ಎಜ್ರಾ ಪೌಂಡ್‌

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪೌಂಡ್, ಎಜ್ರಲೂಮಿಸ್ (೧೮೮೫-೧೯೭೨). ಟಿ.ಎಸ್. ಎಲಿಯೆಟ್ಟ್‍ನಿಂದ ಅತಿಶ್ರೇಷ್ಠ ಕುಶಲ ಕೆಲಸಗಾರ ಎಂದು ಪ್ರಶಂಸೆ ಪಡೆದ ಕವಿ, ಅನುವಾದಕಾರ. ಆಧುನಿಕ ಕಾವ್ಯ ಕ್ಷೇತ್ರದಲ್ಲಿ ಬಹು ವಾದ-ವಿವಾದಕ್ಕೊಳಗಾದ ವ್ಯಕ್ತಿ.


ತನ್ನ ತಾಯಿಯ ಕಡೆಯಿಂದ ಲಾಂಗ್‍ಫೆಲೋಗೆ ದೂರದ ಸಂಬಂಧಿ. ವಿದ್ಯಾಸಂಸ್ಥೆಯ ನೀತಿಗೆ ವಿರೋಧವಾದ ವರ್ತನೆಗಾಗಿ ವಾಬಾಷ್ ಕಾಲೇಜಿನಿಂದ ಓಡಿಸಲ್ಪಟ್ಟು ಯೂರೋಪಿಗೆ ವಲಸೆ ಹೋಗಿ ಲಂಡನ್, ಪ್ಯಾರಿಸ್ ಮತ್ತು ಇಟಲಿಗಳಲ್ಲಿ ವಾಸವಾಗಿದ್ದ. ಅಲ್ಲಿ ಈತನಿಗೆ ಟಿ.ಎಸ್. ಎಲಿಯೆಟ್ , ಜೇಮ್ಸ್ ಜಾಯ್ಸ್ ಮತ್ತು ವಿಂಥ್ಯಾಮ್ ಲೂಯಿಸ್‍ರ ಸ್ನೇಹ ದೊರಕಿತು. ದೊರೊತಿ ಷೇಕ್ಸ್‍ಪಿಯರ್ ಎಂಬಾಕೆಯನ್ನು ಮದುವೆಯಾದ. ಆ ಕಾಲದಲ್ಲಿ ಈತ ರಚಿಸಿದ ಮುಖ್ಯ ಕವನ ಸಂಕಲನಗಳೆಂದರೆ ಪರ್ಸನೆ (1909) ಮತ್ತು ರಿಪೋಸ್ಟಸ್ (1912). ಎರಡನೆಯ ಮಹಾಯುದ್ಧದ ಅನಂತರ ಪ್ಯಾಸಿಸ್ಟ್ ಪರವಾದ ಚಟುವಟಿಕೆಗಳಿಗಾಗಿ ಈತನ ಮೇಲೆ ದೇಶದ್ರೋಹ ಆಪಾದನೆ ಹೊರಿಸಿ ವಿಚಾರಣೆಗೆಂದು ಈತನನ್ನು ಅಮೆರಿಕ ಸಂಯುಕ್ತ ಸಂಸ್ಥಾನಗಳಿಗೆ ಹಿಂದಿರುಗಿಸಲಾಯಿತು. ವಿಚಾರಣೆಯ ಅನಂತರ ಚಿತ್ತಸ್ವಾಸ್ಥ್ಯವಿಲ್ಲದವನೆಂಬ ನಿರ್ಣಯದಿಂದ ಇವನನ್ನು ಚಿಕಿತ್ಸಾಲಯ ಒಂದಕ್ಕೆ ಕಳುಹಿಸಲಾಯಿತು. ಅಲ್ಲಿಂದ ಬಿಡುಗಡೆಯಾದ ಮೇಲೆ ಈತ ಇಟಲಿಯಲ್ಲಿ ನೆಲಸಿದ. ಪೌಂಡ್‍ನ ಸ್ವಾತಂತ್ರ್ಯ ರಚನೆಯಲ್ಲಿ ಆಧುನಿಕ ಚೇತನವನ್ನು ನಿರೂಪಿಸುವ ಸೂಚನಾತ್ಮಕ (ಅಲ್ಯೂಸಿವ್) ಕವನ ಚಿತ್ರ ಹ್ಯೂ ಸೆಲ್‍ವಿನ ಮಾಬರ್‍ಲೀ (1920) ಮತ್ತು ಇನ್ನೂ ಅಸಂಪೂರ್ಣವಾಗಿ ಉಳಿದಿರುವ ಯೂರೋಪಿನ ಸಂಸ್ಕøತಿಯ ಚರಿತ್ರೆಯನ್ನು ಕುರಿತಂತೆ ಅಸ್ಪಷ್ಟವಾಗಿ ಸಂಯೋಜಿತಗೊಂಡ ಮಹಾಕಾವ್ಯ ಪೀಸಾನ್ ಕ್ಯಾಂಟೊಸ್ (1925-55) ಸೇರಿವೆ. ಕ್ಯಾಂಟೋಸ್ ಕೃತಿಗೆ ಬಾಲಿಂಜೆನ್ ಬಹುಮಾನ ದೊರತಿದೆ. ಆಂಗ್ಲೊ-ಸ್ಯಾಕ್ಸನ್, ಇಟಾಲಿಯನ್, ಚೀನೀ ಮತ್ತು ಜಪಾನಿಯ ಕಾವ್ಯಗಳಿಂದ ಹಲವಾರು ಅನುವಾದಗಳನ್ನೂ ಈತ ಪ್ರಕಟಿಸಿದ್ದಾನೆ. ಈತನ ಖ್ಯಾತ ವಿಮರ್ಶಾಗ್ರಂಥಗಳೆಂದರೆ ದಿ ಸ್ಪಿರಿಟ್ ಆಫ್ ರೊಮಾನ್ಸ್ (1910), ಪೊಲೈಟ್ ಎಸ್ಸೇಸ್ (1937), ಲಿಟರರಿ ಎಸ್ಸೇಸ್ (1954).

ಪೌಂಡ್ ಪ್ರತಿಮಾ ಪಂಥದ ನೇತಾರರಲ್ಲಿ ಒಬ್ಬ. ಬಹುಕಾಲದ ಮೇಲೆ ಈತ ಆವರ್ತವಾದವನ್ನು (ವೊರ್ಟಿಸಿಸಂ) ಅನುಸರಿಸತೊಡಗಿದ.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: