ಧೂಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಧೂಳಿನ ಬಿರುಗಾಳಿ

ಧೂಳು ಎಂದರೆ ಘನ ದ್ರವ್ಯದ ಬಹು ಸಣ್ಣ ಕಣಗಳು. ಇದು ಸಾಮಾನ್ಯವಾಗಿ ಮಣ್ಣು, ಗಾಳಿಯಿಂದ ಮೇಲೆ ಹಾರಿದ ಧೂಳು (ಒಂದು ಗಾಳಿ ಸಂಬಂಧಿ ಪ್ರಕ್ರಿಯೆ), ಜ್ವಾಲಾಮುಖಿ ಸ್ಫೋಟಗಳು, ಮತ್ತು ಮಾಲಿನ್ಯದಂತಹ ವಿವಿಧ ಮೂಲಗಳಿಂದ ಬರುವ ವಾತಾವರಣದಲ್ಲಿನ ಕಣಗಳನ್ನು ಹೊಂದಿರುತ್ತದೆ. ಮನೆಗಳು, ಕಚೇರಿಗಳು, ಮತ್ತು ಇತರ ಮಾನವ ಪರಿಸರಗಳಲ್ಲಿನ ಧೂಳು ಸಣ್ಣ ಪ್ರಮಾಣದ ಸಸ್ಯ ಪರಾಗ, ಮಾನವ ಮತ್ತು ಪ್ರಾಣಿ ಕೂದಲುಗಳು, ಬಟ್ಟೆ ನಾರುಗಳು, ಕಾಗದ ನಾರುಗಳು, ಹೊರ ಮಣ್ಣಿನಿಂದ ಖನಿಜಗಳು, ಮಾನವ ಚರ್ಮದ ಜೀವಕೋಶಗಳು, ಸುಟ್ಟ ಉಲ್ಕಾಶಿಲೆ ಕಣಗಳು, ಮತ್ತು ಸ್ಥಳೀಯ ಪರಿಸರದಲ್ಲಿ ಕಂಡುಬರಬಹುದಾದ ಅನೇಕ ಇತರ ವಸ್ತುಗಳನ್ನು ಹೊಂದಿರುತ್ತದೆ.[೧]

ಮನೆ ಧೂಳಿನ ತೊಣಚಿಗಳು ಮಾನವರು ಇರುವಲ್ಲಿ ಒಳಗೆ ಇರುತ್ತವೆ. ಧೂಳಿನ ತೊಣಚಿಗಳ ಅಲರ್ಜಿಗಳಿಗೆ ಸಕಾರಾತ್ಮಕ ಪರೀಕ್ಷೆಗಳು ದಮ್ಮು ರೋಗವಿರುವ ಜನರಲ್ಲಿ ಅತ್ಯಂತ ಸಾಮಾನ್ಯವಾಗಿವೆ. ಧೂಳಿನ ತೊಣಚಿಗಳು ಸೂಕ್ಷ್ಮ ಅರಾಕ್ನಿಡ್‍ಗಳಾಗಿವೆ. ಮೃತ ಮಾನವ ಚರ್ಮ ಕೋಶಗಳು ಇವುಗಳ ಮುಖ್ಯ ಆಹಾರವಾಗಿದೆ, ಆದರೆ ಇವು ಜೀವಂತ ಜನರ ಮೇಲೆ ಇರುವುದಿಲ್ಲ. ಅವು ಮತ್ತು ಅವುಗಳ ಮಲ ಮತ್ತು ಅವುಗಳು ಉತ್ಪಾದಿಸುವ ಇತರ ಅಲರ್ಜಿಕಗಳು ಮನೆ ಧೂಳಿನ ಪ್ರಧಾನ ಘಟಕಗಳಾಗಿವೆ, ಆದರೆ ಅವು ಬಹಳ ಭಾರವಾಗಿರುವುದರಿಂದ ಬಹಳ ಕಾಲ ಗಾಳಿಯಲ್ಲಿ ನೇತಾಡುವುದಿಲ್ಲ. ಇವು ಕದಡಲಾಗುವವರೆಗೆ (ಉದಾಹರಣೆಗೆ, ನಡೆದಾಡುವುದರಿಂದ) ಸಾಮಾನ್ಯವಾಗಿ ನೆಲ ಮತ್ತು ಇತರ ಮೇಲ್ಮೈಗಳ ಮೇಲೆ ಕಾಣಬರುತ್ತವೆ. ಗಾಳಿಯಿಂದ ಮತ್ತೆ ನೆಲದ ಮೇಲೆ ನೆಲೆಗೊಳ್ಳಲು ಧೂಳಿನ ತೊಣಚಿಗಳಿಗೆ ಸುಮಾರು ಇಪ್ಪತ್ತು ನಿಮಿಷದಿಂದ ಎರಡು ಗಂಟೆ ನಡುವೆ ತೆಗೆದುಕೊಳ್ಳಬಹುದು.

ಧೂಳಿನ ತೊಣಚಿಗಳು ಕತ್ತಲೆಮಯವಾದ, ಬೆಚ್ಚಗಿನ, ಮತ್ತು ಆರ್ದ್ರ ವಾಯುಗುಣವನ್ನು ಇಷ್ಟಪಡುವ ಮೊಟ್ಟೆಹಾಕುವ ಜೀವಿಗಳಾಗಿವೆ. ಇವು ಹಾಸಿಗೆಗಳು, ಗಾದಿಗಳು, ಗವಸು ಹಾಕಿದ ಪೀಠೋಪಕರಣಗಳು, ಮತ್ತು ರತ್ನಗಂಬಳಿಗಳಲ್ಲಿ ವೃದ್ಧಿಯಾಗುತ್ತವೆ. ಅವುಗಳ ಮಲವು ಆರ್ದ್ರವಾದ ಮೇಲ್ಮೈಯ ಸಂಪರ್ಕಕ್ಕೆ ಬಂದಾಗ ಬಿಡುಗಡೆಗೊಳ್ಳುವ ಕಿಣ್ವಗಳನ್ನು ಹೊಂದಿರುತ್ತದೆ. ಇದು ಒಬ್ಬ ವ್ಯಕ್ತಿಯು ಉಸಿರು ಒಳಗೆ ತೆಗೆದುಕೊಂಡಾಗ ಆಗಬಹುದು, ಮತ್ತು ಈ ಕಿಣ್ವಗಳು ಮಾನವ ಶರೀರದೊಳಗಿನ ಜೀವಕೋಶಗಳನ್ನು ಕೊಲ್ಲಬಲ್ಲವು. ಮಾನವರು ಪಾಶ್ಚಾತ್ಯ ಶೈಲಿಯ ಹೊದಿಕೆಗಳು ಮತ್ತು ಉಡುಪುಗಳಂತಹ ಬಟ್ಟೆಗಳನ್ನು ಬಳಸಲು ಆರಂಭಿಸುವವರೆಗೆ ಮನೆ ಧೂಳಿನ ತೊಣಚಿಗಳು ಸಮಸ್ಯೆಯಾಗಿರಲಿಲ್ಲ.

ರಸ್ತೆಗಳ ಮೇಲೆ ಚಲಿಸುವ ವಾಹನಗಳಿಂದ ಮೇಲೆದ್ದ ಧೂಳು ವಾಯುಮಾಲಿನ್ಯದ ಶೇಕಡ ೩೩ರಷ್ಟನ್ನು ರಚಿಸಬಹುದು. ರಸ್ತೆ ಧೂಳು ವಾಹನ ಹಬೆ ಮತ್ತು ಕೈಗಾರಿಕಾ ಹಬೆಯ ನಿಕ್ಷೇಪಗಳು, ಟಾಯರ್ ಮತ್ತು ಬ್ರೇಕ್ ಸವೆತದಿಂದಾದ ಕಣಗಳು, ಸುಸಜ್ಜಿತ ರಸ್ತೆಗಳು ಅಥವಾ ರಸ್ತೆಗುಂಡಿಗಳಿಂದ ಬಂದ ಧೂಳು, ಮತ್ತು ನಿರ್ಮಾಣ ಸ್ಥಳಗಳಿಂದ ಬಂದ ಧೂಳನ್ನು ಹೊಂದಿರುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1. Hess-Kosa, Kathleen (2002). Indoor Air Quality: sampling methodologies. CRC Press. p. 216.
"https://kn.wikipedia.org/w/index.php?title=ಧೂಳು&oldid=1208966" ಇಂದ ಪಡೆಯಲ್ಪಟ್ಟಿದೆ