ವಿಷಯಕ್ಕೆ ಹೋಗು

ಶಿವನೇರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇತಿಹಾಸ

[ಬದಲಾಯಿಸಿ]
ಶಿವನೇರಿ ಕೋಟೆಗೆ ಹೋಗುವ ಮೆಟ್ಟಿಲುಗಳು

ಕ್ರಿಸ್ತಶಕ 1 ನೇ ಶತಮಾನದಿಂದ ಶಿವನೇರಿಯು ಬೌದ್ಧರ ಆಳ್ವಿಕೆಯ ಸ್ಥಳವಾಗಿತ್ತು ಎನ್ನಲಾಗಿದೆ. ಇದರಲ್ಲಿರುವ ಗುಹೆಗಳು, ಬಂಡೆಗಳನ್ನು ಕತ್ತರಿಸಿ ರೂಪಿಸಲಾದ ವಾಸ್ತುಶಿಲ್ಪ ಮತ್ತು ನೀರಿನ ವ್ಯವಸ್ಥೆಗಳು, ಕ್ರಿ.ಶ 1 ನೇ ಶತಮಾನದಿಂದಲೂ ಜನವಸತಿ ಅಸ್ತಿತ್ವದಲ್ಲಿ ಇದ್ದುದನ್ನು ಸೂಚಿಸುತ್ತದೆ. ಶಿವನೇರಿಯು ದೇವಗಿರಿ ಯಾದವರ ವಶದಲ್ಲಿದ್ದ ಕಾರಣ ಶಿವನೇರಿಗೆ ಈ ಹೆಸರು ಬಂತು. ಈ ಕೋಟೆಯನ್ನು ಮುಖ್ಯವಾಗಿ ದೇಶದಿಂದ ಬಂದರು ನಗರ ಕಲ್ಯಾಣ್‌ಗೆ ಹಳೆಯ ವ್ಯಾಪಾರ ಮಾರ್ಗವನ್ನು ರಕ್ಷಿಸಲೆಂದು ಬಳಸಲಾಗುತ್ತಿತ್ತು. 15 ನೇ ಶತಮಾನದಲ್ಲಿ ದೆಹಲಿ ಸುಲ್ತಾನರು ದುರ್ಬಲಗೊಂಡ ನಂತರ ಈ ಸ್ಥಳವು ಬಹಮನಿ ಸುಲ್ತಾನರ ಪಾಲಾಯಿತು ಮತ್ತು ನಂತರ ಅದು 16 ನೇ ಶತಮಾನದಲ್ಲಿ ಅಹ್ಮದ್‌ನಗರ್ ಸುಲ್ತಾನರ ಪಾಲಾಯಿತು. 1595 ರಲ್ಲಿ, ಶಿವಾಜಿ ಭೋಸಲೆಯ ಅಜ್ಜ ಮಾಲೋಜಿ ಭೋಸಲೆ ಎಂಬ ಮರಾಠಾ ಮುಖ್ಯಸ್ಥನನ್ನು ಅಹ್ಮದ್‌ನಗರ್ ಸುಲ್ತಾನ್, ಬಹದ್ದೂರ್ ನಿಜಾಮ್ ಶಾ ಮುನ್ನಲೆಗೆ ತಂದ ಮತ್ತು ಅವನಿಗೆ ಶಿವನೇರಿ ಮತ್ತು ಚಕಾನ್ ನೀಡಿದರು. ಶಿವಾಜಿ ಮಹಾರಾಜರು 19 ಫೆಬ್ರವರಿ 1630 ರಂದು ಕೋಟೆಯಲ್ಲಿ ಜನಿಸಿದರು (ಕೆಲವು ಖಾತೆಗಳು 1627 ರಲ್ಲಿವೆ) ಮತ್ತು ಅವರು ತಮ್ಮ ಬಾಲ್ಯವನ್ನು ಅಲ್ಲಿಯೇ ಕಳೆದರು. ಕೋಟೆಯ ಒಳಗೆ ಶಿವಾಯಿ ದೇವಿಯ ಒಂದು ಸಣ್ಣ ದೇವಾಲಯವಿದೆ, ಈ ದೇವತೆಯ ಪ್ರೇರಣೆಯಿಂದ ಶಿವಾಜಿ ಎಂದು ನಾಮಕರಣ ಮಾಡಲಾಯಿತು. 1673 ರಲ್ಲಿ ಆಂಗ್ಲ ಪ್ರವಾಸಿ ಫ್ರೇಜ್ ಎಂಬುವನು ಈ ಕೋಟೆಯನ್ನು ಭೇಟಿ ಮಾಡಿದಾಗ, ಇದೊಂದು ಸೋಲರಿಯದ ಕೋಟೆ ಎಂದು ಉದ್ಘರಿಸಿದ್ದನು. ಫ್ರೇಜ್ ಉಲ್ಲೇಖಗಳ ಪ್ರಕಾರ, ಈ ಕೋಟೆಯಲ್ಲಿ, ಏಳು ವರ್ಷಗಳ ಕಾಲ ಸಾವಿರ ಕುಟುಂಬಗಳಿಗೆ ಸಾಕಾಗುವಷ್ಟು ಆಹಾರ ದಾಸ್ತಾನು ಸಂಗ್ರಹವಿತ್ತು. ಮೂರನೇ ಆಂಗ್ಲೋ-ಮರಾಠ ಯುದ್ಧದ ನಂತರ 1820 ರಲ್ಲಿ ಈ ಕೋಟೆಯು ಬ್ರಿಟಿಷ್ ಆಳ್ವಿಕೆಯ ನಿಯಂತ್ರಣಕ್ಕೆ ಒಳಪಟ್ಟಿತು. 

2021 ರಲ್ಲಿ, ಇದನ್ನು "ಮಹಾರಾಷ್ಟ್ರದ ಮರಾಠಾ ಮಿಲಿಟರಿ ವಾಸ್ತುಶಿಲ್ಪದ ಸರಣಿ ನಾಮನಿರ್ದೇಶನದ" ಭಾಗವಾಗಿ ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ತಾತ್ಕಾಲಿಕ ಪಟ್ಟಿಗೆ ಸೇರಿಸಲಾಯಿತು.[]

ವಾಸ್ತುಶಿಲ್ಪ

[ಬದಲಾಯಿಸಿ]
ಶಿವನೇರಿ ಕೋಟೆಯಲ್ಲಿರುವ ಮಂದಿರ

ಶಿವನೇರಿ ಕೋಟೆ[] ಒಂದು ತ್ರಿಕೋನ ಆಕಾರದ ಬೆಟ್ಟದ ಕೋಟೆಯಾಗಿದ್ದು, ಇದಕ್ಕೆ ಬೆಟ್ಟದ ನೈಋತ್ಯ ಭಾಗದಿಂದ ಪ್ರವೇಶದ್ವಾರವಿದೆ.[] ಇದಕ್ಕೆ ಮುಖ್ಯ ದ್ವಾರ ಅಷ್ಟೆ ಅಲ್ಲದೆ, ಕೋಟೆಯ ಪಾರ್ಶ್ವ ಭಾಗದಲ್ಲಿಯೂ ಒಂದು ಪ್ರವೇಶ ದ್ವಾರವಿದ್ದು, ಇದನ್ನು ಸ್ಥಳೀಯವಾಗಿ ಸರಪಳಿ ದ್ವಾರ ಎನ್ನುತ್ತಾರೆ. ಈ ದ್ವಾರದಿಂದ ಪ್ರವೇಶಿಸಬೇಕೆಂದರೆ, ಸರಪಳಿಯನ್ನು ಹಿಡಿದುಕೊಂಡು ಕೋಟೆ ಏರಬೇಕಾಗುತ್ತದೆ. ಕೋಟೆಯು 1 mile (1.6 km) ವಿಸ್ತಾರವಾಗಿದ್ದು, ಏಳು ಸುರುಳಿಯಾಕಾರದ ತುಂಬಾ ಸುರಕ್ಷಿತ ದ್ವಾರಗಳಿವೆ. ಕೋಟೆಯ ಸುತ್ತಲೂ ಮಣ್ಣಿನ ಗೋಡೆಗಳಿವೆ. ಕೋಟೆಯ ಒಳಗೆ ಪ್ರಾರ್ಥನಾ ಮಂದಿರ, ಸಮಾಧಿ ಮತ್ತು ಮಸೀದಿಯಂತಹ ಪ್ರಮುಖ ಕಟ್ಟಡಗಳಿವೆ.[] ಅಲ್ಲೊಂದು ಗಲ್ಲುಶಿಕ್ಷೆ ನೀಡುವ ಗಲ್ಲುಗಂಬ ಕೂಡ ಇದೆ.[] ಈ ಕೋಟೆಯನ್ನು ರಕ್ಷಿಸುವ ಅನೇಕ ದ್ವಾರಗಳ ರಚನೆಗಳಿವೆ. ಕೋಟೆಯ ಹಲವು ದ್ವಾರಗಳಲ್ಲಿ ಮನ ದರವಾಜವೂ ಒಂದು. ಇದನ್ನು ಟುನೆಯ ಮೂಲ ಎಂದೂ ಕರೆಯುತ್ತಾರೆ.

ಕೋಟೆಯ ಮಧ್ಯಭಾಗದಲ್ಲಿ 'ಬಾದಾಮಿ ತಲಾವ್' ಎಂದು ಕರೆಯಲ್ಪಡುವ ನೀರಿನ ಕೊಳವಿದೆ ಮತ್ತು ಈ ಕೊಳದ ದಕ್ಷಿಣದಲ್ಲಿ ಜೀಜಾಬಾಯಿ ಮತ್ತು ಯುವಕ ಶಿವಾಜಿಯ ಪ್ರತಿಮೆಗಳಿವೆ. ಕೋಟೆಯಲ್ಲಿ ಗಂಗಾ ಮತ್ತು ಯಮುನಾ ಎಂದು ಕರೆಯಲ್ಪಡುವ ಎರಡು ನೀರಿನ ಬುಗ್ಗೆಗಳಿವೆ, ಇವುಗಳಲ್ಲಿ ವರ್ಷವಿಡೀ ನೀರು ತುಂಬಿರುತ್ತದೆ. ಈ ಕೋಟೆಯಿಂದ ಎರಡು ಕಿಲೋಮೀಟರ್ ದೂರದಲ್ಲಿ ಬೌದ್ಧ ಶಿಲಾ ಗುಹೆಗಳಿವೆ, ಇದನ್ನು ಲೆನ್ಯಾದ್ರಿ ಗುಹೆಗಳು ಎಂದು ಕರೆಯುತ್ತಾರೆ, ಇದು ಮಹಾರಾಷ್ಟ್ರದ ಅಷ್ಟವಿನಾಯಕ ದೇವಸ್ಥಾನಗಳಲ್ಲಿ ಒಂದಾಗಿದೆ. ಇದನ್ನು ಸಂರಕ್ಷಿತ ಸ್ಮಾರಕವೆಂದು ಘೋಷಿಸಲಾಗಿದೆ. [] []

ಪ್ರವೇಶ

[ಬದಲಾಯಿಸಿ]
ಶಿವನೇರಿ ಕೋಟೆಯ ಪಾರ್ಶ್ವ ನೋಟ

ಶಿವನೇರಿ ಸಮೀಪದಲ್ಲಿ ಜುನ್ನಾರ್ ಎಂಬ ಪಟ್ಟಣವಿದೆ. ಇದು ತಾಲ್ಲೂಕು ಕೇಂದ್ರವಾಗಿದ್ದು ಉತ್ತಮ ರಸ್ತೆ ಸಂಪರ್ಕವನ್ನು ಹೊಂದಿದೆ. ಜುನ್ನಾರ್ ಪಟ್ಟಣವು  ಪುಣೆಯಿಂದ ಸುಮಾರು 90 ಕಿ.ಮೀ. ದೂರದಲ್ಲಿದೆ. ಜುನ್ನಾರ್ ಪಟ್ಟಣದಿಂದ ಈ ಕೋಟೆಯು ಸುಮಾರು 2–3 ಕಿಮೀ. ದೂರಲ್ಲಿದೆ  ಮುಖ್ಯ ಪ್ರವೇಶದ್ವಾರದ ಮೂಲಕ ಕೋಟೆಯ ಮೇಲ್ಭಾಗವನ್ನು ಸುಲಭವಾಗಿ ತಲುಪಬಹುದಾಗಿದೆ, ಅದಾಗ್ಯೂ ಸೂಕ್ತ ಚಾರಣ ಸಲಕರಣೆಗಳನ್ನು ಹೊಂದಿರುವ ಚಾರಣಿಗರು ಕೋಟೆಯ ಪಶ್ಚಿಮ ದಿಕ್ಕಿನ ಮೇಲೆ ಇರುವ ಸರಪಳಿ ಮಾರ್ಗದಿಂದ ಕೋಟೆ ಏರಲು ಪ್ರಯತ್ನಿಸಬಹುದು. ಕೋಟೆಯ ಮೇಲ್ಭಾಗದಿಂದ ನಾರಾಯಣಗಡ, ಹಡ್ಸರ್, ಚವಂದ್ ಮತ್ತು ನಿಮಗಿರಿ ಕೋಟೆಗಳನ್ನು ಸುಲಭವಾಗಿ ಕಾಣಬಹುದು.

ಮತ್ತಷ್ಟು ಓದುವಿಕೆ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ Centre, UNESCO World Heritage. "Serial Nomination of Maratha Military Architecture in Maharashtra". UNESCO World Heritage Centre (in ಇಂಗ್ಲಿಷ್). Retrieved 2021-06-26.
  2. "The Shivneri Fort Must Place To Visit In 2020 Complete Guide". Fort Trek (in ಇಂಗ್ಲಿಷ್). 2020-09-04. Archived from the original on 2020-10-17. Retrieved 2020-09-20.
  3. Uncover the past-Shivneri fort:https://punemirror.indiatimes.com/entertainment/unwind/uncover-the-past/articleshow/69918368.cms Archived 2021-10-05 ವೇಬ್ಯಾಕ್ ಮೆಷಿನ್ ನಲ್ಲಿ.
  4. Verma, Amrit. Forts of India. New Delhi: The Director, Publication Division, Ministry of Information and Broadcasting, Government of India. pp. 93–95. ISBN 81-230-1002-8.
  5. "List of the protected monuments of Mumbai Circle district-wise" (PDF). Archived from the original (PDF) on June 6, 2013. Retrieved 4 July 2015.
  6. "Lenyadri Group of Caves, Junnar - Ticketed Monument - Archaeological Survey of India". 2009-04-10. Archived from the original on 2009-04-10. Retrieved 2021-02-14.
"https://kn.wikipedia.org/w/index.php?title=ಶಿವನೇರಿ&oldid=1209157" ಇಂದ ಪಡೆಯಲ್ಪಟ್ಟಿದೆ