ಮೇಧಾಸಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮೇಧಾಸಕ

ಮೇಧಾಸಕ ಲಾರೋಸಿಯಾ ಕುಟುಂಬ ವರ್ಗಕ್ಕೆ ಸೇರಿದ ನಿತ್ಯಹರಿದ್ವರ್ಣ ಮರವಾಗಿದ್ದು, ಸುಮಾರು 20-25ಮೀ ಉದ್ದ ಬೆಳೆಯುತ್ತದೆ. ಭಾರತದಲ್ಲಿ ಕಾಣಸಿಗುವ ಮೇಧಾಸಕ ಮರಗಳು 4500 ಫೀಟ್ ಎತ್ತರ ಇರುತ್ತವೆ. ಈ ಮರದ ತೊಗಟೆಯ ಹೊರಭಾಗ ತಿಳಿ ಕಂದು ಬಣ್ಣದಾಗಿದ್ದು, ಒಳ ಭಾಗ ನಸುಗೆಂಪಾಗಿರುತ್ತದೆ. ಇದರ ಎಲೆಗಳು ಸಾಮಾನ್ಯವಾಗಿ 4-6 ಇಂಚು ಉದ್ದ ಇರುತ್ತವೆ ಮತ್ತು ಸಣ್ಣ ಕೂದಲಿನಂಥಹ ಆಕೃತಿಯನ್ನು ಒಳಗೊಂಡಿರುತ್ತದೆ. ಇದರ ಹೂವುಗಳು ಸಣ್ಣ ಮತ್ತು ಹಳದಿ ಬಣ್ಣದಾಗಿರುತ್ತದೆ. ಇವುಗಳನ್ನು ಜೂನ್-ಜುಲೈ ತಿಂಗಳಿನಲ್ಲಿ ಕಾಣಬಹುದಾಗಿದೆ. ಇದರ ಹಣ್ಣುಗಳು ಚಿಕ್ಕದಾಗಿಯೂ, ದುಂಡು ಆಕಾರದ್ದಾಗಿಯೂ ಕಪ್ಪು ಅಥವಾ ನೇರಳೆ ಬಣ್ಣವನ್ನು ಹೊಂದಿರುತ್ತದೆ. ಸಾಮಾನ್ಯವಾಗಿ ಇದನ್ನು ಸೆಪ್ಟೆಂಬರ್- ಅಕ್ಟೋಬರ್ ತಿಂಗಳಿನಲ್ಲಿ ಕಾಣಬಹುದು.

ಹಂಚಿಕೆ[ಬದಲಾಯಿಸಿ]

ಈ ವರ್ಗದ ಗಿಡಗಳ ಮೂಲಸ್ಥಾನ ಭಾರತ, ದಕ್ಷಿಣ ಚೀನಾದಿಂದ ಮಲೇಷಿಯಾದವರೆಗೆ ಹರಡಿಕೊಂಡಿರುವ ಪ್ರದೇಶ, ಆಸ್ಟ್ರೇಲಿಯಾ ಮತ್ತು ಪಶ್ಚಿಮ ಪೆಸಿಫಿಕ್ ದ್ವೀಪಗಳಾಗಿವೆ. ಅಲ್ಲದೇ ಇವುಗಳನ್ನು ಲಾ-ರೀಯುನಿಯನ್, ಮಾರಿಷಸ್ ಹಾಗೂ ಮೇಯೋಟ್ ಪ್ರದೇಶಗಳಲ್ಲೂ ಕಾಣಬಹುದು.

ರಾಸಾಯನಿಕ ಸಂಯೋಜನೆ[ಬದಲಾಯಿಸಿ]

ಮೇಧಾಸಕದ ವೈಜ್ಞಾನಿಕ ಹೆಸರು Litsea glutinosa. ಇದನ್ನು Litsea chinensis [೧] ಎಂದೂ ಗುರುತಿಸಲಾಗುತ್ತದೆ. ಮೇಧಾಸಕದ ಮರದ ತೊಗಟೆ ಲಾರೊಟೆಟಾನಿನ್, ಆಕ್ಟಿನೊಡಾಫ್ಮಿನ್, ಬೋಲ್ಡಿನ್, ನಾರ್ಬೋಲ್ಡಿನ್, ಸೆಬಿಫೆರಿನ್‍ನನ್ನು ಹೊಂದಿರುತ್ತದೆ. ಎಲೆಗಳು ಫ್ಲಾವೊನೈಡ್, ನೇರಿಂಗೈನ್, ನರಿಂಗ್ನ್‍ ಕ್ಯಾಮ್ಪೆರ್ಪಾಲ್, 7- ಗ್ಲುಕೋಸೈಡ್, ಕ್ವೆರ್ಸೆಟಿನ್ ಮತ್ತು ಅದರ 3-ರಾಮನಾಸೈಡ್ ಪೆಗ್ಲರಾಗೋನಿಡಿನ್ ಮತ್ತು 5-ಗ್ಲುಕೋಸೈಡ್ ಸಿಸ್ಟೈನ್, ಗ್ಲೈಸೀನ್ ಮುಂತಾದವುಗಳು.

ವಿವಿಧ ಭಾಷೆಗಳಲ್ಲಿ ಮೇಧಾಸಕದ ಹೆಸರು[ಬದಲಾಯಿಸಿ]

ಹಿಂದಿ - ಮೈದಾ ಲಖಡಿ ಆಂಗ್ಲ - ಕಾಮನ್‍ಟಾಲೋ ಲೌರಿಫೋಲಿಯಾ ಅರೇಬಿಕ್ - ಮ್ಯಾಗಸೇ ಬೆಂಗಾಲಿ - ಕುಕುರಚಿತೆ ಗುಜರಾತಿ - ಮೇಧಾ ಲಖಡಿ ಮಲಯಾಳಂ - ಕರ್ಕಮೇಧಾ ಪ್ಯಾರಿಸ್ - ಕಿಲ್ಜ್ ಪಂಜಾಬಿ - ಮೇಧಾಸಕ ತಮಿಳು - ಮೇಧಾಲ ಕವಿ ತೆಲುಗು - ಮೇಧಾ ಲ್ಯಾಟಿನ್ - ಲಿಟ್ಸಿಯಾಚಿನೆನ್ಸಿಸ್ ಲೌರ್

ಉಪಯೋಗಗಳು[ಬದಲಾಯಿಸಿ]

  1. ಮೇಧಾಸಕದ ತೊಗಟೆಯ ಪುಡಿಯನ್ನು ಜಿಗ್ಗತ್‍ ಎಂದು ಹೇಳಲಾಗುತ್ತದೆ. ಇದನ್ನು ಧೂಪದ್ರವ್ಯಗಳ ತಯಾರಿಕೆಯಲ್ಲಿ ಅಂಟುಪಟ್ಟಿಯಾಗಿ ಬಳಸಲಾಗುತ್ತದೆ.
  2. ಇದರ ತೊಗಟೆಯ ಪುಡಿಯನ್ನು ಉಳುಕು, ಸಂಧಿವಾತ ಮತ್ತು ಸಂದುಗಳ ನೋವಿಗೆ ಮುಲಾಂ ರೀತಿಯಲ್ಲಿ ಬಳಸಲಾಗುತ್ತದೆ. ಇದನ್ನು ಗಾಯಗಳಿಗೂ ಉಪಯೋಗಿಸಲಾಗುತ್ತದೆ.
  3. ಮೇಧಾಸಕದ ರುಚಿ ಕಟುವಾಗಿಯೂ ಹಾಗೂ ಕಹಿಯಾಗಿಯೂ ಇರುತ್ತದೆ. ಇದು ಜೀರ್ಣ ಪ್ರಕ್ರಿಯೆಯನ್ನು ಸುಲಭಗೊಳಿಸುವಲ್ಲಿ ಸಹಾಯಕವಾಗಿದೆ.
  4. ದೇಹದಲ್ಲಿ ಉಷ್ಟೋತ್ಪತ್ತಿ ಹೆಚ್ಚಿಸಲು ಇದು ಉಪಯುಕ್ತ.
  5. ಬೇಧಿ ಮತ್ತು ರಕ್ತಸ್ರಾವಯುಕ್ತ ಮೂಲವ್ಯಾಧಿಯನ್ನು ನಿವಾರಿಸಲು 15-20 ಮಿಲಿಯಷ್ಟು ತೊಗಟೆಯ ಕಷಾಯವನ್ನು ಉಪಯೋಗಿಸಲಾಗುತ್ತದೆ.
  6. ಮೇಧಾಸಕದ ತೊಗಟೆಯ ತೈಲವನ್ನು ನೋವು ಹಾಗೂ ಕೀಲುಗಳ ಉರಿಯೂತ ನಿವಾರಿಸಲು ಬಾಹ್ಯವಾಗಿ ಹಚ್ಚಲಾಗುತ್ತದೆ.
  7. ಈ ಮರದ ತೊಗಟೆಯ ಮಿಶ್ರಣವನ್ನು ಮೂಳೆ ಮುರಿತ ಶೀಘ್ರ ಗುಣಮುಖವಾಗಲು, ಅದರ ಮೇಲೆ ಹಚ್ಚಿ ಬಟ್ಟೆಯಿಂದ ಮುಚ್ಚಲಾಗುತ್ತದೆ.
  8. ಒಣ ಚರ್ಮದಿಂದ ಮುಕ್ತಿ ಪಡೆಯಲು ಇದರ ತೈಲವನ್ನು ಮೃದುವಾಗಿ ಚರ್ಮದ ಮೇಲೆ ಹಚ್ಚಲಾಗುತ್ತದೆ.
  9. ಮೇಧಾಸಕದ ಎಲೆಗಳಿಂದ ತಯಾರಿಸಿದ ಮಿಶ್ರಣವನ್ನು ಕೆಮ್ಮು ಹಾಗೂ ಬೆನ್ನು ನೋವನ್ನು ನಿವಾರಿಸಲು 25-30ಮಿಲಿಯಷ್ಟು ಪ್ರಮಾಣದಲ್ಲಿ ಸೇವಿಸಲಾಗುತ್ತದೆ.[೨]
  10. ಮೇಧಾಸಕದ ಸೇವನೆ ಅಥವಾ ಬಳಕೆಯಿಂದ ದೇಹದ ಮೇಲೆ ಯಾವುದೇ ನಕಾರಾತ್ಮಕ ಪರಿಣಾಮಗಳು ಉಂಟಾಗುವುದಿಲ್ಲ.

ಮೇಧಾಸಕವನ್ನು ಹೊಂದಿರುವ ಆಯುರ್ವೇದ ಔಷಧಿಗಳು[ಬದಲಾಯಿಸಿ]

  1. ಅಸ್ತಿ ಸಂದಾನಕ ಲೇಪ: ಈ ಆಯುರ್ವೇಧ ಔಷಧಿಯಲ್ಲಿ ಮೇಧಾಸಕವನ್ನು ಬಳಸಲಾಗಿದ್ದು, ಇದನ್ನು ಮೂಳೆ ಮುರಿತ ಹಾಗೂ ಕೀಲುಗಳ ಅಪಸ್ಥಾನಗಳನ್ನು ಸರಿಪಡಿಸಲು ಉಪಯೋಗಿಸುತ್ತಾರೆ.
  2. ಬೋಂಟೋನ್‍ ಕ್ಯಾಪ್ಸ್ಯೂಲ್: ಈ ಆಯುರ್ವೇಧ ಮೂಲಿಕೆಯಲ್ಲೂ ಮೇಧಾಸಕದ ಉಪಯೋಗವಿದ್ದು, ಇದು ಮೂಳೆ ಮುರಿತದ ಆರಂಭಿಕ ಹಂತದಲ್ಲಿ ಜೋಡುವಿಕೆಯನ್ನು ಉತ್ತೇಜಿಸುತ್ತದೆ. ಮುರಿತವಾಗಿರುವ ಜಾಗದಲ್ಲಿ ರಕ್ತ ಪೂರೈಕೆಯನ್ನು ಸುಧಾರಿಸುತ್ತದೆ. ಸಂಧಿವಾತ ಮತ್ತು ಉರಿಯೂತವನ್ನು ಕಡಿಮೆಗೊಳಿಸುತ್ತದೆ ಹಾಗೂ ಮೂಳೆಯ ದ್ರವ್ಯ ರಾಶಿ ಸಾಂದ್ರತೆಯನ್ನು ಉತ್ತಮಗೊಳಿಸುತ್ತದೆ.

ಉಲ್ಲೇಖ[ಬದಲಾಯಿಸಿ]

  1. "ಆರ್ಕೈವ್ ನಕಲು". Archived from the original on 2020-12-04. Retrieved 2018-09-30.
  2. http://jprsolutions.info/newfiles/journal-file-56af89f9755f78.57696945.pdf[ಶಾಶ್ವತವಾಗಿ ಮಡಿದ ಕೊಂಡಿ]
"https://kn.wikipedia.org/w/index.php?title=ಮೇಧಾಸಕ&oldid=1195491" ಇಂದ ಪಡೆಯಲ್ಪಟ್ಟಿದೆ