ವಿಷಯಕ್ಕೆ ಹೋಗು

ಗುಣನಂದಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶಗುಣನಂದಿಯು ಕನ್ನಡದ ಒಬ್ಬ ಪ್ರಾಚೀನ ಕವಿ ಎಂದು ಹೇಳಲಾಗಿದೆ.

ಆತನ ಬಗ್ಗೆ ಉಲ್ಲೇಖಗಳು[ಬದಲಾಯಿಸಿ]

ಕನ್ನಡ ಕವಿಗಳಲ್ಲಿ ಗುಣನಂದಿಯೆಂಬ ಹೆಸರಿನ ಕವಿಯೊಬ್ಬನಿದ್ದನೆಂಬುದು ಮುಖ್ಯವಾಗಿ ಮಲ್ಲಿಕಾರ್ಜುನನ (ಸು. 1245) ಸೂಕ್ತಿ ಸುಧಾರ್ಣವ ಮತ್ತು ಕೇಶಿರಾಜನ (ಸು.1260) ಶಬ್ದಮಣಿದರ್ಪಣ ಎಂಬ ಗ್ರಂಥಗಳಲ್ಲಿ ದೊರೆಯುವ ಎರಡು ಸ್ಪಷ್ಟವಾದ ಉಲ್ಲೇಖಗಳಿಂದ ತಿಳಿದು ಬಂದಿದೆ.


ಸೂಕ್ತಿಸುಧಾರ್ಣವದ ಪೀಠಿಕಾ ಪ್ರಕರಣದಲ್ಲಿ

‘ಜನ್ನನ ದೇಸೆ ಪಂಪನ ಗುಣಂ ಗುಣನಂದಿಯ ತೊಂಡು.. ಸಮಾನುರುಕ್ತಿಯಿಂ | ದನ್ನೆಲಸಿರ್ಪುವೀ ಸುಕವಿಮಲ್ಲನ ಕಾವ್ಯವಿಳಾಸಗೇಹದೊಳ್’

ಎಂದೂ ಶಬ್ದಮಣಿದರ್ಪಣದಲ್ಲಿ

‘ಗಜಗನಗುಣನಂದಿಯ ಮನ | ಸಿಜನಸಗನ.. ಸುಮಾರ್ಗಮಿದಱೋಳೆ ಲಕ್ಷ್ಯಂ’

ಎಂದೂ ಉಕ್ತವಾಗಿದೆ. ಇಷ್ಟಲ್ಲದೆ, ಶಬ್ದಮಣಿದರ್ಪಣದಲ್ಲಿಯೇ ಸಂಧಿ ಪ್ರಕರಣದಲ್ಲಿ ಸೂತ್ರವೊಂದಕ್ಕೆ ಪ್ರಯೋಗವಾಗಿ ‘ಚುರ್ಚಿದವೊಲ್ ಬಿಸಿಲಳುರೆ ಕಿ | ಮುಱ್ಚಿದ ಲತೆಯಂತೆ ನೊಂದು ಗುಣನಂದಿ...’ ಎಂಬ ಕಂದಪದ್ಯದ ಭಾಗವೊಂದುಂಟು. ಇಲ್ಲಿ ಬಂದಿರುವ ಗುಣನಂದಿಯೆಂಬ ಹೆಸರಿನ ಮೇಲೆ, ಈ ಕಂದಭಾಗ ಗುಣನಂದಿ ಕೃತವಾದ ಗ್ರಂಥದಿಂದ ತೆಗೆದುದೋ ಇಲ್ಲವೇ ಅವನ ವಿಷಯವಾಗಿ ಹುಟ್ಟಿರುವ ಬೇರೆ ಗ್ರಂಥದಿಂದ ತೆಗೆದುದೋ ತಿಳಿಯದು- ಎಂಬುದಾಗಿ ಕರ್ಣಾಟಕ ಕವಿಚರಿತೆಕಾರರು ತಮ್ಮ ಊಹೆಯನ್ನು ಮಂಡಿಸಿ ದ್ದಾರೆ. ಸ್ವಲ್ಪ ಈಚಿನ ನಂಜುಂಡಕವಿ (ಸು.1525) ರಾಮನಾಥಚರಿತವೆಂಬ ತನ್ನ ಸಾಂಗತ್ಯಗ್ರಂಥದಲ್ಲಿ ಗುಣನಂದಿಯೆಂಬವನನ್ನು ಸ್ತುತಿಸಿರುವುದು ಕಾಣುತ್ತದೆ. ಈ ಗುಣನಂದಿಯೂ ಮೊದಲಿನೆರಡು ಉಲ್ಲೇಖಗಳ ಗುಣನಂದಿಯೂ ಒಬ್ಬ ವ್ಯಕ್ತಿಯೋ ಬೇರೆಬೇರೆಯೋ ಹೇಳುವುದು ಕಷ್ಟ.


ಶಬ್ದಮಣಿದರ್ಪಣದ ಪ್ರಯೋಗಭಾಗದ ಆಶಯವೂ ಸಂದಿಗ್ಧವಾದ್ದು. ಇದಕ್ಕೆ ಮೊದಲಿನ ಎರಡು ಉಲ್ಲೇಖಗಳೇ ಗುಣನಂದಿಯೆಂಬ ಕನ್ನಡ ಕವಿಯೊಬ್ಬನ ಅಸ್ತಿತ್ವವನ್ನು ಸ್ಥಾಪಿಸಲು ಸಮರ್ಥವಾದವು. ಮಲ್ಲಿಕಾರ್ಜುನನೂ ಆತನ ಮಗ ಕೇಶಿರಾಜನೂ ತಂತಮ್ಮ ಗ್ರಂಥಗಳಿಗೆ ಗುಣನಂದಿಯೆಂಬ ಪೂರ್ವಕವಿಯೊಬ್ಬನ ಒಂದೋ ಹಲವೋ ಗ್ರಂಥಗಳಿಂದ ಪದ್ಯಗಳನ್ನೂ ಪ್ರಯೋಗಗಳನ್ನೂ ಕ್ರಮವಾಗಿ ಆಯ್ದುಕೊಂಡಿರುವ ಸಾಧ್ಯತೆಯನ್ನು ಒಪ್ಪಬಹುದು. ಆ ಗ್ರಂಥ ಅಥವಾ ಗ್ರಂಥಗಳು ಯಾವುದೆಂಬುದು ಮಾತ್ರ ತಿಳಿಯುವಂತಿಲ್ಲ.

ಕವಿಚರಿತೆಕಾರರು, ಪೂಜ್ಯಪಾದಕೃತವಾದ ಜೈನೇಂದ್ರ ವ್ಯಾಕರಣಕ್ಕೆ ಈ ಗುಣನಂದಿ ಪ್ರಕ್ರಿಯಾವತಾರ ಎಂಬ ವ್ಯಾಖ್ಯಾನ ಗ್ರಂಥವೊಂದನ್ನು ಬರೆದಿದ್ದಾನೆಂದು ತಿಳಿಸಿದ್ದಾರೆ. ಈ ವ್ಯಾಖ್ಯಾನಕರ್ತೃ ಗುಣನಂದಿಯೂ ಮಲ್ಲಿಕಾರ್ಜುನಕೇಶಿರಾಜೋಕ್ತ ಕನ್ನಡಕವಿ ಗುಣನಂದಿಯೂ ಒಬ್ಬನೇ ವ್ಯಕ್ತಿ ಯೆಂದು ತಿಳಿಯುವುದಕ್ಕೆ ತಕ್ಕ ಪ್ರಮಾಣಗಳಿಲ್ಲ. ಕನ್ನಡ ಕವಿ ಗುಣನಂದಿ ಬರೆದ ಕೃತಿ ಲಭ್ಯವಾಗದೆ ಇದರ ವಿಮರ್ಶೆ ಸಾಧ್ಯವಾಗಲಾರದು.


ಈತನ ಕಾಲನಿರ್ಣಯ ಮತ್ತು ವಿವಾದಗಳು[ಬದಲಾಯಿಸಿ]

ಗುಣನಂದಿ ಕವಿಯ ಕಾಲವನ್ನು ಕರ್ಣಾಟಕ ಕವಿಚರಿತಕಾರರು ಸು.900 ಎಂದು ಹೇಳಿದ್ದಾರೆ. ಶ್ರವಣಬೆಳ್ಗೊಳದ 66,117, 127ನೆಯ ಶಾಸನಗಳಲ್ಲಿ ಕೀರ್ತಿತನಾಗಿರುವ ಗುಣನಂದಿಪಂಡಿತಯತಿಯೇ ಮೇಲೆ ಉಲ್ಲೇಖಿಸಿರುವ ಗುಣನಂದಿಕವಿಯೆಂಬುದು ಅವರ ಗ್ರಹಿಕೆ. ಈ ಗ್ರಹಿಕೆಗೆ ಕಾಲನಿರ್ಣಯಕ್ಕೆ ಮುಖ್ಯ ಕಾರಣವೆಂದರೆ ಆ ಯತಿಗೆ ಹೇಳಿರುವ ವಿಶೇಷಣಗಳು ಮತ್ತು ಶಾಸನೋಕ್ತ ಗುರುಪರಂಪರೆ. ಪೂರ್ವೋಕ್ತ ಶಾಸನಗಳಲ್ಲಿ ಈತನನ್ನು ಚಾರಿತ್ರಚಕ್ರೇಶ್ವರ, ತರ್ಕವ್ಯಾಕರಣಾದಿ ಶಾಸ್ತ್ರನಿಪುಣ, ಸಾಹಿತ್ಯವಿದ್ಯಾಪತಿ ಮುಂತಾಗಿ ಕರೆದಿದೆ.

ಅಲ್ಲದೆ ಈತನಿಗೆ 300 ಜನ ಶಿಷ್ಯರಿದ್ದರೆಂದೂ ಇವರಲ್ಲಿ ದೇವೇಂದ್ರಸೈದ್ಧಂತಿಕನೆಂಬುವನು ಉತ್ಕೃಷ್ಟತಮನೆಂದೂ ಹೇಳಿದೆ. 1115ರಲ್ಲಿ ಹುಟ್ಟಿದ 127ನೆಯ ಶಾಸನದ ಗುರುಪರಂಪರೆಯನ್ನು ಗಮನಿಸಿ. ಈ ದೇವೇಂದ್ರ ಸೈದ್ಧಾಂತಿಕನೇ ಪಂಪನ(941) ಗುರುವಾದ ದೇವೇಂದ್ರಮುನಿಯಾಗಿರಬೇಕೆಂದೂ ಆದಕಾರಣ, ಪಂಪನ ಗುರುವಿನ ಗುರು ಗುಣನಂದಿ ಸು. 900 ರಲ್ಲಿದ್ದಿರಬಹುದೆಂದೂ ಕವಿಚರಿತಕಾರರು ಊಹೆ ಮಾಡಿದ್ದಾರೆ.

ಈ ಊಹೆಯನ್ನು ಎ. ವೆಂಕಟಸುಬ್ಬಯ್ಯನವರು ಅಲ್ಲಗಳೆದಿದ್ದಾರೆ. ಶ್ರವಣಬೆಳ್ಗೊಳದ 127ನೆಯ ಶಾಸನದ ಗುರುಪರಂಪರೆಯನ್ನು ಕುರಿತು ಕವಿಚರಿತಕಾರರು ಅಭಿಪ್ರಾಯ ಸಾಧುವಾಗಿಲ್ಲವೆಂದು ಹೇಳಿ ಅದನ್ನು ವಿಮರ್ಶಿಸಿ, ಶಾಸನೋಕ್ತ ಗುಣನಂದಿಯೂ ಆತನ ಶಿಷ್ಯ ದೇವೇಂದ್ರಮುನಿಯೂ ಪ್ರ.ಶ. 700ಕ್ಕಿಂತ ಹಿಂದೆ ಇದ್ದವರು, ಪ್ರ.ಶ.ಸು. 900 ರಲ್ಲಿದ್ದವರಲ್ಲ ಎಂದು ವಾದಿಸಿದ್ದಾರೆ. ಹಾಗಾದರೆ ಶ್ರವಣಬೆಳ್ಗೊಳದ ಶಾಸನದಲ್ಲಿ ಈತನನ್ನು ಸಾಹಿತ್ಯ ವಿದ್ಯಾಪತಿ ಮುಂತಾಗಿ ಸ್ತುತಿಸಿದೆಯಲ್ಲ.


ಕನ್ನಡದಲ್ಲಿ ಅಷ್ಟು ಹಿಂದೆಯೇ ಈತ ಏನಾದರೂ ಬರೆದಿದ್ದಿರಬಹುದೇ ಎಂಬ ಪ್ರಶ್ನೆಗೆ ಏನು ಉತ್ತರ? ಈತನಿಗೆ ಹೇಳಿರುವ ವಿಶೇಷಣಗಳಿಂದ ಈತನನ್ನು ಪಂಡಿತನೆಂದು ತಿಳಿಯಬಹುದಲ್ಲದೆ ಕವಿಯೆಂದೇನೂ ತಿಳಿಯಬೇಕಾಗಿಲ್ಲ. ಒಂದು ಪಕ್ಷ ಈತ ಕನ್ನಡದಲ್ಲಿ ಕೃತಿರಚನೆ ಮಾಡಿದ್ದಿದ್ದರೆ ಕವಿರಾಜಮಾರ್ಗ, ಕಾವ್ಯಾವಲೋಕನಗಳಲ್ಲಿ ಈತನ ಹೆಸರಿನ ಪ್ರಸ್ತಾಪವಿರುತ್ತಿದ್ದಿತು-ಎಂದು ವೆಂಕಟಸುಬ್ಬಯ್ಯನವರು ಹೇಳಿ, ಅಂಥ ಸಾಧ್ಯತೆಯನ್ನು ಅಲ್ಲಗಳೆದಿದ್ದಾರೆ. ಅವರ ನಿರ್ಣಯ ಎಂದರೆ- ಶಾಸನೋಕ್ತ ಗುಣನಂದಿ ಪ್ರ.ಶ.ಸು. 700ಕ್ಕೆ ಪುರ್ವದಲ್ಲಿದ್ದ ಒಬ್ಬ ಬೇರೆಯೇ ವ್ಯಕ್ತಿ.

ಸೂಕ್ತಿ ಸುಧಾರ್ಣವ, ಶಬ್ದಮಣಿದರ್ಪಣಗಳಲ್ಲಿ ಉಕ್ತನಾಗಿರುವ ಗುಣನಂದಿ ಇನ್ನೊಬ್ಬ ಬೇರೆಯೇ ವ್ಯಕ್ತಿ. ಈ ಎರಡನೆಯಾತ ಆಚಣ್ಣ, ಜನ್ನ, ಪಾಶರ್ಚ್‌ಪಂಡಿತ, ಗುಣವರ್ಮ ಮುಂತಾದ 13ನೆಯ ಶತಮಾನದ ಕವಿಗಳಿಂದ ಉಲ್ಲೇಖಿಸಲ್ಪಡದಿರುವ ಕಾರಣ ಅವರಿಂದ ಈಚೆಗೆ ಸೂಕ್ತಿ ಸುಧಾ ರ್ಣವ, ಶಬ್ದಮಣಿದರ್ಪಣಗಳ ಕಾಲಕ್ಕಿಂತ ಮುಂಚೆ, ಸು.1250ರಲ್ಲಿದ್ದು ಕನ್ನಡದಲ್ಲಿ ಕಾವ್ಯರಚನೆ ಮಾಡಿದ.


ಹೀಗೆ ಗುಣನಂದಿಕವಿಯ ಚರಿತ್ರೆಯಲ್ಲಿ ಕೆಲವು ತೊಡಕುಗಳಿರುವುದು ದಿಟವಾದರೂ ಮಲ್ಲಿಕಾರ್ಜುನ ಕೇಶಿರಾಜರಿಗೆ ಮೊದಲು ಗುಣನಂದಿಯೆಂಬ ಒಬ್ಬ ಕವಿಯಿದ್ದುದೂ ಆತ ಕನ್ನಡದಲ್ಲಿ ಕೃತಿರಚನೆ ಮಾಡಿದ್ದುದೂ ಸ್ಪಷ್ಟವಾದ ವಿಷಯ. ಆ ಇಬ್ಬರೂ ಉಲ್ಲೇಖಿಸಿರುವ ಗುಣನಂದಿ ಹಾಗೂ ಶಾಸನಗಳಲ್ಲಿ ಉಕ್ತನಾಗಿರುವ ಗುಣನಂದಿ ಇಬ್ಬರೂ ಅಭಿನ್ನರೋ ಅನ್ಯಾನ್ಯರೋ ಎನ್ನುವ ಅಂಶ ಮಾತ್ರ ಇನ್ನೂ ನಿಷ್ಕೃಷ್ಟವಾಗಿ ತಿಳಿದಿಲ್ಲ. ಪ್ರಸ್ತುತ ಗುಣನಂದಿಕವಿಯ ಪ್ರಸ್ತಾಪ ಬಂದಾಗ, ವಿದ್ವಾಂಸರು ಕರ್ಣಾಟಕ ಕವಿಚರಿತೆಕಾರರ ಅಭಿಪ್ರಾಯವನ್ನೇ ಉದ್ಧರಿಸುವುದು ಕಾಣುತ್ತೇವೆ.

"https://kn.wikipedia.org/w/index.php?title=ಗುಣನಂದಿ&oldid=1051863" ಇಂದ ಪಡೆಯಲ್ಪಟ್ಟಿದೆ