ವಿಷಯಕ್ಕೆ ಹೋಗು

ಆಹಾರ ಸಸ್ಯಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮನುಷ್ಯನ ಮತ್ತು ಪ್ರಾಣಿಗಳ ದೇಹದ ಬೆಳೆವಣಿಗೆಗೆ ಅತ್ಯಾವಶ್ಯಕವಾದ ಪಿಷ್ಟಪದಾರ್ಥಗಳು, ನೈಟ್ರೊಜನ್, ಮೇದಸ್ಸು, ಜೀವಸತ್ವಗಳು, ಲವಣ, ಕ್ಯಾಲ್ಸಿಯಂ, ಫಾಸ್ಫರಸ್ ಮುಂತಾದ ಪೋಷಕಾಂಶಗಳನ್ನು ಒದಗಿಸುವ, ತಿನ್ನಲು ಯೋಗ್ಯವಾದ ಸಸ್ಯಗಳು. ಈ ಸಸ್ಯಗಳ ಕಾಯಿ ಹಣ್ಣುಗಳನ್ನೋ ನೇರವಾಗಿ ಅವುಗಳ ಸೊಪ್ಪನ್ನೋ ಗೆಡ್ಡೆ ಬೇರು ದಿಂಡುಗಳನ್ನೋ ಬಳಸುವುದು ರೂಢಿ. ಈ ಎಲ್ಲ ಅಂಶಗಳೂ ಒಂದೇ ಜಾತಿಯ ಸಸ್ಯ ಅಥವಾ ಸಸ್ಯಭಾಗದಲ್ಲಿ ಕೂಡಿರುವುದಿಲ್ಲ. ಬೇರೆ ಬೇರೆ ಸಸ್ಯಗಳಲ್ಲಿ ಬೇರೆ ಬೇರೆ ಪೋಷಕಾಂಶಗಳಿರುತ್ತವೆ. ಆದ್ದರಿಂದ ಬೇರೆ ಬೇರೆ ಆಹಾರ ಸಸ್ಯಗಳನ್ನು ಅವು ನೀಡುವ ಫಲವನ್ನು ಯುಕ್ತರೀತಿಯಲ್ಲಿ ಉಪಯೋಗಿಸಬೇಕು. ಈ ಪೋಷಕಾಂಶಗಳನ್ನು ಪಡೆಯುವಲ್ಲಿ ಸಸ್ಯದ ಉತ್ಪನ್ನಗಳನ್ನು ಬಹುವಾಗಿ ಬಳಸಿದ ಅನಂತರ ಉಳಿದ ಭಾಗವನ್ನು ಪ್ರಾಣಿಗಳ ಸೇವನೆಗೆ ಉಳಿಸುವುದು ರೂಢಿ.

ಆಹಾರ ಸಸ್ಯಗಳ ಪಂಗಡ

[ಬದಲಾಯಿಸಿ]

ಪ್ರಾಣಿಗಳ ಆಹಾರಕ್ಕೆ ಹಲವು ಸಸ್ಯಗಳು ಮಾತ್ರ ಉಪಯುಕ್ತ. ಅಂಥ ಸಸ್ಯಗಳ ಪುರ್ಣಭಾಗ ಪ್ರಾಣಿಗಳಿಗೆ ಆಹಾರವಾಗುತ್ತದೆ. ಉದಾಹರಣೆಗೆ ಬತ್ತ, ರಾಗಿ, ಗೋದಿ. ಇನ್ನು ಕೆಲವು ಸಸ್ಯದ ಕೆಲಭಾಗ ಮಾತ್ರ ಉಪಯುಕ್ತವಾಗುತ್ತವೆ-ಆಲೂಗೆಡ್ಡೆ, ವಿವಿಧ ಹಣ್ಣಿನ ಮರಗಳು. ಪೋಷಕಾಂಶಗಳನ್ನು ಪ್ರಾಣಿಗಳಿಗೆ ಒದಗಿಸುವ ಸಸ್ಯಗಳನ್ನು ಅವುಗಳ ಉಪಯುಕ್ತತೆ ಮತ್ತು ಆ ಸಸ್ಯಗಳಲ್ಲಿರುವ ಪೋಷಕಾಂಶಗಳ ದೃಷ್ಟಿಯಿಂದ ಮೂರು ಮುಖ್ಯ ಪಂಗಡವಾಗಿ ವಿಂಗಡಿಸಬಹುದು:

  • ೧. ಧಾನ್ಯ,
  • ೨. ತರಕಾರಿ.
  • ೩. ಹಣ್ಣುಹಂಪಲು.

ಧಾನ್ಯಗಳಲ್ಲಿ ಎರಡು ವಿಧಗಳಿವೆ: ಏಕದಳ ಧಾನ್ಯಗಳು, ದ್ವಿದಳ ಧಾನ್ಯಗಳು. ಏಕದಳಧಾನ್ಯಗಳು ಹುಲ್ಲು ಕುಟುಂಬದ ಜಾತಿಗೆ ಸೇರಿವೆ. ಬತ್ತ, ಗೋದಿ, ರೈ, ಬಾರ್ಲಿ, ರಾಗಿ, ಜೋಳ, ಮುಸುಕಿನಜೋಳ, ನವಣೆ, ಸಜ್ಜೆ ಇವೆಲ್ಲವೂ ಈ ಗುಂಪಿಗೆ ಸೇರಿದವು. ಮನುಷ್ಯರ ಆಹಾರದಲ್ಲಿ ಇವು ಮುಖ್ಯಪಾತ್ರ ವಹಿಸುತ್ತವೆ. ಪ್ರಾಣಿಮೇವಿಗೂ ಉತ್ಪಾದನೆಯನ್ನು ದಾಸ್ತಾನು ಮಾಡಿಡುವುದಕ್ಕೂ ಇವು ಅನುಕೂಲ. ಮಾನವ ಪ್ರಥಮವಾಗಿ ಧಾನ್ಯಗಳನ್ನು ಬೆಳೆಸಲು ಕಲಿತ. ಶೇಖರಣೆಯ ಸಮಸ್ಯೆ ಮುಂದೆ ಬಂತು. ಧಾನ್ಯ ಶೇಖರಣೆಗಳ ಉಗ್ರಾಣಗಳು ಅತ್ಯಂತ ಪುರಾತನ ಮೊಹೆಂಜೊದಾರೊ ಮುಂತಾದೆಡೆಯಲ್ಲಿ ಕಂಡುಬಂದಿವೆ. ಸಸ್ಯಾಹಾರವೇ ಆಹಾರಕ್ಕೆ ಮೂಲಭೂತವಾದದ್ದು. ಮಾಂಸಾಹಾರ ಹೆಚ್ಚು ಪ್ರಚಲಿತವಿರುವ ದೇಶಗಳಲ್ಲಿ ಸಸ್ಯಗಳನ್ನು ಬೆಳೆಸಿ ವಿವಿಧ ಪ್ರಾಣಿಗಳಿಗೆ ತಿನ್ನಿಸಿ ಅವುಗಳ ಮಾಂಸವನ್ನು ಬಳಸುತ್ತಾರೆ. ಧಾನ್ಯಗಳು ವಿವಿಧ ರೀತಿಯವಾದರೂ ಅವುಗಳಲ್ಲಿನ ಆಹಾರಾಂಶಗಳು ಒಂದೇ ರೀತಿಯವು. ಮೊತ್ತದಲ್ಲಿ ಮಾತ್ರ ಅಂತರವಿರಬಹುದು. ಸಾಮಾನ್ಯವಾಗಿ ಪಿಷ್ಟಪದಾರ್ಥಗಳೇ ಹೆಚ್ಚು. ಎಲ್ಲದರಲ್ಲೂ ಕ್ಯಾಲ್ಸಿಯಂ ಅಂಶ, ಕಬ್ಬಿಣ ಮತ್ತು ಎ ಜೀವಸತ್ವ ಕಡಿಮೆ. ಹಳದಿಬಣ್ಣದ ಮುಸುಕಿನಜೋಳದಲ್ಲಿ ಮಾತ್ರ ಎ ಜೀವಸತ್ವ ಸಮರ್ಪಕವಾಗಿರುತ್ತದೆ. ಧಾನ್ಯಗಳಲ್ಲಿ ಸಾರಜನಕವೂ (ನೈಟ್ರೊಜನ್) ಸೇರಿರುತ್ತದೆ. ಆದರೆ ಅದು ಮೊಟ್ಟೆ, ಹಾಲು, ಮಾಂಸಗಳಲ್ಲಿನ ನೈಟ್ರೊಜನ್ ಗಿಂತ ಭಿನ್ನವಾಗಿರುತ್ತದೆ. ಅವುಗಳನ್ನು ಸೇವಿಸುವಾಗ ನ್ಯೂನತೆಯಿರುವ ಆಹಾರಾಂಶ ಒದಗಿಸುವ ಇತರ ವಸ್ತುಗಳನ್ನು ಜೊತೆಗೆ ಸೇರಿಸಿ ಸೇವಿಸುವುದು ಅಗತ್ಯ. ರಾಗಿಯಲ್ಲಿ ಮಾತ್ರ ಕ್ಯಾಲ್ಸಿಯಂ ಅಂಶ ಹೆಚ್ಚಾಗಿದೆ. ಧಾನ್ಯಗಳು ಸಾಕಷ್ಟು ಬಿ ಜೀವಸತ್ವವನ್ನು ಒದಗಿಸುತ್ತವೆ. ಬತ್ತ ಜಗತ್ತಿನಲ್ಲಿ ಅತಿಮುಖ್ಯ ಆಹಾರ. ಇದರಿಂದ ದೊರಕುವ ಅಕ್ಕಿಯನ್ನು ನೇರವಾಗಿ ಬೇಯಿಸಿ ಅಥವಾ ಅದರ ಹಿಟ್ಟಿನಿಂದ ವಿವಿಧ ಮಾದರಿಯ ಆಹಾರ ತಯಾರಿಕೆಗೆ ಉಪಯೋಗಿಸಲಾಗುತ್ತದೆ. ಅಕ್ಕಿಯಂತೆ ಗೋದಿಯೂ ಅತಿಮುಖ್ಯವಾದ ಆಹಾರ. ಇದನ್ನು ಪ್ರಪಂಚದ ಹಲವೆಡೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉಪಯೋಗಿಸುತ್ತಾರೆ. ಇದರಿಂದ ಸಿದ್ಧಪಡಿಸಿದ ಆಹಾರಗಳನ್ನು ದೀರ್ಘಕಾಲ ಕೆಡದ ರೀತಿಯಲ್ಲಿ ಇಡಬಹುದು. ರಾಗಿ, ಜೋಳ, ಮುಸುಕಿನ ಜೋಳಗಳು, ಸಜ್ಜೆ, ನವಣೆ ಇವು ಇತರ ಮುಖ್ಯ ಏಕದಳ ಧಾನ್ಯಗಳು. ಕಬ್ಬು ಸಹ ಇದೇ ಗುಂಪಿಗೆ ಸೇರುತ್ತದೆ. ಕಬ್ಬಿನಿಂದ ತೆಗೆದ ಸಕ್ಕರೆಯನ್ನು ಮಾನವ ಹಲವು ರೀತಿಯಲ್ಲಿ ಬಳಸಿಕೊಂಡಿದ್ದಾನೆ. ದ್ವಿದಳಧಾನ್ಯಗಳಲ್ಲಿ ವಿವಿಧ ಕಾಳುಕಡ್ಡಿಗಳು ಸೇರುತ್ತವೆ. ನೈಟ್ರೋಜನ್ ನ್ನು ಇವು ಹೆಚ್ಚಾಗಿ ಒದಗಿಸುತ್ತವೆ. ತೊಗರಿ, ಅವರೆ, ಅಲಸಂಡೆ, ಉದ್ದು, ಹೆಸರು, ಸೋಯಬೀನ್, ಹುರುಳಿ, ಕಡಲೆ, ಮಡಿಕಿ ಇವೆಲ್ಲವೂ ನೈಟ್ರೋಜನ್ಯುಕ್ತ ಆಹಾರಸಸ್ಯಗಳು. ಇವುಗಳಲ್ಲಿ ಈ ಸಸ್ಯಗಳ ಕಾಳು ಮಾತ್ರ ಉಪಯುಕ್ತವಾಗುತ್ತದೆ. ಸಸ್ಯಭಾಗಗಳು ಪ್ರಾಣಿಗಳಿಗೆ ಮೇವು ಒದಗಿಸುತ್ತವೆ. ಇದರಿಂದಲೂ ಬಿ ಜೀವಸತ್ವ ಒದಗುತ್ತದೆ. ಮೊಳಕೆ ಬಂದ ಕಾಳುಗಳಲ್ಲಿ ಸಿ ಜೀವಸತ್ವ ಅಧಿಕ ಪ್ರಮಾಣದಲ್ಲಿರುತ್ತದೆ.

ತರಕಾರಿಗಳು

[ಬದಲಾಯಿಸಿ]

ಆಹಾರದಲ್ಲಿ ತರಕಾರಿಗಳ ಪಾತ್ರ ಬಲು ಹಿರಿದು. ಧಾನ್ಯಗಳಿಗಿಂತ ಇವು ಅತಿಮುಖ್ಯ ಆಹಾರವಾದರೂ ಅವುಗಳ ಬಳಕೆ ಸಮಂಜಸವಾಗಿಲ್ಲ. ಅತ್ಯಲ್ಪ ಕಾಲದಲ್ಲಿಯೇ ಹೆಚ್ಚು ಪ್ರಮಾಣದ ಪೋಷಕಾಂಶಗಳನ್ನು ಇವುಗಳಿಂದ ಪಡೆಯಬಹುದು. ವಿವಿಧಜಾತಿಯ ಸೊಪ್ಪುಗಳು ಮತ್ತು ತಿಂಗಳ ಹುರುಳಿ ಇತ್ಯಾದಿ ಈ ಗುಂಪಿನ ಆಹಾರಕ್ಕೆ ಸೇರಿವೆ. ಒಂದು ನಿಯತ ಅವಧಿಯಲ್ಲಿ ಒಂದು ನಿರ್ದಿಷ್ಟಪ್ರದೇಶದಲ್ಲಿ ಬೆಳೆಯುವ ಧಾನ್ಯಗಳಿಗಿಂತ 4-5ರಷ್ಟು ಹೆಚ್ಚು ಪ್ರಮಾಣದಲ್ಲಿ ತರಕಾರಿಗಳನ್ನು ಬೆಳೆಸಬಹುದು. ಇವುಗಳಲ್ಲಿ ಪಿಷ್ಟಪದಾರ್ಥದ ಜೊತೆಗೆ ಲವಣಾಂಶಗಳೂ ಸಾರಜನಿಕ ಅಂಶ ಮತ್ತು ಅತಿಮುಖ್ಯವಾದ ಜೀವಸತ್ವಗಳೂ ಹೆಚ್ಚಾಗಿರುವುದರಿಂದ ಧಾನ್ಯಗಳೊಡನೆ ಇದನ್ನು ಸೇರಿಸಿ ಸೇವಿಸಿದರೆ ದೇಹಕ್ಕೆ ಹೆಚ್ಚಿನ ಪುಷ್ಟಿ ದೊರಕುತ್ತದೆ.

  • ಉಪಯುಕ್ತ ಸಸ್ಯಭಾಗಗಳ ಆಧಾರವನ್ನನುಸರಿಸಿ ತರಕಾರಿಗಳನ್ನು ನಾಲ್ಕು ಮುಖ್ಯ ಪಂಗಡಗಳಾಗಿ ವಿಂಗಡಿಸಬಹುದು :
  • ೧. ಆಲೂಗೆಡ್ಡೆ, ಗೆಣಸು, ಮರಗೆಣಸು ಮುಂತಾದುವು. ಇವು ಧಾನ್ಯಗಳಂತೆಯೇ ಹೆಚ್ಚಿನ ಪಿಷ್ಟಾಂಶಗಳನ್ನು ಒದಗಿಸುತ್ತವೆ. ಇವು ಭೂಮಿಯೊಳಗಡೆ ಬೆಳೆಯುವ ಆಹಾರವಸ್ತುಗಳು. ಬೇರು ಅಥವಾ ಭೂಮಿಯೊಳಗಿನ ರೆಂಬೆಗಳಲ್ಲಿ ಆಹಾರ ಶೇಖರಿಸಲ್ಪಡುತ್ತದೆ. ಬೀಟ್ರೂಟ್, ಕ್ಯಾರೆಟ್, ಮೂಲಂಗಿ, ಈರುಳ್ಳಿ, ಬೆಳ್ಳುಳ್ಳಿ, ಸುವರ್ಣಗಡ್ಡೆ ಮುಂತಾದುವುಗಳೆಲ್ಲ ಉತ್ತಮ ಆಹಾರ ಒದಗಿಸುವ ತರಕಾರಿಗಳು.
  • ೨. ಕಾಂಡ ಮತ್ತು ಎಲೆಗಳನ್ನು ಆಹಾರಕ್ಕಾಗಿ ಒದಗಿಸುವ ಸಸ್ಯಗಳು. ಈ ಬಗೆಯ ಸಸ್ಯಗಳು ದೇಹದಲ್ಲಿ ಮಲಬದ್ಧತೆಗೆ ಅವಕಾಶವಿಲ್ಲದಂತೆ ನೋಡಿಕೊಳ್ಳುತ್ತವೆ. ವಿವಿಧ ಜೀವಸತ್ವಗಳನ್ನು ಒದಗಿಸುವ ವಿವಿಧ ಜಾತಿಯ ಸೊಪ್ಪುಗಳಲ್ಲಿ ಲೆಟಿಸ್ ಎಲೆಕೋಸು, ಪುದೀನ, ಬಸಳೆ ಮುಖ್ಯವಾದವು. ಇವುಗಳಲ್ಲಿ ಕ್ಯಾಲ್ಸಿಯಂ, ಕಬ್ಬಿಣ, ಸಿ ಮತ್ತು ಎ ಜೀವಸತ್ವಗಳು ಹೆಚ್ಚು.
  • ೩. ಕಾಯಿ ಮತ್ತು ಹಣ್ಣುಗಳನ್ನು ಮಾತ್ರ ಒದಗಿಸುವ ಸಸ್ಯಗಳು ಮೂರನೆಯ ವರ್ಗ. ಇವುಗಳ ಬೇರು, ಕಾಂಡ ಮತ್ತು ಎಲೆ ಉಪಯುಕ್ತವಾಗುವುದಿಲ್ಲ. ಕಾಯಿ ಮತ್ತು ಹಣ್ಣುಗಳು ಉತ್ತಮ ಆಹಾರವಾಗುತ್ತವೆ. ಬದನೆ, ಬೆಂಡೆ, ಟೊಮ್ಯಾಟೊ, ಕುಂಬಳ, ಸೋರೆ, ಪಡವಲ, ಸೌತೆ, ಹಾಗಲ, ಹೀರೆ, ಇವೆಲ್ಲವೂ ಈ ಗುಂಪಿನವು. ಸಿ, ಬಿ, ಮತ್ತು ಎ ಜೀವಸತ್ವಗಳು ಇವುಗಳಲ್ಲಿವೆ.
  • ೪.ನಾಲ್ಕನೆಯದು ಸಣ್ಣ ಪಂಗಡ. ಅವುಗಳಲ್ಲಿ ಹೂ ಮಾತ್ರ ಉಪಯುಕ್ತ. ಸಾಮಾನ್ಯವಾಗಿ ಸಮಶೀತೋಷ್ಣ ಪ್ರದೇಶಗಳಲ್ಲಿ ಚೆನ್ನಾಗಿ ಬೆಳೆಯುವ ಹೂಕೋಸು ಮತ್ತು ಬಾಳೆಯ ಮೋತೆ ಈ ಗುಂಪಿಗೆ ಸೇರಿವೆ.

ಹಣ್ಣುಗಳು

[ಬದಲಾಯಿಸಿ]

ಹಣ್ಣುಗಳ ವಿಭಾಗಕ್ಕೆ ವಿವಿಧ ಉಪಯುಕ್ತ ಬೀಜಗಳೂ ಸೇರುತ್ತವೆ. ಹಣ್ಣುಗಳಲ್ಲಿ ಹೊರತಿರುಳು ಅಥವಾ ಒಳಬೀಜ ಉಪಯುಕ್ತವಾಗುತ್ತವೆ. ಹಲವು ಹಣ್ಣುಗಳನ್ನು ಪುರ್ಣವಾಗಿ ಉಪಯೋಗಿಸಲಾಗುವುದು. ಉದಾ: ಮಾವು, ಹಲಸು, ಸಪೋಟ, ಸೀಬೆ, ನಿಂಬೆ, ಕಿತ್ತಳೆ ಜಾತಿಗಳು, ಪರಂಗಿ, ಬಾಳೆ, ದ್ರಾಕ್ಷಿ, ಸೇಬು, ದಾಳಿಂಬೆ. ಇವುಗಳಲ್ಲೆಲ್ಲ ಸಿ ಜೀವಸತ್ವ ಅಧಿಕವಿರುತ್ತದೆ. ಮಾವು ಮತ್ತು ಪರಂಗಿ ಹಣ್ಣುಗಳಲ್ಲಿ ಎ ಜೀವಸತ್ವ ಇದೆ. ಹಣ್ಣುಗಳಲ್ಲಿ ಕೆಲವನ್ನು ಒಣಗಿಸಿ ಬಲುಕಾಲ ಇಟ್ಟು ಅನಂತರ ಉಪಯೋಗಿಸಬಹುದು. ಖರ್ಜೂರ ಮತ್ತು ದ್ರಾಕ್ಷಿ ಇವುಗಳಿಗೆ ಮುಖ್ಯ ಉದಾಹರಣೆ. ಇವುಗಳಲ್ಲಿ ಕಬ್ಬಿಣದ ಅಂಶ ಹೆಚ್ಚು. ಬಾಳೆಯಲ್ಲಿ ಪಿಷ್ಟಪದಾರ್ಥ ಮತ್ತು ಕೆ ಜೀವಸತ್ವ ಇರುತ್ತವೆ. ಹಣ್ಣುಗಳ ಒಳತಿರುಳು ಆಹಾರಕ್ಕೆ ಉಪಯುಕ್ತವಲ್ಲದೆ, ಕೇವಲ ಬೀಜ ಉಪಯುಕ್ತವಾಗುವುದೂ ಉಂಟು. ನೆಲಗಡಲೆ ಮತ್ತಿತರ ಎಣ್ಣೆಬೀಜಗಳು, ಬಾದಾಮಿ, ಗೋಡಂಬಿ, ಪಿಸ್ತ ಇವುಗಳಲ್ಲಿ ಕೊಬ್ಬಿನ ಅಂಶ ಹೆಚ್ಚು. ಇವು ಉತ್ತಮ ಪೋಷಕ ಆಹಾರ ವಸ್ತುಗಳು. ಈ ಆಹಾರಸಸ್ಯಗಳಲ್ಲದೆ, ನಾವು ಪ್ರತಿನಿತ್ಯ ಸೇವಿಸುವ ಆಹಾರಕ್ಕೆ ಒಳ್ಳೆಯ ರುಚಿಯನ್ನುಂಟುಮಾಡುವ ಹಲವು ವಸ್ತುಗಳು ಆಹಾರಸಸ್ಯವರ್ಗಕ್ಕೆ ಸಂಬಂಧಿಸಿವೆ. ಮೆಣಸಿನಕಾಯಿ, ಮೆಣಸು, ಏಲಕ್ಕಿ, ದಾಲ್ಚಿನ್ನಿ, ಲವಂಗ, ಮುಂತಾದುವು ರುಚಿಪ್ರಧಾನವಾಗಿ ಉಪಯುಕ್ತವಾದರೂ ಅವುಗಳಲ್ಲಿ ಆಹಾರಾಂಶಗಳೂ ಇವೆ. ಹಸಿ ಮೆಣಸಿನಕಾಯಿಯಲ್ಲಿ ಸಿ ಜೀವಸತ್ವ ಇದೆ. ಮೆಣಸಿನಕಾಯಿ, ಕೊತ್ತಂಬರಿಯಲ್ಲಿ ಕೆರೋಟಿನ್ ಹೆಚ್ಚಾಗಿದೆ. ಅರಿಸಿನ ಮತ್ತು ಹುಣಿಸೆಯಲ್ಲಿ ಕಬ್ಬಿಣಾಂಶ ಹೆಚ್ಚಾಗಿದೆ. ಅಲ್ಲದೆ ಇಂಗು ಮತ್ತು ಬೆಳ್ಳುಳ್ಳಿಯಲ್ಲಿನ ಸತ್ತ್ವ ಜೀರ್ಣಕಾರಿಯಾದ ಸೂಕ್ಷ್ಮಜೀವಿಗಳನ್ನು ಕರುಳಿನಲ್ಲಿ ವೃದ್ಧಿಸಿ ಜೀರ್ಣಶಕ್ತಿ ಹೆಚ್ಚಿಸುತ್ತದೆ.

ಉಲ್ಲೇಖಗಳು

[ಬದಲಾಯಿಸಿ]

[]

  1. http://www.wikiwand.com/kn/%E0%B2%A7%E0%B2%BE%E0%B2%A8%E0%B3%8D%E0%B2%AF