ವಿಷಯಕ್ಕೆ ಹೋಗು

ಸೇಂಟ್ ಅಂತೋನಿ ಬೆಸಿಲಿಕಾ, ಡೋರ್ನಹಳ್ಳಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಂತ ಅಂತೋಣಿಯವರ ಪುಣ್ಯ ಕ್ಷೇತ್ರ, ಡೋರ್ನಹಳ್ಳಿ

ಕರ್ನಾಟಕದ ಡೋರ್ನಹಳ್ಳಿಯಲ್ಲಿರುವ ಸೇಂಟ್ ಅಂತೋನಿ ಬೆಸಿಲಿಕಾವು ಪಡುವಾ ಸಂತ ಅಂತೋನಿ ಅವರಿಗೆ ಸಮರ್ಪಿತವಾದ ಕ್ಯಾಥೋಲಿಕ್ ದೇವಾಲಯವಾಗಿದೆ [].

ಸುಮಾರು ೨೦೦ ವರ್ಷಗಳ ಹಿಂದೆ ಡೋರ್ನಹಳ್ಳಿಯಲ್ಲಿ ತನ್ನ ಹೊಲವನ್ನು ಉಳುಮೆ ಮಾಡುತ್ತಿದ್ದ ರೈತನೊಬ್ಬ ಪಡುವಾ ಸಂತ ಅಂತೋನಿಯವರ ಮರದ ಪ್ರತಿಮೆಯನ್ನು ಕಂಡುಹಿಡಿದನು []. ರೈತನು ಸಂತನ ಗೌರವಾರ್ಥವಾಗಿ ಒಂದು ಸಣ್ಣ ಪೂಜಾ ಸ್ಥಳವನ್ನು ನಿರ್ಮಿಸಿದನು. ೧೯ ನೇ ಶತಮಾನದ ಮಧ್ಯದಲ್ಲಿ ಈ ಸ್ಥಳದಲ್ಲಿ ಒಂದು ದೊಡ್ಡ ಚರ್ಚ್ ಅನ್ನು ನಿರ್ಮಿಸಲಾಯಿತು ಮತ್ತು ೧೯೨೦ ರಲ್ಲಿ ಇನ್ನೊಂದು ಚರ್ಚ್ ಅನ್ನು ನಿರ್ಮಿಸಲಾಯಿತು. ಈ ಚರ್ಚ್ ಶಿಥಿಲಾವಸ್ಥೆಯಲ್ಲಿದ್ದಾಗ ಅದನ್ನು ಕೆಡವಲಾಯಿತು ಮತ್ತು ೧೯೬೯ ರಲ್ಲಿ ಪುನರ್ನಿರ್ಮಿಸಲಾಯಿತು. ಆದಾಗ್ಯೂ ೧೯೨೦ರ ಚರ್ಚ್‌ನ ಮುಂಭಾಗವನ್ನು ನವೀಕರಿಸಲಾಯಿತು ಮತ್ತು ಉಳಿಸಿಕೊಳ್ಳಲಾಯಿತು. ಟೌ (ಇಂಗ್ಲಿಷ್ ಅಕ್ಷರಮಾಲೆ ಟಿ) ಶಿಲುಬೆಯ ಆಕಾರದಲ್ಲಿರುವ ಈ ಚರ್ಚ್ ಸಾವಿರ ಜನರಿಗೆ ಅವಕಾಶ ಕಲ್ಪಿಸುತ್ತದೆ. ಇದು ಇಟಲಿಯಿಂದ ತಂದ ಸೇಂಟ್ ಅಂತೋನಿಯ ಸಣ್ಣ ಅವಶೇಷವನ್ನೂ ಹೊಂದಿದೆ.

ಪೋಪ್ ಫ್ರಾನ್ಸಿಸ್ ಅವರು ೧೭ ಅಕ್ಟೋಬರ್ ೨೦೧೯ರ ತೀರ್ಪಿನ ಮೂಲಕ ದೇವಾಲಯಕ್ಕೆ ಮೈನರ್ ಬೆಸಿಲಿಕಾ ಎಂಬ ಬಿರುದನ್ನು ನೀಡಿದರು [] [].

ವಾರ್ಷಿಕೋತ್ಸವ

[ಬದಲಾಯಿಸಿ]
ಸಂತ ಅಂತೋಣಿಯವರ ಪ್ರತಿಮೆ

ಪ್ರತಿ ವರ್ಷ ಜೂನ್ ತಿಂಗಳ ೧೩ ರಂದು ಸಂತ ಅಂತೋಣಿಯವರ ವಾರ್ಷಿಕ ಹಬ್ಬವನ್ನು ಆಚರಿಸಲಾಗುತ್ತದೆ. ಅಂದು ಸಂತ ಅಂತೋಣಿಯವರು ಮರಣ ಹೊಂದಿದ ದಿನವಾಗಿರುತ್ತದೆ. ಈ ಸಂತರು ಇಟಲಿ ದೇಶದ ಪಾದುವ ಎಂಬ ಊರಿನವರು. ಇದರಿಂದಾಗಿ ಇವರನ್ನು ಪಾದುವ ಸಂತ ಅಂತೋಣಿ ಎಂದು ಕರೆಯುತ್ತಾರೆ.

ಹಿನ್ನಲೆ

[ಬದಲಾಯಿಸಿ]
ಸಂತ ಅಂತೋಣಿ

ಸುಮಾರು ೨೦೦ ವರ್ಷಗಳ ಹಿಂದೆ ಒಬ್ಬ ರೈತ ಈ ಡೋರ್ನಹಳ್ಳಿಯ ತನ್ನ ಹೊಲದಲ್ಲಿ ಉಳುಮೆ ಮಾಡುತ್ತಿರುವಾಗ ಆಶ್ಚರ್ಯಕರವಾಗಿ ನೇಗಿಲಿನಿಂದ ಒಂದು ಶಬ್ದ ಕೇಳಿಸುತ್ತದೆ. ಆಗ ಅವನು ತನ್ನ ನೇಗಿಲನ್ನು ನೋಡಿದಾಗ ಅಲ್ಲಿ ಮನುಷ್ಯನ ಮುಖವನ್ನು ಹೋಲುವ ಒಂದು ಮರದ ಗೊಂಬೆ ಕಾಣಿಕೊಳ್ಳುತ್ತದೆ. ರೈತ ಅದನ್ನು ತನ್ನ ಕೈಯಲ್ಲಿ ತೆಗೆದುಕೊಂಡು ಜೋಪಾನವಾಗಿ ಪರಿಶೀಲಿಸಿದ. ಅವನ ಆಶ್ಚರ್ಯಕ್ಕೆ ಹಲವಾರು ವರ್ಷಗಳಿಂದ ಮಣ್ಣಿನಲ್ಲಿರುವ ಗೆದ್ದಲುಗಳು ಈ ಗೊಂಬೆಯನ್ನು ತಿಂದಿರಲಿಲ್ಲ. ರೈತ ಅದನ್ನು ಒಂದು ಅಧ್ಭುತ ಎಂದು ಭಾವಿಸಿದ. ಅದನ್ನು ತನ್ನ ಮಕ್ಕಳಿಗೆ ಆಟವಾಡಲು ಒಂದು ಉತ್ತಮ ಆಟಿಕೆ ಎಂದು ಯೋಚಿಸಿ ಅದನ್ನು ಒಂದು ಪಕ್ಕಕೆ ಇಟ್ಟು ತನ್ನ ಕೆಲಸವನ್ನು ಮುಗಿಸಿ ಆ ಗೊಂಬೆಯನ್ನು ಮನೆಗೆ ತಂದು ತನ್ನ ಮುದ್ದಿನ ಮಕ್ಕಳಿಗೆ ಆಟವಾಡಲು ನೀಡುತ್ತಾನೆ.

ಆ ರಾತ್ರಿ ರೈತ ಮಲಗಿರುವಾಗ ತನ್ನ ಕನಸಿನಲ್ಲಿ ಈ ಗೊಂಬೆ ಅವನಿಗೆ ಒಬ್ಬ ಸನ್ಯಾಸಿಯಂತೆ ಕಾಣಿಸಿಕೊಂಡಿತು. ಈ ಸನ್ಯಾಸಿಯ ನಿಲುವಂಗಿಯಲ್ಲಿರುವ ಋಷಿ ಗೊಂಬೆಯನ್ನು ಅವಮಾನಿಸಬಾರದೆಂದು ಹೇಳಿತು ಹಾಗೂ ರೈತನು ಬಯಸುವ ಎಲ್ಲಾ ಒಳ್ಳೆಯ ಭರವಸೆಗಳನ್ನು ಈಡೇರಿಸುವಂತೆ ನಂಬಿಕೆ ನೀಡಿತು. ಆದರೆ ಈ ರೈತನು ಅದನ್ನು ನಿರ್ಲಕ್ಷಿಸಿ ಎಂದಿನಂತೆ ತನ್ನ ಸಾಮಾನ್ಯ ಕೆಲಸದಲ್ಲಿ ಮಗ್ನನಾದ ಕಾರಣ ತನ್ನ ಎತ್ತುಗಳನ್ನು ಕಳೆದು ಕೊಂಡನು ಹಾಗೂ ತನ್ನ ಬಂಧುಗಳು ಮರಣ ಹೊಂದಿದರು. ನಂತರ ತನ್ನ ಮುದ್ದಿನ ಮಕ್ಕಳು ಅನಾರೋಗ್ಯಕ್ಕೆ ತುತ್ತಾದರು. ಆಗ ಅವರಿಗೆ ಕನಸಿನ ಅರಿತು ಮೂಡಿತು. ಅವರು ಮಾಡಿದು ತಪ್ಪೆಂದು  ತಿಳಿದುಕೊಂಡರು. ಪಶ್ಚಾತಾಪ ಪಟ್ಟು ತನ್ನ ಹೊಲದಲ್ಲಿ ಕಂಡುಕೊಂಡ ಸ್ಥಳದಲ್ಲಿ ಒಂದು ಸಣ್ಣ ದೇವಾಲಯವನ್ನು ನಿರ್ಮಿಸಿ ಅದನ್ನು ಪೂಜಿಸಲು ಪ್ರಾರಂಭಿಸಿದನು. ಹೀಗೆ ಮಾಡಿದಾಗ ಅವನ ಎಲ್ಲಾ ಮಕ್ಕಳ ಕಾಯಿಲೆಗಳು ಗುಣವಾದವು ಹಾಗೂ ಅವನು ಉತ್ತಮ ರೀತಿಯಲ್ಲಿ ಅಭಿವೃದ್ಧಿ ಹೊಂದಿದನು.

ಹಲವಾರು ವರ್ಷಗಳ ನಂತರ ಅವನು ಮೈಸೂರಿನ ಒಬ್ಬ ಕ್ರೈಸ್ತ ಸನ್ಯಾಸಿಯನ್ನು (ಗುರುಗಳನ್ನು) ಭೇಟಿಯಾದನು. ಅವರು ಗೊಂಬೆಯನ್ನು ಹೋಲುವ  ಉಡುಪನ್ನು ಧರಿಸಿದ್ದರು. ಈ ಗೊಂಬೆಯ ಬಗ್ಗೆ ವಿವರಿಸಿದರು. ಕ್ರೈಸ್ತ ಗುರುಗಳು ಆ ರೈತನೊಂದಿಗೆ ಆ ಹಳ್ಳಿಗೆ ಹೋಗಿ ಅಲ್ಲಿರುವ ಕೈಗಳಿಲ್ಲದ ಸಣ್ಣ ೧೩ ಇಂಚಿನ ಮರದ ಗೊಂಬೆಯನ್ನು ಅತಿ ಸೂಕ್ಷ್ಮವಾಗಿ ಗಮನಿಸಿದರು. ಆಗ ಅವರಿಗೆ ತಕ್ಷಣ ಇದು ಸಂತ ಅಂತೋಣಿಯವರ ಪ್ರತಿಮೆ ಎಂದು ತಿಳಿಯಿತು. ನಂತರ ಆ ಸ್ಥಳದಲ್ಲಿ ಒಂದು ದೊಡ್ಡ ದೇವಾಲಯವನ್ನು ನಿರ್ಮಿಸಲಾಯಿತು. ೧೩ ಜೂನ್ ೧೯೯೯ ರಲ್ಲಿ ಅಂದಿನ ಮೈಸೂರಿನ ಧರ್ಮ ಅಧ್ಯಕ್ಷರು ಅದನ್ನು ಪವಿತ್ರಗೊಳಿಸಿದರು. ಪ್ರತಿ ಮಂಗಳವಾರ ವಿಶೇಷ ಆರಾಧನೆ, ಜಪಸರ, ದಿವ್ಯ ಬಳಿ ಪೂಜೆಗಳನ್ನು ಭಕ್ತಿಯಿಂದ ನೆರವೇರಿಸಲಾಗುತ್ತದೆ. ಈ ಸಂತರು ಅನೇಕ ಅದ್ಭುತಗಳನ್ನು ಮಾಡುತ್ತಾರೆ. ಮುಖ್ಯವಾಗಿ ಕಳೆದು ಹೋದ ವಸ್ತುಗಳನ್ನು ಮರಳಿ ಸಿಗುವಂತೆ ಮಾಡುತ್ತಾರೆ. ಇವರನ್ನು ಪವಾಡ ಪುರುಷರು, ಅದ್ಭುತ ತಾರೆ ಎಂದು ಕರೆಯುತ್ತಾರೆ.

ಸಂತ ಅಂತೋಣಿಯವರ ನಾಲಿಗೆ ಮತ್ತು ದವಡೆ ಮೂಳೆಯನ್ನು ಇಟಲಿಯ ಸಂತ ಅಂತೋಣಿಯವರ ಚರ್ಚ್‌ನಲ್ಲಿ ಪ್ರದರ್ಶಿಸಲಾಗುತ್ತದೆ.

ವಿಶೇಷತೆ

[ಬದಲಾಯಿಸಿ]

ಸಂತ ಅಂತೋಣಿಯವರ ಅವಶೇಷಗಳ ನೋಟವು ಕ್ಯಾಥೋಲಿಕ್ ಕ್ರೈಸ್ತರಿಗೆ ನಂಬಿಕೆ, ಕುಟುಂಬ, ಸಾಮರಸ್ಯ, ಆರೋಗ್ಯ, ಮನಸಿನ ಶಾಂತಿ ಮತ್ತು ಭೌತಿಕ ವಸ್ತುಗಳ ನಷ್ಟವನ್ನು ನಿಭಾಯಿಸಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ. ಈ ಪ್ರತಿಮೆಯನ್ನು ಸುರಕ್ಷಿತವಾಗಿ ಗಾಜಿನಿಂದ ಆವೃತ್ತವಾದ ಬಲಿಪೀಠದಲ್ಲಿ ಇಡಲಾಗಿದೆ. ವಿಶೇಷ ದಿನಗಳಲ್ಲಿ ಸಂತ ಅಂತೋಣಿಯವರ ಪ್ರತಿಮೆಯನ್ನು ಭಕ್ತರ ತಲೆ ಮೇಲೆ ಇಟ್ಟು ಪ್ರಾರ್ಥಿಸಿ ಆಶೀರ್ವದಿಸುತ್ತಾರೆ.

ರೋಮ್ ಇಂದ ಪೋಪ್ ಗುರುಗಳು ಸಂತ ಅಂತೋಣಿಯವರ ಪುಣ್ಯಕ್ಷೇತ್ರವನ್ನು ಅಧಿಕೃತವಾಗಿ ಕಿರಿಯ ಬೆಸಿಲಿಕಾ ಎಂದು ಪರಿವರ್ತಿಸಿರುತ್ತಾರೆ. ಆದಕಾರಣ ಇಲ್ಲಿಗೆ ಜನ ಸಾಗರವೇ ಹರಿದು ಬರುತ್ತದೆ. ಹಬ್ಬದ ದಿನದಂದು ಈ ಪುಟ್ಟ ಹಳ್ಳಿಯನ್ನು ದೀಪಗಳಿಂದ ಅಲಂಕರಿಸುತ್ತಾರೆ ಹಾಗೂ ತೇರು ಮೆರವಣಿಗೆಯನ್ನು ಇಡೀ ಹಳ್ಳಿಯಲ್ಲಿ ಮಾಡುತ್ತಾರೆ.

ಉಲ್ಲೇಖಗಳು

[ಬದಲಾಯಿಸಿ]