ವಿಷಯಕ್ಕೆ ಹೋಗು

ಮೆಡೋಸ್ ಟೇಲರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
1873 ರಲ್ಲಿ ಮೆಡೋಸ್ ಟೇಲರ್

ಮೆಡೋಸ್ ಟೇಲರ್, (1808-1876)- ಭಾರತಲ್ಲಿದ್ದ ಒಬ್ಬ ಬ್ರಿಟಿಷ್ ಅಧಿಕಾರಿ, ಕಾದಂಬರಿಕಾರ, ಪುರಾತತ್ವಜ್ಞ.

ಬದುಕು

[ಬದಲಾಯಿಸಿ]

ಲಿವರ್‍ಪೂಲಿನ ವರ್ತಕನೊಬ್ಬನ ಮಗನಾಗಿ 1808ರಲ್ಲಿ ಹುಟ್ಟಿದ. ಫಿಲಿಪ್ ಮೆಡೋಸ್ ಟೇಲರ್ ಎಂಬುದು ಇವನ ಪೂರ್ತಿ ಹೆಸರು. ಇವನ ತನ್ನ 16ನೆಯ ವಯಸ್ಸಿನಲ್ಲಿ ಭಾರತಕ್ಕೆ ಬಂದು ಹೈದರಾಬಾದ್ ನಿಜಾಮನ ಸೈನ್ಯಕ್ಕೆ ಸೇರಿ ದೊಡ್ಡ ಹುದ್ದೆಗೆ ಏರಿದ. ಸುಮಾರು 1840ರಿಂದ ಸುರಪುರ (ಯಾದಗಿರಿ ಜಿಲ್ಲೆ) ನಾಯಕರ ಸಂಸ್ಥಾನದಲ್ಲಿ ಆಗಿನ ಬ್ರಿಟಿಷ್ ಸರ್ಕಾರದ ರಾಜಿಕೀಯ ಪ್ರತಿನಿಧಿಯಾಗಿ, ಸಂಸ್ಥಾನದ ಏಳಿಗೆಗಾಗಿ ಶ್ರಮಿಸಿ ದಕ್ಷನೆಂದು ಪ್ರಸಿದ್ಧಿ ಪಡೆದ.

ಇವನು ಬರುವ ಮುನ್ನ ಆ ಸಂಸ್ಥಾನದ ರಾಜಕೀಯ ಮತ್ತು ಆರ್ಥಿಕ ಪರಿಸ್ಥಿತಿ ತೀರ ಹದಗೆಟ್ಟಿತ್ತು ಕೃಷ್ಣಪ್ಪ ನಾಯಕನ ಮರಣಾನಂತರ ಅವನ ಹಿರಿಯ ರಾಣಿ ಈಶ್ವರಮ್ಮ ತನ್ನ ಚಿಕ್ಕವಯಸ್ಸಿನ ಮಗ ವೆಂಕಟಪ್ಪ ನಾಯಕನ ಹೆಸರಿನಲ್ಲಿ ಸಂಸ್ಥಾನವನ್ನು ಆಳುತ್ತಿದ್ದಳು. ರಾಜಮನೆತನದಲ್ಲಿ ಅಧಿಕಾರಕ್ಕಾಗಿ ನಡೆಯುತ್ತಿದ್ದ ಒಳಜಗಳಗಳನ್ನು ತಪ್ಪಿಸಲು ಟೇಲರ್ ತಾಳ್ಮೆಯಿಂದಲೂ ಚತುರತೆಯಿಂದಲೂ ಪ್ರಯತ್ನಿಸಿದ. ಸಂಸ್ಥಾನದ ಸುಧಾರಣೆಗಾಗಿ ದುಡಿದ. 10ವರ್ಷದ ವೆಂಕಟಪ್ಪ ನಾಯಕನನ್ನು ಸಿಂಹಾಸನದ ಮೇಲೆ ಕೂರಿಸಿ, ಪಟ್ಟಾಭಿಷೇಕ ನೆರವೇರಿಸಿದ. ವೆಂಕಟಪ್ಪ ನಾಯಕನಿಗೆ ವಿದ್ವಾಂಸರಿಂದ ಶಿಕ್ಷಣ ಕೊಡಿಸಿದ. ರಾಜ್ಯದಲ್ಲಿ ರೈತರಿಗಾಗುತ್ತಿದ್ದ ತೊಂದರೆಗಳನ್ನು ನಿವಾರಿಸಿ ಕಂದಾಯದ ವ್ಯವಸ್ಥೆ ಮಾಡಿದ. ಹೈದರಾಬಾದ್ ನಿಜಾóಮ ಸುರಪುರದ ಮೇಲೆ ಅನ್ಯಾಯದ ಸಾಲದ ಹೊರೆ ಏರಿಸಿದ್ದನ್ನು ತಪ್ಪೆಂದು ತೋರಿಸಿ ಅವನಿಂದಲೇ ಸುರಪುರಕ್ಕೆ 11 ಲಕ್ಷ ರೂ. ಬರುವ ಹಾಗೆ ಮಾಡಿದ. ಇವನ ಸುವ್ಯವಸ್ಥಿತ ಆಡಳಿತದಿಂದ ಸಂಸ್ಥಾನದಲ್ಲಿ ದರೋಡೆಗಳು ಕಡಿಮೆಯಾದವು. ಜೋನಾಳ, ಕಚಕನೂರು ಮುಂತಾದೆಡೆಗಳಲ್ಲಿ. ಕೆರೆಗಳು ನಿರ್ಮಾಣವಾದುವು. ರಾಜ್ಯದ ಖರ್ಚನ್ನು ಕಡಿಮೆ ಮಾಡಿ ಆದಾಯವನ್ನು ಹೆಚ್ಚಿಸಿದ. ರಾಜಾ ವೆಂಕಟಪ್ಪ ನಾಯಕ ಟೇಲರ್‍ನಿಂದ ಬ್ರಿಟಿಷರ ರಾಜ್ಯ ಪದ್ಧತಿ, ಸ್ವಾಭಿಮಾನ, ಸ್ವಾತಂತ್ರಯಪ್ರಿಯತೆ ಮುಂತಾದವನ್ನು ಕಲಿತುಕೊಂಡ. 1853ರ ಜೂನ್ 2ರಂದು ಟೇಲರ್ ಆಡಳಿತ ಅಧಿಕಾರವನ್ನು ವೆಂಕಟಪ್ಪ ನಾಯಕನಿಗೆ ಒಪ್ಪಿಸಿ ಬೀರಾರ್ ಜಿಲ್ಲಾಧಿಕಾರಿಯ ಹುದ್ದೆ ವಹಿಸಿಕೊಂಡ.

ರಾಜಾ ವೆಂಕಟಪ್ಪ ನಾಯಕ ಟೇಲರನ ಪ್ರೀತಿಯ ಮತ್ತು ಉತ್ತಮಕಾರ್ಯಗಳ ಜ್ಞಾಪಕಾರ್ಥವಾಗಿ, ಅವನು ಸುರಪುರದಲ್ಲಿ ವಾಸಿಸುತ್ತಿದ್ದ ಬಂಗ್ಲೆಯನ್ನು ಕೃತಜ್ಞತಾಪೂರ್ವಕವಾಗಿ 20.000 ರೂಗಳಿಗೆ ಕೊಂಡ. ಅದನ್ನು ಟೇಲರ್ಸ್ ಮಂಜಿಲ್ ಎಂದು ಕರೆಯುತ್ತಾರೆ. ಈಗ ಇದು ಕರ್ನಾಟಕ ಸರ್ಕಾರದ ಪುರಾತತ್ವ ಶಾಖೆಯ ರಕ್ಷಣೆಯಲ್ಲಿದೆ. ಟೇಲರ್ ಹೈದರಾಬಾದ್ ಸಂಸ್ಥಾನದಲ್ಲಿ ರೆಸಿಡೆಂಟ್ ಜನರಲ್ ಆಗಿದ್ದಾಗ ಠಕ್ಕರನ್ನು ಅಡಗಿಸಿದ್ದು ಅವನ ಇನ್ನೊಂದು ಮುಖ್ಯ ಸಾಧನೆ.

ಕರ್ಣಾಟಕದ ಪ್ರಾಗಿತಿಹಾಸ ಸಂಶೋಧನೆಯಲ್ಲಿ ಟೇಲರನ ಪಾತ್ರ

[ಬದಲಾಯಿಸಿ]
ಟೇಲರನು 1834ರಲ್ಲಿ ಬರೆದ ಭೋಗ ನಂದೀಶ್ವರ ದೇವಸ್ಥಾನದ ಚಿತ್ರ

ಕರ್ಣಾಟಕದ ಪ್ರಾಗಿತಿಹಾಸ ಸಂಶೋಧನೆಯಲ್ಲಿ ಟೇಲರನ ಪಾತ್ರ ದೊಡ್ಡದು. ಈತ 1851-62 ರಲ್ಲಿ ಸುರಪುರ ಭಾಗದಲ್ಲಿ ಹಗರಟಗಿ, ರಾಜನ್-ಕೋಳೂರು ಮತ್ತು ಚಿಕನ್ ಹಳ್ಳಿ, ಶಹಾಪುರ ತಾಲ್ಲೂಕಿನ ಶಹಾಪುರ, ವಿಭೂತಿಹಳ್ಳಿ, ಮತ್ತು ಗೋಗಿ, ಜೇವರಗಿ ತಾಲ್ಲೂಕಿನ ಜೇವರಿಗಿ, ಅಂಡೋಳ ಮುಂತಾದ ಕಡೆಗಳಲ್ಲಿ, ಕರ್ಣಾಟಕದಲ್ಲೇ ಪ್ರಥಮ ಬಾರಿಗೆ. ಬೃಹತ್ ಶಿಲಾಸಂಸ್ಕೃತಿಯ ಕಲ್ಗೋರಿಗಳ ನೆಲೆಗಳನ್ನೂ ಶೋಧಿಸಿದ. ಅವುಗಳಲ್ಲಿ ಕೆಲವನ್ನು ಉತ್ಖನನ ಮಾಡಿದ. ಈ ಉತ್ಖನನಗಳಿಂದ ತಿಳಿದ ವಿಷಯಗಳನ್ನು ಸ್ಪಷ್ಟವಾದ, ಪ್ರಾಮಾಣಿಕವಾದ, ಆಗಿನ ಸಂಶೋಧನ ಮಟ್ಟದಿಂದ ಅತ್ಯುತ್ತಮವೆನ್ನಬಹುದಾದ, ವಿಮರ್ಶಾಕತ್ಮಕವಾದ, ವಿವರಣೆಗಳಿಂದಲೂ ಚಿತ್ರಗಳಿಂದಲೂ ಕೂಡಿದ ಮೂರು ಲೇಖನಗಳನ್ನು ಜರ್ನಲ್ ಆಫ್ ದಿ ಬೆಂಗಾಲ್ ರಾಯಲ್ ಏಷ್ಯಟಿಕ್ ಸೊಸೈಟಿಯಲ್ಲೂ ಟ್ರ್ಯಾನ್ಸ್ಯಾಕ್ಷನ್ಸ್ ಆಫ್ ದಿ ರಾಯಲ್ ಐರಿಷ್ ಅಕಾಡೆಮಿಯಲ್ಲೂ ಪ್ರಕಟಿಸಿದ. ಈ ಲೇಖನಗಳನ್ನು ಸಂಗ್ರಹಿಸಿ ಹಿಂದಿನ ಹೈದರಾಬಾದ್ ಸರ್ಕಾರ ಮೆಗಾಲಿತಿಕ್ ರಿಮೇನ್ಸ್ ಇನ್ ದಿ ಡೆಕ್ಕನ್ ಎಂಬ ಪುಸ್ತಕವಾಗಿ ಪ್ರಕಟಿಸಿತು. ದಕ್ಷಿಣ ಭಾರತದ ಪ್ರಾಗಿತಿಹಾಸದಲ್ಲಿ ಒಂದು ವಿಶಿಷ್ಟ ಸ್ಥಾನ ಪಡೆದಿರುವ ಬೃಹತ್ ಶಿಲಾಸಂಸ್ಕøತಿಯ ಬಗ್ಗೆ ಪ್ರಪ್ರಥಮ ಉತ್ಖನನ ನಡೆಸಿ ಶ್ರೇಷ್ಠ ಮಟ್ಟದ ಸಂಶೋಧನೆ ನಡೆಸಿದ ಕೀರ್ತಿ ಟೇಲರನದು. ಇವನು ಬ್ರಟಿಷ್ ಸರ್ಕಾರದಿಂದ ಸಿ.ಎಸ್.ಐ. ಪ್ರಶಸ್ತಿ ಗಳಿಸಿದ.

ಕಾದಂಬರಿಗಳು, ಆತ್ಮಕಥೆ

[ಬದಲಾಯಿಸಿ]

ಟೇಲರ್ ಭಾರತದ ಜನಜೀವನವನ್ನು ಕುರಿತು ಕೆಲವು ಕಾದಂಬರಿಗಳನ್ನು ಬರೆದಿದ್ದಾನೆ. ಕನ್ಫೆಷನ್ಸ್ ಆಫ್ ಎ ತಗ್ (1839), ತಾರಾ (1863), ಎ ನೋಬಲ್ ಕ್ವೀನ್ (1878) ಮುಖ್ಯವಾದ ಕೃತಿಗಳು. ದಿ ಸ್ಟೋರಿ ಆಫ್ ಮೈ ಲೈಫ್ ಎಂಬುದು ಈತನ ಆತ್ಮಕಥೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: