ವಿಷಯಕ್ಕೆ ಹೋಗು

ಅಕಲಂಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಕಲಂಕ

ಅಕಲಂಕರು ಸು.7-8ನೆಯ ಶತಮಾನ. ಜೈನ ನ್ಯಾಯ ಹಾಗೂ ತರ್ಕಶಾಸ್ತ್ರಗಳಿಗೆ ಅಮೂಲ್ಯವಾದ ಕೊಡುಗೆ ಸಲ್ಲಿಸಿರುವ ದಾರ್ಶನಿಕರು.[] ಜನ್ಮಸ್ಥಳ ಮಾನ್ಯಖೇಟ ಎಂದು ಅಧಿಕಾಂಶ ವಿದ್ವಾಂಸರು ಒಪ್ಪಿದ್ದಾರೆ. ತಾವು ಲಘುಹವ್ಯನೆಂಬ ರಾಜನ ಮಗನೆಂದು ತಮ್ಮ ‘ರಾಜವಾರ್ತಿಕ’ದ ಪ್ರಥಮ ಅಧ್ಯಾಯದಲ್ಲಿ ಹೇಳಿಕೊಂಡಿದ್ದಾರೆ.

ಅಧ್ಯಯನ

[ಬದಲಾಯಿಸಿ]

ಆಚಾರ್ಯ ಸಮಂತಭದ್ರರು ತರ್ಕ ಹಾಗೂ ಅನೇಕಾಂತವೇದಗಳಿಗೆ ಹಾಕಿದ ಭದ್ರ ಅಡಿಪಾಯದ ಮೇಲೆ ಇವರು ನ್ಯಾಯದ ಉತ್ತುಂಗ ಹಾಗೂ ಸರ್ವಾಂಗೀಣ ಭವನವನ್ನು ಕೌಶಲ್ಯಪುರ್ಣವಾಗಿ ನಿರ್ಮಿಸಿದ ತೀಕ್ಷ್ಣಬುದ್ಧಿಯ ತಾರ್ಕಿಕರು. ಆ ಕಾಲದಲ್ಲಿ ಒಂದೆಡೆ ಅದ್ವೈತವಾದಿ ಭರ್ತೃಹರಿ, ಪ್ರಸಿದ್ಧ ಮೀಮಾಂಸಕ ಕುಮಾರಿಲ, ನ್ಯಾಯ ನಿಷ್ಣಾತ ಉದ್ಯೋತಕರ ಪ್ರಭುತಿ ಮುಂತಾದ ವೈದಿಕ ವಿದ್ವಾಂಸರು ತಮ್ಮ ಮತವನ್ನು ಸಮರ್ಥವಾಗಿ ಮಂಡಿಸುತ್ತಿದ್ದರು. ಮತ್ತೊಂದೆಡೆ ಧರ್ಮಕೀರ್ತಿ ಹಾಗೂ ತರ್ಕಪಟುಗಳೂ ವ್ಯಾಖ್ಯಾಕಾರರೂ ಆಗಿದ್ದ ಅವರ ಶಿಷ್ಯರಾದ ಪ್ರಜ್ಞಾಕರ, ಧರ್ಮೋತ್ತರ ಮುಂತಾದ ಬೌದ್ಧ ತಾರ್ಕಿಕರು ತಮ್ಮ ಮತದ ನಿಷ್ಣಾತ ಪ್ರತಿಪಾದಕರಾಗಿದ್ದರು. ಅದು ಶಾಸ್ತ್ರಾರ್ಥ ಹಾಗೂ ಶಾಸ್ತ್ರ ನಿರ್ಮಾಣದ ಪರಾಕಾಷ್ಠೆಯ ಕಾಲವಾಗಿತ್ತು. ಪ್ರತಿಯೊಬ್ಬ ದಾರ್ಶನಿಕನೂ ತನ್ನ ಮತವನ್ನು ಹೇಗಾದರೂ ಸಮರ್ಥಿಸಿ, ಪ್ರತಿಷ್ಠಾಪಿಸಿ ಮತ್ತೊಂದು ಪಕ್ಷವನ್ನು ನಿರಾಕರಿಸಿ ವಿಜಯಿಯಾಗಲು ಪ್ರಯತ್ನಿಸುತ್ತಿದ್ದರು. ಕ್ಷಣಿಕವಾದ, ನೈರಾತ್ಮ್ಯವಾದ, ಶೂನ್ಯವಾದ, ವಿಜ್ಞಾನವಾದ ಮುಂತಾದ ವಾದಗಳು ಮಂಡಿಸಲ್ಪಡುತ್ತಿದ್ದವು. ಪರಿಸ್ಥಿತಿಯನ್ನು ಅಭ್ಯಾಸ ಮಾಡಿದ ಅಕಲಂಕರು ಎಲ್ಲ ದರ್ಶನಗಳನ್ನೂ ಸೂಕ್ಷ್ಮವಾಗಿ, ಆಳವಾಗಿ ಅಧ್ಯಯನ ಮಾಡಿದರು. ಇದಕ್ಕಾಗಿ ಕಾಂಚೀ, ನಾಲಂದಾ ಮುಂತಾದ ಪ್ರಸಿದ್ಧ ವಿದ್ಯಾಪೀಠಗಳಲ್ಲಿ ಪ್ರಚ್ಛನ್ನ ವೇಷದಿಂದ ವಿದ್ಯಾರ್ಥಿಯಾಗಿ ಸೇರಿದರು. ಇತರ ಪಕ್ಷಗಳವರು ಸ್ಯಾದ್ವಾದ ಅಥವಾ ಅನೇಕಾಂತ ವಾದದ ಮೇಲೆ ಮಾಡಿದ ಆಕ್ಷೇಪಣೆಗಳನ್ನು ತಾರ್ಕಿಕವಾಗಿ ಸಮರ್ಥವಾಗಿ ನಿವಾರಿಸಿ, ಸ್ಪಷ್ಟಗೊಳಿಸಿದರು, ಹಾಗೂ ಹೊಸ ಸಾಹಿತ್ಯವನ್ನೂ ನಿರ್ಮಾಣ ಮಾಡಿದರು. ರಾಷ್ಟ್ರಕೂಟ, ಪಲ್ಲವ ಮುಂತಾದ ರಾಜವಂಶಗಳವರ ರಾಜಸಭೆಗಳಲ್ಲಿ ವಾದಮಾಡಿ ಜೈನಧರ್ಮದ ಪತಾಕೆಯನ್ನು ಹಾರಿಸಿದರು. ಸೋಂನೆಯ ದೇಶೀಯ ಗಣದ ಆಚಾರ್ಯರಾಗಿದ್ದರು.

ಕೃತಿಗಳು

[ಬದಲಾಯಿಸಿ]

ಅಕಲಂಕರು ರಚಿಸಿರುವ ಮಹತ್ವದ ಕೃತಿಗಳಲ್ಲಿ ನಾಲ್ಕು ಕೃತಿಗಳು ನ್ಯಾಯಶಾಸ್ತ್ರವನ್ನು ಕುರಿತದ್ದೇ ಆಗಿವೆ. ಜೈನ ನ್ಯಾಯದ ಮಧ್ಯಕಾಲೀನದ ಸೃಷ್ಟಿಕರ್ತರೆಂದು ಇವರು ಖ್ಯಾತಿ ಪಡೆದಿದ್ದಾರೆ. ಇತಿಹಾಸಕಾರರು ಆ ಕಾಲವನ್ನು ಅಕಲಂಕ ಮಾರ್ಗವೆಂದು ಕರೆದಿದ್ದಾರೆ. ಅಕಲಂಕರ ಕೃತಿಗಳು 8.

  • ನ್ಯಾಯವಿನಿಶ್ಚಯ (ಸ್ವೋಪಜ್ಞ ವೃತ್ತಿ ಸಹಿತ): ಮೂಲ ರಚನೆಯ ಸ್ವತಂತ್ರ ಪ್ರತಿ ಲಭ್ಯವಿಲ್ಲ. ವಾದಿರಾಜ ಸೂರಿಗಳು ಈ ಕೃತಿಯ ಮೇಲೆ ಬರೆದಿರುವ ವಿವರಣ ಎಂಬ ಟೀಕಾ ಗ್ರಂಥ ಲಭ್ಯವಿದೆ. ಇದರಲ್ಲಿ ಪ್ರತ್ಯಕ್ಷ, ಅನುಮಾನ ಮತ್ತು ಪ್ರವಚನ ಎಂಬ ಮೂರು ಪ್ರಕರಣಗಳಿವೆ. ಬೌದ್ಧ, ಸಾಂಖ್ಯ, ನೈಯಮಿತರ ಪ್ರತ್ಯಕ್ಷದ ಲಕ್ಷಣಗಳನ್ನು ಖಂಡಿಸಿ ಅತೀಂದ್ರಿಯ ಪ್ರತ್ಯಕ್ಷದ ಲಕ್ಷಣವನ್ನು ವಿವರಿಸಿದ್ದಾರೆ. ಜೀವ ಮೊದಲಾದವುಗಳ ಸ್ವರೂಪವನ್ನು ವಿವೇಚಿಸಿ, ಚಾರ್ವಾಕ ಮುಂತಾದ ಮತಗಳ ವಿಮರ್ಶೆ ಮಾಡಿ, ಆರ್ಮಸತ್ಯ, ಮೋಕ್ಷದ ಮಾನ್ಯತೆ ಇತ್ಯಾದಿಗಳನ್ನು ಸಮಲೋಚಿಸಿದ್ದಾರೆ.
  • ಸಿದ್ಧಿವಿನಿಶ್ಚಯ : ಪ್ರತ್ಯಕ್ಷ ಸಿದ್ಧಿ, ಪ್ರಮಾಣಾಂತರ ಸಿದ್ಧಿ ಮತ್ತು ಜೀವ ಸಿದ್ಧಿ ಮೊದಲಾದ ಹನ್ನೆರಡು ಪ್ರಸ್ತಾವಗಳುಳ್ಳ ಕೃತಿ. ಮೂಲಕೃತಿ ಲಭ್ಯವಿಲ್ಲ. ಇದರ ಮೇಲೆ ಆಚಾರ್ಯ ಅನಂತವರ್ಮರ ವಿಶಾಲ ಟೀಕೆ ಉಪಲಬ್ಧವಿದೆ. ವಸ್ತುತತ್ತ್ವವನ್ನು ವಿಶ್ಲೇಷಣೆ ಮಾಡುತ್ತ ಅನೇಕಾಂತ ಸಿದ್ಧಾಂತವನ್ನು ಸಮರ್ಥಿಸಿ ಬೇರೆ ಬೇರೆ ದರ್ಶನಗಳ ಮಾನ್ಯತೆಯನ್ನು ಪ್ರಬಲವಾದ ಯುಕ್ತಿಗಳಿಂದ ಖಂಡಿಸಿದ್ದಾರೆ.
  • ಪ್ರಮಾಣ ಸಂಗ್ರಹ : ಇದರಲ್ಲಿ 9 ಪ್ರಸ್ತಾವಗಳಿವೆ ಇದರಲ್ಲಿ. (ಪ್ರಮಾಣ, ನಮ ಮತ್ತು ನಿಕ್ಷೇಪಗಳ ನಿರೂಪಣೆಯನ್ನು ಗಂಭೀರ ಹಾಗೂ ಪ್ರೌಢ ಶೈಲಿಯಲ್ಲಿ ನಿರೂಪಣೆ ಮಾಡಲಾಗಿದೆ). ಸೂತ್ರಾತ್ಮಕ ರಚನೆಗ್ರಂಥದ ವಿಷಯವೂ ಗಹನವಾಗಿದೆ. ಸ್ವೋಪಜ್ಞ ವಿವೃತ್ತಿಯೂ ಇದೆ. ಗದ್ಯ ಪದ್ಯಾತ್ಮಕವಾಗಿದೆ. ಈ ಕೃತಿಯ ಮೇಲೆ ಅನಂತ ವೀರ್ಯಕೃತ ಪ್ರಮಾಣ ಸಂಗ್ರಹ ಭಾಷ್ಯ ಉಪಲಬ್ಧವಿದೆ.
  • ಲಘೀಮ ಸ್ತ್ರಯ: ಪ್ರಮಾನ ಪ್ರವೇಶ, ನಯ ಪ್ರವೇಶ, ಪ್ರವಚನ ಪ್ರವೇಶ, ಎಂಬ ಹೆಸರಿನ ಮೂರು ಪ್ರಕರಣಗಳಿವೆ. ಇದರಲ್ಲಿ ಪ್ರತ್ಯಕ್ಷದ ಸ್ವತಂತ್ರ ಲಕ್ಷಣವನ್ನು ಸ್ಥಿರಗೊಳಿಸಿದ್ದಾರೆ. ತಾರ್ಕಿಕ ಒರೆಗಲ್ಲಿನಿಂದ ಕ್ಷಣಿಕವಾದದ ಖಂಡನೆ ಮಾಡಿದ್ದಾರೆ. ತರ್ಕದ ವಿಷಯ, ಸ್ವರೂಪ, ಉಪಯೋಗ ಮೊದಲಾದವುಗಳನ್ನು ಸ್ಥಿರಗೊಳಿಸಿದ್ದಾರೆ. ಆಚಾರ್ಯರೇ ಬರೆದ ವಿವೃತ್ತಿ ಎಂಬ ಹೆಸರಿನ ಟೀಕೆಯೂ ಇದೆ. 11ನೆಯ ಶತಮಾನದಲ್ಲಿ ಪ್ರಭಾಚಂದ್ರ ಆಚಾರ್ಯರು ಬರೆದ ಲಘೀಮ ಸ್ತ್ರಯಾಲಂಕಾರ ಎಂಬ ಹೆಸರಿನ ವಿಸ್ತಾರವಾದ ಟೀಕೆ ನ್ಯಾಯ ಕುಮುದ ಚಂದ್ರ ಎಂದು ಪ್ರಸಿದ್ಧವಾಗಿದೆ.
  • ಅಪ್ಪಶತಿ : ಸ್ವಾಮಿ ಸಮಂತಭದ್ರರ ದೇವಾಗಮ ಅಥವಾ ಆಪ್ರ ಮೀಮಾಂಸ ಕೃತಿಯ ಸಂಕ್ಷಿಪ್ತ ಗಂಭೀರ ವ್ಯಾಖ್ಯೆ. ಟೀಕೆಯ ಪರಿಮಾಣ 800 ಶ್ಲೋಕಗಳು. ಪುರ್ವಾಪರ ವಿಚಾರ ವಿಮರ್ಶೆಯೊಡನೆ ತರ್ಕಬದ್ಧವಾದ ಪ್ರತಿಭೆ ಇದರಲ್ಲಿ ಗೋಚರಿಸುತ್ತದೆ. ಈ ಟೀಕೆಯ ಮೇಲೆ ಆಚಾರ್ಯ ವಿದ್ಯಾನಂದರು ಎಂಟು ಸಾವಿರ ಶ್ಲೋಕ ಪರಿಮಾಣವುಳ್ಳ ಅಷ್ಟಸಹಸ್ರೀ ಎಂಬ ವಿಸ್ತಾರವಾದ ಟೀಕೆ ರಚಿಸಿದ್ದಾರೆ.
  • ತತ್ತ್ವಾರ್ಥ ರಾಜವಾರ್ತಿಕ : ಆಚಾರ್ಯ ಉಮಾಸ್ವಾಮಿಗಳ ತತ್ತ್ವಾರ್ಥ ಸೂತ್ರಕ್ಕೆ ಬರೆದ ಭಾಷ್ಯ. ತತ್ತ್ವಾರ್ಥಕ್ಕೆ ಸಂಬಂಧಿಸಿದ ಉಪಲಬ್ಧ ಟೀಕೆಗಳಲ್ಲಿ ಸರ್ವಶ್ರೇಷ್ಠವಾದುದು. ಅನೇಕಾಂತ ಸಿದ್ಧಾಂತ ಅನುಸರಿಸಲ್ಪಟ್ಟು ಸಂದರ್ಭೋಚಿತವಾಗಿ ಬೇರೆ ಬೇರೆ ದರ್ಶನಗಳಿಗೆ ಸಂಬಂಧಿಸಿದ ವಿಷಯಗಳ ಗಂಭೀರ ಚರ್ಚೆ ಇದೆ. ಭಾಷೆ ಸರಳ ಹಾಗೂ ಸರಸವಾಗಿದೆ.
  • ಸ್ವರೂಪ ಸಂಬೋಧನೆ : 25 ಪದ್ಯಗಳ ಚಿಕ್ಕ ಕೃತಿ. ಅನೇಕಾಂತ ಶೈಲಿಯಿಂದ ವಸ್ತುತತ್ತ್ವ ವಿವೇಚಿಸಲಾಗಿದೆ. ಕೆಲವು ವಿದ್ವಾಂಸರು ಇದನ್ನು ಆಚಾರ್ಯ ಮಹಾಸೇನರ ರಚನೆ ಎಂದು ಹೇಳುವರು.
  • ಅಕಲಂಕ ಸ್ತೋತ್ರ : 16 ಪದ್ಯಗಳುಳ್ಳ ಸ್ತೋತ್ರಗ್ರಂಥ. ಇದರಲ್ಲಿ ಮಹಾದೇವ, ಶಂಕರ, ವಿಷ್ಣು, ಬ್ರಹ್ಮ ಹಾಗೂ ಬುದ್ಧರ ಸಂಬಂಧದಲ್ಲಿ, ಬಳಕೆಯಲ್ಲಿರುವ ಮಾನ್ಯತೆಗಳನ್ನು ಸಮಾಲೋಚಿಸಿ ವೀತರಾಗ, ನಿಷ್ಕಲಂಕ, ಸರ್ವಜ್ಞ ಹಾಗೂ ಹಿತೋಪದೇಶಿ ಪರಮಾತ್ಮನ ಸ್ತುತಿ ಮಾಡಲಾಗಿದೆ.

ಕೊಡುಗೆ

[ಬದಲಾಯಿಸಿ]

ಅಕಲಂಕರ ತತ್ತ್ವಾರ್ಥ ಭಾಷ್ಯ ಮೊದಲಾದ ಕೃತಿಗಳು ಭಾರತೀಯ ದರ್ಶನ ಶಾಸ್ತ್ರದ ಬಹುಮೂಲ್ಯ ರತ್ನಗಳು. ಜೈನ ನ್ಯಾಯಕ್ಕೆ ಇವರು ನೀಡಿದ ರೂಪರೇಷೆ ಮತ್ತು ದಿಕ್ಕನ್ನು ಮುಂದಿನ ಎಲ್ಲ ಜೈನ ತಾರ್ಕಿಕರೂ ಅನುಸರಿಸಿದರು. ಸೂತ್ರರೂಪದಲ್ಲಿರುವ ಇವರ ಹೇಳಿಕೆಗಳನ್ನು ತಮ್ಮ ವಿಸ್ತಾರವಾದ ವಿವರಣೆಗಳಿಂದ ಹೆಚ್ಚು ಸ್ಪಷ್ಟಗೊಳಿಸಿದರು.

ಉಲ್ಲೇಖ

[ಬದಲಾಯಿಸಿ]
  1. Akalaṅka; Goyal, Devendra Kumar (2005-01-01). The Enlightened Vision of the Self. p. 1,2. ISBN 9788170272441.


ಶ್ರವಣಬೆಳಗೊಳ ಹಾಗೂ ಕರ್ನಾಟಕದ ನಾನಾಭಾಗಗಳಲ್ಲಿ ದೊರೆತಿರುವ ನೂರಾರು ಶಾಸನಗಳ ಆದಿಯಲ್ಲಿರುವ ಈ ಕೆಳಕಂಡ ಪ್ರಾರ್ಥನಾ ಶ್ಲೋಕದ ರಚನೆ ಅಕಲಂಕಾಚಾರ್ಯರದೇ ಆಗಿದೆ: ಶ್ರೀಮತ್ಪರ ಗಂಭೀರಸ್ಯಾದ್ವಾದಾಮೋಘಲಾಂಛನಮ್ | ಜೀಯಾತ್ ತ್ರೈಳೋಕ್ಯನಾಥ ಸ್ವಶಾಸನಂ ಜಿನಶಾಸನಮ್ ||

"https://kn.wikipedia.org/w/index.php?title=ಅಕಲಂಕ&oldid=1272755" ಇಂದ ಪಡೆಯಲ್ಪಟ್ಟಿದೆ