ಖವಾಸ್ ಖಾನ್
ಖವಾಸ್ ಖಾನ್ ಎಂಬುದು ಬಿಜಾಪುರದ ಆದಿಲ್ ಶಾಹಿ ವಂಶದ ದೊರೆಗಳ ಒಬ್ಬ ಸರದಾರನಾಗಿದ್ದ ದೌಲತ್ ಖಾನನ ಬಿರುದು.
ಜೀವನ
[ಬದಲಾಯಿಸಿ]ಇಬ್ರಾಹಿಮನ ಮರಣಾನಂತರ ಮುಹಮ್ಮದ್ ಖಾನನಿಗೆ ರಾಜ್ಯ ದೊರಕಿಸಿಕೊಡಲು ಇವನು ಬಹುವಾಗಿ ಶ್ರಮಿಸಿದ. ಈ ಕಾರಣಕ್ಕಾಗಿ ಮುಹಮ್ಮದ್ ಖಾನ್ ಈತನಿಗೆ ಖವಾಸ್ ಖಾನ್ ಎಂಬ ಬಿರುದನ್ನು ನೀಡಿ ಇವನನ್ನು ತನ್ನ ಪ್ರಧಾನಿಯನ್ನಾಗಿ ನೇಮಿಸಿಕೊಂಡ. ಇದರಿಂದ ಇವನಿಗೆ ಅಹಂಕಾರ ಬಂತು. ತನ್ನ ಶಕ್ತಿ ಬೆಳೆಸಿಕೊಳ್ಳಲು ಯತ್ನಿಸಿ ಪ್ರತಿಸ್ಪರ್ಧಿಗಳನ್ನು ಅಡಗಿಸಿದ. ಈತನ ಅಹಂಕಾರವನ್ನು ನೋಡಿ ಮುಹಮ್ಮದ್ ಖಾನನಿಗೂ ಬೇಸರವಾಯಿತು. ಜನಾಭಿಪ್ರಾಯ ಚೆನ್ನಾಗಿಲ್ಲ ಎನ್ನುವುದನ್ನು ಕಂಡುಕೊಂಡ ಖವಾಸ್ ಖಾನ್ ಸಮಯ ಸಾಧಿಸಿ, ಬಿಜಾಪುರದ ಮೇಲೆ ದಂಡೆತ್ತಿ ಬರಲು ದೆಹಲಿಯ ಬಾದಶಹನಾದ ಶಾಹ್ ಜಹಾನ್ನಿಗೆ ಆಮಂತ್ರಣ ಕೊಟ್ಟ.
ಮುಂದೆ ಔರಂಗ್ಜ಼ೇಬ್ ಶಿವಾಜಿಯ ವಿರುದ್ಧ ಹೋರಾಡಲು ಜಯಸಿಂಹನ ನೇತೃತ್ವದಲ್ಲಿ ದೊಡ್ಡ ಸೈನ್ಯವೊಂದನ್ನು ಕಳಿಸಿದ.[೧] ಆ ಸಮಯಕ್ಕೆ ಖವಾಸ್ ಖಾನನೂ ಶಿವಾಜಿಯ ಮೇಲೆ ಏರಿಹೋದ. ಎರಡೂ ಸೈನ್ಯಗಳು ಪರಸ್ಪರ ಸಂಧಿಸುವ ಮುನ್ನವೇ ಶಿವಾಜಿಯ ಸೈನ್ಯಕ್ಕೂ ಖವಾಸ್ ಖಾನನ ಸೈನ್ಯಕ್ಕೂ ಒಂದು ದುರ್ಗಮ ಪ್ರದೇಶದಲ್ಲಿ ನಿರ್ಣಾಯಕವಾದ ಯುದ್ಧ ನಡೆಯಿತು. ಖವಾಸ್ ಖಾನ್ ಯುದ್ಧದಲ್ಲಿ ಗಾಯಗೊಂಡು ಸತ್ತನೆಂಬ ಸುಳ್ಳು ಸುದ್ದಿ ಹರಡಿತು. ಈ ನಡುವೆ ಶಿವಾಜಿ ಮತ್ತು ಜಯಸಿಂಹರ ಮಧ್ಯೆ ಒಪ್ಪಂದವಾಗಿ ಜಯಸಿಂಹ ಮುಂದುವರಿದು ಬಿಜಾಪುರದವರನ್ನು ಸುಲಿಗೆ ಮಾಡತೊಡಗಿದ.
ಖವಾಸ್ ಖಾನನ ವಿರೋಧದಿಂದಾಗಿ ಆದಿಲ್ ಶಾಹಿಯ ರಾಜ್ಯಭಾರ ಅಸ್ತವ್ಯಸ್ತಗೊಂಡಿತ್ತು. ಇದನ್ನರಿತ ಔರಂಗ್ಜ಼ೇಬ್ ಆದಿಲ್ಶಾಹಿಯನ್ನು ಗೆದ್ದು ಬರಲು ತನ್ನ ಸೇನಾಪತಿಗಳಾದ ಬಹುದ್ದೂರ್ ಶಹ ಮತ್ತು ದಿಲೇರ್ ಖಾನರನ್ನು ಕಳುಹಿಸಿದ. 1675ರ ಅಕ್ಟೋಬರ್ 19ರಂದು ಬಹದ್ದೂರ್ ಶಹನನ್ನು ಖವಾಸ್ ಖಾನ್ ಭೀಮಾ ನದಿಯ ದಂಡೆಯ ಮೇಲೆ ಭೇಟಿ ಮಾಡಿದ. ಆದಿಲ್ ಶಾಹಿ ರಾಜ್ಯವನ್ನು ವೈಯಕ್ತಿಕ ಸ್ವಾರ್ಥಕ್ಕಾಗಿ ದಾನಮಾಡುವುದೇ ಈ ಭೇಟಿಯ ಉದ್ದೇಶವಾಗಿದೆ ಎಂಬ ಶಂಕೆಯಿಂದ ಖವಾಸ್ ಖಾನನ ವಿರೋಧಿಯಾದ ಬಹಲೋಲ್ ಖಾನ್ ಆತನನ್ನು ಬಂಕಾಪುರದಲ್ಲಿ ಕೈದುಮಾಡಿಟ್ಟು, ಆಡಳಿತದ ಹೊಣೆಯನ್ನು ತಾನೇ ಕೈಯಲ್ಲಿ ತೆಗೆದುಕೊಂಡ. ಮುಹಮ್ಮದ್ ಖಾನನ ಆಜ್ಞೆಯ ಮೇರೆಗೆ ಖವಾಸ್ ಖಾನನನ್ನು 1676ರ ಜನವರಿ 20ರಂದು ಆತನ ವಾಡೆಯಲ್ಲೇ ಕೊಲೆಗೆ ಈಡುಮಾಡಲಾಯಿತು.
ಉಲ್ಲೇಖಗಳು
[ಬದಲಾಯಿಸಿ]- ↑ Sarkar 1992, p. 80.
ಗ್ರಂಥಸೂಚಿ
[ಬದಲಾಯಿಸಿ]- Sarkar, Jadunath (1992). Shivāji and his times. Bombay: Orient Longman. ISBN 0-86125-609-3. OCLC 29616512.