ಅಲಂಕರಣ ಕಲೆ
ಭಾರತದ ಅರವತ್ತನಾಲ್ಕು ಕಲೆಗಳಲ್ಲೊಂದಾಗಿದ್ದು ಮನುಷ್ಯನ ಕಲಾ ಪ್ರವೃತ್ತಿಯ ಪ್ರಾಚೀನತೆಯ ದ್ಯೋತಕವಾಗಿದೆ. ಉದರಂಭರಣ, ನಿದ್ರೆ, ಜೀವಸಂರಕ್ಷಣೆ, ಸಂತತಿಪರಿಪಾಲನೆಗಳಂಥ ಅತ್ಯಗತ್ಯಗಳನ್ನೂ ಆವರಿಸಿ, ಅವನ್ನೂ ಮೀರಿ ಮಾನವನ ಸೌಂದರ್ಯಾಭಿಲಾಷೆ ಕೆಲಸ ಮಾಡುತ್ತಿರುವುದನ್ನು ಆದಿ ಮಾನವನ ಗುಹೆ, ಬಳಕೆಯ ವಸ್ತುಗಳು, ಅಲ್ಲಿನ ಚಿತ್ರಕಲೆಗಳು ಸ್ಪಷ್ಟಪಡಿಸುತ್ತವೆ. ಆದಿಮಾನವನ ನಡೆನುಡಿಗಳಲ್ಲಿ ಕಾವ್ಯಾಂಶ ಸ್ಫುರಿಸಿರುವಂಥ, ಅವನ ದೈನಂದಿನ ಜೀವನದಲ್ಲಿ ಕಲೆ ಪ್ರವೇಶಿಸಿರುವುದನ್ನು, ತತ್ತ್ವದರ್ಶನ ಮೂಡಿರುವುದನ್ನು ಆಜ್ಟೆóಕ್, ಇಂಕ, ಮಾಯ, ನಾರ್ಸ್, ದ್ರಾವಿಡ ಮೊದಲಾದ ಬಹು ಪ್ರಾಚೀನ ಸಂಸ್ಕೃತಿಗಳಲ್ಲಿ ಕಾಣುತ್ತೇವೆ. ಕಾಲ ಕಳೆದಂತೆ ಸಂಸ್ಕೃತಿ, ನಾಗರಿಕತೆಗಳು ಬದಲಾದಂತೆ, ಪರಿಸರ ಮಾರ್ಪಾಟಾದಂತೆ ಕಾಲ, ದೇಶ, ಸನ್ನಿವೇಶಗಳ ಪ್ರಚೋದನೆಗಳಿ ಗನುಗುಣವಾಗಿ ಅಲಂಕರಣ ಕಲೆ ವ್ಯತ್ಯಾಸವಾಗುತ್ತ ಬಂದಿದೆ. 20ನೆಯ ಶತಮಾನದಲ್ಲಿ ಇದು ವ್ಯಾಪಾರೀ ಉದ್ಯಮವಾಗಿ ಬೃಹದಾಕಾರದಲ್ಲಿ ಬೆಳೆದಿದೆ. ವ್ಯಕ್ತಿಯ ದೇಹಾಲಂಕರಣಕ್ಕೆ ಸಂಬಂಧಿಸಿದಂತೆ ಅಂಗರಾಗಗಳ ಬಳಕೆಯನ್ನು ನೋಡಬಹುದು ಅಂಗರಾಗಗಳು, ಅಂಗರಾಗಶಾಸ್ತ್ರ. ಪರಿಸರದ ಅಲಂಕರಣಕ್ಕೆ ಸಂಬಂಧಿಸಿದಂತೆ ಗೃಹಾಲಂಕರಣ ಮೊದಲು ಬರುತ್ತದೆ. ಸುಲಭ ಖರ್ಚಿನಲ್ಲಿ ಕಟ್ಟಿದವಾದರೂ ಜಪಾನೀಯರ ಮನೆಗಳು ಬಹು ಸುಂದರವಾಗಿರುತ್ತವೆಂದು ಪ್ರಸಿದ್ಧವಾಗಿವೆ. ಶುಚಿ, ಸೌಂದರ್ಯದ ಮುಖ್ಯ ಭಾಗ. ಅಲಂಕರಣ ಅದಕ್ಕೆ ಅಡ್ಡಿಬರಬಾರದು. ಅತ್ಯಲಂಕರಣವೂ ದೋಷವೆ. ಹಳ್ಳಿಯ ಗುಡಿಸಲುಗಳನ್ನು ನೋಡಿದಾಗ ಅಲ್ಲಿನವರ ಬಡತನ ಎದ್ದು ಕಂಡರೂ ಗುಡಿಸಲ ಶುಭ್ರತೆ ಮತ್ತು ಅಲಂಕಾರ ಯಾರನ್ನಾದರೂ ಬೆರಗುಗೊಳಿಸುತ್ತದೆ ಗೃಹಾಲಂಕರಣ. ಅನಂತರ ರಂಗೋಲಿ, ಸಾರಣೆಕಾರಣೆಗಳು ಬರುತ್ತವೆ. ಜ್ಯಾಮಿತಿಯ ಸಾಮಾನ್ಯ ನಿಯಮಗಳನ್ನನುಸರಿಸಿ ಭಾರತೀಯ ಹೆಣ್ಣುಮಕ್ಕಳು ಮನೆಯ ಮುಂದಿನ ಅಂಗಳದಲ್ಲಿ, ಹಸೆಯ ಜಾಗದಲ್ಲಿ, ಆರತಿ ತಟ್ಟೆಗಳಲ್ಲಿ ಬಿಡಿಸುವ ಚಿತ್ರಗಳು ಬಹು ಸುಂದರವಾಗಿರುತ್ತವೆ. ರಂಗವಲ್ಲಿ. ಇನ್ನು ವಿಶೇಷ ಸಂದರ್ಭಗಳಾದ ಉತ್ಸವಾದಿಗಳಲ್ಲಿ ಸಾಮೂಹಿಕವಾಗಿ ಜನ ಕೈಗೊಳ್ಳುವ ಅಲಂಕರಣದ ಕೆಲಸ ಗಮನಾರ್ಹವಾದುದು. ಮಂಟಪಾಲಂಕರಣ, ವಾಹನಾದಿಗಳ ಅಲಂಕರಣ, ಮೆರವಣಿಗೆಯ ಅಲಂಕರಣ, ತಳಿರು ತೋರಣಗಳು, ಅವುಗಳ ವೈವಿಧ್ಯ-ಇವು ಒಂದೊಂದರಲ್ಲೂ ಜನತೆಯ ಸದಭಿರುಚಿ ಎದ್ದು ಕಾಣುವಂತಿರುತ್ತದೆ ಉತ್ಸವಗಳು. ಇವೆಲ್ಲಕ್ಕಿಂತ ಭಾರತೀಯರು ಹೂಗಳನ್ನು ಬಳಸಿಕೊಂಡಿರುವ ರೀತಿ ಪ್ರಶಂಸನೀಯವಾದುದು. ಕಟ್ಟುವ ಹಾರಗಳಲ್ಲಿ ಮುಡಿಯುವ ವೈಖರಿಯಲ್ಲಿ ಚಿತ್ರ ವಿಚಿತ್ರ ಬಗೆಗಳನ್ನು ಕಾಣಬಹುದು. ಉದ್ಯಾನಗಾರಿಕೆಯಲ್ಲಿ ಹೂಗಿಡಗಳ ವ್ಯವಸಾಯ, ಮೇಜು ಅಲಂಕರಣದಲ್ಲಿ ಹೂಗಳ ಬಳಕೆ ಈಚೆಗೆ ಪ್ರಮುಖವಾಗುತ್ತಿವೆ. ಹೂಗಳ ಅಲಂಕರಣ ಭಾರತೀಯರಲ್ಲಿ ಅಲಂಕರಣದ ಪ್ರಚೋದನೆ ಲೌಕಿಕವಾಗಿರುವುದಕ್ಕಿಂತ ಹೆಚ್ಚಾಗಿ ಧಾರ್ಮಿಕವೂ ಮತೀಯವೂ ಆಗಿದೆ. ಹಬ್ಬ ಹರಿದಿನಗಳಲ್ಲಿ, ನಿತ್ಯದ ದೇವರ ಪುಜೆಯಲ್ಲಿ, ದೇವಸ್ಥಾನಗಳಲ್ಲಿ ಅನೇಕ ಅಲಂಕರಣಗಳನ್ನು ನಾವು ಕಾಣುತ್ತೇವೆ ಹಬ್ಬ. ಮಠಾಧಿಪತಿಗಳ ಮತ್ತು ರಾಜಮಹಾರಾಜರ ಆಸ್ಥಾನಗಳು ಅಲಂಕಾರದ ವೈಭವಕ್ಕೆ ನಿದರ್ಶನಗಳಾಗಿವೆ. ಈಚೆಗೆ ಸಾರ್ವಜನಿಕ ವಿಶೇಷ ಸಭೆಗಳಲ್ಲಿ ನಾವಿದನ್ನು ಕಾಣಬಹುದು. ವಾಸ್ತು ಶಿಲ್ಪದಲ್ಲಿ ಹಿಂದಿಗೂ ಇಂದಿಗೂ ಖಚಿತವಾದ ವ್ಯತ್ಯಾಸ ಕಂಡು ಬರುತ್ತದೆ. ಅಲಂಕರಣ ವಾಸ್ತವಿಕತೆ ಹಾಗೂ ಉಪಯುಕ್ತತೆಗೆ ದಾರಿಮಾಡಿಕೊಟ್ಟಿರುವುದು ಇಲ್ಲಿ ಗಮನಾರ್ಹವಾದ ಅಂಶ. ನಗರಾಲಂಕರಣ ದಲ್ಲೂ ಈ ವಿಷಯ ಸ್ಪಷ್ಟವಾಗಿದೆ. ವ್ಯಾಪಾರೋದ್ಯಮವಂತೂ ಮನುಷ್ಯನ ಈ ಸೌಂದರ್ಯಾಭಿ ಲಾಷೆಯ ಮನೋಧರ್ಮವನ್ನು ಅರ್ಥಮಾಡಿಕೊಂಡು ಅದಕ್ಕೆ ಆಹಾರವಿತ್ತು ತನ್ನ ಸರಕುಗಳನ್ನು ಮಾರಾಟಮಾಡುತ್ತಿರುವ ವಿಷಯ ಎಲ್ಲರಿಗೂ ತಿಳಿದದ್ದೇ ಆಗಿದೆ. ಅನೇಕ ವಿಶ್ವವಿದ್ಯಾಲಯಗಳಲ್ಲಿ ಅಲಂಕರಣ, ಅದರ ಶಾಸ್ತ್ರೀಯ ಅಧ್ಯಯನ ನಡೆಯುತ್ತಿದೆ.