ಎನ್ ಆರ್ ನಾರಾಯಣಮೂರ್ತಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
'ಎನ್.ಆರ್. ನಾರಾಯಣಮೂರ್ತಿ'

ನಾಗವಾರ ರಾಮರಾವ್ ನಾರಾಯಣಮೂರ್ತಿ ಕರ್ನಾಟಕದ ಮತ್ತು ಭಾರತದ ಉದ್ಯಮಿ ಹಾಗು ಹೆಸರಾಂತ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯಾದಇನ್ಫೋಸಿಸ್‌ನ ಸಂಸ್ಥಾಪಕ. ಮೈಸೂರಿನ ಇನ್ಫೋಸಿಸ್ ಪ್ರಶಿಕ್ಷಣ ಕೇಂದ್ರ,ವಿಶ್ವದ ಅತ್ಯಂತ ಸುಸಜ್ಜಿತ ಸಂಪನ್ಮೂಲಗಳನ್ನು ಹೊಂದಿದೆ. ದೇಶ-ವಿದೇಶಗಳ ಮಾಹಿತಿ ತಂತ್ರಜ್ಞಾನದಲ್ಲಿ ಕಲಿಯಲು ಇಚ್ಛಿಸುವವರು, ಮೈಸೂರಿಗೆ ಬಂದು, ಅಲ್ಲಿನ ಪ್ರಭಾವಿ ಶೈಕ್ಷಣಿಕ ಸಂಪತ್ತಿನ ಉಪಯೋಗವನ್ನು ಹೊಂದುತ್ತಾರೆ. ವಿತ್ತಮಂತ್ರಿ ಶ್ರೀ ಚಿದಂಬರಂರವರು ಮೈಸೂರಿನ ಭವ್ಯ ಪರಿಸರವನ್ನು, ಹಾಗೂ ಅಲ್ಲಿನ ಅತ್ಯುತ್ತಮ ಪ್ರಶಿಕ್ಷಣ ಪದ್ಧತಿಗಳನ್ನು ಕಣ್ಣಾರೆ ಕಂಡು ಪ್ರಭಾವಿತರಾಗಿದ್ದಾರೆ.

ಮಧ್ಯಮ ವರ್ಗದ ಶ್ರೇಷ್ಟ ಉದ್ಯಮಿ, ಆದರ್ಶ ಭಾರತೀಯ[ಬದಲಾಯಿಸಿ]

ನಾರಾಯಣಮೂರ್ತಿಯವರು ಕರ್ನಾಟಕ ಕಂಡ ಅತ್ಯಂತ ಮಾದರಿ ಮಾಹಿತಿ-ತಂತ್ರಜ್ಞಾನೋದ್ಯಮಿ ಹಾಗೂ ಆದರ್ಶ-ಭಾರತೀಯರಲ್ಲೊಬ್ಬರು. ಸುಮಾರು ಇಪ್ಪತ್ತು ವರ್ಷಗಳ ಕಾಲ ಆ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಸೇವೆ ನಿರ್ವಹಿಸಿದ ಇವರು ಈಗ ಇನ್ಫೋಸಿಸ್ ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಷ ಹಾಗು ಹಿತಚಿಂತಕ ಅಧಿಕಾರಿಯಾಗಿದ್ದರೆ. ಭಾರತವು ವಿಶ್ವ ಮಾಹಿತಿ ತಂತ್ರಜ್ಞಾನ ಭೂಪಟದಲ್ಲಿ ಪ್ರಕಟವಾಗುವಂತೆ ಮಾಡಿದವರಲ್ಲಿ ಅಗ್ರಜರು ಎಂದು ಕರೆಯಲ್ಪಡುವ ಇವರು ಹಲವಾರು ಉದ್ಯಮ ಸಂಸ್ಥೆಗಳು ಸರ್ಕಾರಿ ಸಂಸ್ಥೆಗಳು ಮತ್ತು ಉನ್ನತ ವಿದ್ಯಾಸಂಸ್ಥೆಗಳ ನಿರ್ವಾಹಕ ಮಂಡಳಿಗಳ ಸದಸ್ಯರಾಗಿದ್ದಾರೆ.

ಕರ್ನಾಟಕ ಕಂಡ ದೈತ್ಯಪ್ರತಿಭೆಗಳಲ್ಲೊಬ್ಬರು[ಬದಲಾಯಿಸಿ]

ಕರ್ನಾಟಕದ ಸುಧಾ-ಮೂರ್ತಿ ದಂಪತಿಗಳು ಮಧ್ಯಮವರ್ಗದ ಉದ್ಯಮಗಳ ಒಡೆತನದ ಒಂದು ಹೊಸ ಅಧ್ಯಾಯವನ್ನೇ ತೆರೆದರು. ನಾರಾಯಣಮೂರ್ತಿಯವರ ಜನ್ಮ ೨೦ನೇ ಆಗಸ್ಟ್ ೧೯೪೬ರಲ್ಲಿ ಮೈಸೂರಿನಲ್ಲಾಯಿತು. ೧೯೬೭ರಲ್ಲಿ ಮೈಸೂರಿನ ರಾಷ್ಟ್ರೀಯ ತಂತ್ರಜ್ಞಾನ ವಿದ್ಯಾಸಂಸ್ಥೆ(ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ)ಯಿಂದ ಎಲಕ್ಟ್ರಿಕಲ್ ಇಂಜಿನಿಯರಿಂಗ್ ಪದವಿಯನ್ನು ಪಡೆದ ಅವರು ತದನಂತರ ೧೯೬೯ರಲ್ಲಿ ಕಾನ್ಪುರದ ಭಾರತೀಯ ತಂತ್ರಜ್ಞಾನ ವಿದ್ಯಾಸಂಸ್ಥೆ(ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ)ಯಿಂದ ಸ್ನಾತಕೋತ್ತರ ಪದವಿ ಪಡೆದರು. ಶ್ರೀಯುತರು ತಮ್ಮ ವೃತ್ತಿ ಜೀವನವನ್ನು ಪುಣೆಯ ಪಾಟ್ನಿ ಕಂಪ್ಯುಟರ್ ಸಿಸ್ಟಮ್ಸ್‌ನಲ್ಲಿ ಪ್ರಾರಂಭಿಸಿದರು. ಪುಣೆಯಲ್ಲಿರುವಾಗಲೆ ಇವರ ಸಂಪರ್ಕ ತಮ್ಮ ಭಾವಿ ಪತ್ನಿ ಸುಧಾರೊಂದಿಗೆ(ಖ್ಯಾತ ಬರಹಗಾರ್ತಿ ಹಾಗು ಸಮಾಜ ಸೇವಕಿ) ಬೆಳೆಯಿತು. ೨ನೇ ಜುಲೈ ೧೯೮೧ರಲ್ಲಿ ನಾರಾಯಣಮೂರ್ತಿ ಅವರು ಇತರ ಐವರೊಡನೆ (ನಂದನ್ ನಿಲೇಕಣೆ , ಕ್ರಿಸ್ ಗೋಪಾಲಕೃಷ್ಣನ್, ಶಿಬುಲಾಲ್, ದಿನೇಶ್, ಮೋಹನದಾಸ್ ಪೈ) ಸೇರಿ ಕೇವಲ ೧೦,೦೦೦ ರುಪಾಯಿ ಬಂಡವಾಳದೊಂದಿಗೆ ಇನ್ಫೋಸಿಸ್ ಸ್ಥಾಪಿಸಿದರು. ಇಂದು ಇನ್ಫೋಸಿಸ್ ೧,೦೦,೦೦೦ಕ್ಕೂ ಮೇಲ್ಪಟ್ಟು ಉದ್ಯೊಗಿಗಳು ಮತ್ತು ಹಲವು ರಾಷ್ಟ್ರಗಳಲ್ಲಿ ಕಛೇರಿಗಳು ಹೊಂದಿ ವಿಶ್ವಾದ್ಯಂತ ಮಾಹಿತಿ ತಂತ್ರಜ್ಞಾನ ಮತ್ತು ಸಂಬಂಧಿತ ಸೇವೆಗಳನ್ನು ಒದಗಿಸುತ್ತಿದೆ. ನಾರಾಯಣಮೂರ್ತಿಯವರ ದೂರದೃಷ್ಟಿ, ಉತ್ತಮ ನಿರ್ವಾಹಣಾ ನೈಪುಣ್ಯ ಮತ್ತು ದಿಟ್ಟ ನಾಯಕತ್ವ ಇನ್ಫೋಸಿಸ್ ಈ ಮಟ್ಟಕ್ಕೆ ಬೆಳೆಯಲು ಕಾರಣ ಅಂದರೆ ತಪ್ಪಾಗಲಾರದು. ಮಾರ್ಚ್ ೨೦೦೨ರವರೆಗೂ ಇನ್ಫೋಸಿಸ್ ಸಂಸ್ಥೆಯ ಕಾರ್ಯಾಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಗಿದ್ದ ನಾರಯಣಮೂರ್ತಿ ತದನಂತರ ಅಧಿಕಾರವನ್ನು ನಂದನ್ ನಿಲೇಕಣಿಯವರಿಗೆ ಹಸ್ತಾಂತರಿಸಿ ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಷ ಮತ್ತು ಹಿತಚಿಂತಕ ಅಧಿಕಾರಿಯ ಹುದ್ದೆ ಅಲಂಕರಿಸಿದ್ದರು. ಆಗಸ್ಟ್ ೧೯ ೨೦೧೧ ರಂದು ತಮ್ಮ ೬೫ನೆ ವರ್ಷದಂದು ಅದ್ಯಕ್ಷ ಸ್ಥಾನದಿಂದ ನಿವೃತ್ತಿ ಹೊಂದಿದರು.

ವಿದ್ಯಾರ್ಹತೆ ಮತ್ತು ಇತರ ಹುದ್ದೆಗಳು[ಬದಲಾಯಿಸಿ]

ನಾರಾಯಣಮೂರ್ತಿ ಅಹ್ಮದಾಬಾದಿನ ಭಾರತೀಯ ವ್ಯವಸ್ಥಾಪನ ವಿದ್ಯಾಸಂಸ್ಥೆ (ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್) ಮತ್ತು ಬೆಂಗಳೂರಿನ ಭಾರತೀಯ ಮಾಹಿತಿ ತಂತ್ರಜ್ಞಾನ ವಿದ್ಯಾಸಂಸ್ಥೆ(ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಇನ್ಫರ್‍ಮೇಷನ್ ಟೆಕ್ನಾಲಜಿ)ಗಳ ನಿರ್ವಾಹಕ ಮಂಡಳಿಯ ಅಧ್ಯಕ್ಷರು ಕೂಡ. ಇವಲ್ಲದೆ ಶ್ರೀಯುತರು ಪೆನ್ಸಿಲ್ವೇನಿಯ ವಿಶ್ವವಿದ್ಯಾಲಯದ ವಾರ್ಟನ್ ಶಾಲೆಯ ಉಸ್ತುವಾರಿ ಮಂಡಳಿಯ ಸದಸ್ಯರಾಗಿ, ಕಾರ್ನೆಲ್ ವಿಶ್ವವಿದ್ಯಾಲಯದ ವಿಶ್ವಸ್ತ ಮಂಡಳಿಯ ಸದಸ್ಯರಾಗಿ, ಸಿಂಗಪುರದ ಸಿಂಗಾಪುರ ವ್ಯವಸ್ಥಾಪನ ವಿಶ್ವವಿದ್ಯಾಲಯದ ವಿಶ್ವಸ್ತ ಮಂಡಳಿಯ ಸದಸ್ಯರಾಗಿ, ಟಕ್ ಸ್ಕೂಲ್ ಆಫ್ ಬಿಜಿನೆಸ್ಸ್‌ನ ವಿಲಿಯಂ ಎಫ್. ಆಕ್ಟ್‌ಮೇಯರ್ ಜಾಗತಿಕ ನಾಯಕತ್ವ ಕೇಂದ್ರದ ಸಲಹೆಗಾರರ ಮಂಡಳಿಯ ಸದಸ್ಯರಾಗಿ, ಸ್ಟಾನ್‍ಫೊರ್ಡ್ ಗ್ರ್ಯಾಜುಯೆಟ್ ಸ್ಕೂಲ್ ಆಪ್ ಬಿಜಿನೆಸ್ಸ್‌ನ ಸಲಹೆಗಾರರ ಮಂಡಳಿಯ ಸದಸ್ಯರಾಗಿ ಮತ್ತು ಯಾಲೆ ವಿಶ್ವವಿದ್ಯಾಲಯದ ಅಧ್ಯಕ್ಷರ ಅಂತರಾಷ್ಟ್ರೀಯ ಚಟುವಟಿಕೆಗಳ ಮಂಡಳಿಯ ಸದಸ್ಯರಾಗಿಯೂ ಕೂಡ ಕಾರ್ಯ ನಿರ್ವಹಿಸುತ್ತಿದ್ದಾರೆ. ಭಾರತೀಯ ಪ್ರತಿಭೂತಿ ಮತ್ತು ವಿನಿಮಯ ಮಂಡಳಿ(ಸೇಬಿ) ನಿಯೋಜಿಸಿದ ನಿಗಮ ಆಡಳಿತ ಆಯೋಗದ ಅಧ್ಯಕ್ಷತೆಯನ್ನು ಒಮ್ಮೆ ಶ್ರೀಯುತರು ವಹಿಸಿದ್ದರು. ನಾರಾಯಣಮೂರ್ತಿಯವರು ಸಿಂಗಾಪುರದ ಡಿಬಿಎಸ್ ಬ್ಯಾಂಕಿನ ಸ್ವಾತಂತ್ರ ನಿರ್ದೇಶಕರು, ಭಾರತೀಯ ರಿಜರ್ವ್ ಬ್ಯಾಂಕಿನ ಕೇಂದ್ರ ಮಂಡಳಿಯಲ್ಲಿ ನಿರ್ದೇಶಕರಾಗಿ, ಭಾರತೀಯ-ಬ್ರಿಟೀಷ್ ಮೈತ್ರಿಕೂಟದ ಜಂಟಿ ಅಧ್ಯಕ್ಷರಾಗಿ, ಭಾರತದ ಪ್ರಧಾನ ಮಂತ್ರಿಗಳ ವಾಣಿಜ್ಯ ಮತ್ತು ಉದ್ಯಮ ಮಂಡಳಿಯ ಸದಸ್ಯರಾಗಿ, ಪ್ರಸಿದ್ದ ಟಿವಿ ಸಮಾಚಾರ ಬಿತ್ತರಿಸುವ ಸಂಸ್ಥೆಯಾದ ನ್ಯೂ ಡೆಲ್ಲಿ ಟೆಲಿವಿಜನ್ ನಿಯಮಿತ ಸಂಸ್ಥೆಯ ನಿರ್ದೇಶಕರಾಗಿ ಮತ್ತು ಅನೇಕ ಏಶಿಯಾದ ರಾಷ್ಟ್ರಗಳಿಗೆ ಮಾಹಿತಿ ತಂತ್ರಜ್ಞಾನ ಸಲಹೆಗಾರರಾಗಿಯೂ ಕೂಡ ಕಾರ್ಯ ನಿರ್ವಹಿಸುತ್ತಿದ್ದಾರೆ.

ಪ್ರಶಸ್ತಿಗಳು[ಬದಲಾಯಿಸಿ]

ಡಾ. ನಾರಾಯಣಮೂರ್ತಿಯವರು ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಹಲವು ಪ್ರಶಸ್ತಿ ಮತ್ತು ಗೌರವಗಳ ಪಟ್ಟಿ ಹೀಗಿದೆ.

  • ಟೈಮ್ ಪತ್ರಿಕೆಯ 'ಗ್ಲೋಬಲ್ ಟೆಕ್ ಇನ್ಫ್ಲೂಯನ್ಶಿಯಲ್' ಪಟ್ಟಿಯಲ್ಲಿ (ಆಗಸ್ಟ್ ೨೦೦೪)ಸೇರ್ಪಡೆ.
  • ಭಾರತ-ಫ್ರಾಂಸ್ ಫೋರಮ್ ಪದಕ (ಇಸವಿ ೨೦೦೩)
  • ಅರ್ನ್ಸ್ಟ್ ಆಂಡ್ ಯಂಗ್ ಸಂಸ್ಥೆಯಿಂದ ೨೦೦೩ನೆ ಇಸವಿಯ ವಿಶ್ವದ ಶ್ರೇಷ್ಟ ಉದ್ಯಮಿ (ವರ್ಲ್ಡ್ ಆಂಟರ್‍ಪರ್ನರ್ ಆಫ್ ದ ಇಯರ್)ಪ್ರಶಸ್ತಿ.
  • ಫಾರ್ಚ್ಯೂನ್ ಪತ್ರಿಕೆಯಿಂದ ೨೦೦೩ನೆ ಇಸವಿಯ ಏಷಿಯಾದ ಶ್ರೇಷ್ಟ ಉದ್ಯಮಿ ಪ್ರಶಸ್ತಿ.
  • ೨೦೦೧ರಲ್ಲಿ ಟೈಮ್/ಸಿ ಎನ್ ಎನ್ ೨೫ ಅತಿ ಪ್ರಭಾವಶಾಲಿ ಜಾಗತಿಕ ಕಾರ್ಯನಿರ್ವಹಣಾಧಿಕಾರಿಗಳ ಪಟ್ಟಿಯಲ್ಲಿ ಸೇರ್ಪಡೆ.
  • ಮ್ಯಾಕ್ಸ್ ಶ್ಮಿಡೇನಿ ಲಿಬರ್ಟಿ ೨೦೦೧ ಪ್ರಶಸ್ತಿ. (ಸ್ವಿಟ್ಜರ್‌ಲ್ಯಾಂಡ್).
  • ಬಿಜಿನೆಸ್ಸ್ ವೀಕ್ ಪತ್ರಿಕೆಯ "ಸ್ಟಾರ್ ಆಫ್ ಏಶಿಯಾ" ಪ್ರಶಸ್ತಿ (ಸತತ ಮೂರು ವರ್ಷ- ೧೯೯೮, ೧೯೯೯ ಮತ್ತು ೨೦೦೦)
  • ಭಾರತದ ೯ ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್.
  • ೧೯೯೬-೯೭ರ ಜೆ ಆರ್ ಡಿ ಟಾಟ ಕಾರ್ಪೊರೇಟ್ ಲೀಡರ್‌ಶಿಪ್ ಪ್ರಶಸ್ತಿ
Commons logo
ವಿಕಿಮೀಡಿಯ ಕಣಜದಲ್ಲಿ ಈ ವಿಷಯಕ್ಕೆ ಸಂಬಂಧಿಸಿದ ಮಾಧ್ಯಮಗಳಿವೆ: