ವಿಷಯಕ್ಕೆ ಹೋಗು

ಉಷೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉಷೆ ಬಾಣಾಸುರನ ಮಗಳು. ಶ್ರೀ ಕೃಷ್ಣನ ಮೊಮ್ಮಗನೂ ಪ್ರದ್ಯುಮ್ಮನ ಮಗನೂ ಆದ ಅನಿರುದ್ಧನ ಹೆಂಡತಿ. ಒಮ್ಮೆ ನಿದ್ರಿಸುತ್ತಿದ್ದಾಗ ಸ್ವಪ್ನದಲ್ಲಿ ಎಂದೂ ಕಂಡರಿಯದ ಅನಿರುದ್ಧನೊಡನೆ ರಮಿಸಿ ಎಚ್ಚರಗೊಂಡು ಆತನನ್ನು ಎದುರಿನಲ್ಲಿ ಕಾಣದೆ ವೇದನೆಯಿಂದ ಖಿನ್ನಳಾಗಿರುವುದನ್ನು ಸಖಿಯರು ಗಮನಿಸುತ್ತಾರೆ. ಅವರಲ್ಲಿ ಒಬ್ಬಳಾದ ಬಾಣಾಸುರನ ಮಂತ್ರಿ ಕುಂಭಾಂಡನ ಪುತ್ರಿ ಚಿತ್ರಲೇಖೆ ಉಷೆಯನ್ನು ಪ್ರಶ್ನಿಸಿ ಅವಳ ಖಿನ್ನತೆಗೆ ಕಾರಣವಾದ ಸ್ವಪ್ನವೃತ್ತಾಂತವನ್ನು ಕೇಳಿ ತಿಳಿದು ಅವಳ ರಮಣನನ್ನು ಹೇಗಾದರೂ ಎಲ್ಲಿದ್ದರೂ ಕರೆತರುವುದಾಗಿ ಆಶ್ವಾಸನೆ ನೀಡುತ್ತಾಳೆ. ಬಳಿಕ ದೇವತೆಗಳು ಗಂಧರ್ವರು ಮತ್ತು ರಾಮಕೃಷ್ಣರಾದಿಯದ ಯದುವಂಶದ ಅರಸರ ಚಿತ್ರಗಳನ್ನು ಬರೆದು ಅವರಲ್ಲಿ ಯಾರೊಡನೆ ರಮಿಸಿದಳೆಂಬುದನ್ನು ತಿಳಿಯಲು ಪ್ರಯತ್ನಿಸಿ ಕೊನೆಯಲ್ಲಿ ಅನಿರುದ್ಧನ ಚಿತ್ರವನ್ನು ಕಂಡು ಉಷೆ ಲಜ್ಜಿತಳಾದುದನ್ನು ಗಮನಿಸಿ ಆತನೇ ಅವಳ ರಮಣನೆಂದು ತಿಳಿಯುತ್ತಾಳೆ. ಬಳಿಕ ಚಿತ್ರಲೇಖೆ ತನ್ನ ಯೋಗಮಹಿಮೆಯಿಂದ ದ್ವಾರಕಾನಗರಿಯಲ್ಲಿ ಸುಖವಾಗಿ ಮಲಗಿದ್ದ ಅನಿರುದ್ಧನನ್ನು ಶೋಣಿತಪುರಕ್ಕೆ ಕರೆತಂದು ಉಷೆಯ ಹತ್ತಿರ ಬಿಡಲು ಅನಿರುದ್ಧನೊಡನೆ ಆಕೆ ಬಹುಕಾಲ ಗೋಪ್ಯವಾಗಿ ಸುಖದಿಂದಿರುತ್ತಾಳೆ. ಕೆಲವು ಕಾಲದ ಮೇಲೆ ಬಾಣಾಸುರನಿಗೆ ಈ ಸಮಾಚಾರ ತಿಳಿದು ಅನಿರುದ್ಧನನ್ನು ಸೆರೆಯಲ್ಲಿಡುತ್ತಾನೆ. ಈ ವಿಚಾರವನ್ನು ತಿಳಿದ ಕೃಷ್ಣ ಬಾಣಾಸುರನೊಡನೆ ಯುದ್ಧ ಮಾಡಿ ಆತನನ್ನು ಸೋಲಿಸಿ ಉಷೆಯನ್ನೂ ಅನಿರುದ್ಧನನ್ನೂ ತನ್ನ ನಗರಿಗೆ ಕರೆದುಕೊಂಡು ಹೋಗುತ್ತಾನೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಉಷೆ&oldid=1099227" ಇಂದ ಪಡೆಯಲ್ಪಟ್ಟಿದೆ