ವಿಷಯಕ್ಕೆ ಹೋಗು

ಕನ್ನಡ ಕಾವ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

"'ಕನ್ನಡ ಕಾವ್ಯ"' : - ಭಾರತದ ದ್ರಾವಿಡ ಭಾಷೆಗಳಲ್ಲಿ ಒಂದಾದ, ಗತ ವೈಭವದ ಇತಿಹಾಸವುಳ್ಳ ಭಾಷೆಯಾದ ಕನ್ನಡ ಭಾಷೆ ಭಾರತೀಯ ಸಾಹಿತ್ಯ ಲೋಕಕ್ಕೆ ಬಹಳ ಹಿಂದಿನಿಂದಲೂ ಸರ್ವ ಶ್ರೇಷ್ಠವಾದ ಅನೇಕ ಕೊಡುಗೆಗಳನ್ನು ನೀಡುತ್ತಾ ಬಂದಿದೆ. ಆಧುನಿಕ ಸಾಹಿತ್ಯ ಕಾಲ ಘಟ್ಟದಲ್ಲಿಯೂ ಭಾರತದ ಸಾಹಿತ್ಯ ಲೋಕದ ಮಹೋನ್ನತ ಪ್ರಶಸ್ತಿಯಾದ 'ಜ್ಞಾನಪೀಠ' ಪ್ರಶಸ್ತಿಯನ್ನು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪಡೆದುಕೊಂಡ ಒಂದು ರಾಜ್ಯದ ಭಾಷೆಯಾಗಿದೆ ಕನ್ನಡ. ತನ್ನ ಕಾವ್ಯಗಳಲ್ಲಿ 'ಕನ್ನಡ ಭೂಮಿಯಲ್ಲಿ ಮತ್ತೆ ಕನಿಷ್ಠ ಮರಿ ದುಂಬಿಯಾಗಿಯಾದರೂ ಹುಟ್ಟಬೇಕು' ಎಂದು ಹಾಡಿದ ಆದಿಕವಿ ಪಂಪನ ಕಾಲದಿಂದ ಹಿಡಿದು ಆಧುನಿಕ ಕನ್ನಡ ಕವಿಗಳಾದ ರಸಋಷಿ ಕುವೆಂಪು, ದ.ರಾ.ಬೇಂದ್ರೆಯವರ ವರೆಗೂ ಕನ್ನಡ ಕಾವ್ಯವು ಅನೇಕ ಘಟ್ಟಗಳನ್ನು ಕಾಣುತ್ತ ಹಾಗು ಅವುಗಳನ್ನು ತನ್ನೊಳಗೆ ಸಮ್ಮಿಳಿಸಿಕೊಳ್ಳುತ್ತಾ ಬೆಳೆದು ನಿಂತ ಬಗೆಯೇ ಸಂತೋಷದಾಯಕವಾಗಿದೆ.

ಇತಿಹಾಸ

[ಬದಲಾಯಿಸಿ]

ಇದೀಗ ದಾಖಲೆಗಳು ಲಭ್ಯವಿಲ್ಲದಿದ್ದರೂ ಕನ್ನಡ ಕಾವ್ಯಲೋಕದ ಆರಂಭ ಸುಮಾರು ೫ನೆ ಶತಮಾನದ ಆಸುಪಾಸಿಗೆ ಆಗಿದೆ ಎಂದು ಅಂದಾಜಿಸಲಾಗಿದೆ. ಕನ್ನಡ ಕಾವ್ಯಗಳಿಗೆ ಸಂಬಂಧಿಸಿದಂತೆ ಕ್ರಿ.ಶ ೭೦೦ ರ ಸುಮಾರಿಗೆ ಕಪ್ಪೆ ಅರಭಟ್ಟನ ಶಾಸನಗಳನ್ನು ಬರೆಸಿರಬಹುದೆಂದು ಅಂದಾಜಿಸಲಾಗಿದ್ದು ಅವುಗಳಲ್ಲಿ ತ್ರಿಪದಿಗಳ ರಚನೆಯನ್ನು ಕಾಣಬಹುದಾಗಿದೆ. ದಾಖಲೆಗಳು ಹಾಗು ಕೃತಿಗಳು ಲಭ್ಯವಿರುವ ಕಾರಣ ಪಂಪನನ್ನು ಕನ್ನಡದ ಮೊದಲ ಕವಿ ಎಂದು ಅಂಗೀಕರಿಸಲಾಗಿದೆ. ಆದಿಕವಿ ಪಂಪನ 'ವಿಕ್ರಮಾರ್ಜುನ ವಿಜಯ'ವು ಹಳೆಗನ್ನಡ ಶೈಲಿಯಲ್ಲಿದ್ದು ಕನ್ನಡದ ಐತಿಹಾಸಿಕ ಕಾವ್ಯವಾಗಿಯೂ ಅದನ್ನು ಪರಿಗಣಿಸಲಾಗಿದೆ. ಪಂಪನ ಮತ್ತೊಂದು ಕೃತಿ 'ಆದಿಪುರಾಣವು' ಹಳೆಗನ್ನಡ ಶೈಲಿಯಲ್ಲಿದ್ದು ಪ್ರೌಢ ಕನ್ನಡವನ್ನು ಬಳಸಲಾಗಿದೆ. ಪಂಪನ ಕಾವ್ಯಗಳು ಆತನ ನಂತರದ ಎಷ್ಟೋ ಕನ್ನಡ ಕವಿಗಳಿಗೆ ದಾರಿ ದೀಪವಾಗಿವೆ.

ಸಾಹಿತ್ಯ ಲೋಕಕ್ಕೆ ಕನ್ನಡ ಕೊಟ್ಟ ಕೊಡುಗೆಯಲ್ಲಿ ಬಹುಮುಖ್ಯವಾಗಿರುವ ಕಾವ್ಯ ಬಗೆಯೆಂದರೆ 'ವಚನಗಳು'. ವಚನಗಳು ನಡುಗನ್ನಡ ಕಾಲದಲ್ಲಿ ಹುಟ್ಟಿದ್ದು ಅವುಗಳಲ್ಲಿ ಭಾಷಾ ಪ್ರೌಢಿಮೆ ಸಾರುವುದಕ್ಕಿಂತ ಹೆಚ್ಚಾಗಿ ಸಾಮಾಜಿಕ ಕಳಕಳಿಯನ್ನು ಜನರದ್ದೇ ಆಡು ಭಾಷೆಯಲ್ಲಿ ತಿಳಿಸುವ ವೈಶಿಷ್ಟತೆ ಅಡಗಿದೆ. ವಚನಗಳು ಅನಕ್ಷರಸ್ಥರಿಗೂ ಸುಲಭವಾಗಿ ಅರ್ಥವಾಗುವಂತಿದ್ದು ವ್ಯಾಕರಣ, ವಿಶೇಷಣಗಳಿಂದ ದೂರವುಳಿದು ಸಾಮಾಜಿಕ ಜವಾಬ್ದಾರಿಯನ್ನು ಹೊತ್ತುಕೊಂಡ ಕಾವ್ಯ ಪ್ರಕಾರವಾಗಿ ಹೊರ ಹೊಮ್ಮಿವೆ. ಆಗಿನ ಭಾರತೀಯ ಸಾಮಾಜಿಕ ಪರಿಸ್ಥಿತಿಯಲ್ಲಿ ಪ್ರಬಲವಾಗಿ ಬೇರೂರಿದ್ದ ಜಾತೀಯತೆ, ಧರ್ಮ ಭೇದ, ಲಿಂಗ ಭೇದ, ಡಂಬಾಚರಣೆಗಳ ವಿರುದ್ಧ ದನಿಯೆತ್ತುವ ಮುಖಾಂತರ ವಚನ ಪ್ರಕಾರವು ಸಾಮಾಜಿಕ ಕ್ರಾಂತಿಗೂ ನಾಂದಿಯಾಯಿತು ಹಾಗು ಕಾಯಕವನ್ನು ಶ್ರೇಷ್ಠ ಸ್ಥಾನದಲ್ಲಿಟ್ಟು 'ಕಾಯಕವೇ ಕೈಲಾಸ' ಎನ್ನುವ ಮೂಲಕ ಕಾಯಕಕ್ಕೆ ಹೆಚ್ಚಿನ ಮಹತ್ವ ನೀಡಲು ಕರೆ ಕೊಡಲಾಯಿತು. ಬರೀ ಕಾವ್ಯ ಲೋಕದಲ್ಲಷ್ಟೇ ಅಲ್ಲದೆ ಸಾಮಾಜಿಕ ಜೀವನದಲ್ಲಿ ವಚನ ಉಂಟು ಮಾಡಿದಷ್ಟು ಬದಲಾವಣೆಗಳನ್ನು ಇನ್ನಿತರ ಕಾವ್ಯಗಳು ಮಾಡಿಲ್ಲವೆನ್ನುವುದು ಸತ್ಯ.[]

ಭಕ್ತಿ

[ಬದಲಾಯಿಸಿ]

ಕನ್ನಡ ಸಾಹಿತ್ಯ ಲೋಕಕ್ಕೆ ಭಕ್ತಿ ಚಳುವಳಿಯ ಕಾಲವೂ ಅಗಣಿತ ಕೊಡುಗೆಗಳನ್ನು ನೀಡಿದೆ. ಸಂತರ, ದಾಸರ ಪದಗಳ ಮೂಲಕ ಶ್ರೀಮಂತ ಶಾಸ್ತ್ರೀಯ ಸಂಗೀತದ ಏಳಿಗೆಗೂ ಕಾರಣವಾಗಿದೆ. ಭಕ್ತಿ ಪಂಥದ ಕಾವ್ಯದ ಕಾಲ ಹದಿನೈದನೇ ಶತಮಾನ. ವಚನಗಳಿಗೆ ಹೋಲಿಸಿದಾಗ ಭಕ್ತಿಗೀತೆಗಳಲ್ಲಿ ಸಾಮಾಜಿಕ ವಿಚಾರಕ್ಕಿಂತ ಭಗವಂತನ ಮಹಿಮೆಯನ್ನು ಪದ್ಯ , ಪದಗಳ ಮೂಲಕ ವರ್ಣಿಸುವುದು ಹೆಚ್ಚಾಗಿ ಕಂಡು ಬರುತ್ತದೆ. ಪುರಂದರ, ಕನಕರ ಪದಗಳಲ್ಲಿ ಭಗವಂತನ ನಾಮಾಮೃತವನ್ನು ಸ್ಮರಿಸುತ್ತಾ ಬದುಕುವುದು ಶ್ರೇಯಸ್ಕರವೆಂದು ತಿಳಿಸಿದರೂ ನಡು ನಡುವೆ ದೇವರೊಪ್ಪುವ ಮಾರ್ಗಗಳನ್ನು ಭೋದಿಸುತ್ತಾ ಮನುಷ್ಯನ ವಯ್ಯಕ್ತಿಕ ಬೆಳವಣಿಗೆಗೆ ಅನುಕೂಲವಾಗುವ ಸಂಗತಿಗಳನ್ನು ತಮ್ಮ ಪದಗಳಲ್ಲಿ ಬಳಸಿಕೊಂಡಿದ್ದಾರೆ. ಸಾಮನ್ಯವಾಗಿ ದಾಸರ ಪದಗಳು ಹತ್ತರಿಂದ ಹದಿನೈದು ಸಾಲುಗಳಿದ್ದು ವೆಚ್ಚ ಸಂಗೀತ ಸಂಯೋಜನೆ ಮಾಡಲು ಹೇಳಿ ಮಾಡಿಸಿದಂತಿವೆ.

ಹರಿದಾಸ ಭಕ್ತಿ ಪರಂಪರೆಯು ವ್ಯಕ್ತಿಯ ಬದುಕಿನಲ್ಲಿನ ಭಕ್ತಿ, ಶಾಂತಿ, ಪ್ರೀತಿ ಜಾಗರೂಕಗೊಳಿಸುವಂತಹ ಸಾಹಿತ್ಯ ರಚನೆ ಮಾಡಿದ್ದು ಅವುಗಳು ದೇವರ ನಾಮಗಳೆಂದೇ ಪ್ರಸಿದ್ಧಿಪಡೆದುಕೊಂಡಿವೆ.[]

ನವೋದಯ ಕಾವ್ಯ

[ಬದಲಾಯಿಸಿ]

ಭಾರತ ದೇಶದೊಳಗೆ ಬ್ರಿಟೀಷರು ಅಧಿಪತ್ಯ ಸ್ಥಾಪಿಸುವುದಕ್ಕಿಂತಲೂ ಮುಂಚೆಯಿಂದಲೂ ಸಂಸ್ಕೃತ ಭಾಷೆ ದೇಶದೊಳಗಿನ ಇನ್ನಿತರ ಭಾಷೆಗಳ ಮೇಲೆ ವಿವಿಧ ಪರಿಣಾಮ ಬೀರಿತ್ತು. ಬ್ರಿಟಿಷರ ಆಡಳಿತಕ್ಕೆ ಒಳಪಟ್ಟ ನಂತರ ಕನ್ನಡಕ್ಕಿಂತಲೂ ಹೆಚ್ಚಾಗಿ ಇಂಗ್ಲಿಷ್ ಭಾಷೆಗೆ ಹೆಚ್ಚು ಪ್ರಾಶಸ್ತ್ಯ ಕೊಡತೊಡಗಿದ್ದುದರಿಂದ ಕನ್ನಡ ಕಾವ್ಯ ಲೋಕ ಕೊಂಚ ಹಿನ್ನಡೆ ಅನುಭವಿಸಬೇಕಾಯಿತು. ಆದರೂ ಅಲ್ಲಲ್ಲಿ ಕೆಲವು ರಾಜರುಗಳು ಆಸ್ಥಾನ ಕವಿಗಳಿಗೆ ಗೌರವ ಕೊಟ್ಟು ಸಲುಹಿದ್ದರ ಪರಿಣಾಮ ಕನ್ನಡ ಕಾವ್ಯ ಲೋಕ ಹಿಂದಿನಷ್ಟು ವೈಭವದಿಂದ ಮೆರೆಯಲು ಸಾಧ್ಯವಾಗದಿದ್ದರೂ ಕಾವ್ಯ ಲೋಕಕ್ಕೆ ತನ್ನ ಸೇವೆಯನ್ನಂತೂ ಮುಂದುವರಿಸಿಯೇ ಇತ್ತು.

ಭಾರತದಲ್ಲಿ ಬ್ರಿಟಿಷ್ ಅಧಿಪತ್ಯ ಕೊನೆಗೊಂಡು ಕನ್ನಡಕ್ಕೆ ಸಾಂವಿಧಾನಿಕ ಸ್ಥಾನಮಾನಗಳು ದಕ್ಕಿ ಕನ್ನಡಕಾಗಿಯೇ ರಾಜ್ಯವೊಂದು ರಚನೆಯಾದಾಗ ಕನ್ನಡ ಸಾಹಿತ್ಯ ಲೋಕ ಚೇತರಿಸಿಕೊಂಡು ಗತ ವೈಭವ ಮರುಕಳಿಸಲು ಸಜ್ಜಾಗಿ ನಿಂತಿತು. ಆ ಕಾಲ ಘಟ್ಟಕ್ಕೆ ಸರಿಯಾಗಿ ಕನ್ನಡ ಸಾಹಿತ್ಯ ಲೋಕ ಎಂದೂ ಮರೆಯದ ಕವಿಗಳಾದ ರಸ ಋಷಿ ಕುವೆಂಪು, ದ.ರಾ.ಬೇಂದ್ರೆ, ಕೋಟಾ ಶಿವರಾಮ ಕಾರಂತರ ಕಾವ್ಯಗಳು ಕನ್ನಡ ಕಾವ್ಯ ಲೋಕ ಪುನಶ್ಚೇತನಕ್ಕಾಗಿಯೇ ಎನ್ನುವಂತೆ ಮೂಡಿ ಬಂದವು. ಹೊಸ ಅಲೆಯ ಕನ್ನಡ ಕಾವ್ಯಗಳು ಆಗ ಬಂದಿದ್ದರಿಂದಲೇ ಆ ಕಾಲಘಟ್ಟವನ್ನು ನವೋದಯ ಎಂದು ಕರೆಯಲಾಯಿತು. ಆ ಕಾವ್ಯಗಳಲ್ಲಿ ಭಕ್ತಿ, ವಯಕ್ತಿಕ ಬೆಳವಣಿಗೆಗೆ ಸಹಕಾರಿಯಾಗುವ ಕಾವ್ಯಗಳಿಗಿಂತ ಭಾವುಕತೆ, ಜೀವನೋತ್ಸಾಹ, ಜೀವನದ ಏಳ್ಗೆಯಂತಹ ವಿಚಾರಗಳನ್ನು ಒಳಗೊಂಡಿದ್ದ ಕಾವ್ಯಗಳು ಹೆಚ್ಚು ಹೆಚ್ಚು ಮೂಡಿ ಬಂದವು. ಇವುಗಳ ಜೊತೆಗೆ ಇಂಗ್ಲೀಷ್ ರೋಮಾಂಚನೀಯ ಕಾವ್ಯಗಳನ್ನು ಕನ್ನಡಕ್ಕೆ ಅನುವಾದ ಮಾಡುವ ಮೂಲಕ ಬಿ.ಎಂ ಶ್ರೀ ಕಂಠಯ್ಯ ನವರು ಮುಂದಿನ ಕನ್ನಡ ಕವಿ ಪೀಳಿಗೆಗೆ ತಾವೂ ಕನ್ನಡಲ್ಲಿಯೇ ಕಾವ್ಯ ರಚನೆಯಲ್ಲಿ ತೊಡಗಬೇಕೆನ್ನುವ ವಿಚಾರ ತಲೆಯಲ್ಲಿ ಹೊಳೆಯಲು ಅನುವಾಗುವಂತೆ ಮಾಡಿದರು. ಇದಾದ ನಂತರ ಕನ್ನಡದಲ್ಲಿ ಪತ್ತೇದಾರಿ, ಪ್ರಣಯ ಕಾವ್ಯ, ಪ್ರೇಮ ಕಾವ್ಯಗಳು ಹೆಚ್ಚಿನ ಪ್ರಮಾಣದಲ್ಲಿ ಬರಲು ಆರಂಭವಾದವು. ಆಗಿನ ಬಹಳಷ್ಟು ಕವಿಗಳ ಬರಹಗಳು ಆಗಿನ ಇಂಗ್ಲೀಷ್ ಕಾವ್ಯಗಳಿಂದ ಪ್ರೇರಿಪಿತವಾಗಿದ್ದವು.

ರಾಷ್ಟ್ರ ಕವಿ ಕುವೆಂಪು ಕೂಡ ಆರಂಭದಲ್ಲಿ 'ಬಿಗಿನರ್ಸ್ ಮ್ಯೂಸ್' ಎಂಬ ತಮ್ಮದೇ ಕವನ ಸಂಕಲನವನ್ನು ತಮ್ಮ ಬ್ರಿಟೀಷ್ ಪ್ರೊಫೆಸರ್ ಗೆ ತೋರಿಸಿದ ಸಂಧರ್ಭದಲ್ಲಿ ಅವರು ಕೊಟ್ಟ ಸಲಹೆಯ ಕುರಿತು ಸುಧೀರ್ಘವಾಗಿ ಯೋಚಿಸಿ ಕನ್ನಡದಲ್ಲೇ ಬರೆಯಲು ಆರಂಭಿಸುತ್ತಾರೆ. ಮುಂದೆ ಅವರ ಕಾವ್ಯಗಳು ಜಗತ್ತನ್ನು ಎಷ್ಟು ಚಕಿತಗೊಳಿಸುತ್ತವೆಂದರೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆಯುವ ಅವರು ಕನ್ನಡದ ರಾಷ್ಟ್ರ ಕವಿ ಹಾಗು ಕರ್ನಾಟಕ ರತ್ನ ಎಂಬ ಬಿರುದುಗಳನ್ನೂ ಪಡೆಯುತ್ತಾರೆ. ನಿಸರ್ಗ, ದೇವರ ಸೃಷ್ಟಿ ಹಾಗು ಅದರೊಡನಿನ ಮನುಷ್ಯನ ಒಡನಾಟ, ಮನುಷ್ಯನ ಆತ್ಮ ಸಾಕ್ಷಾತ್ಕಾರ ಇನ್ನು ಮುಂತಾದವೂ ಕುವೆಂಪುರವರ ಕವಿತೆಗಳ ಮುಖ್ಯ ವಸ್ತುಗಳು. ಆದ್ದರಿಂದಲೇ ಅವರನ್ನು 'ಕನ್ನಡದ ವರ್ಡ್ಸ್ ವರ್ತ್' ಎಂದು ಕರೆಯಲಾಗಿದೆ

ಜನಗಳೊಡನೆ ಕಾವ್ಯ

[ಬದಲಾಯಿಸಿ]

ಕಾವ್ಯ ರಚನೆಗೆ ಸಾರ್ಥಕತೆ ದಕ್ಕುವುದು ಅದು ಬಹಳಷ್ಟು ಜನರನ್ನು ತಲುಪಿ ಅದರಿಂದ ಬದಲಾವಣೆಯೊಂದು ಉಂಟಾದಾಗ ಮಾತ್ರ. ಬಹಳಷ್ಟು ಜನರನ್ನು ತಲುಪುವುದು ಹಾಗು ಅವರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿ ಉಳಿಯುವುದು ಯಾವುದೇ ಕಾವ್ಯ ಬಗೆಗಾಗದರೂ ಕಷ್ಟದ ಕೆಲಸವೇ ಸರಿ.ಆ ನಿಟ್ಟಿನಲ್ಲಿ ಕೆಲವು ಕಾವ್ಯಗಳು ಸಂಗೀತ ಸಂಯೋಜನೆಗೊಂಡು ಗಾಯನಗಳಾಗಿ ಹೊರಬರುತ್ತಿದ್ದು ಜನರ ಮನಸ್ಸಿನಲ್ಲಿ ಕಾವ್ಯವನ್ನು ಉಳಿಸುವ ಪ್ರಯತ್ನವಾಗಿದೆ. ಭಾವಗೀತೆಗಳು ಸಂಗೀತ ಸಂಯೋಜನೆಯಲ್ಲಿ ಬೇರೆ ರೀತಿಯ ಗೀತೆಗಳಿಗಿಂತ ಅಗ್ರ ಪಾಲು ಹೊಂದಿದ್ದು ಕವಿಯನ್ನು ಜನಗಳ ಮನಸ್ಸಿಗೆ ತಲುಪಿಸುವ ಕಾರ್ಯ ಸಂಗೀತದ ಮೂಲಕ ಕೊಂಚ ಸುಲಭವೆನಿಸಬಹುದಾಗಿದೆ. ಕೆಲವು ಕವಿತೆಗಳನ್ನು ಚಲನಚಿತ್ರಗಳಲ್ಲಿಯೂ ಬಳಸಿಕೊಂಡಿರುವುದು ಇದೀಗ ಗೌಪ್ಯ ವಿಚಾರವಲ್ಲ.

ಸಂಗೀತ ಸಂಯೋಜನೆಯ ವಿಚಾರ ಹೊರತು ಪಡಿಸಿದರೆ ಜನ ಕಾವ್ಯಗಳಲ್ಲಿ ಮಗ್ನವಾಗುವ ಅನೇಕ ಸನ್ನಿವೇಶಗಳು ದಿನ ನಿತ್ಯದ ಜೀವನದಲ್ಲಿ ದೊರಕುತ್ತವೆ. ಇಂದಿಗೂ ಎಷ್ಟೋ ಮನೆಗಳಲ್ಲಿ ಕರ್ನಾಟಕದ ಮಹಾಭಾರತವೆಂದೇ ಪ್ರಸಿದ್ಧಿ ಪಡೆದಿರುವ 'ಕುಮಾರವ್ಯಾಸ ಭಾರತವನ್ನು ಪಠಣ ಮಾಡುವುದು ಉಂಟು. ಇನ್ನುಳಿದಂತೆ ದಿನ ನಿತ್ಯದ ಸಂವಹನಗಳಲ್ಲಿ ಮಾದರಿಯಾಗಿ ಆಗಾಗ್ಗೆ ವಚನಗಳ ಬಳಕೆ ಸಾಮಾನ್ಯವಾಗಿದೆ.

ಹೊರಗಿನ ಕೊಂಡಿಗಳು

[ಬದಲಾಯಿಸಿ]

ಉಲ್ಲೇಖ

[ಬದಲಾಯಿಸಿ]
  1. https://www.karnataka.com › Personalities
  2. "ಭಕ್ತಿ ಚಳುವಳಿ". Archived from the original on 2017-12-28. Retrieved 2017-12-22.