ಉತ್ಪಾದಕರ ಸಹಕಾರ ಸಂಘ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉತ್ಪಾದಕರ ಸಹಕಾರ ಸಂಘ - ಉತ್ಪಾದನೆ ಮಾರಾಟಗಳಲ್ಲಿ ಪರಸ್ಪರ ಸಹಕರಿಸಿ, ವ್ಯಾಪಾರದಿಂದ ಬಂದ ಲಾಭವನ್ನು ಸದಸ್ಯರಾದ ತಂತಮ್ಮಲ್ಲೇ ಹಂಚಿಕೊಳ್ಳುವ ಉದ್ದೇಶದಿಂದ ಉತ್ಪಾದಕರು ಸೇರಿ ರಚಿಸಿ ಕೊಂಡ ಸಂಘ. ಬಂಡವಾಳವಾದೀ ಉತ್ಪಾದನ-ವಿತರಣ ವ್ಯವಸ್ಥೆಯಲ್ಲಿರುವ ಕೆಲವು ನ್ಯೂನತೆಗಳನ್ನು ನಿವಾರಿಸುವುದು ಇದರ ಮೂಲೋದ್ದೇಶ. ಬಂಡವಾಳವಾದೀ ವ್ಯವಸ್ಥೆಯಲ್ಲಿ ಶ್ರಮವೆಂಬುದು ಬಾಡಿಗೆಗೆ ದೊರಕುವ ಒಂದು ಪದಾರ್ಥ. ಅನೇಕ ವೇಳೆ ಇದಕ್ಕೆ ಕನಿಷ್ಠ ವೇತನವೂ ದೊರಕುವುದಿಲ್ಲ. ಸಾಮಾನ್ಯವಾಗಿ ಬೇಡಿಕೆ ಹಾಗೂ ಸರಬರಾಜುಗಳ ಅಧಾರದ ಮೇಲೆ ಇದರ ಬೆಲೆಯ ನಿರ್ಣಯವಾಗುತ್ತದೆ. ಸ್ವಾರ್ಥಮೂಲವಾದ ಈ ಬಗೆಯ ಮಾಲೀಕ-ಕಾರ್ಮಿಕ ಸಂಬಂಧವನ್ನು ನಿವಾರಿಸುವುದೇ ಉತ್ಪಾದಕರ ಸಹಕಾರ ಸಂಘದ ಅಂತಿಮೋದ್ದೇಶ. ಇದು ಉದ್ಯಮ ಚಾಲಕನನ್ನು (ಆಂಟ್ರಪ್ರನರ್) ನಿವಾರಿಸಿ, ಆತನಿಗೆ ಹೋಗಬಹುದಾಗಿದ್ದ ಲಾಭವನ್ನು ತಾನೇ ಅನುಭವಿಸುತ್ತದೆ. ಉತ್ಪಾದನೆಯ ಮೇಲೆ ಹತೋಟಿ ಹೊಂದಿರುವ ವರ್ಗವನ್ನೇ ಅಂತಿಮವಾಗಿ ತೊಡೆದು ಹಾಕುವುದು ಉತ್ಪಾದಕರ ಸಹಕಾರ ಚಳವಳಿಯ ಗುರಿ. ಕಾರ್ಮಿಕರೋ, ಅನುಭೋಗಿಗಳೋ ಅಥವಾ ಇಬ್ಬರೂ ಕೂಡಿಯೋ ನಿರ್ವಹಿಸಿ, ಲಾಭ ಹಂಚಿಕೊಳ್ಳುವ ಈ ವ್ಯವಸ್ಥೆಯಲ್ಲಿ ನಿಮಗೆ ನೀವೇ ಉತ್ಪಾದಕ ಎಂದು ರಾಬರ್ಟ್ ಓವೆನ್[೧] ಇದನ್ನು ಬಣ್ಣಿಸುತ್ತಾನೆ.

ರಾಬರ್ಟ್ ಓವೆನ್

ಉತ್ಪಾದಕರ ಸಹಕಾರ ಸಂಘವನ್ನು ಸಹಕಾರಿಗಳಲ್ಲೇ ಒಬ್ಬ ನಡೆಸುತ್ತಾನೆ. ಆತನ ಸೇವೆಗೆ ಪ್ರತಿಯಾಗಿ ಅವನಿಗೆ ಸಂಬಳ ದೊರಕುತ್ತದೆ. ಅದರೊಂದಿಗೆ ಆತ ಆ ಸಂಘದ ಬಂಡವಾಳಕ್ಕಾಗಿ ನೀಡಿರುವ ಹಣಕ್ಕೆ ಅನುಗುಣವಾಗಿ ಅವನು ಸಹಸದಸ್ಯರೊಂದಿಗೆ ಅದರ ಲಾಭವನ್ನೂ ಹಂಚಿಕೊಳ್ಳುತ್ತಾನೆ.

ಬಂಡವಾಳ ವ್ಯವಸ್ಥೆ ಹಸ್ತಕ್ಷೇಪರಹಿತ ನೀತಿಯ ಪ್ರಭಾವಕ್ಕೆ ಒಳಗಾಗಿದ್ದ ಕಾಲದಲ್ಲಿ, ಸರ್ಕಾರ ಅತ್ಯಂತ ಕನಿಷ್ಠ ಪ್ರಮಾಣದಲ್ಲಿ ಪ್ರಜೆಗಳ ಆರ್ಥಿಕ ವಿಚಾರಗಳಲ್ಲಿ ಕೈಹಾಕುತ್ತಿದ್ದಾಗ, ಎಂದರೆ ಬಂಡವಾಳ ವ್ಯವಸ್ಥೆಯ ಆರಂಭದೆಶೆಯಲ್ಲಿ, ಉತ್ಪಾದಕರ ಸಹಕಾರ ಚಳವಳಿಗೆ ಪ್ರೋತ್ಸಾಹ ದೊರಕಿತು. ೧೮೩೪ರಲ್ಲಿ ಬ್ರಿಟನ್ನಿನಲ್ಲಿ ರಾಬರ್ಟ್ ಓವೆನ್ ಮನೆಕಟ್ಟುವವರ ರಾಷ್ಟ್ರೀಯ ಸಂಘ ಸ್ಥಾಪಿಸಿದ. ಸಹಕಾರಿ ಕಾರ್ಯಶಾಲೆಗಳ ಸ್ವಾಮ್ಯ ಹೊಂದಿದ್ದ ಇಂಥ ಉತ್ಪಾದಕರ ಸಹಕಾರ ಸಂಘಗಳು ಐರೋಪ್ಯ ದೇಶಗಳಲ್ಲೂ ಸ್ಥಾಪಿತವಾದುವು. ೧೮೯೦ರ ವೇಳೆಗೆ ಇಟಲಿ, ಫ್ರಾನ್ಸುಗಳ ವಿನಾ ಇತರ ದೇಶಗಳಲ್ಲಿ ಈ ಚಳವಳಿಗೆ ಸೋಲಾಯಿತು.

ಉತ್ಪಾದಕರ ಸಹಕಾರ ವ್ಯವಸ್ಥೆ ಅವ್ಯವಹಾರ್ಯ ಆದರ್ಶ ಚಳವಳಿಯೆಂಬುದು ಸ್ಪಷ್ಟ. ಎಲ್ಲಿ ಅಗಾಧ ಬಂಡವಾಳದ ಅಗತ್ಯವಿದೆಯೋ, ಎಲ್ಲಿ ತಾಂತ್ರಿಕ ಬದಲಾವಣೆ ಶೀಘ್ರಗತಿಯಲ್ಲಿ ಸಂಭವಿಸುವುವೋ ಅಂಥ ಎಡೆಗಳಲ್ಲಿ ಸಹಕಾರತತ್ತ್ವ ಯಶಸ್ವಿಯಾಗಲಾರದು. ಈ ಚಳವಳಿ ಹೆಚ್ಚು ಬಂಡವಾಳ ಶೇಖರಿಸಲಾರದಾದ್ದರಿಂದ ಇದು ಸಂಶೋಧನೆಯ ಫಲಿತವಾದ ಅತ್ಯಂತ ನವೀನ ತಂತ್ರಜ್ಞಾನದ ಪ್ರಯೋಜನ ಪಡೆಯಲಾರದು. ಉತ್ಪಾದನೆಯಲ್ಲಿ ಯಾರ ಸಾಮಥ್ರ್ಯವೂ, ಮುನ್ನೋಟವೂ ಪ್ರಮುಖ ಅಂಶಗಳಾಗಿವೆಯೊ ಅಂಥ ವ್ಯವಸ್ಥಾಪಕರಿಗೆ ಹಾಗೂ ಸಂಘಟಕರಿಗೆ ಸೂಕ್ತ ಸಂಭಾವನೆ ನೀಡಲಾರದು. ಅಲ್ಲದೆ, ಗ್ರಾಹಕರ ಸಹಕಾರ, ಮಾರಾಟದ ಸಹಕಾರ ಮುಂತಾದ ಇತರ ಸಹಕಾರ ಚಳವಳಿಗಳಂತೆ ಇದಕ್ಕೂ ಸಹಕಾರದ ಆದರ್ಶಗಳ ಬಗ್ಗೆ ಉತ್ಸಾಹವುಳ್ಳ ಜನರ ಅಗತ್ಯವುಂಟು. ಸ್ವಸಹಾಯ, ಮಿತವ್ಯಯ, ಸಹೋದರ ಭಾವ-ಮುಂತಾಗಿ ಒಬ್ಬನನ್ನು ಆದರ್ಶ ವ್ಯಕ್ತಿಯನ್ನಾಗಿ ಮಾಡುವ ಮಾನವೀಯ ಗುಣಗಳು ಇವರಲ್ಲಿ ಇರಬೇಕು. ಉತ್ಪಾದಕರ ಸಹಕಾರವೇ ಆಗಲಿ, ಗ್ರಾಹಕರ ಸಹಕಾರವೇ ಆಗಲಿ, ಪ್ರತಿಯೊಂದು ಬಗೆಯ ಸಹಕಾರಕ್ಕೂ ಶಿಕ್ಷಣ ಅಗತ್ಯ, ಸ್ವಾರ್ಥತ್ಯಾಗದ ಮನೋಭಾವ ಇರಬೇಕು. ಆಧುನಿಕ ಸಂಗ್ರಹಣಶೀಲ ಸಮಾಜದಲ್ಲಿ ಈ ಮುಖ್ಯ ಗುಣಗಳೇ ಇಲ್ಲವಾಗಿವೆ. ಆರಂಭಕಾಲದಲ್ಲಿ ಪ್ರಚಾರಕರ ಉತ್ಸಾಹದಿಂದ ಮೊದಲಾದ ಈ ಚಳವಳಿ ಕ್ರಮೇಣ ವ್ಯವಹಾರ ಸಂಘಟನೆಯ ಇನ್ನೊಂದು ಪ್ರಕಾರವಾಗಿ ಪರಿವರ್ತನೆಗೊಂಡಿತು. ಸ್ವಾರ್ಥ ಹಿತಾಸಕ್ತಿಗಳು ಇದರೊಳಕ್ಕೂ ನುಸುಳಿಕೊಂಡುವು.

ಇಟಲಿ ಹಾಗೂ ಫ್ರಾನ್ಸ್‍ಗಳಲ್ಲಿ ಮಾತ್ರ ಈ ಚಳವಳಿ ಸ್ವಲ್ಪಮಟ್ಟಿಗೆ ಯಶಸ್ವಿಯಾಯಿತು. ಏಕೆಂದರೆ ಈ ದೇಶಗಳ ಸರ್ಕಾರಗಳು ಸಣ್ಣ ಪ್ರಮಾಣದ ಉದ್ಯಮಗಳಿಗೆ ಪೋಷಣೆ ನೀಡಿದುವು, ಅವಕ್ಕೆ ಧನ ಸಹಾಯ ನೀಡಿದುವು. ಬಂಡವಾಳಿಗ ಸ್ಪರ್ಧಿಗಳನ್ನೆದುರಿಸುವಂತೆ ಅವುಗಳಿಗೆ ಸಾಲದ ಸೌಲಭ್ಯವನ್ನೂ, ಮಾರಾಟದ ಸವಲತ್ತುಗಳನ್ನು ದೊರಕಿಸುವ ಭರವಸೆ ನೀಡಿದುವು. ಸರ್ಕಾರದ ಒತ್ತಾಸೆ ಇಲ್ಲದ ಇತರ ದೇಶಗಳಲ್ಲಿ ಗ್ರಾಹಕರ ಸಹಕಾರಕ್ಕೆ ಈ ಚಳವಳಿ ಎಡೆಮಾಡಿಕೊಟ್ಟಿತು; ಇಲ್ಲಿ ಗ್ರಾಹಕರ ಸಹಕಾರವೇ ಉತ್ಪಾದನೆಯ ಕಾರ್ಯಗಳಲ್ಲೂ ತೊಡಗಿತು.

ಬಂಡವಾಳ ವ್ಯವಸ್ಥೆಯಲ್ಲಿ ಬಂಡವಾಳಿಗನ ವಿರುದ್ಧವಾಗಿ ಹೂಡಿದ ಚಳವಳಿಯೇ ಉತ್ಪಾದಕರ ಸಹಕಾರ. ಸರ್ಕಾರೀ ಉದ್ಯಮ ಸಂಘಟನೆಯೂ ಸರ್ಕಾರೀ ಕ್ಷೇತ್ರವೂ ಅತ್ಯಂತ ಪ್ರಧಾನ ಪಾತ್ರ ವಹಿಸುತ್ತಿರುವ ಸಮಾಜವಾದೀ ಆರ್ಥಿಕ ವ್ಯವಸ್ಥೆಯಲ್ಲಿ ಈ ಚಳವಳಿಯ ಪ್ರಾಮುಖ್ಯ ನಷ್ಟವಾಗಿದೆ. ಉತ್ಪಾದಕರ ಸಹಕಾರದ ಭವಿಷ್ಯ ಇರುವುದು ಕೈಗಾರಿಕಾ ಸಹಕಾರ ಸಂಘಗಳಲ್ಲಿ ಮಾತ್ರ; ಸಹಕಾರೀಕ್ಷೇತ್ರದಲ್ಲಿ ಗುಡಿಸಲು ಕೈಗಾರಿಕೆ ಹಾಗೂ ಸಣ್ಣ ಪ್ರಮಾಣದ ಕೈಗಾರಿಕೆಗಳನ್ನು ಸಂಘಟಿಸುವುದೇ ಉದ್ದೇಶವಾದ ಈ ಬಗೆಯ ಸಹಕಾರ ಸಂಘಗಳಿಗೆ ಕಡಿಮೆ ಬಂಡವಾಳ ಸಾಕು; ಇವುಗಳಲ್ಲಿ ಕಾರ್ಮಿಕರ ನೈಪುಣ್ಯವೂ ಅವಧಾನವೂ ಅಧಿಕವಾಗಿ ಬೇಕು. ಇವು ದೊಡ್ಡ ಕೈಗಾರಿಕೆಗಳಿಗೆ ಸಹಾಯಕಗಳಾಗಿ ಕಾರ್ಯ ನಡೆಸಬಹುದು. ಭಾರತದಂಥ ಅಭಿವೃದ್ದಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಇವು ಬಹುಮಟ್ಟಿಗೆ ನಿರುದ್ಯೋಗ ಸಮಸ್ಯೆಯನ್ನು ಪರಿಹರಿಸಬಲ್ಲುವು. (ಜೆ.ಕೆ.ಐ.) [೨] [೩]

ಉಲ್ಲೇಖಗಳು[ಬದಲಾಯಿಸಿ]

  1. https://www.britannica.com/biography/Robert-Owen
  2. http://encyclopedia2.thefreedictionary.com/Producers+Cooperative
  3. "ಆರ್ಕೈವ್ ನಕಲು". Archived from the original on 2016-08-21. Retrieved 2016-10-21.