ವಿಷಯಕ್ಕೆ ಹೋಗು

ಬಿಲ್ವಪತ್ರೆ ಮರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬಿಲ್ವಪತ್ರೆ ಮರ
Scientific classification
ಸಾಮ್ರಾಜ್ಯ:
plantae
Division:
ಹೂ ಬಿಡುವ ಸಸ್ಯ
ವರ್ಗ:
Subclass:
ರೊಸಿಡೆ
ಗಣ:
Sapindales
ಕುಟುಂಬ:
Rutaceae
ಕುಲ:
Aegle
ಪ್ರಜಾತಿ:
A. marmelos
Binomial name
Aegle marmelos
(L.) Corr. Serr.
ಬಿಲ್ವಪತ್ರೆ ಮರ

ಬಿಲ್ವಪತ್ರೆ ಮರ ಮಧ್ಯಮ ಪ್ರಮಾಣದ ಮರ. ಇದು ಹಿಂದೂ ಧರ್ಮದಲ್ಲಿ ಪವಿತ್ರ ಮರ ಎಂದು ಪರಿಗಣಿಸಲಾಗಿದೆ. ಶಿವನಿಗೆ ಪ್ರೀತಿಪಾತ್ರ ಮರ ಎಂದು ಪುರಾಣಗಳು ಹೇಳುತ್ತವೆ. ಮಹಾಶಿವರಾತ್ರಿಯ ದಿವಸ ಬಿಲ್ವಪತ್ರೆಯಿಂದ ಶಿವನನ್ನು ಪೂಜಿಸಿದರೆ, ಶಿವನು ಒಲಿಯುವನೆಂಬ ನಂಬಿಕೆಯಿದೆ. ಇದು ದಕ್ಷಿಣ ಏಷ್ಯಾ ಪ್ರದೇಶಗಳಲ್ಲಿ, ದೇವಸ್ಥಾನಗಳ ಪಕ್ಕ, ಉದ್ಯಾನವನಗಳಲ್ಲಿ ಸಾಮಾನ್ಯವಾಗಿ ಬೆಳೆಸಲಾಗುತ್ತದೆ. ಬಿಲ್ವವು ಭಾರತದ ಹಲವಾರು ಭಾಗಗಳಲ್ಲಿ ಕಂಡು ಬರುವ ಒಂದು ಸಾಮಾನ್ಯ ವೃಕ್ಷವಾಗಿದೆ. ಕಡಲ ಮಟ್ಟದಿಂದ ೩,೬೦೦ ಅಡಿಗಳಷ್ಟು ಎತ್ತರದವರೆಗಿನ ಪ್ರದೇಶಗಳಿಂದ ಇದು ಬೆಳೆಯುತ್ತದೆ. ಪಶ್ಚಿಮ ಹಿಮಾಲಯ ಪರ್ವತ ಪ್ರದೇಶಗಳಲ್ಲೂ ಇದು ಬೆಳೆಯುತ್ತದೆ. ಅಂಡಮಾನ್ ದ್ವೀಪಗಳಲ್ಲೂ ಬಿಲ್ವ ಸಹಜವಾಗಿ ಬೆಳೆಯುತ್ತದೆ.

ಸಸ್ಯಶಾಸ್ತ್ರೀಯ ಹೆಸರು

[ಬದಲಾಯಿಸಿ]

Aegle Marmelos (L.) Corrêa

ಸಸ್ಯದ ಕುಟುಂಬ

[ಬದಲಾಯಿಸಿ]

Rutaceae

ದೇಶೀಯ ಹೆಸರುಗಳು

[ಬದಲಾಯಿಸಿ]

ಸಂಸ್ಕೃತ: ಬಿಲ್ವ, ಕನ್ನಡ: ಬಿಲ್ವಪತ್ರೆ , ಇಂಗ್ಲಿಷ್: Baelfruit

ಸಸ್ಯದ ಗುಣಲಕ್ಷಣಗಳು

[ಬದಲಾಯಿಸಿ]

ಇದು ಪರ್ಣಪಾತಿ ಮರ. ಕೊಂಬೆಗಳಲ್ಲಿ ಮುಳ್ಳುಗಳಿವೆ. ತೊಗಟೆ ಬೂದು ಬಣ್ಣದ್ದಾಗಿದ್ದು, ಬೆಂಡು ಬೆಂಡಾಗಿರುವುದು. ಎಲೆಗಳು ತ್ರಿಪರ್ಣಿ(Trifoliate) ಅಂದರೆ ಮೂರು ಎಲೆಗಳು ಇರುತ್ತವೆ ಹಾಗೂ ಇವು ಸುವಾಸಿತವಾಗಿರುವುವು. ಎಲೆಗಳಲ್ಲಿ ಸುಗಂಧ ತೈಲಯುಕ್ತ ಪಾರದರ್ಶಕ ಗ್ರಂಥಿಗಳ ಚುಕ್ಕಿಗಳಿವೆ. ಈ ಕುಟುಂಬದ ಸಸ್ಯಗಳಲ್ಲಿ ದ್ವಿಲಿಂಗಿ ಅಥವ ಏಕಲಿಂಗಿ ಹೂಗಳು ಬಿಡುತ್ತವೆ. ಬಿಲ್ವದ ಹೂಗಳು ಹಸಿರು ಮಿಶ್ರ ಬಿಳಿ ಬಣ್ಣದಾಗಿರುತ್ತದೆ. ಸಣ್ಣ ಗೊಂಚಲಿನಲ್ಲಿ ಹೂ ಬಿಡುತ್ತದೆ. ಹೂವು ಪರಿಮಳದಿಂದ ಕೂಡಿರುತ್ತದೆ. ಇದರ ಹಣ್ಣು ಆಕಾರ ಹಾಗೂ ಗಾತ್ರದಲ್ಲಿ ಸೇಬನ್ನು ಹೋಲುತ್ತದೆ. ಬಿಲ್ವದ ಹಣ್ಣಿನ ಒಂದು ವಿಶೇಷತೆ ಎಂದರೆ ಅದು ಎಳೆ ಕಾಯಿ, ಅಪಕ್ವ ಫಲ, ಮಾಗಿದ ಫಲ - ಯಾವುದೇ ಹಂತದಲ್ಲಿದ್ದರೂ ಒಂದಲ್ಲ ಒಂದು ರೀತಿಯಲ್ಲಿ ಪ್ರಯೋಜನಕ್ಕೆ ಬರುತ್ತದೆ. ಔಷಧೀಯವಾಗಿ, ಇದನ್ನು ಕಾಯಿಯಾಗಿರುವಾಗಲೇ ಉಪಯೋಗಿಸತಕ್ಕದ್ದು.

ಬಿಲ್ವದ ಮರದಲ್ಲಿ ಹಣ್ಣು ಪಕ್ವವಾಗಲು ದೀರ್ಘ ಕಾಲ ಆಗುತ್ತದೆ. ಹೂಗಳು ಪರಾಗಸ್ಪರ್ಶಕ್ಕೆ ಗುರಿಯಾಗಿ ಫಲಿತವಾಗಿ ಕಾಯಾಗಲು ಒಂದು ವರ್ಷವಾಗಲೂಬಹುದು. ಬಿಲ್ವದ ಹಣ್ಣು ದುಂಡಗಿರುತ್ತದೆ. ಮೊದಲು ಕಾಯಿಯು ಹಸಿರು ಬಣ್ಣದಾಗಿದ್ದು, ಬೂದು ಬಣ್ಣ ತಾಳುತ್ತದೆ. ಹಣ್ಣಿನ ಚಿಪ್ಪು ಗಟ್ಟಿಯಾಗಿರುತ್ತದೆ. ಒಳಗಿನ ತಿರುಳು ಕಿತ್ತಳೆ ಬಣ್ಣದ್ದಾಗಿರುತ್ತದೆ. ಬಿಲ್ವದ ಹಣ್ಣಿನಲ್ಲಿ ಎರಡು ವಿಧಗಳಿದ್ದು - ಗ್ರಾಮ್ಯ ವಿಧದಲ್ಲಿ ಹಣ್ಣುಗಳು ದೊಡ್ಡದಾಗಿದ್ದು ಮುಳ್ಳುಗಳ ಪ್ರಮಾಣ ಕಡಿಮೆ ಇರುತ್ತದೆ. ವನ್ಯವಿಧದಲ್ಲಿ ಗಾತ್ರ ಚಿಕ್ಕದಿದ್ದು ಮುಳ್ಳುಗಳು ಹೆಚ್ಚಿರುತ್ತವೆ. ಬಿಲ್ವದ ದಾರುವು ಗಡುಸಾಗಿದ್ದು,ಬಾಳಿಕೆಯುತವಾಗಿದೆ.

ಬಿಲ್ವಪತ್ರೆ ಕಾಯಿ

ಬಿಲ್ವ ಕೃಷಿ

[ಬದಲಾಯಿಸಿ]

ಹವಾಗುಣ

[ಬದಲಾಯಿಸಿ]

ಕಡಲ ಮಟ್ಟದಿಂದ ೩೬೦೦ ಅಡಿಗಳಷ್ಟು ಎತ್ತರದವರೆಗಿನ ಪ್ರದೇಶಗಳಿಂದ ಇದು ಬೆಳೆಯುತ್ತದೆ. -೭ ಡಿಗ್ರೀ ಉಷ್ಣತೆ ಇರುವಲ್ಲೂ ಬಿಲ್ವವು ಬೆಳೆಯುತ್ತದೆ.

ಮಣ್ಣು

[ಬದಲಾಯಿಸಿ]

ಬಿಲ್ವವು ಹಲವು ಬಗೆಯ ಮಣ್ಣಿನಲ್ಲಿ ಬೆಳೆಯಬಹುದು. ಜೌಗುನೆಲ, ಕ್ಷಾರಭರಿತ ನೆಲ, ಜೇಡಿ ಮಣ್ಣಿನ ನೆಲ ಇತ್ಯಾದಿ. ಮಣ್ಣಿನಲ್ಲಿ ಆಮ್ಲೀಯತೆಯು ೫ - ೧೦ pH ಇದ್ದರೆ ಅಂತಹ ಮಣ್ಣಿನಲ್ಲೂ ಬಿಲ್ವ ಬೆಳೆಯುತ್ತದೆ.

ಸಸ್ಯ ಸಂವರ್ಧನೆ

[ಬದಲಾಯಿಸಿ]

ಬಿಲ್ವವನ್ನು ಬೀಜಗಳಿಂದ ಸಸ್ಯಸಂವರ್ಧನೆ ಮಾಡಬಹುದು. ಬಿಲ್ವವನ್ನು ಬಡ್ಡಿಂಗ್, ಗ್ರಾಫ್ಟಿಂಗ್ ಮುಂತಾದ ನಿರ್ಲಿಂಗ ಪದ್ದತಿಯಲ್ಲೂ ಸಸ್ಯಸಂವರ್ಧನೆ ಮಾಡಬಹುದು.

ರೋಗಗಳು

[ಬದಲಾಯಿಸಿ]

ಬಿಲ್ವ ವೃಕ್ಷಕ್ಕೆ ಗಂಭೀರತರವಾದ ರೋಗಗಳು ಕಾಡುವುದಿಲ್ಲ. ಆದರೆ ಒಂದು ಬ್ಯಾಕ್ಟೀರಿಯ ಸೋಂಕು ಬಿಲ್ವದ ಹಣ್ಣಿಗೆ ತಗಲಬಹುದು. ಎಲೆಯ ಮೇಲೆ ಗೊಂಡಿನ ನೀರಿನಲ್ಲಿ ನೆಲೆಸಿಟ್ಟಂತಹ ಗುರುತು ಮೂಡುತ್ತದೆ. ಇದರ ಮೇಲೆ ಶಿಲೀಂಧ್ರದ ಬಾಧೆ ಉಂಟಾಗುವುದರಿಂದ ಅನೇಕ ಕಾಯಿಲೆಗಳು ಬರುತ್ತದೆ.

ಕೀಟಬಾಧೆ

[ಬದಲಾಯಿಸಿ]

ಬಿಲ್ವದ ಬೆಳೆಗೆ ಎಲೆತಿನ್ನುವ ಹುಳದ ಕಾಟ ಇರುತ್ತದೆ. ಈ ಕೀಟದ ಪತಂಗವು ದುಂಡಗಿರುವ ಮೊಟ್ಟೆಗಳನ್ನು ಬಿಲ್ವಪತ್ರೆಗಳ ಮೇಲೆ ಇಡುತ್ತದೆ. ಇದರ ಮರಿಗಳು ಎಲೆಗಳನ್ನು ತಿನ್ನುತ್ತವೆ.

ಉಪಯೋಗಗಳು

[ಬದಲಾಯಿಸಿ]

ಇದರ ಎಲೆಗಳು ಶಿವಪೂಜೆಯಲ್ಲಿ ಶ್ರೇಷ್ಟವೆಂದು ಪರಿಗಣಿತವಾಗಿದೆ. ಇದರ ಬೇರು, ಎಲೆಗಳು, ತೊಗಟೆ, ಹಣ್ಣಿನ ತಿರುಳು ಆಯುರ್ವೇದದಲ್ಲಿ ಔಷಧವಾಗಿ ಉಪಯೋಗಿಸಲ್ಪಡುತ್ತದೆ.

ಆಯುರ್ವೇದದಲ್ಲಿ ಬಿಲ್ವ

[ಬದಲಾಯಿಸಿ]

ಆಯುರ್ವೇದದ ಪ್ರಕಾರ ಬಿಲ್ವದ ಗುಣಧರ್ಮಗಳು ಹೀಗಿವೆ: ವಾತದ ದೋಷಗಳನ್ನು ನಿವಾರಿಸುವ ಗುಣ ಬೇರಿನಲ್ಲಿದೆ. ಬಿಲ್ವದ ಹಸಿಕಾಯಿ ಕಫ ಮತ್ತು ವಾತನಿವಾರಕವಾಗಿದೆ ಹಾಗೂ ಹೃದಯಕ್ಕೆ ಒಳ್ಳೆಯದು. ಇದು ಹಸಿವು ಮತ್ತು ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ, ಹೊಟ್ಟೆ ನೋವು ಮತ್ತು ಭೇದಿಗೆ ಚಿಕಿತ್ಸೆ ಮಾಡಲು ನೆರವಾಗುತ್ತದೆ. ಪಕ್ವವಾದ ಬಿಲ್ವದ ಹಣ್ಣು ವಾತಪಿತ್ತವನ್ನು ಹೆಚ್ಚಿಸುತ್ತದೆ. ಕಫವನ್ನು ಕಡಿಮೆ ಮಾಡುತ್ತದೆ. ಅಜೀರ್ಣ ಮತ್ತು ಹೊಟ್ಟೆನೋವಿಗೆ ಮದ್ದಾಗಿ ಬಳಕೆಯಾಗುತ್ತಿದೆ. ತಿರುಳಿನಿಂದ ತೆಗೆದ ತೈಲವು ವಾತನಿವಾರಕವಾಗಿದೆ.

ಚರ್ಮದ ಸಮಸ್ಯೆಗಳು : ದೇಹದ ಚರ್ಮದ ದುರ್ಗಂಧವನ್ನು ನಿವಾರಿಸಲು ತಾಜಾ ಬಿಲ್ವಪತ್ರೆ ರಸವನ್ನು ಪ್ರತಿದಿನ ಮೈಗೆ ಚೆನ್ನಾಗಿ ಲೇಪಿಸಿಕೊಂಡು ಅರ್ಧಗಂಟೆಯ ನಂತರ ಸ್ನಾನ ಮಾಡಬೇಕು. ದೇಹದ ಮೇಲೆ ಕುರುಗಳು ಇದ್ದಾಗ ಬಿಲ್ವ ವೃಕ್ಷದ ಬೇರನ್ನು ನಿಂಬೆರಸದಲ್ಲಿ ತೇಯ್ದು ಲೇಪಿಸುತ್ತಿರಬೇಕು.

ತಲೆನೋವು: ತಲೆನೋವು ಸಮಸ್ಯೆ ಇದ್ದಾಗ ಬಿಲ್ವದ ಮರದ ಒಣಬೇರನ್ನು ಅರೆದು ಹಣೆಗೆ ಲೇಪಿಸಬೇಕು.

ತಲೆಕೂದಲಿನ ಸಮಸ್ಯೆಗಳು: ಬಿಲ್ವಪತ್ರೆ ಕಾಯಿಯನ್ನು ಬೇಯಿಸಿ ನಂತರ ಅದರ ತಿರುಳನ್ನು ತೆಗೆದು ನುಣ್ಣಗೆ ಅರೆದು ತಲೆಗೆ ಲೇಪಿಸಿಕೊಡು ಅರ್ಧ ಗಂಟೆಯ ನಂತರ ತೊಳೆಯಬೇಕು. ಇದನ್ನು ದಿನಕ್ಕೊಮ್ಮೆಯಂತೆ ಹದಿನೈದು ದಿನಗಳ ಕಾಲ ಮಾಡುವುದರಿಂದ ತಲೆಹೊಟ್ಟಿನ ಸಮಸ್ಯೆ ನಿವಾರಣೆಯಾಗುತ್ತದೆ. ತಲೆ ಸ್ನಾನವನ್ನು ಮಾಡುವ ಅರ್ಧಗಂಟೆಯ ಮೊದಲು ಬಿಲ್ವಪತ್ರೆಯನ್ನು ಅರೆದು ತಲೆಗೆ ಲೇಪಿಸಿಕೊಳ್ಳಬೇಕು. ಇದರಿಂದ ತಲೆಹೊಟ್ಟು ನಿವಾರಣೆಯಾಗುತ್ತದೆ. ಅಕಾಲ ನರೆಕೂದಲು ಸಮಸ್ಯೆ ನಿವಾರಣೆಯಾಗುತ್ತದೆ.

ಮಾನಸಿಕ ಸಮಸ್ಯೆಗಳು : ನಿದ್ರಾಹೀನತೆಯಿಂದ ಬಳಲುತ್ತಿರುವವರು ಬಿಲ್ವದ ಎಲೆಯನ್ನು ನೀರು ಸೇರಿಸದೆ ಅರೆದು ಹಣೆಗೆ ಲೇಪಿಸಿಕೊಳ್ಳಬೇಕು. ಇದರಿಂದ ಒಳ್ಳೆಯ ನಿದ್ದೆ ಬರುತ್ತದೆ. ನಿಶ್ಯಕ್ತಿ : ಬಿಲ್ವಪತ್ರೆಯ ರಸವನ್ನು ಪ್ರತಿದಿನ ೨ - ೩ ಚಮಚೆಯ ಸೇವಿಸುತ್ತಿದ್ದರೆ ನಿಶ್ಯಕ್ತಿ ದೂರವಾಗುತ್ತದೆ.ನಿಶ್ಯಕ್ತಿ , ಆಯಾಸದಿಂದ ಬಳಲುತ್ತಿರುವವರು ದಿನದಲ್ಲಿ ಮೂರು ಬಾರಿ ದಶಮೂಲಾರಿಷ್ಟವನ್ನು ಎರಡೆರಡು ಚಮಚೆಯಂತೆ ಸೇವಿಸಬೇಕು.

ಕಣ್ಣಿನ ಸಮಸ್ಯೆಗಳು : ಕಣ್ಣಿನಲ್ಲಿ ಉರಿ , ತುರಿಕೆ ಇದ್ದಾಗ ಬಿಲ್ವಪತ್ರೆಯನ್ನು ನುಣ್ಣಗೆ ಅರೆದು ಕಣ್ಣಿನ ಮೇಲೆ ಲೇಪಿಸಿಕೊಳ್ಳಬೇಕು. ಕಣ್ಣಿನ ಸೋಂಕು ಇದ್ದಾಗ ಅಥವಾ ಕಣ್ಣು ಕೆಂಪಾದಾಗ ಮಾಡಬಹುದಾದ ಚಿಕಿತ್ಸೆ ಇದು - ಒಂದು ಹಿಡಿಯ ಬಿಲ್ವದ ಎಳೆಯ ಎಲೆಗಳನ್ನು ಸಂಗ್ರಹಿಸಿ ಮಣ್ಣಿನ ಕುಡಿಕೆಗೆ ಹಾಕಿ ಹುರಿಯಬೇಕು. ಅದು ಸ್ವಲ್ಪ ಬಿಸಿ ಇರುವಾಗಲೇ ಒಂದು ಬಟ್ಟೆಯಲ್ಲಿ ಹಾಕಿ ಕಣ್ಣಿನ ಮೇಲಿಡಬೇಕು. ಸ್ವಲ್ಪ ನೀರಿನಲ್ಲಿ ಬಿಲ್ವದ ಹೂಗಳನ್ನು ನೆನೆಸಿಟ್ಟು ನಂತರ ಶೋಧಿಸಿ ಆ ನೀರಿನಿಂದ ಕಣ್ಣುಗಳನ್ನು ತೊಳೆದುಕೊಳ್ಳುತ್ತಿದ್ದರೆ ಕಣ್ಣಿನ ಆರೋಗ್ಯ ಚೆನ್ನಾಗಿರುತ್ತದೆ.

ಬಾಯಿಯ ಸಮಸ್ಯೆಗಳು : ಬಾಯಿಯಲ್ಲಿ ಹುಣ್ಣಾಗಿದ್ದಾಗ ಬಿಲ್ವಪತ್ರೆ ಹಣ್ಣಿನ ತಿರುಳಿಗೆ ಸ್ವಲ್ಪ ಬೆಲ್ಲ ಸೇರಿಸಿ ದಿನದಲ್ಲಿ ಒಂದು ಬಾರಿ ಸೇವಿಸಬೇಕು. ಅಜೀರ್ಣ ಸಮಸ್ಯೆಯಿಂದ ಅಥವಾ ಹೊಟ್ಟೆ ಹುಣ್ಣಿನ ಸಮಸ್ಯೆಯಿಂದ ವಾಂತಿ ಆಗುತ್ತಿದ್ದರೆ ಎರಡು ಚಮಚೆ ಬಿಲ್ವಪತ್ರೆ ರಸಕ್ಕೆ ಒಂದು ಚಮಚ ಜೇನುತುಪ್ಪ ಸೇರಿಸಿ ದಿನದಲ್ಲಿ ೨-೩ ಬಾರಿ ನೆಕ್ಕಬೇಕು. ಬಿಲ್ವ ಫಲದ ಸಿಪ್ಪೆಯನ್ನು ಅರೆದು ಜೀನುತುಪ್ಪದಲ್ಲಿ ಸೇರಿಸಿ ಸೇವಿಸುತ್ತಿದ್ದರೆ ವಾಕರಿಕೆ ನಿಲ್ಲುತ್ತದೆ.

ಮೂಗಿನ ಸಮಸ್ಯೆಗಳು : ನೆಗಡಿ ಇದ್ದಾಗ ಬಿಲ್ವಪತ್ರೆ ಎಲೆಯ ರಸವನ್ನು ಸ್ವಲ್ಪ ನೀರಿಗೆ ಬೆರೆಸಿ, ಈ ನೀರನ್ನು ಮೂಗಿಗೆ ಹನಿಸಬೇಕು.

ನೆಗಡಿ, ಕೆಮ್ಮು, ದಮ್ಮು, ಶ್ವಾಸಕೋಶದ ಸಮಸ್ಯೆಗಳು': ಕ್ಷಯರೋಗದಿಂದ ಬಳಲುತ್ತಿರುವವರು ೪೦ ದಿನಗಳವರೆಗೆ ಊಟದ ನಂತರ ಬಿಲ್ವದ ಹಣ್ಣಿಗೆ ಸ್ವಲ್ಪ ಸಕ್ಕರೆ ಮತ್ತು ಜೀನುತುಪ್ಪ ಸೇರಿಸಿ ತಿನ್ನಬೇಕು. ನೆಗಡಿಯಾದಾಗ ಬಿಲ್ವಪತ್ರೆಯ ರಸವನ್ನು ಸ್ವಲ್ಪ ಸ್ವಲ್ಪ ಕುಡಿಯುತ್ತಿದ್ದರೆ ಪ್ರಯೋಜನವಾಗುತ್ತದೆ. ಅಸ್ತಮಾ ಸಮಸ್ಯೆಯಿಂದ ಬಳಲುತ್ತಿರುವವರು ಪ್ರತಿದಿನ ಮುಂಜಾನೆ ಎದ್ದಕೂಡಲೇ ಒಂದು ಬಿಲ್ವದ ಎಲೆಯನ್ನು ೨-೩ ಕಾಳುಮೆಣಸಿನೊಂದಿಗೆ ಬಾಯಿಗೆ ಹಾಕಿಕೊಂಡು ಚೆನ್ನಾಗಿ ಅಗಿದು ತಿನ್ನಬೇಕು. ಇದನ್ನು ೩೦-೪೦ ದಿನಗಳ ಕಾಲ ಮಾಡಬೇಕು.

ಹೃದಯದ ಸಮಸ್ಯೆಗಳು : ಆಗಾಗ ಹೃದಯದ ಬಡಿತ ತಪ್ಪುವ ಸಮಸ್ಯೆ ಇರುವವರು ಬಿಲ್ವಮರದ ಬೇರಿನ ತೊಗಟೆಯ ಕಷಾಯವನ್ನು ಕುಡಿಯುತ್ತಿರಬೇಕು. ಬಿಲ್ವದ ಎಲೆಗಳನ್ನು ಚೆನ್ನಾಗಿ ಒಣಗಿಸಿ ಚೂರ್ಣ ಮಾಡಿ ಸಂಗ್ರಹಿಸಿಡಬೇಕು. ರಕ್ತದ ಅಧಿಕ ಒತ್ತಡ ಇರುವವರು ಅರ್ಧದಿಂದ ಒಂದು ಚಮಚೆಯ ಈ ಚೂರ್ಣವನ್ನು ಒಂದು ಬಟ್ಟಲು ನೀರಿಗೆ ಸೇರಿಸಿ ಕುದಿಸಿ, ತಣಿಸಿ ದಿನದಲ್ಲಿ ೨-೩ ಬಾರಿ ಕುಡಿಯುತ್ತ್ತಿದ್ದರೆ ಪ್ರಯೋಜನವಾಗುತ್ತದೆ.

ಹೊಟ್ಟೆಯ ಸಮಸ್ಯೆಗಳು: ಭೇದಿ ಮುಂತಾದ ಹೊಟ್ಟೆಯ ಸಂಬಂಧಿ ಸಮಸ್ಯೆಗಳಿದ್ದಾಗ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಸ್ವಲ್ಪ ಬಿಲ್ವದ ಹಣ್ಣನ್ನು ದಾಲ್ಚಿನ್ನಿ ಪುಡಿಯೊಂದಿಗೆ ಕಲೆಸಿ ಸೇವಿಸಬೇಕು. ಸಮಪ್ರಮಾಣದ ಬಿಲ್ವದ ತಿರುಳು ಮತ್ತು ಎಳ್ಳನ್ನು ಅರೆದು ಸ್ವಲ್ಪ ಬೆಣ್ಣೆ ಮತ್ತು ತುಪ್ಪದಲ್ಲಿ ಸೇರಿಸಿ ಸೇವಿಸುತ್ತಿದ್ದರೆ, ಭೇದಿ ಮುಂತಾದ ಮಲಸಂಬಂಧಿ ಸಮಸ್ಯೆಗಳು ನಿವಾರಣೆಯಾಗುತ್ತವೆ. ಭೇದಿ, ಅತಿಸಾರದಿಂದ ಬಳಲುತ್ತಿರುವವರು ಎರಡು ಚಮಚೆಯ ಬಿಲ್ವಪತ್ರೆ ರಸವನ್ನು ಸ್ವಲ್ಪ ಜೇನುತುಪ್ಪದೊಂದಿಗೆ ದಿನದಲ್ಲಿ ೩-೪ ಬಾರಿ ಸೇವಿಸಬೇಕು. ಬೇಲದ ಹಣ್ಣಿನ ತಿರುಳನ್ನು ಒಣಗಿಸಿ ಸ್ವಲ್ಪ ಸೋಂಪು ಕಾಳು ಸೇರಿಸಿ ಪುಡಿಮಾಡಿಟ್ಟು ಕೊಳ್ಳ ಬೇಕು. ರಕ್ತಭೇದಿ ಸಮಸ್ಯೆ ಇದ್ದಾಗ ಈ ಚೂರ್ಣವನ್ನು ಒಂದು ಚಮಚೆಯ ತೆಗೆದುಕೊಂಡು ಜೇನುತುಪ್ಪದಲ್ಲಿ ಬೆರೆಸಿ ಸೇವಿಸಬೇಕು. ಊಟ ಸೇರದಿರುವುದು, ಹಸಿವೆ ಇಲ್ಲದಿರುವುದು - ಇಂತಹ ಸಮಸ್ಯೆಗಳಿಂದ ಬಳಲುತ್ತಿರುವವರು ನಾಲ್ಕೈದು ಬಿಲ್ವ ಪತ್ರೆ ಎಲೆಯನ್ನು ಪ್ರತಿದಿನ ಮುಂಜಾನೆ ಬೆಳಗ್ಗೆ ಚೆನ್ನಾಗಿ ಅಗಿದು ತಿನ್ನಬೇಕು. ಇದನ್ನು ಮೂರು ದಿನಗಳ ಕಾಲ ಮಾಡಬೇಕು.

ಬೊಜ್ಜ್ಜು  : ಬೊಜ್ಜಿನ ಸಮಸ್ಯೆ ಇರುವವರು ಬಿಲ್ವ, ಅಗ್ನಿಮಂಥ, ಆನೆಮೊಗ್ಗು, ಶಿವನಿ ಮತ್ತು ಪಾದರಿ ಈ ಮರಗಳ ಬೇರಿನ ಕಷಾಯವನ್ನು ಸ್ವಲ್ಪ ಜೇನುತುಪ್ಪ ಬೆರೆಸಿ ಕುಡಿಯುತ್ತಿದ್ದರೆ ಸಮಸ್ಯೆಯ ನಿವಾರಣೆಯಾಗುತ್ತದೆ.

ಗಾಯ,ಹುಣ್ಣು : ದೇಹದ ಮೇಲೆ ಗಾಯವಾಗಿ ಅದು ಕೊಳೆಯುವ ಸ್ಥಿತಿ ತಲಪಿದಾಗ (ಗ್ಯಾಂಗ್ರೀನ್ ) ಆ ಜಾಗದಲ್ಲಿ ಬಿಲ್ವಪತ್ರೆಯನ್ನು ಅರೆದು ಲೇಪ ಹಚ್ಚಿದರೆ ಬೇಗ ಗುಣವಾಗುತ್ತದೆ. ಸುಟ್ಟ ಗಾಯದ ಮೇಲೆ ಬಿಲ್ವಪತ್ರೆ ರಸವನ್ನು ಲೇಪಿಸುತ್ತಿದ್ದರೆ ಬೇಗ ಮಾಯುತ್ತದೆ.

ನೋವು, ಬಾವು, ಊತ : ಕಾಲು ಅಥವಾ ದೇಹದ ಬೇರಾವುದೇ ಭಾಗದಲ್ಲಿ ಊತ ಇದ್ದಾಗ ಬಿಲ್ವಪತ್ರೆ ರಸಕ್ಕೆ ಕಾಳುಮೆಣಸು ಪುಡಿ ಸೇರಿಸಿ ಕುಡಿಯುತ್ತಿದ್ದರೆ ಪ್ರಯೋಜನವಾಗುತ್ತದೆ. ಮೈಕೈ ನೋವು ಸಮಸ್ಯೆಯಿಂದ ಬಳಲುತ್ತಿರುವವರು ಬಿಲ್ವಪತ್ರೆ ಎಲೆ, ಬೇವಿನ ಎಲೆ ಮತ್ತು ಹರಳು ಗಿಡದ ಎಲೆಗಳನ್ನು ನೀರಿಗೆ ಸೇರಿಸಿ ಕುದಿಸಿ ಆ ನೀರನ್ನು ಸ್ನಾನದ ನೀರಿಗೆ ಮಿಶ್ರ ಮಾಡಿ ಪ್ರತಿ ದಿನ ಸ್ನಾನ ಮಾಡಬೇಕು. ಬಿಲ್ವದ ತಿರುಳಿಗೆ ಸಾಸಿವೆ ಎಣ್ಣೆ ಸೇರಿಸಿ ಕಲೆಸಿ ಬಿಸಿ ಮಾಡಿ ಊತ, ಬಾವು ಇರುವಲ್ಲಿ ಇಟ್ಟರೆ ಪ್ರಯೋಜನವಾಗುತ್ತದೆ.

ಮಧುಮೇಹ : ಬಿಲ್ವಪತ್ರೆ, ಮಧುನಾಶನಿ, ಬೇವಿನಸೊಪ್ಪು, ನುಗ್ಗೆಸೊಪ್ಪುಗಳನ್ನು ಸಮಪ್ರಮಾಣದಲ್ಲಿ ಸೇರಿಸಿ ನೆರಳಿನಲ್ಲಿ ಒಣಗಿಸಿ ಚೂರ್ಣ ಮಾಡಬೇಕು. ಇದಕ್ಕೆ ಒಣಗಿಸಿದ ಹಾಗಲಕಾಯಿ ಚೂರ್ಣ ಮತ್ತು ಹುರಿದ ಮೆಂತ್ಯದ ಚೂರ್ಣವನ್ನು ಸಮಪ್ರಮಾಣದಲ್ಲಿ ಬೆರೆಸಿ ಇಡಬೇಕು. ಈ ಚೂರ್ಣವನ್ನು ಮಧುಮೇಹ ಸಮಸ್ಯೆ ಇರುವವರು ಒಂದು ಸಲಕ್ಕೆ ಮೂರು ಚಮಚೆಯಂತೆ ದಿನಕ್ಕೆ ಮೂರು ಬಾರಿ ನೀರಿನೊಂದಿಗೆ ಸೇವಿಸುತ್ತಿರಬೇಕು. ಇದರಿಂದ ಮಧುಮೇಹ ಸಮಸ್ಯೆಯಿರುವವರಿಗೆ ಪ್ರಯೋಜನವಾಗುತ್ತದೆ. ಅಗಸೆ ಸೊಪ್ಪು, ಬಿಲ್ವ ಪತ್ರೆ ಸೊಪ್ಪು ಮತ್ತು ನಾಗದಾಳಿ ಸೊಪ್ಪನ್ನು ಸಮಪ್ರಮಾಣದಲ್ಲಿ ಅರೆದು ತೆಗೆದ ರಸವನ್ನು ದಿನದಲ್ಲಿ ಎರಡು ಬಾರಿ ಅರ್ಧ ಬಟ್ಟಲಿನಂತೆ ಕುಡಿಯಬೇಕು. ಇದರಿಂದ ಮಧುಮೇಹ ಸಮಸ್ಯೆಯಿರುವವರಿಗೆ ಪ್ರಯೋಜನವಾಗುತ್ತದೆ. ಬಿಲ್ವಪತ್ರೆ, ಮಧುನಾಶಿನಿ, ತುಂಬೆ ಎಲೆ, ಬೇವಿನ ಕುಡಿ, ಕರಿಹಾಗಲ ಸೊಪ್ಪು - ಇವನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ನೆರಳಿನಲ್ಲಿ ಒಣಗಿಸಿ ಚೂರ್ಣಮಾಡಿಡಬೇಕು. ಪ್ರತಿದಿನ ಒಂದು ಚಮಚೆ ಚೂರ್ಣವನ್ನು ಬಿಸಿ ನೀರಿನಲ್ಲಿ ಸೇರಿಸಿ ಕುಡಿಯಬೇಕು. ಇದನ್ನು ಮೂರು ತಿಂಗಳ ಕಾಲ ಮಾಡಬೇಕು. ಇದರಿಂದ ಮಧುಮೇಹ ಸಮಸ್ಯೆಯಿರುವವರಿಗೆ ಪ್ರಯೋಜನವಾಗುತ್ತದೆ. ಎರಡು ಚಮಚೆಯ ಬಿಲ್ವಪತ್ರೆ ಎಲೆ, ಅರ್ಧ ಚಮಚೆ ಅರಿಶಿನಪುಡಿ, ಅಳಲೆ-ತಾರೆ-ಬೆಟ್ಟದನೆಲ್ಲಿ ಇವುಗಳ ಚೂರ್ಣ ತಲಾ ಅರ್ಧ ಚಮಚೆ ತೆಗೆದುಕೊಂಡು, ಎರಡು ಬಟ್ಟಲು ನೀರಿನಲ್ಲಿ ರಾತ್ರಿ ನೆನೆಸಿಡಬೇಕು. ಬೆಳಗ್ಗೆ ಈ ಕಷಾಯವನ್ನು ಶೋಧಿಸಿ ಎರಡು ಪಾಲು ಮಾಡಿ ಒಂದು ಪಾಲನ್ನು ಬೆಳಗ್ಗೆ, ಮತ್ತೊಂದನ್ನು ಸಂಜೆ ಕುಡಿಯಬೇಕು. ಇದನ್ನು ೨-೩ ತಿಂಗಳವರೆಗೆ ಮಾಡಬೇಕು. ಇದರಿಂದ ಮಧುಮೇಹ ಸಮಸ್ಯೆಯಿರುವವರಿಗೆ ಪ್ರಯೋಜನವಾಗುತ್ತದೆ. ಒಂದು ಹಿಡಿ ಬಿಲ್ವಪತ್ರೆ, ಒಂದು ಹಿಡಿ ಬೇವಿನ ಎಲೆ ಮತ್ತು ಅರ್ಧ ಹಿಡಿ ತುಳಸಿ ಎಲೆ ಇವನ್ನು ನೀರು ಸೇರಿಸದೆ ನುಣ್ಣಗೆ ಅರೆದು ಗುಳಿಗೆಗಳಾಗಿ ಮಾಡಿಡಬೇಕು. ಪ್ರತಿ ದಿನ ಬೆಳಗ್ಗೆ ಒಂದು ಗುಳಿಗೆಯನ್ನು ಸ್ವಲ್ಪ ನೀರಿನೊಡನೆ ಸೇವಿಸುತ್ತಿದ್ದರೆ ಮಧುಮೇಹ ಸಮಸ್ಯೆಯಿರುವವರಿಗೆ ಪ್ರಯೋಜನವಾಗುತ್ತದೆ.

ಮಕ್ಕಳ ಸಮಸ್ಯೆಗಳು : ಸಣ್ಣ ಮಕ್ಕಳಲ್ಲಿ ಹಲ್ಲು ಮೂಡುವ ಸಮಯದಲ್ಲಿ ಉಂಟಾಗುವ ಭೇದಿಗಳನ್ನು ತಡೆಗಟ್ಟಲು ಹೀಗೆ ಮಾಡಬೇಕು - ನಾಲ್ಕು ಚಮಚೆಯ ಬಿಲ್ವದ ಹಣ್ಣಿನ ತಿರುಳನ್ನು ಒಂದು ಲೋಟ ನೀರಿಗೆ ಬೆರೆಸಿ ನಿಧಾನವಾಗಿ ಕುದಿಸಬೇಕು. ಅದು ಕಾಲು ಲೋಟವಾದಾಗ ತಣಿಸಿ, ಶೋಧಿಸಿ ಒಂದು ಚಮಚೆ ಜೇನುತುಪ್ಪ ಸೇರಿಸಿ ಮೂರು ಪಾಲು ಮಾಡಿ ಒಂದು ದಿನದಲ್ಲಿ ಕುಡಿಸಬೇಕು. ಬಿಲ್ವಪತ್ರೆಯ ಎಲೆಗಳನ್ನು ನೆರಳಿನಲ್ಲಿ ಒಣಗಿಸಿ ನಂತರ ಹುರಿದು ಚೂರ್ಣ ಮಾಡಬೇಕು. ಅರ್ಧ ಚಮಚೆ ಜೇನುತುಪ್ಪದಲ್ಲಿ ಈ ಚೂರ್ಣವನ್ನು ನಾಲ್ಕು ಚಮಚೆ ಕಲೆಸಿ ಮಕ್ಕಳಿಗೆ ಕೊಟ್ಟರೆ ಶೀತ, ಕೆಮ್ಮು, ಗಂಟಲುನೋವು ನಿವಾರಣೆಯಾಗುತ್ತವೆ.

ಜ್ವರದ ಸಮಸ್ಯೆಗಳು : ಯಾವುದೇ ಬಗೆಯ ಜ್ವರವಿದ್ದಾಗ ಬಿಲ್ವಪತ್ರೆಯ ರಸವನ್ನು ಸ್ವಲ್ಪ ಸ್ವಲ್ಪ ಕುಡಿಯುತ್ತಿದ್ದರೆ ಪ್ರಯೋಜನವಾಗುತ್ತದೆ. ಆಗಾಗ ಕಾಡುವ ಜ್ವರದಿಂದ ಬಳಲುತ್ತಿರುವವರು ಬಿಲ್ವದ ತೊಗಟೆಯ ಕಷಾಯವನ್ನು ದಿನದಲ್ಲಿ ಮೂರು ಬಾರಿ ನಾಲ್ಕು ಚಮಚೆಯಂತೆ ಒಂದು ವಾರದವರೆಗೆ ಸೇವಿಸಬೇಕು. ಮಲೇರಿಯಾ ಸಮಸ್ಯೆ ಇದ್ದಾಗ ಬಿಲ್ವದ ಬೇರಿನ ತೊಗಟೆಯ ಕಷಾಯವನ್ನು ಮಾಡಿ ಕುಡಿಯುತ್ತಿರಬೇಕು. ಮಧ್ಯಭಾರತದ ಬಸ್ತಾರ್‌ನ ಆದಿವಾಸಿಗಳು ಜ್ವರದ ಸಮಸ್ಯೆ ಇದ್ದಾಗ ಬಿಲ್ವದ ಬೇರಿನ ತೊಗಟೆಯ ಕಷಾಯವನ್ನು ಮದ್ದಾಗಿ ಬಳಸುತ್ತಾರೆ. ಸಾಮಾನ್ಯ ಬಗೆಯ ಜ್ವರಗಳಲ್ಲಿ ಬಿಲ್ವದ ಬೇರಿನ ಕಷಾಯವನ್ನು ಕೊತ್ತಂಬರಿ ಪುಡಿಯೊಡನೆ ಸೇವಿಸುತ್ತಿದ್ದರೆ ಪ್ರಯೋಜನವಾಗುತ್ತದೆ.

ಶ್ವಾಸಕೋಶದ ತೊಂದರೆಗಳಿಗೆ ಎಲೆಗಳ ಕಷಾಯ ಒಳ್ಳೆಯದು.

ಸಂಶೋಧನೆಯಲ್ಲಿ ಬಿಲ್ವ :

[ಬದಲಾಯಿಸಿ]

ಬಿಲ್ವದ ರಾಸಾಯನಿಕ ಸಂಯೋಜನೆ : ಮಾರ್ಮೆಲೋಸಿನ್, ಮಾರ್ಮೆಲೈಡ್, ಟ್ಯಾನಿಕ್ ಆಮ್ಲಗಳು, ಮಾರ್ಮಿನ್, ಅಂಬೆಲಿಫೆರೋಲ್, ಸ್ಕಿಮಿಯನೈನ್, ಐಸೋಪಿಂಪಿನೆಲಿನ್, ಮಾರ್ಮೆಲಿನ್, ಸ್ಕಿಮಿನ್, ಮಾರ್ಮೆಸಿನ್, ಮಾರ್ಮೆಸಿನಿನ್, ಕೊಬ್ಬಿನಾಮ್ಲಗಳು ಮತ್ತು ಚಂಚಲತೈಲ. ಬಿಲ್ವದ ಬೇರು ಮತ್ತು ಹಣ್ಣುಗಳಲ್ಲಿ ಕೌಮಾರಿನ್ ಗಳು - ಸ್ಕೊಪರೋನ್, ಸ್ಕೊಪೋಲೆಟಿನ್, ಅಂಬೆಲಿಫೆರೋನ್, ಮಾರ್ಮೆಸಿನ್ ನಂತಹ ರಾಸಾಯನಿಕಗಳಿವೆ. ಬಿಲ್ವದ ಹಣ್ಣಿನಲ್ಲಿ ಮೇಲಿನ ರಾಸಾಯನಿಕಗಳಲ್ಲದೆ ಝ್ಯುಂತೋಟೆಕ್ಸಾಲ್ ಮತ್ತು ಎಜಿಲೈನ್ - ಮಾರ್ಮೆಲೈನ್ - ಮಾರ್ಮೆಲೋಸೈನ್ ನಂತಹ ಆಲ್ಕ್ ಲಾಯ್ಡ್ ಗಳು, ಬೀಟಾಸೈಟೋಸ್ಟೆ ರಾಲ್ ಮತ್ತದರ ಗ್ಲೈಕೋಸೈಡ್, ಲಿನೋಲೆಯಿಕ್ ಆಮ್ಲ , ಗ್ಯಾಲಕ್ ಟೋಸ್, ಅರ್ಯಾಬಿನೋಸ್, ಯುರೋನಿಕ್ ಆಮ್ಲ ಇರುತ್ತದೆ. ಬಿಲ್ವದ ಬೇರಿನಲ್ಲಿ ಸೊರಾಲಿನ್, ಝ್ಯಾಂತೋಟಾಕ್ಸಿನ್, ಎಜೆಲಿನೋಲ್, ಮರ್ಮಿನ್, ಸ್ಕಿಮಿಯಾನೈನ್, ಸ್ಕೋಪೋಲೆಟಿನ್ ನಂತಹ ರಾಸಾಯನಿಕಗಳನ್ನು ಪತ್ತೆಹಚ್ಚಲಾಗಿದೆ.ಬಿಲ್ವದ ಎಲೆಯಲ್ಲಿ ಚಂಚಲ ತೈಲವಿದ್ದು (೦.೬%) ಇದರಲ್ಲಿ ಸ್ಕಿಮಿಯನೈನ್, ಎಜೆಲಿನೋಲ್, ಮಾರ್ಮೆಲೈಡ್, ಫ಼್ಲೋಬಟ್ಯಾನಿನ್, ಸ್ಟೆರಾಲ್, ಎಜೆಲಿನ್, ಆಲ್ಫಾ ಮತ್ತು ಬೀಟಾ ಫೆಲೆಂಡ್ರಿನ್, ಈಥೈಲ್ ಸಿನಮೈಡ್ಗಳು, ಮಾರ್ಮೆಸಿನಿನ್, ರೂಟಿನ್, ಬೀಟಾಸೈಟೋಸ್ಟೆ ರಿನ್ ಇರುತ್ತದೆ.ಬಿಲ್ವದ ಮರದ ತೊಗಟೆಯಲ್ಲಿ ಎಜೆಲಿನ್, ಅಂಬೆಲಿಫೆರೋನ್, ಮಾರ್ಮಿಸಿನ್, ಸ್ಟೆ ರಾಲ್ ಗಳು ಮತ್ತು ಟ್ರೈಟರ್ಪಿನೈಡ್ ಗಳು ಇವೆ.ಬಿಲ್ವದ ಹಣ್ಣಿನ ತಿರುಳಿನಲ್ಲಿ ೬೧.೫% ತೇವಾಂಶ, ೧.೮% ಪ್ರೋಟೀನ್, ೦.೩% ಕೊಬ್ಬು, ೧.೭% ಖನಿಜಗಳು, ೨.೯% ನಾರು, ೩೧.೮% ಕಾರ್ಬೋಹೈಡ್ರೇಟ್, ಕ್ಯಾಲ್ಸಿಯಂ, ರಂಜಕ ಮತ್ತು ಕಬ್ಬಿಣ ಇದೆ. ಕ್ಯಾರೋಟಿನ್, ಥಯಾಮಿನ್, ರೈಬೋವಿನ್, ನಿಯಾಸಿನ್ ಮತ್ತು 'ಸಿ' ಜೀವಸತ್ವ ಇದೆ.

ಬಿಲ್ವದ ಅಂತರಾಳದಲ್ಲಿರುವ ಬೇರೆ ಬೇರೆ ರಾಸಾಯನಿಕಗಳು ಈ ಕೆಳಕಂಡ ವೈದ್ಯಕೀಯ ಲಾಭವನ್ನು ನೀಡುವುದು ಹಲವಾರು ಸಂಶೋಧನೆಗಳಿಂದ ತಿಳಿದುಬಂದಿದೆ. ವೈರಸ್ಗಳನ್ನು ನಿಗ್ರಹಿಸುವುದು, ಹೃದಯದ ಕಾರ್ಯವನ್ನು ಉತ್ತೇಜಿಸುವುದು, ವಾಕರಿಕೆ ಆಗುವುದನ್ನು ತಪ್ಪಿಸುವುದು, ಬ್ಯಾಕ್ಟೀರಿಯಾಗಳನ್ನು ನಾಶಪಡಿಸುವುದು, ಭೇದಿಯಾಗದಂತೆ ನೆರವಾಗುವುದು, ಅಪಾಯಕಾರಿ ಶಿಲೀಂಧ್ರಗಳನ್ನ ನಿಗ್ರಹಿಸುವುದು ಇತ್ಯಾದಿ. ವೈಜ್ಞಾನಿಕವಾಗಿ ನಡೆಸಿದ ಪ್ರಯೋಗಗಳಿಂದ ಬಿಲ್ವದ ಹಣ್ಣಿನ ತಿರುಳು ನಮ್ಮ ಅನ್ನನಾಳದಲ್ಲಿರುವ ಪರೋಪ ಜೀವಿಗಳನ್ನು ನಾಶಪಡಿಸುವುದು ತಿಳಿದುಬಂದಿದೆ. ಅತಿಸಾರ, ಅನಿಯಮಿತ ಭೇದಿ ಮತ್ತು ಹೊಟ್ಟೆ ನೋವನ್ನು ನಿವಾರಿಸುವುದು ಸಹ ತಿಳಿದುಬಂದಿದೆ. ಬಿಲ್ವಪತ್ರೆಯಲ್ಲಿರುವ ಎಜೆಲೈನ್ ಎಂಬ ಆಲ್ಕ್ ಲಾಯ್ಡ್ ಅಸ್ತಮಾ ಸಮಸ್ಯೆಯನ್ನು ಯಶಸ್ವಿಯಾಗಿ ನಿಯಂತ್ರಿಸುವುದು ಗೊತ್ತಾಗಿದೆ.

ಗ್ರಹಣೀ ರೋಗದಲ್ಲಿ ಬಿಲ್ವ : ಗ್ರಹಣೀ ರೋಗವನ್ನು ನಿವಾರಿಸಲು ಬಿಲ್ವವನ್ನು ಕುಟಜ, ಜೀರಿಗೆ, ಬಬ್ಬುಲದೊಂದಿಗೆ ಬಳಸಿ ಪ್ರಯೋಗ ಮಾಡಿ ನೋಡಲಾಗಿದೆ. ಪ್ರಯೋಗದಿಂದ ಇವು ಗ್ರಹಣೀ ರೋಗವನ್ನು ಯಶಸ್ವಿಯಾಗಿ ನಿಯಂತ್ರಿಸುವುದು ತಿಳಿದು ಬಂದಿದೆ.

ಪುರಾಣಗಳಲ್ಲಿ ಬಿಲ್ವ

[ಬದಲಾಯಿಸಿ]

ಭಾರತದಲ್ಲಿ ಕ್ರಿ.ಪೂ. ೨೦೦೦ - ಕ್ರಿಪೂ. ೮೦೦ ರ ನಡುವಿನ ವೇದ ಯುಗದ ಇತಿಹಾಸದಲ್ಲಿ ಬಿಲ್ವದ ಉಲ್ಲೇಖಗಳಿವೆ. ಯಜುರ್ವೇದದಲ್ಲೂ ಬಿಲ್ವದ ಉಲ್ಲೇಖಗಳಿವೆ. ದೇಗುಲಗಳ ಆಸುಪಾಸಿನಲ್ಲೂ ಈ ಮರವನ್ನು ಕಾಣಬಹುದು. ಹಿಂದೂ ಧಾರ್ಮಿಕ ಆಚರಣೆಗಳಲ್ಲಿ ಬಿಲ್ವಕ್ಕೆ ಒಂದು ಪೂಜ್ಯ ಸ್ಥಾನವಿದೆ. ಶಿವನಿಗೆ ಅತ್ಯಂತ ಪ್ರೀತಿಪಾತ್ರವಾದ ಮರವಿದು ಎಂದು ಹೇಳುವ ಹಿಂದು ಧರ್ಮದಲ್ಲಿ , ಇದನ್ನು ಪುಷ್ಠೀಕರಿಸಲು ಅನೇಕ ಪೌರಾಣಿಕ ಕಥೆಗಳಿವೆ. ಪದ್ಮ ಪುರಾಣದಲ್ಲಿ ಬಿಲ್ವ ಮರವನ್ನು ನೆಟ್ಟವನು ಶಿವನನ್ನು ಸಂತುಷ್ಟಗೊಳಿಸುತ್ತಾನೆ ಎಂದಿದೆ.

ವಿದೇಹದ ರಾಜ ವಸುಮಾನ್ ತನ್ನ ರಾಜ್ಯವನ್ನೆಲ್ಲ ಕಳೆದುಕೊಂಡು ನಿರ್ಗತಿಕನಾದ. ಆದರೆ ಈತ ತಿರುವಿಡೈಮರುತ್ತೂರಿನ ದೇಗುಲದ ಬಿಲ್ವದ ವೃಕ್ಷವನ್ನು ಪ್ರದಕ್ಷಿಣೆ ಹಾಕುತ್ತ ಕೊನೆಗೆ ತನ್ನ ರಾಜ್ಯವನ್ನು ಮತ್ತೆ ಗಳಿಸಿಕೊಂಡ.

ಈಶ್ವರನಿಗೆ ಈ ಮರದ ಎಲೆಗಳು ಇಷ್ಟವೆಂಬ ನಂಬಿಕೆ ಇರುವುದರಿಂದ ದೇಗುಲಗಳಲ್ಲಿ ಬಿಲ್ವಾರ್ಚನೆ ಒಂದುಮುಖ್ಯ ಪೂಜ್ಯಾವಿಧಾನವಾಗಿದೆ. ಈ ಮರದ ಕೆಳಗೆ ಈಶ್ವರ ಇದ್ದನೆಂಬ ನಂಬಿಕೆ ಇದೆ. ಈಶ್ವರನಿಗೆ ಬಿಲ್ವದಂಡಿನ್ ಎಂಬ ಹೆಸರು ಇದೆ. ಹೀಗೆಂದರೆ ಬಿಲ್ವವೃಕ್ಷದ ಕೋಲನ್ನು ಹಿಡಿದಿರುವವನು ಎಂದರ್ಥ.

ರಾಜಪುತ ರಾಜರು ದಸರ ಹಬ್ಬದ ಏಳನೆಯ ರಾತ್ರಿ ಬಿಲ್ವ ವೃಕ್ಷಕ್ಕೆ ಆಮಂತ್ರಣ ನೀಡುವ ಸಂಪ್ರದಾಯವಿದೆ. ದಸರ ಹಬ್ಬದ ಒಂದು ವಿಶೇಷ ಕಾರ್ಯಕ್ರಮವಿದು.

ಬಂಗಾಳದಲ್ಲಿ ನಿದ್ದೆಯಲ್ಲಿ ಇರುವ ದುರ್ಗಾದೇವಿಯನ್ನು ದುರ್ಗಾಪೂಜೆಯ ಸಂದರ್ಭದಲ್ಲಿ ಬಿಲ್ವವೃಕ್ಷದ ರೆಂಬೆಯನ್ನು ಬಳಸಿ ಎಚ್ಚರಿಸುತ್ತಾರೆ. ಇದಾದಮೇಲೆ ಎಚ್ಚರಗೊಂಡ ದೇವಿ ಈ ಮರದಲ್ಲೆ ನೆಲೆ ಹೊಂದುತ್ತಾಳೆ ಎಂಬ ಪ್ರತೀತಿ ಇದೆ.

ಬಿಲ್ವದ ಮರದ ಎಲೆಗಳು ಮೂರರ ಗುಂಪಿನಲ್ಲಿರುತ್ತದೆ. ಇದು ಬ್ರಹ್ಮ, ವಿಷ್ಣು, ಮಹೇಶ್ವರರ ಸಂಕೇತವೆಂದು ಭಾವಿಸಲಾಗಿದೆ. ಈ ರೀತಿಯಲ್ಲಿ ವಿಶ್ವದ ಸೃಷ್ಟಿ, ಸ್ಥಿತಿ ಲಯದ ಸಂಕೇತಗಳಿಗೆ ಮಾಡಿದ ಪೂಜೆ ಎಂದು ನಂಬಲಾಗಿದೆ.

ತಂತ್ರ ಸಂಪ್ರದಾಯದ ಪ್ರಕಾರ ಲಕ್ಷ್ಮಿಯು ಒಂದು ಪವಿತ್ರ ಗೋವಿನ ರೀತಿಯಲ್ಲಿ ಜನಿಸಿದ್ದು, ಆಕೆಯ ಸಗಣಿಯಿಂದ ಬಿಲ್ವವು ಸೃಷ್ಟಿಯಾಯಿತು.

ಇದೆ ರೀತಿ ಬಿಲ್ವದ ಬಗ್ಗೆ ಇನ್ನು ಹಲವಾರು ಕಥೆಗಳು ಪ್ರಕಟವಾಗಿವೆ.

ಬೇಟೆಗಾರನ ಭಕ್ತಿ

[ಬದಲಾಯಿಸಿ]

ಹಿಂದೆ ವಾರಣಾಸಿಯಲ್ಲಿ ಒಬ್ಬ ಬೇಟೆಗಾರ ವಾಸವಾಗಿದ್ದ. ಈತನಿಗೆ ದೇವರ ಬಗೆಗೆ ನಂಬಿಕೆ ಇರಲಿಲ್ಲ. ಒಂದು ದಿನ ಈತ ಬೇಟೆಗೆಂದು ಕಾಡಿಗೆ ತೆರಳಿದ. ಒಂದು ಜಿಂಕೆಯನ್ನೂ ಓಡಿಸಿಕೊಂಡು ಕಾಡಿನ ತೀರ ಒಳಭಾಗಕ್ಕೆ ಹೋದ. ಎಷ್ಟು ದೂರ ಹೋದರೂ ಜಿಂಕೆ ಅವನ ಕೈಗೆ ಸಿಗಲೇ ಇಲ್ಲ. ಸಂಜೆಯವರೆಗೂ ಆತ ಜಿಂಕೆಯನ್ನು ಓಡಿಸಿಕೊಂಡು ಹೋಗಿ ಸೋತು ನಿಂತ. ಜಿಂಕೆಯಂತೂ ಅವನ ಕೈಗೆ ಸಿಗಲೇ ಇಲ್ಲ. ಅಷ್ಟರಲ್ಲಿ ಕತ್ತಲು ಆವರಿಸಿತ್ತು. ಹಸಿವೆಯಿಂದ ಬಳಲಿದ್ದ ಆತ ವಿಶ್ರಾಂತಿಗೆಂದು ಒಂದು ಬಿಲ್ವದ ವೃಕ್ಷವನ್ನು ಏರಿದ. ಮಲಗಲು ಸಿದ್ಧನಾಗುತ್ತಿರಲು ಕೊಂಬೆಗಳಿಂದ ಎಲೆಗಳುದುರಿ ಕೆಳಗೆ ಬಿದ್ದ್ದವು. ಮರದ ಬುಡದಲ್ಲೊಂದು ಶಿವಲಿಂಗವಿತ್ತು. ಆ ಶಿವಲಿಂಗದ ಮೇಲೆ ಒಂದೊಂದೇ ಬಿಲ್ವಪತ್ರೆ ಬೀಳತೊಡಗಿತು. ಅತಿಯಾದ ಆಯಾಸದಿಂದ ಅವನ ಮೈ ಬೆವರುತ್ತಿತ್ತು. ಈ ಹನಿಗಳು ಲಿಂಗದ ಮೇಲೆ ಬಿದ್ದವು. ಅದು ಫಲ್ಗುಣಮಾಸದ ಹದಿನಾಲ್ಕನೆಯ ದಿನ. ಅಂದರೆ ಶಿವನಿಗೆ ಅರ್ಚಿಸಲು ಪವಿತ್ರವಾದ ದಿನ. ಇದರಿಂದ ಶಿವನಿಗೆ ತೃಪ್ತಿಯಾಗಿ , ಬೇಟೆ ಗಾರನ ಮರಣಾನಂತರ ವೈಕುಂಠವನ್ನು ಸೇರಿದ.

ಆಧಾರ ಗ್ರಂಥಗಳು

[ಬದಲಾಯಿಸಿ]

೧ ವನಸಿರಿ: ಅಜ್ಜಂಪುರ ಕೃಷ್ಣಸ್ವಾಮಿ ೨ ಗಿಡಮೂಲಿಕೆಗಳು