ವಿಷಯಕ್ಕೆ ಹೋಗು

ಅಂತರಿಕ್ಷ ಮೋಜಣಿ(ಏರಿಯಲ್ ಸರ್ವೇಯಿಂಗ್)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಂತರಿಕ್ಷ ಮೋಜಣಿ ವಿಮಾನಗಳಲ್ಲಿ ಬಿಂಬಗ್ರಾಹಿಗಳನ್ನು (ಕ್ಯಾಮರ) ಕೊಂಡೊಯ್ದು ಅಂತರಿಕ್ಷದಿಂದ ಒಂದು ಭೂಪ್ರದೇಶದ ಛಾಯಾಚಿತ್ರಗಳನ್ನು ಪಡೆದು ಆ ಚಿತ್ರಗಳ ಆಧಾರದಮೇಲೆ ಆ ಪ್ರದೇಶದ ಮೇಲ್ಮೈಲಕ್ಷಣದ ನಕ್ಷೆಯನ್ನು (ಟೊಪಾಗ್ರಫಿಕ್ ಮ್ಯಾಪ್) ತಯಾರಿಸಬಹುದು. ಇಂಥ ಮೋಜಣಿಗೆ ಅಂತರಿಕ್ಷ ಮೋಜಣಿ (ಏರಿಯಲ್ ಸರ್ವೇಯಿಂಗ್) ಎಂದು ಹೆಸರು. ಬಿಂಬ ಗ್ರಾಹಿ ತಟ್ಟೆಯ (ಸೆನ್ಸಿಟಿವ್ ಪ್ಲೇಟ್) ಮೇಲೆ ಬೀಳುವ ಛಾಯೆಯ ಅಳತೆಗಳಿಗೂ ಮತ್ತು ಅದರ ಮೂಲ ವಸ್ತುವಿನ ಅಳತೆಗಳಿಗೂ ಇರುವ ಪ್ರಮಾಣ (ರೇಷಿಯೋ) ಬಿಂಬ ಗ್ರಾಹಿಯ ಮಸೂರ (ಲೆನ್ಸ್), ತಟ್ಟೆ ಮತ್ತು ಮೂಲವಸ್ತು ಇವುಗಳ ಅಂತರದ ಪ್ರಮಾಣದಷ್ಟೇ ಇರುತ್ತದೆ. ಈ ತತ್ತ್ವವನ್ನನುಸರಿಸಿ ವಿಮಾನದ ಮಟ್ಟವನ್ನು ವಾಯುಭಾರಮಾಪಕಯಂತ್ರದಿಂದ ನಿರ್ಧರಿಸುವುದರಿಂದಾಗಲೀ ಛಾಯಾಚಿತ್ರದಲ್ಲಿ ಕಾಣುವ ಎರಡು ಸ್ಥಳಗಳ ವಾಸ್ತವ ದೂರಾಂತರವನ್ನು ಸೂಕ್ಷ್ಮವಾದ ಸಲಕರಣೆಗಳಿಂದ ಅಳೆಯುವುದರಿಂದಾಗಲೀ ವಿಷಯವನ್ನು ಸಂಗ್ರಹಿಸಿ ಒಂದು ನಕ್ಷೆಯನ್ನು ತಯಾರಿಸಬಹುದು. ನೀರಾವರಿ ಯೋಜನೆ, ಸಮುದ್ರತೀರದ ಮೋಜಣಿ, ದಟ್ಟವಾಗಿಯೂ ವಿಶಾಲವಾಗಿಯೂ ಬೆಳೆದಿರುವ ನಗರದ ಮೋಜಣಿ, ಖನಿಜ ಪ್ರದೇಶದ ಮೋಜಣಿ-ಮುಂತಾದವುಗಳಿಗೆ ಅಂತರಿಕ್ಷ ಮೋಜಣಿಯ ಕ್ರಮವನ್ನು ಪ್ರಯೋಗಿಸುವುದರ ಮೂಲಕ ಅತ್ಯಲ್ಪ ಕಾಲಾವಧಿಯಲ್ಲಿ ಯೋಗ್ಯವಾದ ನಕ್ಷೆಯನ್ನು ತಯಾರಿಸಬಹುದು. ಅತಿ ವಿಶಾಲವಾದ ಪ್ರದೇಶದ ಮೋಜಣಿಯಲ್ಲಿ ಅನೇಕ ಛಾಯಾಚಿತ್ರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಇತ್ತೀಚೆಗೆ ಈ ವಿಧವಾದ ಕ್ರಮ ಹೆಚ್ಚು ಬಳಕೆಯಲ್ಲಿದೆ