ವಿಷಯಕ್ಕೆ ಹೋಗು

ಫ್ರೀಡ್ರಿಕ್ ಗೆಂಟ್ಸ್‌

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Friedrich von Gentz

ಫ್ರೀಡ್ರಿಕ್ ಗೆಂಟ್ಸ್‌ (2 ಮೇ 1764 – 9 ಜೂನ್ 1832) ಒಬ್ಬ ಜರ್ಮನ್ ರಾಜಕೀಯ ಪತ್ರಿಕೋದ್ಯಮಿ; ನೆಪೋಲಿಯನನ ಮತ್ತು ಫ್ರೆಂಚ್ ಕ್ರಾಂತಿ ತತ್ತ್ವಗಳ ವಿರುದ್ಧ ಬರೆದ ಲೇಖನಗಳಿಂದಾಗಿಯೂ ಆಸ್ಟ್ರಿಯದ ರಾಜಕಾರಣಿ ಮೆಟರ್ನಿಕನ ಆಪ್ತಸಲಹೆಗಾರನೆಂದಾಗಿಯೂ ಪ್ರಸಿದ್ಧನಾಗಿದ್ದವ.

ಬಾಲ್ಯ ಮತ್ತು ಜೀವನ

[ಬದಲಾಯಿಸಿ]

ಜನನ 1764ರ ಮೇ 2ರಂದು, ಬ್ರೆಸ್ಲೌದಲ್ಲಿ. 1779ರಲ್ಲಿ ಇವನ ತಂದೆ ಪ್ರಷ್ಯದ ಟಂಕಸಾಲೆಯ ಮಹಾನಿರ್ದೇಶಕನಾಗಿ ನೇಮಕವಾದ್ದರಿಂದ ತಂದೆತಾಯಿಯರೊಂದಿಗೆ ಗೆಂಟ್ಸನೂ ಬರ್ಲಿನ್‍ಗೆ ಹೋದ. ಶಾಲೆಯಲ್ಲಿ ಅಭ್ಯಾಸ ಮುಗಿಸಿದ ಮೇಲೆ ಕೋನಿಗ್ಸ್‌ಬರ್ಗ್ ವಿಶ್ವವಿದ್ಯಾಲಯದಲ್ಲಿ ನ್ಯಾಯಶಾಸ್ತ್ರ ಅಭ್ಯಸಿಸಿದ. ಅಲ್ಲಿ ಇವನು ಇಮಾನ್ಯುಯೆಲ್ ಕ್ಯಾಂಟ್‍ನಿಂದ ಪ್ರಭಾವಿತನಾದ. 1785ರಲ್ಲಿ ಇವನು ಬರ್ಲಿನ್ನಲ್ಲಿ ಪ್ರಷ್ಯನ್ ಸರ್ಕಾರದ ಸೇವೆಗೆ ಸೇರಿ 1793ರ ವೇಳೆಗೆ ಯುದ್ಧದ ಇಲಾಖೆಯಲ್ಲಿ ಸಲಹೆಗಾರನಾದ.

ರಾಜಕೀಯ ನಿಲುವು

[ಬದಲಾಯಿಸಿ]

ಫ್ರೆಂಚ್ ಕ್ರಾಂತಿಯನ್ನು ಸಮರ್ಥಿಸಿ ಗ್ರಂಥ ಬರೆದವರಲ್ಲಿ ಗೆಂಟ್ಸನೂ ಒಬ್ಬ. ಆದರೆ ಕ್ರಮೇಣ ಇವನ ನಿಲುವು ಬದಲಾಯಿತು. ಕ್ಯಾಂಟನ ನ್ಯಾಯ ಸಿದ್ಧಾಂತಗಳು, ಇಂಗ್ಲಿಷ್ ನ್ಯಾಯಶಾಸ್ತ್ರ- ಇವು ಇವನ ಮನಸ್ಸನ್ನು ಪರಿವರ್ತಿಸಿದವು. ಬರ್ಕನ ರಿಫ಼್ಲೆಕ್ಷನ್ಸ್‌ ಆನ್ ದ ರೆವಲ್ಯೂಷನ್ ಇನ್ ಫ್ರಾನ್ಸ್‌ (1793) ಎಂಬ ಕೃತಿಯನ್ನು ಇವನು ಅನುವಾದಿಸಿ ವ್ಯಾಖ್ಯಾನದೊಂದಿಗೆ ಪ್ರಕಟಿಸಿದ. ಇದರಿಂದ ಯುರೋಪಿನಲ್ಲಿ ಇವನ ಹೆಸರು ಪ್ರಸಿದ್ಧವಾಯಿತಲ್ಲದೆ ಇವನ ಜೀವನಗತಿ ಮಾರ್ಪಟ್ಟಿತು. ತದನಂತರ ಇವನು ರಾಜಕೀಯ ವಿಚಾರಗಳ ಬಗ್ಗೆಯೇ ಬರೆಯಲು ತೀರ್ಮಾನಿಸಿದ. ಕ್ರಾಂತಿಕಾರಿ ಸಿದ್ಧಾಂತಗಳ ವಿರುದ್ಧ ಹೋರಾಟ ಮುಂದುವರಿಸಿದ. ಕ್ರಮೇಣ ತನ್ನದೇ ಆದ, ಅತಿ ಸಂಪ್ರದಾಯಬದ್ಧವಾದ ರಾಷ್ಟ್ರ ಪರಿಕಲ್ಪನೆಯೊಂದನ್ನು ಸೂತ್ರೀಕರಿಸಿದ (1798-99). ಪ್ರಜಾಸಾರ್ವಭೌಮತ್ವ, ಮಾನವ ಹಕ್ಕುಗಳು, ರಾಜಕೀಯ ಸಮತೆ, ಸ್ವಾತಂತ್ರ್ಯ ಮುಂತಾದ ಪರಿಕಲ್ಪನೆಗಳನ್ನು ವಿರೋಧಿಸಿದ.

ಲೇಖಕನಾಗಿ

[ಬದಲಾಯಿಸಿ]

1794-97ರ ನಡುವೆ ಗೆಂಟ್ಸ್‌ ಅನೇಕ ಕ್ರಾಂತಿವಿರೋಧಿ ಕೃತಿಗಳನ್ನು ಭಾಷಾಂತರಿಸಿ ವ್ಯಾಖ್ಯಾನಗಳೊಂದಿಗೆ ಪ್ರಕಟಿಸಿದ. ಈತ ಆರಂಭಿಸಿದ ನೊಮೆಡಾಯಿಷೆ ಮೋನಾಟ್ಶ್ರಿಫ್ಟ್‌ ಎಂಬ ಪತ್ರಿಕೆ ಒಂದು ವರ್ಷದಲ್ಲಿ ಕೊನೆಗೊಂಡಿತು. 1799-1800ರ ರಲ್ಲಿ ಪ್ರಷ್ಯನ್ ಸರ್ಕಾರದ ಧನಸಹಾಯದಿಂದ ಎರಡು ವರ್ಷಕಾಲ ಪ್ರಕಟವಾದ ಹಿಸ್ಟೋರಿಶೆಸ್ ಜರ್ನಲ್‍ನ ಸಂಚಿಕೆಗಳಲ್ಲಿ ಗೆಂಟ್ಸ್‌ ಜರ್ಮನ್ ರಾಜಕೀಯ ಕುರಿತು ಬರೆದು ರಾಜಕೀಯ ಪತ್ರಿಕೋದ್ಯಮವನ್ನು ಪರಾಕಾಷ್ಠೆಗೆ ಒಯ್ದ.

ಕ್ರಾಂತಿಯ ಪ್ರೇರಣೆಗಳು, ಅದರ ವಿವಿಧ ಹಂತಗಳು, ಕ್ಷಿಪ್ರಾಕ್ರಮಣ ಮತ್ತು ಅದರ ಪರ್ಯವಸಾನ, ಅದರ ಸಾಮಾಜಿಕ ಮುಖಗಳು-ಇವನ್ನೆಲ್ಲ ವಿಶ್ಲೇಷಿಸುವುದರೊಂದಿಗೆ ಕ್ರಾಂತಿಯನ್ನು ಇವನು ಬಲವಾಗಿ ವಿರೋಧಿಸಿದ. ಕ್ರಾಂತಿವಾದಿ ಫ್ರಾನ್ಸಿನ ವಿರುದ್ಧವಾಗಿ ಯುದ್ಧ ಮಾಡುವುದು ಕೂಡ ಸರಿಯೆಂದು ಇವನು ವಾದಿಸಿದ. ಇವನ ಈ ನಿಲುವಿನಿಂದಾಗಿ ಅನೇಕ ವಾದವಿವಾದಗಳುಂಟಾದುವು. ಪ್ರಷ್ಯದ ತಟಸ್ಥ ನಿಲುವನ್ನು ಇವನು ಟೀಕಿಸಿದ. ಪ್ರಷ್ಯ-ಆಸ್ಟ್ರಿಯಗಳು ಪರಸ್ಪರವಾಗಿ ವಿರೋಧಿಸುವ ಬದಲು ಒಂದಾಗಿ ಫ್ರಾನ್ಸನ್ನೆದುರಿಸಬೇಕೆಂಬುದು ಇವನ ವಾದವಾಗಿತ್ತು. ಇಂಗ್ಲೆಂಡು ಯುರೋಪಿನ ಸ್ವಾತಂತ್ರ್ಯರಕ್ಷಕ ದೇಶವೆಂದು ಹೊಗಳಿದ. ಇವನ ಈ ಎಲ್ಲ ಭಾವನೆಗಳಿಂದಾಗಿ ಪ್ರಷ್ಯದಲ್ಲಿ ಇವನಿಗಿದ್ದ ಪ್ರಭಾವಯುತ ಸ್ಥಾನ ನಷ್ಟವಾಯಿತು. ತಾನಾಗಿ ಆರಿಸಿಕೊಂಡ ರಾಜಕೀಯ ಪತ್ರಿಕೋದ್ಯಮವನ್ನು ಇವನು ಬಿಡಲು ಸಿದ್ಧನಿರಲಿಲ್ಲ. ಆದುದರಿಂದ ಜೀವನದಲ್ಲಿ ಇವನು ಬಿಕ್ಕಟ್ಟನ್ನೆದುರಿಸಬೇಕಾಯಿತು. ವೈಮಾರಿನಲ್ಲಿ ನೆಲೆಸಲು ಈತ ಮಾಡಿದ ಯತ್ನ ವಿಫಲವಾಯಿತು. ಆಸ್ಟ್ರಿಯದಿಂದ ಇವನಿಗೆ ಒಂದು ಔಪಚಾರಿಕ ಸ್ಥಾನ ಲಭ್ಯವಾಯಿತು. ಇದರಿಂದ ಇವನಿಗೆ ಸಾಮಾಜಿಕ ಮರ್ಯಾದೆಯೂ, ಆರ್ಥಿಕ ಭದ್ರತೆಯೂ ಲಭ್ಯವಾಯಿತು. ರಾಜಕೀಯ ಲೇಖಕನಾಗಿ ಸ್ವತಂತ್ರನಾಗಿ ಮುಂದುವರಿಯುವುದು ಸಾಧ್ಯವಾಯಿತು.

ಹೋರಾಟ

[ಬದಲಾಯಿಸಿ]

ಲಂಡನಿಗೊಮ್ಮೆ ಗೆಂಟ್ಸ್‌ ಭೇಟಿ ನೀಡಿದಾಗ (1802) ಅಲ್ಲಿ ಇವನಿಗೆ ಭವ್ಯ ಸ್ವಾಗತ ದೊರಕಿತು. ಇಂಗ್ಲೆಂಡು ಈತನಿಗೆ ಆರ್ಥಿಕ ನೆರವು ನೀಡಿತು. ವಿಯೆನ್ನಾದಲ್ಲಿ ಇವನು ತನ್ನ ಕೆಲಸ ಮುಂದುವರಿಸಿದ. ಆಸ್ಟ್ರಿಯದ ವಿದೇಶಾಂಗ ನೀತಿಯನ್ನು ಪರಿವರ್ತಿಸಬೇಕೆಂಬ ಈತನ ಪ್ರಯತ್ನ ಯಶಸ್ವಿಯಾಗಲಿಲ್ಲ. ನೆಪೋಲಿಯನ್ ವಿರುದ್ಧವಾದ ಚಳವಳಿಯನ್ನು ಇವನು ಮುಂದುವರಿಸಿದ. ತನ್ನ ಕಾಲದ ರಾಜಕೀಯ ಸ್ಥಿತಿಗತಿಗಳನ್ನು ಕುರಿತು ಅನೇಕ ಲೇಖನಗಳನ್ನು ಬರೆದ. 1805ರಲ್ಲಿ ಆಸ್ಟ್ರಿಯಕ್ಕೆ ಸೋಲಾದಾಗ ಗೆಂಟ್ಸ್‌ ಬೊಹಿಮಿಯಕ್ಕೂ ಅಲ್ಲಿಂದ ಡ್ರೆಸ್ಡೆನ್‍ಗೂ ಹೋದ. 1806ರಲ್ಲಿ ಪ್ರಷ್ಯ ಕುಸಿಯಿತು. ಗೆಂಟ್ಸ್‌ ಡ್ರೆಸ್ಡೆನನ್ನೂ ಬಿಟ್ಟು ಪ್ರಾಗಿಗೋ ಟಿಪ್ಲಿಟ್ಜ್‌ಗೋ ಹೋದ. ನೆಪೋಲಿಯನನ ವಿರುದ್ಧವಾಗಿ ಅಭಿಪ್ರಾಯವನ್ನು ಸಂಘಟಿಸಲು ಯತ್ನಿಸಿದ. ಜರ್ಮನಿಯ ಮತ್ತು ಯುರೋಪಿನ ಪುನರ್ರಚನೆಯ ಬಗ್ಗೆ ಚಿಂತೆ ಹರಿಸಿದ. ಸ್ವಲ್ಪ ಕಾಲಾನಂತರ ಇವನು ವಿಯೆನ್ನಕ್ಕೆ ಹಿಂದಿರುಗಿದ. ಆಸ್ಟ್ರಿಯವನ್ನು ಮುಂದಿಟ್ಟುಕೊಂಡು ಜರ್ಮನಿಯನ್ನು ನೆಪೋಲಿಯನನ ವಿರುದ್ಧ ಎತ್ತಿ ನಿಲ್ಲಿಸುವ ಕ್ರಮಕ್ಕೆ ಗೆಂಟ್ಸ್‌ ನೆರವು ನೀಡಿದ. 1809ರಲ್ಲಿ ಆಸ್ಟ್ರಿಯದ ವಿಮೋಚನಾ ಹೋರಾಟ ವಿಫಲಗೊಂಡಿತು. ಗೆಂಟ್ಸ್‌ ನಿರಾಶೆಯಿಂದ ಇಂಗ್ಲೆಂಡಿಗೆ ಹೋಗಲು ಯತ್ನಿಸಿದ. ಅದೂ ಸಾಧ್ಯವಾಗಲಿಲ್ಲ. ಕೊನೆಗೆ ನೆಪೋಲಿಯನನ ಪತನವಾಯಿತು. ಆದರೆ ಗೆಂಟ್ಸನಿಗೆ ಅಷ್ಟರಿಂದಲೇ ಸಮಾಧಾನವಾಗಲಿಲ್ಲ. ಯುರೋಪಿನಲ್ಲಿ ರಾಜಕೀಯ ಸುವ್ಯವಸ್ಥೆ ಏರ್ಪಡಬೇಕೆಂಬುದು ಇವನ ಇಚ್ಛೆಯಾಗಿತ್ತು. ಫ್ರಾನ್ಸನ್ನು ಎರಡನೆಯ ದರ್ಜೆಯ ರಾಷ್ಟ್ರವನ್ನಾಗಿ ಪರಿವರ್ತಿಸುವುದು ಇವನಿಗೆ ಒಪ್ಪಿಗೆಯಿರಲಿಲ್ಲ. ಇದರಿಂದ ಜರ್ಮನಿಗೆ ಇವನ ಮೇಲೆ ಕೋಪ ಬಂತು. ಗೆಂಟ್ಸ್‌ ಸಮಯಸಾಧಕನೆಂದು ಅದು ಇವನ ಹೆಸರಿಗೆ ಕಳಂಕ ಹಚ್ಚತೊಡಗಿತು. ಆದರೂ ವಿಯೆನ್ನ, ಆಕೆನ್, ಟ್ರಾಪೌ, ಲೇಬಾಕ್ ಮತ್ತು ವೆರೋನ ಕಾಂಗ್ರೆಸ್‍ಗಳ ಕಾರ್ಯದರ್ಶಿಯಾಗಿದ್ದ ಮೆಟರ್ನಿಕನ ಅನುಗ್ರಹದಿಂದಾಗಿ ಮತ್ತು ತನ್ನ ಸ್ವಂತ ವ್ಯಕ್ತಿತ್ವದಿಂದಾಗಿ ಗೆಂಟ್ಸ್‌ ಪ್ರಭಾವಶಾಲಿಯಾಗಿಯೇ ಉಳಿದ.

ಅಂತ್ಯ

[ಬದಲಾಯಿಸಿ]

1815ರ ಅನಂತರದ ರಾಷ್ಟ್ರೀಯ ಮತ್ತು ಉದಾರವಾದಿ ಚಳವಳಿಗಳಿಗೆ ಇವನ ವಿರೋಧವಿತ್ತು. ಆದ್ದರಿಂದ ಇವನು ರಾಜಕೀಯ ಪ್ರತಿಗಾಮಿಯೆಂಬ ಆಪಾದನೆಗೆ ಗುರಿಯಾದ. ಅಖಿಲ ಯುರೋಪ್ ಒಕ್ಕೂಟಕ್ಕೆ ಇವು ವಿರೋಧಿಯೆಂಬುದು ಇವನ ಭಾವನೆ. ಜರ್ಮನಿಯ ಆರಂಭದ ಉದಾರವಾದಿ ಧೋರಣೆಯನ್ನು ಇವನು ಕ್ರಾಂತಿಕಾರಿಯೆಂದು ಭಾವಿಸಿದ್ದ. ಸೈನಿಕ ಪ್ರವೇಶನಗಳನ್ನು ಇವನು ವಿರೋಧಿಸಿದ. ಮೆಟರ್ನಿಕನ ನೆರವೂ ಇವನಿಗೆ ತಪ್ಪಿ ಹೋಯಿತು. 1832ರಲ್ಲಿ ಗೆಂಟ್ಸ್‌ ನಿಧನನಾದ. ಇವನ ಮರಣಾನಂತರವೂ ರಾಷ್ಟ್ರೀಯವಾದಿಗಳು ಮತ್ತು ಉದಾರವಾದಿಗಳು ಇವನನ್ನು ಟೀಕಿಸುವುದನ್ನು ನಿಲ್ಲಿಸಲಿಲ್ಲ.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: