ವಿಷಯಕ್ಕೆ ಹೋಗು

ಪ್ರತ್ಯಾಮ್ಲ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಾಬೂನುಗಳು ಕೊಬ್ಬಿನ ಆಮ್ಲಗಳು ಮತ್ತು ಸೋಡಿಯಂ ಹೈಡ್ರಾಕ್ಸೈಡ್ ಅಥವಾ ಪೊಟ್ಯಾಶಿಯಮ್ ಹೈಡ್ರಾಕ್ಸೈಡ್ ಪ್ರತಿಕ್ರಿಯಿಸಿದಾಗ ರೂಪಗೊಳ್ಳುವ ದುರ್ಬಲ ಪ್ರತ್ಯಾಮ್ಲಗಳು

ಪ್ರತ್ಯಾಮ್ಲ ಎಂದರೆ ಜಲ ದ್ರಾವಣದಲ್ಲಿರುವ ಹೈಡ್ರಾಕ್ಸೈಡ್ ಆಯಾನನ್ನು (OH-) ಬಿಡುಗಡೆ ಮಾಡುವ, ಆಮ್ಲಗಳನ್ನು ತಟಸ್ಥಗೊಳಿಸುವ (ನ್ಯೂಟ್ರಲೈಸ್) ಅಥವಾ ಎಲೆಕ್ಟ್ರಾನ್ ಕೊರತೆ ಇರುವ ವಸ್ತುವಿನೊಡನೆ ಸಂಯೋಜನೆಗೊಂಡು ಅದಕ್ಕೆ ಎಲೆಕ್ಟ್ರಾನ್ ನೀಡುವ ವಸ್ತು (ಬೇಸ್). ಕ್ಷಾರ ಲಿಟ್ಮಸ್ಸನ್ನು ನೀಲಿ ಬಣ್ಣಕ್ಕೆ ತಿರುಗಿಸುವುದು. ಮುಟ್ಟಿದರೆ ಸಾಬೂನು ಮುಟ್ಟಿದ ಭಾವನೆ ಬರುವುದು.[] ಖಾರವಾಗಿದ್ದು ನಾಲಿಗೆಯನ್ನು ಕೊರೆಯುವುದು. ಮಿಥೈಲ್ ಆರೆಂಜ್, ಪ್ರತ್ಯಾಮ್ಲಗಳಲ್ಲಿ ಹಳದಿ ಬಣ್ಣವನ್ನೂ ಹೊಂದುವುದು. ಫಿನಾಲ್‌ಫ್ತಲೀನ್ ಪ್ರತ್ಯಾಮ್ಲಗಳಲ್ಲಿ ಗುಲಾಬಿ ಕೆಂಪುಬಣ್ಣ ಹೊಂದುವುದು. ಪ್ರತ್ಯಾಮ್ಲಗಳು ಅನೇಕ ರಾಸಾಯನಿಕ ಪರಿವರ್ತನೆಗಳ ವೇಗವರ್ಧಕಗಳಾಗಿರುವುವು.

ವ್ಯಾಖ್ಯಾನಗಳು ಮತ್ತು ಮುಖ್ಯವಾದ ವಾದಗಳು

[ಬದಲಾಯಿಸಿ]

ಅರೇನಿಯಸ್‌ನ ವಾದ: ಈ ವಾದದ ಪ್ರಕಾರ ನೀರಿನ ದ್ರಾವಣದಲ್ಲಿ ಹೈಡ್ರಾಕ್ಸಿಲ್ ಆಯಾನನ್ನು OH-1 ಕೊಡುವ ವಸ್ತುಗಳೆಲ್ಲವೂ ಪ್ರತ್ಯಾಮ್ಲಗಳು. ಉದಾ: NaOH ಮತ್ತು Ba(OH)2 ಪ್ರತ್ಯಾಮ್ಲಗಳು. ಇವು ನೀರಿನ ದ್ರಾವಣದಲ್ಲಿ ಹೈಡ್ರಾಕ್ಸಿಲ್ ಅಯಾನ್‌ಗಳನ್ನು ಕೊಡುವುವು.

NaOH → Na+ + OH   ಮತ್ತು   Ba(OH)2 → Ba++ + 2OH

ನೀರಿನಲ್ಲಿ ಪ್ರತ್ಯಾಮ್ಲವು ಹೈಡ್ರಾಕ್ಸಿಲ್ ಅಯಾನಿನ ಪ್ರಬಲತೆಯನ್ನು ಹೆಚ್ಚಿಸುವುದು. ಪ್ರತ್ಯಾಮ್ಲಗಳಲ್ಲಿ ಹೈಡ್ರಾಕ್ಸಿಲ್ ಅಯಾನ್ ಗಣನೆಗೆ ಬರುವುದು. ಹೈಡ್ರಾಕ್ಸಿಲ್ ಅಯಾನ್‌ಗಳು ವೇಗವರ್ಧಕಗಳಾಗಿರುವುದರಿಂದ ಪ್ರಬಲ ಪ್ರತ್ಯಾಮ್ಲಗಳ ವೇಗವರ್ಧಕ ಸಾಮರ್ಥ್ಯ ಕಡಿಮೆ. ಅಯಾನುಗಳು ಮಾತ್ರ ವಿದ್ಯುದ್ವಾಹಕಗಳಾದ್ದರಿಂದ ಸಂಪೂರ್ಣ ಅಯಾನೀಕರಿಸುವ ದುರ್ಬಲ ಪ್ರತ್ಯಾಮ್ಲಗಳ ವಿದ್ಯುದ್ವಾಹಕತ್ವ ಕೀಳ್ಮಟ್ಟದ್ದಾಗಿದೆ. ಜಲವಿಶ್ಲೇಷಣೆಯನ್ನೂ (ಹೈಡ್ರಾಲಿಸಿಸ್) ಇದರ ಸಹಾಯದಿಂದ ವಿವರಿಸಬಹುದು.

ಆದರೆ ಈ ವಾದ ಒಂದು ಮಿತಿಯನ್ನು ಹೊಂದಿದೆ. ಪ್ರತ್ಯಾಮ್ಲಗಳ ವರ್ತನೆಗಳ  ಕ್ಷೇತ್ರ ಇಲ್ಲಿ ನೀರಿನ ದ್ರಾವಣಗಳಿಗೆ ಮಾತ್ರ ಸೀಮಿತವಾಗಿದೆ. ಅಲ್ಲದೆ ಹೈಡ್ರಾಕ್ಸಿಲ್ ಅಯಾನನ್ನು ಹೊಂದಿರುವ ಪ್ರತ್ಯಾಮ್ಲಗಳು ಇದರ ವ್ಯಾಪ್ತಿಯೊಳಗೆ ಬರುವುದಿಲ್ಲ. ದ್ರವ ಅವೋನಿಯಾ, ನಿರ್ಜಲ (ಅನ್‌ಹೈಡ್ರಸ್) ಹೈಡ್ರೊಜನ್ ಫ್ಲೊರೈಡ್, ಬೆಂಜೀನ್, ಕ್ಲೋರೋಫಾರಂ ಇತ್ಯಾದಿ ದ್ರವಗಳಲ್ಲಿ ವಿಲೀನವಾದ ಅನೇಕ ವಸ್ತುಗಳು ಪ್ರತ್ಯಾಮ್ಲಗಳ ಗುಣಗಳನ್ನು ಪ್ರದರ್ಶಿಸುವುವು. ಹೈಡ್ರಾಕ್ಸಿಲ್ ಅಯಾನ್ ಇರದ ಪ್ರತ್ಯಾಮ್ಲಗಳು, ಉದಾ, KNH2 ಇರುವುವು.

ಪ್ರೊಟಾನಿಕ್ ಭಾವನೆ: ಈ ವಾದದ ಪ್ರಕಾರ ಪ್ರೊಟಾನನ್ನು ಗ್ರಹಿಸುವ ಸಾಮರ್ಥ್ಯವುಳ್ಳ ಪ್ರತಿಯೊಂದು ವಸ್ತುವೂ ಅದು ಅಣುವಾಗಿರಬಹುದು ಅಥವಾ ಅಯಾನ್ ಆಗಿರಬಹುದು ಪ್ರತ್ಯಾಮ್ಲ.

ಪ್ರತ್ಯಾಮ್ಲ B+ H+

ಪ್ರತ್ಯಾಮ್ಲದ ಪ್ರಬಲತೆ ಪ್ರೊಟಾನ್ ಗ್ರಾಹಕ ಸಾಮರ್ಥ್ಯಕ್ಕೆ ಅನುಗುಣವಾಗಿರುವುದು.

NH2, H2O, HNO3 (ಕೊನೆಯದು ಸಾಮಾನ್ಯವಾಗಿ ಆಮ್ಲವೆಂದು ಪರಿಗಣಿತವಾಗಿರುವುದು) ಪ್ರತ್ಯಾಮ್ಲಗಳು. ಏಕೆಂದರೆ ಇವು ಪ್ರೊಟಾನ್‌ಗ್ರಾಹಕಗಳು.[] ದ್ರಾವಕ (ಸಾಲ್‌ವೆಂಟ್) ವಿಲೀನವಾದ ವಸ್ತುವನ್ನವಲಂಬಿಸಿ ಆಮ್ಲವಾಗಿ ಅಥವಾ ಪ್ರತ್ಯಾಮ್ಲವಾಗಿ ವರ್ತಿಸುವುದು.

ದ್ರಾವಕ ವ್ಯವಸ್ಥೆಗಳ ವಾದ: ಇದರ ಪ್ರಕಾರ ದ್ರಾವಕ ದ್ರಾವಕೀಯ ಧನ ಅಯಾನ್ (ಸಾಲ್ವೊಪಾಸಿಟಿವ್ ಅಯಾನ್) ಮತ್ತು ದ್ರಾವಕೀಯ ಋಣ ಅಯಾನ್‌ಗಳಾಗಿ (ಸಾಲ್ವೊನೆಗೆಟಿವ್ ಅಯಾನ್) ವಿಶ್ಲೇಷಿಸುವುದು.

ದ್ರಾವಣದಲ್ಲಿರುವ ವಸ್ತು ದ್ರಾವಕೀಯ ಋಣಅಯಾನಿನ ಪ್ರಬಲತೆಯನ್ನು ಹೆಚ್ಚಿಸಿದರೆ ಆ ವಸ್ತು ಪ್ರತ್ಯಾಮ್ಲ. KNH2 ದ್ರಾವಕೀಯ ಋಣಅಯಾನಾದ NH2- ಅಯಾನಿನ ಪ್ರಬಲತೆ ಹೆಚ್ಚಿಸುವುದು. ಆದ್ದರಿಂದ ಇದು ಪ್ರತ್ಯಾಮ್ಲ.

ಲೂಯಿಯ ಎಲೆಕ್ಟ್ರಾನಿಕ್ ವಾದ: ರಾಚನಿಕವಾಗಿ ಒಂದು ಜೊತೆ ಎಲೆಕ್ಟ್ರಾನನ್ನು ಕೊಡುವ ಸಾಮರ್ಥ್ಯವುಳ್ಳ ಪರಮಾಣುವನ್ನು ಹೊಂದಿರುವ ಎಲ್ಲ ವಸ್ತುಗಳೂ ಪ್ರತ್ಯಾಮ್ಲಗಳು.[]

ಉಸನೊವಿಷ್‍ನವಾದ: ಈ ವಾದದ ಪ್ರಕಾರ ಅನಯಾನ್‌ಗಳನ್ನು ಅಥವಾ ಎಲೆಕ್ಟ್ರಾನುಗಳನ್ನು ಕೊಡುವ ಅಥವಾ ಕ್ಯಾಟಯಾನ್‌ಗಳೊಡನೆ ಸಂಯೋಜಿಸುವ ಯಾವ ವಸ್ತುವೇ ಆಗಲಿ ಪ್ರತ್ಯಾಮ್ಲವಾಗಿರುವುದು.

ಗುಂಪುಗಳು ಮತ್ತು ಪ್ರಮುಖ ಪ್ರತ್ಯಾಮ್ಲಗಳು

[ಬದಲಾಯಿಸಿ]

ಪ್ರತ್ಯಾಮ್ಲಗಳನ್ನು ನಿರವಯವ ಮತ್ತು ಸಾವಯವ ಎಂದು ಎರಡು ಗುಂಪುಗಳಾಗಿ ವಿಂಗಡಿಸಬಹುದು. ಅವುಗಳಲ್ಲಿ ಪ್ರಮುಖವಾದ ಎಲ್ಲವನ್ನೂ ಈ ಕೆಳಗೆ ಸಂಗ್ರಹವಾಗಿ ವಿವರಿಸಿದೆ.

ನಿರವಯವ ಪ್ರತ್ಯಾಮ್ಲಗಳು: ಕ್ಷಾರಲೋಹಗಳ ಹೈಡ್ರಾಕ್ಸೈಡುಗಳು (ಅಲ್ಕಲಿಮೆಟಲ್ ಹೈಡ್ರಾಕ್ಸೈಡ್); ಇವುಗಳ ಪೈಕಿ ಸೋಡಿಯಂ ಹೈಡ್ರಾಕ್ಸೈಡ್ NaOH ಮತ್ತು ಪೊಟ್ಯಾಸಿಯ ಹೈಡ್ರಾಕ್ಸೈಡ್ KOH ಮುಖ್ಯವಾದವು. ಇವುಗಳ ಪೈಕಿ ಸೋಡಿಯಂ ಹೈಡ್ರಾಕ್ಸೈಡು ಹೆಚ್ಚು ಬಳಸಲ್ಪಡುವ ಪ್ರತ್ಯಾಮ್ಲ. ಇದನ್ನು ಅನೇಕ ರಾಸಾಯನಿಕ ವಸ್ತುಗಳು, ರೇಯಾನು, ವಿಸ್ಕೋಸ್ ರೇಷ್ಮೆ, ಸೆಲ್ಯುಲೋಸ್ ಫಿಲ್ಮುಗಳು, ಸೋಪುಗಳು ಕಾಗದ ಮುಂತಾದುವುಗಳ ತಯಾರಿಕೆಗಳಲ್ಲಿಯೂ ಪೆಟ್ರೋಲಿಯಂ ಶುದ್ಧೀಕರಣದಲ್ಲಿಯೂ ಟಾಕ್ಸೈಟ್ ಅದುರನ್ನು ಶುದ್ಧ ಮಾಡಲೂ ಇತರ ಕೈಗಾರಿಕೆಗಳಲ್ಲಿಯೂ ಉಪಯೋಗಿಸುವರು.

ಕ್ಷಾರಲೋಹಗಳ ಕಾರ್ಬೋನೇಟುಗಳು: ಸೋಡಿಯಂ ಕಾರ್ಬೋನೇಟ್ ಅಥವಾ ವಾಷಿಂಗ್‌ಸೋಡ Na2CO3 ಮತ್ತು ಪೊಟ್ಯಾಸಿಯಂ ಕಾರ್ಬೋನೇಟ್ K2CO3ಗಳು ವಿಶೇಷವಾಗಿ ಬಳಸಲ್ಪಡುವ ಅಲ್ಕಲಿ ಕಾರ್ಬೋನೇಟುಗಳು. ಸೋಡಿಯಂ ಕಾರ್ಬೋನೇಟನ್ನು ಗಾಜು, ಸೋಪಿನ ಪುಡಿ ಮತ್ತು ಇತರ ಶುದ್ಧಿಕಾರಕ ವಸ್ತುಗಳ (ಕ್ಲೀನ್‌ಸಿಂಗ್ ಏಜೆಂಟ್ಸ) ತಯಾರಿಕೆಯಲ್ಲಿಯೂ, ನೀರನ್ನು ಮೆದು ಮಾಡಲು ಮತ್ತು ಇತರ ಅನೇಕ ರಾಸಾಯನಿಕ ಕೈಗಾರಿಕೆಗಳಲ್ಲಿಯೂ ಉಪಯೋಗಿಸುವರು. ಪೊಟ್ಯಾಸಿಯಂ ಕಾರ್ಬೋನೇಟನ್ನು ಗಟ್ಟಿಗಾಜಿನ ತಯಾರಿಕೆಯಲ್ಲಿಯೂ ಅನೇಕ ಉಪಯುಕ್ತ ಪೊಟ್ಯಾಸಿಯಂ ಸಂಯುಕ್ತಗಳ ತಯಾರಿಕೆಯಲ್ಲಿಯೂ ಉಪಯೋಗಿಸುವರು.

ಕ್ಯಾಲ್ಸಿಯಂ ಆಕ್ಸೈಡ್ CaO, ಕ್ಯಾಲ್ಸಿಯಂ ಹೈಡ್ರಾಕ್ಸೈಡ್  Ca(OH)2  ಮತ್ತು ಕ್ಯಾಲ್ಸಿಯಂ ಕಾರ್ಬೋನೇಟ್ CaCO3 ಅತ್ಯಂತ ವಿಸ್ತೃತವಾಗಿ ಮತ್ತು ಅಗಾಧ ಪ್ರಮಾಣಗಳಲ್ಲಿ ಉಪಯೋಗಿಸಲ್ಪಡುವ ಪ್ರತ್ಯಾಮ್ಲಗಳಲ್ಲಿ ಇವು ಅಗ್ರಸ್ಥಾನವನ್ನು ಹೊಂದಿವೆ.

ಕ್ಯಾಲ್ಸಿಯಂ ಹೈಡ್ರಾಕ್ಸೈಡನ್ನು ಕಟ್ಟಡ ನಿರ್ಮಾಣಗಳಲ್ಲಿ ಅವಶ್ಯವಾದ ಗಾರೆಯನ್ನು ತಯಾರಿಸಲೂ, ನೂಲುಗಳನ್ನು ಚೆಲುವೆಮಾಡಲು ಉಪಯೋಗಿಸುವ ಚೆಲುವೆಪುಡಿಯ (ಬ್ಲೀಚಿಂಗ್ ಪೌಡರ್) ತಯಾರಿಕೆಯಲ್ಲಿಯೂ ಇನ್ನೊಂದು ಪ್ರಮುಖ ಪ್ರತ್ಯಾಮ್ಲವಾದ ಕಾಸ್ಟಿಕ್ ಸೋಡದ ತಯಾರಿಕೆಯಲ್ಲಿಯೂ ಚರ್ಮ ಹದಮಾಡುವ ಕಾರ್ಖಾನೆಗಳಲ್ಲಿಯೂ ಉಪಯೋಗಿಸುವರು. ಕ್ಯಾಲ್ಸಿಯಂ ಆಕ್ಸೈಡ್‌ನ್ನು ಇದರ ಹೈಡ್ರಾಕ್ಸೈಡಿನ ತಯಾರಿಕೆಯಲ್ಲಿ ಉಪಯೋಗಿಸುವರಲ್ಲದೆ ಭೂಮಿಯ ಆಮ್ಲೀಯತೆಯನ್ನು ಸರಿಪಡಿಸಲೂ ಹಾಗೂ ಕ್ಯಾಲ್ಸಿಯಂ ಕಾರ್ಬೈಡ್ ಮುಂತಾದ ರಾಸಾಯನಿಕ ವಸ್ತುಗಳ ತಯಾರಿಕೆಯಲ್ಲಿಯೂ ಉಪಯೋಗಿಸುವರು.[] ಕ್ಯಾಲ್ಸಿಯಂ ಕಾರ್ಬೋನೇಟು ವಿವಿಧ ರೂಪಗಳಲ್ಲಿ ದೊರೆಯುವುದು. ಕಟ್ಟಡಗಳಲ್ಲಿ ಸೌಂದರ್ಯಕ್ಕಾಗಿ ಉಪಯೋಗಿಸುವ ಅಮೃತಶಿಲೆ ಕ್ಯಾಲ್ಸಿಯಂ ಕಾರ್ಬೋನೇಟಿನ ಒಂದು ರೂಪ. ಸುಣ್ಣಕಲ್ಲಿನ ರೂಪದಲ್ಲಿ ಪ್ರಕೃತಿಯಲ್ಲಿ ಅಗಾಧ ಪ್ರಮಾಣದಲ್ಲಿ ದೊರೆಯುವ ಕ್ಯಾಲ್ಸಿಯಂ ಕಾರ್ಬೋನೇಟ್‌ನ್ನು ಕ್ಯಾಲ್ಸಿಯಂ ಆಕ್ಸೈಡಿನ ತಯಾರಿಕೆಯಲ್ಲಿಯೂ ಲೋಹ ತಯಾರಿಕೆಯಲ್ಲಿ ಸ್ರಾವಕ (ಫ್ಲಕ್ಸ್) ಆಗಿಯೂ ಇತರ ರಾಸಾಯನಿಕ ಕೈಗಾರಿಕೆಗಳಲ್ಲಿಯೂ ಉಪಯೋಗಿಸುವರು. ಕ್ಯಾಲ್ಸಿಯಂ ಕಾರ್ಬೋನೇಟ್-ಮೆಗ್ಮೀಸಿಯಂ ಕಾರ್ಬೋನೇಟುಗಳ ಯುಗ್ಮ ಲವಣವಾದ ದಾಲಮೈಟ್ CaCO3,MgCO3 ಅನ್ನು ಉಕ್ಕು ಮತ್ತು ಅನೇಕ ಲೋಹಗಳ ತಯಾರಿಕೆಯಲ್ಲಿ ಉಪಯೋಗಿಸುವ ಕುಲುಮೆಗಳಿಗೆ ಅಸ್ತರಿ ಕೊಡಲು (ಲೈನಿಂಗ್) ಉಪಯೋಗಿಸುವರು.

ಸೋಡಿಯಂ ಫಾಸ್ಫೇಟ್ Na3PO4 ಮತ್ತು ಬೋರಾಕ್ಸ್ Na2B4O7 ಗಳನ್ನು ಅನೇಕ ಶುದ್ಧಿಕಾರಕ ಪುಡಿಗಳಲ್ಲಿ ಉಪಯೋಗಿಸುವರು. ಇವು ದ್ರಾವಣದಲ್ಲಿ ಕ್ಷಾರಗಳಂತೆ ವರ್ತಿಸಿ ಜಿಡ್ಡು ಮೊದಲಾದ ಕಶ್ಮಲಗಳನ್ನು ತೊಡೆದು ಹಾಕಲು ಸಮರ್ಥವಾಗುವುವು. ಸೋಡಿಯಂ ಫಾಸ್ಫೇಟನ್ನು ನೀರನ್ನು ಮೆದುಮಾಡಲು ಉಪಯೋಗಿಸುವರು.

ಸಾವಯವ ಪ್ರತ್ಯಾಮ್ಲಗಳು: ಇವುಗಳ ಪೈಕಿ ಅಲಿಫ್ಯಾಟಿಕ್ ಮತ್ತು ಅರೋಮ್ಯಾಟಿಕ್ ಅಮೀನ್‌ಗಳು ಮುಖ್ಯವಾದುವು.  ಮೀಥೈಲ್-, ಈಥೈಲ್-, ಬ್ಯೂಟೈಲ್- ಮತ್ತು ಅಮೈಲ್- ಅಮೀನ್‌ಗಳನ್ನು R-NH2(R=CH3)  ಅಥವಾ -C2H5 - ಅಥವಾ C3H7- ಅಥವಾ -C4H10) ವರ್ಣದ್ರವ್ಯಗಳು, ಕ್ರಿಮಿನಾಶಕಗಳು, ಸಂಶ್ಲೇಷಿತ ಶುದ್ಧಿಕಾರಕಗಳು ಕೃತಕ ನೂಲುಗಳು, ತುಕ್ಕು ಹಿಡಿಯುವುದನ್ನು ತಡೆಗಟ್ಟುವ ವಸ್ತುಗಳು ಮತ್ತು ವಿಶೇಷ ತರಹದ ದ್ರಾವಕಗಳು-ಇವುಗಳ ತಯಾರಿಕೆಗಳಲ್ಲಿ ಕಚ್ಚಾ ವಸ್ತುಗಳಾಗಿ ಉಪಯೋಗಿಸುವರು.  ಟೆಟ್ರಮಿಥಿಲೀನ್ ಡೈಅಮೀನ್ H2N(CH2)4NH2 ಮತ್ತು ಅಡಿಪಿಕ್ ಆಮ್ಲ HOOC(CH2)6COOH ಸಾಂದ್ರೀಕರಣದಿಂದ ಸುಪ್ರಸಿದ್ಧವಾದ ನೈಲಾನ್‌ನ ನೂಲನ್ನು ತಯಾರಿಸುವರು.

ಅನಿಲೀನ್ C6H5NH2 ಮತ್ತು ಮೆಟಫಿನಿಲೀನ್ ಡೈಅಮೀನ್ NH2(C6H4)NH3 ಮುಂತಾದ ವಿವಿಧ ಆರೋಮ್ಯಾಟಿಕ್ ಅಮೀನ್‌ಗಳನ್ನು ಅನಿಲೀನ್ ವರ್ಣ ದ್ರವ್ಯಗಳು ಮತ್ತು ಅಜ಼ೊ ಗುಂಪಿನ ವರ್ಣದ್ರವ್ಯಗಳು-ಇವುಗಳ ತಯಾರಿಕೆಯಲ್ಲಿ ಉಪಯೋಗಿಸುವರು.

ಪಿರಿಡೀನ್ C5H5N ಮತ್ತು ಈ ಗುಂಪಿಗೆ ಸೇರಿದ ಇತರ ಅನೇಕ ಸಂಯುಕ್ತಗಳು ಹೆಟರೋ ಸೈಕ್ಲಿಕ್ ಸಂಯುಕ್ತಗಳ ಗುಂಪಿಗೆ ಸೇರಿದ ಪ್ರತ್ಯಾಮ್ಲಗಳು.  ಸುಪ್ರಸಿದ್ಧವಾದ ಕ್ವಿನೈನ್ ಮತ್ತು ಹೊಗೆಸೊಪ್ಪಿನಲ್ಲಿರುವ ನಿಕೊಟಿನ್‌ಗಳೂ ಈ ಗುಂಪಿನ ಪ್ರತ್ಯಾಮ್ಲಗಳು. ಇವುಗಳನ್ನು ಅನೇಕ ಔಷಧಗಳ ತಯಾರಿಕೆಯಲ್ಲಿಯೂ ಬೂಷ್ಟು ನಿರೋಧಕ ವಸ್ತುಗಳ (ಫಂಗಿಸೈಡ್ಸ್) ತಯಾರಿಕೆಯಲ್ಲಿಯೂ ವಿಶೇಷವಾಗಿ ಬಳಸುವರು.

ಉಲ್ಲೇಖಗಳು

[ಬದಲಾಯಿಸಿ]
  1. Johlubl, Matthew E. (2009). Investigating chemistry: a forensic science perspective (2nd ed.). New York: W. H. Freeman and Co. ISBN 978-1429209892. OCLC 392223218.
  2. Whitten et al. (2009), p. 363.
  3. Lewis, Gilbert N. (September 1938). "Acids and Bases". Journal of the Franklin Institute. 226 (3): 293–313. doi:10.1016/S0016-0032(38)91691-6. Archived from the original on 2 November 2021. Retrieved 3 September 2020.
  4. Tanabe, K.; Misono, M.; Ono, Y.; Hattori, H. (1990). New Solid Acids and Bases: their catalytic properties. Elsevier. p. 14. ISBN 9780080887555. Archived from the original on 8 October 2022. Retrieved 19 February 2015.


  • Whitten, Kenneth W.; Peck, Larry; Davis, Raymond E.; Lockwood, Lisa; Stanley, George G. (2009). Chemistry (9th ed.). ISBN 978-0-495-39163-0.
  • Zumdahl, Steven; DeCoste, Donald (2013). Chemical Principles (7th ed.). Mary Finch.