ಯೊಶಿನೋರಿ ಓಶುಮಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಯೊಶಿನೋರಿ ಓಶುಮಿ
ಯೊಶಿನೋರಿ ಓಶುಮಿ
ಜನನ (1945-02-09) ಫೆಬ್ರವರಿ ೯, ೧೯೪೫ (ವಯಸ್ಸು ೭೯)
ಫೊಕೋಕಾ, ಜಪಾನ್
ರಾಷ್ಟ್ರೀಯತೆಜಪಾನಿ
ಕಾರ್ಯಕ್ಷೇತ್ರಜೀವಕೋಶ ವಿಜ್ಞಾನಿ
ಅಭ್ಯಸಿಸಿದ ವಿದ್ಯಾಪೀಠಟೋಕಿಯೋ ವಿಶ್ವವಿದ್ಯಾಲಯ
ಪ್ರಸಿದ್ಧಿಗೆ ಕಾರಣಸ್ವಯಂಭಕ್ಷಣ ಪ್ರಕ್ರಿಯೆ
ಗಮನಾರ್ಹ ಪ್ರಶಸ್ತಿಗಳುಶರೀರಶಾಸ್ತ್ರ ಅಥವ ವೈದ್ಯಶಾಸ್ತ್ರದಲ್ಲಿ ನೋಬೆಲ್

ಯೊಶಿನೋರಿ ಓಶುಮಿ (ಜಪಾನಿ - 大 隅 良 典, ಫೆಬ್ರವರಿ ೯, ೧೯೪೫ ರಂದು ಜನನ) ಸ್ವಯಂಭಕ್ಷಣ ಕಾರ್ಯವಿಧಾನದಲ್ಲಿ(ಆಟೋಫ್ಯಾಗಿ) ಪರಿಣಿತರಾದ ಜಪಾನಿನ ಜೀವಕೋಶ ವಿಜ್ಞಾನಿ. ಓಶುಮಿಯವರು ಟೋಕಿಯೋ ತಂತ್ರಜ್ಞಾನ ಸಂಸ್ಥೆಯ ನವೀನ ಸಂಶೋಧನೆಯ ಪೀಠದಲ್ಲಿ ಪ್ರಾಧ್ಯಾಪಕರಾಗಿದ್ದಾರೆ.[೧] ಇವರಿಗೆ ೨೦೧೨ರಲ್ಲಿ ಮೂಲ ವಿಜ್ಞಾನ ವಿಭಾಗದಲ್ಲಿ ಕ್ಯೋಟೋ ಪ್ರಶಸ್ತಿ ಲಭಿಸಿತು[೨] ಮತ್ತು ಸ್ವಯಂಭಕ್ಷಣ ಕಾರ್ಯವಿಧಾನಗಳ ಸಂಶೋಧನೆಗಾಗಿ ೨೦೧೬ ಸಾಲಿನ ಶರೀರಶಾಸ್ತ್ರದಲ್ಲಿನ ನೊಬೆಲ್ ಪ್ರಶಸ್ತಿ ಲಭಿಸಿತು.[೩]

ಜೀವನ ಮತ್ತು ವೃತ್ತಿ[ಬದಲಾಯಿಸಿ]

ಓಶುಮಿಯವರು ಜಪಾನಿನ ಫೊಕೋಕಾದಲ್ಲಿ ಫೆಬ್ರವರಿ ೯, ೧೯೪೫ ರಂದು ಜನಿಸಿದರು. ಅವರು ಟೋಕಿಯೋ ವಿಶ್ವವಿದ್ಯಾಲಯದಿಂದ ೧೯೬೭ರಲ್ಲಿ ಬ್ಯಾಚ್ಯುಲರ್ ಆಫ್ ಸೈನ್ಸ್ ಹಾಗೂ ೧೯೭೪ರಲ್ಲಿ ಡಾಕ್ಟರ್ ಆಫ್ ಸೈನ್ಸ್ ಪದವಿಗಳನ್ನು ಪಡೆದರು. ೧೯೭೪ರಿಂದ -೧೯೭೭ರವರೆಗೆ ಅವರು ನ್ಯೂಯಾರ್ಕ್ ನಗರದಲ್ಲಿ ರಾಕಫೆಲ್ಲರ್ ವಿಶ್ವವಿದ್ಯಾಲಯದಲ್ಲಿ ಪೋಸ್ಟ್-ಡಾಕ್ಟೊರಲ್ ಸದಸ್ಯರಾಗಿದ್ದರು.[೧]

೧೯೭೭ರಲ್ಲಿಅವರು ಸಹಾಯಕ ಸಂಶೋಧಕರಾಗಿ ಟೋಕಿಯೋ ವಿಶ್ವವಿದ್ಯಾಲಯಕ್ಕೆ ಮರಳಿದರು. ಅಲ್ಲಿ ೧೯೮೬ರಲ್ಲಿ ಉಪನ್ಯಾಸಕರಾಗಿ ನೇಮಕಗೊಂಡರು ಮತ್ತು ೧೯೮೮ರಲ್ಲಿ ಸಹ ಪ್ರಾಧ್ಯಾಪಕರಾಗಿ ಬಡ್ತಿಯಾಯಿತು. ೧೯೯೬ರಲ್ಲಿ ಅವರು ಓಕಾಝಾಕಿ ನಗರದಲ್ಲಿನ, ರಾಷ್ಟ್ರೀಯ ಮೂಲಭೂತ ಜೀವಶಾಸ್ತ್ರ ಸಂಸ್ಥೆಗೆ ತೆರಳಿದರು. ಅಲ್ಲಿ ಅವರನ್ನು ಪ್ರಾಧ್ಯಾಪಕರಾಗಿ ನೇಮಿಸಲಾಯಿತು. ೨೦೦೪ರಿಂದ ೨೦೦೯ರವರೆಗೆ ಅವರು ಹಯಾಮದಲ್ಲಿನ ಉನ್ನತ ಅಧ್ಯಯನಗಳ ಪದವೀಧರ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದರು. ೨೦೦೯ರಲ್ಲಿ ಅವರು ಒಮ್ಮೆಲೆ ರಾಷ್ಟ್ರೀಯ ಮೂಲಭೂತ ಜೀವಶಾಸ್ತ್ರ ಸಂಸ್ಥೆ ಮತ್ತು ಉನ್ನತ ಅಧ್ಯಯನಗಳ ಪದವೀಧರ ವಿಶ್ವವಿದ್ಯಾಲಯದಲ್ಲಿ ಗೌರವ ಪ್ರಾಧ್ಯಾಪಕ, ಮತ್ತು ಟೋಕಿಯೋ ತಂತ್ರಜ್ಞಾನ ಸಂಸ್ಥೆಯ ಸಮಗ್ರ ಸಂಶೋಧನಾ ಪೀಠದಲ್ಲಿ ಪ್ರಾಧ್ಯಪಕ ಈ ಮೂರು ಹುದ್ದೆಗಳಿಗೆ ನೇಮಕಗೊಂಡರು. ೨೦೧೪ರಲ್ಲಿ ತಮ್ಮ ನಿವೃತ್ತಿಯ ನಂತರ ಅವರು ಟೋಕಿಯೋ ತಂತ್ರಜ್ಞಾನ ಸಂಸ್ಥೆಯ ನವೀನ ಸಂಶೋಧನೆಯ ಪೀಠದದಲ್ಲಿ ಪ್ರಾಧ್ಯಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸ್ತುತ, ಅವರು ನವೀನ ಸಂಶೋಧನೆಯ ಪೀಠದಲ್ಲಿನ ಜೀವಕೋಶ ವಿಜ್ಞಾನ ಸಂಶೋಧನಾ ಘಟಕದ ಮುಖ್ಯಸ್ಥರಾಗಿರುತ್ತಾರೆ.[೪]

೨೦೧೬ರಲ್ಲಿ ಅವರಿಗೆ "ಸ್ವಯಂಭಕ್ಷಣ ಕಾರ್ಯವಿಧಾನಗಳ ಸಂಶೋಧನೆಗಾಗಿ" ಶರೀರಶಾಸ್ತ್ರ ಮತ್ತು ವೈದ್ಯಕೀಯದ ನೊಬೆಲ್ ಪ್ರಶಸ್ತಿ ನೀಡಲಾಯಿತು[೫][೬]. ಅವರು ನೊಬೆಲ್ ಪ್ರಶಸ್ತಿ ಪುರಸ್ಕೃತರಾದ ಜಪಾನಿನ ೨೫ನೆ ವ್ಯಕ್ತಿ.[೭] ಟೈಕ್ಯೊ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿರುವ ಓಶುಮಿಯವರ ಮಡದಿ ಮಾರಿಕೊ, ಅವರ ಸಂಶೋಧನೆಯಲ್ಲಿ ಸಹಯೋಗಿಯಾಗಿದ್ದಾರೆ. ಮಾರಿಕೊರವರು ಓಶುಮಿಯವರ ಅನೇಕ ಶೈಕ್ಷಣಿಕ ಪತ್ರಿಕೆಗಳ ಸಹ ಲೇಖಕಿಯಾಗಿದ್ದಾರೆ.[೮]

ಸ್ವಯಂಭಕ್ಷಣ ಪ್ರಕ್ರಿಯೆ ಸಂಶೋಧನೆ[ಬದಲಾಯಿಸಿ]

ಓಶುಮಿಯವರು ತಮ್ಮ ವೃತ್ತಿ ಆರಂಭಿಸಿವ ಮೊದಲೇ ಸ್ವಯಂಭಕ್ಷಣ ಪ್ರಕ್ರಿಯೆ ಕುರಿತು ವಿಜ್ಞಾನಿಗಳಿಗೆ ತಿಳಿದಿತ್ತು. ಸ್ವಯಂಭಕ್ಷಣ ಪ್ರಕ್ರಿಯೆ ಅಥವ ಆಟೋಫ್ಯಾಗಿ ನೈಸರ್ಗಿಕವಾಗಿ ಉಂಟಾಗುವ ಕ್ರಿಯೆ. ಒಂದು ಜೀವಕೋಶದ ಅನಗತ್ಯ ಅಥವಾ ನಿಷ್ಕ್ರಿಯ ಅಂಶಗಳನ್ನು ನಿಯಂತ್ರಿತ ಕ್ರಮದಲ್ಲಿ ಕೆಡವುವ ವಿನಾಶಕಾರಿ ವ್ಯವಸ್ಥೆ ಈ ಕ್ರಿಯೆ. ಸ್ವಯಂಭಕ್ಷಣೆ ಜೀವಕೋಶದ ಘಟಕಗಳ ಕ್ರಮಬದ್ಧವಾದ ಅವನತಿ ಮತ್ತು ಮರುಬಳಕೆಗೆ ಅವಕಾಶ ಮಾಡಿಕೊಡುತ್ತದೆ. ಸ್ವಯಂಭಕ್ಷಣ ಪ್ರಕ್ರಿಯೆಗೆ 'ಆಟೋಫ್ಯಾಗಿ' ಎಂಬ ಪದವನ್ನು ೧೯೬೩ರಲ್ಲಿ ಬೆಲ್ಜಿಯಂನ ಜೀವರಸಾಯನಶಾಸ್ತ್ರ‍ಜ್ಞ ಕ್ರಿಶ್ಚಿಯನ್ ಡೆ ಡುವೆ ಅವರಿಂದ ಸೃಷ್ಟಿಸಲಾಯಿತು.[೯]

ಓಶುಮಿಯವರು ಪೋಸ್ಟ್-ಡಾಕ್ಟೊರಲ್ ಸದಸ್ಯರಾಗಿದ್ದಾಗ ಯೀಸ್ಟ್‌ನ ವಂಶವಾಹಿನಿಗಳ ಪುನರಾವರ್ತನೆ ಕುರಿತು ಅಧ್ಯಯನ ಮಾಡತೊಡಗಿದರು. ೧೯೮೮ರಲ್ಲಿ ಅವರು ಸ್ವಯಂಭಕ್ಷಣದಲ್ಲಿ ಸಂಶೋಧನೆ ಶುರುಮಾಡಿದಾಗ, ಈ ವಿಷಯ ಬಹಳ ನಿರ್ಲಕ್ಷ್ಯೆಗೆ ಒಳಗಾಗಿತ್ತು. ೯೦ರ ದಶಕದಲ್ಲಿ ಹಲವು ವಿಜ್ಞಾನಿಗಳು ಸ್ವತಂತ್ರ್ಯವಾಗಿ ಯೀಸ್ಟ್‌ನಲ್ಲಿ ಸ್ವಯಂಭಕ್ಷಣ ಸಾಮರ್ಥ್ಯಕ್ಕೆ ಜೀವಕೋಶಗಳಿಗೆ ಅವಶ್ಯಕವಾಗಿರುವ ವಂಶವಾಹಿಗಳನ್ನು ಗುರುತಿಸಿದರು. ಇದರಿಂದ ಸ್ವಯಂಭಕ್ಷಣ ಸಂಶೋಧನೆಯಲ್ಲಿ ಹೊಸ ಅಧ್ಯಾಯ ಶುರುವಾದಂತಾಯಿತು. ಇದರಲ್ಲಿ ಯೊಶಿನೋರಿ ಓಶುಮಿಯವರ ಕೊಡುಗೆ ಗಮನಾರ್ಹ. ಅವರು ಹಸಿವು ಪ್ರೇರಿತ ತಾರತಮ್ಯೆ ತೋರದ ಸ್ವಯಂಭಕ್ಷಣ ಪರೀಕ್ಷಿಸಿದರು. ಓಶುಮಿಯವರ ತಂಡ ಯೀಸ್ಟ್‌ನಲ್ಲಿನ ಸ್ವಯಂಭಕ್ಷಣ ಸ್ವರೂಪವನ್ನು ವಿವರಿಸಿತು, ಮತ್ತು ಯೀಸ್ಟ್ ಜೀವಕೋಶಗಳ ಮೇಲೆ ಮ್ಯುಟೇಶನಲ್ ಸ್ಕ್ರೀನಿಂಗ್ ಪರೀಕ್ಷೆಯನ್ನು ಮಾಡಿ ಸ್ವಯಂಭಕ್ಷಣೆಗೆ ಅವಶ್ಯಕವಾಗಿರುವ ವಂಶವಾಹಿಗಳನ್ನು ಗುರುತಿಸಿದರು.[೧೦]

ನೋಬೆಲ್ ಪ್ರಶಸ್ತಿ[ಬದಲಾಯಿಸಿ]

ನೋಬೆಲ್ ಸಭೆ ಸ್ವಯಂಭಕ್ಷಣ ಕಾರ್ಯವಿಧಾನಗಳ ಸಂಶೋಧನೆಗೆ ಓಶುಮಿಯವರ ಕೊಡುಗೆಯನ್ನು ಗುರುತಿಸಿ, ೨೦೧೬ರ ಸಾಲಿನ ಶರೀರಶಾಸ್ತ್ರದಲ್ಲಿನ ನೋಬೆಲ್ ಪ್ರಶಸ್ತಿಯಿಂದ ಅವರನ್ನು ಗೌರವಿಸಿತು. ಸಭೆಯು, ಓಶುಮಿಯವರ ಸಂಶೋಧನೆ ಜೀವಕೋಶಗಳು ಅವುಗಳ ಒಳಾಂಶಗಳನ್ನು ಹೇಗೆ ಮರುಬಳಕೆ ಮಾಡಿಕೊಳ್ಳುತ್ತವೆ ಎಂದು ತಿಳಿಯುವಲ್ಲಿ ಹೊಸ ದೃಷ್ಟಿಕೋನಕ್ಕೆ ಕಾರಣವಾಯಿತು ಎಂದು ಸೂಚಿಸಿದೆ.

ಸ್ವಯಂಭಕ್ಷಣ ಸಂಶೋಧನೆಗೆ ಓಶುಮಿಯವರು ನೀಡಿದ ಕೊಡುಗೆಯನ್ನು ಬಹಳಷ್ಟು ಗುರುತಿಸಲ್ಪಟ್ಟಿದೆ, ಆದರೂ ನೋಬೆಲ್ ಪ್ರಶಸ್ತಿಯಲ್ಲಿ ಇನ್ನೂ ಹಲವು ವಿಜ್ಞಾನಿಗಳು ಒಳಗೊಂಡಿರಬಹುದಿತ್ತೆಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ.[೧೧]

ಪ್ರಶಸ್ತಿಗಳ ಪಟ್ಟಿ[ಬದಲಾಯಿಸಿ]

ಅಕ್ಟೋಬರ್ ೨೦೧೫ರಲ್ಲಿ ಗೇರ್ಡ್ನರ್ ಫೌಂಡೇಶನ್ ಅಂತಾರಾಷ್ಟ್ರೀಯ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಓಶುಮಿ

ಮೂಲ

  • ಫುಜೀಹಾರ ಪ್ರಶಸ್ತಿ, ಫುಜೀಹಾರ ವಿಜ್ಞಾನ ಫೌಂಡೇಶನ್ (೨೦೦೫)
  • ಜಪಾನ್ ಅಕಾಡೆಮಿ ಪ್ರಶಸ್ತಿ, ಜಪಾನ್ ಅಕಾಡೆಮಿ (೨೦೦೬)
  • ವಿಜ್ಞಾನ ಪ್ರಶಸ್ತಿ, ಜಪಾನ್ ಸಸ್ಯವಿಜ್ಞಾನ ಸಮಾಜ (೨೦೦೭)
  • ಅಸಾಹಿ ಪ್ರಶಸ್ತಿ, ಅಸಾಹಿ ಷಿಮ್ಬುನ್ (೨೦೦೮)
  • ಮೂಲಭೂತ ವಿಜ್ಞಾನದಲ್ಲಿ ಕ್ಯೋಟೋ ಪ್ರಶಸ್ತಿ (೨೦೧೨)[೧೨]
  • ಥಾಮ್ಸನ್ ರಾಯಿಟರ್ಸ್ ಉಲ್ಲೇಖ ಪ್ರಶಸ್ತಿ ವಿಜೇತ (೨೦೧೩)
  • ಗೇರ್ಡ್ನರ್ ಅಂತಾರಾಷ್ಟ್ರೀಯ ಫೌಂಡೇಶನ್ ಪ್ರಶಸ್ತಿ (೨೦೧೫)
  • ಜೀವಶಾಸ್ತ್ರದ ಅಂತರಾಷ್ಟ್ರೀಯ ಪ್ರಶಸ್ತಿ (೨೦೧೫)
  • ಕೀಯೋ ವೈದ್ಯಕೀಯ ವಿಜ್ಞಾನ ಪ್ರಶಸ್ತಿ (೨೦೧೫)
  • ಸಾಂಸ್ಕೃತಿಕ ಅರ್ಹತೆಯ ವ್ಯಕ್ತಿ ಪ್ರಶಸ್ತಿ (೨೦೧೫)
  • ರೋಸೆನ್‍ಟೀಲ್ ಪ್ರಶಸ್ತಿ (೨೦೧೫)
  • ಜೀವವೈದ್ಯಕೀಯ ವಿಜ್ಞಾನಗಳ ವಿಲೇ ಪ್ರಶಸ್ತಿ (೨೦೧೬)
  • ಜೈವಿಕ ವೈದ್ಯಕೀಯ ಸಂಶೋಧನೆಗಾಗಿ ಡಾ ಪಾಲ್ ಜಾನ್ಸೆನ್ ಪ್ರಶಸ್ತಿ (೨೦೧೬)
  • ಶರೀರಶಾಸ್ತ್ರ ಅಥವಾ ವೈದ್ಯಶಾಸ್ತ್ರದಲ್ಲಿ ನೋಬೆಲ್ ಪ್ರಶಸ್ತಿ (೨೦೧೬)

ಶೈಕ್ಷಣಿಕ ಪ್ರಕಟಣೆಗಳು[ಬದಲಾಯಿಸಿ]

ಯೀಸ್ಟ್ ಜೀವಕೋಶಗಳಲ್ಲಿನ ಸ್ವಯಂಭಕ್ಷಣ ಕಾರ್ಯವಿಧಾನದ ಕುರಿತಾದ ಓಶುಮಿಯವರ ಮೂಲ ಸಂಶೋಧನೆಗಳು:[೧೩]

  • ಓಶುಮಿ, ಯೊಶಿನೋರಿ. "ಆಟೋಫ್ಯಾಗಿ ಇನ್ ಯೀಸ್ಟ್ ಡೆಮಾನ್ಸ್ಟ್ರೇಟೆಡ್ ವಿತ್ ಪ್ರೋಟೀನೇಸ್-ಡಿಫಿಶಿಯೆಂಟ್ ಮ್ಯೂಟೆಂಟ್ಸ್ ಆಂಡ್ ಕಂಡೀಶನ್ಸ್ ಫಾರ್ ಇಟ್ಸ್ ಇನ್ಡಕ್ಶನ್". ದಿ ಜರ್ನಲ್ ಅಫ್ ಸೆಲ್ ಬಯಾಲಜಿ. ೧೧೯ (೨): ೩೦೧-೩೧೧. JSTOR 1615399. PMC 2289660. PMID 1400575.

ಯೀಸ್ಟ್ ಕುರಿತು ಅವರ ಮುಂದಿನ ಸಂಶೋಧನೆ:

ಉಲ್ಲೇಖಗಳು[ಬದಲಾಯಿಸಿ]