ವಿಷಯಕ್ಕೆ ಹೋಗು

ಬಿಶನ್‌ ಸಿಂಗ್‌ ಬೇಡಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Bishan Singh Bedi
ವಯಕ್ತಿಕ ಮಾಹಿತಿ
ಪೂರ್ಣ ಹೆಸರು
Bishan Singh Bedi
ಹುಟ್ಟು(೧೯೪೬-೦೯-೨೫)೨೫ ಸೆಪ್ಟೆಂಬರ್ ೧೯೪೬
ಸಾವು23 October 2023(2023-10-23) (aged 77)
ಬ್ಯಾಟಿಂಗ್Right-handed batsman
ಬೌಲಿಂಗ್Slow left-arm orthodox
ಪಾತ್ರBowler, Coach
ಅಂತಾರಾಷ್ಟ್ರೀಯ ಮಾಹಿತಿ
ರಾಷ್ಟೀಯ ತಂಡ
ಟೆಸ್ಟ್ ಚೊಚ್ಚಲ31 December 1966 v West Indies
ಕೊನೆಯ ಟೆಸ್ಟ್30 August 1979 v England
ಅಂ. ಏಕದಿನ​ ಚೊಚ್ಚಲ13 July 1974 v England
ಕೊನೆಯ ಅಂ. ಏಕದಿನ​16 June 1979 v Sri Lanka
ದೇಶೀಯ ತಂಡದ ಮಾಹಿತಿ
ವರ್ಷಗಳುತಂಡ
1968–1981Delhi
1972–1977Northamptonshire
1961–1967Northern Punjab
ವೃತ್ತಿ ಅಂಕಿಅಂಶಗಳು
ಸ್ಪರ್ಧೆ ಟೆಸ್ಟ್ ODI FC List A
ಪಂದ್ಯಗಳು ೬೭ ೧೦ ೩೭೦ ೭೨
ಗಳಿಸಿದ ರನ್ಗಳು ೬೫೬ ೩೧ ೩೫೮೪ ೨೧೮
ಬ್ಯಾಟಿಂಗ್ ಸರಾಸರಿ ೮.೯೮ ೬.೨೦ ೧೧.೩೭ ೬.೮೧
೧೦೦/೫೦ ೦/೧ –/– ೦/೭ ೦/೦
ಉನ್ನತ ಸ್ಕೋರ್ ೫೦* ೧೩ ೬೧ ೨೪*
ಎಸೆತಗಳು ೨೧೩೬೪ ೫೯೦ ೯೦೩೧೫ ೩೬೮೬
ವಿಕೆಟ್‌ಗಳು ೨೬೬ ೧೫೬೦ ೭೧
ಬೌಲಿಂಗ್ ಸರಾಸರಿ ೨೮.೭೧ ೪೮.೫೭ ೨೧.೬೯ ೨೯.೩೯
ಐದು ವಿಕೆಟ್ ಗಳಿಕೆ ೧೪ ೧೦೬
ಹತ್ತು ವಿಕೆಟ್ ಗಳಿಕೆ n/a ೨೦ n/a
ಉನ್ನತ ಬೌಲಿಂಗ್ ೭/೯೮ ೨/೪೪ ೭/೫ ೫/೩೦
ಹಿಡಿತಗಳು/ ಸ್ಟಂಪಿಂಗ್‌ ೨೬/– ೪/– ೧೭೨/– ೨೧/–
ಮೂಲ: CricketArchive, 23 January 2009

ಬಿಶನ್‌ ಸಿಂಗ್‌ ಬೇಡಿ pronunciation  (ಇಂಗ್ಲಿಷ್‌: Bishen Singh Bedi (ಕೆಲವೊಮ್ಮೆ Bishan Singh Bedi )) ಇವರು ಭಾರತದ ಮಾಜಿ ಕ್ರಿಕೆಟ್‌ ಆಟಗಾರರು. ಇವರು ಮುಖ್ಯವಾಗಿ ನಿಧಾನಗತಿಯ ಎಡಗೈ ಸ್ಪಿನ್‌ ಬೌಲರ್‌ ಆಗಿದ್ದರು. ಇವರು 1946ರ ಸೆಪ್ಟೆಂಬರ್‌ 25ರಂದ ಅಮೃತಸರದಲ್ಲಿ ಜನಿಸಿದರು. ಇವರು 1966ರಿಂದ 1979ರ ತನಕ ಭಾರತ ತಂಡದ ಸದಸ್ಯರಾಗಿ ಟೆಸ್ಟ್‌ ಕ್ರಿಕೆಟ್‌ ಪಂದ್ಯಗಳನ್ನಾಡಿದರು. ಅಂದು ಖ್ಯಾತವಾಗಿದ್ದ ಭಾರತದ ಸ್ಪಿನ್‌ ಚತುಷ್ಟಯರಾದ (ಬಿ ಎಸ್‌ ಚಂದ್ರಶೇಖರ್‌ (ಲೆಗ್‌ ಸ್ಪಿನ್‌ ಬೌಲರ್‌), ಎಸ್ ವೆಂಕಟರಾಘವನ್‌ ಮತ್ತು ಎರ್ರಾಪಳ್ಳಿ ಪ್ರಸನ್ನ (ಇಬ್ಬರೂ ಆಫ್‌ಸ್ಪಿನ್‌ ಬೌಲರ್‌ಗಳು) ಮತ್ತು ಬಿಶನ್‌ ಸಿಂಗ್‌ ಬೇಡಿ (ಎಡಗೈ ಸ್ಪಿನ್‌ ಬೌಲರ್‌) ಅವರುಗಳ ಭಾಗವಾಗಿದ್ದರು. 22 ಟೆಸ್ಟ್‌ ಪಂದ್ಯಗಳಲ್ಲಿ ಅವರು ಭಾರತ ತಂಡದ ನಾಯಕತ್ವ ವಹಿಸಿಕೊಂಡರು. ಬಿಶನ್‌ ಸಿಂಗ್‌ ಬೇಡಿ ವರ್ಣರಂಜಿತ ಪಟ್ಕಾ ರುಮಾಲು ಧರಿಸುವ ಹಾಗೂ ಕ್ರಿಕೆಟ್‌ ಆಟ ಸಂಬಂಧಿತ ಅಭಿಪ್ರಾಯಗಳನ್ನು ನೇರ ಹಾಗೂ ತೀಕ್ಷ್ಣ ಮಾತುಗಳಲ್ಲಿ ಹೇಳುವಲ್ಲಿ ಖ್ಯಾತರಾಗಿದ್ದರು.

ವೃತ್ತಿ ಜೀವನ

[ಬದಲಾಯಿಸಿ]

ಕ್ರಿಕೆಟ್‌ ಆಟಕ್ಕೆ ಅತಿ ತಡ ಎನ್ನಲಾದ ತಮ್ಮ ಹದಿಮೂರನೆಯ ವರ್ಷ ವಯಸ್ಸಿನಲ್ಲಿ ಕ್ರಿಕೆಟ್‌ ಆಡಲು ಆರಂಭಿಸಿದ ಬಿಶನ್‌ ಸಿಂಗ್ ಬೇಡಿ, ಕೇವಲ ಹದಿನೈದು ವರ್ಷ ವಯಸ್ಸಿನಲ್ಲಿಯೇ ಭಾರತದ ಅಂತರ್ದೇಶೀಯ ಕ್ರಿಕೆಟ್ ಪಂದ್ಯಗಳಲ್ಲಿ ಮೊದಲಿಗೆ ಉತ್ತರ ಪಂಜಾಬ್‌ ತಂಡದ ಪರ ಆಡಿದರು.[] 1968-69ರ ಋತುವಿನಲ್ಲಿ ಬಿಶನ್‌ ಸಿಂಗ್‌ ಬೇಡಿ ದಿಲ್ಲಿಗೆ ಸ್ಥಳಾಂತರಗೊಂಡರು. ರಣಜಿ ಟ್ರೊಫಿ ಪಂದ್ಯಾವಳಿಯ 1974-75 ಋತುವಿನಲ್ಲಿ ಅವರು 64 ವಿಕೆಟ್‌ ಗಳಿಸಿ ದಾಖಲೆ ಸೃಷ್ಟಿಸಿದ್ದರು. ಅವರು ಹಲವು ವರ್ಷಗಳ ಕಾಲ ಇಂಗ್ಲೆಂಡ್‌ ದೇಶದ ನಾರ್ಥಾಂಪ್ಟನ್ಷೈರ್‌ ಕೌಂಟಿ ಕ್ರಿಕೆಟ್‌ ತಂಡದ ಪ್ರತಿನಿಧಿತ್ವ ವಹಿಸಿದ್ದರು. ಪ್ರಥಮ ದರ್ಜೆ ಕ್ರಿಕೆಟ್‌ ವೃತ್ತಿಯಲ್ಲಿ ಬಿಶನ್ ಸಿಂಗ್ ಬೇಡಿ 1650 ವಿಕೆಟ್‌ ಗಳಿಸಿದ್ದು ಭಾರತೀಯ ಯಾವದೇ ಕ್ರಿಕೆಟಿಗರ ಪಾಲಿಗೆ ಇದು ದಾಖಲೆಯಾಗಿ ಉಳಿದಿದೆ.

ಇವರ ಎಡಗೈ ಸ್ಪಿನ್ ಬೌಲಿಂಗ್‌ ಪೂರ್ಣ ಚತುರತೆ,ಕುಶಲಮಯ ಹಾಗೂ ಕರಾರುವಕ್ಕಾಗಿತ್ತು ಎಂದು ಬಣ್ಣಿಸಲಾಗಿತ್ತು.[] ಚೆಂಡು ಪಥದಲ್ಲಿ ಹೆಚ್ಚು ಸಮಯ ಗಾಳಿಯಲ್ಲಿ ತೇಲುವಂತೆ ಅವರು ಬೌಲ್ ಮಾಡುತ್ತಿದ್ದರು. ಎದುರಾಳಿ ಬ್ಯಾಟ್ಸ್‌ಮನ್‌ರ ಕಣ್ಣು ತಪ್ಪಿಸಿ ಚೆಂಡನ್ನು ಸಹಜಕ್ಕಿಂತಲೂ ನಿಧಾನಗತಿಯಲ್ಲಿ ಅಥವಾ ತ್ವರಿತ ಗತಿಯಲ್ಲಿ ಬೌಲ್‌ ಮಾಡುತ್ತಿದ್ದರು. ಅವರ ಬೌಲಿಂಗ್‌ ವಿಧಾನವು ಬಹಳ ಸರಳ ಮತ್ತು ನಿಯಂತ್ರಿತವಾಗಿದ್ದ ಕಾರಣ, ಲಯ ಕಳೆದುಕೊಳ್ಳದೇ ಇಡೀ ದಿನ ಬೌಲ್‌ ಮಾಡುವಷ್ಟು ಸಕ್ಷಮರಾಗಿದ್ದರು. ಕ್ರಿಕೆಟ್‌ ತಂಡದ ಯಾವದೇ ನಾಯಕನಿಗೆ ಬಿಶನ್‌ರದ್ದು ಅತ್ಯಮೂಲ್ಯವಾದ ಕೊಡುಗೆಯಾಗುತ್ತಿತ್ತು. ಅವರು ಹಲವು ಟೆಸ್ಟ್ ಸರಣಿಗಳಲ್ಲಿ ಸಾಫಲ್ಯ ಗಳಿಸಿದ್ದರು []:

  • ಭಾರತ-ಆಸ್ಟ್ರೇಲಿಯಾ ಟೆಸ್ಟ್‌ ಸರಣಿ 1969–70: 21 ವಿಕೆಟ್‌ಗಳು, 20.57 ಸರಾಸರಿ


  • ಭಾರತ-ಇಂಗ್ಲೆಂಡ್ ಟೆಸ್ಟ್‌ ಸರಣಿ 1972–73: 25 ವಿಕೆಟ್‌ಗಳು, 25.28 ಸರಾಸರಿ
  • ವೆಸ್ಟ್‌ ಇಂಡೀಸ್ ನೆಲೆಯಲ್ಲಿ ಭಾರತ-ವೆಸ್ಟ್‌ ಇಂಡೀಸ್ ಟೆಸ್ಟ್‌ ಸರಣಿ: 18 ವಿಕೆಟ್‌ಗಳು, 25.33 ಸರಾಸರಿ
  • ಭಾರತ-ನ್ಯೂಜಿಲೆಂಡ್ ಟೆಸ್ಟ್‌ ಸರಣಿ‌ 1976–77: 22 ವಿಕೆಟ್‌ಗಳು, 13.18 ಸರಾಸರಿ


  • ಭಾರತ-ಇಂಗ್ಲೆಂಡ್‌ ಟೆಸ್ಟ್‌ ಸರಣಿ 1976–77: 25 ವಿಕೆಟ್‌ಗಳು, 22.96 ಸರಾಸರಿ
  • ಆಸ್ಟ್ರೇಲಿಯಾ ನೆಲೆಯಲ್ಲಿ ನಡೆದ ಭಾರತ-ಆಸ್ಟ್ರೇಲಿಯಾ ಟೆಸ್ಟ್ ಸರಣಿ 1977–78: 31 ವಿಕೆಟ್‌ಗಳು, 23.87 ಸರಾಸರಿ

1969-70 ಋತುವಿನಲ್ಲಿ, ಕೊಲ್ಕತ್ತಾದಲ್ಲಿ ಆಸ್ಟ್ರೇಲಿಯಾ ವಿರುದ್ಧ 98 ರನ್‌ ನೀಡಿ ಏಳು ವಿಕೆಟ್‌ ಗಳಿಸಿದ್ದು (7/98) ಬಿಶನ್‌ ಸಿಂಗ್‌ ಬೇಡಿಯವರ ಅತ್ಯುತ್ತಮ ಇನ್ನಿಂಗ್ಸ್‌ ಬೌಲಿಂಗ್‌ ಅಂಕಿಅಂಶವಾಗಿದೆ. 1978-79 ಋತುವಿನಲ್ಲಿ, ಪರ್ತ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 194 ರನ್‌ ನೀಡಿ ಹತ್ತು ವಿಕೆಟ್‌ ಗಳಿಸಿದ್ದು (10/194) ಒಟ್ಟಾರೆ ಟೆಸ್ಟ್‌ ಪಂದ್ಯವೊಂದರಲ್ಲಿ ಅತ್ಯುತ್ತಮ ಬೌಲಿಂಗ್‌ ಮಾದರಿಯಾಗಿದೆ.[] 1974-75 ಋತುವಿನಲ್ಲಿ, ನವದೆಹಲಿಯಲ್ಲಿ ದಿಲ್ಲಿ ತಂಡದ ಪರ ಆಡಿ ಜಮ್ಮು ಮತ್ತು ಕಾಶ್ಮೀರ ವಿರುದ್ಧ 7/5ರ ಬೌಲಿಂಗ್‌, ಪ್ರಥಮ ದರ್ಜೆ ಕ್ರಿಕೆಟ್‌ ಪಂದ್ಯಗಳಲ್ಲಿ ಅವರ ಅತ್ಯುತ್ತಮ ದಾಖಲೆಯಾಗಿತ್ತು.[] ಅವರು ಎಡಗೈ ಸ್ಪಿನ್‌ ಬೌಲರ್‌ ಆಗಿದ್ದರೂ, ಬಲಗೈ ಬ್ಯಾಟ್ಸ್‌‌ಮನ್ ಆಗಿದ್ದರು. ಅವರ ಬ್ಯಾಟಿಂಗ್‌ ಸಾಫಲ್ಯ ಕಡಿಮೆಯಿದ್ದರೂ, ಜಿಲೆಟ್‌ ಕಪ್‌ ಪಂದ್ಯಾವಳಿಯಲ್ಲಿ ನಾರ್ಥಾಂಪ್ಟನ್ಷೈರ್ ಪರ ಆಡಿದ ಬಿಶನ್‌ ಸಿಂಗ್‌ ಬೇಡಿ, ಹ್ಯಾಂಪ್ಷೈರ್‌ ವಿರುದ್ಧ ಸೆಮಿಫೈನಲ್‌ ಪಂದ್ಯದ ಅಂತಿಮ ಎರಡನೆಯ ಚೆಂಡಿನಲ್ಲಿ ಬೌಂಡರಿ ಹೊಡೆದು, ತಮ್ಮ ತಂಡ ಎರಡು ವಿಕೆಟ್‌ಗಳ ಅಂತರದಲ್ಲಿ ಗೆಲ್ಲಲು ಕಾರಣರಾದರು.[] 1976ರಲ್ಲಿ ಕಾನ್ಪುರದಲ್ಲಿ ನ್ಯೂಜಿಲೆಂಡ್‌ ವಿರುದ್ಧ ಔಟಾಗದೆ 50 ರನ್‌ ಗಳಿಸಿದ್ದು, ಅವರ ಅತ್ಯುನ್ನತ ಟೆಸ್ಟ್‌ ಬ್ಯಾಟಿಂಗ್‌ ದಾಖಲೆಯಾಗಿದೆ. ಇದು ಅವರ ಏಕೈಕ ಅರ್ಧಶತಕ.[]

1976ರಲ್ಲಿ ಮನ್ಸೂರ್‌ ಅಲಿ ಖಾನ್ ಪಟೌಡಿಯ ನಂತರ, ಬಿಶನ್‌ ಸಿಂಗ್‌ ಬೇಡಿ ಭಾರತೀಯ ಕ್ರಿಕೆಟ್‌ ತಂಡದ ನಾಯಕತ್ವ ವಹಿಸಿಕೊಂಡರು. 1976ರ ಋತುವಿನಲ್ಲಿ, ವೆಸ್ಟ್‌ ಇಂಡೀಸ್‌ ವಿರುದ್ಧ ಪೋರ್ಟ್‌ ಆಫ್‌ ಸ್ಪೇನ್‌ನಲ್ಲಿ ನಡೆದ ಮೂರನೆಯ ಕ್ರಿಕೆಟ್‌ ಟೆಸ್ಟ್‌ ಪಂದ್ಯದಲ್ಲಿ, ಭಾರತ ತಂಡವು 406 ರನ್‌ಗಳ ದಾಖಲೆ ಲಕ್ಷ್ಯ ತಲುಪಿ ಜಯಗಳಿಸಿದ್ದು ಬಿಶನ್‌ ಸಿಂಗ್‌ ಬೇಡಿ ನಾಯಕತ್ವದಲ್ಲಿನ ಮೊದಲ ಗೆಲುವಾಗಿತ್ತು.[] ಇದಾದ ನಂತರ, ಸ್ವದೇಶದಲ್ಲಿ ನ್ಯೂಜೀಲೆಂಡ್‌ ವಿರುದ್ಧ 2-0 ಅಂತರದ ಟೆಸ್ಟ್‌ ಸರಣಿ ಗೆಲುವು ಪ್ರಾಪ್ತಿಯಾಯಿತು. ಆದರೂ, ಮೂರು ಸತತ ಸರಣಿಗಳಲ್ಲಿ ಭಾರತ ತಂಡವು (ಸ್ವದೇಶದಲ್ಲಿ ಇಂಗ್ಲೆಂಡ್‌ ವಿರುದ್ಧ 1-3, ಆಸ್ಟ್ರೇಲಿಯಾದಲ್ಲಿ ಆತಿಥೇಯ ತಂಡ ವಿರುದ್ಧ 2-3 ಹಾಗೂ ಪಾಕಿಸ್ತಾನದಲ್ಲಿ ಆತಿಥೇಯ ತಂಡ ವಿರುದ್ಧ 0-2 ಅಂತರಗಳಲ್ಲಿ) ಸೋತ ಪರಿಣಾಮವಾಗಿ, ಬಿಶನ್‌ ಸಿಂಗ್‌ ಬೇಡಿ ಸ್ಥಾನದಲ್ಲಿ ಸುನಿಲ್‌ ಗಾವಸ್ಕರ್‌ರನ್ನು ನಾಯಕರನ್ನಾಗಿ ನೇಮಿಸಲಾಯಿತು.

2008ರಲ್ಲಿ, ವಿಸ್ಡೆನ್‌ ಕ್ರಿಕೆಟರ್ಸ್‌ ಅಲ್ಮನಾಕ್‌ ಪ್ರಕಾರ, ವಿಸ್ಡೆನ್‌ ವರ್ಷದ ಕ್ರಿಕೆಟಿಗ ಪ್ರಶಸ್ತಿ ಆಯ್ಕೆಯಾಗದಿರುವ ಐದು ಅತ್ಯುತ್ತಮ ಕ್ರಿಕೆಟಿಗರಲ್ಲೊಬ್ಬರು ಎಂಬ ಹೇಳಿಕೆ ನೀಡಿತು.[]

ಸ್ಪಿನ್ ಬೌಲಿಂಗ್‌ ಮಾಡಲು ಕೈಕಾಲುಗಳಿಗೆ ಸತತ ಕೆಲಸ ಮಾಡುವ ಅಗತ್ಯವಿದೆ. ಆದ್ದರಿಂದ, ತಮ್ಮ ಬಟ್ಟೆಗಳನ್ನು ತಾವೇ ಒಗೆಯುತ್ತಿದ್ದರೆಂದು ಹೇಳಿದರು. ಇದು ತೋಳುಗಳಿಗೆ ಮತ್ತು ಕೈಬೆರಳುಗಳಿಗೆ ಅತ್ಯುತ್ತಮ ವ್ಯಾಯಾಮ ಎಂದೂ ಸಹ ವಿವರಿಸಿದರು.[]

ವಿವಾದ

[ಬದಲಾಯಿಸಿ]

ಭಾರತ ತಂಡದ ನಾಯಕರಾಗಿದ್ದಾಗ, ಅವರ ವ್ಯಕ್ತಿತ್ವದಿಂದಾಗಿ ಅನಿವಾರ್ಯ ವಿವಾದಗಳುಂಟಾದವು.

1976ರಲ್ಲಿ ಆತಿಥೇಯ ವೆಸ್ಟ್‌ ಇಂಡೀಸ್‌ ವಿರುದ್ಧ 406 ರನ್‌ ಲಕ್ಷ್ಯವನ್ನು ಸಮರ್ಥವಾಗಿ‌ ಬೆನ್ನಟ್ಟಿದ ನಂತರ, ಮುಂದಿನ, ಅಂದರೆ ನಾಲ್ಕನೆಯ ಟೆಸ್ಟ್‌ ಪಂದ್ಯಕ್ಕಾಗಿ ವೆಸ್ಟ್‌ ಇಂಡೀಸ್‌ ತಂಡವು ನಾಲ್ವರು ಅಕ್ರಮಣಕಾರಿ ವೇಗದ ಬೌಲರ್‌ಗಳನ್ನು ಸೇರಿಸಿಕೊಂಡಿತು. ಇವರ ತಂತ್ರಗಳ ವಿರುದ್ಧ ಬಿಶನ್‌ ಸಿಂಗ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಇದು ಬೆದರಿಸುವ ತಂತ್ರ ಎಂದು ಟೀಕಿಸಿದರು. ವೆಸ್ಟ್‌ ಇಂಡೀಸ್‌ ಅತಿವೇಗದ ಬೌಲರ್‌ಗಳ ಚೆಂಡಿನ ದಾಳಿಯಿಂದ ಭಾರತ ತಂಡದ ಇಬ್ಬರು ಬ್ಯಾಟ್ಸ್‌ಮನ್‌ ಗಾಯಗೊಂಡು ಹೊರಬಂದ ಕೂಡಲೇ, ಬಿಶನ್‌ ಸಿಂಗ್‌ ಬೇಡಿ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡಿಬಿಟ್ಟರು. ಆನಂತರ, ಈ ಪಂದ್ಯದ ಎರಡನೆಯ ಇನ್ನಿಂಗ್ಸ್‌ನಲ್ಲಿ ಐದು ಜನ ಆಟಗಾರರು ಗಾಯಗೊಂಡಿದ್ದರು.[]

ವ್ಯಾಸಿಲೀನ್‌ (ಲೇಪನದ್ರವ್ಯ) ಘಟನೆ - 1976-77 ಋತುವಿನಲ್ಲಿ, ಭಾರತ ಪ್ರವಾಸ ನಡೆಸುತ್ತಿದ್ದ ಇಂಗ್ಲೆಂಡ್‌ ತಂಡದ ವಿರುದ್ಧ ಚೆನ್ನೈಯಲ್ಲಿ ಮೂರನೆಯ ಟೆಸ್ಟ್‌ ಪಂದ್ಯದ ಸಮಯ, ಇಂಗ್ಲೆಂಡ್‌ ವೇಗದ ಬೌಲರ್‌ ಜಾನ್‌ ಲೀವರ್‌ ಚೆಂಡನ್ನು ನುಣುಪುಗೊಳಿಸಲು ವ್ಯಾಸಿಲೀನ್‌ನ್ನು ನಿಯಮಬಾಹಿರವಾಗಿ ಲೇಪಿಸಿದರೆಂದು ಆರೋಪಿಸಿದ್ದರು. ತಮ್ಮ ಹಣೆಯಿಂದ ಕಣ್ಣುಗಳಿಗೆ ಬೆವರಿಳಿಯುವುದನ್ನು ತಪ್ಪಿಸಲು ಜಾನ್‌ ಲೀವರ್‌ ವ್ಯಾಸಿಲೀನ್‌ ಪಟ್ಟಿ ಧರಿಸಿದ್ದರು. ಆನಂತರದ ವಿಚಾರಣೆಯಲ್ಲಿ ಜಾನ್‌ ಲೀವರ್‌ರನ್ನು ಆರೋಪಮುಕ್ತ ಗೊಳಿಸಲಾಯಿತು.[]

1978ರ ನವೆಂಬರ್‌ ತಿಂಗಳಲ್ಲಿ ಬಿಶನ್‌ ಸಿಂಗ್ ಬೇಡಿ ಅಂತರರಾಷ್ಟ್ರೀಯ ಕ್ರಿಕೆಟ್‌ ಪಂದ್ಯವೊಂದನ್ನು ಬಿಟ್ಟುಕೊಟ್ಟ ಮೊದಲ ನಾಯಕರಾದರು. ಸಾಹಿವಾಲ್‌ನಲ್ಲಿ ಆತಿಥೇಯ ಪಾಕಿಸ್ತಾನ ವಿರುದ್ಧದ ಏಕದಿನ ಅಂತರರಾಷ್ಟ್ರೀಯ ಪಂದ್ಯವೊಂದರಲ್ಲಿ ಭಾರತ ತಂಡಕ್ಕೆ ಎಂಟು ವಿಕೆಟ್‌ ಉಳಿದುಕೊಂಡು 14 ಚೆಂಡೆಸೆತಗಳಲ್ಲಿ ಕೇವಲ 23 ರನ್‌ ಗಳಿಸಬೇಕಿತ್ತು. ಅದರೆ, ಪಾಕಿಸ್ತಾನಿ ವೇಗದ ಬೌಲರ್‌ ಸರ್ಫರಾಜ್‌ ನವಾಜ್‌ ನಾಲ್ಕು ಸತತ ಬೌನ್ಸರ್‌ ಬೌಲ್ ಮಾಡಿದ್ದರೂ ಅಂಪೈರ್‌ಗಳು 'ವೈಡ್‌' ಎಂದು ತೀರ್ಪು ನೀಡಿರಲಿಲ್ಲ. ಇದನ್ನು ಪ್ರತಿಭಟಿಸಿದ ಬೇಡಿ, ಕ್ರೀಸ್‌ನಲ್ಲಿದ್ದ ತಮ್ಮ ತಂಡದ ಬ್ಯಾಟ್ಸ್‌ಮನ್‌ಗಳನ್ನು ಹೊರಬರುವಂತೆ ಸೂಚಿಸಿ, ಪಂದ್ಯವನ್ನು ಬಿಟ್ಟುಕೊಟ್ಟರು.[]

ತರಬೇತಿ

[ಬದಲಾಯಿಸಿ]

1990ರಲ್ಲಿ, ಬಿಶನ್‌ ಸಿಂಗ್‌ ಬೇಡಿ ಕೆಲ ಕಾಲ ಭಾರತ ಕ್ರಿಕೆಟ್‌ ನ ರಾಷ್ಟ್ರೀಯ ತಂಡದ ತರಬೇತುದಾರರಾಗಿದ್ದರು. ಬಿಶನ್‌ ಸಿಂಗ್‌, ಮೊದಲ ಪೂರ್ಣಕಾಲಿಕ ತರಬೇತುದಾರರಾಗಿದ್ದ ವ್ಯಕ್ತಿಯಾಗಿದ್ದರು. ಆ ವರ್ಷ ಆತಿಥೇಯ ನ್ಯೂಜಿಲೆಂಡ್ ವಿರುದ್ಧ ಬಹಳ ಕಳಪೆ ಆಟವಾಡಿದ ಭಾರತೀಯ ಕ್ರಿಕೆಟ್‌ ತಂಡವನ್ನು ಸಮುದ್ರದಲ್ಲಿ ದಬ್ಬಿಬಿಡುತ್ತೇನೆ ಎಂದು ಅವರು ಹೆದರಿಸಿ,ಖಾರವಾಗಿ ನುಡಿದದ್ದು ಬಹಳಷ್ಟು ಚರ್ಚಿತ ವಿಚಾರವಾಯಿತು.[೧೦]

ಇಂದಿನ ಆಧುನಿಕ ಕ್ರಿಕೆಟ್‌ ವಿಚಾರಗಳ ಬಗ್ಗೆ ಅಭಿಪ್ರಾಯಗಳು

[ಬದಲಾಯಿಸಿ]

ಇಂದಿನ ಕ್ರಿಕೆಟ್‌ ಆಟದ ವಿದ್ಯಮಾನದ ಹಲವಾರು ವಿಚಾರಗಳ ಬಗ್ಗೆ ಬಿಶನ್‌ ಸಿಂಗ್‌ ಬೇಡಿ ಬಹಳ ತೀಕ್ಷ್ಣ ಹಾಗೂ ನೇರ ಅಭಿಪ್ರಾಯ ವ್ಯಕ್ತಪಡಿಸಿದ್ದರು.[೧೧] ಅವರು "ಬಿಚ್ಚು ಮನಸ್ಸಿನಿಂದ ಮಾತನಾಡಲು ಎಂದೂ ಸಹ ಹಿಂಜರಿಯುತ್ತಿರಲಿಲ್ಲ".[೧೧] ವಿಶಿಷ್ಟವಾಗಿ, ಕ್ರಿಕೆಟ್‌ ಟೆಸ್ಟ್‌ ಪಂದ್ಯಗಳಲ್ಲಿ 800 ವಿಕೆಟ್‌ ಗಳಿಸಿ ದಾಖಲೆ ಸೃಷ್ಟಿಸಿದ ಶ್ರೀಲಂಕಾದ ಬಲಗೈ ಆಫ್‌ಸ್ಪಿನ್‌ ಬೌಲರ್‌ ಮುತ್ತಯ್ಯ ಮುರಲಿಧರನ್‌ರನ್ನು ಬಹಳಷ್ಟು ಟೀಕಿಸಿದ್ದುಂಟು ("ಮುರಲಿ ಚೆಂಡನ್ನು ನಿಯಮಬಾಹಿರವಾಗಿ ಬೌಲ್‌ ಮಾಡದಿದ್ದಲ್ಲಿ, ಬೌಲ್‌ ಮಾಡುವುದು ಹೇಗೆಂದು ನನಗೆ ತೋರಿಸಿ" []). ಮುರಲಿಯವರ ಬೌಲಿಂಗ್‌ ಶೈಲಿಯನ್ನು ನಿಯಮಬಾಹಿರ, ಇದನ್ನು ಮೋಸವೆಂದು ಜರಿದು, ಇದನ್ನು ಈಟಿ ಎಸೆತಕ್ಕೆ [೧೨] ಹೋಲಿಸಿದ್ದರು. ಇತ್ತೀಚೆಗೆ ಮುರಲಿ ಬೌಲಿಂಗ್‌ ಶೈಲಿಯನ್ನು ಷಾಟ್‌ಪುಟ್‌ ಎಸೆತಕ್ಕೆ ಹೋಲಿಸಿ, 'ಮುರಲಿ ಇನ್ನು 1000 ಟೆಸ್ಟ್‌ ವಿಕೆಟ್‌ ಗಳಿಸುತ್ತಾರೆ ಆದರೆ ಅವೆಲ್ಲವೂ ನನ್ನ ದೃಷ್ಟಿಯಿಂದ ಕೇವಲ ರನ್‌ಔಟ್‌ಗಳು' ಎಂದು ಲೇವಡಿ ಮಾಡಿದ್ದರು.[೧೩] ನಿಯಮಬಾಹಿರ ಬೌಲಿಂಗ್‌ ಶೈಲಿಯ (chucking) ವಿರುದ್ಧ ಕಟು ಟೀಕೆ ಮಾಡಿದ ಬಿಶನ್‌ ಸಿಂಗ್‌ ಬೇಡಿ, ಇಂತಹ ಬೌಲಿಂಗ್‌ನ್ನು ಲಂಚದ ವ್ಯವಹಾರ ಮತ್ತು ಬಾಜಿ ಕಟ್ಟುವುದಕ್ಕಿಂತಲೂ ಕೆಟ್ಟದ್ದು ಎಂದಿದ್ದರು.[] ಉಪಖಂಡದ ಹಲವು ಬೌಲರ್‌ಗಳು ಇದೇ ಶೈಲಿಯಲ್ಲಿ ಬೌಲ್‌ ಮಾಡುತ್ತಾರೆ. ಮುತ್ತಯ್ಯ ಮುರಲಿಧರನ್‌, ಷೇನ್‌ ವಾರ್ನ್‌ ಎಂಬ ಇಂತಹ ಬೌಲಿಂಗ್‌ ಕ್ರೀಡಾಗಳನ್ನು ಬೆನ್ನಟ್ಟುತ್ತಿರುವ "ಶ್ರೀಲಂಕಾದ ಕಾಡುಗಳ್ಳ ಎಂದು ಬಿಶನ್ ಸಿಂಗ್‌ ಬೇಡಿ 2004ರಲ್ಲಿ ಅಭಿಪ್ರಾಯ ಪಟ್ಟಿದ್ದರು." [೧೪] ಬಿಶನ್‌ ಸಿಂಗ್‌ ವಿರುದ್ಧ ಮಾನಹಾನಿ ಮೊಕದ್ದಮೆ ಹೂಡುವುದಾಗಿ ಮುರಲಿಧರನ್‌ ಬೆದರಿಕೆ ಹಾಕಿದ್ದರೂ,[೧೫] ಮುರಲಿ ವಿರುದ್ಧ ಯಾವುದೇ ವೈಯಕ್ತಿಕ ದ್ವೇಷವಿಲ್ಲ ಎಂದು ಬಿಶನ್‌ ಸಿಂಗ್‌ ಬೇಡಿ ಸ್ಪಷ್ಟಪಡಿಸಿದ್ದಾರೆ.[೧೬] ಇತ್ತೀಚೆಗೆ, ತಮ್ಮ ದೇಶದವರೇ ಆದ ಹರ್ಭಜನ್ ಸಿಂಗ್‌ ವಿರುದ್ಧ ಇದೇ ರೀತಿಯ ಕಟುಟೀಕೆ ಮಾಡಿದ್ದಾರೆ.[೧೭] ಕ್ರಿಕೆಟ್‌ ಆಟದಲ್ಲಿ ಬೌಲರ್‌ಗಳ ನಿಯಮಸಮ್ಮತವಲ್ಲದ ಬೌಲಿಂಗ್ ಶೈಲಿಯ ಕುರಿತು, ಅವರು ಹೇಳಿದ್ದು, 'ಬೌಲರ್‌ಒಬ್ಬ ನಿಯಮಬಾಹಿರ ಶೈಲಿಯಲ್ಲಿ ಬೌಲ್‌ ಮಾಡಿದ್ದಲ್ಲಿ, ಆ ಬೌಲರರ ವಿಷಯವನ್ನು ತಾಂತ್ರಿಕ ಸಮಿತಿ ಹಾಗೂ ಕ್ರಿಕೆಟ್‌ ನಿಯಂತ್ರಣಾ ಮಂಡಳಿಯ ಗಮನಕ್ಕೆ ತರಲಾಗುತ್ತದೆ. ಬೌಲರ್‌ ವೈಡ್‌ ಅಥವಾ ನೋಬಾಲ್‌ ಮಾಡಿದಲ್ಲಿ ಇದೇ ಕ್ರಮ ಕೈಗೊಳ್ಳಬಾರದೇಕೆ?' [೧೧]. ಭಾರತದಲ್ಲಿ ಸ್ಪಿನ್‌ ಬೌಲಿಂಗ್‌ ಕಲೆಯ ಅವನತಿಗೆ ಏಕದಿನ ಕ್ರಿಕೆಟ್‌, ಆಧುನಿಕ ಶೈಲಿಯ ಕ್ರಿಕೆಟ್‌ ಬ್ಯಾಟ್‌ಗಳು ಮತ್ತು ಕಡಿಮೆ ವ್ಯಾಸದ ಸಣ್ಣ ಕ್ರಿಕೆಟ್‌ ಮೈದಾನಗಳು ಕಾರಣ ಎಂದು ಬಿಶನ್‌ ಸಿಂಗ್‌ ಬೇಡಿ ಅಭಿಪ್ರಾಯಪಟ್ಟಿದ್ದಾರೆ.[]

ಸುನಿಲ್‌ ಗಾವಸ್ಕರ್ ವಿರುದ್ಧವೂ ವಾಗ್ದಾಳಿ ಮಾಡಿದ ಬಿಶನ್‌ ಸಿಂಗ್‌ ಬೇಡಿ, ಇವರೊಬ್ಬ 'ಒಬ್ಬ ಹಾನಿಕಾರಕ ಪ್ರಭಾವ' ಎಂದು ಟೀಕಿಸಿದ್ದಾರೆ.[೧೮] 'ಈ ಆಸ್ಟ್ರೇಲಿಯನ್‌ ತಂಡವನ್ನು ನೀವೇ ಉನ್ನತ ಮಟ್ಟಕ್ಕೆ ತಂದಿರೋ ಅಥವಾ ಅದೇ ನಿಮ್ಮನ್ನು ತಂದಿತೋ, ಹೇಳಿ ಜಾನ್‌' ಎಂದು ಆಸ್ಟ್ರೇಲಿಯಾದ ತರಬೇತುದಾರ ಜಾನ್‌ ಬುಚನಾನ್‌ಗೆ ಅವರು ಪ್ರಶ್ನಿಸಿದ್ದರು.[೧೯]

ಇನ್ನೂ ಇತ್ತೀಚೆಗೆ, ಟಿ20 ಮಾದರಿಯ ಕ್ರಿಕೆಟ್‌ನ್ನು 'ಕ್ರಿಕೆಟ್‌ನ ಅತಿ ಅಸಹ್ಯಕರ ರೂಪ' ಎಂದು ಬಿಶನ್‌ ಸಿಂಗ್‌ ಬೇಡಿ ಟೀಕಿಸಿದ್ದರು.

ವೈಯಕ್ತಿಕ ಜೀವನ

[ಬದಲಾಯಿಸಿ]

ಪುತ್ರ ಅಂಗದ ಬೇಡಿ ದಿಲ್ಲಿ ತಂಡಕ್ಕಾಗಿ ಅಂಡರ್‌-19 ಮಟ್ಟದ ವರೆಗೂ ಕ್ರಿಕೆಟ್‌ ಪಂದ್ಯಗಳನ್ನಾಡಿದ್ದರು. ನಂತರ ರೂಪದರ್ಶಿ ಹಾಗೂ ನಟರಾಗಿ ಕ್ರಿಕೆಟ್‌ನಿಂದ ದೂರ ಸರಿದರು.

ಉಲ್ಲೇಖಗಳು

[ಬದಲಾಯಿಸಿ]
  1. ಟ್ರೆವರ್‌ ಬೇಯ್ಲಿ, ರಿಚಿ ಬೆನೋಡ್‌, ಕೊಲಿನ್‌ ಕೌಡ್ರೆ ಮತ್ತು ಜಿಮ್‌ ಲೇಕರ್, 'ದಿ ಲಾರ್ಡ್ಸ್‌ ಟೇವರ್ನರ್ಸ್‌ ಫಿಫ್ಟಿ ಗ್ರೇಟೆಸ್ಟ್‌', ಹೇನ್ಮನ್‌-ಕ್ವಿಕ್ಸೊಟ್‌, 1983
  2. ಡಿ. ಜೆ. ರತ್ನಾಗರ್‌, ದಿ ಬಾರ್ಕ್ಲೆಸ್‌ ವರ್ಲ್ಡ್‌ ಆಫ್‌ ಕ್ರಿಕೆಟ್‌, ವಿಲ್ಲೊ ಬುಕ್ಸ್‌, 1986
  3. ೩.೦ ೩.೧ ೩.೨ ೩.೩ ೩.೪ ಪೀಟರ್‌ ಅರ್ನೊಲ್ಡ್‌, ದಿ ಇಲ್ಲುಸ್ಟ್ರೇಟೆಡ್‌ ಎನ್ಸೈಕ್ಲೊಪೀಡಿಯಾ ಆಫ್‌ ವರ್ಲ್ಡ್‌ ಕ್ರಿಕೆಟ್‌, ಡಬ್ಲ್ಯೂಎಚ್‌ಸ್ಮಿತ್‌, 1985
  4. ಭಾರತದ ಕಾನ್ಪುರ ನಗರದಲ್ಲಿ, 1976ರ ನವೆಂಬರ್‌ 18ರಿಂದ 23ರ ತನಕ ನಡೆದ ಭಾರತ ಮತ್ತು ನ್ಯೂಜಿಲೆಂಡ್‌ ತಂಡಗಳ ನಡುವಣ ಎರಡನೆಯ ಕ್ರಿಕೆಟ್‌ ಟೆಸ್ಟ್‌ ಪಂದ್ಯ
  5. ಕ್ರಿಕಿನ್ಫೊ ಅಂತರಜಾಲತಾಣದಿಂದ, ಪೋರ್ಟ್‌ ಆಫ್‌ ಸ್ಪೇನ್‌ನಲ್ಲಿ 1976ರ ಏಪ್ರಿಲ್‌ 7ರಿಂದ 12ರ ತನಕ ನಡೆದ, ಭಾರತ ಮತ್ತು ವೆಸ್ಟ್‌ ಇಂಡೀಸ್‌ ತಂಡಗಳ ನಡುವಣ ಮೂರನೆಯ ಕ್ರಿಕೆಟ್‌ ಟೆಸ್ಟ್‌ ಪಂದ್ಯ
  6. ಕ್ರಿಕಿನ್ಫೊ ಅಂತರಜಾಲತಾಣದಿಂದ, ವಿಸ್ಟೆನ್‌ - ವರ್ಷದ ಕ್ರಿಕೆಟರ್‌ ಗೌರವ ಪಡೆಯದ ಕ್ರಿಕೆಟಿಗರು
  7. ೭.೦ ೭.೧ ೭.೨ ೭.೩ ಕ್ರಿಕಿನ್ಫೊ - 'Chucking is a bigger threat than bribing or betting'
  8. "4th Test: West Indies v India at Kingston, 21-25 April 1976". Cricinfo. Retrieved 18 March 2007.
  9. ಪಾಕಿಸ್ತಾನದ ಸಹಿವಾಲ್‌ನಲ್ಲಿ, 1978ರ ನವೆಂಬರ್‌ 3ರಂದು ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಣ ಮೂರನೆಯ ಏಕದಿನ ಅಂತರರಾಷ್ಟ್ರೀಯ ಕ್ರಿಕೆಟ್‌ ಪಂದ್ಯ
  10. ಬಿಶನ್‌ ಬೇಡಿ ಕ್ರಿಕಿನ್ಫೊ ಅಂತರಜಾಲತಾಣದಿಂದ
  11. ೧೧.೦ ೧೧.೧ ೧೧.೨ ಕ್ರಿಕಿನ್ಫೊ - Bishan Bedi's deadly straight delivery
  12. "'Chucking is a bigger threat than bribing or betting'". Cricinfo. Retrieved 18 March 2007.
  13. ಕ್ರಿಕಿನ್ಫೊ - 'ಬೇಡಿಯ ಟೀಕೆಯ ವಿರುದ್ಧ ನ್ಯಾಯಾಲಯ ಮೊರೆ ಹೋಗಲು ಯೋಚಿಸಿದ ಮುರಳಿ'
  14. ಕ್ರಿಕಿನ್ಫೊ - Home boys, Sheikhs and chucking
  15. ಕ್ರಿಕಿನ್ಫೊ - 'ಮುರಳಿ ವಿರುದ್ಧ ನನ್ನದೇನೂ ವೈಯಕ್ತಿ ದ್ವೇಷವಿಲ್ಲ' - ಬೇಡಿ
  16. ಕ್ರಿಕಿನ್ಫೊ - ಬೇಡಿ ವಿರುದ್ಧ ಮೊಕದ್ದಮೆಯ ಬೆದರಿಕ ಹಾಕಿದ ಮುರಳಿ
  17. ಹರ್ಭಜನ್‌ ವಿರುದ್ಧ ಟೀಕಾ ಪ್ರಹಾರ ಮಾಡಿದ ಬೇಡಿ - ಕ್ರಿಕೆಟ್‌ - ಕ್ರೀಡೆ - theage.com.au
  18. ಕ್ರಿಕಿನ್ಫೊ - ಗಾವಸ್ಕರ್‌ದು ಹಾನಿಕಾರಕ ಪ್ರಭಾವ - ಬಿಶನ್‌ ಬೇಡಿ
  19. ಕ್ರಿಕಿನ್ಫೊ - ದಿ ಮಲಾಯ್ಸ್‌ ಆಫ್‌ ಬಿಟರ್ನೆಸ್‌

ಬಾಹ್ಯ ಕೊಂಡಿಗಳು

[ಬದಲಾಯಿಸಿ]
Preceded by Indian National Test Cricket Captain
1975–76 – 1978–79
Succeeded by