ಕರ್ನಾಟಕದ ದೇವಾಲಯಗಳು
ಕರ್ನಾಟಕದ ದೇವಾಲಯಗಳು www.ourtemples.in ನಲ್ಲಿ ಪ್ರಕಟವಾಗಿರುವ ಲೇಖನ. www.ourtemples.in ವೆಬ್ ಸೈಟ್ ನಲ್ಲಿ ಕರ್ನಾಟಕದ ೨೫೦ಕ್ಕೂ ಹೆಚ್ಚು ದೇವಾಲಯಗಳ ಸಚಿತ್ರ ಮಾಹಿತಿ ಇದೆ.
ಧರ್ಮವನ್ನು ತೊರೆದ ಮಾನವ ನೀರನ್ನು ತೊರೆದ ಮೀನಿನಂತೆ ಎಂದರು ಸ್ವಾಮಿ ವಿವೇಕಾನಂದರು. ನಮ್ಮೆಲ್ಲರಿಗೂ ಒಂದೊಂದು ಧರ್ಮವಿದೆ. ನಮ್ಮದೇ ಆದ ಆಚಾರ ವಿಚಾರಗಳಿವೆ. ಹಿಂದೂಗಳಿಗೆ ದೇವಾಲಯಗಳು ಪವಿತ್ರ ತಾಣಗಳಾದರೆ, ಮುಸ್ಲಿಂ ಬಾಂಧವರಿಗೆ ಮಸೀದಿಗಳು ಪ್ರಾರ್ಥನಾ ಸ್ಥಳಗಳಾಗಿವೆ. ಇನ್ನು ಕ್ರೈಸ್ತರು ಚರ್ಚ್ ಗಳಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ. ಸಿಖ್ಖರು ಗುರುದ್ವಾರದಲ್ಲಿ, ಜೈನರು ಬಸದಿಗಳಲ್ಲಿ, ಬೌದ್ಧರು ಬೌದ್ಧವಿಹಾರಗಳಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ. ಆಯಾ ಧರ್ಮಕ್ಕೆ ಅನುಗುಣವಾಗಿ, ಅವರದೇ ಆದ ರೀತಿಯಲ್ಲಿ ಎಲ್ಲರೂ ಪೂಜಿಸುವುದು ಭಗವಂತನನ್ನೇ. ಹೀಗೆ ಭಗವಂತನಿಗೆ ಶರಣು ಹೋದಾಗ ಎಲ್ಲರ ಮನಸ್ಸಿನಲ್ಲೂ ಒಂದು ತೃಪ್ತಿ, ಧನ್ಯತಾಭಾವ ಮೂಡುತ್ತದೆ. ಮನಸ್ಸು ನಿರ್ಮಲವಾಗುತ್ತದೆ. ಮುಂದಿನ ಬದುಕಿಗೆ ನವ ಚೈತನ್ಯ ನೀಡುತ್ತದೆ. ಈ ಹಿನ್ನೆಲೆಯಲ್ಲೇ ದೇವಾಲಯ, ಬಸದಿ, ಮಸೀದಿ, ಚರ್ಚ್, ಸ್ತೂಪಗಳನ್ನು ನಿರ್ಮಿಸಲಾಗಿದೆ.
ದೇವನೊಬ್ಬ ನಾಮ ಹಲವು ಎಂಬ ಮಾತಿದೆ. ದೇವರು ಒಬ್ಬನೇ ಆದ ಮೇಲೆ ಊರತುಂಬ ಗುಡಿಗಳೇಕೆ ಎಂದು ಪ್ರಶ್ನಿಸುವವರೂ ಇದ್ದಾರೆ. ಇದಕ್ಕೆ ಕಾರಣವೂ ಇದೆ. ನಾವು ಎಷ್ಟೇ ಆಧುನಿಕರಾದರೂ, ದೇವಾಲಯಗಳ ಬಳಿ ಬಂದಾಗ ನಮಗರಿವಿಲ್ಲದೆ ದೇವರಿಗೊಂದು ನಮಸ್ಕಾರ ಹಾಕುತ್ತೇವೆ. ಕೈಗಳು ನಮಗರಿವಿಲ್ಲದೆ ನಮ್ಮ ಹೃದಯಭಾಗವನ್ನು ಮುಟ್ಟಿರುತ್ತದೆ. ನಾವು ದೇವರಿಗೆ ಹೃದಯಪೂರ್ವಕವಾಗಿ ನಮಿಸಿರುತ್ತೇವೆ. ಅದು ನಮ್ಮ ಸಂಪ್ರದಾಯ. ಆಚಾರ. ಈ ನೆಪದಲ್ಲಾದರೂ ಮಾನವ ತನಗೆ ಎಲ್ಲವನ್ನೂ ಕೊಟ್ಟಿರುವ ಭಗವಂತನಿಗೆ ಕೃತಜ್ಞತೆ ಅರ್ಪಿಸಲಿ ಎಂಬುದೇ ಹಿರಿಯರ ಆಶಯ ಹೀಗಾಗಿಯೇ ಊರಿನ ಅಲ್ಲಲ್ಲಿ ದೇವಾಲಯಗಳನ್ನು ನಿರ್ಮಿಸಿದ್ದಾರೆ.
ಬಹುತೇಕ ದೇವಾಲಯಗಳು ಬೆಟ್ಟದ ಮೇಲೆ ಇರುವುದನ್ನು ನಾವು ನೋಡುತ್ತೇವೆ. ದೇವರು, ಸುಲಭವಾಗಿ ದೊರಕುವುದಿಲ್ಲ, ಕಷ್ಟ ಪಟ್ಟು ದೇವರ ದರ್ಶನ ಮಾಡಲಿ ಎಂದೇ ಹೀಗೆ ಮಾಡಿರುವ ಸಾಧ್ಯತೆ ಇದೆ. ಕೆಲವು ದೇವಾಲಯಗಳಿಗೆ ಹೋದಾಗ ನಮಗೆ ಅಮಿತಾನಂದವಾಗುತ್ತದೆ. ನಮ್ಮಲ್ಲಿ ವಿಶೇಷವಾದ ಶಕ್ತಿಯೂ ಒಡಮೂಡುತ್ತದೆ. ಇದಕ್ಕೆ ಸ್ಥಳ ಮಹಿಮೆಯೂ ಕಾರಣ.
ತ್ರೇತಾಯುಗದಲ್ಲಿ ರಾಮೇಶ್ವರದಲ್ಲಿ ರಾಮ ಮರಳಿನಲ್ಲಿ ಶಿವಲಿಂಗ ಮಾಡಿ ಪೂಜಿಸಿದರೆ, ರಾವಣ ಗೋಕರ್ಣದಲ್ಲಿ ಶಿವನಾತ್ಮಲಿಂಗವನ್ನೇ ಪರೋಕ್ಷವಾಗಿ ಪ್ರತಿಷ್ಠಾಪಿಸಿದ್ದಾನೆ. ಹಿರಣ್ಯಕಶಿಪು ಮಂತ್ರಾಲಯದಲ್ಲಿ ಶಿವಲಿಂಗ ಸ್ಥಾಪಿಸಿ ಪೂಜಿಸಿದ್ದಾನೆ, ಪಾಂಡವರು, ಗೌತಮ, ಕಣ್ವ, ವಸಿಷ್ಠಾದಿ ಹಲವು ಮಹಾಮುನಿಗಳು, ಆಚಾರ್ಯರು ಸಾವಿರಾರು ದೇವರುಗಳನ್ನು ಭರತವರ್ಷದಲ್ಲಿ ಪ್ರತಿಷ್ಠಾಪಿಸಿದ್ದಾರೆ ಎಂದು ಪುರಾಣಗಳು ಸಾರುತ್ತವೆ.
ಹೀಗೆ ಸ್ಥಾಪಿಸಲಾದ ದೇವರುಗಳಿಗೆ ಗುಡಿ ಕಟ್ಟುವ ಕಾರ್ಯ ಪ್ರಾಚೀನ ಕಾಲದಿಂದಲೂ ನಡೆದು ಬಂದಿದೆ. ಆರಂಭದಲ್ಲಿ ದೇವಾಲಯಗಳಲ್ಲಿ ಗರ್ಭ ಗೃಹ, ಮೇಲೆ ಒಂದೇ ಅಂತಸ್ತಿನ ಚೌಕ ಅಥವಾ ಅಷ್ಟಕೋನ ಶಿಖರ, ಮುಂದೆ ಕಿರುಮಂಟಪ ಮಾತ್ರ ಇರುತ್ತಿದ್ದುವು. ನಂತರದ ದಿನಗಳಲ್ಲಿ ಗರ್ಭಗೃಹ, ಸುಕನಾಸಿ, ನವರಂಗ, ಉಪದೇವತಾಗೃಹ, ಆವರಣ, ಪ್ರಾಕಾರ, ರಾಜಗೋಪುರ, ಮಹಾದ್ವಾರ, ಚಾಲಂದ್ರ ನಿರ್ಮಿಸುವ ಪರಿಪಾಠ ಬೆಳೆಯಿತು. ಹೀಗೆ ದೇವಾಲಯಗಳ ವಿನ್ಯಾಸ ವಿಸ್ತಾರವಾಯಿತು.
ದೇವಾಲಯಗಳ ನಿರ್ಮಾಣದ ಹಿಂದಿರುವ ಉದ್ದೇಶ ಧರ್ಮರಕ್ಷಣೆಯೇ ಆಗಿದೆ. ಮನಸ್ಸಿಗೆ ನೆಮ್ಮದಿ ನೀಡುವ ತಾಣಗಳಾಗಿ ದೇವಾಲಯಗಳು ಮಹತ್ವದ ಪಾತ್ರ ವಹಿಸಿವೆ. ಸಂಕಟ ಬಂದಾಗ ವೆಂಕಟ ರಮಣ ಎಂಬಂತೆ ಜನರಿಗೆ ಏನೇ ಕಷ್ಟ ಬಂದರೂ ದೇವರ ಮುಂದೆ ಹೇಳಿಕೊಳ್ಳುವುದು ವಾಡಿಕೆ. ದೇವರನ್ನು ಜನಪದರು, ಶಿಷ್ಟರು ಏಕವಚನದಲ್ಲೇ ಸಂಬೋಧಿಸುವುದನ್ನು ನಾವು ಕಾಣಬಹುದು. ನಾವು ದೇವರೊಂದಿಗೆ ಅಷ್ಟು ಸಲಿಗೆ ಬೆಳೆಸಿಕೊಂಡಿದ್ದೇವೆಂದರೆ ದೇವರು ನಮಗೆ ತೀರಾ ಹತ್ತಿರದವ, ಆತ್ಮೀಯ ಎಂದೇ ತಿಳಿದಿದ್ದೇವೆ.
ಕರ್ನಾಟಕದಲ್ಲಿ ಮುಜರಾಯಿ ಇಲಾಖೆಗೆ ಸೇರಿದ 35 ಸಾವಿರ ದೇವಾಲಯಗಳಿವೆ. ಅದಲ್ಲದೆ ಲಕ್ಷಾಂತರ ಇತರ ದೇವಾಲಯಗಳಿವೆ. ಹಲವು ದೇವಾಲಯಗಳು ಎಲೆ ಮರೆಯ ಕಾಯಿಯಂತಿವೆ. ಪ್ರಚಾರಕ್ಕೆ ಬಂದಿರುವ ದೇವಾಲಯಗಳನ್ನು ನಾವು ನೋಡಿರುತ್ತೇವಾದರೂ ಅದರ ಹಿನ್ನೆಲೆ, ಸ್ಥಳ ಪುರಾಣ, ಇತಿಹಾಸ ನಮಗೆ ತಿಳಿದಿರುವುದಿಲ್ಲ. ಈ ಹಿನ್ನೆಲೆಯಲ್ಲಿ ದೇವಾಲಯಗಳ ಸಚಿತ್ರ ಮಾಹಿತಿಯನ್ನು ಓದುಗರಿಗೆ ಒದಗಿಸಲು ಕನ್ನಡರತ್ನ.ಕಾಂ ಮುಂದಾಗಿದೆ. ಜಿಲ್ಲಾವಾರು ಮಾಹಿತಿಯನ್ನು ನೀಡಲಾಗಿದೆ. ನಿಮಗೆ ಮೆಚ್ಚುಗೆಯಾದರೆ ನಮ್ಮ ಶ್ರಮ ಸಾರ್ಥಕ. ಹೆಚ್ಚಿನ ವಿವರಗಳಿಗೆ ಸಂಪಾದಕರು, ಕನ್ನಡರತ್ನ.ಕಾಂ, ನಂ. 46-ಎ, ಸರ್ವೀಸ್ ರಸ್ತೆ, ಔಟರ್ ರಿಂಗ್ ರೋಡ್, ಐಶ್ವರ್ಯಕಾಲೇಜು ಎದುರು, ಜ್ಞಾನಗಂಗಾನಗರ, ಮಲ್ಲತ್ತಹಳ್ಳಿ, ಬೆಂಗಳೂರು – 560056 ಸಂಪರ್ಕಿಸಬಹುದು. ದೂರವಾಣಿ – 9845989533., 9449510235.