ವಿಷಯಕ್ಕೆ ಹೋಗು

ಬೃಹಸ್ಪತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬೃಹಸ್ಪತಿ- ಒಬ್ಬ ಋಷಿ. ದೇವತೆಗಳ ಗುರು. ಅಂಗೀರಸನೆಂಬ ಮುನಿಯ ಮಗ. ಅಗ್ನಿರೂಪ ಧರಿಸಿ ಲೋಕಗಳನ್ನು ಕಾಪಾಡಿದವ. ಈತನ ಸೋದರಿ ಬ್ರಹ್ಮವಾದಿನಿ; ಪ್ರಭಾಸನ ಪತ್ನಿ. ಪತ್ನಿ ತಾರಾದೇವಿ. ಸುಭೆ ಇವಳ ಇನ್ನೊಂದು ಹೆಸರು. ಬೃಹಸ್ಪತಿಯ ಮತ್ತೊಬ್ಬ ಹೆಂಡತಿ ಚಾಂದ್ರಮಸಿ. ಚಂದ್ರನಿಂದ ಅಪಹೃತಳಾದ ತಾರಯೇ ಚಾಂದ್ರಮಸಿಯೆಂಬ ವಾದವೂ ಇದೆ. ಈಕೆಯಲ್ಲಿ ಶಂಯು, ನಿಶ್ಚ್ಯವನ, ವಿಶ್ವಜಿತ್, ವಿಶ್ವಭುಕ್, ಬಡಬಾಗ್ನಿ, ಸ್ಪಿಷ್ಟಕೃತರೆಂಬ ಆರುಮಂದಿ ಪುತ್ರರೂ ಸ್ವಾಹಾ ಎಂಬ ಪುತ್ರಿಯೂ ಜನಿಸಿದರು.

ಈತನ ಮಗನಾದ ಕಚ ಯಾವ ಪತ್ನಿಯಲ್ಲಿ ಜನಿಸಿದವನೆಂದು ತಿಳಿಯದು. ಬೃಹಸ್ಪತಿ ತನ್ನ ಅಣ್ಣನಾದ ಉಚಧ್ಯನ ಪತ್ನಿ ಮಮತಾದೇವಿಯಲ್ಲಿ ಭರದ್ವಾಜನೆಂಬ ಮಗನನ್ನು ಪಡೆದ. ನಹುಷ ಇಂದ್ರನಾಗಿದ್ದಾಗ ಶಚಿದೇವಿಯನ್ನು ನಿರ್ಬಂಧಪಡಿಸಿದ. ನಹುಷನನ್ನು ಅನರ್ಥಕ್ಕೆ ಗುರಿಮಾಡಿ, ಶಚಿದೇವಿಯ ಪಾತಿವ್ರತ್ಯವನ್ನು ಕಾಪಾಡಿದ. ಕೋಸಲ ದೇಶದ ಅರಸನಾದ ವಸುಮನಸನೆಂಬ ರಾಜನಿಗೆ ರಾಜಧರ್ಮಗಳನ್ನು ವಿವರಿಸಿದ. ರಾಜಧರ್ಮವನ್ನು ಕುರಿತು ಇಂದ್ರನೊಡನೆ ಸಂವಾದ ಮಾಡಿದ. ಉಪರಿಚವಸುವಿನಿಂದ ಯಜ್ಞ ಮಾಡಿಸಿದ. ಯಧಿಷ್ಠಿರನಿಗೆ ಧರ್ಮೋಪದೇಶ ನೀಡಿದ. ದ್ರುಪದನ ಅರಮನೆಯಲ್ಲಿ ದ್ರೌಪದಿ ಚಿಕ್ಕವಳಿರುವಾಗ ಒಬ್ಬ ಬ್ರಾಹ್ಮಣ ಬಂದು ಆಕೆಗೆ ಬೃಹಸ್ಪತಿ ನೀತಿಯನ್ನು ಉಪದೇಶಿಸಿದ್ದನೆಂದು ವನವಾಸ ಕಾಲದಲ್ಲಿ ದ್ರೌಪದಿ ಧರ್ಮರಾಜನಿಗೆ ತಿಳಿಸಿದಳು. ಒಮ್ಮೆ ಶುಕ್ರಾಚಾರ್ಯ ಧೂಮವ್ರತವೆಂಬ ತಪಸ್ಸು ಕೈ ಕೊಂಡು, ಶಿವನನ್ನು ಕುರಿತು ತಪಸ್ಸಿನಲ್ಲಿದ್ದಾಗ ಬೃಹಸ್ಪತಿ ಶುಕ್ರಾಚಾರ್ಯನ ರೂಪದಿಂದ ರಾಕ್ಷಸರ ಬಳಿಗೆ ಹೋಗಿ ಅವರೊಡನೆ ಸೇರಿ ಅವರಿಗೆ ನಾಸ್ತಿಕವಾದ ಬೋಧಿಸಿ ಅವರನ್ನು ವಶಪಡಿಸಿಕೊಂಡ. ಮುಂದೆ ತಪಸ್ಸು ಮುಗಿಸಿ ಬಂದ ಶುಕ್ರನನ್ನು ರಾಕ್ಷಸರಾಜ ತಿರಸ್ಕರಿಸಲು ಶುಕ್ರ ರಾಕ್ಸಸರಿಗೆ ಶಾಪವಿತ್ತ. ಬೃಹಸ್ಪತಿ ಸಂತುಷ್ಟನಾಗಿ ತನ್ನ ಕೆಲಸವಾಯಿತೆಂದು ಕಣ್ಮರೆಯಾದ. ಈತ ದೈತ್ಯ ವಿನಾಶಕ್ಕಾಗಿ ಸರಸ್ವತೀ ತೀರದಲ್ಲಿ ಯಾಗ ಮಾಡಿದ. ಇದರ ಫಲವಾಗಿ ಯುದ್ಧದಲ್ಲಿ ದೈತ್ಯರು ಸೋತು ದೇವತೆಗಳು ಗೆದ್ದರು.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: