ವಿಷಯಕ್ಕೆ ಹೋಗು

ಶಕುಂತಲೋಪಾಖ್ಯಾನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಂಸ್ಕೃತ ಮಹಾಭಾರತದಲ್ಲಿರುವ ಉಪಕತೆಗಳಲ್ಲಿ ಶಕುಂತಲೋಪಾಖ್ಯಾನವೂ ಒಂದು. ಮಹಾಭಾರತದ ಆದಿಪರ್ವದ ಮೊದಲಲ್ಲಿ ಬರುವ ಶಕುಂತಳೋಪಾಖ್ಯಾನವು ಸುಕ್ತಂಕರ್ ಪರಿಷ್ಕರಣದಲ್ಲಿ ಎಂಟು ಅಧ್ಯಾಯಗಳ ಮುನ್ನೂರೈದು ಶ್ಲೋಕಗಳಲ್ಲಿ ನಿರೂಪಿತವಾಗಿದೆ. ಕತೆ ಹೀಗಿದೆ:

ಚಂದ್ರವಂಶದ ದೊರೆ ಮತ್ತು ಪುರುವಿನ ವಂಶಜನಾದ ದುಷ್ಯಂತ ಮಹಾರಾಜನು ಒಮ್ಮೆ ಕಾಡಿನಲ್ಲಿ ತನ್ನ ಸೇನಾಸಹಿತ ಬೇಟೆಯಾಡುತ್ತಾ, ಜಿಂಕೆಯೊಂದರ ಬೆನ್ನು ಹತ್ತಿ, ಮಾಲಿನೀ ತೀರದಲ್ಲಿದ್ದ ಕಣ್ವ ಋಷಿಯ ಆಶ್ರಮದ ಪರಿಸರಕ್ಕೆ ಬಂದು ಸೇರುತ್ತಾನೆ. ಮುನಿಗಳ ದರ್ಶನವನ್ನು ಪಡೆಯುವ ಉದ್ದೇಶದಿಂದ ತನ್ನ ಸೈನ್ಯವನ್ನು ಆಶ್ರಮದಿಂದ ದೂರದಲ್ಲಿ ನಿಲ್ಲಿಸಿ, ತನ್ನ ರಾಜಚಿಹ್ನೆಗಳನ್ನು ತೆಗೆದಿರಿಸಿ, ಆಶ್ರಮಕ್ಕೆ ಹೋಗುತ್ತಾನೆ. ಕಣ್ವರು ಆಶ್ರಮದಲ್ಲಿರದೆ, ಹೊರಹೋಗಿದ್ದರು. ದುಷ್ಯಂತನು, "ಯಾರಲ್ಲಿ?" ಎಂದು ಕೂಗಲು ಅಲೌಕಿಕ ಸುಂದರಿಯೊಬ್ಬಳು ಒಳಗಿನಿಂದ ಬಂದು, ರಾಜನಿಗೆ ಸ್ವಾಗತವನ್ನು ಕೋರಿ, ಅರ್ಘ್ಯಪಾದ್ಯಾದಿಗಳಿಂದ ಉಪಚರಿಸುತ್ತಾಳೆ. ಮೊದಲ ನೋಟಕ್ಕೇ ಅವಳಲ್ಲಿ ಮೋಹಗೊಂಡ ದುಷ್ಯಂತನು, "ಕ್ಷತ್ರಿಯ ತರುಣಿಯಲ್ಲಿ ಹೊರತು ನನ್ನ ಮನಸ್ಸು ಬೇರೆ ಯಾರಲ್ಲೂ ಪ್ರವರ್ತಿಸಲಾರದು. ಈ ಋಷ್ಯಾಶ್ರಮದಲ್ಲಿರುವ ನೀನು ಯಾರು?" ಎಂದು ಪ್ರಶ್ನಿಸುತ್ತಾನೆ. ತಾನು ವಿಶ್ವಾಮಿತ್ರ-ಮೇನಕೆಯರ ಮಗಳೆಂದೂ, ತಾಯ್ತಂದೆಯರು ಬಿಟ್ಟ ತಾನಿಲ್ಲಿ ಕಣ್ವರ ಸಾಕುಮಗಳಾಗಿರುವೆನೆಂದೂ, ತನ್ನ ಹೆಸರು ಶಕುಂತಲೆಯೆಂದೂ ತಿಳಿಸುತ್ತಾಳೆ.

ವಿಶ್ವಾಮಿತ್ರ ಋಷಿಯ ತಪಸ್ಸನ್ನು ಹಾಳುಗೆಡವಲು ಇಂದ್ರನು ಸ್ವರ್ಗದಲ್ಲಿನ ಅಪ್ಸರೆಯರಲ್ಲಿ ಒಬ್ಬಳಾದ ಮೇನಕೆಯನ್ನು ಕಳುಹಿಸುತ್ತಾನೆ. ವಿಶ್ವಾಮಿತ್ರ-ಮೇನಕೆಯರ ಮಿಲನದಿಂದ ಹೆಣ್ಣುಮಗುವೊಬ್ಬಳು ಹುಟ್ಟುವಳು. ವಿಶ್ವಾಮಿತ್ರನು ಮೇನಕೆಯನ್ನೂ ಮಗುವನ್ನೂ ಬಿಟ್ಟು ದೂರವಾಗುತ್ತಾನೆ. ಸ್ವರ್ಗದ ಅಪ್ಸರೆಯರು ಭೂಮಿಗೆ ಬಂದು ನೆಲೆನಿಲ್ಲಲು ಸಾಧ್ಯವಾಗದ ಕಾರಣ, ಮೇನಕೆಯೂ ಮಗುವನ್ನು ಕಾಡಿನಲ್ಲಿ ಬಿಟ್ಟು ತನ್ನ ಲೋಕಕ್ಕೆ ಮರಳುತ್ತಾಳೆ. ಕಾಡಿನಲ್ಲಿ ನೀಲಕಂಠವೆಂದೂ ಹೆಸರುಳ್ಳ ಶಕುಂತ ಪಕ್ಷಿಗಳು ಮಗುವನ್ನು ಸಾಕುತ್ತಿರುವಾಗ, ಕಣ್ವ ಋಷಿಯು ಇದನ್ನು ಕಂಡು ಮಗುವನ್ನು ತನ್ನ ಆಶ್ರಮಕ್ಕೆ ಕೊಂಡೊಯ್ಯುತ್ತಾರೆ. ಅವಳಿಗೆ ಶಕುಂತಲಾ ಎಂದು ಹೆಸರಿಟ್ಟು ತನ್ನ ಮಗಳಂತೆ ಸಾಕುತ್ತಾರೆ.

ದುಷ್ಯಂತನು ಶಕುಂತಲೆಗೆ ಧನಕನಕಗಳ ಆಸೆಯನ್ನು ತೋರಿಸಿ, ಗಾಂಧರ್ವ ವಿವಾಹಕ್ಕೆ ಅವಳನ್ನು ಒಪ್ಪಿಸಿ, ಇದಕ್ಕೆ ಕಣ್ವರ ಆಕ್ಷೇಪಣೆ ಇರಲಾರದೆಂದು ಸೂಚಿಸುತ್ತಾನೆ. ತಮಗೆ ಹುಟ್ಟುವ ಮಗನು ಮುಂದೆ ರಾಜನಾಗಬೇಕೆಂಬ ಶರತ್ತಿನ ಮೇಲೆ ಶಕುಂತಲೆ ದುಷ್ಯಂತನ ಕೈಹಿಡಿಯುತ್ತಾಳೆ. ಅವಳೊಂದಿಗೆ ಕೆಲವು ದಿನಗಳನ್ನು ಕಳೆದ ದುಷ್ಯಂತನು ಬೇಗನೇ ಅವಳನ್ನು ತನ್ನ ಅರಮನೆಗೆ ಕರೆಯಿಸಿಕೊಳ್ಳುವುದಾಗಿ ಮಾತುಕೊಟ್ಟು, ರಾಜಧಾನಿಗೆ ಹಿಂತಿರುಗುತ್ತಾನೆ.ಆಶ್ರಮಕ್ಕೆ ಹಿಂದಿರುಗಿದ ಕಣ್ವರು ದಿವ್ಯದೃಷ್ಟಿಯಿಂದ ನಡೆದದನ್ನೆಲ್ಲಾ ತಿಳಿದು, ಶಕುಂತಲೆ ಮಾಡಿದ್ದನ್ನು ಒಪ್ಪುತ್ತಾರಲ್ಲದೆ ಅವಳಲ್ಲಿ ಚಕ್ರವರ್ತಿಯಾಗುವ ಮಗನು ಹುಟ್ಟಲಿ, ಎಂದು ಆಶೀರ್ವದಿಸುತ್ತಾರೆ. ದುಷ್ಯಂತನ ತಪ್ಪನ್ನು ಗುರುತಿಸಿದರೂ ಅವನನ್ನು ಮನ್ನಿಸುತ್ತಾರೆ.

ಆದರೆ ತಿಂಗಳುಗಳು ಕಳೆದರೂ ದುಷ್ಯಂತನು ಅವಳನ್ನು ಕರೆಯಿಸಿಕೊಳ್ಳುವುದೇ ಇಲ್ಲ.ಕಾಲಾನಂತರದಲ್ಲಿ ಶಕುಂತಲೆಯು ಗಂಡುಮಗುವೊಂದರ ತಾಯಿಯಾಗುತ್ತಾಳೆ. ಮಗುವಿಗೆ ಭರತನೆಂದು ಹೆಸರಿಡಲಾಗುತ್ತದೆ. ಅಲ್ಲಿಯವರೆಗೂ ದುಷ್ಯಂತನು ಮರಳಿ ಬರುತ್ತಾನೆಂದು ನಂಬಿ, ಶಕುಂತಲೆ ಮತ್ತು ಆಶ್ರಮವಾಸಿಗಳೊಡನೆ ತಾನೂ ಕಾಯುತ್ತಿದ್ದ ಕಣ್ವ ಋಷಿಯು, ಇನ್ನು ಶಕುಂತಲೆಯು ಅವಳ ಮಗುವಿನೊಂದಿಗೆ ತನ್ನ ಆಶ್ರಮದಲ್ಲಿರುವುದು ಉಚಿತವಲ್ಲ; ಮಗುವಿಗೂ ತಂದೆಯ ಆವಶ್ಯವಿದೆಯೆಂದು ಯೋಚಿಸಿ, ತಾಯಿ-ಮಗುವನ್ನು ದುಷ್ಯಂತನ ಅರಮನೆಗೆ ಕಳುಹಿಸಿಕೊಡುತ್ತಾನೆ.

ಆದರೆ ಅರಮನೆಯಲ್ಲಿ ದುಷ್ಯಂತನು ಲೋಕಾಪವಾದಕ್ಕೆ ಹೆದರಿ, ಶಕುಂತಲೆಯನ್ನು ಮದುವೆಯಾಗಿರುವದಿರಲಿ, ತಾನು ಅವಳನ್ನು ನೋಡಿಯೇ ಇಲ್ಲವೆಂದು ಹೇಳಿ, ಅವಳನ್ನೂ ಮಗುವನ್ನೂ ತಿರಸ್ಕರಿಸಿಬಿಡುತ್ತಾನೆ. ಆ ಸಮಯದಲ್ಲೇ, ಶಕುಂತಲೆಯು ಅವನ ಪತ್ನಿಯೆಂದೂ, ಭರತನು ಮಗನೆಂದೂ ಆಕಾಶವಾಣಿಯಾಗುತ್ತದೆ. ಇದರಿಂದಾಗಿ ದುಷ್ಯಂತನು ಅವರಿಬ್ಬರನ್ನೂ ಪತ್ನೀ-ಪುತ್ರರನ್ನಾಗಿ ಸ್ವೀಕರಿಸುತ್ತಾನೆ. ಶಕುಂತಲೆಯು ದುಷ್ಯಂತನ ಪಟ್ಟದ ಅರಸಿಯಾಗುತ್ತಾಳೆ.ಭರತನು ತನ್ನ ತಾಯ್ತಂದೆಯರು ವಾನಪ್ರಸ್ಥಕ್ಕೆ ತೆರಳಿದ ನಂತರ ಚಕ್ರವರ್ತಿಯಾಗಿ ಧರ್ಮದಿಂದ ರಾಜ್ಯವನ್ನಾಳಿದ್ದರಿಂದಲೂ, ತನ್ನ ಪೂರ್ವಜರಿಗಿಂತ ಹಿರಿದಾಗಿ ಬಾಳಿದುದರಿಂದಲೂ, ಈ ಭೂಖಂಡಕ್ಕೆ ಭರತವರ್ಷವೆಂದು ಹೆಸರಾಯಿತು. "... ತತ್ಪೂರ್ವ ನೃಪರಿಂ ಹಿರಿದು ಸಂದನು ಬಳಿಕ ಭಾರತ ವರ್ಷವಾಯ್ತಲ್ಲಿ", ಎಂದು ಕುಮಾರವ್ಯಾಸನು ಉಲ್ಲೇಖಿಸಿರುವನು.