ವಿಷಯಕ್ಕೆ ಹೋಗು

ಶಬ್ದಮಣಿದರ್ಪಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೇಶಿರಾಜ:~ಕನ್ನಡದಲ್ಲಿಯೇ ರಚನೆಗೊಂಡಿರುವ ಸ್ವತಂತ್ರ ಕನ್ನಡ ವ್ಯಾಕರಣ (ಉಪಲಬ್ಧ) ಗ್ರಂಥಗಳಲ್ಲಿ ಶಬ್ದಮಣಿದರ್ಪಣವು ಮೊಟ್ಟ ಮೊದಲನೆಯದು. ಕೇಶಿರಾಜ ೨ನೇ ನಾಗವರ್ಮನ ಕೃತಿಗಳಾದ "ಕಾವ್ಯಾವಲೋಕನ"(ಶಬ್ದ ಸ್ಮೃತಿ) ಗ್ರಂಥಗಳ ಸೂತ್ರ, ವೃತ್ತಿ, ಹಾಗೂ ಪ್ರಯೋಗಗಳನ್ನು ಆಧರಿಸಿದ್ದಾನೆಂದು ವೈಯಾಕರಣರು ಅಭಿಪ್ರಾಯಪಟ್ಟಿದ್ದಾರೆ. ಪ್ರಧಾನವಾಗಿ ಇದು ವಿಧಾತ್ಮಕ ಅಥವಾ ಆದರ್ಶ ರೀತಿಯ ವ್ಯಾಕರಣ. ಆದರೆ ವಿವರಣಾತ್ಮಕ ಮತ್ತು ವರ್ಣನಾತ್ಮಕ ರೀತಿಯ ನಿರೂಪಣಾ ದೃಷ್ಟಿಯನ್ನೂ ಒಳಗೊಂಡಿದೆ. ಡಾ.ಡಿ.ಎಲ್.ನರಸಿಂಹಾಚಾರ್ ಅವರು ಸಂಪಾದಿಸಿರುವ ಶಬ್ದಮಣಿದರ್ಪಣವು ಐಚ್ಛಿಕ ಕನ್ನಡದ ವಿದ್ಯಾರ್ಥಿಗಳಿಗೆ ಪಠ್ಯವಾಗಿ ಮೈಸೂರು ವಿಶ್ವವಿದ್ಯಾನಿಲಯದ ಪದವಿಗೆ ಬೋಧಿಸಲ್ಪಡುತ್ತಿದೆ. ಇದರಲ್ಲಿ ೩೪೩ ಕಂದಪದ್ಯಗಳಿವೆ.

ಕೇಶಿರಾಜನ ಶಬ್ದಮಣಿದರ್ಪಣ ದ ಇತಿವೃತ್ತ

[ಬದಲಾಯಿಸಿ]
  • ಕೇಶಿರಾಜನು ರಚಿಸಿದ ಶಬ್ದಮಣಿದರ್ಪಣವು ಸಮಗ್ರವೂ ಸ್ವಾರಸ್ಯಕರವೂ ಆದ ವ್ಯಾಕರಣ ಗ್ರಂಥ. ಇಡೀ ಕೃತಿ ಕಂದಪದ್ಯಗಳ ರೂಪದಲ್ಲಿದೆ. ಎಂಟು ಅಧ್ಯಾಯಗಳನ್ನು ಒಳಗೊಂಡಿದೆ. ಶಬ್ದಮಣಿದರ್ಪಣವು ಸಂಸ್ಕೃತ ವ್ಯಾಕರಣ ಗ್ರಂಥಗಳನ್ನು ಅನುಸರಿಸಿ ರಚಿಸಲ್ಪಟ್ಟಿದೆ. ಆದರೂ ಇದರಲ್ಲಿ ಕನ್ನಡಕ್ಕೆ ಮಾತ್ರವಿರುವ ವಿಶೇಷ ಸಂಗತಿಗಳ ಕುರಿತೂ ಹೇಳಲಾಗಿದೆ.[]
  • "ಶಬ್ದಮಣಿದರ್ಪಣ"ವು ೧೩ನೇ ಶತಮಾನಕ್ಕೆ ಮೊದಲು ಹಳಗನ್ನಡ ಭಾಷಾಸ್ಥಿತಿಗತಿಗಳು ಹೇಗಿದ್ದುವೆಂಬುದನ್ನು ಸವಿಸ್ತಾರವಾಗಿ, ಸಪ್ರಮಾಣ ವಿವೇಚನೆಯಿಂದ ವರ್ಣಿಸುತ್ತದೆ.
  • ಕೇಶಿರಾಜನು ಬರೆದ ಶಬ್ದಮಣಿದರ್ಪಣವನ್ನು ಜೆ.ಗ್ಯಾರೆಟ್ ಎನ್ನುವವರು ಕ್ರಿ.ಶ. ೧೮೬೮ರಲ್ಲಿ ಪ್ರಕಟಿಸಿದರು. ಕ್ರಿ.ಶ.೧೮೭೨ರಲ್ಲಿ ರೆವೆರಂಡ್ ಕಿಟ್ಟೆಲ್ ಈ ಗ್ರಂಥವನ್ನು ಪರಿಷ್ಕರಿಸಿ ಪ್ರಕಟಿಸಿದರು. ಕ್ರಿ.ಶ. ೧೯೫೧ರಲ್ಲಿ ಡಿ.ಕೆ.ಭೀಮಸೇನರಾಯರು ಹಾಗು ೧೯೫೮ರಲ್ಲಿ ಡಿ.ಎಲ್.ನರಸಿಂಹಾಚಾರ್ ಅವರು ಪರಿಷ್ಕೃತ ಕೃತಿಗಳನ್ನು ರಚಿಸಿದ್ದಾರೆ.
  • ಶಬ್ದಮಣಿದರ್ಪಣದಲ್ಲಿ 'ಸಂಧಿ ಪ್ರಕರಣ' 'ನಾಮಪ್ರಕರಣ', 'ಸಮಾಸ ಪ್ರಕರಣ' 'ತದ್ಧಿತಪ್ರಕರಣ' 'ಆಖ್ಯಾತಪ್ರಕರಣ' 'ಧಾತುಪ್ರಕರಣ' 'ಅಪಭ್ರಂಶ ಪ್ರಕರಣ' 'ಅವ್ಯಯಪ್ರಕರಣ' ಎಂಬ ಹೆಸರಿನ ಅಷ್ಟ(ಎಂಟು) ಅಧ್ಯಾಯಗಳಿವೆ. ಈ ಕೃತಿಯಲ್ಲಿ ಅಧ್ಯಾಯಗಳಿಗೆ "ಪ್ರಕರಣ" ಎನ್ನಲಾಗುತ್ತದೆ. ಕಂದಪದ್ಯಗಳಿಗೆ 'ಸೂತ್ರ'ವೆಂದೂ, ಗದ್ಯರೂಪದ ವಿವರಣೆಗೆ 'ವೃತ್ತಿ'ಯೆಂದೂ, ವ್ಯಾಕರಣದ ಉದಾಹರಣೆಗಳಿಗೆ 'ಪ್ರಯೋಗ'ವೆಂದು ಕರೆದು, ತನ್ನ ಗ್ರಂಥಕ್ಕೆ ೨ನೇ ನಾಗವರ್ಮನ "ಶಬ್ದಸ್ಪೃತಿ ಮತ್ತು ಕಾವ್ಯಾವಲೋಕನ" ಗ್ರಂಥಗಳ 'ಸೂತ್ರ', 'ವೃತ್ತಿ' ಮತ್ತು 'ಪ್ರಯೋಗ'ಗಳನ್ನು ಆಧರಿಸಿದ್ದಾನೆ. ಆದರೆ ಎಲ್ಲಿಯೂ ಅಪ್ಪಿ ತಪ್ಪಿಯೂ ೨ನೇ ನಾಗವರ್ಮನನ್ನಾಗಲಿ, ಅವನ ಕೃತಿಗಳನ್ನಾಗಲಿ ಉಲ್ಲೇಖಿಸದಿರುವುದು ಅಚ್ಚರಿಯನ್ನು ಉಂಟುಮಾಡುತ್ತದೆ.

ಸೂತ್ರಂ- || ಕ್ರಮದಿಂದೆ ಸಂಧಿ ನಾಮಂ
ಸಮಾಸಮಾ ತದ್ಧಿತಂ ಪೊದಳ್ದಾಖ್ಯಾತಂ|
ಸಮುದಿತ ಧಾತುವಪಭ್ರಂ
ಶಮವ್ಯಯಂ ಸಂಧಿ ಶಬ್ದಮಣಿದರ್ಪಣದೊಳ್||
(ಶಬ್ದಮಣಿದರ್ಪಣ-ಪೀಠಿಕೆ-೮)

ಈತನ ಮೇಲೆ ಸಂಸ್ಕೃತ ವೈಯಾಕರಣರ ಪ್ರಭಾವ ಅಪಾರವಾಗಿದೆ. ಒಟ್ಟು ಗ್ರಂಥವನ್ನು ನಾಲ್ಕು ಪಾದಗಳಾಗಿ ವಿಂಗಡಿಸಿಕೊಂಡಿದ್ದಾನೆ.

  • ೧ನೇ ಪಾದದಲ್ಲಿ ಅಕ್ಷರ ಸಂಜ್ಞೆ, ಸಂಧಿ, ಅವ್ಯಯಗಳ ವಿಚಾರವನ್ನೂ,
  • ೨ನೇ ಪಾದದಲ್ಲಿ ಲಿಂಗ, ಸಂಸ್ಕೃತ ಶಬ್ದಗಳ ಸ್ವೀಕರಣ, ವಿಭಕ್ತಿಗಳ ವಿಚಾರವನ್ನೂ,
  • ೩ನೇ ಪಾದದಲ್ಲಿ ಸಮಾಸ, ಆಖ್ಯಾತಪ್ರತ್ಯಯ, ವಚನ, ಸಂಖ್ಯಾವಾಚಕ, ತದ್ಧಿತ ಮೊದಲಾದುವನ್ನೂ
  • ೪ನೇ ಪಾದದಲ್ಲಿ ಧಾತು ಮತ್ತು ಕೃದಂತ ವಿಷಯಗಳನ್ನೂ ಪ್ರಸ್ತಾಪಿಸಿದ್ದಾನೆ.
  • ಕೇಶಿರಾಜ ತನ್ನ ವ್ಯಾಕರಣಕ್ಕೆ ಶ್ರೀವಿಜಯನಿಂದ ತೊಡಗಿ ಪಂಪನವರೆಗೆ ಸುಮಾರು ೪೦೦ ವರ್ಷಗಳ ಕಾಲದ ಭಾಷೆಯನ್ನು ಆಧರಿಸಿರುವನು. ಜೊತೆಗೆ ತನ್ನ ವ್ಯಾಕರಣಕ್ಕೆ ಗಜಗ, ಗುಣನಂದಿ, ಮನಸಿಜ, ಅಸಗ, ಚಂದ್ರಭಟ್ಟ, ಗುಣವರ್ಮ, ಪೊನ್ನ, ಸುಜನೋತ್ತಂಸ, ನಾಗವರ್ಮ, ನಾಗಚಂದ್ರ, ನೇಮಿಚಂದ್ರ, ಹಂಸರಾಜ, ಬ್ರಹ್ಮಶಿವ ಮೊದಲಾದ ಕವಿಗಳ, ವೈಯಾಕರಣರ ಗ್ರಂಥಗಳಿಂದ ಉದಾಹರಣೆಗಳನ್ನು ತೆಗೆದುಕೊಂಡಿದ್ದಾನೆ.

ಸೂತ್ರಂ- || ಗಜಗನ ಗುಣನಂದಿಯ ಮನ
ಸಿಜನಸಗನ ಚಂದ್ರಭಟ್ಟ ಗುಣವರ್ಮ ಶ್ರೀ
ವಿಜಯರ ಪೊನ್ನ ಪಂಪನ
ಸುಜನೋತ್ತಂಸನ ಸುಮಾರ್ಗಮಿದರೊಳೆ ಲಕ್ಷ್ಯಂ
(ಶಬ್ದಮಣಿದರ್ಪಣ-ಪೀಠಿಕೆ-೫)

ಕೇಶಿರಾಜನ ವೈಯಕ್ತಿಕ ಪರಿಚಯ /ಇತರ ಕೃತಿಗಳು

[ಬದಲಾಯಿಸಿ]

ಕೇಶಿರಾಜನ ಕಾಲ ಸುಮಾರು ಕ್ರಿ.ಶ.೧೨೬೦. ಈತನು ಜನ್ನನ ಸೋದರಳಿಯ. ಪ್ರಸಿದ್ಧ ಕವಿ ಹಾಗೂ ವಿದ್ವಾಂಸರ ಮನೆತನಕ್ಕೆ ಸೇರಿದವನು. ಈತನ ತಂದೆ ಹಳಗನ್ನಡ ಕಾವ್ಯ ಸಂಕಲನ ಗ್ರಂಥವಾದ "ಸೂಕ್ತಿಸುಧಾರ್ಣವ"ದ ಕರ್ತೃ ಯೋಗಿಪ್ರವರ ಚಿದಾನಂದ ಮಲ್ಲಿ ಕಾರ್ಜುನ; ತಾಯಿಯ ತಂದೆ ಕವಿಯೂ ಯಾದವಕಟಕಾಚಾರ್ಯನೂ ಆಗಿದ್ದ "ಸುಮನೋಬಾಣ" ಎಂದು ಶಬ್ದಮಣಿದರ್ಪಣದ ಆದಿಯಲ್ಲಿ ಕೇಶಿರಾಜನೇ ಹೇಳಿದ್ದಾನೆ. ಸುಮನೋಬಾಣಾನು ಇಮ್ಮಡಿ ನರಸಿಂಹನ ಆಸ್ಥಾನದಲ್ಲಿದ್ದ.(೧೨೩೦) ಅವನ ಅನಂತನಾಥಪುರಾಣದಲ್ಲಿ ಅದರ ಸೂಚನೆಯಿದೆ. ಕೇಶಿರಾಜ ಚೋಳರಾಜನಾದ ಇಮ್ಮಡಿ ನರಸಿಂಹನ ಹಗೂ ಅವನ ಮಗ ಸೋಮೇಶ್ವರನ ಆಳ್ವಿಕೆಯ ಕಾಲದಲ್ಲಿ ಜೀವಿಸಿದ್ದನೆಂದು ವಿದ್ವಾಂಸರು ಹೇಳುತ್ತಾರೆ. ಇಮ್ಮಡಿ ನರಸಿಂಹನ ಆಳ್ವಿಕೆಯಕಾಲ ೧೨೨೦-೩೮. ಅಲ್ಲದೇ ಅವನ ಮಗನಾದ ಸೋಮೇಶ್ವರನ ಕಾಲ ೧೨೩೩-೬೭. ಈ ಕಾಲಘಟ್ಟದಲ್ಲಿಯೇ ಕೇಶಿರಾಜನ ಶಬ್ದಮಣಿದರ್ಪಣ ರಚನೆಯಾದದ್ದು.
ವ್ಯಾಕರಣವನ್ನು ವಿವರಿಸುವ ಶಬ್ದಮಣಿದರ್ಪಣ ಈತನ ಪ್ರಖ್ಯಾತ ಕೃತಿ.

ಸೂತ್ರಂ- || ಕವಿ ಸುಮನೋಬಾಣನ ಯಾ
-ದವಕಟಕಾಚಾರ್ಯನೆಸೆವ ದೌಹಿತ್ರನೆ ನಾಂ|
ಕವಿ ಕೇಶವನೆಂ ಯೋಗಿ
ಪ್ರವರಚಿದಾನಂದ ಮಲ್ಲಿಕಾರ್ಜುನ ಸುತನೆಂ||
(ಶಬ್ದಮಣಿದರ್ಪಣ-ಪೀಠಿಕೆ-೨)

ಇತರ ಕೃತಿಗಳು

[ಬದಲಾಯಿಸಿ]
  1. ಪ್ರಬೋಧಚಂದ್ರ,
  2. ಚೋಳಪಾಲಕ ಚರಿತ,
  3. ಕಿರಾತ,
  4. ಸುಭದ್ರಾಹರಣ,
  5. ಶ್ರೀ ಚಿತ್ರಮಾಲೆ.- ಆದರೆ ಇವು ಯಾವುವೂ ಪ್ರಸ್ತುತ ಲಭ್ಯವಿಲ್ಲವಾಗಿವೆ.

ಪೀಠಿಕೆ/ಪೂರ್ವಪ್ರಕರಣ/ಸಂಜ್ಞಾಪ್ರಕರಣ

[ಬದಲಾಯಿಸಿ]

ಇದರಲ್ಲಿ ಮಾತಿನ ಅಧಿದೇವತೆ ವಾಗ್ದೇವಿಯನ್ನು ಸ್ತುತಿಸಲಾಗಿದೆ. ಮಾತೆಂಬ ಶಾಸ್ತ್ರದಿಂದ ಶಾರದೆಯನ್ನು ಪೂಜಿಸಿ, ನಮಸ್ಕರಿಸುತ್ತಿದ್ದೇನೆ ಎನ್ನುವಾಗ ವಾಣಿಯ ಪರಿಶುದ್ಧತೆ ಮತ್ತು ಪಾರಮಾರ್ಥಿಕ ಮಹತ್ವಗಳೆರಡೂ ರಸವತ್ತಾಗಿ ಮೂಡಿಬಂದಿವೆ. ಭಾರತೀಯ ಕಾವ್ಯ ಮೀಮಾಂಸಕರು ನನಗೆ ವ್ಯಾಕರಣಶಾಸ್ತ್ರ ಗ್ರಂಥವನ್ನು ಬರೆ ಎಂದು ಒತ್ತಾಯಿಸಿದ್ದರಿಂದ, ನಾನು ಶಬ್ದಸಾಮರ್ಥ್ಯವೆಂಬ ಗುಣವನ್ನು ಹೊಂದಿದ ಕೃತಿ ರಚಿಸಿ, ಅದಕ್ಕೆ "ಶಬ್ದಮಣಿದರ್ಪಣ"ವೆಂಬ ಹೆಸರಿಟ್ಟಿದ್ದೇನೆ. ಇದು ಲಕ್ಷಣವಾದ ವ್ಯಾಕರಣಶಾಸ್ತ್ರವಾಗಿದೆ. ಈ ಗ್ರಂಥವನ್ನು ಮೀಮಾಂಸಕರು ಕೇಳಬೇಕು. ಇದರಲ್ಲಿ 'ಅಷ್ಟದಶ ದೋಷ'ವೇನಾದರೂ ಇದ್ದರೆ, ಅದು ನಿಮ್ಮ ಗಮನಕ್ಕೆ ಬಂದರೆ, ಪ್ರೀತಿಯಿಂದ ತಿದ್ದಿ ಸರಿಪಡಿಸಿ. ಒಂದು ವೇಳೆ ಈ ಕೃತಿಯಲ್ಲಿ ಲೋಪ-ದೋಷ ಕಂಡು ಬಂದರೆ, ಅದನ್ನು ದೊಡ್ಡದು ಮಾಡದೆ, ಗುಣದೋಷಗಳನ್ನು ಪೃಥಿಕರಿಸಿ, ಗುಣವನ್ನು ಮಾತ್ರ ಸ್ವೀಕರಿಸ ಬೇಕೆಂದು ವಿನಯ ಪೂರ್ವಕವಾಗಿ ಅರಿಕೆ ಮಾಡಿಕೊಂಡಿದ್ದಾನೆ.

ಸೂತ್ರಂ- || ಶ್ರೀವಾಗ್ದೇವಿಗೆ ಶಬ್ದದಿ
ನಾವಾವಿಂದ್ರಿಯದ ವಿಷಯಮಂ ಶ್ರೋತ್ರದೊಳು
ದ್ಫಾವಿಪ ನಿರ್ಮಳಮೂರ್ತಿಗಿ
ಳಾವಂದ್ಯೆಗೆ ಶಾಸ್ತ್ರಮುಖದೊಳವನತನಪ್ಪೆಂ
(ಶಬ್ದಮಣಿದರ್ಪಣ-ಪೀಠಿಕೆ-೧)


ಸೂತ್ರಂ- || ಅವಧರಿಪುದು ವಿಬುಧರ್ ದೋ
ಷವಿದರೊಳೇನಾನುಮುಳ್ಳೊಡಂ ಪ್ರಿಯದಿಂ ತಿ
ರ್ದುವುದು ಗುಣಯುಕ್ತಮುಂ ದೋ
ಷವಿದೂರಮುಮಾಗೆ ಮೆಚ್ಚಿ ಕೈಕೊಳ್ವುದಿದಂ
(ಶಬ್ದಮಣಿದರ್ಪಣ-ಪೀಠಿಕೆ-೪)

ಶಬ್ದಮಣಿದರ್ಪಣ - ನಲ್ನುಡಿಗನ್ನಡಿ

[ಬದಲಾಯಿಸಿ]
  • ಶ್ರೀ ಕೇಶಿರಾಜರ ಶಬ್ದಮಣಿದರ್ಪಣಕ್ಕೆ ೯೮೫ ಪುಟದ ವಿಸ್ತೃತವಾದ ವ್ಯಾಖ್ಯಾನವನ್ನು, ಬೆಂಗಳೂರು ಸರ್ಕಾರಿ ವಾಣಿವಲಾಸ ಜೂನಿಯರ ಕಾಲೇಜಿನಲ್ಲಿ ಕನ್ನಡ ಪಂಡಿತರಾಗಿದ್ದ ಶ್ರೀ ಭುವನಹಳ್ಳಿ ಪದ್ಮನಾಭಶರ್ಮರು ೧೯೭೫/1975 ರಲ್ಲಿ ಬರೆದು ೧೯೭೬ ರಲ್ಲಿ ಪ್ರಕಟಿಸಿದ್ದಾರೆ. ಅದನ್ನು ಬಹಳಷ್ಟು ವಿದ್ವಾಂಸರು ಗಮನಿಸಿದಂತೆ ಕಾಣುವುದಿಲ್ಲ. (ಅವರೇ ಶ್ರೀಮದ್ ಭಟ್ಟಾಕಳಂಕದೇವ ವಿರಚಿತ "ಕರ್ಣಾಟಕ ಶಬ್ದಾನುಶಾಸನ"ಕ್ಕೂ ವ್ಯಾಖ್ಯಾನ ಬರೆದು, ೧೯೬೭ರಲ್ಲಿ ಪ್ರಕಟಿಸಿದ್ದಾರೆ.) ಅದರ ಬಗ್ಗೆ ಅಂದಿನ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಜಿ.ನಾರಾಯಣ, (ಮಾಜಿ ಬೆಂಗಳೂರು ಮೇಯರ್) ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ತು, ಅದೇ ಗ್ರಂಥದಲ್ಲಿ ಬರೆದ, ಅವರ ಅಭಿಪ್ರಾಯವನ್ನು ನೋಡಿದರೆ ಗ್ರಂಥದ ಪರಿಚಯ ಸಾಮಾನ್ಯ ಮಟ್ಟಿಗೆ ತಿಳಿಯುವುದು.
:: ಅಂದಿನ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಶ್ರೀ ಜಿ.ನಾರಾಯಣ ಅವರ ಅಭಿಪ್ರಾಯ ---ಹಳಗನ್ನಡದ ಅಧಿಕೃತ ಸ್ವಭಾವವನ್ನು ಗುರುತಿಸಬೇಕಾದರೆ ಕೇಶಿರಾಜರ ಸಹಾಯವಿಲ್ಲದೆ ಆಗುವುದಿಲ್ಲ.---ಈ ಕಾರಣದಿಂದಲೇ ಭಾಷಾವಿದ್ವಾಂಸರು ಶಬ್ದಮಣಿದರ್ಪಣವನ್ನು ಅಧಿಕೃತ ಗ್ರಂಥವಾಗಿ ಉಳಿಸಿಕೊಂಡು ಬಂದಿದ್ದಾರೆ.---ಇದರ ಇನ್ನೂ ಹಲವಾರು ಪ್ರಕಟಣೆಗಳು ಈಗಾಗಲೇಬಂದಿವೆ. --- ಶ್ರೀ ಭುವನಹಳ್ಳಿ ಪದ್ಮನಾಭಶರ್ಮರು ಕನ್ನಡ ಪಂಡಿತರು, ವಿದ್ವಾಂಸರು, ಸಂಸ್ಕೃತಾದಿ ಹಲವು ಭಾಷೆಗಳನ್ನು ಬಲ್ಲವರು, ಅವರು ತಮ್ಮದೇ ಆದ ನಲ್ನುಡಿಗನ್ನಡಿ ಎಂಬ ವ್ಯಾಖ್ಯಾನ ಸಹಿತವಾಗಿ ಶಬ್ದಮಣಿದರ್ಪಣದ ಹೊಸ ಆವೃತ್ತಿಯನ್ನು ತಂದಿದ್ದಾರೆ. ಅವರು ಈ ವ್ಯಾಕರಣದ ಅಭ್ಯಾಸ ಎಲ್ಲರಿಗೂ ಸುಲಭವಾಗಲಿ ಎಂದು ಸರಳವಾಗಿ ವಿಷಯಗಳನ್ನು ನಿರೂಪಿಸಿ, ಪ್ರತಿ ಸೂತ್ರಕ್ಕೆ ಪದ ವಿಭಾಗ, ಪದಾನ್ವಯ, ಅನ್ವಾನುಕ್ರಮವಾದ ಅರ್ಥ, ಕೇಶಿರಾಜರ ವೃತ್ತಿ, ಅದಕ್ಕೆ ಕನ್ನಡದಲ್ಲಿ ವಿವರಣಾತ್ಮಕವಾದ ಅರ್ಥ, ನಿಟ್ಟೂರು ನಂಜಯ್ಯನ ವ್ಯಾಖ್ಯಾನ, ಉದಾಹರಣೆಗಳು, ಭಾಷಾಭೂಷಣ ಇತ್ಯಾದಿ ಇತರ ವ್ಯಾಕರಣಗಳ ಸೂತ್ರಗಳ ಅನ್ವಯ, ಮತ್ತು ಕಠಿಣ ಶಬ್ದಗಳ ಅರ್ಥ, ಮತ್ತು ವಿಶೇಷ ವಿಷಯಗಳು,(ಕೊನೆಯಲ್ಲಿ ವಿಷಯ ಸೂಚಿ-ಪರಿಶಿಷ್ಟ) ಹೀಗೆ ವಿವರಣೆ --ನೀಡಿದ್ದಾರೆ. ಭೂಮಿಕೆ (ಪೀಠಿಕೆ) ಭಾಗದಲ್ಲಿ ಭಾಷೆ ಮತ್ತು-- ಅದರ ವಿಷಯಗಳ ವ್ಯಾಕರಣ ಅಭ್ಯಾಸಕ್ಕೆ ಬೇಕಾದ ಎಲ್ಲಾ ವಿಚಾರಗಳನ್ನೂ ಸಂಗ್ರಹಿಸಿ ಕೊಟ್ಟಿದ್ದಾರೆ ಇದೊಂದು ಉಪಯುಕ್ತ ಪ್ರಕಟಣೆ.:ಅಭಿಪ್ರಾಯ: (ಶ್ರೀ) ಜಿ. ನಾರಾಯಣ,(ಮಾಜಿ ಬೆಂಗಳೂರು ಮೇಯರ್) ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ತು ಚಾಮರಾಜಪೇಟೆ ಬೆಂಗಳೂರು; (೧೯೭೫ )

ಪೂರಕ ಮಾಹಿತಿ

[ಬದಲಾಯಿಸಿ]

ಉಲ್ಲೇಖ

[ಬದಲಾಯಿಸಿ]
  1. "ಆರ್ಕೈವ್ ನಕಲು". Archived from the original on 2014-02-11. Retrieved 2015-12-18.