ಅರ್ಥಮೀಮಾಂಸೆ
ಅರ್ಥವೆಂಬುದು ಸಂಸ್ಕೃತದಲ್ಲಿ ನಾನಾರ್ಥಕ ಶಬ್ದ. ಶಬ್ದವಾಚ್ಯಾರ್ಥ, ಹಣ, ವಸ್ತು ಇತ್ಯಾದಿಗಳನೆಲ್ಲ ಒಳಗೊಳ್ಳುತ್ತದೆ. ಆದರೆ ದಾರ್ಶನಿಕರ ಬಹುಮುಖ ವಿವೇಚನೆಗೆ ವಿಷಯವೆಂದರೆ ಶಬ್ದಗಳಿಂದ ಪ್ರತೀತವಾಗುವ ಅರ್ಥ ಮಾತ್ರ. ಶಬ್ದ, ಅರ್ಥ-ಇವುಗಳ ಸ್ವರೂಪವೇನು, ಸಂಬಂಧವೇನು, ರಹಸ್ಯವೇನು, ಭಾಷೆಯಲ್ಲಿ ವಾಕ್ಯಾರ್ಥಪ್ರತೀತಿಯಿಂದ ಶಬ್ದಾರ್ಥಪ್ರತೀತಿಯೋ ಇಲ್ಲವೆ ಶಬ್ದಾರ್ಥದ್ವಾರಾ ವಾಕ್ಯಾರ್ಥ ಜ್ಞಾನವೋ ಎಂಬ ಪ್ರಶ್ನೆಗಳು ಭಾರತೀಯ ದಾರ್ಶನಿಕರಿಂದ ಮತ್ತೆ ಮತ್ತೆ ವಿಮರ್ಶಿಸಲ್ಪಟ್ಟಿವೆ; ಹಲವಾರು ಸಿದ್ಧಾಂತಗಳಿಗೆ ಅವಕಾಶವನ್ನಿತ್ತಿವೆ. ಅವನ್ನಿಲ್ಲಿ ಸಂಗ್ರಹವಾಗಿ ನಿರೂಪಿಸಲಾಗಿದೆ. ವ್ಯಾಕರಣಶಾಸ್ತ್ರದಲ್ಲಿ ಶಬ್ದಾರ್ಥಮೀಮಾಂಸೆಗೆ ಅಗ್ರಸ್ಥಾನವನ್ನು ಕಲ್ಪಿಸಿದ ಯಶಸ್ಸು ವಾಕ್ಯಪದೀಯವೆಂಬ ಉದ್ಗ್ರಂಥವನ್ನು ಬರೆದ ಭರ್ತೃಹರಿಯದು. ಇವನ ತತ್ತ್ವಜ್ಞಾನದಲ್ಲಿ ಶಬ್ದವೆಂಬುದು ಅಖಂಡ, ಅವಿನಾಶಿ, ಶಾಶ್ವತಬ್ರಹ್ಮತತ್ರ್ವವೇ; ಅರ್ಥವೆಲ್ಲ ಶಬ್ದದ ವಿವರ್ತ ಅಥವಾ ರೂಪಾಂತರವೇ. ಕಿವಿಗೆ ಬೀಳುವ ಶಬ್ದಾಂಶಗಳು-ಉದಾಹರಣೆಗೆ ಹಸು ಎನ್ನುವಾಗ ಕೇಳಿಸುವ ಹಕಾರ, ಅಕಾರ, ಸಕಾರ ಉಕಾರಗಳು, ಅವುಗಳ ಉಚ್ಚಾರಣೆಯ ನಾದದಲ್ಲಿ ಏರಿಳಿತಗಳು ಇತ್ಯಾದಿ-ಇವು ಸ್ವಯಂ ಖಂಡ ಖಂಡವೂ ನಶ್ವರವೂ ಆಗಿದ್ದು ಇವುಗಳ ಹಿಂದಿರುವ ಅಖಂಡಶಬ್ದ ರೂಪದ ಅಭಿವ್ಯಂಜಕಗಳಾಗಿವೆ. ಆ ಅಖಂಡ ಶಬ್ದರೂಪ ಅನಾದಿ ಹಾಗೂ ಅನಂತ. ಅರ್ಥವನ್ನು ತಟ್ಟನೆ ಬೆಳಗುವುದೇ ಅದರ ಸ್ವಭಾವಸಿದ್ಧ ಲಕ್ಷಣ. ಈ ಅರ್ಥ ಜ್ಯೋತಿಯನ್ನೇ ವೈಯಾಕರಣರು ಸ್ಫೋಟವೆನ್ನುತ್ತಾರೆ. ಸ್ಫೋಟಕ್ಕೆ ಅಭಿವ್ಯಂಜಕವಾದ ಶಬ್ದವೇ ಧ್ವನಿ. ಅರ್ಥಸ್ಫೂರ್ತಿ ಇಲ್ಲವೇ ಸ್ಫೋಟ ಧ್ವನಿಯಿಂದ ವ್ಯಂಗ್ಯವೇ ಹೊರತು ವಾಚ್ಯವಲ್ಲವೆನ್ನುವುದು ಸಿದ್ಧಾಂತ. ವಸ್ತುತಃ ಒಂದು ಅರ್ಥ ಪ್ರತೀತಿಗೆ ಇಡಿಯ ವಾಕ್ಯವೇ ವ್ಯಂಜಕವಾದ್ದರಿಂದ ಭರ್ತೃಹರಿಯ ಸಿದ್ಧಾಂತದಲ್ಲಿ ಅಖಂಡಾರ್ಥಕ್ಕೆ ವಾಕ್ಯವೇ ಬೇಕು. ವಾಕ್ಯಸ್ಫೋಟದಲ್ಲಿ ಭಾಗವಹಿಸುವ ಪದಸ್ಫೋಟ ವರ್ಣಸ್ಫೋಟಗಳನ್ನೂ ಸಡಿಲವಾದ ಭಾಷೆಯಲ್ಲಿ ಸ್ಫೋಟವೆನ್ನಬಹುದು. ವೈಯಾಕರಣರ ಈ ಸ್ಫೋಟವಾದ ಮಿಕ್ಕ ದಾರ್ಶನಿಕರ ಖಂಡನೆಗೇ ಹೆಚ್ಚು ಗುರಿಯಾದುದನ್ನು ನೋಡುತ್ತೇವೆ. ಸ್ಫೋಟವಿರೋಧಿಗಳಲ್ಲಿ ಅಗ್ರಸ್ಥಾನ ಮೀಮಾಂಸಕರಿಗೆ ಸಲ್ಲುತ್ತದೆ. ಅಪೌರುಷೇಯವೆಂದು ವೇದವಾಕ್ಯವನ್ನಂಗೀಕರಿಸಿ ವಿವರಿಸಹೊರಟ ಮೀಮಾಂಸಕರಿಗೂ ವೇದಶಬ್ದವೆಲ್ಲ ನಿತ್ಯವೇ. ಶಬ್ದಗಳ ಅರ್ಥವಾದರೂ ನಿತ್ಯವೇ ನಿಜ. ನಿತ್ಯವಾದುದೇ ಶಬ್ದ. ಅನಿತ್ಯ ಅಪಶಬ್ದ. ನಿತ್ಯವೇ ಅರ್ಥ, ಅನಿತ್ಯವಾದುದು ಅಪಾರ್ಥ. ಇದು ಅವರ ನಿಲುವು. ಆದರೂ ತತ್ತ್ವಚಿಂತನೆಯಲ್ಲಿ ಅವರು ಹೆಚ್ಚು ವಾಸ್ತವತಾವಾದಿಗಳು. ಸ್ಫೋಟವೆಂಬ ಅವಾಸ್ತವ ಕಲ್ಪನೆಯಿಲ್ಲದೆಯೇ ಶಬ್ದಾರ್ಥಪ್ರತೀತಿಯನ್ನು ವಿವರಿಸುವುದು ಸುಕರವೆಂದು ಅವರ ಆಶಯ. ವಾಕ್ಯಾಂತರ್ಗತ ಶಬ್ದಗಳಿಗೆ ತಂತಮ್ಮ ಅರ್ಥವಿರುವುದೂ ಇವು ವಾಕ್ಯದಲ್ಲಿ ಪ್ರಯುಕ್ತವಾದಾಗ ಅನ್ಯೋನ್ಯ ಅನ್ವಯ ಸಂಬಂಧವನ್ನು ಪಡೆಯುವುದೂ ಕಡೆಗೆ ಇಡಿಯ ವಾಕ್ಯಾರ್ಥಜ್ಞಾನವನ್ನು ಮಾಡಿ ಕೊಡುವುದೂ ಅನುಭವಸಿದ್ಧವೆಂದು ಕುಮಾರಿಲಭಟ್ಟರೇ ಮುಂತಾದ ಪೂರ್ವಮೀಮಾಂಸಕರ ಸಿದ್ಧಾಂತ. ಇದಕ್ಕೆ ಅಭಿಹಿತಾನ್ವಯವಾದವೆಂದೂ ಹೆಸರಿದೆ. ಮೀಮಾಂಸಕರಲ್ಲೇ ಇನ್ನೊಂದು ಸಂಪ್ರದಾಯವನ್ನು ಆರಂಭಿಸಿದ ಪ್ರಭಾಕರಭಟ್ಟನ ಪ್ರಕಾರ ಪದಾರ್ಥಜ್ಞಾನದ ಅನಂತರ ವಾಕ್ಯಾರ್ಥ ಜ್ಞಾನ ಬರುವುದಿಲ್ಲ; ವಾಕ್ಯಾರ್ಥ ಜ್ಞಾನದ ಮೂಲಕವೇ ಪದಾರ್ಥಪ್ರತೀತಿಯುಂಟಾ ಗುತ್ತದೆ. ಭಾಷೆಯನ್ನು ಮೊತ್ತ ಮೊದಲು ಕಲಿಯಲಾರಂಭಿಸುವ ಬಾಲಕ ಹಿರಿಯರ ವಾಕ್ಯ ಪ್ರಯೋಗಗಳ ಸಂಸ್ಕಾರದಿಂದ ಈ ಶಬ್ದಕ್ಕೆ ಈ ಅರ್ಥವೆಂದು ಗ್ರಹಿಸುತ್ತಾನೆಂದು ಪ್ರಭಾಕರನ ವಾದ. ಇದಕ್ಕೆ ಅನ್ವಿತಾಭಿದಾನವಾದವೆಂದೂ ಹೆಸರಿದೆ. ಕುಮಾರಿಲನಿಗೆ ವಾಕ್ಯಾರ್ಥ ಪ್ರತೀತಿಯನ್ನು ವಿವರಿಸಲು ತಾತ್ಪರ್ಯವೆಂಬ ಶಕ್ತಿಯನ್ನು ಕಲ್ಪಿಸಬೇಕಾಗುತ್ತದೆ. ಪ್ರಭಾಕರನ ಅನುಯಾಯಿಗಳಿಗೆ ಅದನ್ನು ಬಿಟ್ಟರೂ ನಡೆಯುತ್ತದೆ. ವೇದಾಂತಿಗಳು ಕೂಡ ಸ್ಫೋಟನಿರಾಕರಣೆಯಲ್ಲಿ ಮೀಮಾಂಸಕರನ್ನು ಅನುಸರಿಸುತ್ತಾರೆ. ಶಬ್ದ-ಅರ್ಥ ಇವುಗಳ ಸಂಬಂಧವನ್ನು ವಿವರಿಸಲು ಅಭಿಧಾ, ಲಕ್ಷಣಾ ಮತ್ತು ವ್ಯಂಜನಾ ಎಂಬ ಶಬ್ದಶಕ್ತಿಗಳನ್ನು (ಅಥವಾ ಶಬ್ದವೃತ್ತಿ ಅಥವಾ ಶಬ್ದ ವ್ಯಾಪಾರ) ಉಲ್ಲೇಖಿಸುವುದು ಭಾರತೀಯ ದಾರ್ಶನಿಕರ ವೈಶಿಷ್ಟ್ಯ. ಒಂದು ಭಾಷೆಯನ್ನಾಡುವ ಸಮಾಜದಲ್ಲಿ ಬಹು ಜನರು ಒಪ್ಪಿರುವ ಮುಖ್ಯಾರ್ಥವನ್ನು ಬೋಧಿಸುವ ಶಬ್ದ ಶಕ್ತಿಯೇ ಅಭಿಧೆ. ಈ ಅರ್ಥಕ್ಕೆ ವಾಚ್ಯಾರ್ಥ, ಅಭಿಧೇಯ, ಸಂಕೇತಿತಾರ್ಥ ಎಂದೂ ನಾಮಾಂತರಗ ಳುಂಟು. ಈ ಶಕ್ತಿ ಈಶ್ವರನ ಇಚ್ಛಾಧೀನವೆಂದು ಮತ್ತೆ ತಾರ್ಕಿಕರಲ್ಲಿ ಕೆಲವರು ಹೇಳಿದರೆ, ಪುರುಷರ ಇಚ್ಛಾಧೀನವೆಂದು ಮತ್ತೆ ಕೆಲವರು ಹೇಳುತ್ತಾರೆ. ಮುಖ್ಯಾರ್ಥ ಅನ್ವಿತವಾಗದಂತಿದ್ದ ಪ್ರಯೋಗದಲ್ಲಿ ಅದಕ್ಕೆ ಸಂಬಂಧಿಸಿದ ಅಥವಾ ಹೋಲಿಕೆಯಿರುವ ಮತ್ತೊಂದು ಅರ್ಥವನ್ನು ಗ್ರಹಿಸಬೇಕಾಗುತ್ತದೆ. ಇಲ್ಲಿ ಕಾಣುವುದು ಲಕ್ಷಣಾಶಕ್ತಿ. ಈ ಹುಡುಗನೊಬ್ಬ ಕತ್ತೆಯೆಂಬಲ್ಲಿ ಕತ್ತೆಯೆಂದರೆ ದಡ್ಡನೆಂಬುದು ಲಕ್ಷ್ಯಾರ್ಥ. ಇವೆರಡನ್ನು ಪ್ರಾಯಿಕವಾಗಿ ಸಕಲ ದಾರ್ಶನಿಕರೂ ಒಪ್ಪುತ್ತಾರೆ. ಆದರೆ ವಕ್ತೃವಿನ ವೈಯಕ್ತಿಕ ಚಿತ್ತವೃತ್ತಿಗಳನ್ನೂ ಶ್ರೋತೃವಿನಲ್ಲುದಯಿಸುವ ಚಿತ್ತವೃತ್ತಿವಿಶೇಷಗಳನ್ನೂ ಇವೆರಡೂ ವಿವರಿಸಲಾರವು. ಇವುಗಳಿಂದಲೇ ಕಾವ್ಯಭಾಷೆ ತುಂಬಿರುವುದನ್ನು ರಸಿಕರು ಬಲ್ಲರು. ಆದ್ದರಿಂದ ಆನಂದವರ್ಧನನೇ ಮುಂತಾದ ಆಲಂಕಾರಿಕರು ವ್ಯಂಜಕತ್ವ ಅಥವಾ ಧ್ವನಿ ಎಂಬ ಮೂರನೆಯ ಶಬ್ದ ಶಕ್ತಿಯನ್ನು ಒಪ್ಪಬೇಕೆಂದು ಪ್ರಬಲವಾಗಿ ಸಾಧಿಸಿದ್ದಾರೆ. ಹೀಗೆ ಅರ್ಥದಲ್ಲಿ ವಾಚ್ಯಾರ್ಥ, ಲಕ್ಷ್ಯಾರ್ಥ, ವ್ಯಂಗ್ಯಾರ್ಥಗಳೆಂಬ ಮೂರು ಪ್ರಕಾರಗಳನ್ನು ಭಾರತೀಯರು ಗುರುತಿಸಿದ್ದಾರೆ. ಬೌದ್ಧ ದಾರ್ಶನಿಕರು ಕ್ಷಣಿಕವಾದಿಗಳಾದ್ದರಿಂದ ಇದಾವುದನ್ನೂ ಒಪ್ಪುವಂತಿಲ್ಲ. ಒಂದು ಶಬ್ದಕ್ಕೆ ಅದು ಇನ್ನೊಂದಿಲ್ಲವೆನ್ನುವುದೇ ಅರ್ಥವೆಂದು ಅವರು ವಾದಿಸುತ್ತಾರೆ. ಇದಕ್ಕೆ ಅಪೋಹವಾದವೆಂದು ಹೆಸರು. ಹಸುವೆಂದರೆ ಆಡಲ್ಲದ್ದು, ಕುರಿಯಲ್ಲದ್ದು, ಇತ್ಯಾದಿಯೇ ಎಂದು ಇವರ ವಿವರಣೆ. ಸಂಕೇತ ಅಥವಾ ಅಭಿಧಾಶಕ್ತಿ ಯಾವ ಯಾವ ರೀತಿಯ ಶಬ್ದಗಳಿಗೆ ಹೇಗೆ ಅನ್ವಯಿಸುತ್ತದೆಂಬ ಪ್ರಶ್ನೆಗೆ ಮೀಮಾಂಸಕರು ಎಲ್ಲ ಶಬ್ದಗಳಿಗೂ ಜಾತಿ ಅಥವಾ ಸಾಮಾನ್ಯವೇ (ಮನುಷ್ಯನಲ್ಲಿ ಮನುಷ್ಯತ್ವ, ಕಪಿಯಲ್ಲಿ ಕಪಿತ್ವ ಇತ್ಯಾದಿ) ಮುಖ್ಯಾರ್ಥವೆನ್ನುತ್ತಾರೆ. ಜಾತಿಬೋಧೆಯಲ್ಲಿ ವ್ಯಕ್ತಿಬೋಧೆ ಅಂತರ್ಗತವೆಂದು ಅವರ ಅಭಿಪ್ರಾಯ. ಜಾತಿ, ಗುಣ, ಕ್ರಿಯೆ, ದ್ರವ್ಯ-ನಾಲ್ಕೂ ಮುಖ್ಯಾರ್ಥ ವಿಷಯಗಳೆಂದು ವೈಯಾಕರಣರ ಮತ. ಜಾತಿ, ಆಕೃತಿ, ವ್ಯಕ್ತಿ-ಈ ಮೂರು ಶಬ್ದಬೋಧದಲ್ಲಿ ಉಂಟೆಂದು ಪ್ರಾಚೀನ ನೈಯಾಯಿಕರ ಹೇಳಿಕೆ.