ವೆಂಕಟ ರಂಗೋ ಕಟ್ಟಿ
ವೆಂಕಟ ರಂಗೋ ಕಟ್ಟಿ (1833-1909). ಸಮಾಜಸುಧಾರಕ, ಪತ್ರಿಕೋದ್ಯಮಿ ಹಾಗೂ ಶಿಕ್ಷಕರು.
ಇವರು ವಿಜಾಪುರ ಜಿಲ್ಲೆಯ ಮುಧೋಳದ ಕಟ್ಟಿ ಎಂಬ ವೈದಿಕ ಮನೆತನದಲ್ಲಿ ೧೮೩೩ರಲ್ಲಿ ಹುಟ್ಟಿದರು. ವೈದಿಕ ವೃತ್ತಿಯಲ್ಲಿ ಅವರಿಗೆ ಆಸಕ್ತಿ ಹುಟ್ಟದೆ ಇಂಗ್ಲೀಷ್ ಮತ್ತು ಹೊಸತನ್ನು ಕಲಿಯುವ ಆಸೆಯಿಂದ ಪುಣೆಗೆ ಹೋಗಿ ಅಲ್ಲಿ ವಿದ್ಯಾಭ್ಯಾಸ ಮುಗಿಸಿ ಅಲ್ಲಿಯೇ ಟ್ರ್ರೇನಿಂಗ್ ಕಾಲೇಜಿನಲ್ಲಿ ಸುಮಾರು 10 ವರ್ಷಗಳ ಕಾಲ ಸಹಉಪಾಧ್ಯಾಯರಾಗಿದ್ದರು. ಮರಾಠಿ ಜನರ ಮಾತೃಭಾಷಾಪ್ರೇಮವನ್ನು ನೋಡಿ ಇವರ ಕನ್ನಡಪ್ರೇಮವೂ ಎಚ್ಚತ್ತಿತು. 'ಅರೇಬಿಯನ್ ನೈಟ್ಸ್' ಅನ್ನು ಕನ್ನಡಕ್ಕೆ ಭಾಷಾಂತರಿಸಿದರು. ಹೊನ್ನಾವರದ ಹೈಸ್ಕೂಲಿಗೆ ವರ್ಗವಾಗಿ ಬಂದನಂತರ ಹಳಗನ್ನಡ ಸಾಹಿತ್ಯವನ್ನು ಅಭ್ಯಸಿಸಿದರು. ಆಮೇಲೆ ಬೆಳಗಾವಿಗೆ ವರ್ಗವಾಗಿನಾರ್ಮಲ್ ಸ್ಕೂಲಿನಲ್ಲಿ ಅಧ್ಯಾಪಕರಾಗಿ ಕೆಲಸ ಮಾಡಿದರು. , ಗಂಗಾಧರ ಮಡಿವಾಳೇಶ್ವರ ತುರಮರಿ ಮತ್ತು ಡೆಪ್ಯೂಟಿ ಚೆನ್ನಬಸಪ್ಪನವರ ಸಂಪರ್ಕಕ್ಕೆ ಬಂದರು. ಆಗ ವಿದ್ಯಾ ಇಲಾಖೆಯ ದಕ್ಷಿಣ ಭಾಗದ ಭಾಷಾಂತರಕಾರರೆಂದು ನೇಮಕವಾದರು. ಅವರ ಮಾರ್ಗದರ್ಶನದಲ್ಲಿ ಕನ್ನಡ ಪಠ್ಯಪುಸ್ತಕಗಳು ತಯಾರಾಗತೊಡಗಿದವು. ನಂತರ ಧಾರವಾಡಕ್ಕೆ ಬಂದು ಶಿಕ್ಷಕರ ಟ್ರೇನಿಂಗ್ ಕಾಲೇಜಿನಲ್ಲಿ ಉಪಮುಖ್ಯಪ್ರಾಧ್ಯಾಪಕರಾಗಿ ನೇಮಕವಾದರು. ೧೮೭೬ರಲ್ಲಿ ಕಾಲೇಜಿನ ಪ್ರಾಚಾರ್ಯರಾದರು. ೧೮೯೦ರಲ್ಲಿ ನಿವೃತ್ತಿ ಹೊಂದಿದರು.
ಇವರು ಶಾಲಾ ವಿದ್ಯಾರ್ಥಿಗಳಿಗೆಂದು ಬರೆದ ಕನ್ನಡ ಕ್ರಮಿಕ ಪುಸ್ತಕಗಳು ತುಂಬ ಜನಪ್ರಿಯವಾಗಿದ್ದವು.
ಅವರು ಹದಿನೆಂಟು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಹೆಚ್ಚಿನವು ಶಿಕ್ಷಣಕ್ಕೆ ಸಂಬಂಧಿಸಿದ ಪಠ್ಯಪುಸ್ತಕಗಳು.'ಕನ್ನಡ ಲಘುವ್ಯಾಕರಣ' , 'ಕರ್ನಾಟಕದ ವರ್ಣನೆಯೂ ಇತಿಹಾಸವೂ' ಗಮನಿಸತಕ್ಕಂಥವು. ಅವರ 'ಮುಂಬಯಿ ಕರ್ನಾಟಕದ ಗೆಝೆಟ್ಟು' ಭಾಷಾಂತರವಾಗಿದ್ದರೂ ಅಂದಿನ ಮುಂಬಯಿಕರ್ನಾಟಕದ ನಾಲ್ಕು ಜಿಲ್ಲೆಗಳ ಐತಿಹಾಸಿಕ , ಸಾಂಸ್ಕೃತಿಕ ಹಾಗೂ ಸಾಮಾಜಿಕ ಜೀವನದ ಪರಿಪೂರ್ಣ ಚಿತ್ರವನ್ನು ಕೊಡುವ ಬಹುಮುಖ್ಯ ಕೃತಿ. 'ವಿಧವೆಗಳ ಮುಂಡನ ವಿಚಾರವು' ವಿಧವೆಯರ ಕೂದಲು ತೆಗೆಯುವ ಕ್ರೂರ ಸಾಮಾಜಿಕ ಪದ್ಧತಿಯನ್ನು ವಿರೋಧಿಸಿ 'ವಿಧವೆಯರ ದುಃಖಪರಿಮಾರ್ಜನಾರ್ಥವಾಗಿ' ಬರೆದ ಪುಸ್ತಕ. 'ಆರು ಬೆರಳಿನ ಕುರುಹು ಅಥವಾ ಸುಧಾರಿಸತಕ್ಕ ಆಚರಣೆಗಳು' ಎಂಬ ನಾಟಕವನ್ನೂ ಬರೆದರು.
ಇವರು ಬರೆದ ಇತರ ಮುಖ್ಯ ಕೃತಿಗಳಿವು: ಜ್ಯೋತಿಷಶಾಸ್ತ್ರ, ಪದಾರ್ಥ ವಿಜ್ಞಾನ ಶಾಸ್ತ್ರ, ವನಸ್ಪತಿಶಾಸ್ತ್ರ, ಖನಿಜಶಾಸ್ತ್ರ, ಲಘುವ್ಯಾಕರಣ, ಕರ್ನಾಟಕದ ವರ್ಣನೆಯೂ ಇತಿಹಾಸವೂ,
ಅವರು ಪತ್ರಿಕಾರಂಗದಲ್ಲೂ ದುಡಿದಿದ್ದಾರೆ. ಶಿಕ್ಷಣರಂಗಕ್ಕೆ ಮೀಸಲಾದ 'ಶಾಲಾ ಪತ್ರಿಕೆ'ಹೊರಬರಲು ಕಾರಣರಾದರು. 'ಶೋಧಕ ' ತಿಂಗಳಪತ್ರಿಕೆ ಪ್ರಾರಂಭಿಸಿದರು. 'ಧಾರವಾಡವೃತ್ತ' ಪತ್ರಿಕೆಗೆ ಪ್ರೋತ್ಸಾಹ ಕೊಟ್ಟರು. ಧಾರವಾಡದಲ್ಲಿ 'ಜ್ಞಾನವರ್ಧಕ ಮುದ್ರಣಾಲಯ' ಸ್ಥಾಪಿಸಿದರು. 'ಲೋಕಶಿಕ್ಷಣ' ಮತ್ತು 'ಚಂದ್ರೋದಯ' ಪತ್ರಿಕೆಗಳನ್ನು ನಡೆಸಿದರು.
ನಿವೃತ್ತರಾದ ಮೇಲೆ ಆಯುರ್ವೇದ ಅಭ್ಯಾಸ ಮಾಡಿದರು , ಅನೇಕ ಪ್ರಯೋಗಗಳನ್ನು ಮಾಡಿದರು. ಸ್ವದೇಶಿ ವಸ್ತುಗಳನ್ನು ತಯಾರು ಮಾಡಿದರು.
ಧಾರವಾಡದ ವಿದ್ಯಾವರ್ಧಕ ಸಂಘದ ಸ್ಥಾಪನೆಗಾಗಿ ದುಡಿದು ಅದರ ಉಪಾಧ್ಯಕ್ಷ, ಅಧ್ಯಕ್ಷರಾಗಿ ಅನೇಕ ಕೆಲಸಗಳನ್ನು ಮಾಡಿದರು.
ಇವರು ಶಾಲಾಪತ್ರಿಕೆ ಮತ್ತು ಕರ್ನಾಟಕ ಪತ್ರ ಎಂಬ ಎರಡು ಪತ್ರಿಕೆಗಳನ್ನು ಸ್ವಲ್ಪಕಾಲ ಪ್ರಕಟಿಸಿದರು. ಇವರು 1909 ಮೇ 1ರಂದು ನಿಧನರಾದರು.