ವಿಷಯಕ್ಕೆ ಹೋಗು

ಸದಸ್ಯ:N.samarth1910250

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

thumb|ನನ್ನತಂದೆ ತಾಯಿಯರ ಜೊತೆ|237x237px



ಸಮರ್ಥ ಯಾನ (ಬಾಲ್ಯದಿಂದ ಪ್ರೌಢದವರೆಗೆ)

[ಬದಲಾಯಿಸಿ]

ನನ್ನ ಹೆಸರು ಸಮರ್ಥ್. ನಾನು ೧ನೇ ಅಕ್ಟೋಬರ್ ೨೦೦೧ರಂದು ಬೆಂಗಳೂರಿನಲ್ಲಿ ಜನಿಸಿದೆ. ನನ್ನ ತಂದೆಯ ಹೆಸರು ನವೀನ್ ಕುಮಾರ್, ಅವರು ಒಬ್ಬ ಉದ್ಯಮಿ. ನನ್ನ ತಾಯಿಯ ಹೆಸರು ಜ್ಯೋತಿ, ಹಾಗೂ ಅವರು ಗೃಹಿಣಿ. ನಾನು ಬೆಳದಿದ್ದು ಬೆಂಗಳೂರಿನಲ್ಲಿಯೇ. ಆದ್ದರಿಂದ ಮೊದಲಿಂದ ಆಧುನೀಕರಣ ವನ್ನು ಅನುಭವಿಸಿದ್ದೇನೆ.

ಬಾಲ್ಯ

[ಬದಲಾಯಿಸಿ]

ನಾನು ಪ್ರೀನರ್ಸರಿಯನ್ನು ಬೆಸ್ಟ್ ಬಿಗಿನ್ನರ್ಸ್ ಎಂಬ ಶಾಲೆಯಲ್ಲಿ ಓದಿದ್ದೇನೆ. ಅನಂತರ ಎಲ್. ಕೆ. ಜಿಯನ್ನು ಅರಬಿಂದೋ ಶಾಲೆಯಲ್ಲಿ ಓದಿದ್ದೇನೆ. ಆದರೆ ಕಾರಣಾಂತರಗಳಿಂದ ಶಾಲೆಯನ್ನು ಬದಲಾಯಿಸಬೇಕಾಯಿತು. ಯು. ಕೆ. ಜಿಯಿಂದ ನಾನು 'ಶ್ರೀ ವಾಣಿ ವಿದ್ಯಾ ಕೇಂದ್ರ, ಹನುಮವನ'ದಲ್ಲಿ ಶಿಕ್ಷಣ ಪೂರೈಸಿದೆ. ಮೊದಲಿಗೆ ಆಂಗ್ಲ ಭಾಷೆಯ ಬಳಕೆ ಕಷ್ಟವಾದರೂ, ಸಮಯ ಕಳೆದಂತೆ ಸರಿ ಹೊಂದಿಸಿಕೊಂಡು ಮುನ್ನಡೆದೆ. ಆದರೆ ಕನ್ನಡದ ಬಗ್ಗೆಯ ನನ್ನ ಅಭಿಮಾನ ಹೆಚ್ಚಾಗುತ್ತಲೇ ಹೋಯಿತು. ಕ್ರೀಡೆಗಳನ್ನು ಆಡಿದರೂ, ಅವುಗಳಲ್ಲಿ ಆಸಕ್ತಿ ತೋರಿಸಲು ಆಗಲಿಲ್ಲ. ನನಗೆ ಈ ಕೊರತೆ ಕಾಡುತ್ತಲೇ ಇತ್ತು. ಆದರೆ, ನಮ್ಮ ಶಾಲೆಯಲ್ಲಿ ಒಬ್ಬ ವಿದ್ಯಾರ್ಥಿಯನ್ನು ಸಮಗ್ರ ಬೆಳವಣಿಗೆಯ ಪಥದಲ್ಲಿ ನಡೆಸುತ್ತಾರೆ. ಆದ್ದರಿಂದ, ನಮ್ಮ ಶಾಲಾ ದಿನಗಳು ಪುಸ್ತಕಗಳು, ತರಗತಿಗಳು, ಪಾಠಗಳು ಹಾಗೂ ಪರೀಕ್ಷೆಗಳಿಗೆ ಮಾತ್ರ ಸೀಮಿತವಾಗದೆ, ಕ್ರೀಡೆ, ಸಂಗೀತ, ನೃತ್ಯ, ನಾಟಕ - ಹೀಗೆ ಹಲವಾರು ಕ್ಷೇತ್ರಳಲ್ಲಿ ನಮ್ಮನ್ನು ತೊಡಗಿಸುವುದರಲ್ಲಿ ಶ್ರಮ ವಹಿಸುತ್ತಾರೆ. ಇಂತಹ ಶಾಲೆಯಲ್ಲಿ ಬೆಳೆಯುವುದು ನಮ್ಮ ಪುಣ್ಯವೇ ಸರಿ. ಇದರಿಂದ ನನ್ನ ಶಾಲಾ ಜೀವನ ಆಸಕ್ತದಾಯಕವಾಯಿತು.

ರಂಗ ಸೆಳೆತ

[ಬದಲಾಯಿಸಿ]
ಕೃಷ್ಣ ಜನ್ಮದ ಕಂಸನಾಗಿ

ಒಂದನೇ ತರಗತಿಯಲ್ಲಿರುವಾಗ ಶ್ರೀಮತಿ ಸಂಗೀತರವರ ಬಳಿ ಸಂಗೀತ ಕಲಿಯಲಾರಂಭಿಸಿದೆ. ಸಣ್ಣ ನಾಟಕಗಳು, ನೃತ್ಯ ಪ್ರದರ್ಶನಗಳಲ್ಲಿ ಭಾಗವಹಿಸುತ್ತಾ ಅತ್ಯಂತ ಶ್ರೇಷ್ಠ ವೇದಿಕೆಯನ್ನು (ರಂಗ ಭೂಮಿ) ಪ್ರವೇಶ ಮಾಡಿದೆ. ನಾನು ಮೂರನೇ ತರಗತಿಯಲ್ಲಿ ಓಡಿತುರುವಾಗ ಶ್ರೀ ಮಂಟಪ ಪ್ರಭಾಕರ ಉಪಾಧ್ಯಾಯ ಎಂಬ ಸುಪ್ರಸಿದ್ಧ ಯಕ್ಷಗಾನ ಕಲಾವಿದರೊಬ್ಬರಿಂದ ಮೂರು ದಿನಗಳ ಕಾಲ ನಮ್ಮ ಶಾಲೆಯಲ್ಲಿ ಯಕ್ಷಗಾನ ಪ್ರದರ್ಶನ ಏರ್ಪಡಿಸಿದ್ದರು. ಮಂಟಪ ಪ್ರಭಾಕರ ಉಪಾಧ್ಯಾಯರ ವೈಶಿಷ್ಟ್ಯತೆಯೆಂದರೆ, ಅವರು ಏಕಪಾತ್ರಾಭಿನಯ ಮಾಡುತ್ತಾರೆ. ಅಂದರೆ, ಒಂದು ಸ್ತ್ರೀ ವೇಷ ಪಾತ್ರಧಾರಿಯಾಗಿ ಇಡೀ ಕಥೆಯನ್ನು ವಿವರಿಸುತ್ತಾರೆ. ಬೆಂಗಳೂರಿಗನಾದ ನನಗೆ, ದಕ್ಷಿಣ ಕನ್ನಡದಲ್ಲಿ ಜನಿಸಿದ ಈ ಕಲೆಯ ಬಗ್ಗೆ ಒಂದು ಸಣ್ಣ ಸುಳಿವೂ ಇರಲಿಲ್ಲ. ಮೊದಲ ಬಾರಿಗೆ ನೋಡಿದ ಯಕ್ಷಗಾನದ ಸೌಂದರ್ಯಕ್ಕೆ ಹಾಗೂ ಅದರಲ್ಲಿ ಬಳಸುವ ವೇಷ ಭೂಷಣಗಳಿಗೆ ಮಾರು ಹೋದೆ. ಈ ಕಾರ್ಯಕ್ರಮ ಮುಗಿದ ನಂತರವೂ ಅದರ ಬಗ್ಗೆಯೇ ಯೋಚಿಸುತ್ತಿದ್ದೆ. ಯಕ್ಷಗಾನ ಕಲಿಯಬೇಕು ಎಂಬ ನನ್ನ ಹಂಬಲಕ್ಕೆ ನನ್ನ ತಂದೆ ತಾಯಿಯರು ಪ್ರೋತ್ಸಾಹ ನೀಡಿದರು. ಆದ್ದರಿಂದ, ನಾಲ್ಕನೇ ತರಗತಿಯ ನಂತರದ ಬೇಸಿಗೆಯ ರಜೆಗಳಲ್ಲಿ ಇಸ್ಕಾನ್ ದೇವಾಲಯದಲ್ಲಿ ನಡೆಯುವ ಬೇಸಿಗೆಯ ಶಿಬಿರದಲ್ಲಿ ಯಕ್ಷಗಾನಕ್ಕೆ ಸೇರಿದೆ. ಅಲ್ಲಿ ನನ್ನ ಗುರುಗಳು ಶ್ರೀ ವೇಣುಗೋಪಾಲ್ ರವರು ಹಾಗೂ ಶ್ರೀಧರ್ ಕಾಂಚನ್ ರವರು. ಹಾಗೆಯೇ ಅವರ ಮೂಲಕ 'ಕರ್ನಾಟಕ ಕಲಾ ದರ್ಶಿನಿ'ಯ ಬಗ್ಗೆ ತಿಳಿದುಕೊಂಡು, ಯಕ್ಷಗಾನ ತರಗತಿ ಪಡೆಯಲು ಸೇರಿಕೊಂಡೆ. ಶ್ರೀ ವೇಣುಗೋಪಾಲ್ ರವರ ಬಳಿ ಒಂದೂವರೆ ವರ್ಷ ಯಕ್ಷಗಾನ ಕಲಿತೆ. ಆನಂತರ ಡಾ||ಶಿವಕುಮಾರ್ ಬೇಗಾರ್ ರವರ 'ಗಾನ ಸೌರಭ ಯಕ್ಷಗಾನ ಶಾಲೆ'ಗೆ ಸೇರಿದೆ. ಇಲ್ಲಿ ಸೇರಿದಾಗ ಹೆಚ್ಚು ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅವಕಾಶ ದೊರೆಯಿತು. ನಾನು ಯಕ್ಷಗಾನದಲ್ಲಿ ಕಂಸ, ದ್ರುಪದ, ದುರ್ಯೋಧನ, ಕರ್ಣ, ಧರ್ಮರಾಯ, ಅಂಬಾಲಿಕೆ, ಸುಭದ್ರೆ - ಹೀಗೆ ಹಲವು ಪಾತ್ರಗಳನ್ನು ನಿರ್ವಹಿಸಿದ್ದೇನೆ. ಈ ಬಣ್ಣದ ಬದುಕಿನಲ್ಲಿ ಸಾಕಷ್ಟು ಏಳು ಬೀಳುಗಳನ್ನು ಕಂಡರೂ ಜೀವನದ ಮೌಲ್ಯಗಳು ಹಾಗೂ ನಮ್ಮ ಭಾಷೆಯ ಹಿರಿಮೆಯ ಬಗ್ಗೆ ಕಲಿತಿದ್ದೇನೆ. ಎಂಟನೇ ತರಗತಿಯಲ್ಲಿ ಓದುತ್ತಿದ್ದಾಗ ನಮ್ಮ ಶಾಲೆಯ ನಾಟಕ ತಂಡಕ್ಕೆ ಸೇರಿಕೊಂಡೆ. ಅತ್ಯಂತ ಜನಪ್ರಿಯವಾದ 'ಶ್ರೀ ಕೃಷ್ಣ ಸಂಧಾನ'ಎಂಬ ಸಾಮಾಜಿಕ ಹಾಗೂ ಹಾಸ್ಯ ನಾಟಕದಲ್ಲಿ ದುರ್ಯೋಧನನಾಗಿ ಭಾಗವಹಿಸಿದೆ. ತದನಂತರ ಹಲವಾರು ಸಾಮಾಜಿಕ ನಾಟಕಗಳಲ್ಲಿ ಅಭಿನಯಿಸಿದೆ. ೯ನೇ ತರಗತಿಯಲ್ಲಿರುವಾಗ ತಾತ್ಕಾಲಿಕವಾಗಿ ಶಾಲಾ ಮುಖ್ಯಸ್ಥನಾಗಿ ಆಯ್ಕೆಯಾದೆ. ೧೦ ನೇ ತರಗತಿಯಲ್ಲಿ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಆಯ್ಕೆಯಾದೆ. ೧೦ನೇ ತರಗತಿಯಲ್ಲಿ ನಾನು ೧೦ ಸಿ.ಜಿ.ಪಿ.ಎ ಅಂಕಗಳನ್ನು, ಅಂದರೆ ಶೇಕಡ ೯೫ರಷ್ಟು ಅಂಕಗಳನ್ನು ಗಳಿಸಿಕೊಂಡೆ.

ಸ್ವತಂತ್ರ ಯಾನ

[ಬದಲಾಯಿಸಿ]

ಪದವಿ ಪೂರ್ವದ ಶಿಕ್ಷಣ ಪಡೆಯಲು ಶ್ರೀ ಭಗವಾನ್ ಮಹಾವೀರ್ ಜೈನ್ ಕಾಲೇಜಿಗೆ ಸೇರಿಕೊಂಡೆ. ಅಲ್ಲಿನ ಹೊಂಗಿರಣ ಕನ್ನಡ ವೇದಿಕೆಗೆ ನನ್ನನ್ನು ಸದಸ್ಯನಾಗಿ ಆಯ್ಕೆ ಮಾಡಿದರು. ಮೊದಲನೇ ಪಿ.ಯು ನಂತರ ದ್ವಿತೀಯ ಪಿಯು ಓದುತ್ತಿರುವಾಗ ಕನ್ನಡ ವೇದಿಕೆಯ ಮುಖ್ಯಸ್ಥನಾಗಿ ಕಾರ್ಯ ನಿರ್ವಹಿಸಿದೆ. ಶ್ರೀ ನಿಧಾಗ್ ಕರುನಾಡ್ ರವರ ಬಳಿ ಕಥಕ್ ಕಲಿಯಲು ಪ್ರಾರಂಭಿಸಿದೆ. ಇದಕ್ಕೆ ನನ್ನ ಸ್ಫೂರ್ತಿ ಎಂದರೆ ಶ್ರೀ ಕುಮಾರ್ ಶರ್ಮರವರು. ದ್ವಿತೀಯ ಪಿ.ಯು.ಸಿನಲ್ಲಿ ಶೇಕಡ ೯೬.೧೭ರಷ್ಟು ಅಂಕಗಳನ್ನು ಪಡೆದೆ. ನಮ್ಮ ಸಮಗ್ರ ಅಭಿವೃದ್ಧಿಗೆ ಅವಕಾಶಗಳ ಸಾಗರವಾದಂತಹ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಓದಬೇಕೆಂಬ ನನ್ನ ಕನಸು ನನಸಾಗಿರುವುದು ನನ್ನ ಪುಣ್ಯವೇ ಸರಿ. ವರ್ತಮಾನದಲ್ಲಿ ನಾನು ಬಿ.ಕಾಮ್ ನಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ. ಚಿಕ್ಕಂದಿನಿಂದಲೂ ನನ್ನ ಶಿಕ್ಷಕರಿಂದ ಪ್ರೇರಿತನಾಗಿ ನಾನು, ಕನ್ನಡ ಹಾಗೂ ಗಣಿತದ ಉಪನ್ಯಾಸಕನಾಗಬೇಕೆಂಬ ಗುರಿ ಹೊಂದಿದ್ದೇನೆ. ಅಲ್ಲದೆ, ನಮ್ಮ ದೇಶದ ಜನರಿಗೆ ನನಗಾದಷ್ಟು ಸಹಾಯ ಮಾಡಬಕೆಂಬ ಕನಸು ನನ್ನದು. ಪ್ರಯಾಣ ಮಾಡುವುದು, ಬೇರೆ ಜಾಗಗಳಿಗೆ ಭೇಟಿ ನೀಡುವುದು ಹಾಗೂ ಅವರ ಸಂಸ್ಕೃತಿ ಹಾಗೂ ಅವರ ಜೀವನಶೈಲಿಯ ಬಗ್ಗೆ ತಿಳಿದುಕೊಳ್ಳುವುದರಲ್ಲಿ ನಾನು ವಿಶೇಷವಾದ ಆಸಕ್ತಿಯನ್ನು ಹೊಂದಿದ್ದೇನೆ. ನನ್ನ ಇಲ್ಲಿಯವರೆಗಿನ ಬದುಕಿನ ಪ್ರಯಾಣದಲ್ಲಿ ನನಗೆ ಸಹಾಯ ಮಾಡಿದ, ಅನೇಕ ವಿಷಯಗಳನ್ನು ತಿಳಿಸಿದ, ಜೀವನದ ಮೌಲ್ಯ ಕಲಿಸಿದ, ಬೆಂಬಲ ನೀಡಿದ ನನ್ನ ಪೋಷಕರು, ಶಾಲಾ ಹಾಗೂ ಕಾಲೇಜಿನ ಗುರುಗಳು, ಯಕ್ಷಗಾನ, ಯಕ್ಷಗಾನದ ಗುರುಗಳು, ಸಂಬಂಧಿಕರು, ನನ್ನ ಸ್ನೇಹಿತರು ಹಾಗೂ ಇಡೀ ಜಗತ್ತಿಗೆ ನಾನು ಎಂದೆಂದಿಗೂ ಚಿರಋಣಿ.