ವಿಷಯಕ್ಕೆ ಹೋಗು

ಬಚೇಂದ್ರಿ ಪಾಲ್‌

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬಚೇಂದ್ರಿ ಪಾಲ್‌ ಪರ್ವತಾರೋಹಣ ಸಾಹಸ ಮಾಡಿದ ಒಬ್ಬ ಭಾರತೀಯ ಮಹಿಳೆ.

ಬಚೇಂದ್ರಿ ಪಾಲ್

ಗೌರವಗಳು/ಪ್ರಶಸ್ತಿಗಳು

ಮೌಂಟೇನಿಯರಿಂಗ್ ಫೌಂಡೇಶನ್ ಆಫ್ ಇಂಡಿಯಾದಿಂದ ಪರ್ವತಾರೋಹಣದಲ್ಲಿ ಶ್ರೇಷ್ಠತೆಗಾಗಿ ಚಿನ್ನದ ಪದಕ (1984)[7]

ಪದ್ಮಶ್ರೀ ಪ್ರಶಸ್ತಿ (1984).[8]

ಉತ್ತರ ಪ್ರದೇಶ ಸರ್ಕಾರದ ಶಿಕ್ಷಣ ಇಲಾಖೆಯಿಂದ ಚಿನ್ನದ ಪದಕ (1985).

ಭಾರತ ಸರ್ಕಾರದಿಂದ ಅರ್ಜುನ ಪ್ರಶಸ್ತಿ (1986).

ಕೋಲ್ಕತ್ತಾ ಲೇಡೀಸ್ ಸ್ಟಡಿ ಗ್ರೂಪ್ ಪ್ರಶಸ್ತಿ (1986).

ಗಿನ್ನೆಸ್ ವಿಶ್ವ ದಾಖಲೆಗಳಲ್ಲಿ ಪಟ್ಟಿ ಮಾಡಲಾಗಿದೆ (1990).

ಭಾರತ ಸರ್ಕಾರದಿಂದ ರಾಷ್ಟ್ರೀಯ ಸಾಹಸ ಪ್ರಶಸ್ತಿ (1994).

ಉತ್ತರ ಪ್ರದೇಶ ಸರ್ಕಾರದಿಂದ ಯಶ್ ಭಾರತಿ ಪ್ರಶಸ್ತಿ (1995).

ಹೇಮಾವತಿ ನಂದನ್ ಬಹುಗುಣ ಗರ್ವಾಲ್ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಗೌರವ ಪದವಿ (1997).

ಸಂಸ್ಕೃತಿ ಸಚಿವಾಲಯ, ಮಧ್ಯಪ್ರದೇಶ ಸರ್ಕಾರದ ಮೊದಲ ವೀರಾಂಗಣ ಲಕ್ಷ್ಮೀಬಾಯಿ ರಾಷ್ಟ್ರೀಯ ಪ್ರಶಸ್ತಿ (2013-14) [9] [10]

ಸಂದರ್ಭ

ಆರಂಭಿಕ ಜೀವನ

[ಬದಲಾಯಿಸಿ]

ಬಚೇಂದ್ರಿ ಪಾಲ್‌ 1954ರಲ್ಲಿ, ಗಢವಾಲ್‌ನ ನಕೂರಿ ಎಂಬ ಗ್ರಾಮದಲ್ಲಿ, ಅತ್ಯಂತ ಸೀಮಿತ ಆರ್ಥಿಕ ಆದಾಯದ ಸ್ಥಿತಿಯ ಕುಟುಂಬದಲ್ಲಿ ಜನಿಸಿದರು.

ಅವರ ತಂದೆ ಕಿಶನ್‌ ಸಿಂಗ್ ಪಾಲ್‌ ಸಣ್ಣ ಪ್ರಮಾಣದ ವ್ಯಾಪಾರಿಯಾಗಿದ್ದರು. ಇವರು ಗೋಧಿ ಹಿಟ್ಟು ಮತ್ತು ಅಕ್ಕಿಯಂತಹ ದಿನಸಿ ಪದಾರ್ಥಗಳನ್ನು ಭಾರತದಿಂದ ಟಿಬೆಟ್‌ ಕಡೆಗೆ ಹೇಸರಗತ್ತೆ ಮತ್ತು ಮೇಕೆಗಳ ಮೇಲೆ ಸಾಗಿಸುತ್ತಿದ್ದರು. ಅಂತಿಮವಾಗಿ,ಅವರು ಉತ್ತರಕಾಶಿಯಲ್ಲಿ ನೆಲೆಸಿದರು. ಅಲ್ಲಿ ಅವರಿಗೆ ವಿವಾಹವಾಗಿ, ಐವರು ಮಕ್ಕಳಾದರು. ಇವರಲ್ಲಿ ಬಚೇಂದ್ರಿ ಮೂರನೆಯವರು. ಬಾಲ್ಯದಲ್ಲಿ ಬಚೇಂದ್ರಿ ಬಹಳ ಚುರುಕಿನಿಂದಿರುತ್ತಿದ್ದರು. ಅವರ ಶಾಲಾ ವ್ಯಾಸಂಗ ಹಾಗೂ ಕ್ರೀಡೆಗಳಲ್ಲಿ ಮುಂದಿದ್ದರು. ಆದರೂ ಕೆಲವೊಮ್ಮೆ ಸಣ್ಣ-ಪುಟ್ಟ ತರಲೆ ಕೃತ್ಯಗಳಿಗಾಗಿ ಒಂಟಿಯಾಗಿರುತ್ತಿದ್ದರಲ್ಲದೇ,ದಂಡನೆಗೆ ಗುರಿಯಾಗುತ್ತಿದ್ದರು.

ಬಚೇಂದ್ರಿ ತಮ್ಮ 12ನೆಯ ವಯಸ್ಸಿನಲ್ಲಿ ಮೊದಲ ಬಾರಿಗೆ ಪರ್ವತಾರೋಹಣ ಮಾಡಿದರು. ತಮ್ಮ ಸಹಪಾಠಿಗಳೊಡನೆ ಶಾಲೆಯಿಂದ ವಿಹಾರಪ್ರವಾಸ ಹೋಗಿದ್ದಾಗ, 13,123 ಅಡಿ ಎತ್ತರದ ಶಿಖರವನ್ನೇರಿದರು. ಆಗಲೇ ಕತ್ತಲು ಆವರಿಸಿದ್ದ ಕಾರಣ ಈ ಗುಂಪು ಅವರೋಹಣ ಮಾಡಲಾಗಲಿಲ್ಲ. ಆಹಾರ ಮತ್ತು ಹೊದಿಕೆಯಿಲ್ಲದೇ ಆ ರಾತ್ರಿ ಅವರು ಕಳೆಯಬೇಕಾಯಿತು. ಈ ಅನುಭವವು ಬಚೇಂದ್ರಿಯ ಮನದಲ್ಲಿ ಅಚ್ಚುಳಿದಿತ್ತು. ಸಾಹಸ ಮತ್ತು ಪರ್ವತಗಳ ಬಗ್ಗೆ ಒಲವನ್ನು ಹೆಚ್ಚಿಸಿತು. ಬಹಳಷ್ಟು ಅಡ್ಡಿ,ಇತಿಮಿತಿಗಳಿದ್ದರೂ ಬಚೇಂದ್ರಿ ಪಾಲ್‌ ಶಾಲಾ ವ್ಯಾಸಂಗ ಮುಂದುವರೆಸಿ ಸಂಪೂರ್ಣಗೊಳಿಸಿದರು. ಆ ಶಾಲೆಯ ಪ್ರಾಂಶುಪಾಲರ ಒತ್ತಾಯದ ಮೇರೆಗೆ, ಬಚೇಂದ್ರಿಯನ್ನು ಅವರ ಹೆತ್ತವರು ಕಾಲೇಜ್‌ ವ್ಯಾಸಂಗಕ್ಕೆ ಸೇರಿಸಿದರು. ವ್ಯಾಸಂಗ ಮುಗಿಸಿ ಪದವಿ ಪಡೆಯುವಲ್ಲಿ ಬಚೇಂದ್ರಿ ತಮ್ಮ ಗ್ರಾಮದ ಮೊದಲ ವ್ಯಕ್ತಿಯಾದರು. ತಮ್ಮ ಪದವಿ ವ್ಯಾಸಂಗ ನಡೆಸುತ್ತಿರುವಾಗಲೇ, ಬಂದೂಕು ಗುರಿ ಇಡುವ ಸ್ಪರ್ಧೆಯಲ್ಲಿ ಇತರೆ ಪುರುಷರು ಮತ್ತು ಮಹಿಳೆಯರನ್ನು ಹಿಂದಿಕ್ಕಿ ಅಗ್ರಸ್ಥಾನ ಗಳಿಸಿಕೊಂಡರು. ಆನಂತರ, ಅವರು ಕಲಾ ವಿಷಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಶಿಕ್ಷಣ ವಿಷಯದಲ್ಲಿ ಪದವಿ ಸಹ ಗಳಿಸಿದರು.

ಬಚೇಂದ್ರಿ ಕುಟುಂಬವು ಹಣಕಾಸಿನ ಸಮಸ್ಯೆ ಎದುರಿಸುತ್ತಿದ್ದ ಕಾರಣ ಅವರಿಗೆ ಆದಷ್ಟು ಬೇಗ ನೌಕರಿ ಪಡೆಯುವ ಅಗತ್ಯವಿತ್ತು. ಆದರೂ, ಅವರಿಗೆ ಲಭಿಸುತ್ತಿರುವ ನೌಕರಿಯ ಆಯ್ಕೆ,ಅವಕಾಶಗಳು ಅವರಿಗೆ ಸೂಕ್ತವೆನಿಸುತ್ತಿರಲಿಲ್ಲ. ತಾವು ವೃತ್ತಿಪರ ಪರ್ವತಾರೋಹಿಯಾಗುವ ಇಚ್ಛೆಯನ್ನು ತಮ್ಮ ಹೆತ್ತವರೊಂದಿಗೆ ಹಂಚಿಕೊಂಡರು. ಅವರ ಕುಟುಂಬಕ್ಕೆ ಇದು ಸುತರಾಂ ಹಿಡಿಸಲಿಲ್ಲ, ಏಕೆಂದರೆ, ಅವರು, ತಮ್ಮ ಬಂಧು-ಬಳಗ ಮತ್ತು ಸ್ಥಳೀಯ ಜನರ ಪ್ರಕಾರ ಮಹಿಳೆಗೆ ಶಿಕ್ಷಕಿಯಾಗುವುದೊಂದೇ ಸೂಕ್ತ ಎನ್ನುವ ಅಭಿಪ್ರಾಯವಿತ್ತೇ ವಿನಹಃ ಪರ್ವತಾರೋಹಣವಲ್ಲ.

ಆದರೂ ಪಟ್ಟು ಹಿಡಿದ ಬಚೇಂದ್ರಿ ತಮ್ಮ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಅವರು ನೆಹ್ರೂ ಪರ್ವತಾರೋಹಣ ಸಂಸ್ಥೆ (ಎನ್‌ಐಎಮ್‌) ಸೇರಿದರು. ಆಗ ಅತ್ಯುತ್ತಮ ವಿದ್ಯಾರ್ಥಿ ಎನಿಸಿ, ವಿಶ್ವದಲ್ಲಿಯೇ ಅತ್ಯುನ್ನತ ಗೌರಿಶಂಕರ (ಎವರೆಸ್ಟ್‌) ಶಿಖರ ಏರುವ ಕ್ಷಮತೆಯುಳ್ಳವರು ಎನಿಸಿಕೊಂಡರು. ಎನ್‌ಐಎಮ್‌ನಲ್ಲಿರುವಾಗಲೇ, 1982ರಲ್ಲಿ ಬಚೇಂದ್ರಿ ಪಾಲ್‌ (21,000 ಅಡಿ) ಎತ್ತರದ ಗಂಗೋತ್ರಿ 1 ಹಾಗೂ (19,091 ಅಡಿ) ಎತ್ತರದ ರುದುಗಾರಿಯಾ ಶಿಖರಗಳನ್ನು ಏರಿದರು. ಆ ಸಮಯದಲ್ಲಿ, ಮಹಿಳೆಯರಿಗೆ ಪರ್ವತಾರೋಹಣ ತರಬೇತಿ ನೀಡಲೆಂದು ಸ್ಥಾಪನೆಯಾದ ರಾಷ್ಟ್ರೀಯ ಸಾಹಸ ಶಾಲೆಯಲ್ಲಿ ಬೋಧಕ ತರಬೇತುದಾರರಾಗಿ ಬಚೇಂದ್ರಿ ಅವರಿಗೆ ಅವಕಾಶ ಲಭಿಸಿತು.

ಆರೋಹಣ

[ಬದಲಾಯಿಸಿ]

ಆಗ 1984ರಲ್ಲಿ, "ಎವರೆಸ್ಟ್‌'84", ಎನ್ನಲಾದ, ಎವರೆಸ್ಟ್‌ ಶಿಖರದ ನಾಲ್ಕನೆಯ ಆರೋಹಣವನ್ನು ಭಾರತವು ನಿಗದಿಪಡಿಸಿತ್ತು. ಆರು ಮಂದಿ ಭಾರತೀಯ ಮಹಿಳೆಯರು ಹಾಗೂ ಹನ್ನೊಂದು ಮಂದಿ ಪುರುಷರ ಉತ್ಕೃಷ್ಟ ತಂಡದ ಸದಸ್ಯರಲ್ಲಿ ಬಚೇಂದ್ರಿ ಒಬ್ಬರಾಗಿ ಆಯ್ಕೆಯಾದರು. ಈ ತಂಡವು ಎವರೆಸ್ಟ್‌ ಶಿಖರದ (ನೇಪಾಳಿ ಭಾಷೆಯಲ್ಲಿ ಸಾಗರಮಾತಾ ಎನ್ನಲಾಗಿದೆ) ಆರೋಹಣ ಯತ್ನಿಸಲು ವಿಶೇಷ ಅವಕಾಶ ಪಡೆದಿತ್ತು. ಈ ಆಯ್ಕೆಯಿಂದಾಗಿ ಬಚೇಂದ್ರಿಗೆ ಅಪಾರ ಖುಷಿ,ಅತ್ಯಾನಂದ ಮತ್ತು ರೋಮಾಂಚನವಾಯಿತು. ಅದೇ 1984ರ ಮಾರ್ಚ್‌ ತಿಂಗಳಲ್ಲಿ ಈ ತಂಡ ನೇಪಾಳದ ರಾಜಧಾನಿ ಕಾಠ್ಮಾಂಡು ನಗರದೆಡೆಗೆ ಚಲಿಸಿತು. ಇಲ್ಲಿಂದ ತಂಡವು ಮುಂದೆ ಸಾಗಿತು. ಎವರೆಸ್ಟ್‌ ಶಿಖರವನ್ನು ಮೊದಲ ಬಾರಿಗೆ ಕಣ್ಣಾರೆ ಕಂಡ ಬಚೇಂದ್ರಿ ಹೀಗೆ ಸ್ಮರಿಸಿಕೊಂಡರು: ಬೆಟ್ಟದವಾಸಿಗಳಾದ ನಾವು ಪರ್ವತಗಳನ್ನು ಎಂದಿಗೂ ಪೂಜಿಸುತ್ತಿರುವೆವು... ಆದ್ದರಿಂದ, ಮೊದಲ ಬಾರಿಗೆ ಎವರೆಸ್ಟ್‌ ಶಿಖರವನ್ನು ನೋಡಿದ ನನಗೆ ಬಹಳಷ್ಟು ಭಾವುಕತೆ- ಭಕ್ತಿಯುಂಟಾದವು.

ಅದೇ 1984ರ ಮೇ ತಿಂಗಳಲ್ಲಿ ತಂಡವು ತನ್ನ ಆರೋಹಣ ಪ್ರಾರಂಭಿಸಿತು. 1984ರ ಮೇ 15-16ರ ರಾತ್ರಿಯಂದು, ಸುಮಾರು 24,000 ಅಡಿ ಎತ್ತರದಲ್ಲಿ ಕ್ಯಾಂಪ್‌ III ರಲ್ಲಿನ ಶಿಬಿರಗಳೊಂದರಲ್ಲಿ ಬಚೇಂದ್ರಿ ಮತ್ತು ಅವರ ಸಹಚರರು ವಿಶ್ರಮಿಸುತ್ತಿದ್ದರು. ಸುಮಾರು 00:30 ಸಮಯದಲ್ಲಿ, (ಭಾರತೀಯ ಸಮಯ) ಸುಮಾರು 24,000 ಅಡಿ ಎತ್ತರದಲ್ಲಿ, ಬಚೇಂದ್ರಿಗೆ ಥಟ್ಟನೆ ಎಚ್ಚರವಾಯಿತು. ಅವರಿಗೆ ಏನೋ ವಸ್ತು ಜೋರಾಗಿ ಹೊಡೆದಂತಿತ್ತು. ಅವರನ್ನು ಕಿವುಡುಗೊಳಿಸುವಷ್ಟು ಜೋರಾದ ಸದ್ದು ಸಹ ಕೇಳಿಸಿತು. ಇದೇ ವೇಳೆ ಅವರಿಗೆ ಬಹಳ ತಣ್ಣನೆಯ ವಸ್ತು ಅವರನ್ನು ಸುತ್ತುವರೆಯುವ ಅನುಭವವುಂಟಾಯಿತು. ಕ್ಯಾಂಪ್‌ III ರ ಮೇಲಿರುವ, ಲೊತ್ಸೆ ಹಿಮನದಿಯಲ್ಲಿರುವ ವಿಶ್ವದ ನಾಲ್ಕನೆಯ ದೊಡ್ಡ ಹಿಮಗೋಪುರವೆನಿಸಿದ ಭಾಗ ಕೆಳಗೆ ಜಾರಿ, ಶಿಬಿರಗಳ ಮೇಲೆ ಬಿದ್ದು, ಅಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿತ್ತು. ಅವರ ಶಿಬಿರದಲ್ಲಿ ಮಲಗಿದ್ದವರು ತಮ್ಮ ಚಾಕುವಿನಿಂದ ಈ ಹಿಮಾಚ್ಛಿದತವನ್ನು ಕೊಯ್ದು ಹೊರಬರಲು ಸಾಧ್ಯವಾಯಿತು. ಆನಂತರ, ಈ ಹಿಮವನ್ನು ಅಗೆದು ಅಲ್ಲಿಂದ ಪಾರಾಗಲು ಅವರು ಬಚೇಂದ್ರಿಗೆ ಸಹಾಯ ಮಾಡಿದರು. ಆ ತಂಡದ ಹಲವು ಸದಸ್ಯರು ಗಾಯಗೊಂಡರು. ಅವರಿಗೆ ಆಘಾತವಾಗಿ, ಮೂಲ ಶಿಬಿರಕ್ಕೆ (ಬೇಸ್‌ ಕ್ಯಾಂಪ್‌) ತ್ವರಿತವಾಗಿ ವಾಪಸಾದರು. ತಲೆಗೆ ಗಾಯವಾಗಿದ್ದರೂ, ಬಚೇಂದ್ರಿ ಶಿಖರಾರೋಹಣ ಮುಂದುವರೆಸಲು ಇಚ್ಛಿಸಿದರು.

ಆಗ 1984ರ ಮೇ 22ರಂದು, ಇನ್ನಷ್ಟು ಮಂದಿ ಪರ್ವತಾರೋಹಕರು ಎವರೆಸ್ಟ್‌ ಶಿಖರವನ್ನೇರಲು ಬಚೇಂದ್ರಿ ತಂಡದೊಂದಿಗೆ ಸೇರ್ಪಡೆಯಾದರು. ಇದರೊಂದಿಗೆ, ಈ ಗುಂಪಿನಲ್ಲಿ ಬಚೇಂದ್ರಿ ಏಕೈಕ ಮಹಿಳೆಯಾಗಿದ್ದರು. ಸೊನ್ನೆಗಿಂತಲೂ ಮುವ್ವತ್ತರಿಂದ ನಲವತ್ತು ಡಿಗ್ರಿ ಸೆಲ್ಸಿಯಸ್‌ ಕಡಿಮೆಯ, ಅತ್ಯಲ್ಪ ಉಷ್ಣಾಂಶ, ತಾಸಿಗೆ 100 ಕಿಲೋಮೀಟರ್‌ ವೇಗದಲ್ಲಿ ಬೀಸುವ ಕೊರೆಯುವ ತಣ್ಣಗಿನ ಗಾಳಿ - ಇಂತಹ ಸ್ಥಿತಿಯಲ್ಲಿ ಈ ಗುಂಪು ಹಿಮಗಡ್ಡೆಯ ಚಪ್ಪಡಿಗೋಡೆಗಳನ್ನು ಏರುತ್ತ, ತಂಡದ ಸದಸ್ಯರು ಪರ್ವತಾರೋಹಣ ಮುಂದುವರೆಸಿದರು. 1984ರ ಮೇ 23ರಂದು, ಬಚೇಂದ್ರಿ ಎವರೆಸ್ಟ್‌ ಶಿಖರವನ್ನು ಏರಿದರು. ಭಾರತೀಯ ಸಮಯ 1300ಕ್ಕೆ, ಅವರು ಇನ್ನೊಬ್ಬ ಆರೋಹಕರೊಂದಿಗೆ ಶಿಖರದ (29,084 ಅಡಿ) ಮೇಲೆ ನಿಂತಿದ್ದರು. ಈ ಶಿಖರವು ಇಬ್ಬರು ನಿಲ್ಲಲಾಗದಷ್ಟು ಚಿಕ್ಕದಾಗಿತ್ತು. ಅದರ ಸುತ್ತಲೂ ಸಾವಿರಾರು ಅಡಿಗಳಷ್ಟು ಕಡಿದಾದ ಇಳಿಜಾರಿತ್ತು. ಆದ್ದರಿಂದ, ಮೊದಲಿಗೆ ಅವರು ಹಿಮದಲ್ಲಿ ತಮ್ಮ ಕೊಡಲಿಗಳನ್ನು ಗಟ್ಟಿಯಾಗಿ ಸಿಕ್ಕಿಸಿ ಅವರನ್ನು ಸ್ವತಃ ಅದಕ್ಕೆ ಸುಭದ್ರಗೊಳಿಸಿಕೊಂಡು ನಂತರ ಶಿಖರದ ಮೇಲೆ ನಿಲ್ಲಲು ಯತ್ನಿಸಿದರು.

ಬಚೇಂದ್ರಿ ತಮ್ಮ ಮೊಣಕಾಲ ಮೇಲೆ ಕುಳಿತು, ಧನ್ಯತಾ ಭಾವ ಸೂಚಿಸಲು ಹಿಂದೂ ಪದ್ಧತಿಯಂತೆ ತಮ್ಮ ಮುಡಿಯನ್ನು ಶಿಖರ ಶೃಂಗಕ್ಕೆ ಮುಟ್ಟಿಸಿದರು. ನಂತರ ದುರ್ಗಾದೇವಿಯ ಚಿತ್ರ ಹಾಗೂ ಹನುಮಾನ್ ಚಾಲೀಸಾ ದ (ಹನುಮಂತ ದೇವರ ನಲವತ್ತು ಶ್ಲೋಕಗಳ ಪವಿತ್ರ ಕಿರುಹೊತ್ತಿಗೆ) ಪ್ರತಿಯೊಂದನ್ನು ಹೊರತೆಗೆದು ಹಿಮದಲ್ಲಿರಿಸಿದರು. 43 ನಿಮಿಷಗಳ ಕಾಲ ಅವರು ಶೃಗಭಾಗದ ಶಿಖರದಲ್ಲೇ ಇದ್ದು, ಅಲ್ಲಿ ಕೆಲವು ಛಾಯಾಚಿತ್ರಗಳನ್ನು ಸೆರೆಹಿಡಿದರು. ಎವರೆಸ್ಟ್‌ ಶಿಖರವನ್ನೇರಲು ಬಚೇಂದ್ರಿ ಮೊದಲ ಭಾರತೀಯ ಮಹಿಳೆ ಹಾಗೂ ವಿಶ್ವದಲ್ಲಿ ಐದನೆಯ ಮಹಿಳೆಯಾದರು.

ಆನಂತರ ಅವರು ಶಿಖರ ಅವರೋಹಣ ಮಾಡಿ ಕ್ಷೇಮವಾಗಿ ಮೂಲ ಶಿಬಿರ ತಲುಪಿದರು. ತಮ್ಮ ಈ ಅದ್ಭುತ ಸಾಧನೆಯಿಂದಾಗಿ ಬಚೇಂದ್ರಿಗೆ ವಿಶ್ವದೆಲ್ಲೆಡೆಯಿಂದ ಹಲವು ಅಭಿನಂದನಾ ಸಂದೇಶಗಳ ಸುರಿಮಳೆಯಾಯಿತು. ಭಾರತದಲ್ಲಿ, ಅಂದಿನ ರಾಷ್ಟ್ರಪತಿ ಮತ್ತು ಪ್ರಧಾನಿ, ಹಾಗೂ ಪ್ರಮುಖ ಉದ್ಯಮಿ ಹಾಗೂ ಟಾಟಾ ಉದ್ದಿಮೆಯ ಅಂದಿನ ಮುಖ್ಯಸ್ಥ ಜೆ ಆರ್‌ ಡಿ ಟಾಟಾ ಬಚೇಂದ್ರಿಯನ್ನು ಮುಖತಃ ಭೇಟಿ ಮಾಡಿ ಅಭಿನಂದಿಸಿದರು.

ನಂತರದ ಜೀವನ

[ಬದಲಾಯಿಸಿ]

ವಿಶ್ವದಲ್ಲಿ ಅತ್ಯುನ್ನತ ಶಿಖರವನ್ನು ಏರಿದ ನಂತರ ಬಚೇಂದ್ರಿ ಸಂಬಂಧಿತ ಚಟುವಟಿಕೆಗಳಲ್ಲಿ ಸಕ್ರಿಯರಾಗಿ ಮುಂದುವರೆದರು. ನಂತರ 1985ರಲ್ಲಿ, ಕೇವಲ ಮಹಿಳೆಯರಿದ್ದ ಭಾರತ-ನೇಪಾಳ ಪರ್ವತಾರೋಹಣ ತಂಡದ ನೇತೃತ್ವ ವಹಿಸಿ ಮುಖ್ಯಸ್ಥೆಯಾದರು. ಈ ಪರ್ವತಾರೋಹಣ ಸಾಹಸವು ಏಳು ವಿಶ್ವ ದಾಖಲೆಗಳನ್ನು ಸೃಷ್ಟಿಸಿ, ಭಾರತೀಯ ಪರ್ವತಾರೋಹಣ ಕ್ಷೇತ್ರಗಳಲ್ಲಿ ನೂತನ ಮಾನದಂಡಗಳನ್ನು ಕಲ್ಪಿಸಿತು. ಒಂಬತ್ತು ವರ್ಷಗಳ ನಂತರ, 1994ರಲ್ಲಿ, ಸಾಹಸ ದೋಣಿಯಲ್ಲಿ (ರಾಫ್ಟ್‌) ಹಾಯುವ ಮಹಿಳಾ ತಂಡದ ಮುಂಚೂಣಿಯಲ್ಲಿದ್ದರು. ಈ ತಂಡವು ಗಂಗಾ ನದಿಯುದ್ದಕ್ಕೂ ಸಾಗಿ, ಹರಿದ್ವಾರದಿಂದ ಕೊಲ್ಕತ್ತಾ ವರೆಗೆ 2,500 ಕಿಲೋಮೀಟರ್‌ ದೂರ ಕ್ರಮಿಸಿತು.

ಪ್ರಸ್ತುತ, ಅವರು ಟಾಟಾ ಉದ್ದಿಮೆ ಅಂಗಸಂಸ್ಥೆಯಾದ ಟಾಟಾ ಸ್ಟೀಲ್‌ ಸಾಹಸಕ್ರೀಡೆ ಸಂಸ್ಥೆಯಲ್ಲಿ ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಟಾಟಾ ಸ್ಟೀಲ್‌ ಉದ್ದಿಮೆ ವ್ಯವಸ್ಥಾಪಕ ತಂಡಗಳಿಗೆ ಕಾಲ್ನಡಿಗೆ ಪ್ರಯಾಣ (ಟ್ರೆಕಿಂಗ್‌) ಮತ್ತು ಪರ್ವತಾರೋಹಣ, ಹುಟ್ಟು-ದೋಣಿ ಮತ್ತು ತೆಪ್ಪದೋಣಿ ಪ್ರಯಾಣ, ಶಿಬಿರಗಳಲ್ಲಿ ಸಮಯ ಕಳೆದು, ಪ್ರತಿಕೂಲಕರ ಸ್ಥಿತಿಗಳಲ್ಲಿ ಬದುಕುಳಿಯುವ ಕೌಶಲಗಳಂತಹ ಸಾಹಸ ಚಟುವಟಿಕೆಗಳಲ್ಲಿ ತರಬೇತಿ ನೀಡುವುದು ಅವರ ಕಾರ್ಯಚಟಿವಟಿಕೆಯಾಗಿದೆ.

ಹೆಚ್ಚಿನ ಓದಿಗಾಗಿ

[ಬದಲಾಯಿಸಿ]
  • ಇಂಡಿಯಾಸ್‌ 50 ಮೋಸ್ಟ್‌ ಇಲ್ಲುಸ್ಟ್ರಸ್‌ ವಿಮೆನ್‌ (ISBN 81-88086-19-3) ಲೇಖಕರು: ಇಂದ್ರ ಗುಪ್ತ

ಇವನ್ನೂ ಗಮನಿಸಿ

[ಬದಲಾಯಿಸಿ]
  • ಭಾರತೀಯ ಮಹಿಳಾ ಅಥ್ಲೀಟ್‌ಗಳ ಪಟ್ಟಿ

ಉಲ್ಲೇಖಗಳು

[ಬದಲಾಯಿಸಿ]

ಬಾಹ್ಯ ಕೊಂಡಿಗಳು

[ಬದಲಾಯಿಸಿ]