ವಿಷಯಕ್ಕೆ ಹೋಗು

ಮ್ಯಾಕ್ಸ್ ಬಾರ್ನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮ್ಯಾಕ್ಸ್ ಬಾರ್ನ್

ಮ್ಯಾಕ್ಸ್ ಬಾರ್ನ್ (೧೧ ಡಿಸೆಂಬರ್ ೧೮೮೨ - ೫ ಜನವರಿ ೧೯೭೦) ಜರ್ಮನ್‍ನ ಭೌತವಿಜ್ಞಾನಿ ಮತ್ತು ಗಣಿತಜ್ಞ ಆಗಿದ್ದರು. ಅವರು ಕ್ವಾಂಟಮ್ ಮೆಕ್ಯಾನಿಕ್ಸ್ ಕ್ಷೇತ್ರದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು. ಅವರು ಘನ ಭೌತಶಾಸ್ತ್ರ ಮತ್ತು ದೃಗ್ವಿಜ್ಞಾನದಲ್ಲಿ ತಮ್ಮ ಕೊಡುಗೆಗಳನ್ನು ನೀಡಿದ್ದಾರೆ. ಮ್ಯಾಕ್ಸ್ ಬಾರ್ನ್ ಕ್ವಾಂಟಮ್ ಮೆಕ್ಯಾನಿಕ್ಸ್ ಕ್ಷೇತ್ರದಲ್ಲಿ ಮಾಡಿರುವ ಸಂಶೋಧನೆಗಾಗಿ ೧೯೫೪ರಲ್ಲಿ ನೊಬೆಲ್ ಪ್ರಶಸ್ತಿ ದೊರಕಿದೆ.[]

ಆರಂಭಿಕ ಜೀವನ

[ಬದಲಾಯಿಸಿ]

ಮ್ಯಾಕ್ಸ್ ಬಾರ್ನ್ ಬ್ರೆಸ್ಲೌ (ಈಗ ರೊಕ್ಲಾ), ಪೋಲೆಂಡ್‍ನಲ್ಲಿ ೧೧ ಡಿಸೆಂಬರ್ ೧೮೮೨ ರಂದು ಜನಿಸಿದ್ದರು. ಅವರು ಗುಸ್ತಾವ್ ಬಾರ್ನ್‍ಗೆ ಹುಟ್ಟಿದ ಇಬ್ಬರು ಮಕ್ಕಳಲ್ಲಿ ಒಬ್ಬರು. ಅವರ ತಂದೆ ಬ್ರೆಸ್ಲೌ ಯುನಿವರ್ಸಿಟಿಯ ಭ್ರೂಣಶಾಸ್ತ್ರ ವಿಷಯದ ಪ್ರೊಫೆಸರ್ ಆಗಿದ್ದರು. ಅವರ ತಾಯಿ ಮಾರ್ಗರೆಥೆ. ೨೯ ಆಗಸ್ಟ್ ೧೮೮೬, ಮ್ಯಾಕ್ಸ್ ನಾಲ್ಕು ವರ್ಷದವನಾಗಿದ್ದಾಗ ಅವರ ತಾಯಿ ನಿಧನರಾದರು. ಆದ್ದರಿಂದ ಅವರು ಅಜ್ಜಿಯ ಆರೈಕೆಯಲ್ಲಿ ಬೆಳೆದರು.[]

ಆರಂಭದಲ್ಲಿ ಬ್ರೆಸ್ಲೌ ಕೋನಿಗ್-ವಿಲ್ಹೆಲ್ಮ್-ಜಿಮ್ನಾಷಿಯಂ, ಬ್ರೆಸ್ಲೌದಲ್ಲಿ ಶಿಕ್ಷಣ ಪಡೆದರು; ಆನಂತರ ೧೯೦೧ ರಲ್ಲಿ ಬ್ರೆಸ್ಲೌ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆದರು. ಜರ್ಮನ್ ವಿಶ್ವವಿದ್ಯಾಲಯವು ವಿದ್ಯಾರ್ಥಿಗಳಿಗೆ ಮತ್ತೊಂದು ವಿಶ್ವವಿದ್ಯಾನಿಲಯದಲ್ಲಿ ಸುಲಭವಾಗಿ ಸೇರಲು ಅವಕಾಶ ನೀಡುತ್ತಿತ್ತು, ಆದ್ದರಿಂದ ಅವರು ೧೯೦೨ ರಲ್ಲಿ ಹೈಡೆಲ್ಬರ್ಗ್ ವಿಶ್ವವಿದ್ಯಾಲಯದಲ್ಲಿ ಒಂದು ಸೆಮಿಸ್ಟರ್ ಕಳೆದರು ಹಾಗು ೧೯೦೩ ರಲ್ಲಿ ಜ್ಯೂರಿಚ್ ವಿಶ್ವವಿದ್ಯಾಲಯದಲ್ಲಿ ಮತ್ತೊಂದು ಸೆಮಿಸ್ಟರ್ ಕಳೆದರು. ಬ್ರೆಸ್ಲೌ ವಿಶ್ವವಿದ್ಯಾಲಯದಲ್ಲಿ ಓದುವಾಗ ಅವರು ಗಾಟ್ಟಿಂಗನ್ ವಿಶ್ವವಿದ್ಯಾಲಯ ಬಗ್ಗೆ ಕೇಳಿದರು ಹಾಗೂ ೧೯೦೪ ರ ಏಪ್ರಿಲ್‍ನಲ್ಲಿ ಅಲ್ಲಿಗೆ ಹೋದರು. ಗಾಟ್ಟಿಂಗನ್ ವಿಶ್ವವಿದ್ಯಾಲಯದಲ್ಲಿ ಓದುವಾಗ ಅವರು ಮೂರು ಹೆಸರಾಂತ ಗಣಿತಜ್ಞರ ಪರಿಚಯ ಮಾಡಿಕೊಂಡರು: ಫೆಲಿಕ್ಸ್ ಕ್ಲೈನ್, ಡೇವಿಡ್ ಹಿಲ್ಬರ್ಟ್ ಮತ್ತು ಹರ್ಮನ್ ಮಿಂಕೋವ್ಸ್ಕಿಯ. ಹಿಲ್ಬರ್ಟ್ ಅಸಾಧಾರಣ ಸಾಮರ್ಥ್ಯ ಹೊಂದಿರುವ ಬಾರ್ನ್‍ನನ್ನು ಗುರುತಿಸಿ ಅವರನ್ನು ಉಪನ್ಯಾಸ ಲೇಖಕನ ಬರೆಯಲು ಆಯ್ಕೆ ಮಾಡಿದರು. ಇದರಿಂದ ಅವರು ಬೌದ್ಧಿಕವಾಗಿ ವಿಕಾಸವನ್ನು ಹೊಂದಿದರು. ಹಿಲ್ಬರ್ಟ್ ಬಾರ್ನ್‍ನನ್ನು ಸಹಾಯಕ ಪ್ರಾಧ್ಯಾಪಕರಾಗಿ ನೇಮಕ ಮಾಡಿಕೊಂಡರು.

ವೃತ್ತಿ ಜೀವನ

[ಬದಲಾಯಿಸಿ]

೧೩ ಜೂನ್ ೧೯೦೬ರಲ್ಲಿ ಗಣಿತಶಾಸ್ತ್ರ ವಿ‍‍‍‍ಷಯದಲ್ಲಿ ಗಾಟ್ಟಿಂಗನ್‍ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ. ಪಡೆದರು. ಗಾಟ್ಟಿಂಗನ್‍‍ನಲ್ಲಿ ಉಪನ್ಯಾಸಕನಾಗಿ ವೃತ್ತಿ ಜೀವನ ಪ್ರಾರಂಭಿಸಿದ ಬಾರ್ನ್ ೧೯೨೧ರಲ್ಲಿ ಅಲ್ಲೇ ಭೌತಶಾಸ್ತ್ರ ಪ್ರಾಧ್ಯಾಪಕನಾದರು. ಪ್ರಾಧ್ಯಾಪಕನಾಗಿರುವಾಗ, ಸೈದ್ಧಾಂತಿಕ ಭೌತಶಾಸ್ತ್ರದ ಶಾಖೆಯನ್ನು ತಮ್ಮ ವಿಶ್ವ ವಿದ್ಯಾಲಯದಲ್ಲಿ ಪ್ರಾರಂಭಿಸಿದರು. ಇಡೀ ಜಗತ್ತಿನಲ್ಲಿ ಕೊಪೆನ್‍ಹೆಗೆನ್‍ನ ನೀಲ್ಸ್ ಬೊಹ್ರ್ ಸಂಸ್ಥೆ ಹೊರತುಪಡಿಸಿದರೆ ಈ ಬಗೆಯ ಅಧ್ಯಯನದಲ್ಲಿ ಇದು ಎರಡನೆಯದೆಂದು ಖ್ಯಾತವಾಯಿತು. ಯಹೂದಿಯಾಗಿದ್ದ ಬಾರ್ನ್, ನಾಝಿಗಳ ಭಯದಿಂದಾಗಿ ೧೯೩೩ರಲ್ಲಿ ಜರ್ಮನಿಯನ್ನು ತೊರೆದು ಕೇಂಬ್ರಿಜ್‍ನಲ್ಲಿ ನೆಲೆಸಿ, ಎಡಿನ್‍ಬರೋದಲ್ಲಿ ಪ್ರಾಧ್ಯಾಪಕರಾಗಿ, ೧೯೫೩ರಲ್ಲಿ ನಿವೃತ್ತಿಯ ನಂತರ ಗಟ್ಟಿಂಜೆನ್‍ನಲ್ಲಿ ನಿವೃತ್ತ ಜೀವನ ಕಳೆದರು. ೧೯೫೪ರಲ್ಲಿ ಬಾರ್ನ್, ಕ್ವಾಂಟಂ ಬಲವಿಜ್ಞಾನದಲ್ಲಿ ಸಲ್ಲಿಸಿದ ಸೇವೆಗಾಗಿ ಬೊಥೆಯೊಂದಿಗೆ ನೊಬೆಲ್ ಪುರಸ್ಕೃತನಾದರು. ಬಾರ್ನ್ ಸಂಶೋಧನೆ ಪ್ರಾರಂಭಿಸಿದಾಗ ಜಾಲಂಧ್ರ ಗತಿಶೀಲತೆಯಲ್ಲಿ ಆಸಕ್ತನಾಗಿದ್ದರು. ಘನವಸ್ತುಗಳು ಕಂಪಿಸುವಾಗ ಅದರ ಪರಮಾಣುಗಳು ಹೇಗೆ ಒಂದಕ್ಕೊಂದು ಬೆಸೆದುಕೊಂಡಿರುವುದೆಂದು ನಿಷ್ಕರ್ಷಿಸುವಲ್ಲಿ ನಿರತನಾಗಿದ್ದರು. ಇದರ ಫಲವಾಗಿ ಬಾರ್ನ್ ಹೇಬರ್ ಪ್ರತಿಕ್ರಿಯೆ ಚಕ್ರಗಳ ವಿವರಣೆ ಹೊರಬಂದಿತು. ಈ ವಿವರಣೆ ಅಯೋನಿಕ್ ಹರಳುಗಳ ಪರಮಾಣುಗಳ ಮಧ್ಯದ ಜಾಲಂಧ್ರ ಚೈತನ್ಯವನ್ನು ಲೆಕ್ಕಹಾಕಲು ಶಕ್ತವಾಗಿದೆ. ೧೯೨೩ರವೇಳೆಗೆ ಪ್ಲಾಂಕ್, ಐನ್‍ಸ್ಟೀನ್, ಬೊಹ್ರ್ ಹಾಗೂ ಸೊಮ್ಮರ್‍ ಫೀಲ್‍ಡ್ ಇಂದ ಸ್ಥಾಪಿತಗೊಂಡಿದ್ದ ಕ್ವಾಂಟಂ ಬಲವಿಜ್ಞಾನ ಹಲವಾರು ವೈಜ್ಞಾನಿಕ ವೀಕ್ಷಣೆಗಳಿಗೆ ಸಮರ್ಪಕವಾದ ಉತ್ತರಕೊಡುವಲ್ಲಿ ಸೋತಿದ್ದಿತು. ಕಣಗಳು ಅಲೆಗಳಂತಹ ಗುಣಗಳನ್ನು ಹೊಂದಿದ್ದರೆ, ಇಂತಹ ವೀಕ್ಷಣೆಗಳಿಗೆ ವೈಜ್ಞಾನಿಕವಾದ ಸಮರ್ಪಕ ವಿವರಣೆ ನೀಡಬಹುದೆಂದು ೧೯೨೪ರಲ್ಲಿ ಬ್ರೊಗಿಲಿ ಸೂಚಿಸಿದನು. ಈ ಹಿನ್ನೆಲೆಯಲ್ಲಿ ಬಾರ್ನ್, ಇ.ಪಿ. ಜೋರ್ಡಾನ್, ಹೈಸೆನ್‍ಬರ್ಗ್ ಹಾಗೂ ಪೌಲಿ ಸಂಯುಕ್ತವಾಗಿ ಹಲವಾರು ಹೊಸ, ವಿಸ್ತೃತ ಪರಿಕಲ್ಪನೆಗಳಿಗೆ ನಾಂದಿ ಹಾಡಿದರು. ೧೯೨೫ರಲ್ಲಿ ಬಾರ್ನ್, ಜೋರ್ಡಾನ್, ಜೊತೆ ಸೇರಿ, ಹೊಸದಾಗಿ ರೂಪುಗೊಳ್ಳುತ್ತಿರುವ ಪರಿಕಲ್ಪನೆಗಳನ್ನು ಸಮರ್ಥವಾಗಿ ಬಿಂಬಿಸುವ, ಹಾಗೂ ಪರಿಹಾರ ಒದಗಿಸುವ ಮಾತೃಕೆ ವಿಧಾನವನ್ನು ಕ್ವಾಂಟಂ ಬಲವಿಜ್ಞಾನದಲ್ಲಿ ಬಳಕೆಗೆ ತಂದರು. ಡಿರಾಕ್ ಈ ವಿಧಾನವನ್ನು ಬಳಸತೊಡಗಿದನು. ೧೯೨೬ರಲ್ಲಿ ನಂತರ ಷ್ರೊಡಿಂಜರ್ ಸಮಾನ ಅಲೆ ಬಲವಿಜ್ಞಾನ ರೂಪಿಸಿ, ಹಳೆಯ ಹಾಗೂ ಹೊಸ ಪರಿಕಲ್ಪನೆಗಳನ್ನು ಕ್ವಾಂಟಂ ಬಲವಿಜ್ಞಾನದಲ್ಲಿ ಸಮನ್ವಯಗೊಳಿಸಿದನು. ಬಾರ್ನ್ ಅಲೆಫಲನದ ಸಂಭವನೀಯ ವಿವರಣೆಯನ್ನು ಮಂಡಿಸಿದರು. ಷ್ರೋಡಿಂಜರ್’ನ ಅಲೆ ಬಲವಿಜ್ಞಾನದಲ್ಲಿ, ಪ್ರತಿಯೊಂದು ಕಣವೂ ಒಂದು ಅಲೆಯ ಪೊಟ್ಟಣದಂತೆ ಪರಿಗಣಿತವಾಗಿದೆ. ಈ ಅಲೆ, ಕ್ರಮೇಣ ಇಲ್ಲದಂತಾಗುತ್ತದೆ. ಆದರೆ ಬಾರ್ನ್ ಇದನ್ನು ಒಪ್ಪದೆ ಯಾವುದೇ ಬಿಂದುವಿನಲ್ಲಿ ಕಣದ ಇರುವಿಕೆಯನ್ನು ಸಂಭವನೀಯತೆಯಿಂದ ಮಾತ್ರ ತಿಳಿಸಬಹುದೆಂದು ವಾದಿಸಿದರಲ್ಲದೆ, ಅಂತಹ ಸಂಭವನೀಯ ಇರುವನ್ನು ಗಣಿತೀಯ ಸೂತ್ರದಿಂದ ನಿರೂಪಿಸಿದರು. ಕ್ವಾಂಟಂ ಬಲವಿಜ್ಞಾನಕ್ಕೆ ಸಂಭವನೀಯತೆ ತರುವುದರ ಮೂಲಕ, ಭೌತಶಾಸ್ತ್ರವನ್ನು ನಿರ್ಧಾರಕ ಸ್ಥಿತಿಯಿಂದ ಅನಿರ್ಧಾರಕ ಸ್ಥಿತಿಗೆ, ಒಯ್ಯುವುದೆಂದು ಅಂತಹ ಸಿದ್ದಾಂತ ಅನಪೇಕ್ಷಿತವೆಂದು ಐನ್‍ಸ್ಟೀನ್ ವಿರೋಧಿಸಿದರು. ಈ ವಿಚಾರವಾಗಿ ಬಾರ್ನ್ ಹಾಗೂ ಐನ್‍ಸ್ಟೀನ್ ಬಹು ವರ್ಷಗಳ ಕಾಲ ಸಂವಾದ ನಡೆಸಿದ್ದರು. ೧೯೭೦ರಲ್ಲಿ ನಿಧನನಾದ ಬಾರ್ನ್‍ನನ್ನು ಗಟ್ಟಿಂಜೆನ್‍ನಲ್ಲಿ ಸಮಾಧಿ ಮಾಡಲಾಗಿದೆಯಲ್ಲದೆ, ಅದರ ಶಾಖೆಯ ಮೇಲೆ ಅವರು ಪ್ರಾರಂಭಿಸಿದ ಮಾತೃಕೆ ಬಲವಿಜ್ಞಾನದ ಮೂಲ ಸೂತ್ರ ಸೂತ್ರವನ್ನು ಬರೆಯಲಾಗಿದೆ.[]

ಗಾಟ್ಟಿಂಗನ್‍ನಲ್ಲಿ ಇರುವ ಬಾರ್ನ್‍ರ ಗೋರಿಯ ಮೇಲೆ ಅವರು ಬರೆದ ಸೂತ್ರವನ್ನು ಕೆತ್ತಲಾಗಿದೆ.

ಪ್ರಶಸ್ತಿಗಳು ಮತ್ತು ಗೌರವಗಳು

[ಬದಲಾಯಿಸಿ]
  • ೧೯೩೪ - ಸ್ಟೋಕ್ಸ್ ಪದಕ, ಕೇಂಬ್ರಿಡ್ಜ್[]
  • ೧೯೩೯ - ಫೆಲೋ ಆಫ್ ರಾಯಲ್ ಸೊಸೈಟಿ
  • ೧೯೪೫ - ಮ್ಯಾಕ್‍ಡೋಲಾಗ್-ಬ್ರಿಸ್ಬೇನ್ ಪದಕ, ರಾಯಲ್ ಸೊಸೈಟಿ ಎಡಿನ್ಬರ್ಗ್
  • ೧೯೪೫ - ಕೊಂದ-ವಿಕ್ಟೋರಿಯಾ ಜುಬಿಲಿ ಪ್ರಶಸ್ತಿ, ರಾಯಲ್ ಸೊಸೈಟಿ ಎಡಿನ್ಬರ್ಗ್
  • ೧೯೪೮ - ಮ್ಯಾಕ್ಸ್ ಪ್ಲಾಂಕ್ ಪದಕ
  • ೧೯೫೦ - ಹ್ಯೂಸ್ ಪದಕ, ರಾಯಲ್ ಸೊಸೈಟಿ ಆಫ್ ಲಂಡನ್
  • ೧೯೫೩ - ಗಾಟ್ಟಿಂಗನ್ ಪಟ್ಟಣದ ಗೌರವಾನ್ವಿತ ನಾಗರಿಕ
  • ೧೯೫೪ - ಭೌತಶಾಸ್ತ್ರದಲ್ಲಿ ನೋಬೆಲ್ ಪ್ರಶಸ್ತಿ
  • ೧೯೫೬ - ಹ್ಯೂಗೋ ಗೊರ್‍ಟಿಸ್ ಪದಕ ಇಂಟರ್ನ್ಯಾಷನಲ್ ಲಾ, ಮ್ಯೂನಿಕ್

ಉಲ್ಲೇಖನಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "The Nobel Prize in Physics 1954". {{cite web}}: Cite has empty unknown parameter: |1= (help)
  2. Born, G. V. R. (2002). "The wide-ranging family history of Max Born". Notes and Records of the Royal Society. 56 (2): 219–262. doi:10.1098/rsnr.2002.0180. {{cite journal}}: Cite has empty unknown parameter: |1= (help)
  3. "The Statistical Interpretation of Quantum Mechanics — Nobel Lecture" (PDF). Archived from the original (PDF) on 2012-10-19. Retrieved 2017-06-25. {{cite web}}: Cite has empty unknown parameter: |3= (help)
  4. Born Biographic Data