ಟೆನ್ನಿಕ್ವಾಯಿಟ್
ಟೆನ್ನಿಕ್ವಾಯಿಟ್ ಟೆನ್ನಿಸ್ ಮಾದರಿಯಲ್ಲಿ ಮೈದಾನದಲ್ಲಿ, ಎರಡು ತಂಡಗಳ ಮಧ್ಯೆ ಒಂದು ಬಲೆ ಹಾಕಿ ಆಡುವ ಆಟ. ಇದನ್ನು ರಿಂಗ್ ಟೆನಿಸ್ ಅಥವಾ ಟೆನ್ನಿಕ್ವಾಯಿಟ್ಸ್ ಎಂದೂ ಕರೆಯಲಾಗುತ್ತದೆ. ಇದನ್ನು ಟೆನಿಸ್ ಶೈಲಿಯ ಮೈದಾನದಲ್ಲಿ, ಒಂದು ವೃತ್ತಾಕಾರದ ರಬ್ಬರ್ ರಿಂಗ್ (ಟೆನ್ನಿಕ್ವಾಯಿಟ್) ಅನ್ನು ಎರಡು ತಂಡಗಳನ್ನು ಬೇರ್ಪಡಿಸುವ ಬಲೆ (ನೆಟ್) ಮೇಲೆ ಈ ಬದಿಯಿಂದ ಆ ಬದಿಗೆ ಎಸೆಯುವ ಮತ್ತು ಹಿಡಿಯುವ ಮೂಲಕ ಆಡಲಾಗುತ್ತದೆ.
ಈ ಆಟವು ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಜರ್ಮನಿ, ದಕ್ಷಿಣ ಆಫ್ರಿಕಾ, ಬ್ರೆಜಿಲ್, ದೇಶಗಳಲ್ಲಿ ಜನಪ್ರಿಯವಾಗಿದೆ.
ಇತಿಹಾಸ
[ಬದಲಾಯಿಸಿ]ಈ ಆಟದ ಮೂಲ ಅಸ್ಪಷ್ಟವಾಗಿದೆ. ಕೆಲವು ಮೂಲಗಳ ಪ್ರಕಾರ ಈ ಆಟದ ಮೂಲ ಜರ್ಮನಿ.[೧] ಬಹುಶಃ ಡೆಕ್ ಟೆನಿಸ್, ಈ ಆಟದ ಪೂರ್ವಜ ಇರಬೇಕು. ಹಡಗುಗಳಲ್ಲಿ ಸಮಯ ಕಳೆಯಲು ಹಡಗಿನ ಡೆಕ್ ಮೇಲೆ ಆಡುತ್ತಿದ್ದ ಆಟ ಡೆಕ್ ಟೆನಿಸ್. ಇಪ್ಪತ್ತನೆಯ ಶತಮಾನದ ಆರಂಭದಲ್ಲಿ ಹಡಗುಗಳ ಡೆಕ್ ಮೇಲೆ ಉಂಗುರಗಳು ಅಥವಾ ರಬ್ಬರ್ ಅಥವಾ ಬೇರೆ ಯಾವುದಾದರೂ ಮೃದು ವಸ್ತುವನ್ನು ಬಳಸಿ ಈ ಆಟವನ್ನು ಆಡಲಾಗುತ್ತಿತ್ತು.[೨]
ನಿಯಮಗಳು
[ಬದಲಾಯಿಸಿ]ಆಟದ ಪ್ರಾರಂಭದಲ್ಲಿ ಒಂದು ತಂಡದ ಒಬ್ಬ ಆಟಗಾರ (ಅಥವಾ ಆಟಗಾರ್ತಿ) ಎದುರು ತಂಡದಲ್ಲಿ ನೇರ ವಿರುದ್ಧ ದಿಕ್ಕಿನಲ್ಲಲ್ಲದೆ ಇನ್ನೊಂದು ಬದಿಯಲ್ಲಿರುವ ಎದುರಾಳಿಯ ಕಡೆಗೆ ರಿಂಗ್ ಅನ್ನು ಎಸೆಯುತ್ತಾರೆ. ಇದನ್ನು ಸರ್ವಿಂಗ್ ಎನ್ನುತ್ತಾರೆ. ಎದುರಾಳಿಯು ಅದನ್ನು ಭೂಮಿಗೆ ಬೀಳುವ ಮೊದಲೇ ಹಿಡಿಯಲು ಪ್ರಯತ್ನಿಸಿ, ಹಿಡಿದು ಪುನಃ ವಿರೋಧಿ ತಂಡದ ಕಡೆಗೆ ಎಸೆಯಬೇಕು. ಪ್ರತಿ ಆಟಗಾರನಿಗೆ (ಅಥವಾ ಆಟಗಾರ್ತಿಗೆ) ಐದು ಸರ್ವಿಂಗ್ ಅವಕಾಶ ಇದೆ. ನಂತರ ಎದುರಾಳಿಯ ತಂಡದ ಒಬ್ಬ ಆಟಗಾರ (ಅಥವಾ ಆಟಗಾರ್ತಿ) ಸತತ ಐದು ಸರ್ವಿಂಗ್ ಮಾಡಬಹುದು.
ಪ್ರತಿ ತಂಡ ಅಥವಾ ವ್ಯಕ್ತಿ ೨೧ ಅಂಕಗಳನ್ನು ಸಂಪಾದಿಸಿದರೆ ಗೆದ್ದಂತೆ. ಆದರೆ ಎದುರಾಳಿಗಿಂತ ಎರಡು ಅಂಕ ಜಾಸ್ತಿ ಇರತಕ್ಕದ್ದು. ಒಂದು ಗೇಮ್‍ನಲ್ಲಿ ಮೂರು ಸೆಟ್‍ಗಳಿರುತ್ತವೆ. ಎರಡು ಸೆಟ್ ಗೆದ್ದ ವ್ಯಕ್ತಿ ಅಥವಾ ತಂಡ ವಿಜೇತರಾಗುತ್ತಾರೆ. ಆದರೂ ಒಂದು ಸೆಟ್‍ಗೆ ೩೦ ನಿಮಿಷಗಳ ಸಮಯ ಮಿತಿ ಇದೆ. ಒಬ್ಬ ಸರ್ವರ್ ಒಂಬತ್ತು ರ್‍ಯಾಲಿಗಳೊಳಗೆ ಒಂದು ಪಾಯಿಂಟ್ (ಅಂಕ) ಮಾಡಲೇಬೇಕು. ಹಾಗೆ ಮಾಡಲು ಸೋತಲ್ಲಿ ಎದುರಾಳಿಗೆ ಒಂದು ಅಂಕ ದೊರೆಯುತ್ತದೆ.
ಆಟವನ್ನು ಸಿಂಗಲ್ ಅಂದರೆ ತಂಡದಲ್ಲಿ ಒಬ್ಬನೇ (ಅಥವಾ ಒಬ್ಬಳೇ) ವ್ಯಕ್ತಿ ಇರುವಂತೆ ಅಥವಾ ತಂಡವಾಗಿಯೂ ಆಡಬಹುದು.
ರಿಂಗ್ (ಕ್ವಾಯಿಟ್) ನೆಟ್ (ಬಲೆ) ಅನ್ನು ಸ್ಪರ್ಶಿಸಿದರೆ ಅಥವಾ ಅದು ಕೋರ್ಟಿನ ಪರಿಧಿಯನ್ನು ದಾಟಿ ಹೊರಗೆ ಹೋದರೆ ಅದು ದೋಷ (ತಪ್ಪು) ಎಂದೆನಿಸಿಕೊಳ್ಳುತ್ತದೆ. ಆಗ ಎದುರಾಳಿಗೆ ಅಂಕ (ಪಾಯಿಂಟ್) ದೊರೆಯುತ್ತದೆ.
ಕೋರ್ಟ್ ಮತ್ತು ಸಲಕರಣೆ
[ಬದಲಾಯಿಸಿ]ಟೆನ್ನಿಕ್ವಾಯಿಟ್ ಅನ್ನು ಒಳಾಂಗಣದಲ್ಲಿ ಅಥವಾ ಹೊರಗೆ ಆಡಬಹುದು. ಕೋರ್ಟ್ ಉದ್ದ ೧೨.೨ ಮೀ. ಮತ್ತು ಅಗಲ ೫.೫ ಮೀ. ಇರುತ್ತದೆ. ಮಧ್ಯದಲ್ಲಿ ಹಾಕುವ ನೆಟ್ (ಬಲೆ) ೧.೮ ಮೀ. ಎತ್ತರವಿರುತ್ತದೆ.
ಉಲ್ಲೇಖಗಳು
[ಬದಲಾಯಿಸಿ]- ↑ "Kerala Tennikoit Association". Keralatennikoit.com. Retrieved 30 December 2014.
- ↑ Ocean Liners: Crossing and Cruising the Seven Seas. Boyds Mills Press. 2008. pp. 44–. ISBN 978-1-59078-552-2.