ವಿಷಯಕ್ಕೆ ಹೋಗು

ಅಹಾರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಹಾರ್

ರಾಜಸ್ಥಾನದ ಉದಯಪುರ ಪಟ್ಟಣದ ಅಂಚಿನಲ್ಲಿರುವ ಅಹಾರ್ ನದಿ ದಡದ ಮೇಲೆ ಇರುವ ಈ ದಿಬ್ಬದಲ್ಲಿ ಪ್ರಾಚೀನ ಸಂಸ್ಕೃತಿಗಳ ಅವಶೇಷಗಳು ಸಿಕ್ಕಿವೆ. ಇಲ್ಲಿ ಕ್ರಿ.ಪೂ.ಸು.೧೮೦೦ ರಿಂದ ೧೨೦೦ರ ವರೆಗೆ ತಾಮ್ರ ಯುಗದ ಸಂಸ್ಕೃತಿಯೂ ಕ್ರಿ.ಪೂ.ಸು. ೫೦೦ ರಿಂದ ಕ್ರಿ.ಶ.ಸು ೭೦೦ ರ ವರೆಗೆ ಚಾರಿತ್ರಿಕ ಕಾಲದ ಸಂಸ್ಕೃತಿಗಳೂ ಪ್ರಚಲಿತವಾಗಿದ್ದುವೆಂದು ಉತ್ಖನನಗಳಿಂದ ತಿಳಿದುಬಂದಿದೆ. ಅಹಾರ್‍ನ ತಾಮ್ರಯುಗದ ಸಂಸ್ಕೃತಿ ವಿಶಿಷ್ಟ ರೀತಿಯದ್ದಾಗಿದ್ದು, ಅದನ್ನು ಅಹಾರ್‍ನ ಸಂಸ್ಕೃತಿಯೆಂದೇ ಕರೆಯುವ ವಾಡಿಕೆಯಿದೆ. ಭಾರತದ ಸಮಕಾಲೀನ ಸಂಸ್ಕೃತಿಗಳಂತೆ ಬಹಳವಾಗಿ ಶಿಲಾಯುಧಗಳನ್ನು ತಾಮ್ರದ ಜೊತೆಯಲ್ಲೇ ಉಪಯೋಗಿಸದಿರುವುದು ಅಹಾರ್ ಸಂಸ್ಕೃತಿಯ ವೈಶಿಷ್ಟ್ಯ. ಅಹಾರ್ ಮತ್ತು ಸುತ್ತುಮುತ್ತಲಿನ ಪ್ರದೇಶದಲ್ಲಿ ತಾಮ್ರ ಸುಲಭವಾಗಿ ಸಿಕ್ಕುತ್ತಿದ್ದುದರಿಂದ ಈ ಜನರಿಗೆ ಕಲ್ಲಿನ ಆಯುಧಗಳ ಆವಶ್ಯಕತೆ ಇರದಿರಬಹುದೆಂದೂ ಕೆಲವು ಬಹುಶಃ ತಾಮ್ರವನ್ನು ಗಣಿಗಳಿಂದ ತೆಗೆದು ವಸ್ತುಗಳನ್ನು ತಯಾರು ಮಾಡುವುದು ಈ ಜನರ ಮುಖ್ಯ ಕಸಬಾಗಿದ್ದಿರಬಹುದೆಂದೂ ಕೆಲವು ವಿದ್ವಾಂಸರ ಊಹೆ. ಆ ಕಾಲದಲ್ಲಿ ಮನೆಗಳು ಕಲ್ಲಿನ ಪಾಯಗಳ ಮೇಲೆ ಮಣ್ಣಿನಲ್ಲಿ ಕಟ್ಟಲ್ಪಡುತ್ತಿದ್ದವು. ಕೆಲವು ತಡಿಕೆ ಗೋಡೆಗಳೂ ಕಂಡು ಬಂದಿವೆ. ಮನೆಗಳು ಸಾಮಾನ್ಯವಾಗಿ ವಿಶಾಲವಾಗಿದ್ದು, ಒಂದು ದೊಡ್ಡ ಹಜಾರದ ಒಳಗೆ ಹಲವಾರು ಹರಿವೊಲೆಗಳಿರುತ್ತಿದ್ದವು. ಕೆಂಪು ಮತ್ತು ಕಪ್ಪು ಹೊಳಪಿನ ಮಡಕೆಗಳು ಆಕಾಲದಲ್ಲಿ ಉಪಯೋಗದಲ್ಲಿದ್ದವು. ಕೆಲವು ಮಡಕೆಗಳ ಮೇಲೆ ಬಿಳಿಯ ಬಣ್ಣದ ನೇರ ಅಥವಾ ಡೊಂಕು ಗೆರೆಗಳು, ಚುಕ್ಕಿಯ ಗೆರೆಗಳು ಮುಂತಾದ ಸಾಮಾನ್ಯ ನಮೂನೆಗಳ ಚಿತ್ರಣ ಇರುತ್ತಿತ್ತು. ಈ ಸಂಸ್ಕೃತಿ ಆಗ್ನೇಯ ರಾಜಸ್ತಾನದ ಬನಾಸ್ ನದಿ ಕಣಿವೆಯಲ್ಲಿ ಹಬ್ಬಿತು.

ಅಹಾರ್ ದಿಬ್ಬದ ಚಾರಿತ್ರಿಕ ಕಾಲದ ಸ್ತರಗಳಲ್ಲಿ ಉತ್ತರ ಭಾರತದ ಕಪ್ಪು ಹೊಳಪಿನ ಮಡಕೆಗಳೂ ರಂಗ ಮಹಲ್ ರೀತಿಯ ಮಡಕೆಗಳು ದೊರಕಿವೆ. (ಎಸ್.ಎನ್.)

ಉಲ್ಲೇಖಗಳು

[ಬದಲಾಯಿಸಿ]
  1. "ಆರ್ಕೈವ್ ನಕಲು". Archived from the original on 2016-10-19. Retrieved 2016-10-19.
"https://kn.wikipedia.org/w/index.php?title=ಅಹಾರ್&oldid=1249332" ಇಂದ ಪಡೆಯಲ್ಪಟ್ಟಿದೆ