ಮಹಾರಾಷ್ಟ್ರದ ಅಷ್ಟ ವಿನಾಯಕ ಕ್ಷೇತ್ರಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಿತ್ರ:Ashta vinayak.jpg
'ಮಹಾರಾಷ್ಟ್ರದ ಅಷ್ಟವಿನಾಯಕ ಮೂರ್ತಿಗಳು'

ಮಹಾರಾಷ್ಟ್ರದ ಅಷ್ಟವಿನಾಯಕ ಕ್ಷೇತ್ರಗಳು ಗಣೇಶನಿಗೆ ಅರ್ಪಿತವಾದ ಮಹಾರಾಷ್ಟ್ರ ರಾಜ್ಯದ ೮ ಕ್ಷೇತ್ರಗಳು. ಇವಲ್ಲಿ ಕೆಲವು ಪುರಾತನ ದೇವಾಲಯಗಳು, ಉಳಿದವುಗಳನ್ನು ಮಾಧವರಾವ್ ಪೇಷ್ವೆಯವರ ಕಾಲದಲ್ಲಿ ಜೀರ್ಣೋದ್ಧಾರ ಮಾಡಿ ಪುನರ್ ನಿರ್ಮಿಸಲಾಗಿದೆ. ಅಷ್ಟವಿನಾಯಕನ ಪ್ರತಿಮೆಗಳು ಸ್ವಯಂಭು. ಅಷ್ಟವಿನಾಯಕನ ದರ್ಶನಮಾಡಲು ಒಂದು ವಿಧಿವತ್ತಾಗಿ ಹೋಗಬೇಕು. ಇದನ್ನು ಪುರಾಣದಲ್ಲಿ ನಿರೂಪಿಸಲಾಗಿದೆ. ಶ್ಲೋಕದಲ್ಲಿ ಹೇಳಿರುವಂತೆ, ಮೋರೆಗಾಂವ್, ತೇವೂರ್, ಸಿದ್ಧಟೇಕ್, ರಾಜನ್ಗಾಂವ್, ಲೆನ್ಯಾದ್ರಿ, ಓಜಾರ್, ಪಾಲಿ, ಮತ್ತು ಮಹಾಡ್ ಕೊನೆಯಲ್ಲಿ ಬರುತ್ತವೆ.

ಮೋರೆಗಾಂವ್‍ನ ಮಯೂರೇಶ್ವರ್[ಬದಲಾಯಿಸಿ]

ಪುಣೆ ಜಿಲ್ಲೆಯ ಬಾರಾಮತಿ ತಾಲ್ಲೂಕಿನ ಕೃಷ್ಣಾ ನದಿಯ ದಂಡೆಯಮೇಲೆ ಕಟ್ಟಿರುವ ಈ ದೇವಾಲಯ. ಪುರಾಣದ ಪ್ರಕಾರ ಗೌರಿ ಪುತ್ರನಾದ ಗಣಪತಿಯು ಮಯೂರ ವಾಹನವನ್ನೇರಿ ಈ ಸ್ಥಳಕ್ಕೆ ಬಂದು ಇಲ್ಲೇ ಸಿಂಧುರಾಸುರ ನೆಂಬ ರಾಕ್ಷಸನನ್ನು ಸಂಹಾರ ಮಾಡಿದ್ದಾನೆ.

ಪೌರಾಣಿಕ ಪ್ರಸಂಗಗಳ ಪ್ರಕಾರ ಸಿಂಧುರಾಸುರನು ಪದೇ ಪದೇ ಇಲ್ಲಿನ ಗಣೇಶ ವಿಗ್ರಹದ ಮೇಲೆ ದಾಳಿ ಮಾಡಲು, ಸ್ವತಃ ಬ್ರಹ್ಮನೇ ಆ ವಿಗ್ರಹವನ್ನು ಮತ್ತೆ ಮತ್ತೆ ಪ್ರತಿಷ್ಠಾಪಿಸುತ್ತಿದ್ದನಂತೆ. ಬ್ರಹ್ಮ ದೇವರಿಂದ ಪ್ರತಿಷ್ಠಿತವಾಗಿದ್ದ ಆ ವಿಗ್ರಹ ವಜ್ರ ಮುಂತಾದ ಹರಳುಗಳಿಂದ ಮಾಡಲಾಗಿತ್ತೆಂದು, ಪಾಂಡವರು ತಮ್ಮ ವನವಾಸ ಕಾಲದಲ್ಲಿ ಇಲ್ಲಿಗೆ ಭೇಟಿ ಇತ್ತು ಆ ವಿಗ್ರಹವನ್ನು ತಾಮ್ರದ (copper) ಹೊದಿಕೆಯಿಂದ ಸಂರಕ್ಷಿಸಿದ್ದರೆಂದು, ಈಗಿರುವ ಮೂಲ ವಿಗ್ರಹದ ಹಿಂದುಗಡೆ ಆ ವಿಗ್ರಹ ಸುರಕ್ಷಿತವಾಗಿ ಈಗಲೂ ಇದೆಯೆಂದು ನಂಬಲಾಗಿದೆ.

ಗಣೇಶ ಮಂದಿರಗಳ ಎದುರಿಗೆ ಸಾಮಾನ್ಯವಾಗಿ ಮೂಷಿಕ ವಿಗ್ರಹಗಳನ್ನು ನೋಡಿರುತ್ತೇವೆ. ಆದರೆ ಇಲ್ಲಿನ ಗಣೇಶ ಮಂದಿರದ ಎದುರಿಗಿನ ನಂದಿ ವಿಗ್ರಹಕ್ಕೆ ಸೂಕ್ಷ್ಮ ಐತಿಹ್ಯವೇನು ಇಲ್ಲ. ಎಲ್ಲೋ ನಿರ್ಮಿಸುತ್ತಿದ್ದ ಶಿವ ದೇವಾಲಯಕ್ಕೆ ನಂದಿಯ ವಿಗ್ರಹವನ್ನು ಗಾಡಿಯಲ್ಲಿ ಕೊಂಡೊಯ್ಯುತ್ತಿರಲು ಆ ಗಾಡಿಯು ಈಗಿನ ದೇವಸ್ಥಾನದ ಮುಂದೆ ಮುರಿದು ಬಿದ್ದು ನಂದಿಯು ಕೆಳಗೆ ಬೀಳಲು, ಅನಂತರ ಅದನ್ನು ಯಾರಿಂದಲೂ ಕದಲಿಸಲು ಸಾಧ್ಯವಾಗದೆ ಅಲ್ಲೇ ಈಗಿರುವಂತೆಯೇ ನಂದಿ ವಿಗ್ರಹವನ್ನು ಬಿಟ್ಟು ಬಿಡಲಾಗಿದೆ.ದೇವಸ್ಥಾನದ ಮೇಲೆ ಪದೇ ಪದೇ ನಡೆಯುತ್ತಿದ ಮೊಘಲರ ಆಕ್ರಮಣವನ್ನು ಎದುರಿಸುವ ಸಲುವಾಗಿಯೇ ಈಗಿರುವ ಹಾಗೆ ಬಲಶಾಲಿಯಾದ ಹಾಗು ಎತ್ತರವಾದ ತಡೆಗೋಡೆಗಳನ್ನು ನಿರ್ಮಿಸಿರುವುದು. ಈಗಿನ ದೇವಳದ ನಿರ್ಮಾತೃಗಳು ಬೀದರ್ ಸುಲ್ತಾನರ ಆಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧ ಘೋಳೆ ಎಂಬುವರು.ಸ್ಥಳೀಯ ಭಾಷೆಯಾದ ಮರಾಠಿಯಲ್ಲಿ ಮೋರ್ ಎಂದರೆ ನವಿಲು ಎಂದರ್ಥ. ಈ ಗ್ರಾಮವು ನವಿಲಿನ ಆಕಾರದಲ್ಲಿರುವುದರಿಂದಲೂ ಮತ್ತು ಹಿಂದೊಮ್ಮೆ ಈ ಸ್ಥಳದಲ್ಲಿ ನವಿಲುಗಳ ಸಂಖ್ಯೆ ಹೆಚ್ಚಾಗಿದ್ದರಿಂದಲೂ ಈ ಗ್ರಾಮಕ್ಕೆ ಮೊರೆಗಾವ್ ಎಂಬ ಹೆಸರು ಬಂದಿರಬಹುದೆಂದು ಊಹಿಸಲಾಗಿದೆ.

ಥೆವೋರ್ ನ ಶ್ರೀ ಚಿಂತಾಮಣಿ[ಬದಲಾಯಿಸಿ]

ಪುಣೆ ಜಿಲ್ಲೆಯ ಹವೇಲಿ ತಾಲೂಕಿನಲ್ಲಿ ಈ ಕ್ಷೇತ್ರವಿದೆ. ತನ್ನ ಚಂಚಲ ಮನಸ್ಸನ್ನು ಪ್ರಶಾಂತಗೊಳಿಸಲು ಬ್ರಹ್ಮ ದೇವರು, ಇಲ್ಲಿ ತಪಸ್ಸನ್ನು ಮಾಡಿದರಂತೆ. ಚಿಂತೆಗಳು ಮಾಯವಾದದ್ದರಿಂದ, ಮೂರ್ತಿಗೆ ಚಿಂತಾಮಣಿ ಎಂಬ ಹೆಸರು ಬಂತು. ಈ ಜಾಗವು ತೇವೂರ್ ಕುದುರೆ ಲಾಯಗಳ ಪ್ರದೇಶವೆನ್ನುತ್ತಾರೆ.

ಇನ್ನೊಂದು ಐತಿಹ್ಯದ ಪ್ರಕಾರ ಪೌರಾಣಿಕ ಕಥನವೊಂದು ಹೀಗಿದೆ.

ತ್ರೇತಾಯುಗದಲ್ಲಿ ರಾಜ ಅಭಿಜೀತ ಮತ್ತು ರಾಣಿ ಗುಣವತಿ ಎಂಬ ರಾಜ ದಂಪತಿಗಳಿಗೆ ವಿವಾಹವಾಗಿ ಅನೇಕ ವರ್ಷಗಳ ಕಾಲ ಸಂತಾನವಿಲ್ಲದೆ ಸಂಕಟಕ್ಕೀಡಾಗಿದ್ದರು. ಮುಂದೆ ಈ ದಂಪತಿಗಳ ವೈಶಂಪಾಯನ ಮಹರ್ಷಿಗಳ ಸೇವೆಗೆ ಪ್ರತಿಫಲವಾಗಿ ಗಂಡು ಮಗುವಾಗಿ, ಆ ಮಗುವಿಗೆ "ಗಣ" ಎಂದು ಹೆಸರಿಡಲಾಯಿತು. ಮುಂದೆ ಅ ಬಾಲಕನು ಬೆಳೆದು ದೊಡ್ಡವನಾಗಿ ತಂದೆಯಿಂದ ಬಂದ ರಾಜ್ಯವನಾಳುತ್ತ ಗಣರಾಜನೆಂದೆ ಖ್ಯಾತನಾಗಿರಲು, ಒಮ್ಮೆ ರಾಜ ಕಾರ್ಯಾರ್ಥವಾಗಿ(ಬೇಟೆಗಾಗಿ) ಅಡವಿಯಲ್ಲಿ ಸಂಚರಿಸುತ್ತಿರಬೇಕಾದರೆ ಕಪಿಲ ಮಹರ್ಷಿಗಳ ಆಶ್ರಮವು ಈ ಗಣರಾಜನಿಗೆ ಎದುರಾಯಿತು, ಆಗ ತನ್ನ ಸೇನಾ ಪರಿವಾರ ಸಮೇತನಾಗಿ ಗಣರಾಜನು ಕಪಿಲ ಮಹರ್ಷಿಗಳ ಆಶ್ರಮದಲ್ಲಿ ಕೆಲ ಕಾಲ ವಿಶ್ರಮಿಸಲು, ಬಡ ಸಾಧುವಾದ ಕಪಿಲ ಮಹರ್ಷಿಗಳು ರಾಜನಿಗೆ ತಕ್ಕ ಮರ್ಯಾದೆಯಿಂದ ಅಲ್ಪ ಸಮಯದಲ್ಲಿ ಬಾರಿ ಭೋಜನ ಕೂಟವನ್ನು ಏರ್ಪಡಿಸಿ, ರಾಜ ಪರಿವಾರಕ್ಕೆ ಯಾವ ವಿಷಯದಲ್ಲೂ ಕುಂದು ಉಂಟಾಗದಂತೆ ಆತಿಥ್ಯ ನೀಡುತ್ತಿರಲು ಗಣರಾಜನಿಗೆ ಅನುಮಾನ ಆರಂಭವಾಯಿತು. ಈ ಸಾಧುವಾದರು ಕಾಡು ಮೇಡು ಅಲೆದು ಯಜ್ಞಯಾಗದಿಗಳಲ್ಲೇ ತಮ್ಮ ಜೀವನದ ಬಹು ಕಾಲ ಕಳೆಯುವಂತಹವರು, ಇಂತಹವರು ಅರಮನೆಯು ನಾಚುವಂತಹ, ರಾಜ ನಳತಜ್ಞರು ತಿಳಿಯದ ಇಂತಹ ಉತ್ಕೃಷ್ಟ ಭೋಜನ ಕೂಟ ಏರ್ಪಡಿಸಲು ಸಾಧ್ಯವಾಗಿದ್ದು ಹೇಗೆ? ಎಂದು ಅದರ ಹಿಂದಿನ ರಹಸ್ಯ ಕೆದಕಲು ಮುಂದಾದಾಗ ಅವನಿಗೆ ತಿಳಿಯುವುದು ಇದೆಲ್ಲ ಆ ಕಪಿಲ ಮಹರ್ಷಿಗಳಲ್ಲಿರುವ 'ಚಿಂತಾಮಣಿ' ಎಂಬ ಮಣಿಯ ಪ್ರಭಾವದಿಂದ ಎಂದು. ಕಪಿಲ ಮಹರ್ಷಿಗಳಿಗೆ ಯಾವ ಸಮಯದಲ್ಲೂ ಯಾವ ಕಾರ್ಯಗಳಿಗೂ ತೊಡಕಾಗದಿರಲಿ ಎಂದು ಸ್ವತಃ ದೇವೆಂದ್ರನೆ ಆ ಮಣಿಯನ್ನು ಅವರಿಗೆ ಕೊಟ್ಟಿರುತ್ತಾನೆ. ಇದರ ಸಂಪೂರ್ಣ ಹಿನ್ನೆಲೆಯರಿತ ಗಣರಾಜನು ಆ ಮಣಿಯು ತನಗೆ ಬೇಕೆಂದು, ಹಾಗೂ ರಾಜ್ಯದ ಗಡಿಯೊಳಗೆ ಯಾವುದೇ ವಸ್ತುವಿದ್ದರು ಅವೆಲ್ಲವೂ ರಾಜನಿಗೆ ಸೇರಿದ್ದವೆಂದು ಮುನಿಗಳೊಂದಿಗೆ ವಾಗ್ವಾದ ಮಾಡುತ್ತಾನೆ. ಮುನಿಗಳು ಆ ಅಮೂಲ್ಯವಾದ ಮಣಿಯನ್ನು ಕೊಡಲು ನಿರಾಕರಿಸಿದಾಗ ಗಣರಾಜನು ಬಲವಂತವಾಗಿ ಆ ಮಣಿಯನ್ನು ಮುನಿಗಳಿಂದ ಕಿತ್ತೊಯ್ಯುತ್ತಾನೆ.

ಸಾಧು ಸ್ವಭಾವದವರಾದ ಕಪಿಲ ಮಹರ್ಷಿಗಳು ಈ ಘಟನೆಯಿಂದ ಬಹಳವಾಗಿ ನೊಂದುಕೊಂಡರೂ ಗಣರಾಜನಿಗೆ ಶಾಪ ಕೊಡಲಿಲ್ಲ. ಬದಲಾಗಿ ದೇವಿ ದುರ್ಗೆಯಲ್ಲಿ ತಮಗೊದಗಿದ ಆಪತ್ತನ್ನು ತೋಡಿಕೊಳ್ಳಲು, ದೇವಿ ದುರ್ಗೆ ಕಪಿಲರಿಗೆ ಗಣಪತಿಯನ್ನು ಆರಾಧಿಸುವಂತೆ ಸಲಹೆ ಕೊಡುತ್ತಾಳೆ. ದುರ್ಗೆಯ ಸಲಹೆಯ ಮೇರೆಗೆ ಗಣಪತಿಯನ್ನು ಆರಾಧಿಸಿದ ಕಪಿಲರು ಅವನ ಕಟಾಕ್ಷವನ್ನು ಪಡೆಯುವಲ್ಲಿ ಸಫಲರಾಗುತ್ತಾರೆ. ಗಣಪತಿಯು ಕಪಿಲರಲ್ಲಿ ಚಿಂತಾಮಣಿಯನ್ನು ತಾನು ಮರಳಿ ತರುವುದಾಗಿ ಭರವಸೆ ಕೊಡುತ್ತಾನೆ, ಆಗ ಗಣಪತಿಯು ಗಣರಾಜನೊಂದಿಗೆ ನೇರ ಯುದ್ಧಕ್ಕಿಳಿಯುತ್ತಾನೆ. ಈ ಕಾಳಗದಲ್ಲಿ ಗಣಪತಿಯು ಗಣರಾಜನನ್ನು ಒಂದು ಕದಂಬ ವೃಕ್ಷದ ಕೆಳಗೆ ತನ್ನ ಪರಶುವಿನಿಂದ ಸಂಹರಿಸುತ್ತಾನೆ.ಚಿಂತಾಮಣಿಯನ್ನು ಕಪಿಲರಿಗೆ ಮರಳಿಸಿದಾಗ ಕಪಿಲರು ಅದನ್ನು ತಾವು ಇರಿಸಿಕೊಳ್ಳದೆ ಗಣಪತಿಯ ಕೊರಳಲ್ಲಿಯೇ ಇಟ್ಟು ಪೂಜಿಸುತ್ತಾರೆ. ಅಂದಿನಿಂದ ಆ ಕ್ಷೇತ್ರ ಕದಂಬ ತೀರ್ಥ ಅಥವಾ ಕದಂಬ ಪುರಿ ಅಥವಾ ಚಿಂತಾಮಣಿ ಎಂದೇ ಪ್ರಸಿದ್ಧವಾಗಿದೆ.

ಈಗಿನ ದೇವಸ್ಥಾನದ ಗರ್ಭಗುಡಿಯನ್ನು ಶ್ರೀ ಮೊರೆಯ ಗೋಸಾವಿ ಅವರ ವಂಶಸ್ಥರಾದ ಧರಣೀಧರ್ ಮಹಾರಾಜ್ ದೇವ್ ಎಂಬುವರು ಕಟ್ಟಿಸಿರಬಹುದು ಎಂದು ಊಹಿಸಲಾಗಿದೆ.ಸುಮಾರು ಇದರ ನಿರ್ಮಾಣದ ನೂರು ವರ್ಷಗಳ ನಂತರ ಶ್ರೀಮಂತ ಮಾಧವರಾವ್(1) ಪೇಶ್ವೆ ದೇವಸ್ಥಾನದ ಹೊರಭಾಗದ ಕಟ್ಟಿಗೆಯ ಪಡಸಾಲೆ ನಿರ್ಮಾಣ ಮಾಡಿದ್ದಾರೆ.

ಥೆವೋರ್ ನ ಈ ಚಿಂತಾಮಣಿಯೇ ಮರಾಠ ದೊರೆಗಳಲ್ಲಿ ಪ್ರಸಿದ್ಧನಾಗಿದ್ದ ಮಾಧವರಾವ್(1) ಪೇಶ್ವೆಯ ಮನೆ ದೈವವಾಗಿತ್ತು. ಕ್ಷಯ ರೋಗದಿಂದ ಬಳಲುತ್ತಿದ್ದ ಮಾಧವರಾವ್(1) ಪೇಶ್ವೆ ಇದೇ ಮಂದಿರದಲ್ಲಿ 18 ನವೆಂಬರ್ 1772 ರಲ್ಲಿ ದೇಹತ್ಯಾಗ ಮಾಡಿರಬಹುದು ಎಂದು ಇತಿಹಾಸ ತಜ್ಞರು ಊಹಿಸಿದ್ದಾರೆ.

ಸಿದ್ಧಟೇಕ್‍ ನ, ಶ್ರೀ ಸಿದ್ಧಿವಿನಾಯಕ್[ಬದಲಾಯಿಸಿ]

ನಗರ್ ಜಿಲ್ಲೆಯ ಕರ್ಜತ್ ತಾಲೂಕಿನಲ್ಲಿ ಈ ದೇವಾಲಯವಿದೆ. ಭಗವಾನ್ ಮಹಾ ವಿಷ್ಣುವು ಭುವಿಯಲ್ಲಿ ಅವತರಿಸಿ ಮಧು ಮತ್ತು ಕೈಠಭ ರೆಂಬ ರಾಕ್ಷಸರನ್ನು(ಇವರಿಬ್ಬರು ಬ್ರಹ್ಮ ದೇವರ ಸೃಷ್ಟಿ ಕಾರ್ಯವನ್ನು ಹಾಳುಗೆಡವಲು ಸಂಚು ರೂಪಿಸಿದ್ದ ಅಸುರರು - ಮುದ್ಗಳ ಪುರಾಣದಿಂದ) ಸಂಹರಿಸುವ ಮುನ್ನ ಇದೇ ಸ್ಥಾನದಲ್ಲಿ ಇದ್ದು ಗಣೇಶನನ್ನು ಆರಾಧಿಸಿ ಅವನನ್ನು ಪ್ರಸನ್ನ ಗೊಳಿಸಿ ಸಿದ್ಧಿಯನ್ನು ಪಡೆದನು ಮತ್ತು ಅದರ ಫಲವಾಗಿ ಆ ಇಬ್ಬರು ರಾಕ್ಷಸರನ್ನು ನಿರಾಯಾಸವಾಗಿ ಸಂಹರಿಸಿದನು ಎಂಬ ಪ್ರತೀತಿ ಇದೆ. ಇಲ್ಲಿನ ವಿನಾಯಕನಿಗಾಗಿ ಸ್ವತಃ ಮಹಾವಿಷ್ಣುವೇ ದೇವಾಲಯವನ್ನು ನಿರ್ಮಿಸಿದ್ದನೆಂದು ಹಾಗು ಕಾಲ ಕ್ರಮೇಣ ಆ ದೇಗುಲ ನಶಿಸಿ ಈಗಿನ ದೇವಳವನ್ನು ಇಂದೋರಿನ ರಾಣಿ ಅಹಲ್ಯಾಭಾಯಿ ಹೋಳ್ಕರ್ ರವರ ನೇತೃತ್ವದಲ್ಲಿ ನಿರ್ಮಿಸಲಾಗಿದೆ.

ಆಗಿನ ಮರಾಠ ದೇಶದ ಸುಪ್ರಸಿದ್ದ ಸಂತರುಗಳಾದ ಮೊರೆಯ ಗೋಸಾವಿ ಮತ್ತು ನಾರಾಯಣ ಮಹಾರಾಜರಿಗೆ ಇದೇ ಕ್ಷೇತ್ರದಲ್ಲಿ ಜ್ನಾನೋದಯವಾಯಿತೆಂದು ನಂಬಲಾಗಿದೆ. ಇಲ್ಲಿರುವ ಗಣೇಶ ವಿಗ್ರಹಕ್ಕೆ ಉದರವು ಡೊಳ್ಳಾಗಿರದೆ ಸಾಮಾನ್ಯವಾಗಿರುವುದು ಮುಖ್ಯವಾದ ಸೋಜಿಗದ ಸಂಗತಿ.

ರಾಂಜಣಗಾವ್ ‍ನ, ಶ್ರೀ ಮಹಾಗಣ್ಪತಿ[ಬದಲಾಯಿಸಿ]

ಪುಣೆ ತಾಲೂಕಿನ ಶಿರೂರ್‍ನಲ್ಲಿದೆ ಈ ಕ್ಷೇತ್ರ. ಅನಾದಿ ಕಾಲದಲ್ಲಿ ಭೂಮಂಡಲವನ್ನು ನಡುಗಿಸುತ್ತಿದ್ದ ರಾಕ್ಷಸರು ತ್ರಿಪುರಾಸುರರು.ತ್ರಿಪುರಾಸುರರು ತಾರಕಾಸುರನೆಂಬ ರಾಕ್ಷಸನಿಗೆ ಜನಿಸಿದವರು ಈ ಸಹೋದರರು ಭೂಮಂಡಲದಲ್ಲಿ ಅಜೇಯರಾಗಿ ಅಮರರಾಗಲು ಹೂಡಿದ ಉಪಾಯವೆಂದರೆ ಬ್ರಹ್ಮ ದೇವನ ಕುರಿತು ಕಠಿಣ ತಪಸ್ಸು ಮಾಡಿ, ಅದರ ಫಲವಾಗಿ ಈ ಲೋಕದಲ್ಲಿ ಯಾರು ಕೇಳಿರದಂತಹ ಹಾಗು ಬಹುಕಾಲ ಯಾವ ಅಡ್ಡಿ ಆತಂಕಗಳು ತಮ್ಮ ಕಾರ್ಯಗಳಿಗೆ ಬರದಿರುವಂತಹ ವರವನ್ನು ಕೇಳಲು, ಬ್ರಹ್ಮ ದೇವನು ತಥಾಸ್ತು ಎಂದು ಬಿಟ್ಟನು. ಅವರು ಕೇಳಿದ ವರಗಳಲ್ಲಿ ಚಿನ್ನ, ಬೆಳ್ಳಿ ಮತ್ತು ಹಿತ್ತಾಳೆಯ ಕೋಟೆಗಳು ಸೇರಿದ್ದವು. ತ್ರಿಪುರಾಸುರರು ಆ ಮೂರು ಕೋಟೆಗಳಲ್ಲಿ ತಾವು ಯಾವುದೇ ಆತಂಕಗಳಿಲ್ಲದೆ ಸಾವಿರಾರು ವರ್ಷ ಬದುಕಿರಬೇಕೆಂದು, ಹಾಗು ಆ ಮೂರೂ ಕೋಟೆಗಳು ಒಂದೇ ರೇಖೆಯಲ್ಲಿರುವವರೆಗೂ ತಮಗೆ ಯಾವ ಆಪತ್ತು ಬಾರದಿರಲಿ ಎಂದು ವರವನ್ನು ಬೇಡಿರುತ್ತಾರೆ.ಸಾಲದ್ದಕ್ಕೆ ಆ ಮೂರು ಕೋಟೆಗಳು ಇದ್ದದ್ದೇ ಮೂರು ಲೋಕದಲ್ಲಿ. ಚಿನ್ನದ ಕೋಟೆ ಸ್ವರ್ಗದಲ್ಲಿದ್ದರೆ, ಬೆಳ್ಳಿಯದು ಆಕಾಶದಲ್ಲೂ ಮತ್ತು ಹಿತ್ತಾಳೆಯದ್ದು ಭೂಮಿಯಲ್ಲೂ ಇತ್ತು.ಕೋಟೆಗಳು ಕೈಗೆ ಸಿಕ್ಕ ಕ್ಷಣ ಮಾತ್ರದಲ್ಲಿ ಈ ರಾಕ್ಷಸ ಸೋದರರ ಅಹಂಕಾರದ ಕಟ್ಟೆಯೊಡೆಯಿತು.ಹುಚ್ಚುತನ ಮೇರೆ ಮೀರಿ ಭೂಮಂಡಲವನ್ನು ಅಲ್ಲೋಲ ಕಲ್ಲೊಲವೆಬ್ಬಿಸುವ ಮಟ್ಟಕ್ಕೆ ತಮ್ಮ ಸೊಕ್ಕಿನಾಟಗಳನ್ನು ಪ್ರದರ್ಶಿಸಲು, ದೇವಾದಿ ದೇವತೆಗಳು ಗಾಬರಿಗೊಂಡು ತಮ್ಮ ಉಳಿವಿಗಾಗಿ ಪರಮೇಶ್ವರನಲ್ಲಿ ಮೊರೆ ಇಟ್ಟರು.

ಶಿವನು ಸಾಮಾನ್ಯವಾಗಿ ತನ್ನ ವಾಹನ ನಂದಿಯನ್ನೇರಿ ಸಂಚಾರ ಮಾಡುತ್ತಾನೆ. ಆದರೆ ಇದು ಲೋಕ ಕಲ್ಯಾಣ ಕಾರ್ಯವಾದ್ದರಿಂದ ಸ್ವತಹ ಬ್ರಹ್ಮ ದೇವನೇ ಶಿವನಿಗೆ ಒಂದು ರಥವನ್ನು ಕೊಡಮಾಡುತ್ತಾನೆ. ಆ ರಥವೇರಿ ತ್ರಿಪುರದ ಕಡೆಗೆ ನುಗ್ಗುವ ಮೊದಲು ದೇವರ್ಷಿ ನಾರದರ ಸಲಹೆಯಂತೆ ಶಿವನು ವಿನಾಯಕನನ್ನು ಈ ಕ್ಷೇತ್ರದಲ್ಲಿ ಪೂಜಿಸಲು, ವಿನಾಯಕನು ಪ್ರಸನ್ನನಾಗಿ ಯುದ್ದದಲ್ಲಿ ಶಿವನು ನಿರಾಯಾಸವಾಗಿ ರಕ್ಕಸರ ಸಂಹಾರ ಮಾಡುವಲ್ಲಿ ವಿಘ್ನಗಳನ್ನು ಮೆಟ್ಟಿ ನಿಂತ ಎಂದು ಉಲ್ಲೇಖಿಸಲಾಗಿದೆ.ತ್ರಿಪುರಾಸುರನ ವಧೆಮಾಡಿದ್ದು ಗಣಪತಿಯ ಅನುಗ್ರಹವಾದಮೇಲೆ, ಶಿವಶಂಕರನಿಗೆ, ತ್ರಿಪುರಾರಿ ಎಂಬ ಹೆಸರು ಬಂತು.

ಓಜಾರ್ ‍ನ, ಶ್ರೀ ವಿಘ್ನೇಶ್ವರ್[ಬದಲಾಯಿಸಿ]

ಪುಣೆ ಜಿಲ್ಲೆಯ ಜುನ್ನಾರ್‍ನ ದೇವಾಲಯವಿದು. ಕುಕಡಿ ನದಿಯ ದಡದ ಮೇಲೆ ಸ್ಥಾಪಿತವಾಗಿದೆ.

ರಾಜ ಅಭಿನಂದನ ಎಂಬ ಅರಸನಿಂದ ನಡೆಯುತ್ತಿದ್ದ ಯಾಗ ಕಾರ್ಯಗಳನ್ನು ತಪ್ಪಿಸುವ ಸಲುವಾಗಿ ದೇವತೆಗಳ ರಾಜನಾದ ಇಂದ್ರ ಉಪಾಯವೊಂದನ್ನು ಹೂಡುತ್ತಾನೆ. ವಿಘ್ನಾಸುರ ಎಂಬ ರಾಕ್ಷಸನನ್ನು ಸೃಷ್ಟಿಸಿ ಅವನಿಂದ ಅಭಿನಂದನನ ಯಾಗವನ್ನು ಹಾಳು ಮಾಡುವಂತೆ ಪ್ರಚೋದಿಸುತ್ತಾನೆ. ಆಗ ಯಾಗ ಶಾಲೆಗೆ ನುಗ್ಗಿದ ವಿಘ್ನಾಸುರ ಯಾಗವನ್ನು ಮಾತ್ರ ಹಾಳು ಮಾಡುವುದು ಬಿಟ್ಟು ಇನ್ನೂ ಮುಂದುವರಿದು ಅಲ್ಲಿ ಧರ್ಮ ಕಾರ್ಯಾರ್ಥವಾಗಿ ಸಂಗ್ರಹಿಸಲಾಗಿದ್ದ ವಸ್ತುಗಳನ್ನು, ಧಾರ್ಮಿಕ ಗ್ರಂಥಗಳನ್ನು ಹಾಗು ಇನ್ನು ಮುಂತಾದ ಅನಾಹುತಗಳನ್ನು ಮಾಡಿಬಿಡುತ್ತಾನೆ.ಇದರಿಂದ ಬಾರಿ ಕಳವಳಕ್ಕೀಡಾದ ಯಾಗ ಶಾಲೆಯ ಋಷಿಮುನಿಗಳು, ವಿದ್ವಾಂಸರು, ರಾಜ ಪುರೋಹಿತರು, ಗುರುಪೀಠವನ್ನು ಅಲಂಕರಿಸಿದವರು, ಸಾಮಾನ್ಯರು ಎಲ್ಲರೂ ಗಣಪತಿಯ ಮೊರೆ ಹೋಗುತ್ತಾರೆ. ಸರ್ವರ ಭಿನ್ನಹವನ್ನಾಲಿಸಿದ ಗಣಪತಿಯು ವಿಘ್ನಾಸುರನೊಂದಿಗೆ ಹೋರಾಡಿ ಅವನನ್ನು ಮಣಿಸುತ್ತಾನೆ. ಕಾಳಗ ಮಧ್ಯದಲ್ಲಿಯೆ ಸೋಲನ್ನು ಒಪ್ಪಿಕೊಂಡ ವಿಘ್ನಾಸುರನು ಗಣಪತಿಯಲ್ಲಿ ಕ್ಷಮೆ ಯಾಚಿಸುತ್ತಾನೆ. ಕ್ಷಮೆಗೆ ಓಗೊಟ್ಟ ಗಣಪತಿಯು ಇನ್ನು ಮುಂದೆ ತನ್ನ ಪೂಜೆ ನಡೆಯುವ ಜಾಗಗಳಲ್ಲಿ ವಿಘ್ನಾಸುರನಿಗೆ ನಿರ್ಬಂಧ ಹೇರುತ್ತಾನೆ. ಆಗ ವಿಘ್ನಾಸುರನು ತನ್ನ ಹೆಸರನ್ನು ಗಣಪತಿಯ ಹೆಸರಿನ ಜೊತೆ ಸೇರಿಸಿಕೊಳ್ಳುವಂತೆ ಯಾಚಿಸುತ್ತಾನೆ. ಅಂದಿನಿಂದ ಗಣಪತಿಯ ಹೆಸರು ವಿಘ್ನೇಶ್ವರ ಎಂದಾಯಿತು.ಆದರಿಂದಲೇ ಒಜಾರ್ ಕ್ಷೇತ್ರದ ಈ ಗಣಪತಿಯನ್ನು ಶ್ರೀ ವಿಘ್ನೇಶ್ವರ ವಿನಾಯಕ ಎನ್ನುವುದು.

ಇಲ್ಲಿನ ದೇವಸ್ಥಾನದ ಮೇಲೆ ಬಂಗಾರದ ಗೋಪುರ ಮತ್ತು ಕಲಶಗಳಿವೆ.ಈ ಕ್ಷೇತ್ರದ ಗಣಪತಿಯ ಮೂಲ ವಿಗ್ರಹವು ನೆತ್ತಿಯ ಮೇಲೆ ವಜ್ರದಿಂದ ಅಲಂಕೃತವಾಗಿದ್ದು, ಅಕ್ಕ ಪಕ್ಕಗಳಲ್ಲಿ ರಿದ್ಧಿ ಮತ್ತು ಸಿದ್ಧಿಯರ ವಿಗ್ರಹಗಳನ್ನು ಕಾಣಬಹುದು.ಈ ದೇವಸ್ಥಾನವನ್ನು ಚಿಮಾಜಿ ಅಪ್ಪ ಎಂಬುವರು ಪೋರ್ಚುಗೀಸರ ವಿರುದ್ಧ ಗೆದ್ದ ವಿಜಯೋತ್ಸವಕ್ಕಾಗಿ ಸುಮಾರು ಕ್ರಿ.ಶ 1785 ರಲ್ಲಿ ಕಟ್ಟಿಸಿರಬಹುದೆಂದು ಇತಿಹಾಸ ತಜ್ಞರ ಅಭಿಪ್ರಾಯ.

ಲೇಣ್ಯಾದ್ರಿ ಯ, ಶ್ರೀ ಗಿರ್ಜಾತ್ಮಕ[ಬದಲಾಯಿಸಿ]

ಇದೂ ಕೂಡ ಪುಣೆ ಜಿಲ್ಲೆಯ ಜುನ್ನಾರ್ ತಾಲೂಕಿನಲ್ಲಿದೆ. ಇಲ್ಲಿ ಪಾರ್ವತಿ ತನ್ನ ಕಠಿಣ ತಪಸ್ಸಿನ ಫಲದಿಂದ ಗಣಪತಿಯನ್ನು ಪುತ್ರನನ್ನಾಗಿ ಪಡೆಯುತ್ತಾಳೆ. ಇಲ್ಲಿನ ದೇವಾಲಯ ಬೌದ್ಧವಿಹಾರಗಳ ಸಮೀಪದಲ್ಲಿದ್ದು ಪರ್ವತದ ಅತ್ಯಂತ ಎತ್ತರದಲ್ಲಿ ಕಟ್ಟಲಾಗಿದೆ.

ಪಾಲಿಯ ಬಲ್ಲಾಳೇಶ್ವರ್[ಬದಲಾಯಿಸಿ]

ಗಣೇಶ ಪುರಾಣದಲ್ಲಿ ಗಣೇಶನ ಲೀಲಾಮೃತಗಳನ್ನು ಸ್ವಚ್ಚಂದವಾಗಿ ವರ್ಣಿಸಲಾಗಿದ್ದು ಅದರಲ್ಲಿನ ಉಪಾಸನ ಖಂಡ -೨೨ ರಲ್ಲಿ ಬರುವುದೇ ಈ ಪಾಲಿಪುರಿ ಅಥವಾ ಪಾಲಿಯ ವಿನಾಯಕನ ಚರಿತ್ರೆ.ರಾಯಘಢ ಜಿಲ್ಲೆಯ ಸಿಂಧುಗಡ್‍ನ ಪ್ರದೇಶವಿದು. ಪುರಾಣ ಕಾಲದಲ್ಲಿ ಈಗಿನ ಪಾಲಿ ಯು ಪಾಲಿಪುರಿ ಎಂಬ ಹೆಸರಿನಿಂದ ಇರಲು, ಆ ನಗರದಲ್ಲಿ ಕಲ್ಯಾಣಶೇಠ್ ಎಂಬ ವ್ಯಾಪಾರಿಯೊಬ್ಬ ಇಂದುಮತಿ ಎಂಬಾಕೆಯನ್ನು ವಿವಾಹವಾಗಿ ಸಂತೋಷದಿಂದ ಕಾಲ ಕಳೆಯುತ್ತಿದ್ದ. ಮದುವೆಯಾಗಿ ಬಹಳ ವರ್ಷ ಗಳ ಮೇಲೆ ದಂಪತಿಗಳಿಗೆ ಪುತ್ರ ಸಂತಾನವಾಗಿ, ಜನಿಸಿದ ಮಗುವಿಗೆ 'ಬಲ್ಲಾಳ' ಎಂದು ಹೆಸರಿಟ್ಟರು. ದಿನಗಳು ಕಳೆದಂತೆ ಬೆಳೆಯುತ್ತಿದ್ದ ಬಲ್ಲಾಳ ನು ತನ್ನ ಓರಗೆಯವರಂತೆ ಆಟ ಪಾಠಗಳಲ್ಲಿ ಕಾಲ ಕಳೆಯುವುದು ಬಿಟ್ಟು ಸಮಯ ಸಿಕ್ಕಾಗಲೆಲ್ಲ ಪೂಜೆ ಮಾಡುವುದು, ಪ್ರಾರ್ಥಿಸುವುದು, ಕಾಡಿನಲ್ಲಿರುವ ಯಾವುದೋ ಒಂದು ಕಲ್ಲಿನಲ್ಲಿ ಗಣೇಶ ಮೂರ್ತಿಯನ್ನು ಕೆತ್ತಿ ಅದನ್ನು ಪೂಜಿಸುವುದು ಹೀಗೆ ಮುಂತಾಗಿ ದೈವ ಭಕ್ತನಾಗಿ ತನ್ನ ಓರಗೆಯವರನ್ನು, ತನ್ನ ಕೂಡಿ ಬರುವ ಗೆಳೆಯರನ್ನು ಪೂಜೆ ಮಾಡಲು ಪ್ರೇರೇಪಿಸುತ್ತಿದ್ದನು. ಇದರಿಂದಾಗಿ ದಿನವೂ ಎಲ್ಲ ಹುಡುಗರು ಮನೆ ಸೇರುವುದು ತಡವಾಗುತ್ತಿತ್ತು. ಇವನ್ನೆಲ್ಲ ಗಮನಿಸುತ್ತಿದ್ದ ಪಾಲಕರು ಸುಮ್ಮನಿರದೆ ಇವಕ್ಕೆಲ್ಲ ಬಲ್ಲಾಳನೇ ಕಾರಣನೆಂದು ಬಲ್ಲಾಳನ ತಂದೆಯಲ್ಲಿ ದೂರು ಕೊಟ್ಟರು. ಇವೆಲ್ಲಕಿಂತಲೂ ಮುಂಚೆಯೇ ಬಲ್ಲಾಳನು ಓದಿನ ಕಡೆ ಆಸಕ್ತಿ ತೋರುತ್ತಿಲ್ಲ ವೆಂದು ಆತನ ತಂದೆ ಅದಾಗಲೇ ಕೋಪಗೊಂಡಿದ್ದರು, ಈಗ ಈ ದೂರು ಸೇರಿಕೊಂಡು ಉರಿಯುವ ಬೆಂಕಿಗೆ ತುಪ್ಪ ಸುರಿದ ಹಾಗಾಗಿ ಕೋಪದಿಂದ ಕುದಿಯಲಾರಂಭಿಸಿದರು. ಕೋಪದ ಕೈಗೆ ಬುದ್ಧಿ ಕೊಟ್ಟ ಕಲ್ಯಾಣಶೇಠ್ ಒಡನೆಯೇ ಬಲ್ಲಾಳನಿದ್ದ ಕಾಡಿನ ಗಣೇಶ ಮೂರ್ತಿಯ ಬಳಿಗೆ ಬರಲು, ಅಲ್ಲಿ ಸಕಲ ಪೂಜಾ ಕಾರ್ಯಗಳು ನಡೆದಿವೆ, ಬಲ್ಲಾಳನು ಒಂದು ಕಡೆ ಕುಳಿತು ನಿಷ್ಕಲ್ಮಶ ಮನಸ್ಸಿನಿಂದ ಗಣಪತಿಯ ಧ್ಯಾನದಲ್ಲಿ ಮಗ್ನನಾಗಿದ್ದಾನೆ. ಅವನ ಜೊತೆಗೆ ಅವನ ಸ್ನೇಹಿತರು ಕೂಡ ಧ್ಯಾನಸಕ್ತರಾಗಿ ಗಣೇಶ ಮೂರ್ತಿಯ ಮುಂದೆ ಕುಳಿತಿದ್ದಾರೆ. ಮೊದಲೇ ಕೋಪದಿಂದ ಕೂಡಿದ್ದ ಕಲ್ಯಾಣ ಶೇಠ್ ಗೆ ಇವರು ಪೂಜೆ ಮಾಡಿ ಧ್ಯಾನ ಮಾಡುತ್ತಿರುವುದನ್ನು ಕಂಡು ಕೋಪವು ದುಪ್ಪಟ್ಟಾಗಿ ಹೋಯಿತು. ಕೂಡಲೇ ಜೋರಾಗಿ ಕಿರುಚುತ್ತಾ ಅಲ್ಲಿದ್ದ ಪೂಜಾ ಸಾಮಗ್ರಿಗಳನೆಲ್ಲ ಎತ್ತಿ ಬಿಸಾಡಿ, ಅಲ್ಲಿದ್ದ ಗಣೇಶ ಮೂರ್ತಿಯನ್ನು ದೂರಕ್ಕೆ ತಳ್ಳಿದ , ಅದಷ್ಟಕ್ಕೆ ಸುಮ್ಮನಾಗದ ಕಲ್ಯಾಣ ಶೇಠ್ ಬಲ್ಲಾಳನನ್ನು ಹಿಡಿದು ಚೆನ್ನಾಗಿ ಥಳಿಸಿ ಹಗ್ಗವೊಂದನ್ನು ತೆಗೆದು ಅವನನ್ನು ಮರಕ್ಕೆ ಬಿಗಿದನು.

ವ್ಯಾಕುಲನಾಗಿ ಅಳುತ್ತಿದ್ದ ಬಲ್ಲಾಳನ ಯಾವ ಮನವಿಗಳನ್ನು ಕೇಳಿಸಿಕೊಳ್ಳದೆ "ಯಾರ ಮಾತನ್ನು ಕೇಳದ ನಿನಗೆ ಇದೆ ಸರಿಯಾದ ಶಿಕ್ಷೆ, ಯಾವಾಗಲು ಗಣೇಶ ಗಣೇಶ ನೆಂದು ಜಪಿಸುತ್ತ ಕುಕ್ಕರಿಸುತ್ತಿದ್ದೆಯಲ್ಲ ಈಗ ಬಿಡಿಸಿಕೊ..........ಇಲ್ಲವಾದರೆ ನೀನು ಜ್ಞಾಪಿಸಿಕೊಳ್ಳುತ್ತಿದ್ದ ಆ ಗಣೇಶನೇ ನಿನ್ನನು ಬಂದು ಕಾಪಾಡಲಿ " ಎಂದು ಹೇಳಿ ಇಡೀ ರಾತ್ರಿ ಬಲ್ಲಾಳನು ಅಲ್ಲೇ ಇರುವಂತೆ ಮಾಡಿ ನಿರ್ದಾಕ್ಷಿಣ್ಯವಾಗಿ ಮನೆಗೆ ಹೊರಟು ಹೋದನು. ಇತ್ತ ಕಲ್ಯಾಣ ಶೇಠ್ ನ ದುರ್ವರ್ತನೆಯನ್ನು ಕಂಡ ಬಲ್ಲಾಳನ ಗೆಳೆಯರೆಲ್ಲರೂ ಆ ಜಾಗದಿಂದ ಬೆದರಿ ಕಾಲ್ಕಿತ್ತಿದ್ದರು. ಈಗ ಯಾವ ದಿಕ್ಕು ತೋಚದೆ ವ್ಯಾಕುಲನಾಗಿ ಬಲ್ಲಾಳನು ಜೋರಾಗಿ ಅಳಲು ಶುರುವಿಟ್ಟುಕೊಂಡನು. ತನ್ನ ಇಷ್ಟ ದೈವವಾದ ಗಣೇಶನನ್ನು ಹೃದಯಾಂತರಾಳದಿಂದ ಭಕ್ತಿಗಿಂತಲೂ ಹೆಚ್ಚಾಗಿ ಪ್ರೇಮ ಪೂರಿತವಾದ ವ್ಯಾಕುಲ ದನಿಯಲ್ಲಿ ಕರೆಯಲು ಬಾಲ ಭಕ್ತನ ಕರೆಗೆ ಓಗೊಟ್ಟ ಗಣೇಶನು ಬಲ್ಲಾಳನ ಮುಂದೆ ಪ್ರತ್ಯಕ್ಷನಾಗಿ ಕ್ಷಣಾರ್ಧದಲಿ ಬಲ್ಲಾಳನನ್ನು ಹಗ್ಗದಿಂದ ವಿಮುಕ್ತಿಗೊಳಿಸಿ ವಾತ್ಸಲ್ಯ ಪೂರ್ಣವಾಗಿ ತಬ್ಬಿಕೊಂಡನು. ಸಾಕ್ಷಾತ್ ಗಣಪತಿಯ ಆ ಅಪ್ಪುಗೆಯಿಂದ ಸಂತುಷ್ಟನಾದ ಬಲ್ಲಾಳನು ಗಣಪತಿಯನ್ನು ಅಲ್ಲೇ ನೆಲೆಸುವಂತೆ ಕೇಳಿಕೊಳ್ಳಲು, ಗಣಪತಿಯು ಅಲ್ಲಿಯೇ ಇದ್ದ ಒಂದು ಶಿಲೆಯ ಮೂಲಕ ಅಂತರ್ಧಾನನಾದನು. ಅದೇ ಶಿಲೆಯೇ ಇಂದು ಪೂಜಿಸಲ್ಪಡುತ್ತಿರುವ ಪಾಲಿಯ ಬಲ್ಲಾಳೇಶ್ವರ. ತನ್ನ ಭಕ್ತನ ಹೆಸರಿನಲ್ಲಿಯೇ ಪ್ರಖ್ಯಾತವಾಗಿರುವ ಭರತ ಖಂಡದ ಅಪರೂಪದ ಗಣೇಶ.

ಅಂದು ಕಲ್ಯಾಣ ಶೇಠ್ ದೂರಕ್ಕೆ ಬಿಸಾಡಿದ್ದ ಗಣಪ ವಿಗ್ರಹವೇ ಇಂದು ಪಾಲಿಯ ಬಲ್ಲಾಳೇಶ್ವರ ಮಂದಿರದ ಹತ್ತಿರವಿರುವ ಧುಂಡಿ ವಿನಾಯಕ. ಈ ಮೂರ್ತಿಗೂ ಯಥಾವತ್ತಾಗಿ ಪೂಜೆ ಸಲ್ಲಿಸಲಾಗುತ್ತಿದೆ.

ಮಹಾಡ್‍ನ ಶ್ರೀ ವರದ್ ವಿನಾಯಕ್[ಬದಲಾಯಿಸಿ]

ಇದೂ ಕೂಡ ರಾಯಘಡ ಜಿಲ್ಲೆಯಲ್ಲಿನ ಖಲಪುರ್ ತಾಲೂಕಿನಲ್ಲಿದೆ. ಇಲ್ಲಿನ ವಿಶೇಷವೆಂದರೆ, ಸುಮಾರು ೧೦೭ ವರ್ಷಗಳಿಂದ ಒಂದು ನಂದಾದೀಪ ಸತತವಾಗಿ ಉರಿಯುತ್ತಿದೆ.