ವಿಷಯಕ್ಕೆ ಹೋಗು

ತಿಥಿ (೨೦೧೬ ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ತಿಥಿ
ನಿರ್ದೇಶನರಾಮ್ ರೆಡ್ಡಿ
ನಿರ್ಮಾಪಕಪ್ರದೀಪ್ ರೆಡ್ಡಿ
ಸನ್ಮಿನ್ ಪಾರ್ಕ್
ಚಿತ್ರಕಥೆಈರೇಗೌಡ
ರಾಮ್ ರೆಡ್ಡಿ
ಕಥೆರಾಮ್ ರೆಡ್ಡಿ
ಪಾತ್ರವರ್ಗತಮ್ಮೇಗೌಡ ಎಸ್.
ಚನ್ನೇಗೌಡ
ಅಭಿಶೇಕ್. ಎಚ್.ಎನ್
ಪೂಜ.ಎಸ್.ಎಮ್, ಸಿಂಗ್ರಿಗೌಡ, ಸೋಮಶೇಖರ್, ಶ್ರೀನಿವಾಸ್, ಚನ್ನವೀರೇಗೌಡ, ಮಹಾದೇವ, ಗೌರಮ್ಮ, ಶಂಕರೇಗೌಡ
ಛಾಯಾಗ್ರಹಣDoron Tempert
ಸಂಕಲನJohn Zimmerman
ರಾಮ್ ರೆಡ್ಡಿ
ಸ್ಟುಡಿಯೋPrspctvs Productions
Maxmedia
ಬಿಡುಗಡೆಯಾಗಿದ್ದು೦೬ ಮೇ ೨೦೧೬
ಅವಧಿ೧೨೦ ನಿಮಿಷಗಳು
ದೇಶಭಾರತ
ಭಾಷೆಕನ್ನಡ

ತಿಥಿ, ೨೦೧೬ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರ. 'ರಾಮ್ ರೆಡ್ಡಿ'ಯವರು ನಿರ್ದೇಶನದ ಚೊಚ್ಚಲ ಚಿತ್ರ. ಇದರಲ್ಲಿ ಅಭಿನಯಿಸಿದ ಬಹುತೇಕ ನಟರು ವೃತ್ತಿಪರ ನಟರಲ್ಲದಿರುವುದು ಈ ಚಿತ್ರದ ವಿಶೇಷ. ಮಂಡ್ಯ ಜಿಲ್ಲೆಯಲ್ಲಿ ಈ ಸಿನಿಮಾವನ್ನು ಚಿತ್ರೀಕರಿಸಲಾಗಿದೆ. ಮಂಡ್ಯ ನಗರದ ನಿವಾಸಿ 'ಈರೇಗೌಡ'ರು 'ರಾಮ್ ರೆಡ್ಡಿ'ಯವರ ಜೊತೆಗೂಡಿ ಚಿತ್ರಕಥೆಯನ್ನು ಮಾಡಿದ್ದಾರೆ. ಮಂಡ್ಯ ಪ್ರದೇಶದ ಶೈಲಿಯ ಕನ್ನಡ ಭಾಷೆಯನ್ನು ಈ ಚಿತ್ರದಲ್ಲಿ ಬಳಸಲಾಗಿದೆ. ಈ ಸಿನೆಮಾ ರಾಷ್ಟ್ರೀಯಪ್ರಶಸ್ತಿ ಮತ್ತು ಅಂತಾರಾಷ್ಟ್ರೀಯ ಚಲಚಿತ್ರೋತ್ಸವಗಳಲ್ಲಿ ಪ್ರಶಸ್ತಿ ಪಡೆದಿದೆ.

'ನೊದೆಕೊಪ್ಪಲು' ಎಂಬ ಹಳ್ಳಿಯಲ್ಲಿ 'ಸೆಂಚುರಿಗೌಡ' ಒಬ್ಬ ೧೦೧ ವರ್ಷದ ವೃದ್ಧ ಸ್ಥಳೀಯವಾಗಿ ಹೆಸರುವಾಸಿಯಾಗಿರುತ್ತಾನೆ. 'ಸೆಂಚುರಿಗೌಡ' ತೀರಿಕೊಂಡನಂತರ ಆತನ ಮೊಮ್ಮಗ 'ತಮ್ಮಣ್ಣ' ಪಿತ್ರಾರ್ಜಿತ ಜಮೀನನ್ನು ಮಾರಿ ಹಣ ಮಾಡಿಕೊಳ್ಳಲು ಯೋಜನೆ ಹಾಕುತ್ತಾನೆ. ಆದರೆ ಆ ಜಮೀನಿನ ವಾರಸುದಾರ ಅವರ ತಂದೆ 'ಗಡ್ಡಪ್ಪ' ಇನ್ನೂ ಬದುಕಿರುವುದರಿಂದ ಆತನಿಂದ ಹಕ್ಕುಪತ್ರಗಳನ್ನು ಪಡೆಯಬೇಕಾಗಿರುತ್ತದೆ. ವಿರಕ್ತ ಜೀವಿಯಾಗಿ ತಿರುಗಾಡಿಕೊಂಡಿರುವ 'ಗಡ್ಡಪ್ಪ' ಈ ಪ್ರಾಪಂಚಿಕ ವ್ಯವಹಾರಗಳಲ್ಲಿ ಪಾಲ್ಗೊಳ್ಳಲು ನಿರಾಕರಿಸುತ್ತಾನೆ. 'ತಮ್ಮಣ್ಣ' ಆ ಹಳ್ಳಿಯ 'ಶಾನ್ಬಾಗ' ಎಂಬ ವ್ಯಕ್ತಿಯ ಸಲಹೆಯಂತೆ ನಗರಕ್ಕೆ ಹೋಗಿ 'ಸೇಟು' ಎಂಬ ವ್ಯಕ್ತಿಯ ಜೊತೆ ಜಮೀನು ಮಾರಾಟದ ವ್ಯವಹಾರ ಕುದುರಿಸುತ್ತಾನೆ. 'ಗಡ್ಡಪ್ಪ'ನ ಸುಳ್ಳು ಮರಣಪ್ರಮಾಣ ಪತ್ರ ಮಾಡಿಸಿಕೊಳ್ಳುತ್ತಾನೆ. 'ಗಡ್ಡಪ್ಪ'ನನ್ನು ಎಲ್ಲಾದರೂ ದೂರ ತೀರ್ಥಯಾತ್ರೆಗೆ ಹೋಗುವಂತೆ ಪುಸಲಾಯಿಸಿ ಹಣ ಕೊಟ್ಟು ಕಳಿಸುತ್ತಾನೆ ಹಾಗೂ 'ಸೆಂಚುರಿಗೌಡ'ನ ಹನ್ನೊಂದನೇ ದಿನದ ತಿಥಿ ಕಾರ್ಯಗಳನ್ನು ಜೋರಾಗಿ ನಡೆಸುವ ತಯಾರಿಯಲ್ಲಿ ತೊಡಗುತ್ತಾನೆ. ಹಳ್ಳಿಯಿಂದ ಹೊರಟ 'ಗಡ್ಡಪ್ಪ' ಕುರಿಮಂದೆಗಳನ್ನು ಇಟ್ಟುಕೊಂಡು ತಿರುಗಾಡುವ ಅಲೆಮಾರಿ ಜನರನ್ನು ಸೇರಿಕೊಂಡು ಅವರೊಡನೆ ಜೀವಿಸುತ್ತಾನೆ. ಇದೇ ಸಂದರ್ಭದಲ್ಲಿ ಸುತ್ತಮುತ್ತಲಿನ ಹಳ್ಳಿಗಳಲ್ಲಿ ತಿಥಿಯ ಪತ್ರಿಕೆ ಹಂಚಲು ತಿರುಗಾಡುವ 'ಗಡ್ಡಪ್ಪ'ನ ಮೊಮ್ಮಗ 'ಅಭಿ'ಗೆ ಕುರಿಮಂದೆಯ ಜನರ ಹುಡುಗಿ 'ಕಾವೇರಿ'ಯನ್ನು ನೋಡಿ ಮನಸ್ಸಾಗಿ ಅವಳನ್ನು ಒಲಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ತಿಥಿಯ ದಿನದ ಬಾಡೂಟಕ್ಕಾಗಿ ಕುರಿಗಳನ್ನು ಕೊಳ್ಳಲು ತಂದೆ ಕೊಟ್ಟ ಹಣವನ್ನು ಇಸ್ಪೀಟಿನಲ್ಲಿ ಹಾಳುಮಾಡುವ 'ಅಭಿ' ತನ್ನ ಗೆಳೆಯರೊಂದಿಗೆ ಸೇರಿ ಕುರಿಮಂದೆಯಿಂದ ಕುರಿಗಳನ್ನು ಕದಿಯುತ್ತಾನೆ. 'ಸೆಂಚುರಿಗೌಡ'ನ ತಿಥಿಯ ದಿನ ಬರುತ್ತದೆ. ಕುರಿಗಳು ಕಳ್ಳತನವಾಗಿರುವುದರಿಂದ ಇನ್ನು ಅಲ್ಲಿರುವುದು ಸರಿಯಲ್ಲವೆಂದುಕೊಂಡು ಕುರಿಮಂದೆಯ ಜನರ ತಂಡ ಆ ಪ್ರದೇಶಬಿಟ್ಟು ಬೇರೆಡೆಗೆ ಹೊರಡುತ್ತದೆ. ಜಮೀನಿನಲ್ಲಿ ತಿಥಿ ಕಾರ್ಯ ನಡೆಯುವಾಗಲೇ ಜಮೀನನ್ನು ನೋಡಿಕೊಂಡು ಹೋಗಲು ಪೇಟೆಯಿಂದ 'ಸೇಟು' ಬರುತ್ತಾನೆ. ಇದ್ಯಾವುದರ ಅರಿವಿಲ್ಲದೇ ಕುರಿಮಂದೆಯ ಜನರೊಂದಿಗೆ ಹೊರಟ 'ಗಡ್ದಪ್ಪ' ತಿಥಿಕಾರ್ಯದಲ್ಲಿ ತೊಡಗಿದ್ದ ಜನರ ಕಣ್ಣಿಗೆ ಬೀಳುತ್ತಾನೆ. 'ಸೆಂಚುರಿಗೌಡ'ನ ಹಿರಿಯಮಗ ಆತನೇ ಆಗಿರುವುದರಿಂದ ತಿಥಿ ಕಾರ್ಯಗಳು ಅವನಿಂದಲೇ ನಡೆಯಬೇಕೆಂದು ಆತನನ್ನು ಹೊತ್ತುಕೊಂಡು ಕರೆತರಲಾಗುತ್ತದೆ. ಅದು 'ಸೇಟು' ಕಣ್ಣಿಗೆ ಬಿದ್ದು 'ತಮ್ಮಣ್ಣ'ನ ತಂದೆ ಇನ್ನೂ ಬದುಕಿರುವುದಾಗಿಯೂ ಮತ್ತು 'ತಮ್ಮಣ್ಣ'ನ ಜಮೀನು ಮಾರಲು ಸುಳ್ಳು ಮರಣಪ್ರಮಾಣ ಪತ್ರ ಮಾಡಿಸಿರುವುದು ತಿಳಿದುಹೋಗುತ್ತದೆ. ಆತ 'ತಮ್ಮಣ್ಣ'ನಿಗೆ ಬೈದು ಹೊರಟುಹೋಗುತ್ತಾನೆ. 'ಗಡ್ದಪ್ಪ'ನ ಕೈಯಲ್ಲಿ ತಿಥಿ ಕಾರ್ಯ ನಡೆಸುತ್ತಾರೆ. ಮತ್ತೊಂದೆಡೆ ಮನೆಯಲ್ಲಿ 'ಅಭಿ' ಮತ್ತು 'ಕಾವೇರಿ' ದೈಹಿಕವಾಗಿ ಸೇರುತ್ತಾರೆ. ಜಮೀನು ಮಾರಾಟದಿಂದ ಬರುತ್ತಿದ್ದ ಲಕ್ಷ ಲಕ್ಷ ಹಣ ಕೈತಪ್ಪಿದ್ದಕ್ಕಾಗಿ 'ತಮ್ಮಣ್ಣ' ಕೋಪಗೊಂಡು 'ಗಡ್ಡಪ್ಪ'ನನ್ನು ಹಿಗ್ಗಾಮುಗ್ಗಾ ನಿಂದಿಸುತ್ತಾನೆ. ಇದೆಲ್ಲಾ ನಡೆದರೂ ಸ್ಥಿತಪ್ರಜ್ಞನಂತೆ ಉಳಿಯುವ ಗಡ್ಡಪ್ಪ ಇದೆಲ್ಲವನ್ನೂ ಎಲ್ಲರನ್ನೂ ಬಿಟ್ಟು ರಾತ್ರಿ ಒಬ್ಬನೇ ಎಲ್ಲೋ ಕೂತು ಸಣ್ಣ ಬೆಂಕಿ ಹಚ್ಚಿಕೊಂಡು ಕೂತಿರುವ ದೃಶ್ಯದೊಂದಿಗೆ ಸಿನೆಮಾ ಕೊನೆಗೊಳ್ಳುತ್ತದೆ.

ಪ್ರಶಸ್ತಿ ಮನ್ನಣೆಗಳು

[ಬದಲಾಯಿಸಿ]

ಇದುವರೆಗೂ (ಜೂನ್ 2016) ಸುಮಾರು 13 ಪ್ರತಿಷ್ಠಿತ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಿನಿಮೋತ್ಸವಗಳಲ್ಲಿ ಪ್ರದರ್ಶನಗೊಂಡಿರುವ ‘ತಿಥಿ’, ಒಟ್ಟು 15 ಪ್ರಶಸ್ತಿಗಳನ್ನು ಪಡೆದುಕೊಂಡಿದೆ.

  • ೬೩ ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ೨೦೧೫-ಪ್ರಾದೇಶಿಕ ಚಲನಚಿತ್ರ ವಿಭಾಗ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಕನ್ನಡ ಚಲನಚಿತ್ರ [] []
  • ಬೆಂಗಳೂರಿನ ಅಂತರರಾಷ್ಟ್ರೀಯ ಸಿನಿಮೋತ್ಸವದಲ್ಲಿ ಪ್ರದರ್ಶನ.
  • ಸ್ವಿಟ್ಜರ್‌ರ್ಲೆಂಡ್‌ನ ಪ್ರತಿಷ್ಠಿತ ‘ಲೊಕಾರ್ನೊ ಅಂತರರಾಷ್ಟ್ರೀಯ ಚಿತ್ರೋತ್ಸವ’ದಲ್ಲಿ ಎರಡು ಪ್ರಶಸ್ತಿಗಳು[]
  • ೨೦೧೫ ನೇ ಸಾಲಿನ ರಾಜ್ಯಚಲನಚಿತ್ರ ಪ್ರಶಸ್ತಿ-ಪ್ರಥಮ ಅತ್ಯುತ್ತಮ ಚಿತ್ರ [], ಅತ್ಯುತ್ತಮ ಪೋಷಕ ನಟಿ-ಪೂಜಾ.ಎಸ್.ಎಮ್,ಅತ್ಯುತ್ತಮ ಸಂಭಾಷಣೆಕಾರ-ಈರೇಗೌಡ
  • 19ನೇ ಶಾಂಘೈ ಅಂತರರಾಷ್ಟ್ರೀಯ ಚಿತ್ರೋತ್ಸವದ ‘ಏಷ್ಯಾ ಹೊಸ ಪ್ರತಿಭೆ ಪ್ರಶಸ್ತಿ’ ವಿಭಾಗದಲ್ಲಿ ಅತ್ಯುತ್ತಮ ಚಿತ್ರ ಮತ್ತು ಅತ್ತುತ್ತಮ ಕಥೆ ಪ್ರಶಸ್ತಿ []

ಉಲ್ಲೇಖಗಳು

[ಬದಲಾಯಿಸಿ]

ಹೊರಕೊಂಡಿಗಳು

[ಬದಲಾಯಿಸಿ]