ಅರವಿಂದಾಶ್ರಮ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅರವಿಂದಾಶ್ರಮ

ಅರವಿಂದಾಶ್ರಮ : ಪಾಂಡಿಚೆರಿಯಲ್ಲಿ ಅರವಿಂದರು ಸ್ಥಾಪಿಸಿದ ಆಧ್ಯಾತ್ಮಿಕ ಸಾಧನೆಯ ಸಂಸ್ಥೆ. ಅರವಿಂದರ ಶಿಷ್ಯೆ ಶ್ರೀಮಾತೆ ಪ್ರಾಚೀನ ಭಾರತದ ಗುರುಕುಲಗಳ ಆದರ್ಶದಲ್ಲಿ ಇದನ್ನು ಬೆಳೆಸಿದರು. ಈಗ ಆಶ್ರಮಕ್ಕೆ ಸೇರಿದ ಮನೆಗಳೂ ಹೊಲಗಳೂ ತೋಟಗಳೂ ಪಾಂಡಿಚೆರಿಯ ಬೇರೆ ಬೇರೆ ಸ್ಥಳಗಳಲ್ಲಿವೆ. ಇಂದು ಆಶ್ರಮದಲ್ಲಿ ವಿದ್ಯಾವಂತರು, ಕಲಾವಿದರು, ಯಂತ್ರಜ್ಞರು, ಯೋಗಸಾಧಕರು ಮೊದಲಾದ ಭಿನ್ನ ರುಚಿಯವರು ಇದ್ದಾರೆ. ಆಶ್ರಮಕ್ಕೆ ಸೇರುವವನಿಗೆ ಶ್ರೀಮಾತೆಯಲ್ಲಿ ಸಂಪೂರ್ಣ ಸಮರ್ಪಣಭಾವವಿರಬೇಕಾದುದು ಮುಖ್ಯ ಅರ್ಹತೆ. ಯಾವ ಕೆಲಸವನ್ನಾದರೂ ಆಶ್ರಮವಾಸಿಗಳು ಸಾಧನೆಯೆಂದೇ ಮಾಡಬೇಕು. ಧ್ಯಾನ, ಕರ್ಮ, ಸೇವೆ, ಜ್ಞಾನ ಇವುಗಳಿಗೆ ಆಶ್ರಮದಲ್ಲಿ ಸಮಾನವಾದ ಅವಕಾಶವಿದೆ. ಮಾಡುವ ಕೆಲಸದಲ್ಲಿ ಶ್ರದ್ಧೆ, ಚಿತ್ತಶುದ್ಧಿ ಮುಖ್ಯ. ಮಾನವನ ಪರಿಪೂರ್ಣ ವಿಕಾಸಕ್ಕೆ ದೇಹವಿಕಾಸವೂ ಅವಶ್ಯಕ ಎಂದು ತಿಳಿದು ಅಂಗಸಾಧನೆ, ಕುಸ್ತಿ, ಈಜುವುದು, ಟೆನ್ನಿಸ್ ಮೊದಲಾದ ಸೌಲಭ್ಯಗಳನ್ನು ಆಶ್ರಮದ ಸಾಧಕರಿಗೆ ಒದಗಿಸಿದ್ದಾರೆ. ಆಶ್ರಮದ ಶಿಸ್ತು,ನೈರ್ಮಲ್ಯ ಅನುಕರಣೀಯ. ಇಲ್ಲಿ ಒಂದೇ ಬಾರಿಗೆ ಸುಮಾರು ಒಂದು ಸಾವಿರ ಮಂದಿ ಊಟಕ್ಕೆ ಕುಳಿತುಕೊಳ್ಳುವ ದೊಡ್ಡ ವಿಶಾಲಭವನವಿದೆ. ಇಲ್ಲಿ ಕೊಡುವ ಆಹಾರ ಸರಳವಾಗಿದ್ದರೂ ದೇಹಪೋಷಣೆಗೆ ಯುಕ್ತವಾಗಿದೆ. ಎಲ್ಲ ಕಾರ್ಯದಲ್ಲಿಯೂ ಶುಚಿತ್ವಕ್ಕೆ ಅಗ್ರಸ್ಥಾನ. ಆಶ್ರಮಕ್ಕೆ ಬೇಕಾದ ತರಕಾರಿ, ಹಣ್ಣು ಮುಂತಾದ ಆಹಾರ ಪದಾರ್ಥಗಳನ್ನು ಆಶ್ರಮದ ತೋಟಗಳಲ್ಲಿ ಬೆಳೆಸುತ್ತಾರೆ. ಆಶ್ರಮಕ್ಕೆ ಸೇರಿದ ಗೋಶಾಲೆಯಿಂದ ಸಾಕಷ್ಟು ಹಾಲು ದೊರಕುತ್ತದೆ. ಪುಸ್ತಕ ಪ್ರಕಟಣಶಾಖೆ, ಪುಸ್ತಕ ಭಂಡಾರ, ಶಾಲೆಗಳು, ಅತಿಥಿಗೃಹ, ಯಾಂತ್ರಿಕ ಶಿಕ್ಷಣಶಾಖೆ, ವೃತ್ತಿಶಿಕ್ಷಣ ಶಾಲೆಗಳು, ಶ್ರೀ ಅರವಿಂದ ಅಂತಾರಾಷ್ಟ್ರೀಯ ವಿದ್ಯಾಕೇಂದ್ರ-ಇವೆಲ್ಲ ಆಶ್ರಮದ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆಯುತ್ತಿವೆ. ಆಶ್ರಮಕ್ಕೆ ಸೇರಿದ ರಂಗಮಂದಿರ ಸು. 2,000 ಪ್ರೇಕ್ಷಕರು ಕುಳಿತು ನೋಡುವಷ್ಟು ವಿಶಾಲವೂ ಭವ್ಯವೂ ಆಗಿದೆ. ಸಾಧಕರ ದೈಹಿಕ, ಮಾನಸಿಕ, ಆಧ್ಯಾತ್ಮಿಕ ಪ್ರಗತಿಗಾಗಿ ಆಶ್ರಮ ಸರ್ವಪ್ರಯತ್ನಗಳನ್ನೂ ಮಾಡುತ್ತಿದೆ.

ಸ್ಥಾಪನೆ[ಬದಲಾಯಿಸಿ]

ಶ್ರೀ ಅರವಿಂದರು ತಮ್ಮ ೨೪ ನವೆಂಬರ್ ೧೯೨೬ರ ಆಧ್ಯಾತ್ಮಿಕ ಅನುಭವದ ನಂತರ, ಯೋಗ ಸಾಧನೆಗಾಗಿ ತಮ್ಮ ಹೊರಸಂಪರ್ಕವನ್ನು ಸೀಮಿತಗೊಳಿಸಿದರು ಮತ್ತು ಮುಂದಿನಿಂದ ಶ್ರೀ ಮಾತೆಯವರಿಂದಲೇ ಎಲ್ಲ ಶಿಷ್ಯರೂ ಸಾಧನೆಯನ್ನು ಸ್ವೀಕರಿಸಬೇಕೆಂದು ಹೇಳಿದರು. ಹೀಗೆ, ಅಂದಿನ ೨೪ ಮಂದಿಯ ಶಿಷ್ಯಗಣವು ಶ್ರೀ ಮಾತೆಯವರ ನೇತೃತ್ವದಡಿ ಆಶ್ರಮದ ರೀತಿಯಲ್ಲಿ ಏರ್ಪಟ್ಟಿತು. ಶಿಷ್ಯರ ಸಂಖ್ಯೆ ಹೆಚ್ಚಾದಂತೆ ಮತ್ತು ಎರಡನೇ ಜಾಗತಿಕ ಯುದ್ಧದ ಕಾರಣದಿಂದಾಗಿ ಹೆಚ್ಚಾದ ಶಿಷ್ಯ-ಶರಣಾರ್ಥಿಗಳು ಬಂದಂತೆ, ಆಶ್ರಮಕ್ಕೆ ಹಲವು ವಿಭಾಗಗಳು ಸೇರಿಕೊಂಡವು: ಮುದ್ರಣಾಲಯ, ಕರಕುಶಲ ವಿಭಾಗ, ಯಂತ್ರ ವಿಭಾಗ, ಒಂದು ಶಾಲೆ, ಭೋಜನಾಲಯ, ಇತ್ಯಾದಿ. ಶ್ರೀ ಅರವಿಂದರ ಮತ್ತು ಶ್ರೀ ಮಾತೆಯವರ ದೇಹಾಂತವಾದ ನಂತರ ಆಶ್ರಮದ ಆಡಳಿತವನ್ನು ಶ್ರೀ ಅರವಿಂದ ಆಶ್ರಮ ಟ್ರಸ್ಟ್ ವಹಿಸಿಕೊಂಡಿದೆ

ಆಶ್ರಮದ ಧ್ಯೇಯ[ಬದಲಾಯಿಸಿ]

ಶ್ರೀ ಅರವಿಂದರು ತಮ್ಮ ಆಶ್ರಮದ ಧ್ಯೇಯದ ವಿಷಯವಾಗಿ ಹೀಗೆ ಬರೆದಿರುವರು: "ಈ ಆಶ್ರಮವನ್ನು ಜಗತ್ತಿನಿಂದ ಸಂನ್ಯಾಸವನ್ನು ತೆಗೆದುಕೊಳ್ಳಲು ಅಲ್ಲ, ಮತ್ತೊಂದು ರೀತಿಯ ಮತ್ತು ರೂಪದ ಜೀವನದ ವಿಕಸನದ ಒಂದು ಕೇಂದ್ರ ಮತ್ತು ಅಭ್ಯಾಸಭೂಮಿಯಾಗಿ ರಚಿಸಲಾಗಿದೆ"

ಬಾಹ್ಯ ಸಂಪರ್ಕಗಳು[ಬದಲಾಯಿಸಿ]