ಗೊಡಚಿನಮಲ್ಕಿ ಜಲಪಾತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗೊಡಚಿನಮಲ್ಕಿ ಜಲಪಾತ ಗೋಕಾಕ ಪಟ್ಟಣದಿಂದ ಸುಮಾರು ೧೯ ಕಿ.ಮೀ ದೂರದಲ್ಲಿರುವ ಒಂದು ಜಲಪಾತ. ಬೆಳಗಾವಿಯಿಂದ 40 ಕಿ.ಮೀ. ದೂರದಲ್ಲಿದೆ. ಮಾರ್ಕಂಡೇಯ ನದಿಯಿಂದ ಉಂಟಾಗಿರುವ ಇದಕ್ಕೆ ಮಾರ್ಕಂಡೇಯ ಜಲಪಾತ ಎಂದೂ ಕರೆಯುತ್ತಾರೆ. ಇಲ್ಲಿ ಜಲಪಾತದ ಎರಡು ಹಂತಗಳಿವೆ. ಮಾರ್ಕಂಡೇಯ ನದಿಯು ಮೊದಲು ೨೫ ಮೀಟರ್ ಎತ್ತರದಿಂದ ಧುಮುಕಿ ಅನಂತರ ಹಂತದಲ್ಲಿ ೧೮ ಮೀಟರ್ ಎತ್ತರದಿಂದ ಧುಮುಕುತ್ತದೆ. ಈ ಜಲಪಾತವು ಎತ್ತರಕ್ಕಿಂತ ಹೆಚ್ಚು ಅಗಲವಾಗಿದ್ದು ಬಂಡೆಗಲ್ಲುಗಳ ಮೇಲೆ ಹಂತ ಹಂತವಾಗಿ ಜಾರಿದಂತೆ ಇಳಿಯುತ್ತದೆ. ಅಲ್ಲಿಂದ ಮುಂದೆ ಮಾರ್ಕಂಡೇಯ ನದಿಯು ಘೋಡ್ಗೇರಿಯಲ್ಲಿ ಘಟಪ್ರಭಾ ನದಿಯನ್ನು ಸೇರುತ್ತದೆ. ಜೂನ್‌ನಿಂದ ಅಕ್ಟೋಬರ್‌ವರೆಗೆ ಈ ಸ್ಥಳ ನೋಡಲು ಪ್ರಸಕ್ತ ಸಮಯ.

ಜಲಪಾತದ ದಾರಿ[ಬದಲಾಯಿಸಿ]

ಗೋಕಾಕ ಪಟ್ಟಣದಿಂದ ಗೋಕಾಕ ಜಲಪಾತದ ರಸ್ತೆಯಲ್ಲಿ ೬ ಕಿ.ಮೀ ದೂರ ಕ್ರಮಿಸಿದರೆ ಗೋಕಾಕ ಜಲಪಾತ ಸಿಗುತ್ತದೆ. ಅಲ್ಲಿಂದ ಮುಂದೆ ಕೊಣ್ಣೂರು ರಸ್ತೆಯಲ್ಲಿ ಮುಂದುವರೆದು ಪಾಶ್ಚಾಪುರ ರಸ್ತೆಯಲ್ಲಿ ಎಡಕ್ಕೆ ತಿರುಗಿ ಸುಮಾರು ೯ ಕಿ.ಮಿ. ಹೋದರೆ 'ಗೊಡಚಿನಮಲ್ಕಿ' ಎಂಬ ಗ್ರಾಮ ಸಿಗುತ್ತದೆ. ಆ ಗ್ರಾಮವನ್ನು ದಾಟಿದ ನಂತರ ಜಲಪಾತದ ವಾಹನ ನಿಲುಗಡೆ ಪ್ರದೇಶವನ್ನು ಸೇರಬಹುದು. ಜಲಪಾತಕ್ಕೆ ಹೋಗುವ ಕಾಲ್ನಡಿಯ ದಾರಿಯು ಇಲ್ಲಿಂದ ಶುರುವಾಗುತ್ತದೆ. ಕಚ್ಚಾ ಕಾಲುಹಾದಿಯಲ್ಲಿ ಸುಮಾರು ಒಂದೂವರೆ ಕಿಲೋಮೀಟರ್ ದೂರವನ್ನು ಕ್ರಮಿಸಿದರೆ ಜಲಪಾತವನ್ನು ತಲುಪಬಹುದು. ಯೋಗಿಕೊಳ್ಳದ ಬಳಿ ಇರುವ ನಿರ್ವಾಣೇಶ್ವರ ಮಠದಿಂದಲೂ ಕೂಡ ಕಾಲ್ನಡಿಗೆಯಲ್ಲಿ ಜಲಪಾತವನ್ನು ತಲುಪಬಹುದು.

ಸಾರಿಗೆ[ಬದಲಾಯಿಸಿ]

ಗೋಕಾಕದಿಂದ ಮೇಲ್ಮಟ್ಟಿ ಮಾರ್ಗವಾಗಿ ಪಾಶ್ಚಾಪುರ ಹೋಗುವ ಬಸ್ಸುಗಳು ಗೊಡಚಿನಮಲ್ಕಿ ಮೂಲಕ ಹಾದುಹೋಗುತ್ತವೆ. ಸಾರಿಗೆ ಸಂಸ್ಥೆ ಹಾಗೂ ಖಾಸಗಿ ವಾಹನಗಳ ಅನುಕೂಲ ಇದೆ. ಗೋಕಾಕದಿಂದ ಬಾಡಿಗೆ ವಾಹನಗಳೂ ದೊರೆಯುತ್ತವೆ. ಗೊಡಚಿನಮಲ್ಕಿಯಿಂದ ೧೫ ಕಿ.ಮಿ ದೂರದಲ್ಲಿರುವ ಗೋಕಾಕ ರಸ್ತೆ ಸ್ಟೇಶನ್ನಿಗೆ ರೈಲಿನ ಮೂಲಕ ಬಂದರೆ ಅಲ್ಲಿಂದ ಬಸ್ ಸೌಕರ್ಯ ಪಡೆಯಬಹುದು.

ಹೊರಕೊಂಡಿಗಳು[ಬದಲಾಯಿಸಿ]