ವಿಷಯಕ್ಕೆ ಹೋಗು

ಕೃತ್ತಿಕಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕೃತ್ತಿಕಾ ತಾರಾಗುಚ್ಛ

ಕೃತ್ತಿಕಾ ವೃಷಭರಾಶಿಯಲ್ಲಿನ ಒಂದು ತಾರಾಪುಂಜ (ಪ್ಲೀಡೀಸ್), ಭೂಮಿಯಿಂದ ಸುಮಾರು 500 ಬೆಳಕಿನವರ್ಷಗಳ ದೂರದಲ್ಲಿದೆ. ಇದರ ಆಕಾರ ಹೆಚ್ಚು ಕಡಿಮೆ ಲಘುಸಪ್ತರ್ಷಿಯಂತೆ. ಬರಿಗಣ್ಣಿಗೆ ಆರೇಳು ನಕ್ಷತ್ರಗಳು ಕಾಣಿಸಿದರೂ ವಾಸ್ತವವಾಗಿ ಈ ಪುಂಜದಲ್ಲಿ ನೂರಾರು ನಕ್ಷತ್ರಗಳಿವೆ. ಆಲ್ಸೈಯೋನಿ ಇದರಲ್ಲಿನ ಪ್ರಧಾನ ನಕ್ಷತ್ರ. ಪುಂಜದ ನಕ್ಷತ್ರಗಳು ಃ ಮಾದರಿಯವು. ನೀಲಿ ಬಣ್ಣದ ಕಾಂತಿಯಿಂದ ಇವು ಮಿನುಗುತ್ತವೆ. ರಾತ್ರಿಯ ಆಕಾಶದಲ್ಲಿ ಈ ಪುಂಜಮಸುಕು ಪ್ರಕಾಶದ ತಾರಾಸಮೂಹವಾಗಿ ಕಾಣಿಸಿಕೊಳ್ಳುತ್ತವೆ.

ಭಾರತೀಯ ಸಂಸ್ಕೃತಿಯಲ್ಲಿ

[ಬದಲಾಯಿಸಿ]

ಭಾರತೀಯ ಪಂಚಾಂಗದ ರೀತ್ಯ ಅಶ್ವಿನಿಯೇ ಆದಿಯಾದ ಇಪ್ಪತ್ತೇಳು ನಕ್ಷತ್ರಗಳಲ್ಲಿ ಕೃತ್ತಿಕಾ ಒಂದು.[][][]. ಕೃತ್ತಿಕಾ ತಾರಾಗುಚ್ಛದ ಬಗೆಗೆ ಅನೇಕ ಪೌರಾಣಿಕ ಕಥೆಗಳುಂಟು. ಮಹಾಭಾರತದ ಪ್ರಕಾರ ಕಥೆ ಹೀಗಿದೆ: ಸಪ್ತ ಋಷಿಗಳ ಪತ್ನಿಯರಲ್ಲಿ ಅರುಂಧತಿಯ ವಿನಾ ಉಳಿದವರು ಅಗ್ನಿದೇವನಲ್ಲಿ ಕಾಮಾಸಕ್ತರಾದವರು. ಆದ್ದರಿಂದ ಆ ಋಷಿಗಳು ಅವರನ್ನು ಪರಿತ್ಯಾಗ ಮಾಡಿದರು. ಪರಿತ್ಯಕ್ತರಾದ ಈ ಋಷಿಪತ್ನಿಯರು ಕುಮಾರಸ್ವಾಮಿಯನ್ನು ಮರೆಹೊಕ್ಕರು. ಕುಮಾರಸ್ವಾಮಿ ಇವರನ್ನು ಮನ್ನಿಸಿ ನಕ್ಷತ್ರಮಂಡಲದಲ್ಲಿ ಇವರಿಗೆ ಒಂದು ಸ್ಥಾನವನ್ನು ಕಲ್ಪಿಸಿಕೊಟ್ಟ.. ಈ ಆರು ನಕ್ಷತ್ರಗಳ ಪುಂಜವೇ ಕೃತ್ತಿಕಾ ಎಂಬ ಹೆಸರನ್ನು ಪಡೆಯಿತು. ತೈತ್ತಿರೀಯ ಸಂಹಿತೆಯ ಪ್ರಕಾರ ಕೃತ್ತಿಕಾಪುಂಜದಲ್ಲಿ ಅಂಬಾ, ದುಲಾ, ನಿತತ್ನಿ, ಅಭ್ರಯಂತ್ರೀ, ಮೇಘಯಂತೀ, ವರ್ಷಯಂತೀ ಮತ್ತು ಚುಪುಣಿಕಾ ಎಂಬ ಏಳು ನಕ್ಷತ್ರಗಳಿವೆಯೆಂದು ತಿಳಿದುಬರುತ್ತದೆ.

ಗ್ರೀಕ್ ಸಂಸ್ಕೃತಿಯಲ್ಲಿ

[ಬದಲಾಯಿಸಿ]

ಗ್ರೀಕ್ ಪುರಾಣದ ರೀತ್ಯ ಅಟ್ಲಾಸ್, ಪ್ಲೀಯನೀ ರಾಕ್ಷಸದಂಪತಿಗಳಿಗೆ ಅಲ್ಸೈಯೋನಿ, ಸಿಲನೋ, ಎಲೆಕ್ಟ್ರಾ, ಟೆಯಿಜೆಟಾ, ಮೇಯ, ಸ್ಟೆರೋಪಿ ಮತ್ತು ಮೆರೋಪೀ ಎಂಬ ಏಳು ಹೆಣ್ಣುಮಕ್ಕಳಿದ್ದರು. ಈ ಏಳು ಜನರನ್ನೂ ಒರೈಯನ್(ಮಹಾವ್ಯಾಧ) ಮೋಹಿಸಿ ಬಲಾತ್ಕಾರ ಮಾಡಿದಾಗ ಇವರೆಲ್ಲರೂ ದೇವರಿಗೆ ಮೊರೆಯಿಡುತ್ತಾರೆ. ಆಗ ದೈವಸಹಾಯದಿಂದ ಇವರೆಲ್ಲರೂ ಪಾರಿವಾಳಗಳಾಗಿ ಮಾರ್ಪಡುತ್ತಾರೆ. ಇವರೆಲ್ಲರಿಗೆ ನಕ್ಷತ್ರಸ್ಥಾನ ಲಭಿಸುತ್ತದೆ. ಆದರೂ ಒರೈಯನ್ ಮತ್ತು ಅವನ ನಾಯಿ (ಮಹಾಶ್ವಾನ) ಇವರನ್ನು ಬೆನ್ನಟ್ಟುವುದು ತಪ್ಪುವುದಿಲ್ಲ. ಇವರ ಪೈಕಿ ಎಲೆಕ್ಟ್ರಾ ಹೇಗೆಯೋ ತಪ್ಪಿಸಿಕೊಂಡು ಮುಂದೆ ಆಗಬಹುದಾದ ಟ್ರಾಯ್ ಪತನವನ್ನು ತಾನು ನೋಡದ ಹಾಗೆ ಕಣ್ಮರೆಯಾಗುತ್ತಾಳೆ. ತಪ್ಪಿಸಿಕೊಂಡ ಕನ್ನಿಕೆ ಮೆರೋಪೀ ಎಂದು ಕೆಲವರ ಅಭಿಪ್ರಾಯ. ಸಿಸಿಫಸನ ಜೊತೆಯಲ್ಲಿ ಲೈಂಗಿಕ ಸಂಬಂಧವನ್ನು ಪಡೆದದ್ದರ ಸಲುವಾಗಿ ನಾಚಿಕೆಪಟ್ಟು ಎಲೆಕ್ಟ್ರಾ ತನ್ನ ಪ್ರಕಾಶವನ್ನು ಕಡಿಮೆಮಾಡಿಕೊಂಡುಬಿಡುತ್ತಾಳೆ. ಅಂದಿನಿಂದ ಈ ನಕ್ಷತ್ರಪುಂಜದಲ್ಲಿ ಬರಿಯ ಕಣ್ಣಿಗೆ ಆರು ನಕ್ಷತ್ರಗಳು ಚೆನ್ನಾಗಿ ಕಾಣಿಸುತ್ತವೆ. ಏಳನೆಯ ನಕ್ಷತ್ರ ಚಂಚಲ.

ಉಲ್ಲೇಖಗಳು

[ಬದಲಾಯಿಸಿ]
  1. GENERAL RESULTS OF BEING BORN IN KRITTIKA NAKSHATRA
  2. Dennis M. Harness. The Nakshatras: The Lunar Mansions of Vedic Astrology. Lotus Press (Twin Lakes WI, 1999.) ISBN 978-0-914955-83-2
  3. Harness, Dennis M. The Nakshatras: The Lunar Mansions of Vedic Astrology. Motilal Banarasidas. Retrieved 21 January 2013.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: