ವಿಷಯಕ್ಕೆ ಹೋಗು
ಬರೆಯುವಾಗ ಕೀಲಿಮಣೆ ಐಕಾನ್ ಒತ್ತಿ ಕನ್ನಡ ಆಯ್ದುಕೊಳ್ಳುವುದರ ಅಥವಾ Ctrl+M ಒತ್ತುವುದರ ಮೂಲಕ ಈಗ ನೇರವಾಗಿ ಕನ್ನಡದಲ್ಲಿ ಬರೆಯಬಹುದು! ವಿವರಗಳಿಗೆ ಈ ಪುಟ ನೋಡಿ.

‌ಅ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕನ್ನಡ ವರ್ಣಮಾಲೆಯ ಮೊದಲನೆಯ ಅಕ್ಷರವಾದ ಅಕಾರದ ಅತ್ಯಂತ ಹಳೆಯ ರೂಪವನ್ನು ಪ್ರ. ಶ.ಪೂ. 3 ನೆಯ ಶತಮಾನದ ಅಶೋಕನ ಬ್ರಾಹ್ಮೀ ಲಿಪಿಯ ಶಾಸನಗಳಲ್ಲಿ ಕಾಣಬಹುದು. ಆ ಕಾಲದ ಬ್ರಾಹ್ಮೀಲಿಪಿಯಿಂದ ಅಕಾರವು ವಿಕಾಸಹೊಂದಿ ಇಂದಿನ ರೂಪವನ್ನು ತಾಳಿತೆಂಬುದನ್ನು ಗಮನಿಸಬೇಕು. ಅಶೋಕನ ಬ್ರಾಹ್ಮೀಲಿಪಿಯಲ್ಲಿ ಇದು ಮೂರು ರೇಖೆಗಳಿಂದ ಕೂಡಿದ್ದು ಈಗಿನ ರೂಪಕ್ಕಿಂತ ಭಿನ್ನವಾಗಿ ಕಾಣುತ್ತದೆ. ಪ್ರ. ಶ . 2ನೇ ಶತಮಾನದ ಸಾತವಾಹನರ ಬ್ರಾಹ್ಮೀಲಿಪಿಯಲ್ಲಿ ಕಂಡುಬರುವ ಕೆಲವು ಬದಲಾವಣೆಗಳು ಗಮನಾರ್ಹ. ಅಕ್ಷರದ ಕೆಳತುದಿಗಳು ಬಾಗುತ್ತವೆ. ಮೇಲ್ಭಾಗದಲ್ಲಿ ಕದಂಬ ತ್ರಿಕೋನಾಕಾರದ ತುದಿಗಳು ಕಾಣಬರುತ್ತವೆ. 5ನೆಯ ಶತಮಾನ ಪ್ರ. ಶ 5ನೆಯ ಶತಮಾನದ ಕದಂಬರ ಲಿಪಿಯಲ್ಲಿ ಚೌಕಾಕಾರದ ತಲೆಕಟ್ಟನ್ನು ಗಮನಿಸಬಹುದು. ಮುಂದಿನ ಶತಮಾನದ ಬಾದಾಮಿಚಾಳುಕ್ಯರ 6ನೆಯ ಶತಮಾನ ಶಾಸನಗಳಲ್ಲಿ ಇದು ಅಗಲವಾಗಿ ಈಗಿನ ರೂಪಕ್ಕೆ ದಾರಿಮಾಡಿಕೊಡುತ್ತದೆ. ಪ್ರ. ಶ.9ನೆಯ ಶತಮಾನದ ರಾಷ್ರ್ಟಕೂಟರ ಶಾಸನಗಳಲ್ಲಿ ಪ್ರತ್ಯೇಕ ರೇಖೆಗಳು ಮಾಯವಾಗಿ ತುದಿಯಿಂದ ಕೊನೆಯವರೆಗೂ ವೃತ್ತಾಕಾರದ ಒಂದೇ ರೇಖೆಯು ಉಂಟಾಗುತ್ತದೆ.ಇದು ಈಗಿನ ರೂಪಕ್ಕೆ ಅತ್ಯಂತ ಸಮೀಪದ್ದಾಗಿ ಕಾಣುತ್ತದೆ. ಇದೇ ರೂಪ ಸ್ಥಿರಗೊಂಡು ಮುಂದಿನ ಶತಮಾನಗಳಲ್ಲಿ ಇನ್ನೂ ಗುಂಡಗಾಗಿ ಈಗಿನ ರೂಪವನ್ನು ಪ್ರ.ಶ 18ನೆಯ ಶತಮಾನದಲ್ಲಿ ತಾಳುತ್ತದೆ. (ಎ.ವಿ.ಎನ್.)

ಕನ್ನಡ ವರ್ಣಮಾಲೆಯ ಈ ಮೊದಲನೆಯ ಅಕ್ಷರ ಎರಡು ಹ್ರಸ್ವಸ್ವರಧ್ವನಿಗಳನ್ನು ಸೂಚಿಸುತ್ತದೆ. ಒಂದು, ಸಾಮಾನ್ಯವಾದ ವಿವೃತ ಮಧ್ಯ ಅಗೋಲ ಸ್ವರ; ಇನ್ನೊಂದು, ಕೆಲವರ ಉಚ್ಚಾರದಲ್ಲಿ ಕಂಡುಬರುವ ಮಧ್ಯ -ಮಧ್ಯ ಅಗೋಲ ಸ್ವರ. ಇವು ಎರಡಕ್ಕೂ ಇರುವ ವ್ಯತ್ಯಾಸವನ್ನು ಅತ್ತೆ(ಅವಳು ನನ್ನ ಅತ್ತೆ’; ದುಃಖದಿಂದ ನಾನು ‘ಅತ್ತೆ’), ತಂದೆ (ಅವರು ನನ್ನ ‘ತಂದೆ’; ಅಂಗಡಿಯಿಂದ ‘ತಂದೆ’) ಮೊದಲಾದ ಪದಗಳ ಉಚ್ಚಾರದಲ್ಲಿ ಗಮನಿಸಬಹುದು.

(ಆಕರ - ಮೈಸೂರು ವಿಶ್ವವಿದ್ಯಾಲಯದ ಕನ್ನಡ ವಿಶ್ವಕೋಶ-ಸಂಪುಟ ಒಂದು)

"https://kn.wikipedia.org/w/index.php?title=‌ಅ&oldid=615577" ಇಂದ ಪಡೆಯಲ್ಪಟ್ಟಿದೆ