ಪೀಕುದಾನಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪೀಕುದಾನಿಯು ಉಗುಳಲು ಬಳಸಲಾದ ಪಾತ್ರೆ ಅಥವಾ ಬುಟ್ಟಿ, ವಿಶೇಷವಾಗಿ ತಾಂಬೂಲ ಅಥವಾ ತಂಬಾಕು ಅಗಿಯುವ ಬಳಕೆದಾರರಿಗಾಗಿ. ೧೯ನೇ ಶತಮಾನದ ಕೊನೆಯಲ್ಲಿ, ಹೆಚ್ಚು ಗಮನಾರ್ಹವಾಗಿ ಅಮೇರಿಕದಲ್ಲಿ, ಪೀಕುದಾನಿಗಳು ಪಬ್‍ಗಳು, ವೇಶ್ಯಾಗೃಹಗಳು, ಬಾರ್‌ಗಳು, ಹೋಟೆಲ್‍ಗಳು, ಅಂಗಡಿಗಳು, ಬ್ಯಾಂಕ್‍ಗಳು, ರೈಲು ಗಾಡಿಗಳು ಮತ್ತು ಜನರು (ವಿಶೇಷವಾಗಿ ವಯಸ್ಕ ಪುರುಷರು) ಸೇರುತ್ತಿದ್ದ ಇತರ ಸ್ಥಳಗಳ ಬಹಳ ಸಾಮಾನ್ಯ ಲಕ್ಷಣಗಳಾದವು. ಹಿತ್ತಾಳೆಯು ಪೀಕುದಾನಿಗಳನ್ನು ತಯಾರಿಸಲು ಬಳಸಲಾದ ಅತ್ಯಂತ ಸಾಮಾನ್ಯ ವಸ್ತುವಾಗಿತ್ತು. ಪೀಕುದಾನಿಗಳ ರಾಶಿ ತಯಾರಿಕೆಯಲ್ಲಿ ಬಳಸಲಾದ ಇತರ ವಸ್ತುಗಳಲ್ಲಿ ಮೂಲಭೂತ ಕಾರ್ಯಾತ್ಮಕ ಕಬ್ಬಿಣ ಮತ್ತು ಸವಿವರವಾಗಿ ರಚಿಸಿದ ಕೆತ್ತಿದ ಗಾಜು ಹಾಗೂ ನಯವಾದ ಸೇರಿದ್ದವು. ದುಬಾರಿ ಹೊಟೆಲ್‍ಗಳಂತಹ ಮೇಲ್ವರ್ಗದ ಸ್ಥಳಗಳಲ್ಲಿ, ಪೀಕುದಾನಿಗಳು ಸಂಕೀರ್ಣವಾಗಿ ಅಲಂಕೃತವಾಗಿರಬಹುದಿತ್ತು.

ಪೀಕುದಾನಿಗಳು ಚಪ್ಪಟೆ ತಳವನ್ನು ಹೊಂದಿದ್ದು, ಹಲವುವೇಳೆ ಉರುಳುವುದನ್ನು ಕಡಿಮೆಮಾಡಲು ಹೆಚ್ಚು ತೂಕವಾಗಿರುತ್ತಿದ್ದವು, ಮತ್ತು ಉರುಳಿದರೆ ಚೆಲ್ಲುವ ಸಾಧ್ಯತೆಯನ್ನು ಕಡಿಮೆಮಾಡಲು ಹಲವುವೇಳೆ ಒಳಗೆ "ಏಣು" ಹೊಂದಿರುತ್ತಿದ್ದವು. ಕೆಲವು ಪೀಕುದಾನಿಗಳು ಮುಚ್ಚಳಗಳನ್ನು ಹೊಂದಿರುತ್ತವೆ, ಆದರೆ ಇದು ಅಪರೂಪವಾಗಿದೆ. ಬರಿದು ಮಾಡಲು ಮತ್ತು ಸ್ವಚ್ಛಗೊಳಿಸಲು ನೆರವಾಗಲು ಕೆಲವು ಪೀಕುದಾನಿಗಳು ಕೆಲವೊಮ್ಮೆ ಬಿರಡೆಯಿರುವ ರಂಧ್ರಗಳನ್ನು ಹೊಂದಿರುತ್ತವೆ. ಪೀಕುದಾನಿಗಳ ಬಳಕೆಯನ್ನು ಸಾರ್ವಜನಿಕ ನಡವಳಿಕೆ ಮತ್ತು ಆರೋಗ್ಯದ ಮುನ್ನಡೆ ಎಂದು ಪರಿಗಣಿಸಲಾಗಿತ್ತು, ಮತ್ತು ಪೂರ್ವದಲ್ಲಿ ಸಾಮಾನ್ಯವಾಗಿದ್ದ ನೆಲ, ರಸ್ತೆಗಳು, ಮತ್ತು ಕಾಲುದಾರಿಗಳ ಮೇಲೆ ಉಗುಳುವ ಅಭ್ಯಾಸವನ್ನು ಬದಲಿಸುವುದು ಇದರ ಉದ್ದೇಶವಾಗಿತ್ತು. ಅನೇಕ ಸ್ಥಳಗಳು ಪೀಕುದಾನಿಯಲ್ಲಿ ಉಗುಳುವುದರ ಹೊರತಾಗಿ ಸಾರ್ವಜನಿಕವಾಗಿ ಉಗುಳುವುದರ ವಿರುದ್ಧ ಕಾನೂನುಗಳನ್ನು ಅಂಗೀಕರಿಸಿದವು.

ಪೀಕುದಾನಿಗಳು ಕ್ಷಯದಿಂದ ಬಳಲುತ್ತಿದ್ದ ಜನರಿಗೂ ಕೆಮ್ಮಿ ಕಫ ಉಗುಳಲು ಉಪಯುಕ್ತವಾಗಿದ್ದವು. ಸಾರ್ವಜನಿಕ ಪೀಕುದಾನಿಗಳು ಕೆಲವೊಮ್ಮೆ ಕಾರ್ಬೋಲಿಕ್ ಆಮ್ಲದಂತಹ ನಂಜುನಿರೋಧಕದ ದ್ರಾವಣವನ್ನು ಹೊಂದಿರುತ್ತಿದ್ದವು. ರೋಗದ ಪ್ರಸಾರವನ್ನು ಸೀಮಿತಗೊಳಿಸುವುದು ಇದರ ಗುರಿಯಾಗಿತ್ತು. ೨೦ನೇ ಶತಮಾನದ ಆರಂಭದೊಂದಿಗೆ ವೈದ್ಯರು ಸಾರ್ವಜನಿಕ ಪೀಕುದಾನಿಗಳ ಬದಲಾಗಿ ವೈಯಕ್ತಿಕ ಜೇಬು ಪೀಕುದಾನಿಗಳನ್ನು ಬಳಸುವಂತೆ ಕ್ಷಯಪೀಡಿತರನ್ನು ಪ್ರೋತ್ಸಾಹಿಸಿದರು; ಇವು ಜನರು ಉಗುಳಲು ತಮ್ಮೊಡನೆ ಹೊತ್ತೊಯ್ಯಬಹುದಾದ ಬಿಗಿಯಾದ ಮುಚ್ಚಳಗಳಿರುವ ಧಾರಕಗಳಾಗಿದ್ದವು. ಕೆಲವು ಕ್ಷಯಪೀಡಿತರು ಈಗಲೂ ಇದಕ್ಕೆ ಹೋಲುವ ಸಾಧನಗಳನ್ನು ಬಳಸುತ್ತಾರೆ. ೧೯೧೮ರ ಶೀತಜ್ವರ ಪಿಡುಗಿನ ನಂತರ, ನೈರ್ಮಲ್ಯ ಮತ್ತು ಶಿಷ್ಟಾಚಾರದ ಪ್ರತಿಪಾದಕರು ಪೀಕುದಾನಿಯ ಸಾರ್ವಜನಿಕ ಬಳಕೆಯನ್ನು ತೃಣೀಕರಿಸಲು ಆರಂಭಿಸಿದರು, ಮತ್ತು ಇದರ ಬಳಕೆಯು ಇಳಿತವಾಗಲು ಆರಂಭವಾಯಿತು.