ವಿಷಯಕ್ಕೆ ಹೋಗು

ಉಳವಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Ulavi
ಉಳವಿ
ಹಳ್ಳಿ
Country ಭಾರತ
ರಾಜ್ಯಕರ್ನಾಟಕ
ಜಿಲ್ಲೆಉತ್ತರ ಕನ್ನಡ
ತಾಲೂಕುಜೋಯಿಡಾ
ಭಾಷೆ
 • ಅಧಿಕೃತಕನ್ನಡ
Time zoneUTC+5:30 (IST)
PIN
581187

ಉಳವಿ ಕ್ಷೇತ್ರವು ಉತ್ತರ ಕನ್ನಡ ಜಿಲ್ಲೆಗೆ ಸೇರಿದ ಸುಪ (ಜೋಯಿಡ) ತಾಲ್ಲೂಕಿನ ದಕ್ಷಿಣಕ್ಕೆ 35 km ದೂರದಲ್ಲಿ ಯಲ್ಲಾಪುರಕ್ಕೆ ಸಮೀಪದಲ್ಲಿರುವ ಒಂದು ಗ್ರಾಮ. ಪುರಾತನ ಸ್ಥಳ ; ದುರ್ಗಮ ಪ್ರದೇಶ ಮತ್ತು ಪವಿತ್ರ ಯಾತ್ರಾ ಸ್ಥಳವಾಗಿದೆ.

ಇಲ್ಲಿ ಪ್ರಖ್ಯಾತ ಚನ್ನಬಸವೇಶ್ವರ ದೇವಾಲಯವಿದೆ. ಇದು ಕಾರವಾರದಿಂದ ಸುಮಾರು ೭೫ ಕಿ.ಮೀ.ದೂರದಲ್ಲಿದೆ.ಉಳವಿ ಲಿಂಗಾಯತ ಜನರ ಒಂದು ಪ್ರಮುಖ ಯಾತ್ರಾಸ್ಥಳವಾಗಿದೆ. ಲಿಂಗಾಯತ ಜನರು ಬಹುವಾಗಿ ಗೌರವಿಸುವ ಚನ್ನಬಸವಣ್ಣನವರ ಸಮಾಧಿ ಇಲ್ಲಿ ಇದೆ.

ಉಳವಿ ಅಣಶಿ ಘಟ್ಟದ ಹಾಗೂ ಸುಪದ ಮೇಲಿಂದ ಇಲ್ಲಿಗೆ ಬರಲು ಎರಡು ಅರಣ್ಯ ಮಾರ್ಗಗಳಿವೆ. ಗವಿಮಠ ಎನ್ನುವ ಸ್ಥಳದಲ್ಲಿ ಕೆಲವು ಹಳೆಯ ಗುಹೆಗಳಿವೆ. ಇವು ವೀರಶೈವ ಸಾಧುಗಳದಾಗಿರಬೇಕು. ಒಂದಕ್ಕೆ ಬಸವಣ್ಣನವರ ಸಹೋದರಿ ಎನ್ನಲಾದ ಅಕ್ಕನಾಗಮ್ಮನ ಗವಿ ಎನ್ನುತ್ತಾರೆ. ವಡ್ಕಲದಲ್ಲಿ ಒಂದು ಹಳೆಯ ಕಟ್ಟಡವಿದೆ. ಇದರ ಬದಿಗೆ ಕೆರೆಯಿದ್ದು ಸದಾಕಾಲ ನೀರು ತುಂಬಿರುತ್ತದೆ. ಪೂರ್ವಕ್ಕೆ ಇನ್ನೊಂದು ಕೆರೆಯಿದೆ. ಇದರಲ್ಲಿ ಸದಾಕಾಲ ನೀರಗುಳ್ಳೆಗಳು ಮೇಲಕ್ಕೆ ಬರುತ್ತಿರುತ್ತವೆ ಇದಕ್ಕೆ ಹರಳಯ್ಯನ ಚಿಲುಮೆ ಎಂದು ಕರೆಯುತ್ತಾರೆ . ಯಾತ್ರಿಕರು ಇಲ್ಲಿ ಮೀಯುತ್ತಾರೆ.

೧೨ ನೇ ಶತಮಾನದಲ್ಲಿ, ಚನ್ನಬಸವಣ್ಣನವರು ಲಿಂಗೈಕ್ಯ ಆಗುವ ಮೊದಲು ಕಲ್ಯಾಣ ದಿಂದ ಉಳವಿಗೆ ಬಂದರು. ತಾಯಿ ಮತ್ತು ಬಸವಣ್ಣನ ಸೋದರಿ ಅಕ್ಕ ನಾಗಲಾಂಬಿಕೆ ಹೆಸರಿನಲ್ಲಿರುವ ಗುಹೆಯು ಈ ಪವಿತ್ರ ಸಮಾಧಿ ಹತ್ತಿರದಲ್ಲಿ ಇದೆ. ಉಳವಿ ಜಾತ್ರೆಗೆ ಕರ್ನಾಟಕದ ಎಲ್ಲೆಡೆಯಿಂದ ಭಕ್ತರು ಬರುತ್ತಾರೆ.

ಉಳವಿಯು ಪಶ್ಚಿಮ ಘಟ್ಟಗಳಲ್ಲಿ ಇದ್ದು ಇಲ್ಲಿನ ದಟ್ಟ ಕಾಡುಗಳಲ್ಲಿ ಹುಲಿ, ಚಿರತೆ, ಆನೆ, ಸಾರಂಗ, ನಾಗರಹಾವು ಮತ್ತು ಇತರ ವನ್ಯಜೀವಿಗಳಿವೆ.

ಹತ್ತಿರದ ಸ್ಥಳಗಳು:ಬೆಳಗಾವಿ ದಾಂಡೇಲಿ, ಧಾರವಾಡ, ಹುಬ್ಬಳ್ಳಿ.

ಇತಿಹಾಸ

[ಬದಲಾಯಿಸಿ]

ಉಳುವಿ ಶಬ್ದದ ಅರ್ಥ ನಾನು ಇಲ್ಲಿ ಉಳಿಯುವೆ ಎಂದಾಗುತ್ತದೆ. ಆದರೆ ಇದರ ಇತಿಹಾಸ ಸ್ಪಷ್ಟವಿಲ್ಲ. 12ನೆಯ ಶತಮಾನದಲ್ಲಿ ಕಲ್ಯಾಣದ ಕ್ರಾಂತಿಯಾದ ಮೇಲೆ ವೀರಶೈವರು ಯಲ್ಲಾಪುರ ಮತ್ತು ಗಣೇಶನ ಗುಡಿ ರಸ್ತೆಯಿಂದ ಉಳುವಿಯನ್ನು ಪ್ರವೇಶಿಸಿದರು. ಆಗ ಇದನ್ನು ವೃಶಾಪುರ ಎನ್ನಲಾಗುತ್ತಿತ್ತು. ವಲಸೆ ಬಂದ ಶರಣರ ಮಾರ್ಗದರ್ಶಿಗಳಾಗಿ ಚೆನ್ನಬಸವಣ್ಣ, ಅಕ್ಕನಾಗಮ್ಮ ಮುಂತಾದ ಇನ್ನೂ ಅನೇಕ ಶರಣರೂ ವಚನಕಾರರೂ ಇಲ್ಲಿಗೆ ಬಂದರು. ಇಲ್ಲಿಯೇ ವೀರಶೈವ ಧರ್ಮದ ಭವಿಷ್ಯತ್ತಿನ ಬಗ್ಗೆ ಯೋಜನೆಗಳನ್ನು ರೂಪಿಸಿ ಧರ್ಮಪ್ರಚಾರ ಕೈಕೊಳ್ಳಲಾಯಿತು. ಚೆನ್ನಬಸವಣ್ಣ ಇಲ್ಲಿ ಲಿಂಗೈಕ್ಯರಾದರು .. ಗೋವಾದ ಕದಂಬರು ದೇವಾಲಯ ನಿರ್ಮಾಣ ಮಾಡಲು ಸಹಾಯ ಮಾಡಿದರು ಎಂದು ಹೇಳಲಾಗುತ್ತದೆ ಹಾಗೂ ಉಳವಿಯಲ್ಲಿ ಚನ್ನಬಸವೇಶ್ವರರ ಹೆಸರಿನಲ್ಲಿ ಒಂದು ಮಠವಿದೆ ಇದನ್ನು ಚನ್ನಬಸವೇಶ್ವರ ಮಹಾಮಠ .ಎಂದು ಕರೆಯಲಾಗಿದೆ. ಇದು ಚಿತ್ರದುರ್ಗ ಬೃಹನ್ ಮಠದ ಶಾಖೆಯಾಗಿರುತ್ತದೆ. ಪ್ರಸ್ತುತ ಈ ಮಠದಲ್ಲಿ ಸ್ವಾಮಿಗಳೊಬ್ಬರು ನೆಲೆಗೊಂಡಿದ್ದು ಬಸವತತ್ವ ಪ್ರಸಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ

ಹೈದರಿನಿಗಿಂತ ಪೂರ್ವದಲ್ಲಿ ಈ ಪ್ರದೇಶವನ್ನು ಒಬ್ಬ ಹರಿಜನ ಆಳುತ್ತಿದ್ದ. ವೀರಭದ್ರಹೊಂಡದ ಹತ್ತಿರ ಇರುವ ಆತನ ಮನೆಯನ್ನು ಇಂದೂ ಗುರುತಿಸಬಹುದು. ಹೈದರ್ ಈತನನ್ನು ಗೆದ್ದು ಈ ಪ್ರದೇಶವನ್ನು ತನ್ನ ವಶಕ್ಕೆ ತೆಗೆದುಕೊಂಡ.

ಟಿಪ್ಪುವಿನ ತರುವಾಯ ಬಾರ್ಡೆ ಬಾಬುರಾವ್ ಎಂಬಾತ ಇಲ್ಲಿ ತುಂಬ ಪ್ರಭಾವ ಬೀರಿದ. ಆತ ಕಟ್ಟಿಸಿದ ಒಂದು ಸಣ್ಣ ಕೋಟೆ ಈಗಲೂ ಅಸ್ತಿತ್ವದಲ್ಲಿದೆ. ಇದೆ ಸಮೀಪದಲ್ಲಿರುವ ಬಾಝೂರ ಕುಣಂಗ ಎಂಬ ಹಳ್ಳಿ ದೊಡ್ಡ ವ್ಯಾಪಾರಕೇಂದ್ರ

ಸ್ಥಳಗಳು

[ಬದಲಾಯಿಸಿ]

ಹುಬ್ಬಳ್ಳಿ, ಚಿತ್ರದುರ್ಗ, ಹಾವೇರಿ ಮತ್ತು ಬೆಳಗಾವಿಯಿಂದ ಬಸ್ಸುಗಳಿವೆ. ಸಿಂಥೇರಿ ಬಂಡೆ, ಕಾಳಿ ನದಿ, ಅಣಸಿ ಮೀಸಲು ಅರಣ್ಯ , ಸೂಪಾ ಅಣೆಕಟ್ಟು ಇಲ್ಲಿಗೆ ಸಮೀಪದಲ್ಲಿರುವ ಇತರ ನೋಡತಕ್ಕ ಸ್ಥಳಗಳು.[]

ಚನ್ನಬಸವೇಶ್ವರ ದೇವಾಲಯ

ಉಲ್ಲೇಖಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಉಳವಿ&oldid=1248593" ಇಂದ ಪಡೆಯಲ್ಪಟ್ಟಿದೆ