ಸಾಧನಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಾಧನಾ ಶಿವದಾಸಾನಿ
ಸಹಿ ಇರುವ ಸಾಧನಾ ಅವರ ಚಿತ್ರ
ಜನನಟೆಂಪ್ಲೇಟು:ಜನನದ ತಾರೀಕು
ಮರಣಟೆಂಪ್ಲೇಟು:ಮರಣದ ತಾರೀಕು ೨೦೧೫
ರಾಷ್ಟ್ರೀಯತೆಭಾರತೀಯ
ಉದ್ಯೋಗಚಿತ್ರನಟಿ
ಜೀವನ ಸಂಗಾತಿಆರ್.ಕೆ. ನಯ್ಯರ್ (ಪತಿ)

ಜೀವನ[ಬದಲಾಯಿಸಿ]

ಸಾಧನಾ ೧೯೪೧ರಲ್ಲಿ ಸಿಂಧಿ ಮನೆತನದಲ್ಲಿ ಜನಿಸಿದರು. ಪ್ರಸಿದ್ಧ ಚಿತ್ರನಟಿ ಬಬಿತಾ ಅವರ ತಂದೆ ಹರಿ ಶಿವದಾಸಾನಿ ಅವರು ಸಾಧನಾ ಅವರ ಚಿಕ್ಕಪ್ಪ. ಭಾರತದ ವಿಭಜನೆಯಾದಾಗ ಇವರ ಕುಟುಂಬ ಕರಾಚಿಯಿಂದ ವಲಸೆ ಬಂದು ಮುಂಬಯಿಯಲ್ಲಿ ನೆಲೆಸಿತು. ಮುಂಬಯಿನ ಆಕ್ಸಿಲಿಯಮ್ ಕಾನ್ವೆಂಟ್ ಮತ್ತು ಜೈಹಿಂದ್ ಕಾಲೇಜಿನಲ್ಲಿ ಸಾಧನಾ ತಮ್ಮ ಶಿಕ್ಷಣ ಪೂರೈಸಿದರು. ತಂದೆಯ ಸಹಾಯದಿಂದ ಅವರು ಚಲನಚಿತ್ರರಂಗವನ್ನು ಪ್ರವೇಶಿಸಿದರು. ರಾಜಕಪೂರ್ ಅವರ ಶ್ರೀ ೪೨೦ ಎಂಬ ಚಿತ್ರದಲ್ಲಿ "ಮುಡ್ ಮುಡ್ ಕೇ ನ ದೇಖ್" ಎಂಬ ಹಾಡಿನಲ್ಲಿ ಆಕೆ ನರ್ತಕಿಯರ ಸಮೂಹದಲ್ಲಿ ಒಬ್ಬರಾಗಿ ಕಾಣಿಸಿಕೊಂಡರು. ಮುಂದೆ ಇದೇ ನಟಿ ಹಿಂದಿ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚಿನ ಸಂಭಾವನೆ ಪಡೆಯುತ್ತಿದ್ದ ನಾಯಕಿಯಾದರು. "ಲವ್ ಇನ್ ಶಿಮ್ಲಾ" ಚಿತ್ರದ ಸಹಾಯಕ ನಿರ್ದೇಶಕರಾದ ಆರ್.ಕೆ. ನಯ್ಯರ್ ಅವರನ್ನು ಸಾಧನಾ ಮದುವೆಯಾದರು. ಅವರಿಗೆ ಮಕ್ಕಳಿರಲಿಲ್ಲ. ಥೈರಾಯ್ಡ್ ಗ್ರಂಥಿಯ ತೊಂದರೆಯಿಂದ ಅವರ ಕಣ್ಣಿನಲ್ಲಿ ದೋಷ ಕಾಣಿಸಿಕೊಂಡಿತು. ಒಂದು ಕಾಲದಲ್ಲಿ ಅತ್ಯಂತ ರೂಪಸಿ ಎಂದು ಹೆಸರಾಗಿದ್ದ ಸಾಧನಾ ಈಗ ತಮ್ಮ ಛಾಯಾಚಿತ್ರ ತೆಗೆಸಲು ನಿರಾಕರಿಸುತ್ತಿದ್ದರು. ೨೫ ಡಿಸೆಂಬರ್ ೨೦೧೫ರಂದು ಆಕೆ ಮುಂಬಯಿ ನಗರದಲ್ಲಿ ತಮ್ಮ ೭೪ನೇ ವಯಸ್ಸಿನಲ್ಲಿ ದೀರ್ಘ ಕಾಲದ ಅನಾರೋಗ್ಯದ ನಂತರ ತೀರಿಕೊಂಡರು.

ಚಿತ್ರನಟಿಯಾಗಿ[ಬದಲಾಯಿಸಿ]

ಸಾಧನಾ ಅವರು ೧೯೫೮-೧೯೭೮ ಅವಧಿಯಲ್ಲಿ ಪ್ರಸಿದ್ಧಿಯ ಉತ್ತುಂಗಕ್ಕೇರಿದ ಹಿಂದಿ ಚಿತ್ರನಟಿ. ಅಂದಿನ ಪ್ರಸಿದ್ಧ ಹಾಲಿವುಡ್ ತಾರೆ ಆಡ್ರೆ ಹೆಪ್ ಬರ್ನ್ ಅವರಿಂದ ಪ್ರಭಾವಿತರಾಗಿ ಸಾಧನಾ ಅವರು ತಮ್ಮ ಮುಂಗೂದಲನ್ನು ವಿಶಿಷ್ಟರೀತಿಯಲ್ಲಿ ಕತ್ತರಿಸಿಕೊಂಡು ಹಣೆಯ ಮೇಲೆ ಹರಡಿಕೊಳ್ಳುವ ರೀತಿಯಲ್ಲಿ ವಿನ್ಯಾಸ ಮಾಡಿಕೊಳ್ಳುತ್ತಿದ್ದರು. ಅವರ ಚಿತ್ರವೊಂದು ಸ್ಕ್ರೀನ್ ಪತ್ರಿಕೆಯಲ್ಲಿ ಪ್ರಕಟವಾದಾಗ ಅದು ಎಲ್ಲರ ಗಮನ ಸೆಳೆಯಿತು. ಲವ್ ಇನ್ ಶಿಮ್ಲಾ ಎಂಬ ಚಿತ್ರದಲ್ಲಿ ಅವರು ಜಾಯ್ ಮುಖರ್ಜಿ ಅವರ ಜೊತೆ ನಾಯಕಿಯಾಗಿ ಕಾಣಿಸಿಕೊಂಡರು. ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಗೆದ್ದಿತು. ಆನಂತರ ಪ್ರಸಿದ್ಧ ನಿರ್ದೇಶಕ ಬಿಮಲ್ ರಾಯ್ ಅವರ "ಪರಖ್" ಎಂಬ ಚಿತ್ರದಲ್ಲಿ ನಾಯಕಿಯಾಗಿ ಪಾತ್ರ ವಹಿಸಿದರು. ದೇವ್ ಆನಂದ್ ಅವರ "ಹಮ್ ದೋನೋ" ಚಿತ್ರ ಅವರಿಗೆ ಅಪಾರ ಪ್ರಸಿದ್ಧಿ ತಂದುಕೊಟ್ಟಿತು. ದೇವ್ ಆನಂದ್ ಜೊತೆ "ಅಸಲಿ ನಕಲಿ" ಎಂಬ ಇನ್ನೊಂದು ಚಿತ್ರದಲ್ಲಿ ಕಾಣಿಸಿಕೊಂಡರು. "ಏಕ್ ಮುಸಾಫಿರ್ ಏಕ್ ಹಸೀನಾ" ಎಂಬ ಚಿತ್ರದಲ್ಲಿ ಜಾಯ್ ಮುಖರ್ಜಿ ಅವರೊಂದಿಗೆ ನಟಿಸಿದರು. "ಮೇರೇ ಮೆಹಬೂಬ್" ಎಂಬುದು ಅವರ ಪ್ರಥಮ ವರ್ಣಚಿತ್ರ. ೧೯೬೪ರಲ್ಲಿ ಬಿಡುಗಡೆಯಾದ "ವೋಹ್ ಕೌನ್ ಥೀ" ಎಂಬ ಕೌತುಕಮಯ ಚಿತ್ರದಲ್ಲಿ ಸಾಧನಾ ದ್ವಿಪಾತ್ರದಲ್ಲಿ ಕಾಣಿಸಿಕೊಂಡರು. ಈ ಚಿತ್ರದಲ್ಲಿ ಲತಾ ಮಂಗೇಶ್ಕರ್ ಹಾಡಿದ "ನೈನಾ ಬರಸೇ" ಎಂಬ ಹಾಡು ಜನಪ್ರಿಯವಾಯಿತು. ಮುಂದೆ ಇನ್ನೆರಡು ಕುತೂಹಲಭರಿತ ಚಿತ್ರಗಳಲ್ಲಿ ನಟಿಸಿದರು ("ಮೇರಾ ಸಾಯಾ" ಮತ್ತು "ಅನಿತಾ".) ಲತಾ ಮಂಗೇಶ್ಕರ್ ಅವರ ಗಾಯನ ಮತ್ತು ಸಾಧನಾ ಅವರ ನಟನೆ ಮತ್ತು ನರ್ತನ ಇವುಗಳ ಜೋಡಿ ಜನರನ್ನು ಸೆಳೆಯಿತು. ಜಾಯ್ ಮುಖರ್ಜಿ, ದೇವ್ ಆನಂದ್, ರಾಜೇಂದ್ರ ಕುಮಾರ್, ಮನೋಜ್ ಕುಮಾರ್ ಮೊದಲಾದ ಅನೇಕ ಪ್ರಸಿದ್ಧ ನಾಯಕ ನಟರೊಂದಿಗೆ ಅವರು ನಟಿಸಿದರು. ಅವರು ಚಿತ್ರಗಳಲ್ಲಿ ಬಳಸುತ್ತಿದ್ದ ಉಡುಗೆ-ತೊಡುಗೆಗಳು ಫ್ಯಾಶನ್ ಆದವು. ಅವರ ಕೇಶವಿನ್ಯಾಸವನ್ನೂ ಯುವತಿಯರು ಅನುಸರಿಸುತ್ತಿದ್ದರು.

ಹಿಂದಿ ಚಿತ್ರರಂಗದ ಅಪೂರ್ವ ಮಹಿಳೆಯರು - (ಬಲದಿಂದ ಎಡಕ್ಕೆ) ಸಾಧನಾ, ಹೆಲೆನ್, ವಹೀದಾ ರೆಹಮಾನ್, ನಂದಾ (೨೦೧೦)

ಮನ್ನಣೆಗಳು[ಬದಲಾಯಿಸಿ]

ಅವರ ಚಿತ್ರಗಳು ಗಲಾಪೆಟ್ಟಿಗೆಯಲ್ಲಿ ಹಣ ಗಳಿಸಿ ಆಕೆ ಪ್ರಸಿದ್ಧಿಯ ಔನ್ನತ್ಯವನ್ನು ಏರಿದರೂ ಅವರಿಗೆ ಯಾವುದೇ ದೊಡ್ಡ ಪ್ರಶಸ್ತಿಗಳು ಸಲ್ಲಲಿಲ್ಲ. ಐ‌ಐ‌ಎಫ್‌ಏ ಅವರಿಗೆ ಜೀವಮಾನದ ಕೊಡುಗೆಗಳಿಗಾಗಿ ಪ್ರಶಸ್ತಿ ನೀಡಿ ಗೌರವಿಸಿತು (೨೦೦೨).

"https://kn.wikipedia.org/w/index.php?title=ಸಾಧನಾ&oldid=1044786" ಇಂದ ಪಡೆಯಲ್ಪಟ್ಟಿದೆ