗೂ ಕಾಶ್ಮೀರ, ಹಜಾರಾ ಪ್ರದೇಶಗಳನ್ನು ಈಸ್ಟ್‌ ಇಂಡಿಯಾ ಕಂಪನಿಗೆ, ಒಂದು ಕೋಟಿ ರೂಪಾಯಿಗಳಿಗೆ ಸಮಾನವಾಗಿ ಬಿಟ್ಟುಕೊಡಬೇಕಾಗಿ ಬಂತು.[] ನಂತರದ ಪ್ರತ್ಯೇಕ ವ್ಯವಸ್ಥೆಯೊಂದರಲ್ಲಿ (ಅಮೃತಸರದ ಒಡಂಬಡಿಕೆ) ಜಮ್ಮುವಿನ ರಾಜನಾದ ಗುಲಾಬ್‌ ಸಿಂಗ್‌ ಈಸ್ಟ್‌ ಇಂಡಿಯಾ ಕಂಪನಿಗೆ 7,500,000 ರೂಪಾಯಿಗಳ (75 ಲಕ್ಷ) ಮೊತ್ತವನ್ನು ಪಾವತಿಸಿ ಕಾಶ್ಮೀರವನ್ನು ಖರೀದಿಸಿದ ಮತ್ತು ಅವನಿಗೆ ಜಮ್ಮು ಮತ್ತು ಕಾಶ್ಮೀರದ ಮಹಾರಾಜ ಎಂಬ ಪಟ್ಟವನ್ನು ನೀಡಲಾಯಿತು.[]

ಮಹಾರಾಜ ದುಲೀಪ್‌ ಸಿಂಗ್‌ ಪಂಜಾಬ್‌ನ ರಾಜನಾಗಿ ಉಳಿದುಕೊಂಡ ಮತ್ತು ಅಗ್ರಗಣ್ಯೆಯಾಗಿದ್ದ ಅವನ ತಾಯಿ ಮಹಾರಾಣಿ ಜಿಂದನ್‌ ಕೌರ್‌, ರಾಜಪ್ರತಿನಿಧಿಯಾಗಿ ಉಳಿದುಕೊಂಡಳು. ಆದಾಗ್ಯೂ, ಮಹಾರಾಜನು 16 ವರ್ಷ ವಯಸ್ಸನ್ನು ತಲುಪುವವರೆಗೂ ಬ್ರಿಟಿಷರ ಉಪಸ್ಥಿತಿಯು ಇರಬೇಕು ಎಂಬುದಾಗಿ ನಂತರದಲ್ಲಿ ದರ್ಬಾರು ಮನವಿಮಾಡಿಕೊಂಡಿತು. ಬ್ರಿಟಿಷರು ಇದಕ್ಕೆ ಒಪ್ಪಿಗೆ ನೀಡಿದರು ಮತ್ತು 1846ರ ಡಿಸೆಂಬರ್‌ 16ರಂದು ನಡೆದ ಭೈರೋವಲ್‌ ಒಡಂಬಡಿಕೆಯು ಮಹಾರಾಣಿಗೆ 150,000 ರೂಪಾಯಿಗಳಷ್ಟು (1.5 ಲಕ್ಷ) ಮೊತ್ತದ ಪಿಂಚಣಿಯೊಂದನ್ನು ನೀಡಬೇಕೆಂದು ಷರತ್ತು ವಿಧಿಸಿತು. ಅಷ್ಟೇ ಅಲ್ಲ, ರಾಜಪ್ರತಿನಿಧಿಯ ಮಂಡಲಿಯೊಂದರಿಂದ ಬೆಂಬಲಿಸಲ್ಪಡುವ, ಲಾಹೋರ್‌ನಲ್ಲಿನ ಬ್ರಿಟಿಷ್‌ ಪ್ರತಿನಿಧಿಯೊಬ್ಬರನ್ನು ಆಕೆಯ ಜಾಗದಲ್ಲಿ ನೇಮಿಸಬೇಕು ಹಾಗೂ ಇತರ ನಗರಗಳು ಹಾಗೂ ಪ್ರದೇಶಗಳಲ್ಲಿ ಪ್ರತಿನಿಧಿಗಳನ್ನು ಆಯೋಜಿಸಬೇಕು ಎಂಬ ಷರತ್ತನ್ನೂ ಅದು ವಿಧಿಸಿತು.[] ಇದು ಈಸ್ಟ್‌ ಇಂಡಿಯಾ ಕಂಪನಿಗೆ ಸರ್ಕಾರದ ನಿಯಂತ್ರಣವನ್ನು ಪರಿಣಾಮಕಾರಿಯಾಗಿ ನೀಡಿತು.

ದುಲೀಪ್‌ ಸಿಂಗ್‌ನ ಕೇವಲ ನಾಮಮಾತ್ರದ ನಾಯಕನ ಆಡಳಿತವನ್ನು ಕಾಯ್ದುಕೊಳ್ಳಲು ಮತ್ತು ಅಧಿಕಾರದ ಮೇಲಿನ ತಮ್ಮ ಹಿಡಿತವನ್ನು ಉಳಿಸಿಕೊಳ್ಳಲು ಲಾಲ್‌ ಸಿಂಗ್‌ ಮತ್ತು ತೇಜ್‌ ಸಿಂಗ್‌ ಯುದ್ಧವನ್ನು ಪ್ರವರ್ತಿಸಿದರು; ಇದರ ಹಿಂದೆ ತಮ್ಮದೇ ಸೇನೆಯನ್ನು ವಿಘಟಿಸುವ ಉದ್ದೇಶಪೂರ್ವಕ ಆಶಯವು ಅಡಗಿತ್ತು ಎಂಬುದಾಗಿ ಸಿಖ್‌ ಇತಿಹಾಸಕಾರರು ಎಲ್ಲ ಸಮಯಗಳಲ್ಲೂ ಸಮರ್ಥಿಸಿದ್ದಾರೆ. ನಿರ್ದಿಷ್ಟವಾಗಿ ಹೇಳುವುದಾದರೆ, ಓರ್ವ ಬ್ರಿಟಿಷ್‌ ರಾಜತಾಂತ್ರಿಕ ಅಧಿಕಾರಿಯೊಂದಿಗೆ ಲಾಲ್‌ ಸಿಂಗ್‌ ಪತ್ರವ್ಯವಹಾರವನ್ನು ನಡೆಸುತ್ತಿದ್ದ ಹಾಗೂ ಯುದ್ಧವು ನಡೆಯುತ್ತಿದ್ದ ಅವಧಿಯುದ್ದಕ್ಕೂ ರಾಜ್ಯದ ಮತ್ತು ಸೇನೆಯ ರಹಸ್ಯಗಳನ್ನು ಮೋಸದಿಂದ ಬಿಟ್ಟುಕೊಡುತ್ತಿದ್ದ. ಲಾಲ್‌ ಸಿಂಗ್‌ ಮತ್ತು ತೇಜ್‌ ಸಿಂಗ್‌ ಇಬ್ಬರೂ ತಂತಮ್ಮ ಸೇನೆಗಳನ್ನು ಬಿಟ್ಟುಹೋದದ್ದು ಹಾಗೂ ಅವಕಾಶ ಸಿಕ್ಕಾಗ ದಾಳಿಮಾಡಲು ನಿರಾಕರಿಸಿದ್ದು ಇವುಗಳು ಅನ್ಯಥಾ ವಿವರಿಸಲಾಗದ ಕಾರಣಗಳೆನಿಸಿವೆ.

ಅಲ್ಲಿಯವರೆವಿಗೂ ಸಿಖ್‌ ಸಾಮ್ರಾಜ್ಯವು ಭಾರತದಲ್ಲಿ ಈಸ್ಟ್‌ ಇಂಡಿಯಾ ಕಂಪನಿಯ ಉಗಮವಾದ ನಂತರ ಹಾಗೂ ಮುಘಲ್‌ ಸಾಮ್ರಾಜ್ಯದ ಪತನವಾದ ನಂತರ ಭಾರತದಲ್ಲಿ ಉಳಿದುಕೊಂಡಿದ್ದ ಕೆಲವೇ ಸಾಮ್ರಾಜ್ಯಗಳಲ್ಲಿ ಒಂದೆನಿಸಿತ್ತು. ಸದರಿ ಯುದ್ಧದ ದೆಸೆಯಿಂದಾಗಿ ಖಾಲ್ಸಾಗಳು ದುರ್ಬಲಗೊಳಿಸಲ್ಪಟ್ಟರಾದರೂ, ಸರ್ಕಾರದಲ್ಲಿನ ಬ್ರಿಟಿಷ್‌ ಹಸ್ತಕ್ಷೇಪದಿಂದಾಗಿ ಅವರೆಡೆಗೆ ಅಸಮಾಧಾನ ಮೂಡಿದ್ದು ಮೂರೇ ವರ್ಷಗಳ ಅವಧಿಯಲ್ಲಿ ಎರಡನೇ ಆಂಗ್ಲೋ-ಸಿಖ್‌ ಯುದ್ಧವು ಪ್ರಾರಂಭವಾಗಲು ಕಾರಣವಾಯಿತು.

ಮೂಲಗಳು

[ಬದಲಾಯಿಸಿ]
  • Farwell, Byron (1973). Queen Victoria's little wars. Wordsworth Editions. ISBN 1-84022-216-6.
  • Featherstone, Donald (2007). At Them with the Bayonet: The First Anglo-Sikh War 1845-1846. Leonnaur Books.
  • Hernon, Ian (2003). Britain's forgotten wars. Sutton Publishing Ltd. ISBN 0-7509-3162-0.
  • ಮೊದಲ ಆಂಗ್ಲೋ-ಸಿಖ್‌ ಯುದ್ಧದ (ಮತ್ತು ಹಂಗಾಮಿ ಕೋಟೆಗೋಡೆಗಳನ್ನು ಒಳಗೊಂಡಂತೆ ಸಿಖ್ಖರ ಹಲವಾರು ರಕ್ಷಣಾ ಸಾಧನಗಳ) ಹುಟ್ಟು ಮತ್ತು ಮುನ್ನಡೆಗಳ ಒಂದು ಅತೀವವಾಗಿ ಕಾದಂಬರೀಕರಿಸಿದ (ಕಾಮಪ್ರಚೋದಕ, ಬಾಯಲ್ಲಿ ನೀರೂರಿಸುವ ಮತ್ತು ಕೀಳುಹಾಸ್ಯದ) ವಿವರಣೆಯನ್ನು, ಜಾರ್ಜ್‌ ಮೆಕ್‌ಡೊನಾಲ್ಡ್‌ ಫ್ರೇಸರ್‌ (1990) ಎಂಬಾತ ಬರೆದಿರುವ ಫ್ಲಾಶ್‌ಮನ್‌ ಅಂಡ್‌ ದಿ ಮೌಂಟೇನ್‌ ಆಫ್‌ ಲೈಟ್‌ ಎಂಬ ಹಾಸ್ಯ/ಸಾಹಸ ಕಾದಂಬರಿಯಲ್ಲಿ ಕಾಣಬಹುದು. ಆದಾಗ್ಯೂ, ಉತ್ತಮವಾಗಿ-ಸಂಶೋಧನೆ ಮಾಡಲ್ಪಟ್ಟಿದ್ದ ಪುಸ್ತಕದ ಅಡಿಟಿಪ್ಪಣಿಗಳು ಗಂಭೀರ ಐತಿಹಾಸಿಕ ಮಾಹಿತಿ ಮತ್ತು ಹೆಚ್ಚಿನ ಓದಿಗೆ ಸಂಬಂಧಿಸಿದ ಒಂದು ಮೂಲವೆನಿಸಿಕೊಂಡಿವೆ ಹಾಗೂ ಯುದ್ಧದಲ್ಲಿ ತೊಡಗಿಸಿಕೊಂಡಿದ್ದ ಕೆಲವೊಂದು ಪ್ರಥಮ ಹೋರಾಟಗಾರರ ಜೀವನ ವೃತ್ತಾಂತಗಳನ್ನು ಇದು ಒಳಗೊಂಡಿರುವುದು ಈ ಮಾತಿಗೆ ನಿದರ್ಶನವಾಗಿದೆ.

ಉಲ್ಲೇಖಗಳು

[ಬದಲಾಯಿಸಿ]
  1. Allen, Charles (2001). Soldier Sahibs. Abacus. p. 28. ISBN 0-249-11456-0. {{cite book}}: Check |isbn= value: checksum (help)
  2. ೨.೦ ೨.೧ ‌ಹೆರ್ನಾನ್, ಪುಟ 546
  3. ಹೆರ್ನಾನ್‌, ಪುಟ 547
  4. ೪.೦ ೪.೧ ೪.೨ "allaboutsikh‌s.com". Archived from the original on 18 ಮಾರ್ಚ್ 2009. Retrieved 21 ಫೆಬ್ರವರಿ 2011.
  5. ಹೆರ್ನಾನ್‌, ಪುಟ 548
  6. "ಲಾಹೋರ್‌ ಒಡಂಬಡಿಕೆಯ ಷರತ್ತುಗಳು". Archived from the original on 27 ಡಿಸೆಂಬರ್ 2010. Retrieved 21 ಫೆಬ್ರವರಿ 2011.
  7. "ಅಮೃತಸರ ಒಡಂಬಡಿಕೆಯ ಷರತ್ತುಗಳು". Archived from the original on 5 ಜನವರಿ 2009. Retrieved 21 ಫೆಬ್ರವರಿ 2011.
  8. "ಭೈರೋವಲ್ ‌ಒಡಂಬಡಿಕೆಯ ಷರತ್ತುಗಳು". Archived from the original on 27 ಡಿಸೆಂಬರ್ 2010. Retrieved 21 ಫೆಬ್ರವರಿ 2011.


ಬಾಹ್ಯ ಕೊಂಡಿಗಳು

[ಬದಲಾಯಿಸಿ]