ರತ್ನತ್ರಯ
ಜೈನಧರ್ಮದ ತತ್ತ್ವದ ಪ್ರಕಾರ ಸಮ್ಯಗ್ ದರ್ಶನ, ಸಮ್ಯಗ್ ಜ್ಞಾನ, ಸಮ್ಯಗ್ ಚಾರಿತ್ರ-ಇವೇ ರತ್ನತ್ರಯಗಳು. ಕರ್ಮಾವರಣದಿಂದ ಮಲಿನವಾಗಿರುವ ಆತ್ಮನಲ್ಲಿ ಕರ್ಮಗಳ ನಾಶವಾದ ಮೇಲೆ ಇವುಗಳ ವಿಕಾಸವಾಗಿ ಮೋಕ್ಷ ಪ್ರಾಪ್ತವಾಗುತ್ತದೆ. ಮಾನವ ಜೀವನದ ಮೂಲ ಧ್ಯೇಯ ಮುಕ್ತಿ ಸಂಪಾದನೆ. ಮುಕ್ತಿಯೆಂದರೆ ಆತ್ಮ ಸ್ವಾತಂತ್ರ್ಯ. ಈ ಸ್ವಾತಂತ್ರ್ಯಾವಸ್ಥೆಯಲ್ಲಿ ಆತ್ಮ ತನ್ನ ಸ್ವರೂಪದಲ್ಲಿ ತಾನಿರುತ್ತದೆ. ಹೀಗಾಗುವುದಕ್ಕೆ ಸಾಧಕ ಆತ್ಮವನ್ನು ಉಜ್ವಲಗೊಳಿಸಬೇಕಾಗುತ್ತದೆ. ಈ ಉಜ್ವಲತೆಗೆಸಾಧನವೆಂದರೆ ತತ್ತ್ವಜ್ಞಾನ. ಈ ಜ್ಞಾನ ಪುದ್ಗಲರೂಪಿಯಾದ ಕರ್ಮಶರೀರ ಹಾಗೂ ಅನಂತ ಶಕ್ತಿನಿಧಿಯಾದ ಆತ್ಮಗಳನ್ನು ವಿಶ್ಲೇಷಣಮಾಡಿ, ನಿಜವಾದುದನ್ನು ನಂಬಲಿಕ್ಕೆ ಅನುವುಮಾಡಿ ಕೊಡುತ್ತದೆ. ಇಂಥ ನಂಬಿಕೆಗೆ ಸಮ್ಯಗ್ದರ್ಶನ ಎಂದು ಹೇಳುವರು. ಈ ಪ್ರಕಾರ ಆತ್ಮಶಕ್ತಿಯ ಮೇಲೆ ಸಂಪೂರ್ಣ ಶ್ರದ್ಧೆಯುಳ್ಳವನಲ್ಲಿರುವ ಜ್ಞಾನಕ್ಕೆ ಸಮ್ಯಗ್ ಜ್ಞಾನ ಎನ್ನುವರು. ಈ ಜ್ಞಾನದಿಂದ ಆತ್ಮಕಲ್ಯಾಣಕ್ಕಾಗಿ ಉಂಟಾಗುವ ಮಾನವನ ಪ್ರವೃತ್ತಿಗಳಿಗೆಲ್ಲ ಸಮ್ಯಕ್ ಚಾರಿತ್ರವೆಂದು ಹೆಸರು. ಇದಕ್ಕೆ ಜೈನಾಚಾರ್ಯರು ರತ್ನತ್ರಯ ಮಾರ್ಗ ಎಂದು ಹೇಳಿದ್ದಾರೆ. ಉಮಾಸ್ವಾಮಿಯವರು ತತ್ತ್ವಾರ್ಥ ಸೂತ್ರದ ಆರಂಭದಲ್ಲಿ ಸಮ್ಯಗ್‍ದರ್ಶನ, ಜ್ಞಾನ, ಚಾರಿತ್ರ ಇವುಗಳನ್ನೇ ಮೋಕ್ಷ ಮಾರ್ಗ (ಸಮ್ಯಗ್ದರ್ಶನ ಜ್ಞಾನಚಾರಿತ್ರಾಣಿ ಮೋಕ್ಷಮಾರ್ಗಃ) ಎಂದಿದ್ದಾರೆ. ಈ ಆಧ್ಯಾತ್ಮಿಕ ಕ್ರಾಂತಿಯ ಮಾರ್ಗದಲ್ಲಿ ಮಾನವ ಮೊದಲು ಅಂತರಂಗ-ಬಹಿರಂಗ ಶುದ್ಧನಾಗುವನು. ಅದಕ್ಕಾಗಿ ಸತ್ಯ, ಅಹಿಂಸೆ, ಬ್ರಹ್ಮಚರ್ಯ, ಅಪರಿಗ್ರಹ, ಅಚಾರ್ಯಗಳ ವ್ರತಸ್ವೀಕರಿಸುವನು. ನಿಜವಾದ ರತ್ನತ್ರಯ ಮಾರ್ಗಾವಲಂಬಿ ಶೂಲಕ್ಕೇರುವಂಥ ಪ್ರಸಂಗ ಬಂದರೂ ಈ ವ್ರತಗಳನ್ನು ಬಿಡನು. ಪ್ರಪಂಚದೊಳಗಿನ ಪರಿಗ್ರಹಗಳನ್ನೆಲ್ಲ ತೊರೆದು ರಾಗ-ದ್ವೇಷ, ಮೋಹ, ಕ್ರೋಧ, ಮಾನ, ಮಾಯಾ, ಲೋಭ ಇತ್ಯಾದಿ ಆತ್ಮನ ವಿಕೃತಿಗಳನ್ನು ನಷ್ಟಗೊಳಿಸತೊಡಗುವನು. ಆದ್ದರಿಂದ ಆತ್ಮನಲ್ಲಿ ಶ್ರದ್ಧೆ ಹೆಚ್ಚುತ್ತ ಹೋಗುವುದು. ಈ ಮಾರ್ಗದಲ್ಲಿ ಶ್ರದ್ಧೆ, ಜ್ಞಾನ, ಆಚರಣೆಗಳ ಸುಂದರ ಸಮನ್ವಯವಿದೆ. ಇದನ್ನು ರತ್ನಾಕರವರ್ಣಿ ಎಂಬ ಕವಿ ತನ್ನ ಶತಕ ಗ್ರಂಥದಲ್ಲಿ ಹೀಗೆ ವಿವರಿಸಿದ್ದಾನೆ:
ತತ್ತ್ವಪ್ರೀತಿ ಮನಕ್ಕೆ ಪುಟ್ಟಲದು ಸಮ್ಯಗ್ದರ್ಶನಂ ಮತ್ತಮಾ
ತತ್ತ್ವಾರ್ಥಂಗಳನೊಲ್ದು ಭೇದಿಪುದು ಸಮ್ಯಜ್ಞಾನಮಾ ಬೋಧದಿಂ
ಸತ್ವಂಗಳ್ಕಿಡದಂತುಟೋವಿನಡೆಯಲ್ಸಮ್ಯಕ್ಚರಿತ್ರಂ ಸುರ
ತ್ನತ್ವಂ ಮೂರಿವು ಮುಕ್ತಿಗೆಂದರುಪಿದೈ ರತ್ನಾಕರಾಧೀಶ್ವರಾ
ಮೂಲಗಳು
[ಬದಲಾಯಿಸಿ]- S. A. Jain (1992). Reality. Jwalamalini Trust. Archived from the original on 2015.
Not in Copyright
{{cite book}}
: Check date values in:|archive-date=
(help) - Jain, Vijay K. (2011), Acharya Umasvami's Tattvārthsūtra, Vikalp Printers, ISBN 978-81-903639-2-1,
Non-Copyright
- Champat Rai Jain (1917), The Practical Path, The Central Jaina Publishing House