ವಿಷಯಕ್ಕೆ ಹೋಗು

ಬಬಲೇಶ್ವರ ವಿಧಾನ ಸಭಾ ಕ್ಷೇತ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಬಬಲೇಶ್ವರ ವಿಧಾನಸಭಾ ಕ್ಷೇತ್ರ ಇಂದ ಪುನರ್ನಿರ್ದೇಶಿತ)

ಬಬಲೇಶ್ವರ ವಿಧಾನ ಸಭಾ ಕ್ಷೇತ್ರವು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ 8 ವಿಧಾನ ಸಭಾ ಕ್ಷೆತ್ರಗಳಲ್ಲಿ ಒಂದಾಗಿದೆ. ಬಬಲೇಶ್ವರ ಮತಕ್ಷೇತ್ರ(2018)ದಲ್ಲಿ 1,06,256 ಪುರುಷರು, 1,02,647 ಮಹಿಳೆಯರು ಸೇರಿ ಒಟ್ಟು 2,08,903 ಮತದಾರರಿದ್ದಾರೆ.

ಕ್ಷೇತ್ರದ ಇತಿಹಾಸ

[ಬದಲಾಯಿಸಿ]

ಹನ್ನೆರಡನೇ ಶತಮಾನದಲ್ಲಿ ಕಲ್ಯಾಣದಲ್ಲಿ ನಡೆದ ಮಹಾಕ್ರಾಂತಿಯ ನಂತರ ಶರಣ ಹರಳಯ್ಯ 63 ಶರಣರೊಂದಿಗೆ ಶೇಗುಣಸಿ ಹೊರ ವಲಯದಲ್ಲಿ ಕೆಲ ಕಾಲ ತಂಗಿದ್ದ ಐತಿಹ್ಯ ಇಲ್ಲಿನ ಹರಳಯ್ಯನ ಗುಂಡಿ ಇದೆ. ಮಮದಾಪುರದಲ್ಲಿ ಆದಿಲ್‌ಶಾಹಿ ಅರಸರು ಕಟ್ಟಿಸಿದ ಸುಂದರ ಕೆರೆ ಶತ ಶತಮಾನಗಳ ಕಾಲ ವಿಶಿಷ್ಟ ತಳಿಯ ಭತ್ತ ಬೆಳೆಯಲು ಆಸರೆಯಾಗಿತ್ತು ಎಂಬುದು ಇಲ್ಲಿನ ಐತಿಹ್ಯ. ಬಬಲೇಶ್ವರದ ಗುರುಪಾದೇಶ್ವರ ಬೃಹನ್ಮಠಕ್ಕೆ ತನ್ನದೇ ಪರಂಪರೆಯಿದೆ. ಕಾಖಂಡಕಿಯ ಮಹಿಪತಿದಾಸರ ಪರಂಪರೆ ರಾಜ್ಯದಲ್ಲೇ ಹೆಸರುವಾಸಿ. ಕಾರಹುಣ್ಣಿಮೆ ಸಂದರ್ಭ ಇಲ್ಲಿ ನಡೆಯುವ ಓರಿ ಓಡಿಸುವ ಸ್ಪರ್ಧೆ ಮೈಮನ ರೋಮಾಂಚನಗೊಳಿಸುತ್ತದೆ. ಪ್ರಸಿದ್ಧ ಅರಕೇರಿ ಅಮೋಘ ಸಿದ್ಧೇಶ್ವರ ದೇವಾಲಯ, ಕಂಬಾಗಿ ಮತ್ತು ಹಲಗಣಿ ಗ್ರಾಮದ ಹಣಮಂತ ದೇವಾಲಯಗಳು, ಐತಿಹಾಸಿಕ ಬಬಲಾದಿಯ ಗುರು ಚಕ್ರವರ್ತಿ ಸದಾಶಿವ ಮಠ, ಬೆಳ್ಳುಬ್ಬಿಯ ಮಳೇಮಲ್ಲೇಶ್ವರ ದೇವಾಲಯ ಹಾಗೂ ದೇವರ ಗೆಣ್ಣೂರನ ಮಹಾಲಕ್ಷ್ಮಿ ದೇವಾಲಯಗಳಿವೆ. ಪ್ರಸಿದ್ಧ ದೇಸಗತಿ ಮನೆತನ ವಿಜಯಪುರ ತಾಲ್ಲೂಕಿನ ಜೈನಾಪುರ ಗ್ರಾಮದಲ್ಲಿ ವಾಸವಾಗಿದೆ.

ಒಂದೆಡೆ ಹೊಳಿ ದಂಡೆ. ಸಮೃದ್ಧಿಯ ಕೃಷಿ ಚಿತ್ರಣ. ಇನ್ನೊಂದೆಡೆ ಎತ್ತರದ ಪ್ರದೇಶ. ಹನಿ ಹನಿ ನೀರಿಗೂ ತತ್ವಾರ. ಮಳೆಯಾಶ್ರಿತ ಬೆಳೆ ಪದ್ಧತಿ. ಕೃಷ್ಣೆ–ಡೋಣಿ ಹರಿಯುವಿಕೆ. ಸಾರವಾಡ ಸುತ್ತಮುತ್ತಲಿನ ಬಿಳಿಜೋಳ ಎಲ್ಲೆಡೆ ಪ್ರಸಿದ್ಧಿ. ಕೃಷ್ಣಾ ನದಿ ತಟದ ಕಬ್ಬು ಬೆಳೆಗಾರರಿಗಾಗಿ ಜಿಲ್ಲೆಯ ಇತಿಹಾಸದಲ್ಲೇ ಆರಂಭಗೊಂಡ ಮೊದಲ ಸಹಕಾರಿ ಸಕ್ಕರೆ ಕಾರ್ಖಾನೆ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ, ಕೃಷ್ಣಾನಗರದಲ್ಲಿದೆ. ರಜತ ಮಹೋತ್ಸವ ಕಂಡ ಈ ಕಾರ್ಖಾನೆ ಈ ಭಾಗದ ರೈತರ ಆರ್ಥಿಕಾಭಿವೃದ್ಧಿಯ ಬೆನ್ನೆಲುಬಾಗಿರುವುದು ಇಲ್ಲಿನ ವಿಶೇಷ. ತಿಕೋಟಾ ಭಾಗ ದ್ರಾಕ್ಷಿಯ ಕಣಜ ಎಂದೇ ಖ್ಯಾತವಾಗಿದೆ. ವಿದೇಶಕ್ಕೂ ಇಲ್ಲಿನ ದ್ರಾಕ್ಷಿ ರಫ್ತಾಗುತ್ತಿದೆ. ಒಟ್ಟಾರೆ ಬಬಲೇಶ್ವರ ವಿಧಾನಸಭಾ ಕ್ಷೇತ್ರ ವಿಶಿಷ್ಟ ಭೌಗೋಳಿಕ ನೆಲೆಯನ್ನು ತನ್ನೊಡಲಲ್ಲಿ ಹುದುಗಿಸಿಕೊಂಡಿದೆ.

ಬಬಲೇಶ್ವರ ವಿಧಾನಸಭೆ ಕ್ಷೇತ್ರ 2008ರಲ್ಲಿ ಮರು ವಿಂಗಡಣೆ ಆದ ಬಳಿಕ ಬಬಲೇಶ್ವರ ಎಂದು ನಾಮಕರಣಗೊಂಡಿದೆ. 2008ರ ಮೊದಲು ತಿಕೋಟಾ ವಿಧಾನಸಭೆ ಕ್ಷೇತ್ರವಾಗಿತ್ತು. ನಾಲ್ಕು ಬಾರಿ ಕಾಂಗ್ರೆಸ್‌ನ ಬಿ.ಎಂ.ಪಾಟೀಲರು ಹಾಗೂ ಅವರ ಪುತ್ರ ಎಂ.ಬಿ.ಪಾಟೀಲರು ಐದು ಬಾರಿ ಆಯ್ಕೆಯಾಗಿ ಅತಿ ಹೆಚ್ಚು ವರ್ಷಗಳ ಕಾಲ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದು ವಿಶೇಷವಾಗಿದೆ. ಕ್ಷೇತ್ರ ಪುನರ್‌ ವಿಂಗಡಣೆ ಬಳಿಕ ತಿಕೋಟಾ ವಿಧಾನಸಭಾ ಕ್ಷೇತ್ರ ಬಬಲೇಶ್ವರ ವಿಧಾನಸಭಾ ಕ್ಷೇತ್ರ ದೊಳಗೆ ವಿಲೀನವಾಯಿತು. ಕ್ಷೇತ್ರಕ್ಕೆ ಉಪ ಚುನಾವಣೆ ಸೇರಿದಂತೆ ಒಟ್ಟು 14 ವಿಧಾನಸಭಾ ಚುನಾವಣೆ ನಡೆದಿದ್ದು, ಇದರಲ್ಲಿ ಒಂಭತ್ತು ಚುನಾವಣೆಗಳಲ್ಲಿ ಇಲ್ಲಿನ ಮತದಾರರು ಬಿ.ಎಂ.ಪಾಟೀಲ ಹಾಗೂ ಎಂ.ಬಿ.ಪಾಟೀಲಗೆ ಹರಸಿದ್ದಾರೆ. ತಂದೆ–ಮಗ ಇಬ್ಬರೂ ಸಚಿವರಾಗಿರುವುದು ಇಲ್ಲಿನ ವಿಶೇಷ.

1994ರಲ್ಲಿ ಜನತಾದಳದಿಂದ ಆಯ್ಕೆಯಾದ ಶಿವಾನಂದ ಪಾಟೀಲರು ಕಾಂಗ್ರೆಸ್‌ನ ಬಿ.ಎಂ.ಪಾಟೀಲ ಅವರ ಪುತ್ರ ಎಂ.ಬಿ.ಪಾಟೀಲರನ್ನು ಸೋಲಿಸಿದ್ದರು. 1999ರಲ್ಲಿ ಕಾಂಗ್ರೆಸ್‌ನ ಎಂ.ಬಿ.ಪಾಟೀಲರನ್ನು ಸೋಲಿಸಿ ಜನತಾದಳದಿಂದ ಆಯ್ಕೆಯಾದ ಶಿವಾನಂದ ಪಾಟೀಲ ಅವರು BJPಯಿಂದ ಸ್ಪರ್ಧಿಸಿ ಗೆದ್ದಿದ್ದರು. ಶಿವಾನಂದ ಪಾಟೀಲ ಅವರು ಬಸವನಬಾಗೇವಾಡಿ ಕ್ಷೇತ್ರಕ್ಕೆ ವಲಸೆ ಹೋದ ಬಳಿಕ ಎಂ.ಬಿ.ಪಾಟೀಲರು ಸತತ ಮೂರು ಬಾರಿ ಗೆದ್ದು ಹ್ಯಾಟ್ರಿಕ್‌ ಸಾಧಿಸಿದ್ದಾರೆ. ಇದರಲ್ಲಿ ನಾಲ್ಕು ಬಾರಿ ಸೋತಿರುವ ವಿಜುಗೌಡ ಪಾಟೀಲರು ಶಿವಾನಂದ ಪಾಟೀಲ ಅವರ ಕಿರಿಯ ಸಹೋದರ ಎಂಬುದು ಗಣನೀಯ.

2008ರಲ್ಲಿ ತಿಕೋಟಾ ವಿಧಾನಸಭಾ ಕ್ಷೇತ್ರವನ್ನು ಬಬಲೇಶ್ವರ ವಿಧಾನಸಭಾ ಕ್ಷೇತ್ರ ಎಂದು ನಾಮಕರಣ ಮಾಡಲಾಯಿತು. ಆಗ ಬಸವನಬಾಗೇವಾಡಿ ಕ್ಷೇತ್ರದಲ್ಲಿದ್ದ ಮಮದಾಪುರ ಹೋಬಳಿಯ 28 ಹಳ್ಳಿಗಳು ಬಬಲೇಶ್ವರ ಕ್ಷೇತ್ರಕ್ಕೆ ಸೇರ್ಪಡೆಯಾದರೆ, ತಿಕೋಟಾ ವ್ಯಾಪ್ತಿಯಲ್ಲಿದ್ದ ಕೆಲ ಹಳ್ಳಿಗಳು ನಾಗಠಾಣ(ಹಳೆಯ ಬಳ್ಳೋಳ್ಳಿ) ಕ್ಷೇತ್ರದ ಪಾಲಾದವು.

ಕ್ಷೇತ್ರದ ವಿಶೇಷತೆ

[ಬದಲಾಯಿಸಿ]
  • ಸ್ವಾತಂತ್ರ್ಯ ಹೋರಾಟಗಾರ ಮತ್ತು ಕರ್ನಾಟಕದ ಏಕೀಕರಣಕ್ಕಾಗಿ ದುಡಿದ ಹಿರಿಯರಾದ ಚೆನ್ನಬಸಪ್ಪ ಅಂಬಲಿಯವರು ಈ ಕ್ಷೇತ್ರದ 1951ರ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದು ವಿಶೇಶವಾಗಿದೆ.
  • ಬಬಲೇಶ್ವರ ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆ ಎನಿಸಿದರೂ ಕಾಂಗ್ರೆಸ್ಸೇತರ ಪಕ್ಷಗಳೂ ಬಲ್ಯ ಮೆರೆದಿವೆ. 1957ರಿಂದ ನಿರಂತರ ಗೆದ್ದಿದ್ದ ಕಾಂಗ್ರೆಸ್‌ ಪಕ್ಷ ಮೊದಲ ಸೋಲು ಕಂಡಿದ್ದು 1978ರ ಕಾಂಗ್ರೆಸ್‌ ಅಭ್ಯರ್ಥಿ ಶಿವರಾಯ ಜಿದ್ದಿ ಅವರನ್ನು ಸೋಲಿಸಿದ ಜನತಾ ಪಕ್ಷದ ಬದುಗೌಡ ಬಾಪುಗೌಡ ಪಾಟೀಲ ಮೊದಲ ಬಾರಿಗೆ ಕಾಂಗ್ರೆಸ್‌ ರಹಿತ ಶಾಸಕ ಎನಿಸಿದರು.
  • 1962ರಲ್ಲಿ ಶಾಸಕರಾಗಿದ್ದ ಬಿ.ಎಂ.ಪಾಟೀಲರನ್ನು 1983 ಚುನಾವಣೆ ಬಳಿಕ 1989ರವರೆಗೆ ನಡೆದ ಮೂರು ಚುನಾವಣೆಗಳಲ್ಲಿ ಬಿ.ಎಂ.ಪಾಟೀಲರನ್ನು ಗೆಲ್ಲಿಸಿ ಕ್ಷೇತ್ರದಲ್ಲಿ ಹ್ಯಾಟ್ರಿಕ್‌ ಗಳಿಸುವಂತೆ ಮಾಡಿತ್ತು.
  • 1991ರಲ್ಲಿ ಬಿ.ಎಂ.ಪಾಟೀಲರು ನಿಧನರಾದಾಗ, ತೆರವಾದ ಸ್ಥಾನಕ್ಕೆ ಉಪ ಚುನಾವಣೆಯಲ್ಲಿ ಎಂ.ಬಿ.ಪಾಟೀಲರು ಸ್ಪರ್ಧಿಸಿ ಆಯ್ಕೆಯಾಗಿದ್ದರು.
  • ಶಿವಾನಂದ ಪಾಟೀಲರು 1994ರಲ್ಲಿ ಜನತಾ ಪಕ್ಷ ಮತ್ತು 1999ರಲ್ಲಿ ಭಾರತೀಯ ಜನತಾ ಪಕ್ಷದಿಂದ ಸ್ಪರ್ಧಿಸಿ ಗೆದ್ದಿದ್ದರು.
  • ಬಿ.ಎಂ.ಪಾಟೀಲರು ವೀರಪ್ಪ ಮೊಯ್ಲಿ ಮಂತ್ರಿಮಂಡಳದಲ್ಲಿ ನಾಗರಿಕ ಆಡಳಿತ ಮತ್ತು ನಗರಾಭಿವೃದ್ಧಿ ಸಚಿವರಾಗಿದ್ದರು ಹಾಗೂ ಒಂದು ಬಾರಿ ವಿಧಾನ ಪರಿಷತ್ ಸದಸ್ಯರಾಗಿದ್ದರು.
  • ಎಂ.ಬಿ.ಪಾಟೀಲರು 2013ರಲ್ಲಿ ಸಿದ್ದರಾಮಯ್ಯನವರ ಮಂತ್ರಿಮಂಡಳದಲ್ಲಿ ನೀರಾವರಿ ಸಚಿವರಾಗಿದ್ದರು.
  • ಎಂ.ಬಿ.ಪಾಟೀಲರು 2018ರಲ್ಲಿ ಎಚ್.ಡಿ.ಕುಮಾರಸ್ವಾಮಿ ಸಮ್ಮಿಸ್ರ ಸರ್ಕಾರದ ಮಂತ್ರಿಮಂಡಳದಲ್ಲಿ ಗೃಹ ಸಚಿವರಾಗಿದ್ದರು.
  • ಎಂ.ಬಿ.ಪಾಟೀಲರು 2008 - 2023ರ ವರಗೆ ನಡೆದ ನಾಲ್ಕು ಚುನಾವಣೆಗಳಲ್ಲಿ ಗೆದ್ದು ಕ್ಷೇತ್ರದಲ್ಲಿ ಹ್ಯಾಟ್ರಿಕ್‌ ಸಾಧನೆ ಮಾಡಿದ್ದಾರೆ.
  • ಶಿವಾನಂದ ಪಾಟೀಲರ ಸಹೋದರರಾದ ವಿಜಯಗೌಡ ಪಾಟೀಲರು ನಾಲ್ಕು ಬಾರಿ ಸ್ಪರ್ಧಿಸಿದರೂ ಒಮ್ಮೆಯೂ ಆಯ್ಕೆಯಾಗಿಲ್ಲ.

ಜನಪ್ರತಿನಿಧಿಗಳ ವಿವರ

[ಬದಲಾಯಿಸಿ]
ವರ್ಷ ವಿಧಾನ ಸಭಾ ಕ್ಷೆತ್ರ ವಿಜೇತ ಪಕ್ಷ ಮತಗಳು ಉಪಾಂತ ವಿಜೇತ ಪಕ್ಷ ಮತಗಳು
ಬಬಲೇಶ್ವರ ವಿಧಾನಸಭಾ ಕ್ಷೇತ್ರ ಕರ್ನಾಟಕ ರಾಜ್ಯ
2023 ಬಬಲೇಶ್ವರ ವಿಧಾನ ಸಭಾ ಕ್ಷೇತ್ರ ಎಂ.ಬಿ.ಪಾಟೀಲ INC 93923 ವಿಜಯಗೌಡ ಪಾಟೀಲ BJP 78707
2018 ಬಬಲೇಶ್ವರ ವಿಧಾನ ಸಭಾ ಕ್ಷೇತ್ರ ಎಂ.ಬಿ.ಪಾಟೀಲ INC 98339 ವಿಜಯಗೌಡ ಪಾಟೀಲ BJP 68624
2013 ಬಬಲೇಶ್ವರ ವಿಧಾನ ಸಭಾ ಕ್ಷೇತ್ರ ಎಂ.ಬಿ.ಪಾಟೀಲ INC 62061 ವಿಜಯಗೌಡ ಪಾಟೀಲ JDS 57706
2008 ಬಬಲೇಶ್ವರ ವಿಧಾನ ಸಭಾ ಕ್ಷೇತ್ರ ಎಂ.ಬಿ.ಪಾಟೀಲ INC 55525 ವಿಜಯಗೌಡ ಪಾಟೀಲ JDS 38886
ತಿಕೋಟಾ ವಿಧಾನಸಭಾ ಕ್ಷೇತ್ರ ಕರ್ನಾಟಕ ರಾಜ್ಯ
2004 ತಿಕೋಟಾ ವಿಧಾನ ಸಭಾ ಕ್ಷೇತ್ರ ಎಂ.ಬಿ.ಪಾಟೀಲ INC 48274 ಎಂ.ಎಸ್.ರುದ್ರಗೌಡರ JDU 19040
1999 ತಿಕೋಟಾ ವಿಧಾನ ಸಭಾ ಕ್ಷೇತ್ರ ಶಿವಾನಂದ ಪಾಟೀಲ BJP 49080 ಎಂ.ಬಿ.ಪಾಟೀಲ INC 41649
1994 ತಿಕೋಟಾ ವಿಧಾನ ಸಭಾ ಕ್ಷೇತ್ರ ಶಿವಾನಂದ ಪಾಟೀಲ JD 50679 ಎಂ.ಬಿ.ಪಾಟೀಲ INC 25897
ಉಪಚುನಾವಣೆ 1991
1991 ತಿಕೋಟಾ ವಿಧಾನ ಸಭಾ ಕ್ಷೇತ್ರ ಎಂ.ಬಿ.ಪಾಟೀಲ INC 32832 ಶಿವಾನಂದ ಪಾಟೀಲ JD 28228
1989 ತಿಕೋಟಾ ವಿಧಾನ ಸಭಾ ಕ್ಷೇತ್ರ ಬಿ.ಎಂ.ಪಾಟೀಲ INC 37832 ಬಿ.ಆರ್.ಪಾಟೀಲ JD 33228
1985 ತಿಕೋಟಾ ವಿಧಾನ ಸಭಾ ಕ್ಷೇತ್ರ ಬಿ.ಎಂ.ಪಾಟೀಲ INC 26829 ಬಿ.ಆರ್.ಪಾಟೀಲ JNP 25914
1983 ತಿಕೋಟಾ ವಿಧಾನ ಸಭಾ ಕ್ಷೇತ್ರ ಬಿ.ಎಂ.ಪಾಟೀಲ INC 27884 ಬಿ.ಎಮ್.ಕೊತೀಹಾಳ JNP 18092
1978 ತಿಕೋಟಾ ವಿಧಾನ ಸಭಾ ಕ್ಷೇತ್ರ ಬಿ.ಬಿ.ಪಾಟೀಲ JNP 21317 ಎಸ್.ಎ.ಜಿದ್ದಿ INC 16899
ತಿಕೋಟಾ ವಿಧಾನಸಭಾ ಕ್ಷೇತ್ರ ಮೈಸೂರು ರಾಜ್ಯ
1972 ತಿಕೋಟಾ ವಿಧಾನ ಸಭಾ ಕ್ಷೇತ್ರ ಜಿ.ಎನ್.ಪಾಟೀಲ INC(O) 22119 ಎಸ್.ಎ.ಜಿದ್ದಿ INC 14156
1967 ತಿಕೋಟಾ ವಿಧಾನ ಸಭಾ ಕ್ಷೇತ್ರ ಶರಣಯ್ಯ ವಸ್ತ್ರದ INC 16329 ಎನ್.ಕೆ.ಉಪಾಧ್ಯಯ CPM 3353
1962 ತಿಕೋಟಾ ವಿಧಾನ ಸಭಾ ಕ್ಷೇತ್ರ ಬಿ.ಎಂ.ಪಾಟೀಲ INC 19957 ಬಿ.ಜಿ.ಬಿರಾದಾರ SWA 4024
1957 ತಿಕೋಟಾ ವಿಧಾನ ಸಭಾ ಕ್ಷೇತ್ರ ಚೆನ್ನಬಸಪ್ಪ ಅಂಬಲಿ INC 12933 ಡಾ.ಬಸವರಾಜ ನಾಗೂರ IND 8262
ತಿಕೋಟಾ-ಬೀಳಗಿ ವಿಧಾನಸಭಾ ಕ್ಷೇತ್ರ ಬಾಂಬೆ ರಾಜ್ಯ
1951 ತಿಕೋಟಾ-ಬೀಳಗಿ ವಿಧಾನ ಸಭಾ ಕ್ಷೇತ್ರ ಚೆನ್ನಬಸಪ್ಪ ಅಂಬಲಿ INC 21042 ಆರ್.ಎಂ.ಪಾಟೀಲ KMPP 9001