ಬಸವನ ಬಾಗೇವಾಡಿ ವಿಧಾನಸಭಾ ಕ್ಷೇತ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬಸವನ ಬಾಗೇವಾಡಿ ವಿಧಾನಸಭಾ ಕ್ಷೇತ್ರವು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ 8 ವಿಧಾನ ಸಭಾ ಕ್ಷೆತ್ರಗಳಲ್ಲಿ ಒಂದಾಗಿದೆ. ಬಸವನ ಬಾಗೇವಾಡಿ ಮತಕ್ಷೇತ್ರ(2018)ದಲ್ಲಿ 1,01,345 ಪುರುಷರು, 95,044 ಮಹಿಳೆಯರು ಸೇರಿ ಒಟ್ಟು 1,96,389 ಮತದಾರರಿದ್ದಾರೆ.

ಕ್ಷೇತ್ರದ ಇತಿಹಾಸ[ಬದಲಾಯಿಸಿ]

ಬಸವನ ಬಾಗೇವಾಡಿ ಎಂದೊಡನೆ ನೆನಪಾಗುವುದು ವಚನ ಕ್ರಾಂತಿಯ ಹರಿಕಾರ ಬಸವಣ್ಣ. ಅವರು ಹುಟ್ಟಿದ, ಲಿಂಗೈಕ್ಯರಾದ ಸ್ಥಳವಾಗಿರುವುದರಿಂದ ಇದು ಪುಣ್ಯಕ್ಷೇತ್ರವಾಗಿಯೂ, ಪ್ರವಾಸಿ ತಾಣವಾಗಿಯೂ ಪ್ರಸಿದ್ಧಿ. 12 ನೇ ಶತಮಾನದಲ್ಲಿ ವಚನ ಸಾಹಿತ್ಯದ ಮೂಲಕ ಜಾತಿ ವ್ಯವಸ್ಥೆಯ ವಿರುದ್ಧ ಸಮರ ಸಾರಿದ, ಸಾಮಾಜಿಕ ಜಾಗೃತಿಗೆ ಮುನ್ನುಡಿ ಬರೆದ ಬಸವಣ್ಣನವರು ಲಿಂಗೈಕ್ಯರಾದ ಕೂಡಲಸಂಗಮ ವಿಜಯಪುರ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ಕೇಂದ್ರಗಳಲ್ಲೊಂದು.

ಕೃಷ್ಣಾ ನದಿಗೆ ಕಟ್ಟಲಾದ ಆಲಮಟ್ಟಿ ಜಲಾಶಯ ಏಷ್ಯಾ ಖಂಡದಲ್ಲೇ ಅತೀ ದೊಡ್ಡದು ಎಂಬ ಖ್ಯಾತಿ ಗಳಿಸಿದೆ. ಆಲಮಟ್ಟಿ ಜಲಾಶಯದಿಂದಾಗಿ ಜಮೀನು, ಮನೆ ಕಳೆದುಕೊಂಡವರು ನೂರಾರು ಜನ. ಇಲ್ಲಿನ ಇಳಕಲ್ಲು ಸೀರೆ ಮತ್ತು ಖಾದಿ ಬಟ್ಟೆ ದೇಶದಲ್ಲೇ ಪ್ರಸಿದ್ಧಿ ಪಡೆದಿದೆ. ಕ್ಷೇತ್ರದಲ್ಲಿ ಲಂಬಾಣಿ ಜನರನ್ನೂ ಕಾಣಬಹುದು.

ಸಮಾನತೆಯ ಹರಿಹಾರ, ಜಗತ್ತಿನ ಮೂಢನಂಬಿಕೆ ತೊಡೆಯಲು ವೈಚಾರಿಕ ಪ್ರಜ್ಞೆಯ ಬೆಳಕು ನೀಡಿದ ಬಸವೇಶ್ವರ ಜನ್ಮಭೂಮಿ ಬಸವನಬಾಗೇವಾಡಿ ಕ್ಷೇತ್ರ ಜಿಲ್ಲೆಯ ಇತರೆ ಕ್ಷೇತ್ರಗಳಂತೆ ಅಭಿವೃದ್ಧಿ ಹೀನ ತಾಲೂಕುಗಳಲ್ಲಿ ಒಂದು. ಕೃಷ್ಣೆಯನ್ನೇ ಒಡಲಲ್ಲಿ ಇರಿಸಿಕೊಂಡರೂ ಕ್ಷೇತ್ರದಲ್ಲಿ ಕುಡಿಯುವ ನೀರಿನ ದಾಹ ಇದ್ದೇ ಇದೆ. ಕಾಂಗ್ರೆಸ್‌ ಭದ್ರಕೋಟೆ ಎನಿಸಿರುವ ಈ ನೆಲವನ್ನು ಮತ್ತೆ ಸ್ವಾಧೀನಕ್ಕೆ ಪಡೆಯಲು ಬಿಜೆಪಿ ಹವಣಿಸುತ್ತಿದ್ದರೆ, ಒಂದು ಬಾರಿಯಾದರೂ ಖಾತೆ ತೆರೆಯಲು ಜೆಡಿಸ್‌ ಪೈಪೋಟಿ ನಡೆಸಿದೆ.

ನೀರಾವರಿ ಈ ಕ್ಷೇತ್ರದ ಬಹು ದೊಡ್ಡ ಬಲವಾದರೆ, ನೀರಾವರಿ ಹಾಗೂ ವಿದ್ಯುತ್‌ ಯೋಜನೆಗಳಿಗೆ ಭೂಮಿ ಕಳೆದುಕೊಂಡು ಸಂತ್ರಸ್ತರ ಸಮಸ್ಯೆಯೇ ಇಲ್ಲಿನ ಬಲಹೀನತೆ. ಕೃಷ್ಣಾ ನದಿಗೆ ನಿರ್ಮಿಸಿರುವ ಲಾಲಬಹದ್ದೂರ ಶಾಸ್ತ್ರಿ ಜಲಾಶಯ ಇರುವುದು ಇದೇ ಕ್ಷೇತ್ರದ ಆಲಮಟ್ಟಿಯಲ್ಲಿ. ಸಂತ್ರಸ್ತರ ಪುನರ್ವಸತಿ ಕೇಂದ್ರಗಳು ಅಭಿವೃದ್ಧಿಗೆ ಕಾಯುತ್ತಿವೆ. ಈಚೆಗಷ್ಟೇ ತಲೆ ಎತ್ತಿರುವ ದೇಶಕ್ಕೆ ಬೆಳಕು ನೀಡುವ ಮಹತ್ವಾಕಾಂಕ್ಷೆಯ ಎನ್‌ಟಿಪಿಸಿ ಕೂಡಗಿ ಯೋಜನೆ ಕೂಡ ಈ ಕ್ಷೇತ್ರದಲ್ಲೇ ಇದೆ. ಪರಿಸರಕ್ಕೆ ಹಾನಿ ಎಂಬ ಕಾರಣಕ್ಕೆ ಈ ಯೋಜನೆ ವಿರೋಧಿಸಿ ರೈತರು ಗುಂಡೇಟು ತಿಂದಿದ್ದು, ನೂರಾರು ರೈತರು ಜೈಲು ಪಾಲಾಗಿ ಕೋರ್ಟ್‌ ಅಲೆಯುತ್ತಿದ್ದರು. ಈಚೆಗಷ್ಟೇ ಈ ರೈತರ ಮೇಲಿನ ಮೊಕದ್ದಮೆ ಹಿಂಪಡೆಯುವ ಮೂಲಕ ಸರ್ಕಾರ ರೈತರಿಗೆ ಸಂಕಷ್ಟದಿಂದ ಮುಕ್ತಿ ನೀಡಿದೆ.

ಇಂಥ ನೆಲಕ್ಕೆ ಒಂದೂವರೆ ದಶಕದ ಹಿಂದೆ ಕಾಲಿಟ್ಟವರು ತಿಕೋಟಾ ಕ್ಷೇತ್ರದಲ್ಲಿ ಜನತಾದಳ ಹಾಗೂ ಬಿಜೆಪಿಯಿಂದ ಎರಡು ಬಾರಿ ಶಾಸಕರಾಗಿದ್ದ ಶಿವಾನಂದ ಪಾಟೀಲ. ಈ ಕ್ಷೇತ್ರದಿಂದಲೂ ಮೂರು ಬಾರಿ ಶಾಸಕರಾಗಿರುವ ಶಿವಾನಂದ ಪಾಟೀಲ ಅವರು ಐದು ಬಾರಿ ಶಾಸಕರಾಗಿ ಸಚಿವರಾಗಿದ್ದಾರೆ. ಇದೇ ಕ್ಷೇತ್ರದಿಂದ ಸೋಮನಗೌಡ(ಅಪ್ಪು) ಪಾಟೀಲ ಅವರ ತಂದೆ ಬಿ.ಎಸ್.ಪಾಟೀಲ(ಮನಗೂಳಿ) ಅವರನ್ನು 6 ಬಾರಿ ಆಯ್ಕೆ ಮಾಡಿದ್ದ ಕ್ಷೇತ್ರದ ಮತದಾರರು, ಅವರು ಸಚಿವರಾಗಲು ನೆರವಾಗಿದ್ದರು.

ಮಾಜಿ ಸಿಎಂ ಬಂಗಾರಪ್ಪ ಅವರ ಕೆಸಿಪಿ ಪಕ್ಷದಿಂದ ಸ್ಪರ್ಧಿಸಿ ಸೋತಿದ್ದ ಎಸ್.ಕೆ.ಬೆಳ್ಳುಬ್ಬಿ ಬಿಜೆಪಿ ಸೇರುವ ಮೂಲಕ ಬಸವನಬಾಗೇವಾಡಿ ಕ್ಷೇತ್ರದ ಕಾಂಗ್ರೆಸ್‌ ಭದ್ರಕೋಟೆ ಛಿದ್ರಗೊಳಿಸಿ ಎರಡು ಬಾರಿ ಗೆದ್ದವರು. ತಮ್ಮ ಮೂಲಕ ಬಿಜೆಪಿ ಖಾತೆ ತೆರೆದ ಎಸ್.ಕೆ.ಬೆಳ್ಳುಬ್ಬಿ ಅಪ್ಪಟ ಹಳ್ಳಿ ಸೊಗಡಿನ ರಾಜಕೀಯ ನಾಯಕ. ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಪಂಚಾಯಿತಿ ಮಟ್ಟದಿಂದಲೇ ವಿಧಾನಸಭೆ ತನಕ ರಾಜಕಾರಣದಲ್ಲಿ ಯಶಸ್ಸು ಕಂಡವರು. 1978ರಲ್ಲಿ ಗ್ರಾಪಂ ಸದಸ್ಯರಾಗಿ ಆಯ್ಕೆಯಾದ ಬೆಳ್ಳುಬ್ಬಿ, 1983ರಲ್ಲಿ ಕೊಲ್ಹಾರ ಗ್ರಾಪಂ ಅಧ್ಯಕ್ಷರಾಗಿದ್ದರು. 1987ರಲ್ಲಿ ಮಂಡಲ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿ ಮಂಡಲ ಪ್ರಧಾನ ಹುದ್ದೆಯನ್ನೂ ಗಿಟ್ಟಿಸಿಕೊಂಡರು. 1994ರಲ್ಲಿ ಕೆಸಿಪಿ ಪಕ್ಷದಿಂದ ಬಸವನಬಾಗೇವಾಡಿ ಕ್ಷೇತ್ರದಿಂದ ವಿಧಾನಸಭೆ ಪ್ರವೇಶಿಸುವ ಮೊದಲ ಪ್ರಯತ್ನ ಫಲಿಸಲಿಲ್ಲ. ಮತ್ತೆ 1999ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದ ಬೆಳ್ಳುಬ್ಬಿ ಶಾಸಕರಾಗಿ ಆಯ್ಕೆಯಾದರು. 2008ರಲ್ಲಿ 2ನೇ ಬಾರಿ ಶಾಸಕರಾಗಿ ಆಯ್ಕೆಯಾಗುವ ಮೂಲಕ ಕೆಲ ತಿಂಗಳು ಮಂತ್ರಿಸ್ಥಾನವನ್ನೂ ಅಲಂಕರಿಸಿದ್ದರು. 2004, 2013 ಹಾಗೂ 2023ರ ಚುನಾವಣೆಯಲ್ಲಿ ಸೋಲಿನ ಕಹಿ ಅನುಭವಿಸಿದ್ದಾರೆ.

13 ಚುನಾವಣೆ ಕಂಡಿರುವ ಬಸವ ಜನ್ಮಭೂಮಿ ಬಸವನಬಾಗೇವಾಡಿ ಕ್ಷೇತ್ರದಲ್ಲಿ 9 ಬಾರಿ ಗೆದ್ದಿರುವ ಕಾಂಗ್ರೆಸ್‌, ಒಂದು ಬಾರಿ ಅಂಗ ಪಕ್ಷ ಕಾಂಗ್ರೆಸ್‌-ಐ ಅಭ್ಯರ್ಥಿಯನ್ನೂ ಆಯ್ಕೆ ಮಾಡಿ ಕಾಂಗ್ರೆಸ್‌ ಭದ್ರಕೋಟೆ ಎನಿಸಿದೆ. ಕ್ಷೇತ್ರಕ್ಕೆ ನಡೆದ ಮೊದಲ ಎರಡು ಚುನಾವಣೆಯಲ್ಲಿ ಸುಶೀಲಾಬಾಯಿ ಶಹಾ ಎಂಬ ಮಹಿಳೆ ಗೆದ್ದಿರುವುದು ವಿಶೇಷ. ಮಹಿಳಾ ಸಮಾನತೆ ಹರಿಕಾರ ಬಸವ ಜನ್ಮಭೂಮಿ ಜನರು ಮಹಿಳೆಯನ್ನು ಆಯ್ಕೆ ಮಾಡಿದ್ದೇ ಬಸವ ತತ್ವಕ್ಕೆ ಆದ್ಯತೆ ನೀಡಿದ್ದಕ್ಕೆ ಸಾಕ್ಷಿ. ವ್ಯಕ್ತಿ ಪೂಜೆಗೆ ಆದ್ಯತೆ ನೀಡಿರುವ ಈ ಕ್ಷೇತ್ರ ಮನಗೂಳಿಯ ಬಿ.ಎಸ್‌. ಪಾಟೀಲ ಅವರನ್ನು 6 ಬಾರಿ ವಿಧಾನಸೌಧಕ್ಕೆ ಕಳಿಸಿದ್ದು, ಎಸ್.ಕೆ.ಬೆಳ್ಳುಬ್ಬಿ ಅವರ ಮೂಲಕ ಬಿಜೆಪಿ ಎರಡು ಬಾರಿ ಇಲ್ಲಿ ನೆಲೆ ಕಂಡುಕೊಂಡಿದೆ. ಕುಮಾರಗೌಡ ಪಾಟೀಲ ಸೇರಿ ಇಬ್ಬರು ಈ ಕ್ಷೇತ್ರದಲ್ಲಿ ಜನತಾಪಕ್ಷದಿಂದ ಗೆದ್ದಿದ್ದಾರೆ.

ಕ್ಷೇತ್ರದ ವಿಶೇಷತೆ[ಬದಲಾಯಿಸಿ]

  • ಬಿ.ಎಸ್.ಪಾಟೀಲ(ಮನಗೂಳಿ)ರು 6 ಬಾರಿ ಆಯ್ಕೆಯಾಗಿ 1994ರಲ್ಲಿ ವೀರಪ್ಪ ಮೊಯ್ಲಿ ಸಂಪುಟದಲ್ಲಿ ಸಣ್ಣ ನೀರಾವರಿ ಸಚಿವರಾಗಿದ್ದರು.
  • ಕ್ಷೇತ್ರದಿಂದ 1957 ಮತ್ತು 1962ರಲ್ಲಿ ಸುಶಿಲಾಬಾಯಿ ಶಹಾರವರು ವಿಜಯಪುರ ಜಿಲ್ಲೆಯ ಪ್ರಪ್ರಥಮ ಮಹಿಳಾ ಶಾಸಕಿಯಾಗಿದ್ದರು.
  • ಎಸ್.ಕೆ.ಬೆಳ್ಳುಬ್ಬಿಯವರು ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿ 2008ರಲ್ಲಿ ಬಿ.ಎಸ್.ಯಡಿಯೂರಪ್ಪ ಸಂಪುಟದಲ್ಲಿ ತೋಟಗಾರಿಕಾ ಸಚಿವರಾಗಿದ್ದರು.
  • 2012ರಲ್ಲಿ ಜಗದೀಶ ಶೆಟ್ಟರ ಸಂಪುಟದಲ್ಲಿ ಎಸ್.ಕೆ.ಬೆಳ್ಳುಬ್ಬಿಯವರು ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವರಾಗಿದ್ದರು.
  • 2013ರಲ್ಲಿ ಸಿದ್ದರಾಮಯ್ಯನವರ ಸಂಪುಟದಲ್ಲಿ ಶಿವಾನಂದ ಪಾಟೀಲರು ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ಅಧ್ಯಕ್ಷರಾಗಿದ್ದರು.
  • ಶಿವಾನಂದ ಪಾಟೀಲ ನಾಲ್ಕು ಬಾರಿ ಆಯ್ಕೆಯಾಗಿ 2018ರಲ್ಲಿ ಹೆಚ್.ಡಿ.ಕುಮಾರಸ್ವಾಮಿಯವರ ಸಮ್ಮಿಶ್ರ ಸರಕಾರದ ಸಂಪುಟದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿದ್ದರು.
  • ಶಿವಾನಂದ ಪಾಟೀಲರು 2013, 2018 ಮತ್ತು 2023ರಲ್ಲಿ ಸತತ ಮೂರು ಬಾರಿ ಆಯ್ಕೆಯಾಗಿ ಮೊದಲ ಬಾರಿಗೆ ಹ್ಯಾಟ್ರಿಕ್ ಸಾಧಿಸಿದ್ದಾರೆ.
  • ಬಿ.ಎಸ್.ಪಾಟೀಲ(ಮನಗೂಳಿ)ರು 6 ಬಾರಿ ಆಯ್ಕೆ ಮಾಡಿದ್ದ ಕ್ಷೇತ್ರದ ಮತದಾರರು, ಅವರ ಪುತ್ರರಾದ ಸೋಮನಗೌಡ(ಅಪ್ಪು) ಪಾಟೀಲರು ನಾಲ್ಕು ಬಾರಿ ಜೆಡಿಎಸ್ ನಿಂದ ಸ್ಪರ್ಧಿಸಿದರೂ ಆಯ್ಕೆಯಾಗಿಲ್ಲ.

ಜನಪ್ರತಿನಿಧಿಗಳ ವಿವರ[ಬದಲಾಯಿಸಿ]

ವರ್ಷ ವಿಧಾನ ಸಭಾ ಕ್ಷೆತ್ರ ವಿಜೇತ ಪಕ್ಷ ಮತಗಳು ಉಪಾಂತ ವಿಜೇತ ಪಕ್ಷ ಮತಗಳು
ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ ಕರ್ನಾಟಕ ರಾಜ್ಯ
2023 ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ ಶಿವಾನಂದ ಪಾಟೀಲ INC 68126 ಎಸ್.ಕೆ.ಬೆಳ್ಳುಬ್ಬಿ BJP 43263
2018 ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ ಶಿವಾನಂದ ಪಾಟೀಲ INC 58647 ಅಪ್ಪು ಪಾಟೀಲ(ಮನಗೂಳಿ) JDS 55461
2013 ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ ಶಿವಾನಂದ ಪಾಟೀಲ INC 56329 ಎಸ್.ಕೆ.ಬೆಳ್ಳುಬ್ಬಿ BJP 36653
2008 ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ ಎಸ್.ಕೆ.ಬೆಳ್ಳುಬ್ಬಿ BJP 48481 ಶಿವಾನಂದ ಪಾಟೀಲ INC 34594
2004 ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ ಶಿವಾನಂದ ಪಾಟೀಲ INC 50238 ಎಸ್.ಕೆ.ಬೆಳ್ಳುಬ್ಬಿ BJP 46933
1999 ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ ಎಸ್.ಕೆ.ಬೆಳ್ಳುಬ್ಬಿ BJP 50543 ಬಿ.ಎಸ್.ಪಾಟೀಲ(ಮನಗೂಳಿ) INC 40487
1994 ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ ಬಿ.ಎಸ್.ಪಾಟೀಲ(ಮನಗೂಳಿ) INC 27557 ಕುಮಾರಗೌಡ ಪಾಟೀಲ JD 19270
1989 ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ ಬಿ.ಎಸ್.ಪಾಟೀಲ(ಮನಗೂಳಿ) INC 37868 ಕುಮಾರಗೌಡ ಪಾಟೀಲ JD 25235
1985 ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ ಕುಮಾರಗೌಡ ಪಾಟೀಲ JNP 29320 ಭೀಮನಗೌಡ ಪಾಟೀಲ INC 23744
1983 ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ ಬಿ.ಎಸ್.ಪಾಟೀಲ(ಮನಗೂಳಿ) INC 34386 ರಾಜಶೇಖರ ಪಟ್ಟಣಶೆಟ್ಟಿ BJP 15577
1978 ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ ಬಿ.ಎಸ್.ಪಾಟೀಲ(ಮನಗೂಳಿ) JNP 27806 ಬಸವಂತರಾಯ ಪಾಟೀಲ INC 16048
ಬಾಗೇವಾಡಿ ವಿಧಾನಸಭಾ ಕ್ಷೇತ್ರ ಮೈಸೂರು ರಾಜ್ಯ
1972 ಬಾಗೇವಾಡಿ ವಿಧಾನಸಭಾ ಕ್ಷೇತ್ರ ಬಿ.ಎಸ್.ಪಾಟೀಲ(ಮನಗೂಳಿ) INC(O) 23061 ಜಿ.ವಿ.ಪಾಟೀಲ INC 16250
1967 ಬಾಗೇವಾಡಿ ವಿಧಾನಸಭಾ ಕ್ಷೇತ್ರ ಬಿ.ಎಸ್.ಪಾಟೀಲ(ಮನಗೂಳಿ) INC 25173 ಜಿ.ಬಿ.ಈರಯ್ಯ SWA 2759
1962 ಬಾಗೇವಾಡಿ ವಿಧಾನಸಭಾ ಕ್ಷೇತ್ರ ಸುಶಿಲಾಬಾಯಿ ಶಹಾ INC 12365 ರಾಮನಗೌಡ ಪಾಟೀಲ SWA 6113
1957 ಬಾಗೇವಾಡಿ ವಿಧಾನಸಭಾ ಕ್ಷೇತ್ರ ಸುಶಿಲಾಬಾಯಿ ಶಹಾ INC 11941 ರಾಮಣ್ಣ ಕಲ್ಲೂರ SWA 4883
ಹಿಪ್ಪರಗಿ-ಬಾಗೇವಾಡಿ ವಿಧಾನಸಭಾ ಕ್ಷೇತ್ರ ಬಾಂಬೆ ರಾಜ್ಯ
1951 ಹಿಪ್ಪರಗಿ-ಬಾಗೇವಾಡಿ ವಿಧಾನಸಭಾ ಕ್ಷೇತ್ರ ಶಂಕರಗೌಡ ಪಾಟೀಲ INC 17752 ಸಾವಳಗೆಪ್ಪ ನಂದಿ KMPP 5507