ಮೊಳೆ
ಮರಗೆಲಸ ಮತ್ತು ಕಟ್ಟಡನಿರ್ಮಾಣದಲ್ಲಿ, ಮೊಳೆ ಎಂದರೆ ಬಂಧನಿಯಾಗಿ, ಏನನ್ನಾದರೂ ನೇತುಹಾಕಲು ಗೂಟವಾಗಿ, ಅಥವಾ ಕೆಲವೊಮ್ಮೆ ಅಲಂಕಾರಕ್ಕಾಗಿ ಬಳಸಲಾಗುವ, ಲೋಹದ (ಅಥವಾ ಕಟ್ಟಿಗೆ, ಇದನ್ನು ಮರದ ಬೆಣೆ ಎಂದು ಕರೆಯಲಾಗುತ್ತದೆ) ಒಂದು ಪಿನ್ ಆಕಾರದ ವಸ್ತು. ಸಾಮಾನ್ಯವಾಗಿ, ಮೊಳೆಗಳು ಒಂದು ತುದಿಯಲ್ಲಿ ಚೂಪಾದ ಬಿಂದು ಮತ್ತು ಇನ್ನೊಂದು ತುದಿಯಲ್ಲಿ ಚಪ್ಪಟೆಯ ಶಿರವನ್ನು ಹೊಂದಿರುತ್ತವೆ, ಆದರೆ ಶಿರವಿಲ್ಲದ ಮೊಳೆಗಳು ಲಭ್ಯವಿವೆ. ಮೊಳೆಗಳನ್ನು ವಿಶೇಷ ಉದ್ದೇಶಗಳಿಗಾಗಿ ವಿವಿಧ ರೂಪಗಳಲ್ಲಿ ತಯಾರಿಸಲಾಗುತ್ತದೆ. ತಂತಿ ಮೊಳೆಯು ಅತ್ಯಂತ ಸಾಮಾನ್ಯವಾದುದು. ಮೊಳೆಗಳ ಇತರ ಬಗೆಗಳಲ್ಲಿ ಪಿನ್ನುಗಳು, ತಟ್ಟುಮೊಳೆಗಳು, ಬ್ರ್ಯಾಡ್ ಮೊಳೆಗಳು ಮತ್ತು ಚಾಚುಗೂಟಗಳು ಸೇರಿವೆ.
ಸಾಮಾನ್ಯವಾಗಿ ಕಾರ್ಯವಸ್ತುವಿನೊಳಗೆ ಮೊಳೆಗಳನ್ನು ಸುತ್ತಿಗೆ, ವಾಯುಒತ್ತಡದ ನೇಲ್ ಗನ್, ಅಥವಾ ಚಿಕ್ಕ ಸ್ಫೋಟಕ ಪ್ರವಾಹ ಅಥವಾ ಸಲಕರಣೆಯಿಂದ ಒಳಹಾಕಲಾಗುತ್ತದೆ. ಮೊಳೆಯು ಅಕ್ಷೀಯ ದಿಕ್ಕಿನಲ್ಲಿ ಘರ್ಷಣೆ ಮೂಲಕ ಮತ್ತು ಪಾರ್ಶ್ವವಾಗಿ ಭಾರಸ್ತರ ಬಲದ ಮೂಲಕ ವಸ್ತುಗಳನ್ನು ಒಟ್ಟಾಗಿ ಹಿಡಿದಿಡುತ್ತದೆ. ಹೊರಗೆಳೆಯಲು ಆಗದಂತೆ ಜಡಿದ ನಂತರ ಮೊಳೆಯ ಬಿಂದುವನ್ನೂ ಕೆಲವೊಮ್ಮೆ ಬಾಗಿಸಲಾಗುತ್ತದೆ.
ಮೊದಲ ಮೊಳೆಗಳನ್ನು ಮೆತು ಕಬ್ಬಿಣದಿಂದ ತಯಾರಿಸಲಾಗಿತ್ತು. ಮೊಳೆಗಳ ಕಾಲ ಕನಿಷ್ಠಪಕ್ಷ ಪ್ರಾಚೀನ ಈಜಿಪ್ಟ್‌ನಷ್ಟು ಹಿಂದಿನದು ಎಂದು ನಿರ್ಧರಿಸಲಾಗಿದೆ — ಈಜಿಪ್ಟ್‌ನಲ್ಲಿ ಕಂಡುಹಿಡಿಯಲಾದ ಕಂಚಿನ ಮೊಳೆಗಳು ಕ್ರಿ.ಪೂ. ೩೪೦೦ ರ ಕಾಲದ್ದು ಎಂದು ನಿರ್ಧರಿಸಲಾಗಿದೆ.[೧] ಜೇಲ್‍ನ ನ್ಯಾಯಾಧೀಶರ ಕಥೆ, ಸಾಲೊಮನ್ ದೇವಾಲಯಕ್ಕೆ ರಾಜ ಡೇವಿಡ್‍ನು ಮೊಳೆಗಳಿಗಾಗಿ ಕಬ್ಬಿಣವನ್ನು ಒದಗಿಸಿದ್ದು, ಮತ್ತು ಏಸು ಕ್ರಿಸ್ತನನ್ನು ಶಿಲುಬೆಗೇರಿಸಿದ್ದು ಸೇರಿದಂತೆ, ಬೈಬಲ್ ಮೊಳೆಗಳ ಅನೇಕ ಉಲ್ಲೇಖಗಳನ್ನು ಒದಗಿಸುತ್ತದೆ.
ಹೆಸರೇ ಸೂಚಿಸುವಂತೆ, ತಂತಿ ಮೊಳೆಗಳನ್ನು ತಂತಿಗಳಿಂದ ರೂಪಿಸಲಾಗುತ್ತದೆ. ಒಂದು ನಿರ್ದಿಷ್ಟ ವ್ಯಾಸವನ್ನು ಮುಟ್ಟುವವರೆಗೆ ಸಾಮಾನ್ಯವಾಗಿ ತಂತಿಯ ಸುರುಳಿಗಳನ್ನು ಸರಣಿ ಅಚ್ಚುಗಳ ಮೂಲಕ ಎಳೆಯಲಾಗುತ್ತದೆ, ನಂತರ ಚಿಕ್ಕ ಕಡ್ಡಿಗಳಾಗಿ ಕತ್ತರಿಸಿ ಮೊಳೆಗಳಾಗಿ ರೂಪಿಸಲಾಗುತ್ತದೆ. ಮೊಳೆಯ ತುದಿಯನ್ನು ಸಾಮಾನ್ಯವಾಗಿ ಅಲಗಿನಿಂದ ಕತ್ತರಿಸಲಾಗುತ್ತದೆ; ಕಡ್ಡಿಯ ಮತ್ತೊಂದು ತುದಿಯನ್ನು ಅಧಿಕ ಒತ್ತಡದಲ್ಲಿ ಮರುರೂಪಿಸಿ ಶಿರವನ್ನು ರೂಪಿಸಲಾಗುತ್ತದೆ. ತೋಡುಗಳು ಮತ್ತು ಏಣುಗಳನ್ನು ಕತ್ತರಿಸಲು ಇತರ ಅಚ್ಚುಗಳನ್ನು ಬಳಸಲಾಗುತ್ತದೆ. ಅವುಗಳ ಮೂಲದ ದೇಶದ ಹೆಸರಿನಿಂದ ತಂತಿ ಮೊಳೆಗಳನ್ನು ಫ಼್ರೆಂಚ್ ಮೊಳೆಗಳು ಎಂದೂ ಕರೆಯಲಾಗುತ್ತಿತ್ತು. ಈಗ ಮೊಳೆ ತಯಾರಿಕಾ ಪ್ರಕ್ರಿಯೆಯೂ ಬಹುತೇಕ ಸಂಪೂರ್ಣವಾಗಿ ಸ್ವಯಂಚಾಲಿತವಾಗಿದೆ.
ಅಗ್ಗದ ತಂತಿ ಮೊಳೆಗಳ ಪರಿಚಯದಿಂದ, ಮೊಳೆತಯಾರಿಕೆಗೆ ಮೆತು ಕಬ್ಬಿಣದ ಬಳಕೆ ಬೇಗನೇ ಇಳಿತಗೊಂಡಿತು. ೧೯೧೩ರ ವೇಳೆಗೆ, ತಯಾರಿಸಲಾದ ಮೊಳೆಗಳಲ್ಲಿ ಶೇಕಡ ೯೦ರಷ್ಟು ತಂತಿ ಮೊಳೆಗಳಾಗಿದ್ದವು. ಅಲ್ಲಿಯವರೆಗೆ ವಿರಳ ಮತ್ತು ಅಮೂಲ್ಯವಾಗಿದ್ದ ಮೊಳೆಗಳು ಅಗ್ಗದ ರಾಶಿ ಉತ್ಪಾದನೆಯ ಸರಕಾದವು.
ಉಲ್ಲೇಖಗಳು
[ಬದಲಾಯಿಸಿ]- ↑ Paul Fourshee (27 April 1992). "A Two-Bit History of Nails". The Blueprint. 1 (2). Archived from the original on 5 ಜನವರಿ 2018. Retrieved 16 ಡಿಸೆಂಬರ್ 2017.