ವಿಷಯಕ್ಕೆ ಹೋಗು

ತಂಬುಚೆಟ್ಟಿಪಾಳ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬೆಂಗಳೂರು ನಗರದ ಪೂರ್ವಭಾಗದಲ್ಲಿ ಕೃಷ್ಣರಾಜಪುರದ ಅಂಚಿನಲ್ಲಿ ಇರುವ ಪುಟ್ಟ ಊರು ತಂಬುಚೆಟ್ಟಿಪಾಳ್ಯ. ಈಗೀಗ ಜನರ ಬಾಯಲ್ಲಿ ಟಿ ಸಿ ಪಾಳ್ಯ ಎಂತಲೂ ಕರೆಸಿಕೊಳ್ಳುವ ಈ ಊರಿಗೆ ಇಂದು ನೂರು ವರ್ಷ ತುಂಬಿದೆ.

ಹತ್ತೊಂಬತ್ತನೇ ಶತಮಾನದಲ್ಲಿ ಎಲ್ಲೆಲ್ಲೂ ಪ್ಲೇಗ್ ಮತ್ತು ಇನ್ಫ್ಲುಯೆಂಜಾಗಳು ತಾಂಡವವಾಡುತ್ತಿದ್ದಾಗ ಹಲವಾರು ಎನ್ ಜಿ ಓ ಗಳು ಅನಾಥಮಕ್ಕಳ ಪಾಲನೆ ಪೋಷಣೆಯ ಹೊಣೆ ಹೊತ್ತಿದ್ದವು. ರೆಸಿಡೆನ್ಸಿ ರಸ್ತೆಯಲ್ಲಿರುವ ಗುಡ್ ಶೆಫರ್ಡ್ ಕಾನ್ವೆಂಟು ಸಹಾ ಅಂಥ ಒಂದು ಎನ್ ಜಿ ಓ ಆಗಿತ್ತು. ಈ ಕಾನ್ವೆಂಟು ತನ್ನಲ್ಲಿದ್ದ ಮಕ್ಕಳಿಗಾಗಿ ಶಾಲೆ ನಡೆಸಲು ಜಾಗ ಸಾಲದಾದಾಗ ಅಂದು ಮೈಸೂರು ರಾಜಮನೆತನದ ಮುಖ್ಯ ಸಲಹೆಗಾರರಾಗಿದ್ದ ಟಿ ಆರ್ ಎ ತಂಬುಚೆಟ್ಟಿಯವರು ಸಣ್ಣತಮ್ಮನಹಳ್ಳಿ ಗ್ರೂಪ್ ಪಂಚಾಯ್ತಿಗೆ ಸೇರಿದ ಜಾಗವನ್ನು ಕಾನ್ವೆಂಟಿಗೆ ಕೊಡಮಾಡಿದರು. ಅಂದು ಹಾಗೆ ಶುರುವಾದ ನರ್ಸರಿ ಪ್ರೈಮರಿ ಶಾಲೆ ಹಾಗೂ ಪ್ರಾರ್ಥನಾಮಂದಿರಗಳೇ ಇಂದಿನ ವಿಸ್ತಾರವಾದ ತಂಬುಚೆಟ್ಟಿಪಾಳ್ಯದ ಮೂಲಬೇರುಗಳು. ತಂಬುಚೆಟ್ಟಿಯವರು ೧೯೦೭ ಜುಲೈನಲ್ಲಿ ನಿಧನರಾದ ತರುಣದಲ್ಲಿ ಈ ಊರನ್ನು ತಂಬುಚೆಟ್ಟಿಯೂರು ಎಂದು ಕರೆಯಲಾಯಿತು. ೧೯೪೬ರಲ್ಲಿ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ ನೆನಪಲ್ಲಿ ಇಲ್ಲಿಗೆ ಸಮೀಪದಲ್ಲಿ ಕೃಷ್ಣರಾಜಪುರವನ್ನು ಕಟ್ಟಿದಾಗ ಈ ಊರನ್ನು ತಂಬುಚೆಟ್ಟಿಪಾಳ್ಯವೆಂದು ಬದಲಾಯಿಸಲಾಯಿತು.

ಹಾಗೆ ನೋಡಿದರೆ ತಂಬುಚೆಟ್ಟಿಪಾಳ್ಯವು ಒಂದು ಯೋಜಿತ ಗ್ರಾಮ. ಮುಖ್ಯರಸ್ತೆ, ಅಡ್ಡರಸ್ತೆ, ಚರಂಡಿಗಳು, ಶುದ್ಧಗಾಳಿ ಮತ್ತು ಚೊಕ್ಕವ್ಯವಸ್ಥೆಗಳು ಊರಿನ ಶೋಭೆ ಹೆಚ್ಚಿಸಿವೆ. ಹಿಂದೆ ಈ ಊರಿನ ಗಡಿಗಳು ಮೂಡಣದಲ್ಲಿ ಯೆಂಗಯ್ಯನ ಕೆರೆಯ ಉತ್ತರದಂಡೆಯಿಂದ ಹಿಡಿದು ಇಂದಿನ ಕೃಷ್ಣರಾಜಪುರವನ್ನೆಲ್ಲ ಆವರಿಸಿತ್ತು. ಊರಿನ ಸುತ್ತಲೂ ರಾಗಿ ಹೊಲಗಳು ಇದ್ದವು. ಕೊತ್ತನೂರಿನಿಂದ ಬಾನಸವಾಡಿಯವರೆಗಿನ ಬಂಡಿದಾರಿಯು ಊರಿನ ನಡುವೆ ಹಾದುಹೋಗಿತ್ತು. ದಾರಿಯಲ್ಲಿ ಅಲ್ಲಲ್ಲಿ ಹೊರೆಯಿಳಿಸಲು ಕಲ್ಲುಕಂಬಗಳ ಕಟ್ಟೆಗಳಿದ್ದವು. ೧೯೦೭ರಲ್ಲಿ ಇಲ್ಲೊಂದು ಅಂತೋಣಿಯವರ ಪುಟ್ಟ ಗುಡಿಯು ಶುರುವಾಯಿತೆಂದು ಹೇಳುತ್ತಾರೆ. ಸ್ವಾಮಿ ಜೆರ್ಬಿಯೆ ಅವರು ಈ ಚರ್ಚಿನ ಉಸ್ತುವಾರಿ ನೋಡಿಕೊಳ್ಳುತ್ತಿದ್ದರೆಂದೂ ದಾಖಲೆಯಿದೆ. ಈ ನೂರುವರ್ಷಗಳಲ್ಲಿ ಸಂತ ಅಂತೋಣಿಯವರ ದೇವಾಲಯವು ಊರಿನ ಪ್ರಮುಖ ಕ್ರಿಯಾಶೀಲ ಕೇಂದ್ರವಾಗಿದೆ. ೧೯೫೬ರಲ್ಲಿ ಕಟ್ಟಲಾದ ಕಲ್ಲುಕಟ್ಟಡದ ಚರ್ಚು ಅದರ ಆವರಣದಲ್ಲಿ ಊರಿಗೆಲ್ಲ ನೀರುಣಿಸುತ್ತಿದ್ದ ದೊಡ್ಡ ಕೊಳವೆಬಾವಿ, ಹೀಗೆ ಊರಿಗೊಂದು ಸುಂದರ ಇತಿಹಾಸವಿದೆ.

ಊರ ನಡುವೆ ಇಂದು ದಿವ್ಯ ಭವ್ಯ ದೇವಾಲಯವೊಂದು ತಲೆಯೆತ್ತಿದೆ. ಸುಮಾರು ಮೂರೂವರೆ ಕೋಟಿ ರುಪಾಯಿಗಳ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಚರ್ಚು ೩೦೦೦ ಜನರಿಗೆ ಸ್ಥಳ ಕಲ್ಪಿಸುತ್ತಿದೆ. ದೇವಾಲಯವು ಪಾದ್ವ ಊರಿನ ಪ್ರಖ್ಯಾತ ಪವಾಡಕರ್ತ ಸಂತ ಅಂತೋಣಿಯವರ ಹೆಸರು ಹೊತ್ತಿದ್ದು ಪಾದ್ವ ಊರಿನ ಚರ್ಚಿನ ಪ್ರತಿರೂಪವಾಗಿದೆ. ಅಂಗಳದ ಮೇಲೆ, ಪೂಜಾಂಕಣದ ಮೇಲೆ ಹಾಗೂ ಗಂಟೆಗೋಪುರದ ಮೇಲೆ ನೇರಳೆ ಬಣ್ಣದ ಗುಮ್ಮಟಗಳಿವೆ. ಹಜಾರದ ಕೆಳ ಅಂತಸ್ತಿನಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗಿದೆ.