ಪುಪ್ಫುಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪುಪ್ಪುಸದ ರೇಖಾಚಿತ್ರ
ಹೃದಯ ಮತ್ತು ಪುಪ್ಪುಸ

ಪುಪ್ಫುಸ ಶ್ವಾಸನಾಳ (ಟ್ರೇಕಿಯ) ಮತ್ತು ಶ್ವಸನಿಗಳ (ಮೇಯ್ನ್ ಬ್ರಾಂಕೈ) ಮೂಲಕ ವಾಯುಕೋಶಗಳ (ಆಲ್ವಿ ಯೋಲೈ) ಒಳಕ್ಕೆ ಎಳೆದುಕೊಳ್ಳಲ್ಪಡುವ ವಾಯುವಿನಿಂದ ಆಕ್ಸಿಜನ್ ವಿರಳವಾಗಿರುವ ರಕ್ತವನ್ನು ಆಕ್ಸಿಜನೀಕರಿಸುವ ಮತ್ತು ಅದೇ ವೇಳೆ ಅದರಲ್ಲಿರುವ ಹೆಚ್ಚುವರಿ ಇಂಗಾಲದ ಡೈ ಆಕ್ಸೈಡನ್ನು ವಿಸರ್ಜಿಸುವ ಉಸಿರಿನ ಅಂಗ (ಲಂಗ್). ನಾಲ್ಕು ಮತ್ತು ಐದನೆಯ ಬೆನ್ನುಮೂಳೆಯ ನಡುಬಿಲ್ಲೆಯ ಮಟ್ಟದಲ್ಲಿ ಎಡಹೃತ್ಕರ್ಣದ ಮೇಲ್ಭಾಗದಲ್ಲಿ ಶ್ವಾಸನಾಳ ಭಾಗಗಳಾಗಿ ಎಡ ಮತ್ತು ಬಲ ಶ್ವಸನಿಗಳಾಗುತ್ತದೆ. ಶ್ವಾಸನಾಳ ಎರಡು ಶಾಖೆ ತೊಟ್ಟಿಗೆ ಕಾಯಿ ಜಂಟಿಸಿರುವಂತೆ ಎರಡು ಶ್ವಸನಿಗಳ ಕೊನೆಗಳಿಗೂ ಎಡ ಮತ್ತು ಬಲ ಪುಪ್ಫುಸಗಳು ಜಂಟಿಯಾಗಿವೆ ಮತ್ತು ಎದೆಗೂಡಿನ ಮಧ್ಯತಡಿಕೆಯ (ಮೀಡಿಯಾಸ್ಪೈನಮ್) ಆಯಾಪಕ್ಕಗಳ ಅವಕಾಶಗಳನ್ನು ತುಂಬಿಕೊಂಡಿವೆ. ಎಡಶ್ವಸನಿ ಕಿರಿದಾಗಿಯೂ ಉದ್ದವಾಗಿಯೂ ಇದ್ದು ಸ್ಪಷ್ಟವಾಗಿ ಎಡಕ್ಕೆ ತಿರುಗಿದೆ. ಆದರೆ ಬಲಶ್ವಸನಿ ಶ್ವಾಸನಾಳದ ವಿಸ್ತರಣೆಯಂತೆಯೇ ಇದ್ದು ಅದರಿಂದ ನೇರವಾಗಿ ಕೆಳಕ್ಕೆ ಇಳಿಯುತ್ತದೆ. ಆದ್ದರಿಂದ ಉಸಿರೆಳೆದುಕೊಂಡಾಗ ಅಕಸ್ಮಾತ್ತಾಗಿ ಶ್ವಾಸನಾಳದ ಒಳಕ್ಕೆಹೋಗುವ ಘನದ್ರವಾನಿಲವಸ್ತುಗಳು ಬಲಪುಪ್ಫುಸವನ್ನು ಸೇರುವ ಪ್ರಮೇಯವೇ ಹೆಚ್ಚು. ಶ್ವಸನಿಗೆ ಪುಪ್ಫುಸ ಜಂಟಿಯಾಗಿರುವ ಸ್ಥಳಕ್ಕೆ ಪುಪ್ಫುಸದ ನಾಭಿ (ಹೈಲಮ್) ಎಂದು ಹೆಸರು. [೧]

ಪುಪ್ಪುಸದ ರಚನೆ[ಬದಲಾಯಿಸಿ]

ಸುಮಾರು 15 ಸೆಂಮೀ ಎತ್ತರ ಮತ್ತು ಬುಡದಲ್ಲಿ 8-10 ಮೀ ವ್ಯಾಸ ಇರುವ ಶಂಕುವಿನ ಆಕಾರವಾಗಿದ್ದು ಪುಪ್ಫುಸ ನೊರೆಯ ಮುದ್ದೆಯಂತೆ (ಮಾಸ್ ಆಫ್ ಲ್ಯಾಥರ್) ಕಂಡುಬರುತ್ತದೆ. ಪುಪ್ಫುಸದ ಮೇಲ್ಮೈ ಪ್ಲೂರ ಎಂಬ ತೆಳು ಪೊರೆಯಿಂದ ಆಗಿದೆ. ಇದೇ ಪೊರೆ ಪುಪ್ಫುಸನಾಭಿಯಲ್ಲಿ ತನ್ನ ಮೇಲೆಯೇ ಮಡಚಿಕೊಂಡಂತಾಗಿ ಎದೆಗೂಡಿನ ಭಿತ್ತಿಗೆ ಒಳಮೈಯಾಗಿ ಅಂಟಿಕೊಂಡಿದೆ. ಭ್ರೂಣಾವಸ್ಥೆಯಲ್ಲಿ ಪ್ಲೂರ ಎದೆಗೂಡಿನಲ್ಲಿಯ. ದ್ವಾರರಹಿತ ಖಾಲಿಚೀಲವೊಂದರ ಅತ್ಯಂತ ತೆಳುಭಿತ್ತಿ. ಪುಪ್ಫುಸ ಈ ಚೀಲವನ್ನು ಗೌಸುಹಾಕಿದಂತೆ ಹೊದ್ದು ಬೆಳೆಯುತ್ತ ಆ ಭಾಗದ ಎದೆಗೂಡನ್ನು ಪೂರ್ಣವಾಗಿ ಆಕ್ರಮಿಸುತ್ತದೆ. ಹೀಗಾಗಿ ಪ್ಲೂರದ ಒಳಪದರ ಪುಪ್ಫುಸದ ಹೊರಕವಚವಾಗಿಯೂ ಹೊರಪದರ ಎದೆಗೂಡಿನ ಒಳಮೈಯಾಗಿಯೂ ಕಂಡುಬರುವಂತಾಗಿದೆ. ಪ್ಲೂರದ ಎರಡು ಪದರಗಳೂ ಪರಸ್ಪರ ಸಂಪರ್ಕಗೊಂಡಿದ್ದು ಒಂದರ ಮೇಲೆ ಒಂದು ಯಾವ ಘರ್ಷಣೆಯೂ (ಫ್ರಿಕ್ಷನ್) ಇಲ್ಲದೆ ಜಾರುವಂತಿವೆ. ಪ್ಲೂರ ಒಂದು ಜಾರುದ್ರವದಿಂದ ತೇವವಾಗಿರುವುದೇ ಇದರ ಕಾರಣ. ತೇವಗೊಳಿಸುವಷ್ಟು, ಕನಿಷ್ಠಪರಿಮಾಣದಲ್ಲಿ ಮಾತ್ರ ಇದ್ದು ಘರ್ಷಣೆಯಿಲ್ಲದೆ ಜಾರಬಹುದಾದರೂ ಒಂದು ಪದರವನ್ನು ಇನ್ನೊಂದರಿಂದ ಬಿಡಿಸಲಾರದಂತಾಗಿದೆ. ಇದು ಒಂದು ಗಾಜಿನ ಫಲಕದ ಮೇಲೆ ಒಂದೆರಡು ತೊಟ್ಟು ನೀರು ಹಾಕಿ ಅದರ ಮೇಲೆ ಇನ್ನೊಂದು ಫಲಕವನ್ನು ಇಟ್ಟರೆ ಕಂಡುಬರುವಂತಿರುವ ಸ್ಥಿತಿ. ಒಂದು ಫಲಕವನ್ನು ಇನ್ನೊಂದರ ಮೇಲೆ ಜಾರಿಸಬಹುದು. ಆದರೆ ಫಲಕಗಳನ್ನು ಜಾರಿಸದೆ ಸುಲಭವಾಗಿ ಬಿಡಿಸಲು ಆಗುವುದಿಲ್ಲ. ಗಾಜಿನ ಫಲಕಗಳ ನಡುವೆ ತೆಳುಪದರವಾಗಿ ಸೇರಿರುವ ನೀರು ತನ್ನ ಮೇಲ್ಮೈಬಿಗಿತದ (ಸರ್ಫೇಸ್ ಟೆನ್ಶನ್) ಪ್ರಭಾವವನ್ನು ಬೀರುವುದರಿಂದ ಈ ಪರಿಸ್ಥಿತಿ ಎಂಬುದೇ ಭೌತವಿಜ್ಞಾನದ ನಿಯಮ. ಫುಪ್ಛುಸದ ವಿಷಯದಲ್ಲೂ ಹೀಗೆಯೇ ಇರುವುದರಿಂದ ಎದೆಗೂಡು ಉಬ್ಬಿ ಪ್ಲೂರದ ಹೊರ ಪದರ ಹೊರಚಲಿಸಿದಾಗ ಅದು ಫುಪÀ್ಛುಸದ ಮೇಲಿನ ಪ್ಲೂರದಿಂದ ಬೇರೆ ಆಗದೆ ತನ್ನ ಜೊತೆಗೇ ಅದನ್ನೂ ಹೊರಕ್ಕೆ ಎಳೆಯುತ್ತದೆ. ಇದರಿಂದ ಫುಪ್ಛುಸವನ್ನು ಎಳೆದು ಹಿಗ್ಗಿಸಿದಂತಾಗಿ ಅದರೊಳಗಿನ ವಾಯು ಒತ್ತಡ ಕಡಿಮೆ ಆಗುತ್ತದೆ. ಆದ್ದರಿಂದಲೇ ಹೊರವಾಯು ಶ್ವಸನಿ ಮತ್ತು ಶ್ವಾಸನಾಳಗಳ ಮೂಲಕ ಪುಪÀ್ಛುಸದ ಒಳ ನುಗ್ಗುವುದು. ಇದೇ ಉಚ್ಛ್ವಾಸ.

ಪುಪ್ಪುಸದ ವಿಭಾಗ[ಬದಲಾಯಿಸಿ]

ಪುಪ್ಛುಸದ ಮೇಲಿರುವ ಪ್ಲೂರ ತಡಿಕೆಯಂತೆ ಪುಪ್ಛುಸದ ಒಳಗೂ ನುಗ್ಗಿ ಬಲ ಪುಪ್ಛುಸವನ್ನು ಮೂರು ಹಾಲೆಗಳಾಗಿಯೂ (ಲೋಬ್ಸ್) ಎಡ ಪುಪ್ಛುಸವನ್ನು ಎರಡು ಹಾಲೆಗಳಾಗಿಯೂ ವಿಭಾಗಿಸುತ್ರದೆ. ಪುಪ್ಛುಸದ ಒಳಗೆ ಶ್ವಸನಿ ಮರದ ಕೊಂಬೆಗಳಂತೆ ಕವಲೊಡೆದಿದೆ. ಶಾಖೋಪಶಾಖೆಗಳಿಗೆಲ್ಲ ಒಟ್ಟಾಗಿ ಶ್ವಸನಿ ವೃಕ್ಷವೆಂದು (ಬ್ರಾಂಕಿಯಲ್ ಟ್ರೀ) ಹೆಸರು. ಪ್ರತಿಯೊಂದು ಶ್ವಸನಿಯೂ ಮೊದಲು ನಾಲ್ಕು ಪ್ರಧಾನ ಶಾಖೆಗಳಾಗುತ್ತದೆ. ಇವಕ್ಕೆ ಶ್ವಸನಿಕಗಳೆಂದು ಹೆಸರು(ಸೆಕೆಂಡರಿ ಬ್ರಾಂಕೈ). ಬಲಗಡೆ ಮೇಲೆ ಮತ್ತು ಮಧ್ಯದ ಹಾಲೆಗಳಿಗೆ ಒಂದೊಂದು ಶ್ವಸನಿಕವೂ ಕೆಳಹಾಲೆಗೆ ಎರಡು ಶ್ವಸನಿಕಗಳೂ (ಒಂದು ಅದರ ಉಚ್ಚ ಹಾಗೂ ಹಿಂಬದಿ ಭಾಗಕ್ಕೆ, ಇದ್ನೊಂದು ಮಿಕ್ಕ ಭಾಗಕ್ಕೆ) ಪೂರೈಕೆ ಆಗಿವೆ. ಎಡಗಡೆ ಒಂದು ಶ್ವಸನಿಕ ಸ್ಪಷ್ಟವಾಗಿ ಮೇಲಿನ ಹಾಲೆಗೂ ಇನ್ನೊಂದು ಅದೇ ಹಾಲೆಯ ನಾಲಿಗೆಯಂಥ ಪ್ರತ್ಯೇಕ ಭಾಗಕ್ಕೂ (ಲಿನ್‍ಗ್ಯುಲರ್ ಡಿವಿಶನ್_ಇದು ಬಲಗಡೆಯ ಮಧ್ಯ ಹಾಲೆಗೆ ಸರಿಸಮ) ಪೂರೈಕೆ ಆಗಿದೆ. ಇನ್ನೆರಡು ಶ್ವಸನಿಕಗಳು ಬಲಗಡೆಯ ಹಾಗೆಯೇ ಕೆಳಹಾಲೆಯ ಎರಡು ಭಾಗಗಳನ್ನು ಪೂರೈಸುತ್ತವೆ (ಚಿತ್ರ 2,3). ಬಲಗಡೆಯ ಮೇಲಿನ ಶ್ವಸನಿಕ ಮೂರು ಶಾಖೆಗಳಾಗುತ್ತದೆ. ಈ ಶಾಖೆಗಳು ಆ ಹಾಲೆಯಲ್ಲಿ ಶೃಂಗ (ಏಪಿಕಲ್), ಮುಂದಣ (ಆಂಟೀರಿಯರ್) ಮತ್ತು ಹಿಂದಿಣ (ಪೋಸ್ಟೀರಿಯರ್) ಖಂಡಗಳೆಂಬ (ಸೆಗ್ಮೆಂಟ್ಸ್) ಮೂರು ಪ್ರತ್ಯೇಕ ಕ್ಷೇತ್ರಗಳನ್ನು ತಲಪುತ್ತವೆ. ಮಧ್ಯಶ್ವಸನಿಕ ಎರಡು ಶಾಖೆಗಳಾಗಿ ಒಡೆದು ಮಧ್ಯಹಾಲೆಯ ಒಳಬದಿ (ಮೀಡಿಯಲ್) ಮತ್ತು ಹೊರಬದಿ (ಲ್ಯಾಟರಲ್) ಖಂಡವೆಂಬ ಎರಡು ಕ್ಷೇತ್ರಗಳನ್ನು ತಲಪುತ್ತವೆ. ಕೆಳ ಎರಡು ಶ್ವಸನಿಕಗಳಿಂದ ಒಟ್ಟು ಐದು ಶಾಖೆಗಳು ಉದ್ಛವಿಸಿ ಕೆಳಹಾಲೆಯ ಶೃಂಗಿ (ಏಪಿಕಲ್) ಮತ್ತು ಒಳಬದಿ (ಮೀಡಿಯಲ್ ಬೇಸಲ್) ಖಂಡಗಳಗೂ ಮುಂದಿನ (ಆಂಟೀರಿಯರ್‍ಬೇಸಲ್), ಹೊರಬದಿಯ (ಲ್ಯಾಟರಲ್ ಬೇಸಲ್) ಮತ್ತು ಹಿಂದಿನ (ಪೋಸ್ಟೀರಿಯರ್ ಬೇಸಲ್) ಖಂಡಗಳಿಗೂ ಪೂರೈಕೆ ಆಗುತ್ತದೆ.

ಪುಪ್ಪುಸದ ಶಾಖೆಗಳು[ಬದಲಾಯಿಸಿ]

  1. ಎಡಗಡೆ ಮೇಲಿನ ಹಾಲೆಗೆ ಸ್ಪಷ್ಡವಾಗಿ ಪೂರೈಕೆ ಆಗುವ ಶ್ವಸನಿಕ ಮೂರು ಶಾಖೆಗಳಾಗಿ ಬಲಗಡೆಯಲ್ಲಿಯಂತೆಯೇ ಆ ಹಾಲೆಯ ಮೂರು ಖಂಡಗಳನ್ನು ತಲುಪುತ್ತದೆ. ಜೊತೆಗೆ ಮೇಲಿನಹಾಲೆಯ ನಾಲೆಗೆ ಭಾಗಕ್ಕೆ ಪೂರೈಸುವ ಶ್ವಸನಿಕ ಎರಡು ಶಾಖೆಗಳಾಗಿ ಹಾಲೆಯ ಆ ಭಾಗದ ಮೇಲಣ (ಸುಪೀರಿಯರ್) ಮತ್ತು ಕೆಳಗಣ (ಇನ್‍ಫೀರಿಯರ್) ಖಂಡಗಳನ್ನು ತಲುಪುತ್ತದೆ. ಎಡಗಡೆಯ ಕೆಳ ಎರಡು ಶ್ವಸನಿಕಗಳಂದ ಒಟ್ಟು ನಾಲ್ಕು ಶಾಖೆಗಳು ಉದ್ಭವಿಸಿ ಕೆಳಹಾಲೆಯ ಶೃಂಗ, ಮುಂದಿನ, ಹೊರಬದಿಯ ಮತ್ತು ಹಿಂದಿನ (ಎಪಿಕಲ್, ಆಂಟೀರಿಯರ್ ಬೇಸಲ್, ಲ್ಯಾಟರಲ್ ಬೇಸಲ್ ಮತ್ತು ಪೋಸ್ಟೀರಿಯರ್ ಬೇಸಲ್) ಖಂಡಗಳೆಂಬ ನಾಲ್ಕು ಕ್ಷೇತ್ರಗಳನ್ನು ತಲಪುತ್ತವೆ. ಅಂದರೆ ಬಲಪುಪ್ಛುಸದಲ್ಲಿ ಒಟ್ಟು ಹತ್ತು ಖಂಡಗಳೂ ಎಡ ಪುಪ್ಛುಸದಲ್ಲಿ ಒಂಬತ್ತು ಖಂಡಗಳೂ ಇದ್ದು ಪ್ರತಿ ಖಂಡಕ್ಕೂ ಶ್ವಸನಿಕದ ಒಂದು ಶಾಖೆ ಪೂರೈಕೆ ಆಗುತ್ತದೆ.
  2. ಪುಪ್ಛುಸದಲ್ಲಿ ಹಾಲೆಗಳನ್ನು ರಚನೆಯನ್ನು ಪ್ರತ್ಯೇಕ ಭಾಗಗಳೆಂದು ಗುರುತಿಸಬಹುದಾದರೂ ಖಂಡಗಳನ್ನು ಹಾಗೆ ಗುರುತಿಸಲು ಆಗುವುದಿಲ್ಲ. ಕಾರಣ ಖಂಡಗಳನ್ನು ಪ್ರತ್ಯೇಕಿಸುವ ತಡಿಕೆಯಂಥವು ಇಲ್ಲ. ಆದರೂ ಪ್ರತಿಯೊಂದು ಖಂಡವೂ ಕ್ರಿಯಾತ್ಮಕವಾಗಿ ಪ್ರತ್ಯೇಕವಾಗಿಯೆ ಇದೆ. ರೋಗಪ್ರಕ್ರಿಯೆಯಿಂದ ಇವು ವೈಯಕ್ತಿಕವಾಗಿಯೇ ಕುಸಿಯಬಲ್ಲವು (ಕೊಲ್ಲಾಪ್ಸ್), ಘನೀಕರಿಸಬಲ್ಲವು (ಕನ್‍ಸಾಲಿಡೇಟ್); ಕೀವು ಆ ಖಂಡಕ್ಕೆ ಸೀಮಿತಗೊಳ್ಳಬಹುದು. ಅದರಿಂದಾಗಿ ಶಸ್ತ್ರಕ್ರಿಯೆಯ ಕಾಲದಲ್ಲಿ ರೋಗಿಷ್ಠ ಖಂಡವನ್ನು ಮಾತ್ರ ತೆಗೆಯಲಾಗುವುದು. ಕೀವುಗಟ್ಟಿದ ಖಂಡದ ನೆಲೆಯನ್ನು ಅವಲಂಬಿಸಿ ರೋಗಿಯನ್ನು ಬೇರೆ ಬೇರೆ ಭಂಗಿಗಳಲ್ಲಿ ಮಲಗಿಸಿ ಕೀವು ಹೊರಬರಲು ಸಹಾಯ ನೀಡಲಾಗುತ್ತದೆ.
  3. ಪ್ರತಿಯೊಂದು ಖಂಡದಲ್ಲೂ ಶ್ವಸನಿಕದ ಶಾಖೆ ಪುನಃ ಪುನಃ ಕವಲೊಡೆಯುತ್ತದೆ. ಅಂತಿಮ ಟಿಸಿಲುಗಳ (ಟರ್ಮಿನಲ್ ಬ್ರಾಂಕೈ) ಕೊನೆಭಾಗದಲ್ಲಿ ದ್ರಾಕ್ಷಿಗೊಂಚಲುಗಳಂತಿರುವ ರಚನೆಗಳು ಕಂಡುಬರುತ್ತವೆ. ಇವುಗಳ ಭಿತ್ತಿ ಅತ್ಯಂತ ತೆಳು. ಒಳಗೆ ವಾಯುವಿರುವುದರಿಂದ ದ್ರಾಕ್ಷಿಯಂತಿರುವ ರಚನೆಗಳು ವಾಯುಕೋಶಗಳು ಎನ್ನಲಾಗಿದೆ. ಇವುಗಳ ಹೊರಗೆ ಲೋಮನಾಳಗಳ ಜಾಲವಿದೆ. ವಾಯುಕೋಶಗಳಲ್ಲಿರುವ ವಾಯು ಮತ್ತು ಲೋಮನಾಳಗಳಲ್ಲಿರುವ ರಕ್ತ ಇವುಗಳ ನಡುವೆ ವಾಯುಕೋಶ ಹಾಗೂ ಲೋಮನಾಳಗಳ ತೆಳುಭಿತ್ತಿಗಳ ಮೂಲಕ ಆಕ್ಸಿಜನ್ ಮತ್ತು ಇಂಗಾಲದ ಡೈಆಕ್ಸೈಡುಗಳ ವಿನಿಮಯ ಜರಗುತ್ತದೆ. ಆದ್ದರಿಂದ ಪುಪ್ಛುಸದಲ್ಲಿ ತೆಳುಭಿತ್ತಿ ಇರುವ ಈ ಸ್ಥಳಗಳನ್ನು ಶ್ವಾಸಸಂಬಂಧಿತಭಾಗ (ರೆಸ್ಟಿರೇಟರಿ ಪಾರ್ಟ್) ಎಂದು ಕರೆದಿದೆ. ಪುಪ್ಛುಸದ ಒಳಗೆ ಶಾಖೋಪಶಾಖೆಗಳಾಗಿ ಟಿಸಿಲೊಡೆಯುತ್ತ ಅಂತಿಮ ಟಿಸಿಲುಗಳಾಗುವವರೆಗೂ ಶ್ವಸನಿವೃಕ್ಷದ ಭಿತ್ತಿ ದಪ್ಪವಾಗಿಯೇ ಇರುತ್ತದೆ. ಅದರ ಮೂಲಕ ವಾಯುವಿನಿಮಯ ಆಗುವಂತಿಲ್ಲ. ಆದ್ದರಿಂದ ಶ್ವಸನಿವೃಕ್ಷವನ್ನು ಪುಪ್ಫುಸದ ವಾಯುವಾಹಿನಿಭಾಗ (ಕಂಡಕ್ಟಿಂಗ್‍ಪಾರ್ಟ್) ಎಂದು ಕರೆದಿದೆ. ಅಂದರೆ ಪುಪ್ಛುಸನಾಭಿಯಿಂದ ಮುಂದುವರಿಯುತ್ತಾ ಪದೇ ಪದೇ ಕವಲುಗಳಾಗುತ್ತ ಕೊನೆಯಲ್ಲಿ ವಾಯುವಿನಿಮಯ ಭಾಗದಲ್ಲಿ ಮುಕ್ತಾಯವಾಗುವ ನಾಲ್ಕು ಶ್ವಸನಿಕವೃಕ್ಷಗಳೂ ಒಟ್ಟುಗೂಡಿ ಪುಪ್ಛುಸವಾಗಿದೆ ಎಂದಂತಾಯಿತು. ಅಂತಿಮಶ್ವಸನಿ ಶ್ವಸನಿಯ ಹದಿನೈದನೆಯ ತಲೆಮಾರಿನ ಕವಲಾಗಿರುವುದೂ ಉಂಟು ಶ್ವಸನಿಕಗಳು (ಸ್ಥೂಲವಾಗಿ ಇವು ಶ್ವಸನಿಯ ಮೊದಲ ಐದು ತಲೆಮಾರಿನ ಕವಲುಗಳೆಂದು ಇಟ್ಟುಕೊಳ್ಳಬಹುದು) ಮೃದ್ವಸ್ಥಿ, ಸ್ನಾಯು ಮತ್ತು ದುಗ್ಧರಸಗ್ರಂಥಿಯುಕ್ತ ಭಿತ್ತಿಯಿಂದಾದವು. ಮೃದ್ವಸ್ಥಿ ಅಪೂರ್ಣ ಉಂಗುರಕಾರವಾಗಿದ್ದಾಗಲೂ ಒಂದು ಇನ್ನೊಂದರಕ್ಷೇತ್ರವನ್ನು ಅತಿಕ್ರಮಿಸುವುದರಿಂದ ನಾಳದ ಸುತ್ತ ಮೃದ್ವಸ್ಥಿ ಇದ್ದಂತೆಯೇ ಆಗಿದೆ. ಸ್ನಾಯುಗಳು ಶ್ವಸನಿಕನಾಳದ ಸುತ್ತ ತಿರುಪು ನುಲುಚಿಕೊಂಡಿರುವಂತೆ ಇದ್ದು ಉಚ್ವ್ಛಾಸ ಕಾಲದಲ್ಲಿ ಅನೈಚ್ಛಿಕವಾಗಿ ವ್ಯಾಕೋಚಿಸಿ ಶ್ವಸನಿಕವನ್ನು ಹಿಗ್ಗಿಸುವುವಲ್ಲದೆ ಲಂಬವಾಗುವಂತೆಯೂ ಮಾಡುತ್ತವೆ. ನಿಶ್ವಾಸಕಾಲದಲ್ಲಿ ಸ್ನಾಯುಗಳು ಅನೈಚ್ಛಿಕವಾಗಿ ಸಂಕೋಚಿಸಿ ಶ್ವಸನಿಕ ಕುಗ್ಗುವಂತೆ ಮತ್ತು ಹ್ರಸ್ವವಾಗುವಂತೆ ಮಾಡುತ್ತವೆ. ಶ್ವಸನಿಕಗಳಿಂದ ಮುಂದೆ ಉದ್ಭವಿಸುವ (ಸ್ಥೂಲವಾಗಿ ಮುಂದಿನ 8-10 ತಲೆಮಾರಿನ) ಕವಲುಗಳಲ್ಲಿ (ಇವನ್ನು ಅಂತಿಮ ಶ್ವಸನಿಕಗಳು-ಟರ್ಮಿನಲ್ ಬ್ರಾಂಕೈ ಅಥವಾ ಬ್ರಾಂಕಿಯೋಲ್ಸ್ ಎಂದಿದೆ) ಕ್ರಮೇಣ ಮೃದ್ವಸ್ಥಿ ಅಂಶ ಹಾಗೂ ದುಗ್ಧರಸ ಗ್ರಂಥಿಗಳು ಕಡಿಮೆ ಆಗುತ್ತ ಕೊನೆಗೆ (ಸ್ಥೂಲವಾಗಿ ಸುಮಾರು 1 ಮಿಮೀ ವ್ಯಾಸದ ಟಿಸಿಲು ಎಂದು ಇಟ್ಟುಕೊಳ್ಳಬಹುದು) ಪೂರ್ತಮಾಯವಾಗುತ್ತದೆ. ಆದರೆ ಸ್ನಾಯು ಇಲ್ಲಿಯೂ ಭಿತ್ತಿಯ ಪ್ರಧಾನ ಅಂಶವಾಗಿಯೇ ಇರುತ್ತದೆ ಮತ್ತು ಸ್ನಾಯುವಿರುವ ಭಾಗ ಇಲ್ಲಿಯೇ ಅಂತ್ಯಗೊಳ್ಳುತ್ತದೆ. ಕಾರಣಾಂತರದಿಂದ ಪುಪ್ಫುಸ ಇಲ್ಲವೆ ಅದರ ಒಂದು ಭಾಗದಲ್ಲಿ ವಾಯು ಇಂಗಿ ಪುಪ್ಛುಸದ ಕುಸಿತ ಉಂಟಾಗಿದ್ದರೂ ಮೃದ್ವಸ್ಥಿಯಿಂದ ದೃಢಗೊಂಡಿರುವ ಶ್ವಸನಿ ಕವಲುಗಳು ಚಪ್ಪಟೆ ಆಗದೆ ತಮ್ಮ ನಾಳಾಕಾರವನ್ನು ಉಳಿಸಿಕೊಂಡೇ ಇದ್ದು ವಾಯುವಹನಕ್ಕೆ ಅಡ್ಡಿಮಾಡುವುದಿಲ್ಲ. ಆದರೆ ಅಂತಿಮ ಟಿಸಿಲು ಇಂಥ ಸಮಯದಲ್ಲಿ ಹಿಚಕಿದಂತಾಗಿ ಚಪ್ಪಟೆ ಆಗಿಬಿಡಬಹುದು. ವಾಯು ಸಂಚಾರಕ್ಕೆ ಇದರಿಂದ ತಡೆ ಆಗಿ ಪುಪ್ಫುಸದ ಶ್ವಾಸಸಂಬಂಧಿತ ಭಾಗಗಳಿಗೆ ವಾಯು ಸಂಪರ್ಕ ಕಡಿದೇ ಹೋಗಬಹುದು.

ಪುಪ್ಪುಸ ಕವಲುಗಳು[ಬದಲಾಯಿಸಿ]

  1. ಪುಪ್ಛುಸದ ಶ್ವಾಸಸಂಬಂಧಿತಭಾಗ ಕೊನೆತಲೆಮಾರಿನ ಅಂತಿಮ ಶ್ವಸನಿಯಿಂದ ಮುಂದಿನದು ಎಂದು ಹೇಳಿದೆ. ಇಂಥ ಅಂತಿಮ ಶ್ವಸನಿಯ ಕವಲುಗಳಾಗಿವೆ ವಾಯುಕೋಶಯುಕ್ತಶ್ವಸನಿಗಳು (ರೆಸ್ಪಿರೇಟರಿ ಬ್ರಾಂಕಿಯೋಲ್ಸ್) ಉದ್ಭವಿಸುತ್ತವೆ. ಇವುಗಳಿಗೆ ಅಲ್ಲಲ್ಲಿ ದ್ರಾಕ್ಷಿಗೊಂಚಲಿನಂಥ ವಾಯುಕೋಶಗುಚ್ಛಗಳು (ಅಲ್ವಿಯೋಲಾರ್‍ಸ್ಯಾಕ್ಸ್) ಸಂಪರ್ಕಿಸಿದ್ದು ವಾಯುವಿನಿಮಯದಲ್ಲಿ ಭಾಗವಹಿಸುವುದರಿಂದ ಈ ಹೆಸರು, ಶ್ವಸನಿ ಅನಿಯಮಿತಾಕಾರದ ಅವÀಕಾಶವೊಂದರಲ್ಲಿ ಕೊನೆಗೊಳ್ಳುತ್ತದೆ. ಇದಕ್ಕೆ ಪುಪÀ್ಛುಸಹಜಾರ (ಪಲ್ಮನರಿ ಏಟ್ರಿಲ್) ಎಂದು ಹೆಸರು. ಪುಪÀ್ಛುಸ ಹಜಾರಕ್ಕೆ ನಾಲ್ಕಾರು ವಾಯುಕೋಶ ಗುಚ್ಭಗಳು ತಮ್ಮ ನಾಳಗಳ (ಆರ್ವಿಯೋಲಾರ್ ಡಕ್ಟ್) ಮೂಲಕ ಸಂಪರ್ಕಿಸಲ್ಪಟ್ಟಿವೆ. ಪ್ರತಿಯೊಂದು ವಾಯುಕೋಶಗುಚ್ಛವನ್ನು ದ್ರಾಕ್ಷಿಗೊಂಚಲಿಗೆ ಹೋಲಿಸಬಹುದು. ಗೊಂಚಲಿನ ತೊಟ್ಟು, ಪುಫ್ಛುಸ ಹಜಾರದೊಡನೆ ಸಂಪರ್ಕಿಸುವ ನಾಳಕ್ಕೆಸಮ. ಪ್ರತಿ ದ್ರಾಕ್ಷಿಯೂ ಒಂದು ವಾಯುಕೋಶಕ್ಕೆ ಸಮ.
  2. ಪುಪ್ಛುಸಹಚಾರ ವಾಯುಕೋಶಗುಚ್ಛದ ಸಂಪರ್ಕನಾಳ ಹಾಗೂ ವಾಯುಕೋಶಗಳು ಅತ್ಯಂತ ತೆಳುಭಿತ್ತಿಯಿಂದಾದವು. ಇದು ನೆಲಕ್ಕೆ ಹಾಸುವ ಹಂಚುಗಳಂತೆ ಒಂದೇ ವರಸೆಯಲ್ಲಿ ಒಂದಕ್ಕೊಂದು ಜೋಡಿಸಲ್ಪಟ್ಟ ಕೋಶಗಳಿಂದಾದ ಅವಿಚ್ಛಿನ್ನ ಭಿತ್ತಿ. ಈ ಭಿತ್ತಿಯ ಹೊರಗೆ ಪುಟಿತ ಎಳೆಗಳ (ಇಲ್ಯಾಸ್ಟಿಕ್ ಫೈಬರ್ಸ್) ಮತ್ತು ಲೋಮನಾಳಗಳ ಜಾಲ ಹರಡಿದೆ. ಲೋಮನಾಳಗಳ ನಡುವೆ ಇರುವ ಸ್ಥಳಗಳಲ್ಲಿ ಕೆಲವು ಕಡೆ ಭಿತ್ತಿ ಬೆಲ್ಲದ ಅಚ್ಚಿನ ಆಕಾರದ ಕೋಶಗಳಿಂದ (ಕ್ಯೂಬಾಯ್ಡಲ್ ಸೆಲ್ಸ್) ರಚಿತವಾಗಿರುತ್ತದೆ. ಈ ಕೋಶಗಳು ಡೈಪಾಮಿಟಾಯಿಲ್ ಲೆಸಿಥಿನ್ ಎಂಬ ಅಂಶವುಳ್ಳ ವಸ್ತುವನ್ನು ಸ್ರವಿಸುತ್ತವೆ. ವಾಯುಕೋಶಗಳಲ್ಲಿಯ ವಾಯು ಒತ್ತಡವನ್ನು ಕುಗ್ಗಿಸುವ ಸಾಮಥ್ರ್ಯ ಈ ವಸ್ತುವಿಗಿದೆ.

ಪುಪ್ಪುಸಕ್ಕೆ ರಕ್ತ ಪೂರೈಕೆ[ಬದಲಾಯಿಸಿ]

  1. ಪುಪ್ಛುಸಕ್ಕೆ ಪಲ್ಮನರಿ ಆರ್ಟರಿ ಮತ್ತು ಬ್ರಾಂಕಿಯಲ್ ಆರ್ಟರಿ ಎಂಬ ಅಪಧಮನಿಗಳಿಂದ ಎರಡುತೆರನಾದ ರಕ್ತಪೂರೈಕೆ ಇದೆ. ಪಲ್ಮನರಿ ಆರ್ಟರಿ ಬಲಹೃತ್ಕುಕ್ಷಿಯಿಂದ ಹೊರಹೊಮ್ಮಿ ಎರಡು ಭಾಗಗಳಾಗಿ ಶ್ವಸನಿವೃಕ್ಷಕ್ಕೆ ಅನುಗುಣವಾಗಿ ಕವಲಾಗುತ್ತ ಅದಕ್ಕೆ ಸಮಾಂತರವಾಗಿ ಸಾಗಿ ಕೊನೆಗೆ ಕಿರಿಧಮನಿಗಳಾಗಿ ಪುಪÀ್ಛುಸದ ಶ್ವಾಸಸಂಬಂಧಿತಭಾಗದ ಲೋಮನಾಳಗಳ ವಿಸ್ತøತ ಜಾಲವಾಗುತ್ತದೆ. ಜಾಲ ಸುಮಾರು 140 ಚಮೀ ವಿಸ್ತಾರವಾಗಿದೆ. ಇದು ಹೊತ್ತುತರುವ ಆಕ್ಸಿಜನ್ ವಿರಳ ಹಾಗೂ ಇಂಗಾಲ ಡೈಆಕ್ಸೈಡ್ ಹೇರಳವಾಗಿರುವ ರಕ್ತ ವಾಯುಕೋಶಗಳಲ್ಲಿ ಇಂಗಾಲ ಡೈಆಕ್ಸೈಡ್ ಹೊರಹಾಕಿ ಆಕ್ಸಿಜನ್ನನ್ನು ಹೀರಿ ಶುದ್ಧೀಕರಣ ಹೊಂದುತ್ತದೆ. ಬ್ರಾಂಕಿಯಲ್ ಆರ್ಟರಿ ಎದೆಗೂಡಿನಲ್ಲಿ ಅಯೋರ್ಟದಿಂದ ಉದ್ಭವಿಸುತ್ತದೆ. ಅದು ಶ್ವಸನಿವೃಕ್ಷಕ್ಕೆ ಮಾತ್ರ (ಮೊದಲಿನಿಂದ ಕೊನೆ ಕವಲಿನವರೆಗೂ) ರಕ್ತಪೂರೈಕೆಯನ್ನು ಮಾಡುತ್ತದೆ. ಹೀಗೆ ಶ್ವಸನಿವೃಕ್ಷ ಪ್ರದೇಶಕ್ಕೆ ಆಕ್ಸಿಜನ್ ಯುಕ್ತ ರಕ್ತವೂ ಅನಿಲವಿನಿಮಯ ಪ್ರದೇಶಕ್ಕೆ ಆಕ್ಸಿಜನ್ ವಿರಳರಕ್ತವೂ ಸಾಗಿಬರುತ್ತವೆ. ಇವೆರಡೂ ಅಲ್ಲಲ್ಲಿ ಸಂಪರ್ಕ ಪಡೆದಿವೆ.
  2. ಲೋಮನಾಳ ಜಾಲದಿಂದ ಉದ್ಭವಿಸುವ ಕಿರಿಯ ಅಭಿಧಮನಿಗಳು ಮುಂದೆ ಒಟ್ಟಾಗಿ ಕೆಳಗಿನ ಮತ್ತು ಮೇಲಿನ ಪಲ್ಮನರಿ ಅಭಿಧಮನಿಗಳಾಗಿ ಅವು ಎಡಹೃತ್ಕರ್ಣದಲ್ಲಿ ಮುಕ್ತಾಯವಾಗುತ್ತವೆ. ಫುಪ್ಛುಸದ ನಾಭಿಯಲ್ಲಿ ಶ್ವಸನಿ, ಪಲ್ಮನರಿ ಅಪಧಮನಿ ಮತ್ತು ಪಲ್ಮನರಿ ಅಭಿಧಮನಿಗಳು ಒಗ್ಗೂಡಿವೆ. ಸಿಂಪಥೆಟಿಕ್ ಮತ್ತು ಪ್ಯಾರಾ ಸಿಂಪಥಟಿಕ್ ನರಗಳು ನಾಭಿಯ ಸುತ್ತ ತಮ್ಮ ಹೆಣಿಲು ಹಾಕಿದ್ದು ಅದರಿಂದ ನರತಂತುಗಳು ಪುಪ್ಛುಸವನ್ನು ತಲಪುತ್ತವೆ. ಗರ್ಭಾವಸ್ಥೆಯ ನಾಲ್ಕನೆಯ ವಾರದಲ್ಲಿ ಆಹಾರನಾಳದ ಪ್ರಥಮ ಭಾಗದಿಂದ ಹೊರಹೊಮ್ಮಿ ಬೆಳೆವಣಿಗೆ ಹೊಂದುವ ಉಬ್ಬು ಕೆಳಕ್ಕಿಳಿದು ಮಧ್ಯ ತಡಿಕೆಯಲ್ಲಿ ಎರಡು ಕವಲಾಗಿ ಬೆಳೆದು ಪುಪ್ಛುಸದ ಬೆಳೆವಣಿಗೆಗ ಬುನಾದಿಯನ್ನು ಒದಗಿಸುತ್ತದೆ.

ಪುಪ್ಪುಸದ ಬೆಳವಣಿಗೆ[ಬದಲಾಯಿಸಿ]

ಪುಪ್ಛುಸದ ಬೆಳೆವಣಿಗೆ ಮೂರು ಹಂತಗಳಲ್ಲಿ ಸಾಗಿ ಬರುತ್ತದೆ. ಮೊದಲು ಹದಿನಾರನೆಯ ವಾರದ ತನಕ ಗ್ರಂಥಿಕಾಲ 16 ರಿಂದ 24ನೆಯ ವಾರದ ತನಕ ನಾಳಕಾಲ. ಅಲ್ಲಿಂದ ಮುಂದೆ ಜನನ ವೇಳೆಯ ತನಕ ವಾಯುಕೋಶ ನಿರ್ಮಾಣ ಕಾಲ. ಸಾಮಾನ್ಯವಾಗಿ ಶ್ವಸನಿಯ ಕವಲುಗೊಳ್ಳುವಿಕೆ 16ನೆಯ ವಾರಕ್ಕೆ ಮುಗಿಯುವುದು. ಈ ಕಾಲದಲ್ಲಿ ಪುಪ್ಛುಸ ಒಂದು ಗ್ರಂಥಿಯಂತೆ ಕಂಡು ದ್ರಾಕ್ಷಿಗೊಂಚಲಿನ ಆಕಾರ ಧರಿಸಿರುತ್ತದೆ. ಶ್ವಸನಿ ಕವಲಿನ ಕೊನೆಯಲ್ಲಿ ಜೀವಿಕಣಗಳ ಪದರ ಇರುತ್ತದೆ. ಲೋಮನಾಳಗಳ ಬೆಳೆವಣಿಗೆಯ ಫಲವಾಗಿ ಈ ಕೋಶಗಳು ಬೇರ್ಪಟ್ಟು ಶ್ವಸನಿಯ ಅಂತ್ಯ ಟಿಸಿಲುಗಳಾಗಿ ಪರಿವರ್ತನೆ ಹೊಂದುತ್ತವೆ. ಅಂದರೆ ಶ್ವಸನಿವೃಕ್ಷ ಸಂಪೂರ್ಣವಾಗುತ್ತದೆ. ಜನನಾಂತರ ಯಾವ ಶ್ವಸನಿಕದಲ್ಲೂ ಉದ್ಭವಿಸುವುದಿಲ್ಲ. 21ನೆಯ ವಾರದಿಂದ ವಾಯುಕೋಶಗಳ ಬೆಳೆವಣಿಗೆ ಕಂಡುಬರುತ್ತದೆ. ಜನನವಾಗುವ ವೇಳೆಗೆ ಅವುಗಳ ಸಂಖ್ಯೆ ನಾಲ್ಕು ಕೋಟಿ. ವಾಯು ಕೋಶಗಳ ಸಂಪೂರ್ಣ ಬೆಳೆವಣಿಗೆ ಜನನಾನಂತರವೇ ಕಂಡು ಬರುತ್ತದೆ. ಎಂಟನೆಯ ವಯಸ್ಸಿನ ಹೊತ್ತಿಗೆ ವಾಯುಕೋಶಗಳ ಸಂಖ್ಯೆ 30 ಕೋಟಿಯಷ್ಟಾಗುತ್ತದೆ. ಎದೆಗೂಡಿನ ಬೆಳೆವಣಿಗೆ ಆಗುತ್ತಿರುವ ತನಕವೂ ವಾಯು ಕೋಶಗಳ ಸಂಖ್ಯಾವೃದ್ಧಿಯೂ ಅದರೊಟ್ಟಿಗೆ ರಕ್ತನಾಳಗಳ ಬೆಳವಣಿಗೆಯೂ ತೋರಿಬರುತ್ತವೆ.

ಉಲ್ಲೇಖ[ಬದಲಾಯಿಸಿ]

  1. https://books.google.co.in/books?id=pAuiWvNHwZcC&pg=PA120&lpg=PA120&dq=area+tennis+court+alveoli&redir_esc=y#v=onepage&q=area%20tennis%20court%20alveoli&f=false
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
"https://kn.wikipedia.org/w/index.php?title=ಪುಪ್ಫುಸ&oldid=808187" ಇಂದ ಪಡೆಯಲ್ಪಟ್ಟಿದೆ