ವಿಷಯಕ್ಕೆ ಹೋಗು

ಅನ್ ಟು ದಿಸ್ ಲಾಸ್ಟ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಂಟು ದಿಸ್ ಲಾಸ್ಟ್ 19ನೆಯ ಶತಮಾನದ ಇಂಗ್ಲಿಷ್ ಗದ್ಯ ಬರೆಹಗಾರ ಜಾನ್ ರಸ್ಕಿನ್ನನು (1819-1900) ರಚಿಸಿದ ಕೃತಿ. ತನ್ನ ಈ ಕೃತಿಗೆ ಮೊದಲು ಅರ್ಥಶಾಸ್ತ್ರದ ಪ್ರಥಮ ತತ್ತ್ವಗಳನ್ನು ಕುರಿತ ಪ್ರಬಂಧಗಳು ಎನ್ನುವ ಹೆಸರನ್ನು ಕೊಟ್ಟ. ಅನಂತರ ಏಸುಕ್ರಿಸ್ತನ ಒಂದು ದೃಷ್ಟಾಂತ ಕಥೆಯಲ್ಲಿನ ಒಂದು ಪದವೃಂದವನ್ನು ಬಳಸಿ ಪುಸ್ತಕಕ್ಕೆ ಅಂಟು ದಿಸ್ ಲಾಸ್ಟ್ ಎಂದು ನಾಮಕರಣ ಮಾಡಿದ.

ಕೃತಿಯ ಸಾರ

[ಬದಲಾಯಿಸಿ]

1862ರಲ್ಲಿ ರಚಿತವಾದ ಈ ಕೃತಿಯಲ್ಲಿ ನಾಲ್ಕು ಭಾಗಗಳಿವೆ. ಸಂಪತ್ತಿನ ನಿಜವಾದ ಅರ್ಥ, ಸಂಪತ್ತಿನ ಗಳಿಕೆಯಲ್ಲಿ ಪ್ರಾಮಾಣಿಕತೆಯ ಮಹತ್ತ್ವ-ಇವನ್ನು ವಿವರಿಸುವುದು ಅವನ ಉದ್ದೇಶ. ಅರ್ಥಶಾಸ್ತ್ರಕ್ಕೂ ಅಂತಃಕರಣಕ್ಕೂ ಸಂಬಂಧವಿಲ್ಲ ಎನ್ನುವ ವಾದವನ್ನು ವಿರೋಧಿಸಿ ಕೈಗಾರಿಕೆ ಮತ್ತು ವಾಣಿಜ್ಯಗಳಲ್ಲಿ ಸಹಾನುಭೂತಿ ಮತ್ತು ನ್ಯಾಯದೃಷ್ಟಿ ಅತ್ಯಗತ್ಯ ಎಂದು ಸಾರುತ್ತಾನೆ. ವಾಣಿಜ್ಯ ದೃಷ್ಟಿಯ ಆರ್ಥಿಕತೆಗೂ ರಾಜಕೀಯ ಆರ್ಥಿಕತೆಗೂ ಇರುವ ವ್ಯತ್ಯಾಸವನ್ನು ಒತ್ತಿ ಹೇಳುತ್ತಾ, ವಾಣಿಜ್ಯ ದೃಷ್ಟಿಯ ಆರ್ಥಿಕತೆಯು ಹಣ ಒಂದನ್ನೇ ಸಂಪತ್ತು ಎಂದು ಪರಿಗಣಿಸುತ್ತದೆ, ರಾಜಕೀಯ ಆರ್ಥಿಕತೆಯು ದೇಶದ ಎಲ್ಲರ ಆರ್ಥಿಕ ಕಲ್ಯಾಣಕ್ಕೆ ಮಹತ್ವವನ್ನು ನೀಡುತ್ತದೆ ಎಂದು ವಿವರಿಸುತ್ತಾನೆ. ಅತ್ಯಂತ ಅಗ್ಗವಾದ ಮಾರುಕಟ್ಟೆಯಲ್ಲಿ ಕೊಂಡುಕೊ ಅತ್ಯಂತ ದುಬಾರಿಯಾದ ಮಾರುಕಟ್ಟೆಯಲ್ಲಿ ಮಾರು ಎನ್ನುವ ವಾಣಿಜ್ಯ ಆರ್ಥಿಕತೆ ಹೃದಯಹೀನ; ಇದರಿಂದ ದೇಶಕ್ಕೆ ಹಾನಿಯೇ ಆಗುತ್ತದೆ ಎಂದು ಪ್ರತಿಪಾದಿಸುತ್ತಾನೆ. ಅರ್ಥಶಾಸ್ತ್ರದ ನಿಜವಾದ ಗುರಿ ಎಲ್ಲರಿಗೂ ಪರಿಪೂರ್ಣವೂ ಸ್ವತಂತ್ರವೂ ಆದ ಜೀವನವನ್ನು ಕಲ್ಪಿಸುವುದು ಎಂದು ಈತ ಸಾಧಿಸುತ್ತಾನೆ. ಭಾವನೆಯ ಪ್ರಾಮಾಣಿಕತೆ, ನಿರಾಡಂಬರತೆಯ ಸೊಗಸು, ಘನತೆ, ವಾಗ್ಮಿತೆಗಳು ಬೆರೆತ ಶೈಲಿ-ಇವು ಈ ಕೃತಿಗೆ ಇಂಗ್ಲಿಷ್ ಗದ್ಯ ಸಾಹಿತ್ಯದಲ್ಲಿ ಹಿರಿಯ ಸ್ಥಾನವನ್ನು ನೀಡಿವೆ. ಇದರ ಮುಕ್ತಾಯಭಾಗದ ಉದಾತ್ತ ಭಾವನೆ, ಘನವಾದ ಧೋರಣೆ ಮರೆಯಲಾಗದಂಥವು. ಆರ್ಥಿಕ ತತ್ತ್ವಗಳ ವಿಚಾರದಲ್ಲಿ ಕ್ರಾಂತಿಯನ್ನು ಉಂಟುಮಾಡಿ ನೀತಿಶಾಸ್ತ್ರ ಮತ್ತು ಅರ್ಥಶಾಸ್ತ್ರಗಳನ್ನು ಸಮೀಪಕ್ಕೆ ತಂದ ಕೃತಿ ಇದು.

ಪ್ರತಿಭಟನೆ

[ಬದಲಾಯಿಸಿ]

ಈ ಕೃತಿಯು ಮೊದಲು, ಪ್ರಸಿದ್ಧ ಇಂಗ್ಲಿಷ್ ಕಾದಂಬರಿಕಾರ ಥ್ಯಾಕರೆ ನಡೆಸುತ್ತಿದ್ದ ಕಾಲ್ಮ್ ಹಿಲ್ ಮ್ಯಾಗ್‌ಜೀನ್‍ನಲ್ಲಿ ಧಾರವಾಹಿಯಾಗಿ ಪ್ರಾರಂಭವಾಯಿತು; ಆದರೆ ರಸ್ಕಿನ್ನನ ದೃಷ್ಟಿಕೋನವು ಪತ್ರಿಕೆಯ ಮಧ್ಯಮವರ್ಗದ ಓದುಗರಿಗೆ ಒಪ್ಪಿಗೆಯಾಗಲಿಲ್ಲ. ಅವರ ಪ್ರತಿಭಟನೆಯಿಂದಾಗಿ ಥ್ಯಾಕರೆ ತನ್ನ ಪತ್ರಿಕೆಯಲ್ಲಿ ಇದರ ಪ್ರಕಟಣೆಯನ್ನು ನಿಲ್ಲಿಸಿದ.

ಗಾಂಧೀಜಿಯ ಮೇಲೆ ಪ್ರಭಾವ

[ಬದಲಾಯಿಸಿ]

ದಕ್ಷಿಣ ಆಫ್ರಿಕದಲ್ಲಿ ಪ್ರಯಾಣ ಮಾಡುತ್ತಿದ್ದಾಗ ಇದನ್ನು ಓದಿದ ಗಾಂಧೀಜಿಯವರ ಧ್ಯೇಯ ಧೋರಣೆಗಳ ಮೇಲೆ ಈ ಗ್ರಂಥ ಬೀರಿದ ಪ್ರಭಾವ ಸರ್ವವಿದಿತವಾಗಿದೆ.ಗಾಂಧೀಜಿ ಇದನ್ನು ಸರ್ವೋದಯ ಎಂಬ ಹೆಸರಿನಲ್ಲಿ ಗುಜರಾತಿಗೆ ಭಾಷಾಂತರಿಸಿದರು.ವಾಲ್‍ಜಿ ಗೋವಿಂದಜಿ ದೇಸಾಯಿ ಎಂಬವರು ಈ ಸರ್ವೋದಯ ಕೃತಿಯನ್ನು ಇಂಗ್ಲೀಷ್‍ಗೆ ತರ್ಜುಮೆ ಮಾಡಿದರು..[]

ಉಲ್ಲೇಖಗಳು

[ಬದಲಾಯಿಸಿ]
  1. Gandhi, M. K. Unto this Last: A paraphrase (in English; trans. from Gujarati). Ahmedabad: Navajivan Publishing House. ISBN 81-7229-076-4. Archived from the original (PDF) on 2018-12-26. Retrieved 2015-10-18.{{cite book}}: CS1 maint: unrecognized language (link)


ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: